Monday, May 24, 2021

ಆರ್ಯಸಂಸ್ಕೃತಿ ದರ್ಶನ - 44 (Arya Samskruti Darshana - 44)



ಭೂಮಿಯನ್ನು ಹಿಡಿದಿರುವ ಶಕ್ತಿಗಳಾವುವು ?

ಲೇಖಕರು: ವಿದ್ವಾನ್ ಛಾಯಾಪತಿಗಳು 

 

ಇದೆಂತಹ ಪ್ರಶ್ನೆ?  ಭೂಮಿ ಒಂದು ಆಕಾಶಕಾಯ. ಸೌರವ್ಯೂಹದಲ್ಲಿ ಬರುತ್ತದೆ ಅದು, ಆದ್ದರಿಂದ ಸೌರಾಕರ್ಷಣಬಲದ ಮೇಲೆ ನಿಂತಿದೆ. ಖಗೋಳ ಶಾಸ್ತ್ರದ ಪ್ರಥಮ ಪಾಠವನ್ನು ಬಲ್ಲವನಿಗೂ ಈ ವಿಷಯ ಗೊತ್ತು, ಹೀಗಿರುವಾಗ ಈ ಪ್ರಶ್ನೆಗೆ ಅರ್ಥವೇನು?

 

 ಮಹರ್ಷಿಗಳ ಭೂಸೂಕ್ತದಲ್ಲಿ  ಒಂದು ಮಾತಿದೆ

 "ಸತ್ಯಂ ಬೃಹದೃತಂ ಉಗ್ರಂ ದೀಕ್ಷಾ ತಪೋ ಬ್ರಹ್ಮ ಯಜ್ಞಃ  ಪೃಥಿವೀಂ ಧಾರಯಂತಿ"

 "ಸತ್ಯ, ಬೃಹತ್ತಾದ ಋತ ಉಗ್ರವಾದ ದೀಕ್ಷೆ, ತಪಸ್ಸು, ಬ್ರಹ್ಮ, ಯಜ್ಞ ಇವುಗಳು ಭೂಮಿಯನ್ನು ಧರಿಸಿವೆ." 

 

ಈ ಮಾತನ್ನು ಕೇಳಿದರೆ ಇಂದಿನ ನಮಗೆ ನಗು ಬರುವಂತಿದೆ, ವೈಜ್ಞಾನಿಕವಾದ ಅರಿವಿಲ್ಲದ ಕಲ್ಪನೆಯಿದು, ಸತ್ಯ-ಋತ-ದೀಕ್ಷೆ-ತಪಸ್ಸುಗಳು ಭೂಮಿಯನ್ನು ಹಿಡಿದುಕೊಂಡಿರುವ ಶಕ್ತಿಗಳು ಎಂದರೇನರ್ಥ ? ಅವುಗಳು ಹೇಗೆ ಹಿಡಿದುಕೊಂಡಿವೆ?  ಅದನ್ನು ಅರಿತದ್ದು ಹೇಗೆ ? ಅರಿಯುವುದು ಹೇಗೆ ?

 

 ಸೌರಾಕರ್ಷಣಶಕ್ತಿ ಭೂಮಿಯನ್ನು ಧರಿಸಿದೆ ಎಂದರೆ ಏನರ್ಥ? ನೇರವಾಗಿ ಆ ಶಕ್ತಿ ಕಣ್ಣಿಗೆ ಕಾಣುವುದಿಲ್ಲ, ಅವುಗಳ ಕಕ್ಷೆ,ಚಲನಗಳ ಆಧಾರದ ಮೇಲೆ ಪತ್ತೆ ಹಿಡಿದ ವಿಷಯ ಆದು. ಭೂಗೋಲವನ್ನು ಧರಿಸಿರುವ ಶಕ್ತಿ ಅದು ಎಂಬುವುದನ್ನು ಅದನ್ನೂ ಪರಿಸರವನ್ನೂ ಅಳೆದುಬಂದ ಅರಿವಿನ ಆಧಾರದ ಮೇಲೆ ನಿರ್ಣಯಿಸಿರುತ್ತಾರೆ.

 

ಮಹರ್ಷಿಗಳು ಯಾವ ಆಧಾರದ ಮೇಲೆ ಮೇಲಿನ ಶಕ್ತಿಗಳು ಪೃಥಿವಿಯನ್ನು ಹಿಡಿದಿವೆ ಎಂದು ನಿರ್ಣಯಿಸಿದರು? ಆ ನಿರ್ಣಯ ಸಮಂಜಸವೇ? ಎಂಬುದೂ ವಿಚಾರಮಾಡಬೇಕಾದ ಅಂಶವಾಗಿದೆ. 

