Showing posts with label author_raghavendraural. Show all posts
Showing posts with label author_raghavendraural. Show all posts

Wednesday, August 4, 2021

ಗುರಿ ತಪ್ಪುವುದು ಸುಲಭ (Guru tappuvudu sulabha)

ರಾಘವೇಂದ್ರ ಉರಳ್  ಕೆ ಆರ್ 

ಪ್ರತಿಕ್ರಿಯಿಸಿರಿ lekhana@ayvm.in



ಒಂದು ಸಣ್ಣ ಕುಟುಂಬ, ಸಾಗರದ ತೀರದಲ್ಲಿ ವಾಸವಾಗಿತ್ತು. ಆ ಕುಟುಂಬದವರು  ಬೆಳಿಗ್ಗೆ ಬೇಗ ಎದ್ದು ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಮಧ್ಯಾಹ್ನದವರೆಗೆ ಮೀನು ಹಿಡಿದು, ಅದನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟಮಾಡಿ, ಊಟಕ್ಕೆ ಮನೆಗೆ ಬರುತ್ತಿದ್ದರು. ಊಟ ಆದ ನಂತರ, ಸಂಜೆಯವರೆಗೆ ಸಮುದ್ರತೀರದಲ್ಲಿ ತಮ್ಮ ಸಂಸಾರದೊಂದಿಗೆ ಆನಂದ ಹಾಗು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು. 

ಒಮ್ಮೆ ದೂರದ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಂಬಂಧಿಕ ಇವರ ಮನೆಗೆ ಬಂದ. ಅವನು ಈ ಕುಟುಂಬದವರ ದಿನಚರಿಯನ್ನು ಗಮನಿಸತೊಡಗಿದ. ಪಟ್ಟಣದಲ್ಲಿ ನಾನಾ ಕಾರಣದಿಂದ ಹಗಲೂ ರಾತ್ರಿ ದುಡಿಯುತ್ತಿದ್ದ ಅವನಿಗೆ ಈ ಕುಟುಂಬದವರ ಮೇಲೆ ಕನಿಕರ. ಅವರಿಗೆ ಸಲಹೆ ಕೊಟ್ಟನು . 

ನೀವೆಲ್ಲಾ ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದ್ದೀರಿ. ನೀವು ಕೇವಲ ಮಧ್ಯಾಹ್ನದವರೆಗೆ ಕೆಲಸ ಮಾಡುವುದರಿಂದ ಸ್ವಲ್ಪ ಮಾತ್ರ ಮೀನು ಸಿಗುತ್ತದೆ; ಆದ್ದರಿಂದ ಕಡಿಮೆ ಹಣ ಸಿಗುತ್ತದೆ. ಒಂದು ವೇಳೆ ನೀವು ಸಂಜೆಯವರೆಗೆ ಮೀನು ಹಿಡಿದು ದೊಡ್ಡ ಮಾರುಕಟ್ಟೆಯಲ್ಲಿ ಮಾರಾಟಮಾಡಿದರೆ ಹೆಚ್ಚು ಹಣ ಸಿಗುತ್ತದೆ, ಹೀಗೆ ಹೆಚ್ಚು ಹಣ ಬರುವುದರಿಂದ ಮುಂದೆ ನೀವು ಒಂದು ದೊಡ್ಡ ಹಡಗನ್ನು ಖರೀದಿಸಬಹುದು. ಅದರಿಂದ ಇನ್ನೂ ಆಳದ ಸಮುದ್ರಕ್ಕೆ ಹೋಗಿ ಹೆಚ್ಚು ಮೀನು ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೀನು ಮಾರಿ ಕೋಟಿಗಟ್ಟಲೆ ಹಣ ಮಾಡಬಹುದು. ಅದರಿಂದ ನೀವು ನಿಮ್ಮದೇ ಆದ ಒಂದು ದೊಡ್ಡ ಬಂಗಲೆಯನ್ನು ಖರೀದಿಸಿ ನಿಮ್ಮ ಸಂಸಾರದೊಂದಿಗೆ ಆನಂದ ಹಾಗು ನೆಮ್ಮದಿಯಿಂದ ಬದುಕಬಹುದು ಎಂದು ಹೇಳಿದ. ಇಷ್ಟೆಲ್ಲಾ ಮಾಡುವುದು ನೆಮ್ಮದಿ ಹಾಗೂ ಆನಂದಕ್ಕಾಗಿ ಎಂದಾದರೆ ನಾವು ಈಗಾಗಲೇ ಆ ನೆಮ್ಮದಿ ಆನಂದವನ್ನು ಅನುಭವಿಸುವುತ್ತಿದ್ದೇವಲ್ಲ ಎಂದು ಆ ಮನೆಯವರು ಆಶ್ಚರ್ಯದಿಂದ ಕೇಳಿದರು. 

