Tuesday, May 18, 2021

ಶ್ರೀರಾಮನ ಗುಣಗಳು -5 ಸತ್ಯವಾಕ್ಯನಾದ ಶ್ರೀರಾಮ (Sriramana Gunagalu -5 Satyavakyanada Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಸತ್ಯವಾಕ್ಯನಾದ ಶ್ರೀರಾಮ

'ಸತ್ಯವಾಕ್ಯ' ಎಂಬುದು ಶ್ರೀರಾಮನ ಸಹಜಗುಣ. 'ಸತ್ಯವಾಕ್ಯ'ನೆಂದರೆ ಸತ್ಯವಾದ ಮಾತನ್ನು ಆಡುವವನು, ಆಡಿದ ಮಾತಿಗೆಚ್ಯುತಿಯಿಲ್ಲದವನು, ಸತ್ಯದಲ್ಲೇ ಪರ್ಯವಸಾನವಾಗುವಂತೆ ಆಡಿದ ಮಾತನ್ನು (ಚ ತು) ಚಾಚೂ ತಪ್ಪದೆ ನಡೆಸಿಕೊಡುವವನುಎಂಬಿತ್ಯಾದಿ ಅರ್ಥಗಳಿವೆ. "ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಂ"(ಕ್ರಿಯೆ, ಮಾತು, ಮನಸ್ಸುಗಳಲ್ಲಿ ಮಹಾತ್ಮರದು ಏಕರೂಪತೆ)  ಎಂಬ ಸುಭಾಷಿತವು ರಾಮನಲ್ಲಿ ಚೆನ್ನಾಗಿ ಅನ್ವಯಿಸುತ್ತಿತ್ತು. ಲೋಕದಲ್ಲಿ ಯಾವುದಾದರೂ ಫಲ ಪ್ರಾಪ್ತಿಯಾಗಬೇಕಾದರೆ ಅದಕ್ಕನುಗುಣವಾದಕರ್ಮವನ್ನು ಮಾಡಿರಬೇಕಾಗುತ್ತದೆ. ಆದರೆ, "ಯಾರು ಸತ್ಯವನ್ನೇ ಮಾತನಾಡುತ್ತಾನೋ ಅಂತಹವನಿಗೆ ಕರ್ಮವನ್ನುಮಾಡದೇ ಕೇವಲ ಸತ್ಯವಾಕ್ಯದಿಂದಲೇ ಉದ್ದಿಷ್ಟವಾದ ಫಲ ಲಭಿಸುತ್ತದೆ" ಎಂದು  ಯೋಗಶಾಸ್ತ್ರದಲ್ಲಿ ಒಂದು ಮಾತಿದೆ. ಮಾರ್ಕಂಡೇಯನ ಕಥೆಯು ನಮಗೆ ಪರಿಚಿತವೇ. ಆಯುಷ್ಯವೇ ಇಲ್ಲದ ಅವನಿಗೆ.ಋಷಿಮಹರ್ಷಿಗಳು  'ದೀರ್ಘಾಯುಷ್ಯಮಸ್ತು' ಎಂದು ಆಶೀರ್ವಾದ ಮಾಡಲಾಗಿ ದೀರ್ಘಾಯುಷ್ಯ ಲಭಿಸಿತ್ತಲ್ಲವೇ!.

ಇಂತಹ ಸತ್ಯವಾಕ್ಯವು ಶ್ರೀರಾಮನ ಗುಣವಾಗಿತ್ತು. ಕೊಟ್ಟ ಮಾತಿಗೆ ಎಂದೂ ತಪ್ಪಿದವನಲ್ಲ. ನುಡಿದಂತೆಯೇ ನಡೆದುತೋರಿದವ ಆತ. ತಂದೆ "ಅರಣ್ಯಕ್ಕೆ ಹೋಗು' ಎಂದಾಗ  ಮರು ಮಾತಾಡದೆ ಎಲ್ಲವನ್ನು ಬಿಟ್ಟು, ತಂದೆಯ ಮಾತಿಗೆ ಬೆಲೆ ಕೊಟ್ಟ. ಸುಗ್ರೀವನ ಜೊತೆ ಸಖ್ಯವನ್ನು ಮಾಡಿಕೊಂಡು, ಸುಗ್ರೀವನಿಗೆ ಕೊಟ್ಟ ಮಾತಿನಂತೆ ಅವನಅಣ್ಣನನ್ನು ಸಂಹರಿಸಿ, ಸುಗ್ರೀವನ ಮಡದಿಯನ್ನೂ, ರಾಜ್ಯವನ್ನೂ ಕೊಡಿಸಿದವ. ಇತ್ತ ವಿಭೀಷಣನು ಸ್ವಂತ ಅಣ್ಣನನ್ನೂ, ರಾಜ್ಯವನ್ನೂ ಬಿಟ್ಟುಶರಣಾಗತನಾಗಿ ಬಂದ. ಅಂತಹವನಿಗೆ ಅವನ ಅಣ್ಣ ರಾವಣನನ್ನೇ ಸಂಹರಿಸಿ ವಿಭೀಷಣನನ್ನು ಲಂಕೆಗೆಅಧಿಪತಿಯನ್ನಾಗಿಸಿ ಮಾತಿಗೆ ಬದ್ಧನಾದ. ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ತಾನು ಆಡಿದ ಮಾತಿಗೆ ಎಂದೂ ಚ್ಯುತಿಬರದ ರೀತಿಯಲ್ಲಿ ಅವನ ನಡೆ ಇತ್ತು. ನೀರಿಗೆ ಶೀತ ಗುಣ ಅದರ ಸ್ವಭಾವ. ಬೆಂಕಿಗೆ ಉಷ್ಣ ಗುಣ ಅದರ ಸಹಜ ಸ್ವಭಾವ. ಹಾಗೆಯೇ ಶ್ರೀರಾಮನ ಸಹಜ ಸ್ವಭಾವವೇ ಸತ್ಯವನ್ನು ಆಡುವುದು, ಅದರಂತೆ ನಡೆಯುವುದು ಆಗಿತ್ತು ಎಂಬುದಕ್ಕೆ ವಿಪುಲವಾದ ಉದಾಹರಣೆಗಳು ಶ್ರೀಮದ್ರಾಮಾಯಣದಲ್ಲಿ ಸಿಗುತ್ತವೆ. ಸತ್ಯದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡವನಲ್ಲ ಅವನು.

