Saturday, May 1, 2021

ಕಾವ್ಯದ ಪ್ರಯೋಜನಗಳು (Kavyada prayojanagaḷu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ಕಾವ್ಯಗಳನ್ನು 'ಕಾಂತಾಸಮ್ಮಿತೆ'ಯೆಂದು ಕರೆದಿದ್ದಾರೆ. ಪತಿವ್ರತೆಯಾಗಿಉತ್ತಮಸಂಸ್ಕಾರದಿಂದ ಕೂಡಿರುವ ಪತ್ನಿಯು ತನ್ನ ಪತಿಯ ಮತ್ತು ತನ್ನ ಕುಟುಂಬದ ಶ್ರೇಯಸ್ಸನ್ನೇ ಬಯಸುವವಳಾಗಿ,ಎಲ್ಲ ರೀತಿಯ ಉಪಾಯಗಳಿಂದಲೂ ಸದಾ ಅದನ್ನೇ ಸಾಧಿಸುವುದಕ್ಕಾಗಿ ಪರಿಶ್ರಮಿಸುತ್ತಾಳೆಂಬುದರಲ್ಲಿ ಸಂಶಯವಿಲ್ಲ.ಸ್ತ್ರೀಯರಿಗೆ 'ಅಶಿಕ್ಷಿತಪಟುತ್ವ'ವೆಂಬುದು ದೈವದತ್ತವಾದ ಮತ್ತು ಜನ್ಮತಃ ಸಿದ್ಧವಾದ ಸಹಜವಾದ ಕೊಡುಗೆಯಾಗಿದೆ.ತಮ್ಮದೇ ಆದ ರೀತಿಯಲ್ಲಿ, ಸಕಾಲದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸುವಕಲೆಯಲ್ಲಿ ಅವರು ಸಿದ್ಧಹಸ್ತರು. ಕೆಲವು ವೇಳೆ ಸರಸವಾದ ಸಲ್ಲಾಪವಿರಬಹುದು, ಕೆಲವು ಸಮಯದಲ್ಲಿಶೃಂಗಾರಾದಿ ರಸಗಳಿಂದ ಕೂಡಿರುವ ಹಾವಭಾವಗಳಿರಬಹುದು, ಮತ್ತೆ ಕೆಲವು ಸಲ ಕಾಷ್ಠಮೌನವಿರಬಹುದು ಅಥವಾ ಇನ್ನೂಕೆಲವು ಸಂದರ್ಭಗಳಲ್ಲಿ, ಮಾತಿಗಿಂತಲೂ ಸಮರ್ಥವಾದ, ತಮ್ಮದೇ ಆದ 'ಸಂಜ್ಞಾ' ಮತ್ತು 'ಪರಿಭಾಷೆ'ಗಳಿಂದ ಕೂಡಿದಸಂಕೇತಗಳಿರಬಹುದು ಅಥವಾ ಇನ್ನಾವುದೋ ರೀತಿಯಲ್ಲಿ ಆ ಕಾಲಕ್ಕೆ, ಸನ್ನಿವೇಶ-ಸಂದರ್ಭಗಳಿಗೆ ಸರಿಹೊಂದಬಹುದಾದಮಾಧ್ಯಮವನ್ನು ಉಪಯೋಗಿಸಿ ಕೆಲಸವನ್ನು ಸಾಧಿಸುತ್ತಾರೆಂಬುದು ಅನುಭವಿಗಳ ಮಾತಾಗಿದೆ.