ಹೀಗೆ ನಮ್ಮೊಳಗೇ ಐವರು ಸಂಬಂಧಿಕರಿದ್ದಾರೆ. ಇವೇ ನಮ್ಮ ಪಂಚೇಂದ್ರಿಯಗಳು. ಎಷ್ಟೋ ಬಾರಿ ಅವರು ತೋರಿಸುವ ಆಮಿಷಗಳು ನಮ್ಮನ್ನು ನಮ್ಮ ಜೀವನದ ಪರಮ ಗುರಿಯಿಂದ ದೂರ ಮಾಡಿಬಿಡುತ್ತದೆ.  ಜೀವನದ ತುತ್ತ ತುದಿಯಲ್ಲಿ ಬೆಳಗುತ್ತಿರುವ ಜ್ಯೋತಿಯೊಡನೆ ಒಂದಾಗುವುದೇ ಜೀವನದ ಪರಮ ಲಕ್ಷ್ಯ ಎಂದು ಸನಾತನಾರ್ಯ ಭಾರತದ ಮಹರ್ಷಿಗಳು ಸಾರಿ ಹೇಳಿದ್ದಾರೆ.ಹೇಗೆ ೧೮ ವರ್ಷವಾದ ತಕ್ಷಣ ನಮಗೆ ಮತ ಹಾಕಲು ಹಕ್ಕು ಬರುತ್ತದೆಯೋ, ಅದೇ ರೀತಿ ಮಾನವ ಜನ್ಮ ಬಂದ ಕೂಡಲೇ ಆ ಬ್ರಹ್ಮಾನಂದದ ಸ್ಥಿತಿಯನ್ನು  ಹೊಂದಲು ಹಕ್ಕು ಬಂದಂತೆ ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. 

ಭಗವಂತನ ಅನುಗ್ರಹದಿಂದ ಮಾನವ ಜನ್ಮ ಬಂದಾಗಿದೆ. ಇನ್ನು ಪರಮಲಕ್ಷ್ಯದ ಕಡೆಗೆ ಹೆಜ್ಜೆ ಇಡುವುದಷ್ಟೇ ಬಾಕಿ ಇದೆ. ಆದ್ದರಿಂದ ಇಂದ್ರಿಯಗಳ ಗುಲಾಮರಾಗಿ ಅವುಗಳು ತೋರುವ ಆಮಿಷಗಳಿಂದ ದಾರಿ ತಪ್ಪದೆ, ಅವನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು ಪರಮಗುರಿಯನ್ನು ಇದೇ ಜನ್ಮದಲ್ಲಿ ಪಡೆಯಲು ಆಶಿಸೋಣ.