ರಾಮನಲ್ಲಿ ಇಂತಹ ಸತ್ಯವಾದ ಮಾತು ಯಾವಾಗಲೂ ಬರಲು ಕಾರಣವೇನು? ಇದಕ್ಕೆ ಶ್ರೀರಂಗಮಹಾಗುರುಗಳು ಒಂದು ಮಾತನ್ನುಹೇಳುತ್ತಿದ್ದರು – " ಆಪ್ತರೆಂದರೆ ಬೇಕಾದವರು ಎಂಬಿಷ್ಟೇ ಅರ್ಥವಲ್ಲ. ವಿವೇಕಿಗಳ ಮತದಲ್ಲಿ ಆಪ್ತರೆಂದರೆ ಜ್ಞಾನಿಗಳು,ತಪೋಜ್ಞಾನಬಲಗಳಿಂದ ರಜಸ್ಸು ತಮಸ್ಸುಗಳನ್ನು ದಾಟಿದವರು. ತ್ರಿಕಾಲದಲ್ಲೂ ನಿರ್ಮಲವೂ ಅವ್ಯಾಹತವೂ ಆದಪರಜ್ಞಾನ ಉಳ್ಳವರು. ಇವರೇ ಶಿಷ್ಟರು, ವಿಬುದ್ಧರು. ಇಂತಹವರು ಆಡುವ ಮಾತು ನಿಸ್ಸಂಶಯವಾಗಿ ಸತ್ಯವೇ.ರಜಸ್ಸು ತಮಸ್ಸುಗಳಿಲ್ಲದವರು ಅಸತ್ಯವನ್ನು ಏಕೆ ನುಡಿಯುವರು?" ಸತ್ವ-ರಜಸ್ಸು-ತಮಸ್ಸುಗಳೆಂಬಮೂರು ಗುಣಗಳಲ್ಲಿ ಸತ್ವಗುಣವು ಅತ್ಯಂತ ಶ್ರೇಷ್ಠವಾದುದು. ಶ್ರೀರಾಮನಿಗೆ ಸತ್ವಗುಣವು ಸ್ವತಃ ಸಿದ್ಧವಾಗಿತ್ತು. ಯಾರಲ್ಲಿ ಶ್ರೀರಾಮನಂತೆ ರಜಸ್ಸು-ತಮಸ್ಸುಗಳಿಲ್ಲದೆ ಕೇವಲಶುದ್ಧಸತ್ವಗುಣವು ನೆಲೆಯಾಗಿದೆಯೋ ಅವರು ಸತ್ಯವನ್ನೇ ಆಡುತ್ತಾರೆ. ಅಲ್ಲಿ ಅಸತ್ಯ ಬರಲು ಅವಕಾಶವೆಲ್ಲಿ?!.

ಇಂತಹ ಸ್ವತಃ ಸತ್ಯರೂಪನಾಗಿ, ಶುದ್ಧಸತ್ವಮಯನಾಗಿ ಇರುವ ಸತ್ಯವಾಕ್ಯನಾದ ಶ್ರೀರಾಮನಿಗೆ  ನಮೋ ನಮಃ.


ಸೂಚನೆ : 16/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಹೊಸದಿಗಂತ ಅಂಕಣದಲ್ಲಿ ಪ್ರಕಟವಾಗಿದೆ.