 

ಒಂದು ದೇಶ ಎಂದಾಗ ಬರೀ ಭೂಮಿಯನ್ನಷ್ಟೇ ಅಲ್ಲದೇ ಆಲ್ಲಿರುವ ಜೀವಿಗಳನ್ನೂ ನಾವು ಗಣಿಸುತ್ತೇವೆ. ಹಾಗೆಯೇ ಇಲ್ಲಿ ಪೃಥಿವೀ ಎಂದರೆ ಕೇವಲ ಭೂಮಂಡಲ ಎಂದು ಮಾತ್ರ ಅರ್ಥವಲ್ಲ; ಭೂಮಿಯನ್ನಾಶ್ರಯಿಸಿ ಬಾಳುತ್ತಿರುವ ಜೀವಲೋಕ ಎಂದು ಅರ್ಥ.

 

ಪೃಥಿವೀಂ ಧಾರಯಂತಿ -ಎಂದರೆ ಕೇವಲ ಭೂಗೋಲವನ್ನು ಹಿಡಿದಿರುವ ಶಕ್ತಿಗಳು ಎಂದಷ್ಟೇ ಅಲ್ಲ, ಅಲ್ಲಿರುವ ಜೀವಲೋಕವನ್ನು ಧರಿಸಿರುವ ಶಕ್ತಿಗಳಾವುವು ? ಎಂಬ ಅರ್ಥದಲ್ಲಿ ತೆಗೆದುಕೊಂಡಾಗ ಪೃಥ್ವಿಯನ್ನೂ, ಮತ್ತು, ಜೀವಲೋಕವನ್ನೂ ಧರಿಸಿರುವ ಶಕ್ತಿಗಳಾವುವು ಎಂಬುದನ್ನು ವಿಚಾರಮಾಡಬೇಕಾಗುತ್ತದೆ.

 

 ಮೊಟ್ಟ ಮೂದಲನೆಯದಾಗಿ ಸತ್ಯಂ ಎಂಬುದು ಆ ಶಕ್ತಿ. ಸತ್ಯ ಎಂದರೆ ಕೇವಲ ಇದ್ದದ್ದನ್ನು ಇದ್ದ ಹಾಗೆ ಹೇಳುವುದು ಎಂದಷ್ಟೇ ಅಲ್ಲ, ಅದು ಸತ್ಯದ ಮಾತಿನ ರೂಪ ಅಷ್ಟೇ. ಮಾತು ಎನ್ನುವುದಕ್ಕಿಂತಲೂ ವಿಸ್ತಾರವಾದುದು ಸತ್ಯ ಎನ್ನುವುದು. ಸತ್ ಎಂದರೆ ಇರುವುದು ಎಂದರ್ಥ. ಯಾವುದಿರುವುದರಿಂದ ವಿಶಾಲವಾದ ವಿಶ್ವವಿರುವುದೋ ಆ ವಿಶಾಲ ವಿಶ್ವದ ಇರುವಿಕೆಗೆ ಕಾರಣವಾದ ಶಕ್ತಿ ಸತ್ಯ. ಪೃಥಿವಿ ಎಂಬ ಆಕಾಶಕಾಯವನ್ನು  ಸೌರಾಕರ್ಷಣ ಶಕ್ತಿ ಹಿಡಿದಿದೆ ಎಂಬುದೂ ವಿಜ್ಞಾನದ ಅಳತೆಗೆ ನಿಲುಕಿದ ಸತ್ಯದ ಒಂದು ಅಂಶ ಅಷ್ಟೇ. ಈ ಭೂಮಿಯನ್ನು ಮಾತ್ರವೇ ಅಲ್ಲ, ವಿಶಾಲವಾದ ವಿಶ್ವವನ್ನೇ ಹಿಡಿದಿರುವುದು ಅವುಗಳಿಗೆ ಇರವನ್ನು ಕೊಟ್ಟಿರುವುದು ಸತ್ಯವೇ. ವಿಶಾಲವಾದ ವಿಶ್ವದ ಜೊತೆಗೆ, ಅಲ್ಲಿ ಬಾಳುವ ಜೀವಲೋಕಕ್ಕೂ  ಇರುವಿಕೆಯನ್ನು ಕೊಟ್ಟಿರುವ ಶಕ್ತಿ ಯಾವುದುಂಟೋ ಅದು ಸತ್ಯ. ತಾನು ಇರುವುದರ ಮೂಲಕ ಜೀವಿಗಳ ಇರುವಿಕೆಗೆ ಕಾರಣವಾದ ಜೀವಲೋಕವೆಲಾ ಅಳಿದರೂ, ಉಳಿದರೂ, ಇರುವ, ಇರುವಿಕೆಯೊಂದನ್ನೇ ಸ್ವಭಾವವಾಗಿ ಉಳ್ಳ ಮಹಾಶಕ್ತಿಯನ್ನೇ "ಸತ್ಯ"ಎಂದು ಆಳವಾದ ತಪಸ್ಯೆಯಿಂದ ಋಷಿಗಳು ಅರ್ಥ ಮಾಡಿಕೊಂಡರು. ಇಂದೂ ಇದೆ ಹಿಂದೆಯೂ ಇತ್ತು ಮುಂದೆಯೂ ಇರುತ್ತದೆ-ಎಂದು ತ್ರಿಕಾಲಗಳಲ್ಲೂ ಯಾವುದರ ಇರುವಿಕೆಗೆ ತಡೆಯೇ ಇಲ್ಲವೋ ಅಂತಹ ವಸ್ತುವನ್ನೇ ಅವರು ಸತ್ಯ ಎಂಬ ಪದದಿಂದ ಕರೆದರು. ಆದ್ದರಿಂದ ಜೀವಲೋಕಕ್ಕೂ, ಆದಕ್ಕೆ ಆಶ್ರಯವಾದ ಭೂಮಿಗೂ ಎರಡಕ್ಕೂ ಆಶ್ರಯ ನೀಡಿರುವ, ಎರಡರ ಇರುವಿಕೆಗೂ ಆಧಾರವಾಗಿರುವ ಶಕ್ತಿಯೇ ಸತ್ಯ. ಆದ್ದರಿಂದ, ವೈಜ್ಞಾನಿಕವಾದ ನೋಟವು ಬರೀ ಭೌತಿಕವಾದ ಭೂಮಂಡಲದ ಇರುವಿಕೆಗೆ ಕಾರಣವಾದ ವಿಜ್ಞಾನದ ಅಳತೆಗಳಿಗೆ ಸಿಕ್ಕುವ ಸೌರಾಕರ್ಷಣಶಕ್ತಿ ಹಿಡಿದಿದೆ ಎಂದರೆ, ಆ ಶಕ್ತಿಯು ಇರುವಿಕೆಗೂ  ಕಾರಣವಾದ "ಸತ್ಯ"-ಭೂಮಿಯನ್ನೂ ಜೀವಲೋಕವನ್ನೂ ಹಿಡಿದಿದೆ ಎಂಬ ಆಳವಾದ ನೋಟ ಮಹರ್ಷಿಗಳದ್ದು. 