ಸೂಚನೆ: 4/08/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Thursday, May 6, 2021

ಭಕ್ತಿರಸವೆಂಬ ತೈಲ (Bhaktirasavemba Taila)

ಲೇಖಕರು: ಶ್ರೀರಾಘವೇಂದ್ರ ಉರಳ್  ಕೆ ಆರ್ 
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮಲ್ಲಿ ಕೆಲವರು-"ದೇವರೆಲ್ಲಿದ್ದಾನೆ ಸ್ವಾಮಿ, ಎಲ್ಲ ನಮ್ಮ ಸಮಾಧಾನಕ್ಕೆ ನಾವೇ ಸೃಷ್ಟಿಸಿರುವ ಕಲ್ಪನಾ ವಿಲಾಸ ಅಷ್ಟೇ. ಸುಮ್ಮನೆ ದೇವರು- ದಿಂಡರು ಎಂದು ಜೀವನಹಾಳು ಮಾಡಿಕೊಳ್ಳಬೇಡಿ, ಮಾಡಲೇಬೇಕಿಂದಿದ್ದರೆ, ಕೆಲಸದಿಂದ ನಿವೃತ್ತಿ ಹೊಂದಿದ ನಂತರ  ಇಟ್ಟುಕೊಳ್ಳಿ. ಈಗ ದುಡಿದು ಸೆಟ್ಲ್ ಆಗೋದು ನೋಡಿ" ಎನ್ನುತ್ತಾರೆ. ಇನ್ನು ಕೆಲವರು " ನಾನು ಇಡೀ ಜೀವನ ದೇವರು ದಿಂಡರು ಎಂದು ಕಳೆದೆ. ನನಗೆ ದೇವರೆಂದೂ ಕಾಣಲಿಲ್ಲ. ಎಲ್ಲ ಸುಮ್ಮನೆ ಹೇಳುತ್ತಾರೆ . ನನ್ನಂತೆ ನೀವು ಜೀವನ ವ್ಯರ್ಥ ಮಾಡಿಕೊಳ್ಳ ಬೇಡಿ" ಎನ್ನುತ್ತಾರೆ. ಈ ದೃಷ್ಟಿಕೋಣಗಳು ಎಷ್ಟು ಸರಿ ಎಂದು ಪರಮಪೂಜ್ಯರಾದ ಶ್ರೀರಂಗ ಮಹಾಗುರುಗಳು  ಹೇಳಿದ ಒಂದು ಕಥೆಯಿಂದ ತಿಳಿಯುವ ಪ್ರಯತ್ನ  ಮಾಡೋಣ. 
 
ನೂರಾರು ವರ್ಷಗಳಿಂದ ಮುಚ್ಚಿದ ಒಂದು ಕಬ್ಬಿಣದ ದ್ವಾರವಿದೆ. ಕಬ್ಬಿಣದ್ದಾದ್ದರಿಂದ ಬಹಳವಾಗಿ ತುಕ್ಕು ಹಿಡಿದು ಬಾಗಿಲು ತೆಗೆಯಲಾಗದಂತೆ  ಆಗಿದೆ. ಆ ದ್ವಾರದ  ಹಿಂದೆ ಅಪಾರವಾದ ನಿಧಿ  ಇದೆ ಎಂದು ಯಾರೋ ಹೇಳಿದ್ದರು. ಆದ್ದರಿಂದ ಅದನ್ನು ತೆಗೆದು ಒಮ್ಮೆ ನೋಡುವ  ಹಂಬಲ ನಮಗೆ. ಆಗ ಯಾರೋ ತಿಳಿದವರು, "ಎಣ್ಣೆ ಹಚ್ಚಿದರೆ ತುಕ್ಕು ತೆಗೆಯಬಹುದು" ಎನ್ನುತ್ತಾರೆ. ನಮಗೆ ಅನುಮಾನವಾದರೂ ನಾವು ಒಂದು ಉದ್ಧರಣೆ  ಎಣ್ಣೆಯನ್ನು ಆ ಬಾಗಿಲಿನ ತುಕ್ಕಿಗೆ ಹಚ್ಚಿ ತೆಗೆಯಲು ಪ್ರಯತ್ನಿಸಿದಾಗ ಬಾಗಿಲು ತೆರೆಯಲೇ ಇಲ್ಲ. ಸರಿ. ತೀರ್ಮಾನಕ್ಕೆ ಬರುತ್ತೇವೆ, "ನೋಡಿದ್ರ ಸ್ವಾಮಿ ಎಲ್ಲ ಸುಳ್ಳು.  ಎಣ್ಣೆ ಹಚ್ಚುವುದರಿಂದ ತುಕ್ಕು ತೆಗೆಯಲು ಸಾಧ್ಯವೇ ಇಲ್ಲ" ಎಂದು.
 
