ಲೇಖಕರು: ಶ್ರೀರಾಘವೇಂದ್ರ ಉರಳ್ ಕೆ ಆರ್
(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮಲ್ಲಿ ಕೆಲವರು-"ದೇವರೆಲ್ಲಿದ್ದಾನೆ ಸ್ವಾಮಿ, ಎಲ್ಲ ನಮ್ಮ ಸಮಾಧಾನಕ್ಕೆ ನಾವೇ ಸೃಷ್ಟಿಸಿರುವ ಕಲ್ಪನಾ ವಿಲಾಸ ಅಷ್ಟೇ. ಸುಮ್ಮನೆ ದೇವರು- ದಿಂಡರು ಎಂದು ಜೀವನಹಾಳು ಮಾಡಿಕೊಳ್ಳಬೇಡಿ, ಮಾಡಲೇಬೇಕಿಂದಿದ್ದರೆ, ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಇಟ್ಟುಕೊಳ್ಳಿ. ಈಗ ದುಡಿದು ಸೆಟ್ಲ್ ಆಗೋದು ನೋಡಿ" ಎನ್ನುತ್ತಾರೆ. ಇನ್ನು ಕೆಲವರು " ನಾನು ಇಡೀ ಜೀವನ ದೇವರು ದಿಂಡರು ಎಂದು ಕಳೆದೆ. ನನಗೆ ದೇವರೆಂದೂ ಕಾಣಲಿಲ್ಲ. ಎಲ್ಲ ಸುಮ್ಮನೆ ಹೇಳುತ್ತಾರೆ . ನನ್ನಂತೆ ನೀವು ಜೀವನ ವ್ಯರ್ಥ ಮಾಡಿಕೊಳ್ಳ ಬೇಡಿ" ಎನ್ನುತ್ತಾರೆ. ಈ ದೃಷ್ಟಿಕೋಣಗಳು ಎಷ್ಟು ಸರಿ ಎಂದು ಪರಮಪೂಜ್ಯರಾದ ಶ್ರೀರಂಗ ಮಹಾಗುರುಗಳು ಹೇಳಿದ ಒಂದು ಕಥೆಯಿಂದ ತಿಳಿಯುವ ಪ್ರಯತ್ನ ಮಾಡೋಣ.
ನೂರಾರು ವರ್ಷಗಳಿಂದ ಮುಚ್ಚಿದ ಒಂದು ಕಬ್ಬಿಣದ ದ್ವಾರವಿದೆ. ಕಬ್ಬಿಣದ್ದಾದ್ದರಿಂದ ಬಹಳವಾಗಿ ತುಕ್ಕು ಹಿಡಿದು ಬಾಗಿಲು ತೆಗೆಯಲಾಗದಂತೆ ಆಗಿದೆ. ಆ ದ್ವಾರದ ಹಿಂದೆ ಅಪಾರವಾದ ನಿಧಿ ಇದೆ ಎಂದು ಯಾರೋ ಹೇಳಿದ್ದರು. ಆದ್ದರಿಂದ ಅದನ್ನು ತೆಗೆದು ಒಮ್ಮೆ ನೋಡುವ ಹಂಬಲ ನಮಗೆ. ಆಗ ಯಾರೋ ತಿಳಿದವರು, "ಎಣ್ಣೆ ಹಚ್ಚಿದರೆ ತುಕ್ಕು ತೆಗೆಯಬಹುದು" ಎನ್ನುತ್ತಾರೆ. ನಮಗೆ ಅನುಮಾನವಾದರೂ ನಾವು ಒಂದು ಉದ್ಧರಣೆ ಎಣ್ಣೆಯನ್ನು ಆ ಬಾಗಿಲಿನ ತುಕ್ಕಿಗೆ ಹಚ್ಚಿ ತೆಗೆಯಲು ಪ್ರಯತ್ನಿಸಿದಾಗ ಬಾಗಿಲು ತೆರೆಯಲೇ ಇಲ್ಲ. ಸರಿ. ತೀರ್ಮಾನಕ್ಕೆ ಬರುತ್ತೇವೆ, "ನೋಡಿದ್ರ ಸ್ವಾಮಿ ಎಲ್ಲ ಸುಳ್ಳು. ಎಣ್ಣೆ ಹಚ್ಚುವುದರಿಂದ ತುಕ್ಕು ತೆಗೆಯಲು ಸಾಧ್ಯವೇ ಇಲ್ಲ" ಎಂದು.