 

ಆ ಸತ್ಯವನ್ನು ವಿಸ್ತಾರಗೊಳಿಸಿದ, ಯಾವುದು ಇಟ್ಟ ನಿಯಮದಿಂದ ವಿಶ್ವವೆಲ್ಲವೂ ನಡೆಯುತ್ತಿದೆಯೋ ಅಂತಹ ಬೃಹತ್ತಾದ ಶಕ್ತಿಯೇ ಋತ. ಸತ್ಯರೂಪವಾಗಿ  ವಿಶ್ವವನ್ನು ವಿಸ್ತಾರಗೊಳಿಸಿ ಹಿಡಿದಿರುವ ಮಹಾಶಕ್ತಿ ಅದು. 

ಋತ- ಸತ್ಯಗಳು ವಿಶ್ವವನ್ನು ಹಾಗು ಭೂಮಿಯನ್ನು ಧರಿಸಿವೆ ಎಂಬುದರ ಅರಿವು ಮೂಡಲು, ಆ ಅರಿವನ್ನು ಪಡೆಯಲು ವಿಶ್ವಮೂಲವೂ ಮತ್ತು ಜೀವಲೋಕದ ಮೂಲವೂ ಆಗಿರುವ ಆ ವಸ್ತುವನ್ನು ಅರಿಯಲು ಉಗ್ರವಾದ ದೀಕ್ಷೆ ಬೇಕು. ಆ ದೀಕ್ಷೆ ಮತ್ತು ಅದಕ್ಕನುಗುಣವಾದ  ತಪಸ್ಸು ಎರಡೂ ಇದ್ದಾಗ- ವಿಶ್ವವು ಯಾವುದನ್ನವಲಂಬಿಸಿ ನಿಂತಿದೆ ಎಂಬ ಅರಿವು ಮೂಡುತ್ತದೆ. ಆದ್ದರಿಂದ ತಪಸ್ಸು ಮತ್ತು  ದೀಕ್ಷೆಗಳೂ ಪೃಥಿವಿಯನ್ನು ಧರಿಸಿರುವ ಶಕ್ತಿಗ ಳೇ. 

 

ಬ್ರಹ್ಮ ಎಂದರೆ ಈ ಬೃಹತ್ತಾದ ವಿಶ್ವವಿಸ್ತಾರಕ್ಕೆ ಕಾರಣವಾದ ಶಕ್ತಿ. ಬೀಜವು  ಅದರಿಂದ ವಿಸ್ತಾರಗೊಂಡ ಮರವನ್ನು ಧರಿಸಿದೆ ಎಂಬಂತೆ, ಬ್ರಹ್ಮವು ತನ್ನಿಂದ ವಿಸ್ತಾರಗೊಂಡ ಪೃಥಿವಿಯನ್ನು ಧರಿಸಿದೆ. 

