Showing posts with label paper_vishvavaani. Show all posts
Showing posts with label paper_vishvavaani. Show all posts

Sunday, November 24, 2024

ಸಮಚಿತ್ತದಿಂದ ಇರುವುದೆಂತು? (Samacittadinda iruvudentu ?)


ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಮಾನವಸಹಜವಾದ ಭಾವನೆಗಳಲ್ಲಿ ಸಕಾರಾತ್ಮವೂ ನಕಾರಾತ್ಮಕವೂ ಆದದ್ದು ಇರುವುವಷ್ಟೆ. ಕೋಪ, ತಾತ್ಸಾರ, ಅಸೂಯೆ ಇತ್ಯಾದಿಗಳು ನಕಾರಾತ್ಮಕವಾದವುಗಳು ಹಾಗೂ ಅವು ಬಂದು ಹೋಗುವುದು ಸಹಜವೇ ಆದರೂ ಮನಸ್ಸಿನಲ್ಲಿ ಅವೇ ಆಡುತ್ತಿದ್ದರೆ, ಒಳಗಿನಿಂದ ಸುಟ್ಟುಹಾಕುವ ಬೆಂಕಿಯಿದ್ದಂತೆ. ಆರ್ಷಸಾಹಿತ್ಯದಿಂದ ಪ್ರಾರಂಭಿಸಿ ಹಲವಾರು ಕಾವ್ಯಗಳಲ್ಲಿ ಈ ಭಾವಗಳನ್ನು ಚಿತ್ರಿಸಿರುವುದುಂಟು. ಭಾರತೀಯ ಕಾವ್ಯಪರಂಪರೆಯು "ಕಾಂತಾಸಂಮಿತೆ". ಹಾಗೆಂದರೆ, ಪ್ರಿಯೆಯು ಒಳ್ಳೆಯ ಮಾತುಗಳಿಂದ ಮೆಲ್ಲನೆ ಸರಿಯಾದ ದಾರಿಗೆ ತರುವಂತೆ ಕಾವ್ಯಗಳೂ ತನ್ನ ಓದುಗರನ್ನು "ಈ ರೀತಿ ಮಾಡಬೇಕು, ಈ ರೀತಿ ಬಾರದು" ಇತ್ಯಾದಿಯಾಗಿ ತಿಳಿಹೇಳುವಂತಹವು. ಒಳ್ಳೆಯ ಕಾವ್ಯಗಳಲ್ಲಿ ಚಿತ್ರಿಸಿರುವ ನಕಾರಾತ್ಮಕಭಾವಗಳ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವು ನಮ್ಮಲ್ಲಿ  ಊರದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಇಲ್ಲೊಂದು ಉದಾಹರಣೆ ತೆಗೆದುಕೊಳ್ಳೋಣ.

ರಾಮಾಯಣದ ಕಥೆಯಲ್ಲಿ ಒಂದು ಬಹುಮುಖ್ಯ ತಿರುವೆಂದರೆ ಮಂಥರೆಯ ಪ್ರವೇಶ-ಆಕ್ರೋಶಗಳಿಂದಾಗಿ ಶ್ರೀರಾಮನ ರಾಜ್ಯಾಭಿಷೇಕಗಳು ತಪ್ಪಿ ಅವನು ಸೀತಾ-ಲಕ್ಷ್ಮಣರ ಸಮೇತ ಕಾಡಿಗೆ ಹೋಗುವಂತಾಗುವುದು.

ದಶರಥನು ರಾಮನಿಗೆ ಯೌವರಾಜ್ಯಾಭಿಷೇಕ ಮಾಡುವುದಾಗಿ ನಿಶ್ಚಯವಾಯಿತು. ಮಾರನೆಯ ದಿನವೇ ರಾಜ್ಯಾಭಿಷೇಕವಿದ್ದದ್ದರಿಂದ ಯಾರಾರಿಗೆ ತಿಳಿದಾಗಿತ್ತೋ ಅವರೆಲ್ಲರೂ ಸಡಗರದಿಂದ ತಯಾರಿ ನಡೆಸಿದ್ದರು. ಭರತ-ಶತ್ರುಘ್ನರು ಇದಕ್ಕೆ ಬಹು ಮುಂಚೆಯೇ ಭರತನ ಸೋದರಮಾವನ ಮನೆಗೆ ತೆರಳಾಗಿತ್ತು. ಅಂತಃಪುರದ ಮಹಡಿ ಹತ್ತಿದ್ದ ದಾಸಿ ಮಂಥರೆ ಅಕಸ್ಮಾತ್ತಾಗಿ ಈ ಎಲ್ಲಾ ಸಡಗರದ ತಯಾರಿಗಳನ್ನು ಕಂಡು ಬೇರೊಬ್ಬ ದಾಸಿಯಿಂದ ವಿಷಯವೇನೆಂದು ತಿಳಿದಳು. ಕೈಕೇಯಿಯ ತಾಯಿಯ ಮನೆಯಿಂದಲೂ ಜೊತೆಗಿದ್ದ ಮಂಥರೆಗೆ ಕೌಸಲ್ಯೆಯನ್ನು ಕಂಡರಾಗುತ್ತಿರಲಿಲ್ಲ ಎಂಬುದು ನಮಗೆ ಈ ಸಂದರ್ಭದಲ್ಲೇ ತಿಳಿಯುತ್ತದೆ. ಕೌಸಲ್ಯೆಯನ್ನು ಜಿಪುಣೆಯೆಂದು ಕರೆದು ಅವಳ ಸಂತೋಷಕ್ಕೆ ಕಾರಣವೇನೆಂದು ಕೇಳುತ್ತಾಳೆ. ಕಾರಣ ತಿಳಿದಾಗ ಅವಳ ಅಸೂಯೆ-ಕೋಪಗಳು ಅವಳಲ್ಲಿ ತಾಂಡವವಾಡುತ್ತವೆ.

ಆಗ ಅವಳು ಮಾಡುವ ಮೊದಲ ಕೆಲಸವೇ ಕೈಕೇಯಿಯ ಅಂತಃಪುರಕ್ಕೆ ಹೋಗಿ ಅವಳಿಗೆ ವಿಷಯ ತಿಳಿಸಿ, ಅವಳನ್ನು ಕೆರಳಿಸಲು ತೊಡಗುವುದು. ಅದಕ್ಕಾಗಿ ಮಂಥರೆಯು ದಶರಥನನ್ನು ಬೈದದ್ದಲ್ಲದೆ, ಕೈಕೇಯಿಯನ್ನು ಪದೇ ಪದೇ "ಬಾಲೆ", ಎಂದರೆ ತಿಳಿವಳಿಕೆಯಿಲ್ಲದ ಹುಡುಗಿ, ಎಂದೇ ಸಂಬೋಧಿಸುತ್ತಾಳೆ. ಅವಳು ಅಷ್ಟೆಲ್ಲಾ ಹೇಳಿದರೂ ಕೈಕೇಯಿಗೆ ಸುದ್ದಿ ಕೇಳಿ ಸಂತೋಷವೇ ಆಗುತ್ತದೆ, ಹಾಗೂ ಸಿಹಿಸುದ್ದಿ ಕೊಟ್ಟ ಮಂಥರೆಗೆ ತನ್ನ ಹಾರವನ್ನು ಬಹುಮಾನವಾಗಿ ಕೊಡುತ್ತಾಳೆ. ಆದರೆ, ಮಂಥರೆಯು ವಿಧವಿಧವಾಗಿ, ಮತ್ತು ಹಲವು ಬಾರಿ ದಶರಥನನ್ನು ನಿಂದಿಸಿ, ಕೌಸಲ್ಯೆಯನ್ನು ದೂಷಿಸಿ, ರಾಮನಿಗೆ ಯುವರಾಜಪದವಿ ಸಿಕ್ಕರೆ ಭರತನಿಗೆ ಏನಾಗಬಹುದು ಎಂದೆಲ್ಲಾ ವರ್ಣಿಸಿ ಹೇಳಿ, ಕೊನೆಗೂ ಕೈಕೇಯಿಯ ಮನಸ್ಸನ್ನು ಕೆಡಿಸಿಯೇ ಬಿಡುತ್ತಾಳೆ. ಕುಪಿತಳಾದ ಕೈಕೇಯಿ ಮುಂದೆ ಏನೇನು ಮಾಡುವಳೆಂದು ಎಲ್ಲರಿಗೂ ತಿಳಿದಿರುವುದೇ.

ಮಂಥರೆಯ ಅಸೂಯಾಪರತೆಗೆ ಕಾರಣ ಹೀಗಿರಬಹುದೇನೋ. ತಾನು ಕೈಕೇಯಿಯ ದಾಸಿ. ಭರತನಿಗೆ ರಾಜ್ಯಾಭಿಷೇಕವಾದರೆ, ರಾಜಮಾತೆಯಾದ ಕೈಕೇಯಿಯ ದಾಸಿ ತಾನೆಂದು ಬೇರೆ ದಾಸಿಯರ ಮೇಲೆ ಜೋರುಮಾಡಬಹುದು ಎಂದು ಇದ್ದಿತ್ತೇನೋ. "ತಾನು ದಿವಾನರ ಮನೆ ಜವಾನ" ಎಂದು ಹೇಳಿಕೊಳ್ಳುವ ಪರಿಯಂತೆಯೇ ಇದು. ಕೈಕೇಯಿಯೊಂದಿಗೇ ಅವಳ ತವರುಮನೆಯಿಂದ ಜೊತೆ ಬಂದಿದ್ದವಳಾದರೂ, ಮಂಥರೆಗೆ ಕೈಕೇಯಿಯ ಹಿತ ಬೇಕಾಗಿತ್ತೆಂದು ಅನಿಸುವುದಿಲ್ಲ. ರಾಮನು ಕೈಕೇಯಿಯ ಸವತಿಯ ಮಗನೆಂದೂ ಹಾಗಾಗಿ ಕೈಕೇಯಿಗೆ ಶತ್ರುಸಮಾನನೆಂದೂ ಅವಳು ಕಿವಿಯೂದಿದಳು.  ರಾಮನು ರಾಜನಾದ ನಂತರ ಕೈಕೇಯಿಗೂ ಭರತನಿಗೂ ಉಳಿಗಾಲವಿಲ್ಲವೆಂದೂ ಹೆದರಿಸಿದಳು. ಮೊದಮೊದಲಿಗೆ ಇದನ್ನೇನೂ ಕೈಕೇಯಿಯು ನಂಬಲಿಲ್ಲ. ರಾಮನ ವಿಷಯದಲ್ಲಿ ಆಕೆಗೆ ಅಪಾರವಾದ ಪ್ರೀತಿ-ನಂಬಿಕೆಗಳಿದ್ದವು. ಆದರೂ ಮಂಥರೆಯ ಈ ದುರ್ವಚನಗಳೂ ಕಾಲ್ಪನಿಕವಾದ ಭವಿಷ್ಯದ ಕಷ್ಟಗಳೂ ಪದೇ ಪದೇ ಕಿವಿಗೆ ಬಿದ್ದು ಕೈಕೇಯಿಗೂ ದುಷ್ಟಪ್ರವೃತ್ತಿಯುಂಟಾಯಿತು. ಮಾತು ಬಹಳ ಪ್ರಭಾವಶಾಲಿಯೆನ್ನುವುದಕ್ಕೆ ಇದೇ ನಿದರ್ಶನ - ಒಳ್ಳೆಯ ಮಾತಿನಿಂದ ಹೇಗೆ ಪ್ರಭಾವ ಬೀರಬಹುದೋ, ದುರ್ವಚನದಿಂದ ದುರಾಲೋಚನೆ ಅಂಕುರಿಸುವಂತೆಯೂ ಮಾಡಬಹುದು.

ಕೈಕೇಯಿಗೆ ಸ್ವಲ್ಪವಾದರೂ ವಿವೇಕ ಕೆಲಸಮಾಡಿದ್ದರೆ, ರಾಮನ ಗುಣಸಂಪನ್ನತೆಯ ಬಗ್ಗೆಯಾಗಲೀ, ರಾಮ-ಭರತರ ಮಧ್ಯೆಯಿರುವ ಪ್ರೀತಿ-ನಿಷ್ಠೆಗಳ ಬಗ್ಗೆಯಾಗಲೀ ಸಂದೇಹ ತಲೆಯೆತ್ತುತ್ತಲೇ ಇರಲಿಲ್ಲ. ರಾಮ ಹಿರಿಯ ಮಗ, ಸದ್ಗುಣಸಂಪನ್ನ, ಪ್ರಜೆಗಳಿಗೆಲ್ಲ ಪ್ರೀತಿಪಾತ್ರನಾಗಿದ್ದವನು. ಇದರಲ್ಲಿ ಯಾವುದೇ ಒಂದು ವಾಸ್ತವವಾಗಿಲ್ಲದಿದ್ದರೂ, ಭರತನಿಗಾಗಿ ಕೈಕೇಯಿ ಮಾಡಿದ ಸಿಂಹಾಸನದ ವರಾತ ಸಮ್ಮತವಾಗಬಹುದಿತ್ತು. ಮಂಥರೆ ಅವಳಿಗೆ ಹತ್ತಿರದವಳಾಗಿದ್ದರಿಂದ, ಮಂಥರೆಯ ಬಾಯಿಂದ ಬಂದ ದುಷ್ಟವಚನಗಳನ್ನೂ ಅವಳು ಅಲಕ್ಷಿಸುತ್ತಲೇ ಬಂದಿದ್ದಳು. ಅಂತಹ ಮಾತುಗಳಿಗೆ ಖಂಡನೆ-ದಂಡನೆಯೇನೂ ಆಗಲಿಲ್ಲ. ಆದ್ದರಿಂದ ಪುನಃಪುನಃ ಆ ಮಾತುಗಳನ್ನವಳು ಕೇಳುವಂತಾಯಿತು. ಅವೇ ಕೆಟ್ಟಯೋಚನೆ-ಯೋಜನೆಗಳಿಗೆ ಕಾರಣೀಭೂತವಾದವು. ಮಂಥರೆಯು ತನಗೂ ತನ್ನ ಮಗನಿಗೂ ಹಿತವಾದದ್ದನ್ನು ಹೇಳುತ್ತಿದ್ದಾಳೋ, ಅಥವಾ ಅವಳದೇ ಹೆಚ್ಚುಗಾರಿಕೆಗಾಗಿ ಅಸೂಯೆಯಿಂದ ಹೇಳುತ್ತಿದ್ದಾಳೋ ಕೈಕೇಯಿಯು ವಿವೇಚಿಸಲಿಲ್ಲ.

ಅಸೂಯೆಯ ವಿಷಯದಲ್ಲಿ ಶ್ರೀರಂಗಮಹಾಗುರುಗಳು ಹೇಳಿರುವ ಮಾತುಗಳು ಈ ಸಂದರ್ಭದಲ್ಲಿ ಬಹಳ ಸಮಂಜಸ. "ಲಕ್ಷಣವನ್ನು ಸರಿಯಾಗಿ ಅರಿತಾಗ ನಾವು ಅವಲಕ್ಷಣವಾಗಿದ್ದರೂ ದುಃಖಪಡಬೇಕಾಗಿಲ್ಲ. ಲಕ್ಷಣಜ್ಞನು ದುಃಖಪಡುವುದೂ ಇಲ್ಲ. ಲಕ್ಷಣವಾಗಿರುವ ಪದಾರ್ಥವನ್ನು ನೋಡಿ ಆನಂದಿಸಬಹುದು. ಹೀಗೆ ಸಮಚಿತ್ತತೆಗೆ ಲಕ್ಷಣಜ್ಞತೆ ಒಂದು ಹಾದಿ." ಎಂದು ಹೇಳಿರುವರು.