ಕಾವ್ಯಶಾಸ್ತ್ರದಲ್ಲಿ ಈ ಎಲ್ಲಾ ವಿಷಯಗಳೂ ಅತ್ಯಂತ ಸಮರ್ಥವಾಗಿ ನಿರೂಪಿತವಾಗಿದ್ದು, ಕಾವ್ಯಗಳಿಗೆ 'ಕಾಂತಾಸಮ್ಮಿತೆ' ಎಂಬಮಾತು ಅನ್ವರ್ಥವಾಗಿರುವುದನ್ನು ಮನಗಾಣಬಹುದಾಗಿದೆ. ಪತ್ನಿಯ ಮಾತು, ಅವಳ ಕಾರ್ಯಸಾಧನಾತತ್ಪರತೆಮುಂತಾದವುಗಳು ಅವಳ ಪತಿಯ ಮತ್ತು ಅವಳ ಕುಟುಂಬದ ಹಿತದೃಷ್ಟಿಯಿಂದ ಮಾತ್ರ ಕೂಡಿದ್ದರೆ, ಕಾವ್ಯಶಾಸ್ತ್ರವುಸಕಲಮಾನವರ ಉದ್ಧಾರವೆಂಬ ಏಕೈಕ ಪ್ರಯೋಜನದಿಂದ ಕೂಡಿದ್ದಾಗಿದೆ.ಕಾವ್ಯಗಳಲ್ಲಿ ಕೆಲವು ವೇಳೆ ವಾಚ್ಯವಾಗಿಯೂ ಕೆಲವು ವೇಳೆ ಸೂಚ್ಯವಾಗಿಯೂ ವಿಷಯಗಳು ಪ್ರಸ್ತಾಪಿಸಲಾಗಿವೆ ಎಂಬುದುಕಾವ್ಯಪ್ರಿಯರಿಗೆ ತಿಳಿದಿರುವ ವಿಷಯವಾಗಿದೆ. ಈಗಾಗಲೇ ವಾಚ್ಯವಾಗಿ ಹೇಳಿರುವ ವಿಷಯಗಳು 'ಕಾವ್ಯದ ಪ್ರಯೋಜನಗಳು'ಎಂಬ ವಿಷಯದಡಿ (ಲೇಖನ ಕವಿಕಾವ್ಯ 6 ಮತ್ತು 7ರಲ್ಲಿ) ವಿಸ್ತಾರವಾಗಿ ತಿಳಿಸಿದೆ. ಈ ಲೇಖನದಲ್ಲಿ 'ಸಂಜ್ಞೆ'ಯಿಂದಲೂ,ಅದರದೇ ಆದ 'ಪರಿಭಾಷೆ'ಯಿಂದಲೂ, ಹಾವಭಾವಗಳಿಂದಲೂ, ಮೌನದಿಂದಲೂ, ಸೂಕ್ಷ್ಮವಿಷಯಗಳು ಹೇಗೆಪ್ರತಿಪಾದಿತವಾಗಿರುವುದೆಂಬುದನ್ನು ನೋಡೋಣ.