 

ಯಜ್ಞವು ಪೃಥಿವಿಯನ್ನು ಧರಿಸಿರುವ ಶಕ್ತಿ. ಯಜ್ಞವೆಂದೊಡನೆಯೇ ನಮ್ಮ ಮನಸ್ಸು ಅದೊಂದು ಹಿಂಸಾರೂಪವಾದ ಕರ್ಮ, ಪಶುಬಲಿ ನೀಡುವ ಕರ್ಮ, ಎಂದು ಪರಿಮಿತವಾದ ಅರ್ಥದಲ್ಲಿ ತೆಗೆದುಕೊಳ್ಳುತ್ತದೆ. ಮೊದಲು ಯಜ್ಞ ಯಾಗಾದಿಗಳು ಬಹಳವಾಗಿ ಪ್ರಚಾರದಲ್ಲಿದ್ದವು.  ಬುದ್ಧನ ಅಹಿಂಸಾ ತತ್ತ್ವ ಪ್ರಚಾರವಾದ ನಂತರ ಅವುಗಳೆಲ್ಲವೂ ನಿಂತುಹೋದವುಎಂಬ ಅಭಿಪ್ರಾಯವೂ ಪ್ರಚಾರದಲ್ಲಿದೆ. ಅಂತೆಯೇ ಹಲವು ಸಾಹಿತ್ಯಗಳಲ್ಲಿ ಮಕ್ಕಳ ಓದಿಗಾಗಿ ಇರುವ  ಗ್ರಂಥಗಳಲ್ಲಿ ಸಾವಿರಾರು ಕುರಿಗಳನ್ನು ಯಜ್ಞಶಾಲೆಗೆ ಒಯ್ಯುವ ವೃತ್ತಾಂತವನ್ನು ನಾವು ನೋಡುತ್ತೇವೆ. ನಾಟಕವೊಂದರಲ್ಲಿ ಬಿಂಬಸಾರನ ಯಜ್ಞಶಾಲೆಗೆ ಮೂರು ಸಾವಿರ ಕುರಿಗಳನ್ನು ಅಟ್ಟಿಕೊಂಡು ಹೋಗುತ್ತಿದ್ದರೆಂದೂ ಬುದ್ಧನು ಅವನ ಯಾಗಶಾಲೆಯನ್ನು ಪ್ರವೇಶಿಸಿ ಆ ಪ್ರಾಣಿವಧೆಯನ್ನು ತಡೆಗಟ್ಟಿದನೆಂದೂ ಬರುವ ವರ್ಣನೆಯನ್ನು ಕಾಣುತ್ತೇವೆ. 

 

ಯಜ್ಞದ ಬಗೆಗೆ ಅರಿವನ್ನು ಮೂಡಿಸುವುದಕ್ಕಿಂತ ಈ ಚಿತ್ರಗಳು ಅಜ್ಞಾನವನ್ನು ಹರಡುತ್ತದೆ. ಮೊದಲನೆಯದಾಗಿ ಯಜ್ಞ ಎಂದರೆ ದೇವಪ್ರೀತಿಕರವಾದ ಕರ್ಮ, ಪೂಜೆ ಎಂದರ್ಥ. ಯಜ್ಞಪದದ ಮೂಲಧಾತು "ಯಜ" ಎಂಬುದು. ಅದರ ಅರ್ಥ ದೇವಪೂಜೆ ಎಂಬುದು. "ಬಲಿ" ಎಂದರೆ ಕತ್ತರಿಸುವುದು ಎಂದರ್ಥವಲ್ಲ. ಬಲಿ ಎಂದರೆ-ನಿವೇದನೆ- ದೇವರಿಗಾಗಿ ಸಮರ್ಪಣೆ ಎಂಬರ್ಥವಿದೆ.  ಮೇಲಾಗಿ ಯಜ್ಞವನ್ನು ಹೇಳುವ ಯಾವ ಶಾಸ್ತ್ರಗಳಲ್ಲಿಯೂ ಕುರಿಯನ್ನು ಯಜ್ಞಾಂಗವಾಗಿ ಬಳಸುವ ಪ್ರಶ್ನೆಯೇ ಇಲ್ಲ, ವಿಶಿಷ್ಟ ಲಕ್ಷಣಯುಕ್ತವಾದ ಭಾಗ (ಅಂದರೆ ಆಡನ್ನು ) ಬಲಿಯಾಗಿ ಬಳಸಿ ಅದರ ವಪೆಯನ್ನು ಹೋವು ಮಾಡುವ ಒಂದು ಉಲ್ಲೇಖವಿದೆ. ಸಾವಿರಾರು ಕುರಿಗಳನ್ನು ಯಜ್ಞದಲ್ಲಿ ಬಳಸುವ ಸನ್ನಿವೇಶ ಇಲ್ಲವೇ ಇಲ್ಲ. ಅದು ಕೇವಲ ಕಲ್ಪನಾಜಾಲ. ಅಂತಹ ಭಾಗವೊಂದನ್ನು ಪಶುವಾಗಿ ಬಳಸಬೇಕು. ಪಿಷ್ಟಪಶು ಎಂದರೆ ಹಿಟ್ಟಿನಿಂದ ಪಶುವನ್ನು ಮಾಡಿ ಹೋಮ ಮಾಡಿದರೆ ಸಾಕು ಎಂಬಂಶವೂ ಇದ್ದು, ಬಹುವಾಗಿ ಪಿಷ್ಟಪಶು ಯಾಗವು ಶಾಸ್ತ್ರೀಯವೆಂದು ಅಂಗೀಕೃತವಾಗಿದೆ. ಪ್ರತ್ಯಕ್ಷ ಭಾಗವನ್ನೇ"ಯಜ್ಞ"ಕಾಗಿ ಬಳಸುವ ಸನ್ನಿವೇಶದಲ್ಲಿಯೂ, ಅಲ್ಲಿ ನಡೆಯುವ ಕ್ರಿಯೆಗಳು ವೈಜ್ಞಾನಿಕವಾಗಿ, ಅರ್ಥಪೂರ್ಣವಾಗಿ ನಡೆದರೆ ಅದು ಹಿಂಸಾರೂಪವಲ್ಲದೆ, ಅಹಿಂಸಾರೂಪದಲ್ಲಿಯೇ ಪರ್ಯವಸಾನವಾಗುವುದೆಂಬುದನ್ನು ಮನಗಾಣಲು ಸಾಕಷ್ಟು ಅಂಶಗಳಿವೆ. ಆ ಎಲ್ಲವನ್ನೂ ಈ ಸಂಕ್ಷಿಪ್ತ ಬರಹದಲ್ಲಿ ವಿವರ ನೀಡುವುದಕ್ಕಿಂತ ಅದಕ್ಕಾಗಿಯೇ ಮತ್ತೊಂದು ಬರಹವನ್ನು ನೀಡಬಹುದು. 