ಹೀಗೆ ಎಷ್ಟು ತುಕ್ಕಿಗೆ ಎಷ್ಟು ಎಣ್ಣೆ ಬೇಕಾಗುತ್ತದೆ ಎಂಬ ಲೆಕ್ಕಾಚಾರ ಗೊತ್ತಿಲ್ಲದಿದ್ದಾಗ ಈ ಬಗೆಯ ಅವಿವೇಕ ಹುಟ್ಟಿಕೊಳ್ಳುತ್ತದೆ. ಹೀಗೇ ಅನೇಕ ವರ್ಷಗಳವರೆಗೆ ನಾವು ನಮ್ಮ ಅಂತರಂಗದ ದ್ವಾರವನ್ನು ತೆರೆಯದೇ ಇದ್ದುದರಿಂದ ರಜೋಗುಣ ಮತ್ತು ತಮೋ ಗುಣಗಳೆಂಬ ತುಕ್ಕು ಹಿಡಿದುಬಿಟ್ಟಿದೆ . ಅದನ್ನು ತೆಗೆಯಲು ಭಕ್ತಿರಸವೆಂಬ ತೈಲಧಾರೆಯನ್ನು ಹರಿಸಬೇಕಾಗಿದೆ. ಎಷ್ಟು ಹಳೆಯ ತುಕ್ಕು ಎನ್ನುವುದರ ಮೇಲೆ ಎಷ್ಟು ತೈಲ ಬೇಕು ಎಂಬ ನಿರ್ಧಾರ ಅಷ್ಟೇ !
ಒಂದು ಉದ್ಧರಣೆಯಷ್ಟು ಭಕ್ತಿಯಿಂದ ಜನ್ಮಜನ್ಮಾಂತರದ ತುಕ್ಕನ್ನು ತೆರೆಯಲು ಸಾಧ್ಯವಿಲ್ಲ. ಆದ್ದರಿಂದ ನಿತ್ಯವೂ ಭಕ್ತಿರಸಧಾರೆಯಿಂದ ಅವನ ದಿವ್ಯಪಾದಗಳನ್ನು ತೋಯಿಸಿದರೆ ತುಕ್ಕು ಕಳೆದು, ಅಂತರಂಗದ ದ್ವಾರ ತೆರೆದು ಅವ್ಯಾಜ ಕರುಣಾ ಮೂರ್ತಿಯ ದರ್ಶನ ಆಗದೇ ಇರದು ಎಂಬುದು ಅನುಭವಿಗಳಾದ ಮಹರ್ಷಿಗಳ ಘೋಷಣೆ.
"ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ " ಎಂದು ದಾಸರು ಕೇಳುತ್ತಾರೆ. ಉದ್ಯೋಗದಿಂದ ನಿವೃತ್ತಿ ಹೊಂದಿದ ನಂತರ ಹೇಳಿ ಎಂದಿಲ್ಲ ಅವರು.
ಹಾಗೆಂದೇ ಶರೀರದಲ್ಲಿ ಬಲ ಇರುವಾಗಲೇ ನಿರಂತರ ಅವನಲ್ಲಿ ಭಕ್ತಿರಸತೈಲಧಾರೆಯನ್ನು ಹರಿಸೋಣ. ಅಂತರಂಗದ ದ್ವಾರವು ತೆರೆಯುವಂತೆ ಮಾಡಿಕೊಳ್ಳೋಣ. ಇದೇ ಜನ್ಮದಲ್ಲಿ ಅವನ ಸಾನ್ನಿಧ್ಯದ ಆನಂದವನ್ನು ಅನುಭವಿಸುವ ಪ್ರಯತ್ನ ಮಾಡೋಣ.
ಸೂಚನೆ: 6/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.