ಕೈಕೇಯಿಯು ಶ್ರೀರಾಮನ ರಾಜ್ಯಾಭಿಷೇಕದ ಬಗ್ಗೆ ಹಲುಬದೇ, ಅವನ ಯೋಗ್ಯತೆಯ ಬಗ್ಗೆ ಒಂದು ವಿವೇಚನೆ ಮಾಡಿದ್ದರೆ, ಮಂಥರೆಯ ಮಾತಿನಿಂದ ಪ್ರಭಾವಿತಳೂ ಆಗುತ್ತಿರಲಿಲ್ಲ, ತನಗೂ ತನ್ನ ಸಪತ್ನಿಯರಿಗೂ ಮಕ್ಕಳಿಗೂ ರಾಜ್ಯಕ್ಕೂ ಕಂಟಕಪ್ರಾಯಳಾಗುತ್ತಲೂ ಇರಲಿಲ್ಲ. ತನಗೆ ಸಿಕ್ಕದೇಹೋದದ್ದು ಮತ್ತೊಬ್ಬಳಿಗೆ, ಎಂದರೆ ಕೌಸಲ್ಯೆಗೆ, ದೊರೆತಿದೆ ಎಂದಾಗ, ತನಗೆ ವಿಧಿಯಿತ್ತದ್ದು ಇಷ್ಟು, ಕೌಸಲ್ಯೆಯ ಅದೃಷ್ಟದಲ್ಲೇ ತಾನು ಸಂತಸವನ್ನು ಕಂಡುಕೊಳ್ಳುತ್ತೇನೆ ಎಂದು ಅವಳು ತಿಳಿಯಬಹುದಿತ್ತು. ಅವಳು ಸಮಚಿತ್ತಳಾಗಿದ್ದು ಸರಿಯಾಗಿ ವರ್ತಿಸಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೆಂಬುದಿದ್ದರೂ, ನಮಗೆ ಇಲ್ಲಿರುವ ಪಾಠವನ್ನು ನಾವು ಸರಿಯಾಗಿ ಗುರುತಿಸಬೇಕು.

ಹಾಗಾದರೆ, ನಾವು ಹೇಗಿರಬೇಕು? ಅದಕ್ಕೆ ರಾಮಾಯಣದ ಮತ್ತೊಂದು ಪ್ರಸಂಗ ನೋಡೋಣ. ಪುಟ್ಟ ಬಾಲಕರಾದ ಲವಕುಶರು ಆದಿಕಾವ್ಯದ ಗಾನವನ್ನು ಮಾಡಿದಾಗ, "ಸಾಧು! ಸಾಧು!" ಎಂದು ಅವರನ್ನು ಹೊಗಳಿದವರು ಇಂದ್ರಿಯಜಯಿಗಳಾದ ಋಷಿಗಳು. ಸಾಧಾರಣ ಸಂಗೀತಗಾರರೇನಾದರೂ ಆ ಗಾನವನ್ನು ಕೇಳಿದ್ದರೆ, ಶ್ರೀರಂಗಮಹಾಗುರುಗಳು ಹೇಳಿದಂತೆ, "ಹೇಗಿತ್ತು? ಎಂದರೆ ಅಸೂಯೆಯಿಂದ, 'ಇತ್ತು' ಎನ್ನುತ್ತಾರೆ. ಆದರೆ ಋಷಿಗಳು ಹಾಗಲ್ಲ, ಮುಕ್ತಕಂಠದಿಂದ ಹೊಗಳುತ್ತಾರೆ." ಒಂದು ಪದಾರ್ಥ ಅಥವಾ ವ್ಯಕ್ತಿ ಅಥವಾ ಸಂನಿವೇಶದ ಗುಣವನ್ನು ಗುರುತಿಸಿ ಅದು ನಮ್ಮಲ್ಲಿಲ್ಲದಿದ್ದರೂ ಬೇರೊಂದೆಡೆ ಇದೆಯಲ್ಲಾ ಎಂದು ಸಂತೋಷಪಡುವಂತಹವರು ನಾವಾಗಬೇಕು, ಅಲ್ಲವೇ?

ಸೂಚನೆ: 2೨ /೧ ೧ /2024 ರಂದು ಈ ಲೇಖನ ವಿಶ್ವವಾಣಿ ಯಲ್ಲಿ ಪ್ರಕಟವಾಗಿದೆ.

Thursday, February 16, 2023

ಅರಿತರೆ ವಿದುರ ನೀತಿಯ ಸಾರ - ಸಾಗಬಹುದು ಶೋಕದಿಂದ ದೂರ. (Aritare Vidura Nitiya Sara - Sagabahudu Sokadinda Dura.)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮನುಷ್ಯನಲ್ಲಿರುವ ಅಜ್ಞಾನ ಹಾಗೂ ಮೂಢತನವೇ ಅವರುಗಳನ್ನು ಶೋಕಸಾಗರದಲ್ಲಿ ಮುಳುಗಿಸುವಂತಹ ಪ್ರಮುಖ ಸಾಧನಗಳು. ಅದರ ನಿವಾರಣೆಗೆ ಸದ್ವಿಚಾರಗಳ ಶ್ರವಣ ಹಾಗೂ ಅದರ ಪರಿಪಾಲನೆಯೇ ಉಪಾಯ. ಏಕೆಂದರೆ ಜೀವನದ ವ್ಯಾಪ್ತಿ ಎನ್ನುವುದು ಸಾಮಾನ್ಯರ ದೃಷ್ಟಿಗೆ ಗೋಚರವಾಗುವಷ್ಟು ಮಾತ್ರ ಸೀಮಿತವಾಗಿಲ್ಲ. ಸ್ಥೂಲ,ಸೂಕ್ಷ್ಮ ಮತ್ತು ಪರಾ ಎಂಬ ಮೂರೂ ದೃಷ್ಟಿಯನ್ನು ಹೊಂದಿದ ಜ್ಞಾನಿಗಳ ವಾಣಿಗೆ ಶೋಕ ಮೋಹಗಳನ್ನು ದೂರ ಮಾಡುವ ಶಕ್ತಿ ಇರುತ್ತದೆ. ಅರ್ಜುನನೂ ಒಂದು ರೀತಿಯ ಅಜ್ಞಾನಕ್ಕೊಳಗಾಗಿ ಯುದ್ಧಮಾಡಲು ಹಿಂಜರಿದಾಗ ಭಗವದ್ವಾಣಿಯು ಅವನನ್ನು ಎಬ್ಬಿಸಿ, ಶೋಕ ಮೋಹಗಳಿಂದ ದೂರ ಮಾಡಿ ಕಾರ್ಯ ಪ್ರವೃತ್ತನನ್ನಾಗಿ ಮಾಡಿತು.


ಮಹಾಮೇಧಾವಿಯಾದಂತಹ ವಿದುರನು, ಶೋಕ ಮೋಹಗಳಿಂದ ಆವೃತನಾಗಿ, ನಿದ್ರಾಹೀನನಾಗಿ, ದುಃಖಿಸುತ್ತಿರುವ ಧೃತರಾಷ್ಟ್ರನ  ಕ್ಷೇಮಕ್ಕಾಗಿ ಅನೇಕ ಹಿತನುಡಿಗಳನ್ನು ಹೇಳುತ್ತಾನೆ. ಅವುಗಳು ಇಂದಿಗೂ ನಿತ್ಯ ನೂತನವಾಗಿದ್ದು ಲೋಕದಲ್ಲಿರುವ ಅಜ್ಞಾನವನ್ನು ದೂರ ಮಾಡಲು ಸಹಾಯಕವಾಗಿವೆ.

ಮನುಷ್ಯನು ನಿತ್ಯವೂ ಕೃತಜ್ಞತೆಯಿಂದ ಭಾವಿಸಿ ಪೂಜಿಸಬೇಕಾದವರ ಬಗ್ಗೆ ವಿದುರನು ಹೀಗೆ ವಿವರಿಸುತ್ತಾನೆ.


ಪಂಚಾಗ್ನಯೋ ಮನುಷ್ಯೇಣ ಪರಿಚರ್ಯಾ: ಪ್ರಯತ್ನತ: l

ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ಭರತರ್ಷಭ ll

ಐದು ಅಗ್ನಿಗಳನ್ನು ಮಾನವನು ಪ್ರಯತ್ನಪೂರ್ವಕವಾಗಿ ಪೂಜಿಸಬೇಕು. ಅವರೆಂದರೆ - ತಂದೆ, ತಾಯಿ, ಯಜ್ಞೇಶ್ವರ ಆತ್ಮ ಮತ್ತು ಗುರು.


ನಮ್ಮ ಸಂಸ್ಕೃತಿಯಲ್ಲಿ ತಂದೆ, ತಾಯಿ ಹಾಗೂ ಗುರುವಿಗೆ ಅತ್ಯಂತ ಮಹತ್ವಪೂರ್ಣವಾದ ಸ್ಥಾನವಿದೆ. ತಂದೆ, ತಾಯಿಗಳು ನಮಗೆ ಅತ್ಯಮೂಲ್ಯವಾದ ಶರೀರವನ್ನು ಕೊಟ್ಟು ಅದರ ಪಾಲನೆ ಪೋಷಣೆ ಮಾಡಿರುತ್ತಾರೆ. ನಾವು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಸಾಧನೆ ಮಾಡುವುದಕ್ಕೆ ಈ ಮಾನವ ಶರೀರವೇ ಅತ್ಯವಶ್ಯಕವಾದ ಸಾಧನವಾಗಿದೆ. ಅಂತಹ ಶರೀರವನ್ನು ದಯಪಾಲಿಸಿ ಅದನ್ನು ಸರ್ವ ರೀತಿಯಿಂದಲೂ ಪೋಷಿಸಿದ ತಂದೆ ತಾಯಿಗಳನ್ನು ಪೂಜ್ಯ ಭಾವನೆಯಿಂದ ನೋಡುವುದು,ಅವರ ಸೇವೆಯನ್ನು ಮಾಡುವುದು ಮಕ್ಕಳ ಆದ್ಯ ಕರ್ತವ್ಯ. ಲೋಕಕ್ಕೆಲ್ಲಾ ತಂದೆ ತಾಯಿಗಳಾದಂತಹ ಭಗವಂತ ಭಗವತಿಯರ ಒಂದು ಶಕ್ತಿ ಅವರಲ್ಲಿಯೂ ಬಂದಿರುವುದರಿಂದ ಅವರು ಸರ್ವದಾ ಪೂಜನೀಯರು.

 ಇನ್ನು ಗುರುವಿನ ಮಹಿಮೆಯು ಹೇಳತೀರದು. ನಮ್ಮ ಶಾಸ್ತ್ರಗ್ರಂಥಗಳೆಲ್ಲವೂ ಬಹುವಿಧವಾಗಿ ಗುರುವಿನ ಮಹಿಮೆಯನ್ನು ಕೊಂಡಾಡಿವೆ. ಗುರುವು ಸೃಷ್ಟಿರಹಸ್ಯವನ್ನು ಬಲ್ಲವನಾದ್ದರಿಂದ ಅವನನ್ನು ಬ್ರಹ್ಮನೆಂದೂ, ಅದರ ರಕ್ಷಣೆಯ ಮರ್ಮವನ್ನು ಅರಿತವನಾದ್ದರಿಂದ ವಿಷ್ಣುವೆಂದೂ, ಲಯದ ಗುಟ್ಟನ್ನು ತಿಳಿದವನಾದ್ದರಿಂದ ಶಿವನೆಂದೂ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂರನ್ನೂ ಮೀರಿದ ಪರಬ್ರಹ್ಮ ಸ್ವರೂಪವನ್ನೂ ಅವನು ಅರಿತು ಅದರಲ್ಲಿ ಒಂದಾಗಿರುವುದರಿಂದಲೇ  ಅವನು ತನ್ನನ್ನು ಆಶ್ರಯಿಸಿದ ಶಿಷ್ಯನ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಶಿಷ್ಯನ ಹೃದಯದಲ್ಲಿ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಲು ಸಮರ್ಥನಾಗಿರುತ್ತಾನೆ. " ಗುರುವು ಸೃಷ್ಟಿನ್ಯಾಸ, ಸ್ಥಿತಿನ್ಯಾಸ, ಲಯನ್ಯಾಸಗಳ ರಹಸ್ಯವನ್ನರಿತಿರಬೇಕು. ಅದಕ್ಕೇ ಅವನು ಬ್ರಹ್ಮ, ವಿಷ್ಣು,ಮಹೇಶ್ವರ ಇವರಿಗೆಲ್ಲಾ ಮೂಲವಾಗಿರುವ ಸನಾತನಸತ್ಯದಲ್ಲಿ ತನ್ಮಯನಾಗಿರುವುದರಿಂದ ಅವನು ಪರಬ್ರಹ್ಮವೂ ಆಗಿದ್ದಾನೆ." ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಪರಬ್ರಹ್ಮ ಸ್ವರೂಪಿಯಾದ ಸದ್ಗುರುವನ್ನು ಆಶ್ರಯಿಸಿ ನಿತ್ಯವೂ ಆರಾಧಿಸಿದಾಗ ಜೀವನದ ಅಂಧಕಾರ ದೂರವಾಗಲು ಸಾಧ್ಯ.


 ಇನ್ನು ಅಗ್ನಿ, ದೇವತೆಗಳನ್ನು ಯಜ್ಞ ಯಾಗಾದಿಗಳ ಮೂಲಕ ಆರಾಧಿಸುವಾಗ ಅಗ್ನಿಯನ್ನು ವಾಹಕವಾಗಿಟ್ಟುಕೊಂಡು ಹವಿಸ್ಸನ್ನು (ಅಗ್ನಿಗೆ ಸಮರ್ಪಿಸುವ ಪದಾರ್ಥ) ಸಮರ್ಪಿಸಿದಾಗ ಆಯಾಯ ದೇವತೆಗಳಿಗೆ ಅದನ್ನು ಅಗ್ನಿಯು ತಲುಪಿಸುವುದರಿಂದ ಅಗ್ನಿಗೆ ಹವ್ಯವಾಹನವೆಂಬ ಹೆಸರು. ಇದು ಅಗ್ನಿಯ ಹೊರರೂಪವಾದರೆ, ಒಳ ಭೂಮಿಕೆಗೆ ಸೇರಿದ ಅಗ್ನಿ ಒಂದು ಉಂಟು. ಆ ಅಗ್ನಿಯನ್ನೇ ಜ್ಞಾನಿಗಳು "ಅಗ್ರo ನಯತಿ ಇತಿ ಅಗ್ನಿ:" ಅಗ್ರವಾದ ಜ್ಞಾನದ ಸ್ಥಾನಕ್ಕೆ ಯಾವುದು ಕರೆದುಕೊಂಡು ಹೋಗುತ್ತದೆಯೋ ಅಂತಹ ಚಿದಾನಂದ ಜ್ಯೋತಿಗೆ ಅಗ್ನಿ ಎನ್ನುವ ಹೆಸರುಂಟು. ಹೊರಗಡೆಯ ಅಗ್ನಿ  ನಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನೆಂಬ ಅಗ್ನಿಯ ಪ್ರತೀಕವಾಗಿದೆ. ಹಾಗಾಗಿ ಅಂತಹ ಯಜ್ಞೇಶ್ವರನು ಸದಾ ಪೂಜನೀಯ. ಅಂತೆಯೇ ನಮ್ಮ ಇರುವಿಕೆಗೆ ಮೂಲ ಕಾರಣನಾಗಿರುವ ಪರಮಾತ್ಮನೆಂಬ ಅಗ್ನಿಯನ್ನು ನಿತ್ಯವೂ ಉಪಾಸನೆ ಮಾಡಿದಾಗ ಅಂಧಕಾರದ ನಿವೃತ್ತಿ, ಶೋಕಸಾಗರದಿಂದ ಬಿಡುಗಡೆ.

