ಸಂಯಮೀ-ಶ್ರೀರಾಮ
ಶ್ರೀರಾಮನ ಅನೇಕ ಗುಣವಿಶೇಷತೆಗಳಲ್ಲಿ 'ಸಂಯಮ' ಎಂಬ ಗುಣವು ಉತ್ತಮೋತ್ತಮವಾದುದು. ಉಳಿದೆಲ್ಲಗುಣಗಳಿಗೂ ಶ್ರೇಷ್ಠತೆ ಬರುವುದಿದ್ದರೆ ಈ ಗುಣದಿಂದ ಮಾತ್ರ. ಒಬ್ಬನಲ್ಲಿ ಎಂತಹ ಗುಣಗಳಿದ್ದರೂ ಈ ಸಂಯಮ ಗುಣವಿಲ್ಲದಿದ್ದರೆಅವುಗಳು ನಿರ್ವೀರ್ಯವಾಗುತ್ತವೆ ಮತ್ತು ಆತ ಕ್ರಮೇಣ ಗುಣಹೀನನಾಗುತ್ತಾನೆ. ಕೊನೆಯಲ್ಲಿ ಅದು ಅವನ ವಿನಾಶಕ್ಕೆಕಾರಣವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಸಂಯಮವೆಂಬ ಗುಣಕ್ಕೆ ಅಂತಹ ಶ್ರೇಷ್ಠತೆ ಬರಲು ಕಾರಣವೇನು?ಮತ್ತು ರಾಮನಲ್ಲಿ ಈ ಗುಣ ಎಲ್ಲೆಲ್ಲಿ ಗೋಚರವಾಗಿದೆ? ಎಂಬುದನ್ನು ಗಮನಿಸೋಣ.
ಸಂಯಮವೆಂದರೆ ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ತಾನು ಹೇಳಿದಂತೆ ತನ್ನ ಇಂದ್ರಿಯ ಮನಸ್ಸುಗಳುಕೇಳುವಂತಹದ್ದು. ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಒಮ್ಮತದಿಂದ ಅಥವಾ ಒಕ್ಕಟ್ಟಾಗಿ ಪ್ರವೃತ್ತವಾದಾಗಮಾತ್ರ ಸಂಯಮವನ್ನು ಸಾಧಿಸುವುದರಲ್ಲಿ ಸಫಲತೆಯನ್ನು ನಾವು ಕಾಣಬಹುದು. ಸಂಯಮದ ಪರಿಣಾಮವೇ ವೈರಾಗ್ಯ. ವೈರಾಗ್ಯವು ಸುಖವನ್ನುಕೊಡುತ್ತದೆ. ಹಾಗಾಗಿ ಈ ಸಂಯಮವೆಂಬ ಗುಣಕ್ಕೆಅಷ್ಟೊಂದು ಮಹತ್ತ್ವವಿದೆ. ಇಂತಹ ಸಂಯಮ ಶ್ರೀರಾಮನಲ್ಲಿತ್ತು.ಇದಕ್ಕೆ ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು. ಅತ್ಯಂತ ಪ್ರಸಿದ್ಧವಾದುದೆಂದರೆ ಶ್ರೀರಾಮನು ರಾಜ್ಯಾಭಿಷೇಕವನ್ನು ಬಿಟ್ಟು ಅರಣ್ಯವಾಸಕ್ಕೆ ಹೊರಟ್ಟಿದ್ದುದು. ಭರತನು ಶ್ರೀರಾಮನ ಅರಣ್ಯಗಮನವನ್ನು ತಿಳಿದು ರಾಮನಿದ್ದಲ್ಲಿಗೆ ಬರುತ್ತಾನೆ. ದೂರದಿಂದಲೇ ಅವನನ್ನು ಕಂಡಲಕ್ಷ್ಮಣನು ಭರತನನ್ನು ತಡೆಯಲು ಕ್ರೋಧದಿಂದ ಮುನ್ನುಗ್ಗುತ್ತಾನೆ. ಆಗ ಶ್ರೀರಾಮನು ಲಕ್ಷ್ಮಣನನ್ನು ತಡೆಯುವುದು ಅವನಸಂಯಮವಲ್ಲವೇ! ಅರಣ್ಯದಲ್ಲಿ ವಾಸಮಾಡುವಾಗ ಋಷಿತುಲ್ಯನಾಗಿ ಅರಮನೆಯ ಯಾವ ಭೋಗಭಾಗ್ಯವನ್ನೂಬಯಸದೇ ಕೇವಲ ಕಂದಮೂಲಫಲಗಳಿಂದ ತನ್ನ ಶರೀರನಿರ್ವಹಣೆ ಮಾಡುತ್ತಿದ್ದ. ಇನ್ನೊಂದು ಉದಾಹರಣೆಯೆಂದರೆಶೂರ್ಪನಖೆಯ ಪ್ರಸಂಗ. ಶೂರ್ಪನಖೆಯು ರಾಮನನ್ನು ಕಾಮಿಸಿ ಬರುತ್ತಾಳೆ. ಆಗ ಏಕಪತ್ನೀವ್ರತನಾದ ಶ್ರೀರಾಮನುಆಕೆಯು ಹಿಂದಿರುಗುವಂತೆ ಮಾಡುತ್ತಾನೆ.