ಕಾವ್ಯಗಳಲ್ಲಿ ಹಾವಭಾವಗಳಿಂದ ಬೋಧ

ಶಿವನನ್ನು ತಪಸ್ಸಿನಿಂದ ಒಲಿಸಿಕೊಳ್ಳುವ ಪಾರ್ವತಿಯ ನಿರ್ಧಾರವನ್ನು ಕೇಳಿ, ತಾಯಿ ಮೇನೆಯ ಕಳವಳ ಹೇಳತೀರದು.ಮೃದುತನುವನ್ನು ಹೊಂದಿರುವ ಪಾರ್ವತಿಯೆಲ್ಲಿ? ಕಠೋರವಾದ ತಪಸ್ಸೆಲ್ಲಿ ? ಪುತ್ರಿಯನ್ನು ಈ ಕಠೋರವಾದನಿರ್ಧಾರದಿಂದ ಹಿಂದಿರುಗಿಸಲು ತಾಯಿ ಮೇನೆ, 'ಉವಾಚ ಮೇನಾ ಪರಿರಭ್ಯ ವಕ್ಷಸಾ'- 'ಅವಳನ್ನು ಅಪ್ಪಿಕೊಂಡು'ಮಾತನಾಡುತ್ತಾಳೆ. ತಾಯಿಯ ಈ ಒಂದು ನಡೆ ಸಾವಿರ ಮಾತುಗಳಿಗಿಂತಲೂ ಪ್ರಬಲವಾದದ್ದು ಎಂಬುದು ಸಹೃದಯರಿಗೆವಿದಿತವಾಗಿಯೇ ಇದೆ.
'ಶಿವನೊಡನೆ ಪಾರ್ವತಿಯ ವಿವಾಹ'ವೆಂಬ ಸಪ್ತರ್ಷಿಗಳ ಪ್ರಸ್ತಾವವನ್ನು ಕೇಳಿ ಪಕ್ಕದಲ್ಲಿಯೇ ಇದ್ದ ಪಾರ್ವತಿಯಅಭಿಪ್ರಾಯವನ್ನು ತಿಳಿದುಕೊಳ್ಳಬೇಕೆಂದು ಅವಳ ಕಡೆಗೆ ತಿರುಗಿದ ಹಿಮವಂತನಿಗೆ ಅವಳ ಹಾವಭಾವಗಳಿಂದ ದೊರೆಯುತ್ತದೆ,ಅವಳ ಸಮ್ಮತಿಯ ಬೋಧ. ಚೇತೋಹಾರಿಯಾದ ಅವಳ ಹಾವಭಾವಗಳನ್ನು ವರ್ಣಿಸುವುದರಲ್ಲಿ ಕವಿ ಸಮರ್ಥ –ಲೀಲಾಕಮಲಪತ್ರಾಣಿ ಗಣಯಾಮಾಸ ಪಾರ್ವತೀ – ಕೈಯಲ್ಲಿ ಹಿಡಿದಿದ್ದ ಆಟದ ಕಮಲದ ಪತ್ರಗಳನ್ನು ಎಣಿಸಿದಳು' ಎಂದರೆಲಜ್ಜೆಯಿಂದ ಕಮಲದಳಗಳ ಗಣನೆಯ ವ್ಯಾಜದಿಂದ ತನ್ನ ಹರ್ಷವನ್ನು ಅಡಗಿಸಿಟ್ಟಳು.ಕನ್ಯಾಪ್ರದಾನ ವಿಷಯದಲ್ಲಿ ಗೃಹಿಣಿಯರ ಪಾತ್ರ ಮುಖ್ಯ. ಅವರ ಹೇಳಿಕೆಯೇ ಅಲ್ಲಿ ಅತಿಮುಖ್ಯ. ಸಪ್ತರ್ಷಿಗಳ ಸಮ್ಮುಖದಲ್ಲಿಮಗಳ ಮದುವೆಯ ವಿಷಯವು ಪ್ರಸ್ತಾಪವಾಗುತ್ತಿರುವಾಗ, ಪತ್ನಿಯ ಸಮ್ಮತಿಯನ್ನು ಕೇಳಲು ಹಿಮವಂತನು'ಮೇನಾಮುಖಮುದೈಕ್ಷತ' – ಮೇನೆಯ ಮುಖವನ್ನು ನೋಡುತ್ತಾನೆ. ಅಲ್ಲಿ ಕಣ್ಣಿನಿಂದ ಸಂವಹನ. 'ಆಗಲಿ, ನನ್ನ ಸಮ್ಮತಿಇದೆ' ಎಂಬುದು ಅವಳ ತಲೆಯಾಡಿಸುವಿಕೆಯಿಂದ, ದೃಶ್ಯರೂಪಕಗಳಲ್ಲಿ ಹಾವಭಾವಗಳನ್ನು ಚೆನ್ನಾಗಿ ತರಬಹುದೆಂಬುದುನಿರ್ವಿವಾದ. ಆದರೂ ಶ್ರವ್ಯಕಾವ್ಯಗಳಲ್ಲಿಯೂ ಅದೇ ಮಟ್ಟದಲ್ಲಿ ತಂದಿರುವುದು ಕವಿಯ ಸಾಮರ್ಥ್ಯಕ್ಕೆ ಆದರ್ಶ.