ಯದಿ ಸಂತಂ ಸೇವತಿ ಯಾದ್ಯಸಂತಂ ತಪಸ್ವಿನಂ ಯದಿ ವಾ ಸ್ತೇನಮೇವ l

ವಾಸೋ ಯಥಾ ರಂಗವಶಂ ಪ್ರಯಾತಿ ತಥಾ ಸ ತೇಷಾo ವಶಮಭ್ಯುಪೈತಿ ll


ದಾರಕ್ಕೆ ಯಾವ ಬಣ್ಣ ಹಾಕಲಾಗುವುದೋ, ಬಟ್ಟೆಯೂ ಅದೇ ಬಣ್ಣದ್ದಾಗಿರುತ್ತದೆ. ಅದರಂತೆಯೇ ಸತ್ಪುರುಷ, ದುರ್ಜನ, ತಪಸ್ವಿ, ಕಳ್ಳ - ಇವರಲ್ಲಿ ಯಾರನ್ನು ಯಾರು ಸೇವಿಸುತ್ತಾರೋ ಅವರು ಅವರಂತೆಯೇ ಆಗುತ್ತಾರೆ- ಅಂದರೆ ಅವರ ಪ್ರಭಾವಕ್ಕೆ ಒಳಗಾಗುತ್ತಾರೆ.

ಇಲ್ಲಿ ನಾವು ಎಂತಹವರ ಸಹವಾಸ ಹಾಗೂ ಸೇವೆಗಳನ್ನು ಮಾಡಿದಾಗ ನಮ್ಮ ಜೀವನ ಯಾವ ರೀತಿಯಾಗಿ ರೂಪಿತವಾಗುತ್ತದೆ ಎಂಬುದನ್ನು ವಿದುರನು ಉದಾಹರಣೆಯ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾನೆ.


 ನಾವು ನಿರಂತರವಾಗಿ ಯಾರ ಸಾನ್ನಿಧ್ಯದಲ್ಲಿರುತ್ತೇವೆಯೋ ಅವರಲ್ಲಿರುವ ಗುಣ ದೋಷಗಳು ನಮ್ಮಲ್ಲಿಯೂ ಊರ್ಜಿತವಾಗುತ್ತವೆ.  ಹಾಗಾಗಿ ಸದ್ಗುಣ ಸಂಪನ್ನರ ಸಹವಾಸ ಹಾಗೂ ಸೇವೆ ಕಲ್ಯಾಣಪ್ರದ. ಸೇವೆ ಎಂದರೆ ಅವರ ಕೆಲಸಗಳನ್ನು ಮಾಡುವುದು ಎಂದು ಮಾತ್ರವಲ್ಲ;  ಅವರಲ್ಲಿರುವ ಗುಣಗಳನ್ನು ನಮ್ಮೊಳಗೆ ತೆಗೆದುಕೊಳ್ಳುವುದು ಎಂದರ್ಥ.

ದುರ್ಯೋಧನನು ಬಾಲ್ಯದಿಂದಲೂ ನಿರಂತರವಾಗಿ ದುರ್ಗುಣ, ದುರಾಚಾರಗಳಿಂದ ಯುಕ್ತನಾದಂತಹ ಶಕುನಿಯ ಸಾನ್ನಿಧ್ಯದಲ್ಲಿ ಬೆಳೆದ ಕಾರಣ ಅವನಲ್ಲಿಯೂ ದುರ್ಗುಣಗಳು ಗಟ್ಟಿಯಾಗಿ ಬೇರೂರಲ್ಪಟ್ಟವು. ಪಾಂಡವರ ಮೇಲಿನ ಅವನ ದುರಾಚಾರಕ್ಕೆ ಶಕುನಿಯ ಪ್ರಚೋದನೆಯೇ ಪ್ರಧಾನವಾಗಿ ಕಾರಣವಾಯಿತು. ಪಾಂಡವರು ವನವಾಸದ ಸಂದರ್ಭದಲ್ಲಿಯೂ ಸತ್ಪುರುಷರ ಸಂಗ ಹಾಗೂ ಸೇವೆಯಲ್ಲಿ ನಿರತರಾದ್ದರಿಂದ ಅವರ ಮನಸ್ಸಿನಲ್ಲಿ ಶಾಂತಿ ನೆಲೆಯೂರಿತ್ತು. 'ಸಜ್ಜನರ ಸಂಗ ಹೆಜ್ಜೇನು ಸವಿದಂತೆ' ಎಂಬಂತೆ ಮನೋ ಬುದ್ಧಿಗಳಿಗೆ ಅಮೃತಧಾರೆಯನ್ನು ಸುರಿಸುವ ಶಕ್ತಿ ಇರುವಂತಹ ಸಜ್ಜನರ ಸಾಂಗತ್ಯವನ್ನೇ ಬಯಸಿದಾಗ  ಶಾಂತಿ ಹಾಗೂ ನೆಮ್ಮದಿಗಳಿಂದ ಕೂಡಿದ ಬಾಳಾಟವನ್ನು ನಡೆಸಬಹುದು ಎಂಬುದು ವಿದುರನ ಈ ಮಾತಿನ ಸಾರವಾಗಿದೆ.

ಸೂಚನೆ:  16/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.


Thursday, February 9, 2023

ಒತ್ತಡವಿಲ್ಲದೇ ಚೆನ್ನಾಗಿ ಕೆಲಸ ಮಾಡುವುದು ಹೇಗೆ? (Ottadavillade Cennagi Kelasa Maduvudu Hege?)

ಲೇಖಕರು: ಶ್ರೀ ಜಿ ನಾಗರಾಜ 
(ಪ್ರತಿಕ್ರಿಯಿಸಿರಿ lekhana@ayvm.in)

ಆಧುನಿಕ ಜೀವನದಲ್ಲಿ stress ಅಥವಾ ಮಾನಸಿಕ ಒತ್ತಡ ಬಹಳ ಕೇಳಿ ಬರುತ್ತಿರುವ ವಿಷಯ. ಉದ್ಯೋಗ (ಪ್ರೊಫೆಶನ್) ಕ್ಷೇತ್ರವಿರಲಿ, ಸ್ಕೂಲು ಕಾಲೇಜು ಇರಲಿ, ಕೆಲಸದಲ್ಲಿ ತೊಡಗಿಸಿ ಕೊಂಡಾಗ ಒತ್ತಡ ಅನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಎಲ್ಲೆಡೆಯೂ ಕೆಲಸದ ಹೊರೆ ಮತ್ತು ಫಲಿತಾಂಶದ ಜವಾಬ್ದಾರಿ ಒತ್ತಡಕ್ಕೆ ಕಾರಣವಾಗುತ್ತದೆ.  ಒತ್ತಡವನ್ನು ಪರಿಹರಿಸಿಕೊಂಡು ನಾವು  ಕರ್ತವ್ಯ ಪರಾಯಣರಾಗಿಯೂ ಇದ್ದು  ಮನಸ್ಸನ್ನೂ ಹಗುರವಾಗಿಟ್ಟುಕೊಳ್ಳುವುದು ಹೇಗೆ? ಅದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಅಮೂಲ್ಯವಾದ ಚಿಂತನೆಯನ್ನು ಅಳವಡಿಸಿಕೊಂಡರೆ ಸುಲಭವಾಗುತ್ತದೆ. ಆ ಚಿಂತನೆಯೇ ಕರ್ಮ ಯೋಗದ ಚಿಂತನೆ. 


ಕರ್ಮಯೋಗದಲ್ಲಿ ಮೂರು ಭಾಗಗಳು ಇವೆ: ಯಾವುವೆಂದರೆ ಕರ್ತೃತ್ವ ತ್ಯಾಗ, ಮಮತ್ವ ತ್ಯಾಗ ಹಾಗೂ ಕರ್ಮಫಲ ತ್ಯಾಗ ಎಂಬುದಾಗಿ. ಈ ಮೂರು ತ್ಯಾಗಗಳನ್ನು ಮಾಡಿದಾಗ ಮನಸ್ಸು ನಿರಾಳವಾಗಿರುತ್ತದೆ ಮತ್ತು ಒತ್ತಡ ಇರುವುದಿಲ್ಲ. ಭಗವತ್ಕಾರ್ಯಗಳನ್ನು ಅಂದರೆ ಯಾವ ಕರ್ಮಗಳನ್ನು ಋಷಿಗಳು ಇದು ನಿಮ್ಮ ನಿತ್ಯಕರ್ಮ, ನೈಮಿತ್ತಿಕ ಕರ್ಮ ಎಂಬುದಾಗಿ ವಿಧಿಸಿದ್ದಾರೆಯೋ ಅಂತಹ ಕರ್ಮಗಳನ್ನು ನಾವು ಆಚರಣೆ ಮಾಡಬೇಕಾದರೆ ನಮ್ಮ ಮನಸ್ಸನ್ನು ಯಾವ ರೀತಿ ಇಟ್ಟುಕೊಂಡಿರಬೇಕು ಅನ್ನುವುದರ ಬಗ್ಗೆ ಮಹರ್ಷಿಗಳು ತಿಳಿಸಿಕೊಟ್ಟಿದ್ದಾರೆ. ಆ ರೀತಿ ಮನಸ್ಸನ್ನು ಇಟ್ಟುಕೊಂಡು ಕರ್ಮಗಳನ್ನು ಮಾಡುತ್ತಿದ್ದರೆ ಅದು ನಮ್ಮ ಮನಸ್ಸನ್ನು ನಿರ್ಮಲಗೊಳಿಸಿ, ಯೋಗವಾಗಿ ಪರಿಣಮಿಸುತ್ತದೆ. ಮನಸ್ಸು ಸ್ವಲ್ಪವಾದರೂ ಹಗುರವಾಗುತ್ತದೆ. ಆದುದರಿಂದ ಈ ಮೂರು ತ್ಯಾಗಗಳು ಏನು, ಹೇಗೆ ಎಂದು ನೋಡೋಣ. 

ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕರ್ಮ(ಕೆಲಸ) ಮಾಡಿದರೆ, ಅದನ್ನು ನಾನೇ ಮಾಡಬೇಕು, ನಾನು ಮಾಡಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ, ವಾಸ್ತವದಲ್ಲಿ ನಮಗಿಂತ ದೊಡ್ಡ ಶಕ್ತಿಯೊಂದು ನಮ್ಮ ಕೈಯಲ್ಲಿ ಆ ಕೆಲಸವನ್ನು ಮಾಡಿಸಿಕೊಳ್ಳುತ್ತಿರುತ್ತದೆ. ಇದನ್ನು ಮುಂದೆ ಉದಾಹರಣೆಯೊಂದಿಗೆ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಬಹುದು. ಆದುದರಿಂದ ನಾನು ಮಾಡುತ್ತೇನೆ, ನಾನು ಮಾಡಿದೆ ಎಂದು ಅಂದುಕೊಳ್ಳುವುದಕ್ಕಿಂತ ನಾನು ನಿಮಿತ್ತವಾಗಿದ್ದೆ, ಕರ್ಮವನ್ನು ಭಗವಂತ ನಮ್ಮ ಕೈಯ್ಯಲ್ಲಿ ಮಾಡಿಸಿಕೊಂಡ ಎಂದುಕೊಂಡಾಗ ನಾವು ನಮ್ಮ ಕರ್ತೃತ್ವವನ್ನು ಭಗವದರ್ಪಣೆ ಮಾಡುತ್ತೇವೆ, ಅಥವಾ ಕರ್ತೃತ್ವ ತ್ಯಾಗ ಮಾಡುತ್ತೇವೆ ಮತ್ತು ನಮ್ಮ ಮನಸ್ಸು ನಿರಾಳವಾಗುತ್ತದೆ. ನಾವು ಮಾಡುತ್ತಿರುವ ಕೆಲಸದಲ್ಲಿ ಭಗವಂತ ನಮ್ಮ ಬೆನ್ನ ಹಿಂದಿದ್ದಾನೆ ಎನ್ನುವ ಭರವಸೆಯು ಮಾಡುವ ಕೆಲಸವು ಚೆನ್ನಾಗಿ ಆಗುವಂತೆಯೂ ಮಾಡುತ್ತದೆ. 

ಹಾಗೆಯೇ ಮಮತ್ವ ತ್ಯಾಗ - ಈ ಕರ್ಮ ನನ್ನದು ಎಂದುಕೊಂಡು ಮಾಡುವುದಕ್ಕಿಂತ ಅದು ಭಗವಂತನ ಕರ್ಮ ಅದನ್ನು ನಾನು ನನ್ನದಾಗಿಸಿಕೊಂಡು ಆಚರಣೆ ಮಾಡಿದ್ದೇನೆ ಎಂದು ಭಾವಿಸಿಕೊಂಡು  ಅದು ಭಗವಂತನ ಕರ್ಮ ಎಂದು ಅರ್ಪಣೆ ಮಾಡಿಕೊಂಡು ಮಾಡುವುದು ಎರಡನೆಯ ವಿಧವಾದ ತ್ಯಾಗ. 

ಮೂರನೆಯದು ಕರ್ಮಫಲ ತ್ಯಾಗ - ಒಂದು ಕರ್ಮದ ಫಲವು, ಮಾಡಿದ ಕರ್ಮವನ್ನಲ್ಲದೇ ಇನ್ನೂ ಕೆಲವು ಅಂಶಗಳ ಮೇಲೆ ನಿಂತಿರುತ್ತದೆ. ಆದುದರಿಂದ, ಫಲವನ್ನು ಮನಸ್ಸಿನಲ್ಲಿಟ್ಟುಕೊಂಡು, ಅದರ ಬಗ್ಗೆಯೇ ಚಿಂತಿಸುತ್ತಾ ಇದ್ದರೆ ಒತ್ತಡವು ಉಂಟಾಗುತ್ತದೆ ಮತ್ತು ಕೆಲಸದಲ್ಲಿ ಉತ್ಸಾಹ, ಏಕಾಗ್ರತೆಗಳೂ ಕಡಿಮೆಯಾಗುತ್ತದೆ. ಆದರೆ, ಫಲ ಬರುವುದಕ್ಕೆ ಏನು ಕೆಲಸ ಮಾಡಬೇಕೋ ಆ ಕೆಲಸವನ್ನು ಅಥವಾ ಕರ್ಮವನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಕರ್ಮಾಚರಣೆ ಮಾಡಿದರೆ ಒತ್ತಡವೂ ಇರುವುದಿಲ್ಲ, ಏಕಾಗ್ರತೆಯಿಂದ ಕರ್ಮವೂ ಚೆನ್ನಾಗಿ ಆಗುತ್ತದೆ. ಅಂದರೆ, ಕರ್ಮವನ್ನು ಮಾಡುತ್ತೇನೆ, ಆದರೆ ಕರ್ಮಫಲವನ್ನು ಭಗವಂತನಿಗೆ ಬಿಡುತ್ತೇನೆ ಎಂದುಕೊಳ್ಳುವುದು ಕರ್ಮಫಲ ತ್ಯಾಗ ಆಗುತ್ತದೆ. 