 

ಪ್ರಕೃತ, ಯಜ್ಞ ಎನ್ನುವುದು ಕೇವಲ ಹಿಂಸಾರೂಪವಾದ ಕರ್ಮವಲ್ಲ. ಯಜ್ಞವೇದಿಕೆಯೊಂದರ ನಿರ್ಮಾಣವಾಡಿ, ದೃವ್ಯಗಳನ್ನು ಬಳಸಿ, ನಡೆಸುವ ಯಾವ ಕ್ರಿಯೆಯನ್ನು ನಾವು ಯಜ್ಞವೆಂದು ಕರೆಯುತ್ತೇವೆಯೋ ಅದು ಯಜ್ಞದ ಒಂದು ರೂಪವಷ್ಟೇ. ಆದೇ ಅದರ ಸಾರಸರಸ್ವವಲ್ಲ.   ಯಜ್ಞದ ಮರ್ಮವನ್ನು ಬಲ್ಲ ಜ್ಞಾನಿಗಳ ದೃಷ್ಟಿಯಲ್ಲಿ ಇಡೀ ಜೀವ ಲೋಕವೆಲ್ಲವೂ ಯಜ್ಞಕ್ಕಾಗಿಯೇ ಸೃಷ್ಟವಾದುವು. ಜೀವನ ಮಾಡುವ ವಿಧಾನವೆಲ್ಲವೂ ಯಜ್ಞಮಯ. ಈ ಯಜ್ಞವು ಒಂದು ಕಾಲದಲ್ಲಿದ್ದು ಮರೆಯಾಗುವ ಬದುಕಲ್ಲ. ಅದು ಬುದ್ಧನ ಹಿಂದೆಯೂ ಇತ್ತು. ಮುಂದೆಯೂ ಇತ್ತು. ಇಂದೂ ಇವೆ. ಮುಂದೆಯೂ ಇರುತ್ತದೆ. ಅದರ ಮರ್ಮವರಿತು ಬಾಳಿದರೆ ಬದುಕು ಹಸನಾಗುತ್ತದೆ. 

 