ಕಾವ್ಯಗಳಲ್ಲಿ ಮೌನವಾಗಿ ವಿಚಾರಸಂವಹನೆ

ರಾಮಾಯಣಾದಿ ಕಾವ್ಯಗಳಲ್ಲಿ ಬಹಳ ರಸವತ್ತಾಗಿ ಕಥೆಗಳು ನಿರೂಪಿತವಾಗಿವೆಯೆಂಬುದರಲ್ಲಿ ಸಂದೇಹವಿಲ್ಲ. ಆದರೆ,ರಾಮಾಯಣಾದಿ ಕಾವ್ಯಗಳನ್ನು ಓದುವುದರಿಂದ ಉಂಟಾಗುವ 'ರಾಮಾದಿವತ್ ವರ್ತಿತವ್ಯಮ್, ನ ತು ರಾವಣಾದಿವತ್' ,'ರಾಮಾದಿಗಳಂತೆ ವರ್ತಿಸಬೇಕು, ರಾವಣಾದಿಗಳಂತಲ್ಲ' ಎಂಬ ಬೋಧವು ಸೂಚ್ಯವಾಗಿ ಹೇಳಲ್ಪಟ್ಟಿರುವುದಾಗಿದೆ.ಹಾಗೆಯೇ ರಾಮಾಯಣದ ತಾತ್ಪರ್ಯವನ್ನು ಸುಭಾಷಿತವೊಂದು ಹೀಗೆ ಶೇಖರಿಸಿದೆ – ಯಾಂತಿ ನ್ಯಾಯಪ್ರವೃತ್ತಸ್ಯತಿರ್ಯಂಚೋಽಪಿ ಸಹಾಯತಾಮ್ ᳓ ಅಪಂಥಾನಂ ತು ಗಚ್ಛಂತಂ ಸೋದರೋಽಪಿ ವಿಮುಂಚತಿ ᳓᳓' –ನ್ಯಾಯಪ್ರವೃತ್ತನಾಗಿರುವವನಿಗೆ ಪ್ರಾಣಿಪಕ್ಷಿಗಳೂ ಸಹಾಯವನ್ನು ಮಾಡುತ್ತವೆ. ಆದರೆ, ದುರ್ಮಾರ್ಗದಲ್ಲಿಹೋಗುತ್ತಿರುವವನನ್ನು ಒಡಹುಟ್ಟಿದ ಸೋದರನೂ ಕೂಡ ತ್ಯಜಿಸುತ್ತಾನೆ. ಈ ಉಪದೇಶಗಳನ್ನು ಸೂಕ್ಷ್ಮಮತಿಗಳೂ ಮತ್ತುಸಂಸ್ಕಾರಿಗಳೂ ಗಮನಿಸಿರದೇ ಇರುವುದಿಲ್ಲವಷ್ಟೆ.ಕುಮಾರಸಂಭವ ಮಹಾಕಾವ್ಯದಲ್ಲಿ ಮಹಾಕವಿ ಕಾಳಿದಾಸನು ಪಾರ್ವತಿಯ ತಪಸ್ಸಿನ ವೈಖರಿಯನ್ನು -