ಈ ಮೂರು ವಿಧವಾದ ತ್ಯಾಗಗಳಿಂದ ನಾವು ನಮ್ಮತನವನ್ನು ಬಿಟ್ಟು ಭಗವಂತನಲ್ಲಿ ಒಂದಾಗಲು ಅನುಕೂಲಕರವಾಗುವುದರಿಂದ ಇದನ್ನು ಕರ್ಮಯೋಗ ಎಂದು ಕರೆಯುತ್ತಾರೆ. ಇದನ್ನು ಎಲ್ಲಾ ಲೌಕಿಕವಾದ ವಿಷಯಗಳಿಗೂ ನಾವು ಅಳವಡಿಸಿಕೊಳ್ಳಬಹುದು. ಹೇಗೆಂದರೆ ಒಂದು ಬ್ಯಾಂಕಿನ ಉದಾಹರಣೆಯನ್ನು ತೆಗೆದುಕೊಳ್ಳೋಣ, ಬ್ಯಾಂಕಿನಲ್ಲಿ ಒಬ್ಬ ಕ್ಯಾಶಿಯರ್ ಹಣದ ಜವಾಬ್ದಾರಿಯನ್ನು ಹೊತ್ತು ಹಣವನ್ನು ಗ್ರಾಹಕರಿಗೆ ಕೊಡುವುದು, ಗ್ರಾಹಕರಿಂದ ತೆಗೆದುಕೊಳ್ಳುವುದು ಮಾಡುತ್ತಿರುತ್ತಾನೆ. 

ಮೊದಲು ಅವನು ಕರ್ತೃತ್ವ ತ್ಯಾಗ ಎಂದರೆ ನಾನು ಅವರಿಗೆಲ್ಲ ದುಡ್ಡು ಕೊಡುತ್ತಿದ್ದೇನೆ ಎಂದು ಅಂದುಕೊಳ್ಳಬಾರದು.  ಬ್ಯಾಂಕ್ ಗ್ರಾಹಕರಿಗೆ ದುಡ್ಡು ಕೊಡುತ್ತಿದೆ, ಗ್ರಾಹಕರಿಂದ ದುಡ್ಡು ತೆಗೆದುಕೊಳ್ಳುತ್ತಿದೆ ಮತ್ತು ನಿಮಿತ್ತ ಮಾತ್ರನಾಗಿ ಬ್ಯಾಂಕ್ ಪರವಾಗಿ ನಾನು ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಅವನಲ್ಲಿ ಇದ್ದಾಗ ಅದು ಕರ್ತೃತ್ವ ತ್ಯಾಗ ಆಗುತ್ತದೆ. ಅವನಿಗೆ ಎಷ್ಟೊಂದು ದುಡ್ಡು ಗ್ರಾಹಕರಿಗೆ ಕೊಟ್ಟೆ ಎಂದು ಮನಸ್ಸು ಕುಗ್ಗುವುದಿಲ್ಲ ಅಥವಾ ಎಷ್ಟೊಂದು ದುಡ್ಡು ಡಿಪಾಸಿಟ್ ಆಗಿ ಬಂದಿತು ಎಂದು ಹಿಗ್ಗುವುದಿಲ್ಲ. ನಿರ್ವಿಕಾರನಾಗಿರುತ್ತಾನೆ.

ನಂತರದ್ದು ಮಮತ್ವ ತ್ಯಾಗ. ಕ್ಯಾಶಿಯರ್ ಲಕ್ಷಾಂತರ ರೂಪಾಯಿಗಳನ್ನು ನಿರ್ವಹಣೆ ಮಾಡುತ್ತಿರುತ್ತಾನೆ, ಜವಾಬ್ದಾರಿಯ ದೃಷ್ಟಿಯಿಂದ ಆ ಹಣ ಬ್ಯಾಂಕ್ ನಲ್ಲಿ ಅವನದೇ. ಅಂದರೆ, ಬ್ಯಾಂಕಿನಲ್ಲಿ ಇನ್ಯಾರೂ ಅದರ ನಿರ್ವಹಣೆ ಮಾಡುವ ಹಾಗಿಲ್ಲ ಅವನೇ ಮಾಡಬೇಕು. ಕರ್ತವ್ಯದಲ್ಲಿದ್ದಾಗ, ಆ ಸಮಯದಲ್ಲಿ ಹಣವನ್ನು ನನ್ನದು ಎಂದುಕೊಂಡಿದ್ದರೂ ಕೆಲಸದ ವೇಳೆ ಮುಗಿದು ಬ್ಯಾಂಕನ್ನು ಬಿಟ್ಟು ಮನೆಗೆ ಹೋಗುವಾಗ ಅದೆಲ್ಲ ಹಣದ ಲೆಖ್ಖ ಚುಕ್ತ ಮಾಡಿ ಲಾಕರ್ ನಲ್ಲಿಟ್ಟು ಅದು ಬ್ಯಾಂಕ್ ನದ್ದು, ನನ್ನದಲ್ಲ ಎಂದು ನಿರಾಳವಾಗುತ್ತಾನೆ. ಅಂದರೆ, ಅದು ಬ್ಯಾಂಕಿನ ದುಡ್ಡು ಎಂದು ಮಮತ್ವ ತ್ಯಾಗ ಮಾಡಿ ಮನೆಗೆ ಹೋಗುತ್ತಾನೆ. ಆ ದುಡ್ಡಿನ ಭದ್ರತೆ ಬಗ್ಗೆ ಕಿಂಚಿತ್ತೂ ಚಿಂತಿಸುವುದಿಲ್ಲ, ಒತ್ತಡಕ್ಕೊಳಗಾಗುವುದಿಲ್ಲ. ಬ್ಯಾಂಕ್ ನ ಮೇಲೆ ಜವಾಬ್ದಾರಿಯನ್ನು ಇಟ್ಟು ತಾನು ನಿಶ್ಚಿಂತನಾಗಿ ಮನೆಯಲ್ಲಿ ನಿದ್ರಿಸುತ್ತಾನೆ. 


ಹಾಗೆಯೇ ಮೂರನೆಯದು ಕರ್ಮಫಲ ತ್ಯಾಗ- ಅವನು ಆ ಬ್ಯಾಂಕಿನ ಕೆಲಸವನ್ನು ನಿರ್ವಹಣೆ ಮಾಡಿರುವುದರಿಂದ ಬ್ಯಾಂಕಿಗೆ ಏನು ಲಾಭ ಬರಬೇಕಾಗಿತ್ತೋ ಅದನ್ನು ಬ್ಯಾಂಕಿಗೇ ಬಿಡುತ್ತಾನೆ.  ಮತ್ತು ಬ್ಯಾಂಕಿನ ಕರ್ತವ್ಯಗಳನ್ನು ನಿರ್ವಹಣೆ ಮಾಡಿದ್ದರಿಂದ ಅವನಿಗೆ ಏನು ಸಂಬಳ ಇತ್ಯಾದಿ ಫಲಗಳು ಬರಬೇಕಾಗಿರುತ್ತದೆ ಅದನ್ನು ಬ್ಯಾಂಕು ಕೊಡುತ್ತದೆ ಎಂದು ಅವನು ನಿರಾಳವಾಗಿ ಇರುತ್ತಾನೆ ಇದು ಕರ್ಮಫಲ ತ್ಯಾಗ. 

ಹೀಗೆ ಮನಸ್ಸನ್ನು ಇಟ್ಟುಕೊಂಡಿದ್ದಾಗ ಎಷ್ಟು ಬೇಕೋ ಅಷ್ಟು ಮನಸ್ಸನ್ನು ಆ ವೃತ್ತಿಯಲ್ಲಿ ಇಟ್ಟುಕೊಂಡಿರುವುದು ಅದರ ನಂತರ ಅದರ ಸೋಂಕಿಲ್ಲದಂತೆಯೇ ಅದನ್ನು ಅಲ್ಲಿಯೇ ಬಿಟ್ಟು ನಿರಾಳವಾಗಿರಬಹುದು. ಈ ಚಿಂತನೆಯನ್ನು ಬೇರೆ ಬೇರೆ ವೃತ್ತಿಗಳು, ಹಾಗೂ ಜೀವನದ ಬೇರೆ ಬೇರೆ ಸಂದರ್ಭಗಳಿಗೂ ಅನ್ವಯಿಸಿಕೊಳ್ಳಬಹುದು. 

ಇಂತಹ  ರೀತಿಯಾಗಿ ಈ ತ್ರಿವಿಧ ತ್ಯಾಗಗಳ ಮೂಲಕ ನಾವು ಕರ್ಮಯೋಗಕ್ಕನುಗುಣವಾದ ಮನಸ್ಸನ್ನು ಬೆಳೆಸಿಕೊಂಡರೆ ಕೆಲಸವೂ ಚೆನ್ನಾಗಿರುತ್ತದೆ, ನಾವೂ ಸಹ ಒತ್ತಡ ರಹಿತವಾಗಿರಬಹುದು.  


ಸೂಚನೆ:  09/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.


Friday, February 3, 2023

ಸದ್ವಿಚಾರಗಳ ಭಂಡಾರ - ವಿದುರ (Sadvicaragala Bhandhra - Vidura)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)





ವಿದುರನಿಂದ ಧರ್ಮಯುಕ್ತವಾದ ಹಾಗೂ ಪರಮ ಶ್ರೇಯಸ್ಕರವಾದ ಮಾತುಗಳನ್ನು ಕೇಳ ಬಯಸುವ ಧೃತರಾಷ್ಟ್ರನನ್ನು ಕುರಿತು ವಿದುರನು ಹೀಗೆ ಪ್ರಶ್ನಿಸುತ್ತಾನೆ. ಅಕ್ರೂರತ್ವ, ದಯೆ, ಧರ್ಮ, ಸತ್ಯ, ಪರಾಕ್ರಮ ನಿನ್ನ ಮೇಲಿನ ಪೂಜ್ಯಭಾವನೆ ಹೀಗೆ ಎಲ್ಲಾರೀತಿಯ ಸದ್ಗುಣ ಸಂಪನ್ನನಾದ ಧರ್ಮರಾಜನನ್ನು ಅನಾದರಿಸಿ ದುರ್ಯೋಧನ, ಶಕುನಿ, ಕರ್ಣ ದುಃಶಾಸನರಂತಹ ಅಯೋಗ್ಯ ವ್ಯಕ್ತಿಗಳಲ್ಲಿ ಅಧಿಕಾರವನ್ನು ಇರಿಸಿ ನೆಮ್ಮದಿಯನ್ನು ಹೇಗೆ ತಾನೇ ಹೊಂದಲು ಸಾಧ್ಯ? ಎಂಬುದಾಗಿ ಕೇಳಿ ಪಂಡಿತರ ಹಾಗೂ ಮೂರ್ಖರ ಕೆಲವೊಂದು ಲಕ್ಷಣಗಳನ್ನು ತಿಳಿಯಪಡಿಸುತ್ತಾನೆ,


"ಯಸ್ಯ ಕೃತ್ಯಂ ನ ವಿಘ್ನoತಿ ಶೀತಮುಷ್ಣo ಭಯಂ ರತಿ:l

ಸಮೃದ್ಧಿರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ" ll


"ಶೀತೋಷ್ಣಗಳಾಗಲೀ, ಭಯ-ಅನುರಾಗಗಳಾಗಲೀ, ಸಮೃದ್ಧಿ ಅಥವಾ ಕೊರತೆಗಳಾಗಲೀ ಯಾವನ ಕಾರ್ಯಕ್ಕೆ ವಿಘ್ನವನ್ನುಂಟುಮಾಡುವುದಿಲ್ಲವೋ ಅಂತಹವನನ್ನು ಪಂಡಿತನೆಂದು ಕರೆಯುತ್ತಾರೆ".


ಸಾಧಾರಣವಾಗಿ ಪಂಡಿತ ಎಂದೊಡನೆ ನಮ್ಮ ಮನಸ್ಸಿನಲ್ಲಿ ಸಹಜವಾಗಿ ಮೂಡುವ ಚಿತ್ರಣ ಅನೇಕ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಸದಸ್ಸಿನಲ್ಲಿ ತಾನು ಕಲಿತಿರುವ ವಿದ್ಯೆಯನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸುವವನು. ಆದರೆ ಅಷ್ಟೇ ಪಂಡಿತನ ಲಕ್ಷಣವಲ್ಲ. ಭಗವದ್ಗೀತೆಯಲ್ಲಿ ಪರಮಾತ್ಮನು ಪಂಡಿತನ ಲಕ್ಷಣವನ್ನು ಹೀಗೆ ಉದ್ಘೋಷಿಸಿದ್ದಾನೆ-"ವಿದ್ಯಾವಿನಯಗಳಿಂದ ಕೂಡಿದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ ಹಾಗೆಯೇ ನಾಯಿ ಮತ್ತು ನಾಯಿಯ ಮಾಂಸ ತಿನ್ನುವವನು ಇವರೆಲ್ಲರಲ್ಲಿಯೂ ಸಹ  ಪಂಡಿತರು ಸಮದರ್ಶಿಗಳಾಗಿ ಇರುತ್ತಾರೆ".  ಅಂದರೆ ಏಕವೂ ಅವಿಕಾರವೂ ಆದ ಬ್ರಹ್ಮವಸ್ತುವನ್ನೇ ಎಲ್ಲಾ ಜೀವಿಗಳಲ್ಲಿಯೂ ಕಾಣುತ್ತಾರೆ. ಹಾಗಾಗಿ, ಪಂಡಿತ ಎಂದರೆ ಆತ್ಮ ಜ್ಞಾನವುಳ್ಳವನು ಎಂದರ್ಥ.  ಇಂತಹ ಪಂಡಿತನು ಸುಖ -ದುಃಖ, ಭಯ -ಅನುರಾಗ,ಸಮೃದ್ಧಿ -ಕೊರತೆ ಯಾವುದರಿಂದಲೂ ವಿಚಲಿತನಾಗದೇ ತಾನು ಸಂಕಲ್ಪಿಸಿದ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ.


"ಅಕಾಮಾನ್ ಕಾಮಯತಿ ಯ: ಕಾಮಯಾನಾನ್  ಪರೀತ್ಯಜೇತ್ l

ಬಲವಂತಮ್ ಚ ಯೋ ದ್ವೇಷ್ಟಿ ತಮಾಹುರ್ಮೂಢಚೇತಸಮ್" ll


("ಯಾವನು ಅಪೇಕ್ಷಿಸಬಾರದ್ದನ್ನು ಅಪೇಕ್ಷಿಸುವನೋ, ಅಪೇಕ್ಷಿಸಿ ಪಡೆಯಲು ಯೋಗ್ಯವಾದದ್ದನ್ನು ಪರಿತ್ಯಜಿಸುವನೋ ಹಾಗೂ ತನಗಿಂತ ಬಲಿಷ್ಠನಾದವನನ್ನು ದ್ವೇಷಿಸುವನೋ ಅಂತಹವನನ್ನು ಮೂರ್ಖ ವಿಚಾರಗಳುಳ್ಳ ಮನುಷ್ಯ ಎಂದೆನ್ನುವರು").