 ಶಾಸ್ತ್ರೀಯವಾಗಿಯೇ ತೆಗೆದುಕೊಂಡರೂ ಮನುಷ್ಯನು ಪ್ರತಿದಿವಸವೂ ಐದು ಬಗೆಯ ಯಜ್ಞಗಳನ್ನು ಮಾಡಬೇಕು ಎಂದು ನಿಯಮವಿದೆ. ದೇವ-ಪಿತೃ ಋಷಿ-ಭೂತ-ಮನುಷ್ಯ ಯಜ್ಞಗಳೇ ಅವು, ದೇವಪೂಜೆಯೇ ದೇವಯಜ್ಞ. ಪಿತೃಗಳಿಗೆ ಕವ್ಯರೂಪವಾಗಿ ತೃಪ್ತಿಪಡಿಸುವುದು ಪಿತೃಯಜ್ಞ. ಋಷಿಗಳು ಕೊಟ್ಟ ಜ್ಞಾನ ಸಂಪತ್ತನ್ನೂ ವಿದ್ಯಾಸಂಪತ್ತನ್ನೂ ಅರಿತು ಅದರ ಅರಿವನ್ನು ಬೆಳೆಸುವುದು ಋಷಿಯಜ್ಞ. ಅತಿಥಿಗಳಿಗೆ ಅನ್ನವೀಯುವುದು ಮನುಷ್ಯಯಜ್ಞ. ಸಮಸ್ತಭೂತಗಳಿಗೂ ತೃಪ್ತಿಯುಂಟಾಗುವಂತೆ ನಡೆಯುವುದು ಭೂತಯಜ್ಞ. ಅಂದರೆ, ಭೂತ ಕೋಟಿಗಳಿಗೆ ಆಹಾರ ನೀಡುವುದು ಭೂತಯಜ್ಞವಾಗುತ್ತದೆ. ಇಲ್ಲಿ ಯಾವ ಬಲಿಯ ಪ್ರಸಂಗವೂ ಇಲ್ಲ.

 

ಸೃಷ್ಟಿಯೇ ಒಂದು ಯಜ್ಞರೂಪವಾದುದೆಂದು ಪುರುಷಸೂಕ್ತವು ಹೇಳುತ್ತದೆ. ವಿಶ್ವಮೂಲವಾದ ಶಕ್ತಿಯಿಂದ ಅರಳಿಬಂದ ಜೀವಿಗಳು ನಾವು. ಅಂತೆಯೇ, ನಮ್ಮ ಜೀವನೋಪಕರಣಗಳಾದ ವಸ್ತುಗಳೂ ಆ ಶಕ್ತಿಯಿಂದಲೇ ಅರಳಿ ಬಂದವುಗಳು. ಬೀಜದಿಂದ ಅರಳಿಬಂದ ವೃಕ್ಷವು ಮತ್ತೆ ಬೀಜದಲ್ಲೇ ನಿಂತಾಗ ಹೇಗೆ ಸಫಲವಾಗುವುದೋ ಹಾಗೆ ವಿಶ್ವಮೂಲವಾದ ಮಹಾಶಕ್ತಿಯಿಂದ ಆರಳಿಬಂದ ವಸ್ತುಗಳು ಮತ್ತೆ ಅಲ್ಲಿ ನಿಂತಾಗಲೇ ಅವುಗಳ ಜೀವನವು ಸಾರ್ಥಕವಾಗುತ್ತವೆ. ಆದ್ದರಿಂದ ಪ್ರತಿಜೀವಿಯು ತನ್ನ ಕೈಗೆ ದೊರಕುವ ವಸ್ತುವನ್ನು "ಸೃಷ್ಟಿಮೂಲವಾದ ಶಕ್ತಿಯ ಕಡೆಗೆ, ಅದು ಮುಟ್ಟಲು ಅನುಗುಣವಾದ ವಿಧಾನದಿಂದ ಬಳಸಿಕೊಳ್ಳುವ ಕಲೆಯೇ ಯಜ್ಞ. ನಮ್ಮ ಉಸಿರಾಟವು ಉಸಿರಿನ ಮೂಲವನ್ನು  ಮುಟ್ಟುವಂತೆ ಆದಾಗ ಜ್ಞಾನಿಗಳ ದೃಷ್ಟಿಯಿಂದ ಯಜ್ಞ. ಆಹಾರಸ್ವೀಕಾರವು ಯಜ್ಞ. "ಸೃಷ್ಟಿಯಲ್ಲಿ ವಿಸ್ತಾರಹೊಂದಿಬಂದ ವಸ್ತುವನ್ನು ವಿಕಾರಗೊಳಿಸದೆ ಅದನ್ನು ಸೃಷ್ಟಿಗೆ ಕಾರಣವಾದ ಮೂಲಜ್ಯೋತಿಯ ಕಡೆಗೆ ತಲುಪುವಂತೆ ಬಳಸಬಲ್ಲವನೇ ಯಜ್ಞಮರ್ಮಜ್ಞ." 

