Saturday, May 22, 2021

ಷೋಡಶೋಪಚಾರ - 1 (Shodashopachara - 1)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶಉಪಚಾರ ಎಂದರೆ ಹದಿನಾರು ಬಗೆಯ ಪೂಜೆ. ಉಪಚಾರ ಎಂಬ ಅರ್ಥದಲ್ಲೇ ಉಪಾಸನೆ, ಅರ್ಚನೆ, ಪೂಜೆ, ಆರಾಧನೆ, ಸತ್ಕಾರ ಎಂಬೆಲ್ಲಾ ಪದಗಳಿವೆ. ಪ್ರತಿಯೊಂದು ಪದವೂ ವಾಸ್ತವಿಕವಾಗಿ ಅರ್ಥದಲ್ಲಿ ಭಿನ್ನವಾಗಿದೆ. ಆದರೂ  ಸಾಮಾನ್ಯವಾದ ಅರ್ಥವನ್ನು ತೆಗೆದುಕೊಂಡರೆ ಈ ಎಲ್ಲಾ ಪದಗಳೂ ಯಾವುದೋ ಒಂದು ಮುಖ್ಯವಾದ ಅರ್ಥವನ್ನು ತಿಳಿಸುತ್ತವೆ ಎಂದು ಇಟ್ಟುಕೊಳ್ಳಬಹುದು. ಹಾಗಾಗಿ ಇಲ್ಲಿ ಉಪಚಾರ ಎಂಬ ಅರ್ಥವನ್ನು ಕೊಡುವ ಎಲ್ಲಾ ಪದಗಳನ್ನು ವಿವರಿಸದೆ, ಉಪಚಾರ ಎಂಬ ಪದದ ವಿವರಣೆಯಿಂದಲೇ ಅವುಗಳ ಅರ್ಥವಿವರಣೆಯನ್ನು ಕೊಟ್ಟಂತಾಗುತ್ತದೆ ಎಂದು ಭಾವಿಸುತ್ತೇನೆ.

ಉಪಚಾರ- ಎಂಬ ಸಂಸ್ಕೃತಪದವು ಉಪ-ಸಮೀಪಕ್ಕೆ, ಚಾರ-ನಡೆಯುವುದು ಎಂಬ ಅರ್ಥವನ್ನು ಕೊಡುತ್ತದೆ. ಫಲವನ್ನು ಪಡೆಯಲು ಬೀಜವನ್ನು ಕ್ಷೇತ್ರದಲ್ಲಿ ಬಿತ್ತುತ್ತೇವೆ. ಬೀಜ ಬಿತ್ತಿದ ಮಾತ್ರಕ್ಕೆ ಅದು ನಮ್ಮ ಉದ್ದೇಶಿತ ಫಲವನ್ನು ಕೊಡಲಾರದು. ಅಲ್ಲಿ ಅನೇಕ ಹಂತದ ಕಾರ್ಯಗಳನ್ನು ಮಾಡಲೇಬೇಕಾಗುತ್ತದೆ. ತೆಂಗಿನ ಕಾಯನ್ನು ಪಡೆಯಲು ತೆಂಗಿನ ಬೀಜವನ್ನು ಹಾಕುತ್ತೇವೆ. ಅನಂತರ ಆ ಬೀಜವು ಮೊಳಕೆ ಒಡೆಯಲು ಅನುವಾಗುವಂತೆ ಅದನ್ನು ಸ್ವಲ್ಪ ಕಾಲ ಉಪಚರಿಸಿ, ಅದನ್ನು ಒಂದು ಪಾತಿಯಲ್ಲಿ ಹಾಕಿ, ಅದಕ್ಕೆ ಬೇಕಾದ ಗೊಬ್ಬರ, ನೀರು, ಗಾಳಿ, ಬೆಳಕು ಮೊದಲಾದ ಸಹಕಾರಿ ಸಾಮಗ್ರಿಗಳನ್ನು ನೀಡುತ್ತೇವೆ. ಅವುಗಳನ್ನು ಕಾಲಕಾಲಕ್ಕೆ ಪ್ರಮಾಣಯುಕ್ತವಾಗಿ ಕೊಟ್ಟಾಗ ಆ ಬೀಜವುನಮ್ಮ ಮನಸ್ಸಿನ ಅಪೇಕ್ಷೆಯಂತೆ ತೆಂಗಿನ ಕಾಯನ್ನು ನೀಡುತ್ತದೆ. ಹೀಗೆ ಇಲ್ಲಿ ತೆಂಗಿನ ಕಾಯನ್ನು ಪಡೆಯಲು ತೆಂಗಿನ ಬೀಜಕ್ಕೆ ಮಾಡಿದ ಕಾರ್ಯಗಳೇನುಂಟೋ ಅವುಗಳನ್ನು ತೆಂಗಿಗೆ ಮಾಡಿದ ಉಪಚಾರ ಎಂದು ಕರೆಯುತ್ತೇವೆ. ಉಪಚಾರಗಳು ತೆಂಗಿನ ಕಾಯನ್ನೇ ಕೊಡಲು ಸಹಕರಿಸುತ್ತವೆ. ಅಲ್ಲಿ ವ್ಯತ್ಯಾಸವಾದರೆ ಅದು ಅಪಚಾರವಾಗಿ ನಮಗೆ ಬೇಕಾದಷ್ಟು, ಬೇಕಾದ ರೀತಿಯಲ್ಲಿ, ಸಿಹಿಯಾದ ಕಾಯನ್ನು ಕೊಡಲಾರದು. ಅಂದರೆ ಬೀಜವು ಮತ್ತೆ ತನ್ನ ಮೂಲರೂಪವನ್ನು-ಫಲವನ್ನು ಪಡೆಯುವಂತಾಗಲು ಅನುಕೂಲವಾದ ಯಾವ ಯಾವ ಕಾರ್ಯಗಳುಂಟೋ ಅವೆಲ್ಲವೂ ಉಪಚಾರವಾಗುತ್ತವೆ. "ಗಿಡದ ಬೆಳವಣಿಗೆಗೆ ಬೇಕಾದ ರಸ ಅದರಲ್ಲೇ ಸಂಚಾರ ಮಾಡುತ್ತಿದೆ. ಅದಕ್ಕನುಗುಣವಾದ 'ಚಾರ' ಮಾಡಿದರೆ ಉಪಚಾರವಾಗುತ್ತೆ" ಎಂಬ ಶ್ರೀರಂಗಮಹಾಗುರುವಿನ ವಿಚಾರ ಇಲ್ಲಿ ಎಷ್ಟು ಪೂರಕವಾಗಿದೆ!

ಹೀಗೆ ಅವನವನ ಸಂಕಲ್ಪಿತ ಕಾರ್ಯಸಿದ್ಧಿಗೋಸ್ಕರ ಮಾಡುವ ಯಾವೆಲ್ಲ ಪೂರಕಕರ್ಮಗಳಿವೆಯೋ ಅವುಗಳನ್ನೇ ಒಂದು ಅರ್ಥದಲ್ಲಿ ಉಪಚಾರ, ಪೂಜೆ ಇತ್ಯಾದಿ ಪದಗಳಿಂದ ಕರೆಯುತ್ತೇವೆ.

ಸೂಚನೆ : 22/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.