 ಈ ಮಾತು ದುರ್ಯೋಧನನಿಗೆ ನೇರವಾಗಿ ಅನ್ವಯಿಸುತ್ತದೆ. ದುರ್ಯೋಧನನು ಸತ್ಯನಿಷ್ಠರಾದ ಪಾಂಡವರ ಸಂಪತ್ತನ್ನು ಅಪೇಕ್ಷಿಸುವುದರ ಜೊತೆಗೆ ಅವರ ವಿನಾಶವನ್ನೂ ಬಯಸುತ್ತಾನೆ. ಹಾಗೆಯೇ, ಹಿತೈಷಿಗಳ ಧರ್ಮಯುಕ್ತವಾದ ಹಿತವಚನಗಳನ್ನು ತ್ಯಜಿಸುತ್ತಾನೆ. ಸಾಕ್ಷಾತ್ ಭಗವಂತನೇ ಬೆಂಗಾವಲಾಗಿ ನಿಂತಿರುವ, ಧರ್ಮ, ನ್ಯಾಯ, ಸತ್ಯ, ತಪಸ್ಸು, ಪರಾಕ್ರಮ ಹೀಗೆ ಸರ್ವ ರೀತಿಯಿಂದಲೂ ಇವನಿಗಿಂತ ಬಲಿಷ್ಠರಾಗಿರುವ ಪಾಂಡುಪುತ್ರರನ್ನು ದ್ವೇಷಿಸುವುದು ಇವನ ಮೂರ್ಖತನದ ಪರಮಾವಧಿಯೇ ಸರಿ. ಹಾಗಾಗಿ ಸಮಸ್ತ ಜೀವಕೋಟಿಗಳಲ್ಲಿಯೂ ಸಮದರ್ಶಿತ್ವವನ್ನು ಹೊಂದಿ ಪಂಡಿತ (ಜ್ಞಾನಿ) ಸದೃಶನಾದ ಯುಧಿಷ್ಠಿರನನ್ನು ರಾಜಪದವಿಯಲ್ಲಿ ಕೂರಿಸಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯವೆಂಬುದನ್ನು ವಿದುರನು ಧೃತರಾಷ್ಟ್ರನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾನೆಂಬುದು  ಸ್ಪಷ್ಟವಾಗಿ ತಿಳಿಯುವ ವಿಷಯವಾಗಿದೆ.


"ದ್ವೇ ಕರ್ಮಣೀ ನರ: ಕುರ್ವನ್ನಸ್ಮಿoಲ್ಲೋಕೇ ವಿರೋಚತೇ l

ಅಬ್ರುವನ್ ಪುರುಷo ಕಿಂಚಿದಸತೋsನರ್ಚಯoಸ್ತಥಾ"ll


("ಎಂದೂ ಕಠಿಣವಾದ ಮಾತುಗಳನ್ನಾಡದಿರುವುದು ಹಾಗೂ ದುಷ್ಟ ವ್ಯಕ್ತಿಗಳನ್ನು ಆದರಿಸದಿರುವುದು, ಈ ಎರಡು ಕೆಲಸಗಳನ್ನು ಮಾಡುವ ವ್ಯಕ್ತಿಯು ಈ ಲೋಕದಲ್ಲಿ ವಿಶೇಷವಾದ ಪ್ರೀತಿಗೆ ಪಾತ್ರನಾಗುತ್ತಾನೆ").


 ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದು ಜನಪ್ರಿಯ ನಾಣ್ಣುಡಿ.  ಮಾತು ಎಂಬುದು ನಮ್ಮೊಳಗಿನ ಭಾವವನ್ನು ವ್ಯಕ್ತ ಪಡಿಸಲು ಇರುವ ಸಾಧನ.  ಮನದೊಳಗೆ ಯಾವ ರೀತಿಯ ಭಾವಗಳು ಆಡುತ್ತಿರುತ್ತವೆಯೋ ಸಹಜವಾಗಿ ಅದಕ್ಕನುಗುಣವಾದ ಮಾತು ಹೊರಹೊಮ್ಮತ್ತದೆ.  ಮನಸ್ಸು ಶುದ್ಧವಾಗಿದ್ದ ಪಕ್ಷದಲ್ಲಿ ಅಪ್ರಯತ್ನವಾಗಿಯೇ ಮೃದು ಮಧುರವಾದ, ಶ್ರೋತೃಗಳಿಗೆ ಹಿತವನ್ನುಂಟುಮಾಡುವ ವಾಕ್ಕು ಹರಿಯುತ್ತದೆ. ನಮ್ಮ ಸಂಸ್ಕೃತಿಯು ವಾಕ್ಕಿನ ಬಗ್ಗೆ ಇನ್ನೂ ಆಳವಾದ ನೋಟವನ್ನು ಕೊಡುತ್ತದೆ. ವಾಕ್ಕಿನ ಮೂಲಸ್ಥಾನ ನಮ್ಮೊಳಗೇ ಮನಸ್ಸಿಗೂ ಹಿಂದೆ ಬೆಳಗುತ್ತಿರುವ ಮನಸಸ್ಪತಿಯಾದ ಪರಮಪುರುಷನ ಸ್ಥಾನ. ಪರಿಶುದ್ಧವಾದ ಪ್ರಕೃತಿಯುಳ್ಳವರು (ಜ್ಞಾನಿಗಳು) ಅದನ್ನು ಅಂತೆಯೇ ಹೊರತರಲು ಸಮರ್ಥರಾಗಿರುತ್ತಾರೆ, ಅವರ ಪ್ರತಿಯೊಂದು ವಾಣಿಯೂ ಶಾಸ್ತ್ರ ವಾಕ್ಯವೇ ಆಗುತ್ತದೆ.


"ವಾಕ್ಕು ಪರಮಪುರುಷನ ರಸ (ರೂಪ)ವಾಗಿದೆ. ಆ ರಸವನ್ನು ವ್ಯಕ್ತಪಡಿಸುವಂತಹ ಮಾತುಗಳನ್ನಾಡಬೇಕು". ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ.


 ಕಾಯಾ ವಾಚಾ ಮನಸಾ ದುಷ್ಟತನವನ್ನು ತುಂಬಿಕೊಂಡಿರುವ ವ್ಯಕ್ತಿಗಳ ಸಹವಾಸದಲ್ಲಿರುವುದಾಗಲೀ, ಅವರನ್ನು ಆದರಿಸುವುದಾಗಲೀ ಸರ್ವಥಾ ಅಶ್ರೇಯಸ್ಸನ್ನುoಟುಮಾಡುವಂತಹವು.  ಹಾಗಾಗಿ, ಅಂತಹವರನ್ನು (ಶಕುನಿ, ಕರ್ಣ ಮೊದಲಾದವರನ್ನು) ದೂರವಿಡು ಎಂಬುದಾಗಿ ಬಾರಿ ಬಾರಿಗೂ ಧೃತರಾಷ್ಟ್ರನಿಗೆ ವಿದುರನು ಕಿವಿಮಾತನ್ನು ಹೇಳುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಇದು ಎಲ್ಲರ ಜೀವನಕ್ಕೂ ಅನ್ವಯವಾಗುವ ವಿಚಾರ. ಹೇಗೆ, ಸಜ್ಜನರ ಸಹವಾಸದಿಂದ ನಮ್ಮಲ್ಲಿಯೂ ಸದ್ಭಾವನೆಗಳು ಬೆಳೆದು ನಮಗೆ ಒಂದು ಶುದ್ಧತೆಯನ್ನು ತಂದುಕೊಡುತ್ತವೆಯೋ, ಹಾಗೆಯೇ, ದುಷ್ಟರ ಸಹವಾಸದಿಂದ ನಮ್ಮ ಮನೋ ಬುದ್ಧಿಗಳು ವಿರೂಪಗೊಂಡು, ಅವುಗಳಲ್ಲಿ ಕಾಲುಷ್ಯ ತುಂಬಿಕೊಳ್ಳುತ್ತದೆ.


 "ಅರ್ಥಸಿದ್ಧಿo ಪರಾಮಿಚ್ಛನ್ ಧರ್ಮಮೇವಾದಿತಶ್ಚರೇತ್ l

ನ ಹಿ ಧರ್ಮಾದಪೈತ್ಯರ್ಥ: ಸ್ವರ್ಗಲೋಕಾದಿವಾಮೃತಮ್" ll


 ("ಯಾರು ಅರ್ಥಸಿದ್ಧಿಯನ್ನು ಅಭಿಲಾಷಿಸುತ್ತಾನೆಯೋ, ಅವನು ಮೊದಲಿನಿಂದಲೂ ಧರ್ಮಕಾರ್ಯವನ್ನೇ ಮಾಡುತ್ತಿರಬೇಕು. ಅಮೃತವು ಸ್ವರ್ಗದಿಂದ ಹೇಗೆ ದೂರವಿಲ್ಲವೋ ಹಾಗೆಯೇ ಅರ್ಥವೂ ಧರ್ಮದಿಂದ ದೂರವಿರದು").


 ಅರ್ಥವೆಂದರೆ ಯಾವುದೇ ವಿಧವಾದ ಸಂಪತ್ತು.  ಅದು ಧನದ ರೂಪದಲ್ಲಿರಬಹುದು ಅಥವಾ  ಪದಾರ್ಥದ ರೂಪದಲ್ಲಿರಬಹುದು. ಒಬ್ಬ ಮನುಷ್ಯನು ಹುಟ್ಟುವಾಗಲೇ ಅವನು ಇಂತಿಂತಹ ಸಂಪತ್ತನ್ನು ಅನುಭವಿಸಬೇಕೆಂಬುದು ನಿಶ್ಚಯವಾಗಿರುತ್ತದೆ.  ಭಗವಂತ, ಅದನ್ನು ಕಾಲಕಾಲಕ್ಕೆ ದಯಪಾಲಿಸುತ್ತಾನೆ. ಆದರೆ ಅದನ್ನು ಪಡೆಯಲು  ಪುರುಷ ಪ್ರಯತ್ನವೂ ಅತ್ಯವಶ್ಯಕ. ಆ ಪ್ರಯತ್ನವು ಧರ್ಮ ಮಾರ್ಗದಲ್ಲಿದ್ದಾಗ ಸಂಪತ್ತು ಅವನಲ್ಲಿಯೇ ಉಳಿದು ವೃದ್ಧಿ ಹೊಂದುತ್ತದೆ. ಅಧರ್ಮ ಮಾರ್ಗದಿಂದ ಪಡೆದ ಸಂಪತ್ತು ಕ್ಷಣಿಕ ಹಾಗೂ ಅದರಿಂದ ಮುಂದೆ ದೊಡ್ಡ ವಿನಾಶವೇ ಸಂಭವಿಸುವುದು ಎಂಬುದಕ್ಕೆ ನಮ್ಮ ಇತಿಹಾಸಗಳಲ್ಲಿ ಅನೇಕ ಉದಾಹರಣೆಗಳಿವೆ.  ಅಧರ್ಮದಿಂದ ಪಡೆದ ನಿನ್ನ ಮಕ್ಕಳ ಸಂಪತ್ತು ಅವರನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ವಿದುರನು ದೃತರಾಷ್ಟ್ರನಿಗೆ ನೀಡುತ್ತಿದ್ದಾನೆ. ಹೀಗೆ ಧೃತರಾಷ್ಟ್ರನನ್ನು ಉದ್ದೇಶಿಸಿ ಆಡಿದ ವಿದುರನ ಮಾತುಗಳು ಸದ್ವಿಚಾರಗಳ ಭಂಡಾರವೇ ಆಗಿ ಲೋಕೋಪಕಾರಿಯಾಗಿದೆ.


ಸೂಚನೆ:  2/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.

Thursday, November 10, 2022

ಒಂದೇ ಶಕ್ತಿಯ ಮೂರು ಮುಖಗಳು-ತ್ರಿಮೂರ್ತಿಗಳು ( Onde Saktiya Muru Mukhagaiu-Trimurtigalu)

ಶ್ರೀ ಭಾಷ್ಯಂ ರಾಮಚನ್ದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in)



 

ತ್ರಿಪುರಾಸುರರ ಸಂಹಾರ, ತ್ರಿಮೂರ್ತಿಗಳು ಸಹಕರಿಸಿ ಸಾಧಿಸುವ ಕೆಲಸದ ಒಂದು ನಿದರ್ಶನ. 


ತ್ರಿಪುರಾಸುರರು, ಸುಬ್ರಹ್ಮಣ್ಯ ಸಂಹಾರ ಮಾಡಿದ ತಾರಕಾಸುರನ ಸುಪುತ್ರರು. ಅವರ ಹೆಸರು ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ. ಮುವರೂ ಈಶ್ವರನ ಪರಮ ಭಕ್ತರು,  ಸತ್ಯವಂತರು, ಧರ್ಮಿಷ್ಟರು, ಮಹಾಪರಾಕ್ರಮಿಗಳು ಮತ್ತು ಉದಾರವಂತರು. ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದರೂ  ಅವರು ದೇವತೆಗಳ ಪರಮ ದ್ವೇಷಿಗಳು. ಅವರು  ಅತ್ಯಂತ ತೀವ್ರವಾದ ತಪಸ್ಸನ್ನು ಪಂಚಾಗ್ನಿಮಧ್ಯದಲ್ಲಿ ಆಚರಿಸಿ, ಬ್ರಹ್ಮದೇವರನ್ನು ಒಲಿಸಿಕೊಂಡು 'ಸಾವಿಲ್ಲದ' ವರವನ್ನು ಬೇಡುತ್ತಾರೆ. ಅದಾಗದೆಂದ ಬ್ರಹ್ಮದೇವರಲ್ಲಿ,  ಸಾವು ಬಂದರೆ ಅದು ಪರಶಿವನಿಂದಲೇ  ಬರಬೇಕೆಂದು ಕೇಳಿ ಪಡೆಯುತ್ತಾರೆ. ಪರಮ ಭಕ್ತರನ್ನು ಎಂದೂ ಪರಶಿವ ವಧಿಸಲಾರನೆಂಬ ತೀವ್ರನಂಬಿಕೆ ಅವರದು. ಬ್ರಹ್ಮದೇವರ ಆಜ್ಞೆಯಂತೆ ಮಯಾಸುರ ಮೂರು ಪಟ್ಟಣಗಳನ್ನು ನಿರ್ಮಿಸಿಕೊಡುತ್ತಾನೆ - ಕಬ್ಬಿಣ , ಬೆಳ್ಳಿ  ಮತ್ತು ಚಿನ್ನದಿಂದ. ಈ  ಪಟ್ಟಣಗಳು ಯಾವಾಗಲೂ ವೇಗವಾಗಿ  ಸಂಚರಿಸುತ್ತಿರುತ್ತವೆ. 