ರಾಮನ ಸಂಯಮವು ಎಂತಹದು ಎನ್ನುವುದು ಅವನು ರಾವಣನೊಡನೆ ಯುದ್ಧ ಮಾಡುವಾಗ ವಿದಿತವಾಗುತ್ತದೆ. ರಣರಂಗದಲ್ಲಿ ರಾಮನ ಬಾಣಗಳ ಏಟಿಗೆ ರಾವಣನು ತತ್ತರಿಸಿ ಹೋಗುತ್ತಾನೆ. ನಿಶ್ಚೇಷ್ಟಿತನಾಗುತ್ತಿದ್ದ ಅವನನ್ನು ಕೊಲ್ಲಲು ಮನಸ್ಸು ಬಾರದೆ, ರಾಮನು, "ರಾವಣಾ! ಇಂದು ನೀನು ಬಹಳ ದಣಿದಿರುವಂತೆ ಕಾಣುತ್ತದೆ. ಲಂಕೆಗೆ ಹಿಂದಿರುಗಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಯುದ್ಧಕ್ಕೆ ಬಾ" ಎನ್ನುತ್ತಾನೆ. ರಾಮನಲ್ಲದೆ ಇನ್ನಾರು ತಾನೇ ಹೀಗೆ ವರ್ತಿಸಲು ಶಕ್ಯ?
ಇನ್ನೊಂದು ಅವನ ಸಂಯಮಕ್ಕೆ ಅತಿಮುಖ್ಯವಾದ ಉದಾಹರಣೆಯೆಂದರೆ ರಾವಣನನ್ನು ಸಂಹಾರ ಮಾಡಿದ ಅನಂತರಸ್ವರ್ಗದಂತೆ ಸಮಸ್ತ ವೈಭವೋಪೇತವಾದ ಲಂಕೆಯನ್ನು ಬಯಸದಿರುವುದು. ಲಂಕೆಗೆ ವಿಭೀಷಣನನ್ನೇ ಅಧಿಪತಿಯನ್ನಾಗಿ ಮಾಡುವುದು. ಆಗ ಶ್ರೀರಾಮನು ಆಡಿದ ಮಾತು ಅವನ ಸಂಯಮಕ್ಕೆಸಾಕ್ಷಿಯಾಗಿದೆ. 'ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸೀ||' (ಓ ಲಕ್ಷ್ಮಣ,ಒಂದು ವೇಳೆ ಲಂಕೆಯು ಸ್ವರ್ಣಮಯವಾಗಿದ್ದರೂ ನನಗೆ ಅದು ರುಚಿಸುವುದಿಲ್ಲ. ನನಗೆ ನನ್ನ ತಾಯಿಯೂ ತಾಯಿನಾಡೂ ಸ್ವರ್ಗಕ್ಕಿಂತ ಶ್ರೇಷ್ಠ. (ಈ ಮಾತು ವಾಲ್ಮೀಕಿ ರಾಮಾಯಣದಲ್ಲಿಲ್ಲವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತರಾದರೂ ಈ ವಿಷಯವು ಮನೋಜ್ಞವಾಗಿದೆ.)ಹೀಗೆಂದು ಹೇಳಿ ಲಂಕೆಯನ್ನು ವಿಭೀಷಣನಿಗೆ ವಹಿಸುತ್ತಾನೆ. ಇಂತಹ ಅನೇಕ ಸಂದರ್ಭಗಳುಶ್ರೀರಾಮನ ಜೀವನದಲ್ಲಿ ಹಾಸುಹೊಕ್ಕಾಗಿವೆ.
ಸೂಚನೆ : 23/5/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.