ಹೀಗೆ ಎಷ್ಟು  ತುಕ್ಕಿಗೆ ಎಷ್ಟು ಎಣ್ಣೆ ಬೇಕಾಗುತ್ತದೆ ಎಂಬ ಲೆಕ್ಕಾಚಾರ ಗೊತ್ತಿಲ್ಲದಿದ್ದಾಗ ಈ ಬಗೆಯ ಅವಿವೇಕ ಹುಟ್ಟಿಕೊಳ್ಳುತ್ತದೆ. ಹೀಗೇ ಅನೇಕ ವರ್ಷಗಳವರೆಗೆ ನಾವು ನಮ್ಮ ಅಂತರಂಗದ ದ್ವಾರವನ್ನು ತೆರೆಯದೇ ಇದ್ದುದರಿಂದ ರಜೋಗುಣ ಮತ್ತು ತಮೋ ಗುಣಗಳೆಂಬ ತುಕ್ಕು ಹಿಡಿದುಬಿಟ್ಟಿದೆ . ಅದನ್ನು ತೆಗೆಯಲು ಭಕ್ತಿರಸವೆಂಬ  ತೈಲಧಾರೆಯನ್ನು ಹರಿಸಬೇಕಾಗಿದೆ. ಎಷ್ಟು ಹಳೆಯ ತುಕ್ಕು ಎನ್ನುವುದರ ಮೇಲೆ ಎಷ್ಟು ತೈಲ ಬೇಕು ಎಂಬ ನಿರ್ಧಾರ ಅಷ್ಟೇ !
 
ಒಂದು ಉದ್ಧರಣೆಯಷ್ಟು ಭಕ್ತಿಯಿಂದ ಜನ್ಮಜನ್ಮಾಂತರದ ತುಕ್ಕನ್ನು ತೆರೆಯಲು  ಸಾಧ್ಯವಿಲ್ಲ. ಆದ್ದರಿಂದ ನಿತ್ಯವೂ ಭಕ್ತಿರಸಧಾರೆಯಿಂದ ಅವನ ದಿವ್ಯಪಾದಗಳನ್ನು ತೋಯಿಸಿದರೆ ತುಕ್ಕು  ಕಳೆದು,  ಅಂತರಂಗದ ದ್ವಾರ ತೆರೆದು ಅವ್ಯಾಜ ಕರುಣಾ ಮೂರ್ತಿಯ ದರ್ಶನ ಆಗದೇ ಇರದು ಎಂಬುದು  ಅನುಭವಿಗಳಾದ ಮಹರ್ಷಿಗಳ ಘೋಷಣೆ.

"ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ " ಎಂದು ದಾಸರು ಕೇಳುತ್ತಾರೆ. ಉದ್ಯೋಗದಿಂದ ನಿವೃತ್ತಿ ಹೊಂದಿದ ನಂತರ ಹೇಳಿ ಎಂದಿಲ್ಲ ಅವರು.
 
ಹಾಗೆಂದೇ ಶರೀರದಲ್ಲಿ ಬಲ ಇರುವಾಗಲೇ ನಿರಂತರ ಅವನಲ್ಲಿ ಭಕ್ತಿರಸತೈಲಧಾರೆಯನ್ನು ಹರಿಸೋಣ. ಅಂತರಂಗದ ದ್ವಾರವು ತೆರೆಯುವಂತೆ ಮಾಡಿಕೊಳ್ಳೋಣ. ಇದೇ ಜನ್ಮದಲ್ಲಿ ಅವನ ಸಾನ್ನಿಧ್ಯದ ಆನಂದವನ್ನು ಅನುಭವಿಸುವ ಪ್ರಯತ್ನ ಮಾಡೋಣ.

ಸೂಚನೆ: 6/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.