ಸಾವಿರ ವರ್ಷಕ್ಕೊಮ್ಮೆ ಸ್ವಲ್ಪವೇ ಸಮಯ  ಸಂಧಿಸುತ್ತವೆ. ಅಂತಹ  ಸಮಯದಲ್ಲಿ, ಅಭಿಜಿನ್ ಮುಹೂರ್ತದಲ್ಲಿ ಒಂದೇ ಬಾಣದಲ್ಲಿ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಅವರಿಗೆ ಸಾವು ಎಂಬ ವರವಿದೆ. ವರಪಡೆದು ಕೊಬ್ಬಿದ ಇವರನ್ನು ಜಯಿಸಲು   ಸಾಧ್ಯವಾಗದೆ, ದೇವತೆಗಳು ಶಿವನಲ್ಲಿ ಮೊರೆಹೋಗುತ್ತಾರೆ. ಆಗ ಪರಶಿವನು ಧರ್ಮಿಷ್ಠರಾದ  ಇವರನ್ನು ವಧಿಸಲು ಸಾಧ್ಯವಿಲ್ಲ; ಏನಾದರೂ ಮಾಡಿ ಅವರನ್ನು ಧರ್ಮದಿಂದ ಜಾರುವಂತೆ  ಮಾಡಿದರೆ, ನಾನು ವಿಚಾರಿಸಿಕೊಳ್ಳುವೆ ಎಂದು ಆಶ್ವಾಸನೆ ಕೊಡುತ್ತಾನೆ.  ಆಗ ದೇವತೆಗಳು ವಿಷ್ಣುವನ್ನು ಮೊರೆಹೊಗುತ್ತಾರೆ. ವಿಷ್ಣುವು ಒಂದು ಯತಿವೇಷಧಾರಿಯಾದ 'ಮುಂಡಿ' ರೂಪವನ್ನು ಸೃಷ್ಟಿಸಿ, ಆತನನ್ನು ನಾರದರೊಡಗೂಡಿಸಿ ಇವರ ರಾಜ್ಯಕ್ಕೆ ಕಳುಹಿಸುತ್ತಾನೆ. ಇವನು ಧರ್ಮದ ಆಚಾರಣೆಗಳಾದ ಯಜ್ಞ, ಪಿತೃಪೂಜೆ, ದೇವತೆಗಳ ಧ್ಯಾನ  ಫಲ ಕೊಡವು. ದೇವತೆಗಳೇ ಬಹಳ ತಪ್ಪುಗಳನ್ನು ಮಾಡುತ್ತಾರೆ.


ಜಗನ್ನಿಯಾಮಕನಾದ ಈಶ್ವರನ ಅವಶ್ಯಕತೆ ಏನೂ ಇಲ್ಲ. ಕರ್ಮಗಳೇ ಫಲವನ್ನು ಕೊಡುವಾಗ ಈಶ್ವರನ  ಅವಶ್ಯಕತೆಯಾದರೂ ಏನು? ಈ ರೀತಿಯಾಗಿ  ಅಧರ್ಮವನ್ನೇ ಧರ್ಮವೆಂದು ಅತ್ಯಾಕರ್ಷಕವಾಗಿ ಬೋಧಿಸುತ್ತಾ ಇವರ ರಾಜ್ಯದಲ್ಲಿ ತಿರುಗುತ್ತಿದ್ದ. ನಾರದರು ತ್ರಿಪುರಾಸುರರ ಬಳಿ ಹೋಗಿ ಮುಂಡಿಯ ಬೋಧನೆಯನ್ನು ಅದ್ಭುತವಾಗಿ ಹಾಡಿ -ಹೊಗಳಿ, ಮನವೊಲಿಸಿ ಇವರಿಗೆ ಶಿಷ್ಯರನ್ನಾಗಿಸಿ,  ಅವರನ್ನು ಧರ್ಮಮಾರ್ಗದಿಂದ ಜಾರುವಂತೆ ಮಾಡಿ ತನ್ನ  ಕೆಲಸವಾಯಿತೆಂದು ಹಿಂತಿರುಗುತ್ತಾರೆ. ಬ್ರಹ್ಮದೇವರಿಂದ ವರಪಡೆದು ಮಯನಿರ್ಮಿತವಾದ, ಸತ್ತವರನ್ನು ಬದುಕಿಸುವ ಮಾಯಾಕೊಳದ  ನೀರನ್ನು ವಿಷ್ಣು ಮತ್ತು ಬ್ರಹ್ಮ, ಆಕಳು -ಕರುಗಳಾಗಿ, ಮಯ ನೋಡುತ್ತಿದ್ದಂತೆಯೇ ಹೀರಿಬಿಡುತ್ತಾರೆ. ಹೀಗೆ ಧರ್ಮದಿಂದ ಜಾರಿ ಸಿದ್ದಪಡಿಸಿದ ತ್ರಿಪುರಾಸುರರನ್ನು ಬ್ರಹ್ಮನ ಸಾರಥ್ಯದಲ್ಲಿ  ಕಾಲಸ್ವರೂಪವಾದ ರಥದಲ್ಲಿ ಕುಳಿತು, ವಿಷ್ಣುರೂಪಿಯಾದ ಅಗ್ನಿಯ ಅಲಗಿನಿಂದ  ಕೂಡಿದ ಬಾಣವನ್ನು ಪ್ರಯೋಗಿಸಿ ಮೂರುಪಟ್ಟಣಗಳು ಅಭಿಜಿನ್ ಮುಹೂರ್ತದಲ್ಲಿ ಒಂದಾಗಿ ಸೇರಿದಾಗ ಈಶ್ವರ ಭಸ್ಮ ಮಾಡುತ್ತಾನೆ. ಇದು ಸಂಕ್ಷಿಪ್ತವಾದ ತ್ರಿಪುರಾಸುರರ ಕಥೆ. ಭಕ್ತರಾದ ತ್ರಿಪುರೇಶ್ವರರು ಈಶ್ವರನ ಸಾನ್ನಿಧ್ಯ  ಹೊಂದುತ್ತಾರೆ. 

 

ಈ ಕಥೆಯಲ್ಲಿ ತ್ರಿಮೂರ್ತಿಗಳೂ ಒಂದಾಗಿ ಸೇರುವುದನ್ನು ಕಾಣುತ್ತೇವೆ. ಈ ಕಥೆಯ ತತ್ತ್ವಾರ್ಥವನ್ನು ಶ್ರೀರಂಗ ಮಹಾಗುರುಗಳು ಈ ರೀತಿ ವಿಶದಪಡಿಸಿದ್ದರು. ತ್ರಿಪುರಗಳು ಸತ್ತ್ವ, ರಜಸ್, ತಮೋಗುಣಗಳ ಸಂಕೇತ. ಅವುಗಳು ನಿಂತಲ್ಲಿಯೇ ನಿಲ್ಲದೆ ಯಾವಾಗಲೂ ಸಂಚರಿಸುತ್ತಿರುತ್ತವೆ. ಅವುಗಳು ಒಂದೆಡೆ ಸೇರಿದಾಗ ತ್ರಿಮೂರ್ತಿಗಳ ಸಹಕಾರದಿಂದ ನಾಶಪಡಿಸಬೇಕಾಗುತ್ತದೆ, ಆಗ ಸಾಮ್ಯ ಉಂಟಾಗುತ್ತದೆ. ಆಗಷ್ಟೇ ಸಮಾಧಿಸ್ಥಿತಿ ಏರ್ಪಡುವುದು. ಈ ಕಥೆ, ಅಧ್ಭುತವಾದ  ಯೋಗ ಸಮಾಧಿಯ ಸ್ಥಿತಿಗೇರುವ ಗುಟ್ಟನ್ನು ಬಿಚ್ಚಿಕೊಡುತ್ತದೆ.


ಸೂಚನೆ:  10/10/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ. 

Thursday, September 8, 2022

ಶಿಷ್ಟರ ಉಳಿವು ದುಷ್ಟರ ಅಳಿವು(Shishtara Ulivu Dushtara Alivu)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)




ಕೃತಯುಗದ ಇಕ್ಷ್ವಾಕುವಂಶದ ಮಾಂಧಾತ ದೊರೆಯ ಪುತ್ರನಾದ ಮುಚುಕುಂದ ಮಹಾರಾಜ, ದೇವಾಸುರ ಸಂಗ್ರಾಮದಲ್ಲಿ  ಅಸುರರ ವಿರುದ್ಧ ನಾಯಕನಾಗಿ ಹೋರಾಡಿದ್ದ.  ಅಸುರರನ್ನು ಹಿಮ್ಮೆಟ್ಟಿಸಿ, ಕಾರ್ತಿಕೇಯನು ದೇವತೆಗಳ ಸೇನಾನಾಯಕನಾಗಿ ಬರುವವರೆಗೂ,  ದೇವತೆಗಳ ರಕ್ಷಣೆ ಮಾಡಿದ್ದ. ಬಳಲಿದ್ದ ಆತನಿಗೆ, ಇಂದ್ರನು ವರವೊಂದನ್ನು ನೀಡಿದ್ದ. ಆ ವರವೇನೆಂದರೆ ಮುಚುಕುಂದನು ತನಗಿಷ್ಟ ಬಂದಕಾಲದವರೆಗೂ ಸುಖನಿದ್ರೆಯನ್ನು ಅನುಭವಿಸಬಹುದು. ಆತನಿಗೆ ಯಾರಾದರೂ ನಿದ್ರಾಭಂಗವನ್ನುಂಟುಮಾಡಿದಲ್ಲಿ ಅವರು ಮುಚುಕುಂದನ ಪ್ರಥಮ ದೃಷ್ಟಿಯಿಂದ ಭಸ್ಮರಾಗುವರು. ಈ ವರವನ್ನು ಪಡೆದ ನಂತರ ಮುಚುಕುಂದನು ಭೂಲೋಕಕ್ಕೆ ಹಿಂದಿರುಗಿ ಗಾಢಾರಣ್ಯದ ಗುಹೆಯೊಂದರಲ್ಲಿ ನಿದ್ರಾಪರವಶನಾದನು.


ದ್ವಾಪರಯುಗದಲ್ಲಿ ಕೃಷ್ಣಾವತಾರವಾಗಿತ್ತು. ಕೃಷ್ಣನು ಮಥುರೆಯಲ್ಲಿದ್ದಾಗ ಕಾಲಯವನನೆಂಬ ಅಸುರನು ಮಥುರೆಗೆ ಮುತ್ತಿಗೆ ಹಾಕಿ, ಕೃಷ್ಣನ ಮೇಲೆ ಯುದ್ದ ಮಾಡಲು ಪ್ರಯತ್ನಿಸಿದಾಗ , ಲೀಲಾನಾಟಕಸೂತ್ರಧಾರನಾದ ಕೃಷ್ಣನು ಕಾಲಯವನನ ಭೀತಿಯೋ ಎಂಬಂತೆ ಓಡಿದನು. ಕಾಲಯವನನು ಕೃಷ್ಣನನ್ನು ಅಟ್ಟಿಸಿಕೊಂಡು ಹಿಂಬಾಲಿಸುತ್ತಿದ್ದನು. ಕೃಷ್ಣನು ಓಡುತ್ತಾ ಮುಚುಕುಂದನು ಮಲಗಿರುವ ಗುಹೆಯನ್ನು ಪ್ರವೇಶಿಸಿ ಕತ್ತಲಿನಲ್ಲಿ ಅವಿತುಕೊಂಡನು. ಹಿಂಬಾಲಿಸುತ್ತಿದ್ದ  ಕಾಲಯವನನೂ ಗುಹೆಯೊಳಗೆ ಪ್ರವೇಶಿಸಿ ಮಲಗಿದ್ದ ಮುಚುಕುಂದನನ್ನು ನೋಡಿ, ಅವನೇ  ಕೃಷ್ಣನೆಂದು ಭಾವಿಸಿ,  ಆತನನ್ನು ಒದ್ದನು. ಮುಚುಕುಂದನಿಗೆ ಎಚ್ಚರವಾಗಿ, ಕಾಲಯವನನನ್ನು ನೋಡಿದಾಗ, ಇಂದ್ರನ ವರಪ್ರಭಾವದಿಂದ  ಕಾಲಯವನನು ಸುಟ್ಟು ಬೂದಿಯಾದನು. 


ಮುಚುಕುಂದನು ಸುತ್ತಲೂ ವೀಕ್ಷಿಸಲು, ತೇಜೋಮಯನೂ, ಪೀತಾಂಬರಧಾರಿಯೂ ಆದ ಕೃಷ್ಣನನ್ನು ಕಂಡನು. ಕೃತಯುಗದಲ್ಲಿ ಭಗವಂತನ ಬಗ್ಗೆ ಋಷಿಗಳು ಹೇಳಿದ್ದು ಮುಚುಕುಂದನಿಗೆ ನೆನಪಾಗಿ,  ಕೃಷ್ಣನೇ ಸಾಕ್ಷಾತ್ ಭಗವಂತನೆಂದು ಅರಿತು ಶ್ರೀಕೃಷ್ಣನಲ್ಲಿ ಶರಣಾದನು. ಕೃಷ್ಣನು ಆತನನ್ನು ಸಂತೈಸಿ "ನೀನು ಮುಂದಿನ ಜನ್ಮದಲ್ಲಿ ಸತ್ಕುಲದಲ್ಲಿ ಜನಿಸಿ ಸಾಧನೆ ಮಾಡಿ ಮುಕ್ತಿಯನ್ನು ಪಡೆಯುವೆ" ಎಂದು ಆಶೀರ್ವದಿಸಿದನು. 


ಭಗವದ್ಗೀತೆಯಲ್ಲಿ ಬರುವ 'ದೈವಾಸುರಸಂಪದ್ವಿಭಾಗ'ವೆಂಬ ಅಧ್ಯಾಯವನ್ನು ಗಮನಿಸಿದಾಗ, ತಾತ್ತ್ವಿಕವಾಗಿ ನೋಡುವುದಾದರೆ, ದೇವಾಸುರರ ಸ್ವಭಾವದ ವ್ಯತ್ಯಾಸವೇ  ಸಂಗ್ರಾಮಕ್ಕೆ ಕಾರಣವೆನ್ನಲಾಗಿದೆ.  ಈ ಸಂಗ್ರಾಮ ನಿತ್ಯವೂ ಪ್ರತಿಯೊಬ್ಬರಲ್ಲಿಯೂ ನಡೆಯುವ ಯುದ್ಧವೇ ಸರಿ. ದೈವೀಸಂಪತ್ತುಳ್ಳವರೇ ಕಡೆಗೆ ವಿಜಯಶಾಲಿಗಳಾಗುತ್ತಾರೆ. ದೈವ ಅವರನ್ನು ಬೆಂಬಲಿಸುತ್ತದೆ. ಕಥಾಬಾಗದಲ್ಲಿ , ಕಾಲಯವನನನ್ನು ಕಂಡು ಮುರಾರಿ ಪರಾರಿಯಾಗುವುದು ಏತಕ್ಕೆ? ನಂತರ, ಕಾಲಯವನನನ್ನು ಮುಚುಕುಂದನನ ಬಳಿ ಕರೆದೊಯ್ಯುವುದೇತಕ್ಕೆ? ಕೃಷ್ಣನೇ ಅವನನ್ನು ಸಂಹರಿಸಬಹುದಾಗಿತ್ತಲ್ಲವೇ? ಎಂಬ ಪ್ರಶ್ನೆಗಳು ಬರಬಹುದು. ಭಾಗವತದಲ್ಲಿಯೂ ಪರೀಕ್ಷಿತ್ ಮಹಾರಾಜನೂ ಶುಕಮಹರ್ಷಿಗಳಲ್ಲಿ ಇಂತಹ ಪ್ರಶ್ನೆಗಳನ್ನಿಡುತ್ತಾನೆ. ಭಗವಂತನ ಕಾರ್ಯಗಳ ರಹಸ್ಯ  ಅವನಿಗೆ ಮಾತ್ರ ಗೊತ್ತಾಗುತ್ತದೆ. ಪ್ರಹ್ಲಾದನಿಗಾಗಿ ನರಸಿಂಹದೇವರು ಹಿರಣ್ಯಕಶಿಪುವಿನ ಬಳಿ ಬರಲಿಲ್ಲವೇ? ಇಲ್ಲಿ ಶ್ರೀರಂಗಸದ್ಗುರುಗಳ ವಾಣೀ ಸ್ಮರಣಾರ್ಹ. " ದೈವೀಸಂಪತ್ತುಳ್ಳ ವ್ಯಕ್ತಿಯ ಸಂಬಂಧದಿಂದ ಆಸುರೀಸಂಪತ್ತುಳ್ಳವನ ಬಳಿ ದೈವ ಬರಬೇಕಾಗುತ್ತದೆ. " ಪರಮಾತ್ಮನು ಶಿಷ್ಟರಕ್ಷಣ, ದುಷ್ಟಶಿಕ್ಷಣ" ಒಟ್ಟಿಗೆ ಮಾಡುವ ಕಾರ್ಯವಿಧಾನವಿದಾಗಿದೆ.  ಭಗವಂತ ಸತ್ಕಾರ್ಯ ಮಾಡಿದ್ದ ಮುಚುಕುಂದನನ್ನು ಎಚ್ಚರಿಸಿ ಸನ್ಮಾರ್ಗ ತೋರುವುದು ಮತ್ತು ಅಸುರನ ಸಂಹಾರ ಎರಡೂ ಕಾರ್ಯ ಮಾಡಿದ್ದಾನೆ. "ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ" ಎಂಬ ಕಾರ್ಯ ಯೋಜಿಸುವ ಮಾಹಾಚತುರನಾದ ಭಗವಂತನನ್ನು ನೆನೆಯೋಣ.