 

ನಮ್ಮ ಜೀವನವನ್ನು, ಜೀವನೋಪಕರಣಗಳನ್ನು, ಜೀವನಮೂಲವಾದ ವಿಶ್ವಮೂಲವಾದ ಜ್ಯೋತಿಯ ಕಡೆಗೆ ಅರ್ಪಿಸಿಕೊಳ್ಳುವ ಯಾವ ಕ್ರಿಯೆಯುಂಟೋ ಆ ಎಲ್ಲವೂ ಯಜ್ಞವೇ. ಆದ್ದರಿಂದಲೇ ಶ್ರೀಕೃಷ್ಣನು ಗೀತೆಯಲ್ಲಿ 'ಶ್ರೇರ್ಯಾ ದ್ರವ್ಯಮಯಾದ್ಯಜ್ಞಾದ್ ಜ್ಞಾನಯಜ್ಞಃ ಪರಂತಪ.' ದ್ರವ್ಯದ  ಮೂಲಕ ಯಜ್ಞೇಶನನ್ನು ಆರಾಧಿಸುವುದಕ್ಕಿಂತಲೂ, ಆ ದ್ರವ್ಯಗಳೆಲ್ಲವೂ ಯಾವ ಜ್ಞಾನಮೂಲಕ್ಕೆ ಮುಟ್ಟಬೇಕೋ ಆ ಜ್ಞಾನವನ್ನು ಪಡೆದು ಅವನನ್ನು ಆರಾಧಿಸುವುದು ಶ್ರೇಯಸ್ಕರ ಎಂದು ಸಾರುತ್ತಾನೆ.

 

ಜ್ಞಾನಿಗಳ ನೋಟದಲ್ಲಿ, ಜೀವನವು ಅರಳಿಬಂದಿರುವ ವಿಧಾನವೇ ಯಜ್ಞ ಮತ್ತು ವಿಸ್ತಾರಗೊಳಿಸಿದ ಮಹಾಶಕ್ತಿಯತ್ತ  ಹರಿಯುವಂತೆ ನಡೆಯುವ ಜೀವಲೋಕದ ಕ್ರಿಯಾಕಲಾಪಗಳೆಲ್ಲವೂ ಯಜ್ಞವೇ. ಆದ್ದರಿಂದಲೇ 'ಯಜ್ಞಾರ್ಥಾತ್ ಕರ್ಮಣೋsನ್ಯತ್ರ, ಲೋಕೋsಯಂ ಕರ್ಮಬಂಧನಃ '

 

 ಯಜ್ಞರೂಪವಾದ ಕ್ರಿಯೆಯೊಂದನ್ನು ಬಿಟ್ಟು ಮಾಡುವ ಕ್ರಿಯೆಗಳೆಲ್ಲವೂ ಬಂಧಕವಾದದ್ದು. ಈಶ್ವರನಿಂದ ಬಂದದ್ದನ್ನು ಮತ್ತೆ ಅವನಿಗೇ ತಲುಪುವ ವಿಧಾನದಲ್ಲಿ ಬಳಸಿದಾಗ ಅದು ನಮ್ಮನ್ನು ಕಟ್ಟಿಹಾಕುವುದಿಲ್ಲ ಎಂದು ಶ್ರೀ ಕೃಷ್ಣನು ಸಾರುತ್ತಾನೆ. ಈ ಅರ್ಥದಲ್ಲಿ, ಯಜ್ಞವು ಜೀವಲೋಕವನ್ನು ಧರಿಸಿರುವ ಶಕ್ತಿ. ಅದು ಕೇವಲ ಒಂದು ಕ್ರಿಯಾರೂಪವಷ್ಟೇ ಅಲ್ಲ.

 

ಮೇಲೆ ಹೇಳಿದ ಎಲ್ಲಾ ಶಕ್ತಿಗಳೂ ಜೀವಲೋಕವನ್ನು ಧರಿಸಿವೆ. ಎಲ್ಲದರ ಇರುವಿಕೆಗೆ ಕಾರಣವಾದ ಸತ್ಯದ ಹಿಡಿತ ತಪ್ಪಿದರೆ ಜೀವಲೋಕ ಉಳಿಯುವಂತಿಲ್ಲ,. ಅದರ ಹಿಂಬದಿಯಲ್ಲಿ ಬೆಳಗುವ ಋತವನ್ನು ಬಿಟ್ಟರೂ ಉಳಿಯುವಂತಿಲ್ಲ.ಅದನ್ನರಿಯುವ ನಿಯಮ ಮತ್ತು ತಪಸ್ಯೆಗಳನ್ನು ಬಿಟ್ಟರೆ ಅರಿವೇ ಇಲ್ಲದೆ ನರಳುತ್ತೇವೆ. ಅಂತೆಯೇ ಜೀವಲೋಕವನ್ನು ವಿಸ್ತಾರಗೊಳಿಸಿದ ಶಕ್ತಿ, ಮತ್ತು ಜೀವಲೋಕವನ್ನು ನೆಮ್ಮದಿಯ ನೆಲೆಯತ್ತ ನಡೆಸುವ ಯಜ್ಞರೂಪವಾದ ಕ್ರಿಯಾಕಲಾಪ, ಈ ಎಲ್ಲವೂ ಜೀವಲೋಕವನ್ನು ಹಿಡಿದಿರುವ ಶಕ್ತಿಗಳೇ ಎಂಬುದು ಕೇವಲ ಭೌತಿಕವಷ್ಟೇ ಅಲ್ಲ; ಅದರ ಹಿಂಬದಿಯ ದೈವಿಕ, ಆಧ್ಯಾತ್ಮಿಕವಾದ ನೋಟದಿಂದ ಬಯಲಿಗೆ ಬಂದಿರುವ ಸತ್ಯಗಳು ಎಂಬುದು ಗಮನಾರ್ಹ.