ಸ್ಥಿತಾಃ ಕ್ಷಣಂ ಪಕ್ಷ್ಮಸು ತಾಡಿತಾಧರಃ ಪಯೋಧರೋತ್ಸೇಧ-ನಿಪಾತ-ಚೂರ್ಣಿತಾಃ 

ವಲೀಷು ತಸ್ಯಾಃ ಸ್ಖಲಿತಾಃ ಪ್ರಪೇದಿರೇ ಚಿರೇಣ ನಾಭಿಂ ಪ್ರಥಮೋದಬಿಂದವಃ 

- ವರ್ಷಾಕಾಲದ ಮೊದಲ ಮಳೆಯಜಲಬಿಂದುಗಳು ಪಾರ್ವತಿಯ ಕಣ್ಣುಗಳ ರೆಪ್ಪೆಗಳ ಮೇಲೆ ಕ್ಷಣಕಾಲವಿದ್ದು, ನಂತರ ಅಧರದ ಮೇಲೆ ಬಿದ್ದು, ವಕ್ಷೋಜಗಳಅಗ್ರಭಾಗದಲ್ಲಿ ಬಿದ್ದು, ನಂತರ ತ್ರಿವಳಿಗಳ ಮೂಲಕ ಜಾರಿ ನಾಭಿಯನ್ನು ಪ್ರವೇಶಿಸಿದವು' ಎಂದು ವರ್ಣಿಸಿದ್ದಾನೆ.ಹೊರನೋಟಕ್ಕೆ ನೋಡಿದರೆ ಕಾಳಿದಾಸನ ವರ್ಣನಕೌಶಲ ಚೆನ್ನಾಗಿ ಮೂಡಿಬಂದಿದೆ ಎಂದೆನಿಸುತ್ತದೆ. ಯೋಗವಿದ್ಯೆಯಪರಮರಹಸ್ಯವನ್ನು ಅರಿತಿದ್ದ ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸಿ ವಿವರಿಸುತ್ತಾ, ' ಈ ಶ್ಲೋಕವುಯೋಗವಿದ್ಯೆಯ ಸಾರಸರ್ವಸ್ವವಾದ ಸಮಾಧಿಸ್ಥಿತಿಗೆ ಉದಾಹರಣೆಯಾಗಿದೆ. ಯೋಗಿಯೊಬ್ಬನು ಒಳಗೆ ಬೆಳಗುತ್ತಿರುವಆತ್ಮಜ್ಯೋತಿಯಲ್ಲಿ ನೆಲೆನಿಂತಿದ್ದರೆ ಆಗ ಅವನ ಶಿರಸ್ಸು, ಕಣ್ಣುಗಳು, ದೃಷ್ಟಿ, ಮೂಗು, ಕತ್ತು, ಎದೆ ಮುಂತಾದ ಶರೀರದಅವಯವಗಳು ಯಾವ ಸ್ಥಿತಿಯಲ್ಲಿರುತ್ತವೆ ಮತ್ತು ಆ ಸಮಯದಲ್ಲಿ ಮಳೆಹನಿಗಳು ಬಿದ್ದಾಗ, ಹೇಗೆ ಅವುಗಳ ಚಲನವುಉಂಟಾಗುವುದೆಂಬುದನ್ನು ಸೂಚಿಸುತ್ತದೆ. ಅಂತಃಸುಖದ ಮೌನವ್ಯಾಖ್ಯೆಯಾಗಿರುವ ಈ ವರ್ಣನೆಯು ಸಂಸ್ಕಾರಿಯಾದವಾಚಕನಲ್ಲಿ ಸುಪ್ತವಾಗಿರುವ ಭಾವನೆಗಳನ್ನು ಜಾಗೃತಗೊಳಿಸಿ ಪರಮಾನಂದದಲ್ಲಿ ನೆಲೆನಿಲ್ಲಿಸುವ ಸಾಮರ್ಥ್ಯ ಹೊಂದಿದೆ',ಎಂದು ಈ ಶ್ಲೋಕದ ಮಹಿಮೆಯನ್ನು ಸಾರಿ ಹೇಳುತ್ತಿದ್ದರು. ಪಾತಂಜಲಯೋಗಸೂತ್ರಗಳೂ ಮತ್ತುಯೋಗೋಪನಿಷತ್ತುಗಳೂ ಯಾವ ನಿರ್ವಿಕಲ್ಪಸಮಾಧಿಯ ವರ್ಣನೆಯನ್ನು ಮಾಡಿವೆಯೋ ಅದನ್ನೇ ಒಂದೇ ಶ್ಲೋಕದಲ್ಲಿಚಿತ್ರಿಸಿರುವ ಪರಮಯೋಗಿ, ಮಹರ್ಷಿ ಕಾಳಿದಾಸನಿಗೆ ನಮೋ ನಮಃ.

ಸೂಚನೆ : 1/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.