ಸೂಚನೆ: 8/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.  

Friday, June 24, 2022

ಜೀವನದಲ್ಲಿ ಧರ್ಮರಕ್ಷಣೆಗೇ ಪ್ರಾಧಾನ್ಯವಿರಲಿ (Jivanadalli Dharmaraksanege Pradhanyavirali)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀಕೃಷ್ಣ, ಅರ್ಜುನ ಮತ್ತು ಧರ್ಮರಾಯನ ನಡುವೆ ಘಟಿಸಿದ ಅದ್ಭುತ ಪ್ರಸಂಗವೊಂದನ್ನು ಮಹಾಭಾರತದ ಕರ್ಣಪರ್ವದಲ್ಲಿ ವರ್ಣಿಸಲಾಗಿದೆ. ಕುರುಕ್ಷೇತ್ರಯುದ್ಧದ ಸನ್ನಿವೇಶ. ಕರ್ಣ-ಧರ್ಮರಾಯನ ನಡುವೆ ಮಹಾಕಾಳಗ ನಡೆಯುತ್ತದೆ. ಕರ್ಣನ ಬಾಣಗಳಿಂದ ಧರ್ಮರಾಯನು  ಬಹಳವಾಗಿ ಬಳಲಿ ಅವಮಾನದಿಂದಲೂ, ದೇಹಯಾತನೆಯಿಂದಲೂ ನೊಂದು ಬಿಡಾರಕ್ಕೆ ಹಿಂದಿರುಗುತ್ತಾನೆ. 

 

ಈ ವಿಷಯ ತಿಳಿದು ಕೃಷ್ಣಾರ್ಜುನರು ಅಲ್ಲಿಗೆ ಬರುತ್ತಾರೆ. ಅರ್ಜುನನು ಕರ್ಣನನ್ನು ವಧಿಸಿಯೇ ಬರುವನೆಂದು ನಂಬಿದ್ದ ಧರ್ಮರಾಯನು ಆ ಕಾರ್ಯ ನೆರೆವೇರಲಿಲ್ಲವೆಂದರಿತು 'ನೀನು ಗಾಂಡೀವವನ್ನು ಏಕೆ ಇಟ್ಟುಕೊಂಡಿದ್ದೀಯೇ? ಯಾರಾದರು ಹೆಂಗಸರ ಕೈಗೆ ಕೊಡು' ಎಂದು ಅರ್ಜುನನನ್ನು ನಿಂದಿಸುತ್ತಾನೆ.

 

ಅತ್ಯಂತ ಕುಪಿತನಾದ ಅರ್ಜುನನು ''ನನ್ನ ಗಾಂಡೀವವನ್ನು ನಿಂದಿಸಿದವರ ತಲೆಯನ್ನು ತೆಗೆಯುತ್ತೇನೆ" ಎಂದು ತಾನು ಈ ಹಿಂದೆಯೇ ಮಾಡಿದ್ದ ಪ್ರತಿಜ್ಞೆಯಂತೆ ಅಣ್ಣನನ್ನು ಕೊಲ್ಲಲು ಧಾವಿಸುತ್ತಾನೆ. ಶ್ರೀಕೃಷ್ಣನು ಅವನನ್ನು  ತಡೆದಾಗ ಅರ್ಜುನನು ತನ್ನ ಪ್ರತಿಜ್ಞೆಯನ್ನು ತಿಳಿಸಿ ತಾನು ವಿವಶನೆಂದು ವಾದಿಸುತ್ತಾನೆ. "ಅಣ್ಣನು ತಂದೆಗೆ ಸಮಾನನು. ಆತನ ವಧೆ ಘೋರಪಾತಕದ ಕಾರ್ಯ" ಎಂದು ಎಚ್ಚರಿಸುತ್ತಾನೆ ಕೃಷ್ಣ. 

 

ತನ್ನ ಪ್ರತಿಜ್ಞಾಪಾಲನೆಯೇ ಮುಖ್ಯವೋ ಅಥವಾ ಅಣ್ಣನ ಉಳಿವೇ ಮು ಖ್ಯವೋ ಎಂಬ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷ್ಣನನ್ನೇ ಶರಣುಹೊಂದುತ್ತಾನೆ ಅರ್ಜುನ. 

  

ಶ್ರೀಕೃಷ್ಣನು ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತಾನೆ. "ಗುರು-ಹಿರಿಯರನ್ನು ಅವಮಾನಕರವಾಗಿ  ನಿಂದಿಸಿದರೆ ಅವರನ್ನು ವಧಿಸಿದಂತೆಯೇ ಸರಿ. ಆದ್ದರಿಂದ ಈಗ ಧರ್ಮರಾಯನನ್ನು  ಚೆನ್ನಾಗಿ ನಿಂದಿಸು" ಎನ್ನುತ್ತಾನೆ. ಅರ್ಜುನನು ಕೃಷ್ಣನ ಆದೇಶದಂತೆ ಯುಧಿಷ್ಠಿರನನ್ನು  ಚೆನ್ನಾಗಿ ಹೀಯಾಳಿಸುತ್ತಾನೆ. ಇದರಿಂದಾಗಿ ಧರ್ಮರಾಯನು ಅತ್ಯಂತ ದು:ಖಿತನಾಗುತ್ತಾನೆ. 

 

ಆದರೆ "ಪೂಜ್ಯನಾದ  ಅಣ್ಣನನ್ನು ಹೀಯಾಳಿಸಿದ ಮೇಲೆ ನಾನು ಬದುಕಿರಬಾರದು!" ಎನ್ನುತ್ತಾ ಆತ್ಮಹತ್ಯೆಮಾಡಿಕೊಳ್ಳಲು ಯತ್ನಿಸುತ್ತಾನೆ ಅರ್ಜುನ. ಆಗ ಶ್ರೀಕೃಷ್ಣನು "ಆತ್ಮಹತ್ಯೆ ಘೋರಪಾಪ! ಅದನ್ನು ತಪ್ಪಿಸುವ ಉಪಾಯವನ್ನು ಹೇಳುವೆನು ಕೇಳು" ಎನ್ನುತ್ತಾ  "ಆತ್ಮಶ್ಲಾಘನೆಯು ಆತ್ಮಹತ್ಯೆಗೆ ಸಮಾನ" ಎಂಬುದನ್ನು ನೆನಪಿಸುತ್ತಾನೆ. ಅರ್ಜುನನೂ ಅದರಂತೆಯೇ ತನ್ನ ಆತ್ಮಪ್ರಶಂಸೆಯನ್ನು ಬಹಳವಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಮಸ್ಯೆಯು ಪರಿಹಾರವಾಯಿತು. 

 

ತನ್ನ ಪ್ರತಿಜ್ಞಾಪಾಲನೆ ಮಾಡುವ ಭರದಲ್ಲಿ,  ಅರ್ಜುನನು   ಧರ್ಮರಕ್ಷಣೆಗಾಗಿ  ಯುದ್ಧವನ್ನು ಮಾಡುತ್ತಿದ್ದ ಧರ್ಮರಾಯನನ್ನೇ ವಧಿಸಿಬಿಡುತ್ತಿದ್ದ!  ಧರ್ಮರಕ್ಷಣೆಯ ಮಹಾಧ್ಯೇಯವನ್ನು ಮರೆತು, ಆ ಸಮಯದಲ್ಲಿ  ಕಿರಿಯ ಧರ್ಮವಾದ  ಪ್ರತಿಜ್ಞಾಪಾಲನೆಯೇ ಪ್ರಧಾನವೆನ್ನುವಂತೆ ವರ್ತಿಸಲೆಸಗಿದ. ಸದಾ ಧರ್ಮಿಷ್ಠರಾದ ಪಾಂಡವರನ್ನು ರಕ್ಷಿಸುತ್ತಿದ್ದ ಭಗವಂತ, ಈ ಪ್ರಸಂಗದಲ್ಲೂ ಅರ್ಜುನನನ್ನು ಸರಿಯಾದ ದಾರಿಯಲ್ಲಿ ಯೋಜಿಸಿದ. ಧರ್ಮರಕ್ಷಣೆಯ ಜೊತೆಗೆ ಅರ್ಜುನನನ್ನು ಘೋರಪಾಪದಿಂದ ದೂರಮಾಡಿ ಅನುಗ್ರಹಿಸಿದ. ಪ್ರತಿಜ್ಞೆಯನ್ನು ಪಾಲಿಸುವುದೂ ಧರ್ಮವೇ ಆದ್ದರಿಂದ ಅದಕ್ಕೂ ಚ್ಯುತಿಬಾರದಂತೆ ಸನ್ಮಾರ್ಗವನ್ನು ಸೂಚಿಸಿದ. 

 

'ಕಣ್ಣಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಧರ್ಮಕ್ಕಾಗಿ ಹೋರಾಡಬೇಕು' ಎನ್ನುವ ಶ್ರೀರಂಗಮಹಾಗುರುಗಳ ನಿಲುವು ಇಲ್ಲಿ ಸ್ಮರಣೀಯ.  ಮಹಾಧ್ಯೇಯಕ್ಕೆ ಪೋಷಕವಾಗಿಯೇ ನಮ್ಮ ಉಳಿದೆಲ್ಲಾ ಕಾರ್ಯಗಳೂ ಇರಬೇಕು; ದೊಡ್ಡ ಧರ್ಮದ ಸಾಧನೆಗಾಗಿ ಸಣ್ಣಧರ್ಮಗಳನ್ನು ತ್ಯಜಿಸಬೇಕಾಗಿ ಬಂದರೂ ಚಿಂತೆಯಿಲ್ಲ ಎಂಬ ವಿವೇಕವು ಜೀವನದಲ್ಲಿ ಅತ್ಯಗತ್ಯ ಎಂಬ ಜ್ಞಾನಿಗಳ ಆದೇಶವನ್ನು  ನೆನೆಪಿಡಬೇಕಾಗಿದೆ. ಧರ್ಮಮಯ ಜೀವನಕ್ಕಾಗಿ ಶ್ರಮಿಸಿದರೆ ಭಗವಂತನೆಂದಿಗೂ ನಮ್ಮ ಜೊತೆಗಾರನಾಗಿದ್ದು ರಕ್ಷಿಸುವನು ಎಂದು ತಿಳಿಸುವ ರೋಚಕ ಪ್ರಸಂಗವಿದು.

ಸೂಚನೆ: 23/06/2022 ರಂದು ಈ ಲೇಖನ  ವಿಶ್ವವಾಣಿ ಯಲ್ಲಿ ಪ್ರಕಟವಾಗಿದೆ.   

Thursday, March 10, 2022

ಕರ್ಮವು ಕರ್ಮಯೋಗವಾಗುವುದು ಹೇಗೆ? ( Karmavu Karmayogavaguvudu Hege?)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


 ಭಕ್ತಶ್ರೇಷ್ಠ ಆಂಜನೇಯನು ತನ್ನ ಪ್ರಾಣ ಪ್ರಭುವಾದ ಶ್ರೀರಾಮಚಂದ್ರನ ಸೇವಾಕಾರ್ಯಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿ ಶ್ರೀರಾಮ- ಸೀತಾಮಾತೆಯರ ಪ್ರೀತಿಗೆ ಪಾತ್ರನಾಗುತ್ತಾನೆ. ಸೀತಾನ್ವೇಷಣೆಯ ಸಮಯದಲ್ಲಿ ಮಹಾಸಮುದ್ರವನ್ನು ಹಾರಿ ಲಂಕೆಗೆ ಹೋಗಿ ಅಶೋಕವನದಲ್ಲಿದ್ದ ಸೀತಾಮಾತೆಯನ್ನು ಸಂದರ್ಶಿಸಿ, ಸಂತೈಸಿ, ಪ್ರಭುವಿನ ಸಂದೇಶವನ್ನು ತಲುಪಿಸಿ ನಂತರ ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯ ಸಂದೇಶವನ್ನು ಅರುಹಿ ಇಬ್ಬರ ಪುನರ್ಮಿಲನಕ್ಕೆ ಸೇತುವಾಗುತ್ತಾನೆ. ಅಂತೆಯೇ ರಾಮ-ರಾವಣರ ಯುದ್ಧದಲ್ಲಿ ಮೂರ್ಛಿತನಾದ ಲಕ್ಷ್ಮಣನ ಚಿಕಿತ್ಸೆಗಾಗಿ ಹಿಮಾಲಯ ಪರ್ವತಕ್ಕೆ ಹಾರಿ ಸಂಜೀವಿನಿ ಪರ್ವತವನ್ನೇ ತಂದು ಲಂಕೆಯಲ್ಲಿ ಸ್ಥಾಪಿಸುತ್ತಾನೆ. ಹೀಗೆ ಅನೇಕ ರೀತಿಯಾಗಿ ಭಗವಂತನ ಕಾರ್ಯಗಳನ್ನು ಪ್ರಸನ್ನವಾದ ಮನಸ್ಸಿನಿಂದ ಮಾಡುತ್ತಾನೆ.


 ಹನುಮಂತನ ಸೇವೆಯಿಂದ ಪ್ರಸನ್ನನಾದ ಶ್ರೀರಾಮ, ಆಂಜನೇಯನನ್ನು ಕುರಿತು, ನೀನು ನನಗಾಗಿ ಮಹತ್ತಾದ ಉಪಕಾರವನ್ನೇ ಮಾಡಿರುವೆ. ಆದರೆ ನನ್ನಿಂದ ಪ್ರತ್ಯುಪಕಾರವನ್ನು ಮಾತ್ರ ಅಪೇಕ್ಷಿಸಬೇಡ. 'ಏಕೆಂದರೆ ಯಾರು ಪ್ರತ್ಯುಪಕಾರವನ್ನು ಬಯಸುತ್ತಾರೋ ಅವರು ಆಪತ್ತನ್ನೇ ಬಯಸಿದಂತೆ' ಎಂದು ಹೇಳಿದನೆಂದು ಕವಿಯೊಬ್ಬರು ಚಮತ್ಕಾರಯುತವಾಗಿ ಕರ್ಮದ ಗತಿಯನ್ನು  ವರ್ಣಿಸಿದ್ದಾರೆ.