 

ಆದ್ದರಿಂದಲೇ ಅವರು ಭೂಮಿಗೆ ಹೆಸರು ನೀಡುವಾಗ ಕೇವಲ ಮಣ್ಣು, ಗೋಲ,ಎದಷ್ಟೇ ಕರೆಯದೇ, ಭೂಮಿ (ಬಹುವಾಗಿ ವಿಸ್ತಾರಗೊಂಡದ್ದು) ಸತ್ಯಾ, (ಸತ್ಯರೂಪವಾದ ಶಕ್ತಿಯಿಂದ ವಿಕಾಸಗೊಂಡದ್ದು), ಅಮೃತಾ (ಅದರ ನೆಲೆಯತ್ತ ಗಮನವಿಟ್ಟಾಗ ಪ್ರಕೃತಿಯ ಕ್ಷೇತ್ರದಿಂದ ಅಮರತ್ವದ ಕಡೆಗೆ  ಕೈದೋರಬಲ್ಲದ್ದು ಎಂಬ ಹೆಸರುಗಳನ್ನೂ ನೀಡಿದ್ದಾರೆ. ಭೌತಿಕ ಭಾಗವನ್ನೂ ಮರೆಯದೇ, ಜೀವನದ ವ್ಯಾಪ್ತಿಯನ್ನು ತುಂಬಿಕೊಂಡು ನೆಲೆಯಿಂದ ಹರಿದ, ನೆಲೆಯತ್ತ ಹರಿದ ನೋಟವವರದು ಎಂಬುದು ಗಮನಾರ್ಹ. 

 

ಸತ್ಯ, ಋತ, ಉಗ್ರವಾದ ದೀಕ್ಷೆ, ತಪಸ್ಸು, ಬ್ರಹ್ಮ, ಯಜ್ಞ ಇವುಗಳು ವಹರ್ಷಿಗಳ ಕಲ್ಪನೆಯಿಂದ ಮೂಡಿಬಂದ ಹೇಳಿಕೆಗಳ್ಅಲ್ಲ. ತಪೋಮಯವಾದ ಅವರ ಅನ್ವೇಷಣೆಗೆ ಗೋಚರವಾದ ಸತ್ಯಗಳು. ಸೌರಾಕರ್ಷಣೆಯಿಂದ ಭೂಮಿ ಇಂತಿದೆ-ಎಂಬುದು ಹೇಗೆ ಹೊರಗಣ್ಣಿಗೆ ಕಾಣದಿದ್ದರೂ ವೈಜ್ಞಾನಿಕ ಆನ್ವೇಷಣೆಯಿಂದ ಸಿದ್ಧಗೊಂಡ ಸತ್ಯವೋ, ಮೇಲ್ಕಂಡ ಶಕ್ತಿಗಳು ಭೂಮಿ ಮತ್ತು ಜೀವಲೋಕವನ್ನು ಧರಿಸಿವೆ ಎಂಬುದೂ ಅಷ್ಟೇ ಅಥವಾ ಅದಕ್ಕಿಂತಲೂ ಆಳವಾದ ಅನ್ವೇಷಣೆಯಿಂದ ಮೂಡಿಬಂದ ಸತ್ಯ.

 

 ಆ ಅನ್ವೇಷಣೆಯ ಪಥದಲ್ಲಿ ಸಾಗಿ ಅದರ ಒಳಸತ್ಯವನ್ನು ಗುರುತಿಸಿದರೆ ಗುರುತಿಸಿದ ಜೀವಿಯನ್ನು ಆ ಸತ್ಯದಲ್ಲಿ ನಿಲ್ಲಿಸಿ ಶಾಂತಿ ಸಮದ್ಧವಾದ ಅಮೃತವನ್ನು ಆ ಜೀವಿಗೆ ಉಣಿಸುವಂತಹ ಸತ್ಯವದು. ಆ ಸತ್ಯಪಥದತ್ತ ನನ್ನ ಲಕ್ಷ್ಯಸೆಳೆದು, ನನ್ನ ಬುದ್ಧಿ ಭೂಮಿಕೆಗೆ ಆ ಅರಿವನ್ನು ತುಂಬಿದ ಶ್ರೀರಂಗ ಮಹಾಗುರುವಿಗೆ ಈ ಬರಹ ಅರ್ಪಿತವಾಗಲಿ.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: 5 ಸಂಚಿಕೆ: 10, ಆಗಸ್ಟ್ 1988 ತಿಂಗಳಲ್ಲಿ  ಪ್ರಕಟವಾಗಿದೆ.