ನಾವು ಕಷ್ಟದಲ್ಲಿದ್ದವರಿಗೆ ಪ್ರತ್ಯುಪಕಾರದ ಅಪೇಕ್ಷೆಯಿಂದ ಉಪಕಾರವನ್ನು ಮಾಡಿದರೆ ನಮಗೆ ಕಷ್ಟ ಬಂದಾಗ ತಾನೇ ಅವರಿಂದ ಉಪಕಾರವನ್ನು ಪಡೆಯುವಂತಾಗುವುದು!


ಆಂಜನೇಯನಿಗೆ ಯಾವುದೇ ಕಷ್ಟಕಾರ್ಪಣ್ಯಗಳು ಬಾರದಿರಲಿ ಎಂಬ ಶ್ರೀರಾಮನ ಇಚ್ಛೆಯ ಜೊತೆಗೆ  ಪ್ರತಿಫಲವನ್ನು ಅಪೇಕ್ಷಿಸಿ ಕರ್ಮಗಳನ್ನು ಮಾಡಿದಾಗ ಕರ್ಮಬಂಧನಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತೆ ಎಂಬುದು ಲೋಕಕ್ಕೆ ಸಂದೇಶ. ನಾವು ಮಾಡುವ ಪ್ರತಿಯೊಂದು ಕರ್ಮಕ್ಕೂ ಅದರದರ ಫಲವೂ ನಿಶ್ಚಿತವಾಗಿಯೇ ಇದ್ದು, ಒಂದಲ್ಲ ಒಂದು ದಿನ ಸತ್ಕರ್ಮಕ್ಕನುಗುಣವಾದ ಸತ್ಫಲ ಹಾಗೂ ದುಷ್ಕರ್ಮಕ್ಕನುಗುಣವಾದ ದುಷ್ಫಲವನ್ನು ಪಡೆಯಬೇಕಾಗುತ್ತದೆ. ಕೆಲವು ಕರ್ಮಗಳ ಫಲ ಶೀಘ್ರವಾಗಿ ದೊರೆಯಬಹುದು ಮತ್ತೆ ಕೆಲವು ವಿಳಂಬವಾಗಬಹುದು. ಇನ್ನೂ ಕೆಲವನ್ನು ಜನ್ಮಾಂತರದಲ್ಲಿಯೂ ಅನುಭವಿಸಬೇಕಾಗಿ ಬರಬಹುದು. ಕರ್ಮಗಳ ಗತಿ ಅತ್ಯಂತ ಗಹನವಾದದ್ದು. ಹಾಗಾಗಿ, ದುಷ್ಕರ್ಮಗಳನ್ನು ಸರ್ವಾತ್ಮನಾ ತ್ಯಜಿಸಿ, ಸತ್ಕರ್ಮಗಳನ್ನು ಫಲಾ ಪೇಕ್ಷೆಯಿಲ್ಲದೇ, ಅಹಂಭಾವವನ್ನು ತೊರೆದು, ಭಗವದರ್ಪಣಭಾವದಿಂದ ಆಚರಿಸುತ್ತಾ ಬಂದಾಗ ಕರ್ಮವು ಸಂಸಾರ ಬಂಧನಕ್ಕೆ ಕಾರಣವಾಗದೇ  ಭಗವಂತನೊಡನೆ ಒಂದಾಗುವ ಮಾರ್ಗವಾಗಿ ಕರ್ಮಯೋಗ ವಾಗುತ್ತದೆ. "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ "ಎಂಬ ಭಗವದ್ವಾಣಿಯಂತೆ ನಮ್ಮ ಪಾಲಿನ ಕರ್ತವ್ಯಗಳನ್ನು ಶ್ರದ್ಧೆಯಿಂದ ಆಚರಿಸುವುದಷ್ಟೇ ನಾವು ಮಾಡಬೇಕಾಗಿರುವುದು. ಫಲಾಫಲಗಳು ಭಗವಂತನಿಗೆ ಸೇರಿದ್ದು. ಪ್ರತಿಫಲಾಪೇಕ್ಷೆಯನ್ನು ಬಿಟ್ಟು ಶ್ರದ್ಧಾ ಭಕ್ತಿಯಿಂದ ಕಾಯಾ ವಾಚಾ ಮನಸಾ ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿದ ಆಂಜನೇಯನು ಚಿರಂಜೀವತ್ವ ಹಾಗೂ ಶ್ರೀರಾಮಚಂದ್ರನ ಆಲಿಂಗನ ಸೌಖ್ಯದಂತಹ ಮಹಾಫಲವನ್ನೇ ಪಡೆದನು. ಅದೇ ರಾವಣನು ಸರ್ವದಾ ಭಗವದ್ಧರ್ಮಕ್ಕೆ ವಿರುದ್ಧವಾದ ಕಾರ್ಯಗಳನ್ನೇ ಗೈದು ರಾಮನ ಬಾಣಗಳ ಪ್ರಹಾರಕ್ಕೆ ತುತ್ತಾಗಿ ಮಡಿದನು. "ನಾವು ನಮ್ಮ ಜೀವಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡಿದರೂ ಅದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಉದ್ದೇಶವಿರಬೇಕು; ಮೂಲಕ್ಕೆ ಕರೆದೊಯ್ಯುವಂತಿರಬೇಕು ಪ್ರತಿನಿತ್ಯದ ನಮ್ಮ ಕಾರ್ಯಗಳೂ ಕೂಡ ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯುವಂತೆ ಇರಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ, ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿ ಕರ್ಮಯೋಗಿಗಳಾಗೋಣ.


ಸೂಚನೆ: 10/03/2022 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

Thursday, March 3, 2022

ಅಯಸ್ಕಾಂತ ಮತ್ತು ಅಧ್ಯಾತ್ಮ(Ayaskaantha matthu Adhyaatma)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


 ವಿಶ್ವವಿಖ್ಯಾತರಾದ ಆಲ್ಬರ್ಟ್ ಐನ್ಸ್ಟೀನ್ ರವರ ಬಹಳ ಪ್ರಚಲಿತವಾದ ಮಾತೊಂದು ಹೀಗಿದೆ- "ಧರ್ಮವಿಲ್ಲದ ವಿಜ್ಞಾನ ಕುಂಟನಂತೆ; ವಿಜ್ಞಾನವಿಲ್ಲದ ಧರ್ಮ ಕುರುಡನಂತೆ". ವಿಜ್ಞಾನ ಹಾಗೂ ಧರ್ಮದ ಪರಸ್ಪರ ದೃಷ್ಟಿಕೋನದ ಅರಿವು ಅವಶ್ಯ. ನಾವೆಲ್ಲರೂ ಅಯಸ್ಕಾಂತದ ಬಗ್ಗೆ ಪ್ರಾಥಮಿಕ ಶಿಕ್ಷಣದ ಕಾಲದಿಂದಲೂ ಪರಿಚಿತರಾಗಿರುತ್ತೇವೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ ಮಾನವನಿಗೆ ಉಪಯೋಗವಾಗುವಂತಹ ಅಯಸ್ಕಾಂತ ಆಧಾರಿತ ಅನೇಕ ಉಪಕರಣಗಳು ಬಂದಿವೆ.  ಅಯಸ್ಕಾಂತ ಹಾಗೂ ಅಧ್ಯಾತ್ಮ ಇವೆರಡಕ್ಕೂ ಹೋಲಿಕೆ ಇದೆಯೆ? ಭಗವತ್ಸ್ಫೂರ್ತಿಗಾಗಿ ಪರಿಶೀಲಿಸೋಣ. 

ಶ್ರೀ ಆದಿಶಂಕರರು, ಮುಮುಕ್ಷುಗಳು ತುಂಬಾ ವಿರಳವೆನ್ನುತ್ತಾರೆ. ಕೆಲವೇ ಕೆಲವರು ಅಧ್ಯಾತ್ಮದ ಬಗ್ಗೆ ಒಲವನ್ನು ತೋರುತ್ತಾರೆ. ಇದು ಹೇಗೆಂದರೆ, ಕೆಲವೇ ಕೆಲವು ಲೋಹಗಳು ಮಾತ್ರ ಅಯಸ್ಕಾಂತಕ್ಕೆ ಆಕರ್ಷಿತವಾಗುತ್ತವೆ. ಬಹಳ ಪದಾರ್ಥಗಳು ಆಕರ್ಷಿತವಾಗದೆಯೇ ಇರುತ್ತವೆ. ಅಯಸ್ಕಾಂತಕ್ಕೆ ಆಕರ್ಷಿತವಾಗುವ ಲೋಹಗಳು ಅದರ ಸಂಪರ್ಕದಲ್ಲೇ ಇದ್ದರೆ ಕ್ರಮೇಣ ತಾವೂ ಅಯಸ್ಕಾಂತಗಳಾಗುತ್ತವೆ. ಮಹಾಪುರುಷರ ಆಶ್ರಯದಲ್ಲಿರುವ  ಮುಮುಕ್ಷುಗಳಿಗೆ ಸತ್ಸಂಗದ ಪ್ರಭಾವದಿಂದ ಜ್ಞಾನ ಮತ್ತು ಜೀವನ್ಮುಕ್ತಿಯೂ ಲಭಿಸುತ್ತವೆಯೆನ್ನುವ  ಆಚಾರ್ಯ ಶಂಕರರ ಮಾತು ಇಲ್ಲಿ ಸ್ಮರಣಾರ್ಹ.   

ಅಯಸ್ಕಾಂತದಲ್ಲಿ ಅಡಗಿರುವ ಶಕ್ತಿಯು ಬಾಹ್ಯವಾದ ಕಣ್ಣಿಗೆ ಗೋಚರವಾಗುವುದಿಲ್ಲ. ಹಾಗೆಂದಮಾತ್ರಕ್ಕೆ, ಅದರಲ್ಲಿ ಶಕ್ತಿಯಿಲ್ಲವೆಂದು ಹೇಳಲಾರೆವು. ಇದನ್ನು ಪ್ರಯೋಗದಿಂದ ನಿರ್ಣಯಿಸಬೇಕಾಗುತ್ತದೆ. "ಹೊರಗಣ್ಣಿನಿಂದ ನನ್ನನ್ನು ನೀನು ನೋಡಲಾರೆ, ನಿನಗೆ ದಿವ್ಯವಾದ ಒಳಗಣ್ಣು ನೀಡುತ್ತೇನೆ, ಅದರಿಂದ ನನ್ನ ಯೋಗವೈಭವವನ್ನು ನೋಡುವವನಾಗು" ಎನ್ನುವುದು ಗೀತಾಚಾರ್ಯನು ಅರ್ಜುನನಿಗೆ ಹೇಳುವ ಮಾತು. 

ಭಕ್ತರು ತಮ್ಮ ಪ್ರಾರ್ಥನೆಯಲ್ಲಿ ತಾವು ಸಂಸಾರವೆಂಬ ಸಾಗರದಲ್ಲಿದ್ದು ದಾರಿಕಾಣದೇ, "ದಾರಿಯ ತೋರೋ ಗೋಪಾಲ", " ದಾರಿ ತೋರೋ ವೈಕುಂಠಕ್ಕೆ" ಎಂದೆಲ್ಲಾ ಬೇಡುವರು. ಇಲ್ಲಿ ವಿಶ್ವದ ಸಾಗರದಲ್ಲಿ ಯಾನಕ್ಕೆ ಬೇಕಾದ ದಿಕ್ಕನ್ನು ತೋರಿಸುವ ರೀತಿಯಲ್ಲಿ ಬೇಡಿದ್ದಾರೆ. ಸಾಗರದ ಹಾಗು ವಿಮಾನಯಾನಗಳಲ್ಲಿ ದಿಕ್ಕನ್ನು ಸೂಚಿಸುವ ಉಪಕರಣ "ಕಾಂತೀಯ ದಿಕ್ಸೂಚಿ" ಈಗಲೂ ಬಳಕೆಯಲ್ಲಿದೆ. ಭೂಮಿಯೇ ದೊಡ್ಡ ಅಯಸ್ಕಾಂತದಂತೆ ವರ್ತಿಸುತ್ತದೆ.  ದಿಕ್ಸೂಚಿಯ ಅಯಸ್ಕಾಂತವು  ಸದಾ ಭೂಮಿಯ ಉತ್ತರದ ಕಡೆಗೆ ಅಭಿಮುಖವಾಗಿರುವುದರಿಂದ ಯಾನಕ್ಕೆ ಅತ್ಯಗತ್ಯವಾಗುತ್ತದೆ.       

ಅಯಸ್ಕಾಂತ ಆಧಾರಿತ ಅತಿವೇಗದ ರೈಲುಗಳು ಕೆಲವು ದೇಶಗಳಲ್ಲಿವೆ. ಇಲ್ಲಿ ರೈಲು, ಭೂಮಿಯಲ್ಲಿರುವ ಹಳಿಯಿಂದ ಕೇವಲ ೧೫ಮಿ.ಮಿ. ಮೇಲೆ ಗಾಳಿಯಲ್ಲಿರುತ್ತದೆ. ರೈಲು ಭೂಮಿಗೆ ಅತಿಸಮೀಪದಲ್ಲಿದ್ದೂ ಸ್ಪರ್ಶಮಾಡದೆ ಭೌತಿಕ ಘರ್ಷಣೆಯಿಲ್ಲದೆ ಚಲಿಸುತ್ತವೆ. ಇದನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡೋಣ. ನಿಯಮಿತ ಕರ್ಮಗಳನ್ನು ಅದರ ಫಲಾಪೇಕ್ಷೆಗೆ ಅಂಟಿಕೊಳ್ಳದೆ, ಘರ್ಷಣೆ, ಪಾಪದ ಸೋಂಕಿಲ್ಲದೆ 'ಭಗವದರ್ಪಿತ ' ಎಂಬ ಮನಸ್ಸಿನಿಂದ ದಕ್ಷತೆಯಿಂದ ಮಾಡಬೇಕು. ಆಗ ತಾವರೆ ಎಲೆಯ ಮೇಲಿನ ನೀರು ಅದಕ್ಕೆ ಅಂಟದಿರುವಂತೆ, ನಿರ್ಲಿಪ್ತವಾದ ಜೀವನ ನಡೆಸಿದಂತಾಗುತ್ತದೆ. 

ಅಯಸ್ಕಾಂತೀಯ ದಿಕ್ಸೂಚಿಯು ಸದಾ ಉತ್ತರದ ದಿಕ್ಕನ್ನೇ ಅನುಸರಿಸುತ್ತದೆ. ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯ- ಸೂರ್ಯಕಾಂತಿ ಹೂವು ಸೂರ್ಯನಿಗೆ ಸದಾ ಅಭಿಮುಖವಾಗಿರುತ್ತದೆ, ವಿಮುಖವಾಗಿ ಇರುವುದಿಲ್ಲ. ಹಾಗೆಯೇ ನಮ್ಮ ಆತ್ಮವೂ, ಕರಣಗಳೂ ಭಗವದಭಿಮುಖವಾಗಿ ಇರಲಿ.

ಸೂಚನೆ: 3/03/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

Thursday, February 10, 2022

ನಮ್ಮೊಳಗಿನ ಬೆಳಕನ್ನು ಮರೆಯದಿರೋಣ (Nammolagina Belakannu Mareyadirona)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಕೇನೋಪನಿಷತ್ತಿನ ಒಂದು ಆಖ್ಯಾಯಿಕೆ ಹೀಗಿದೆ- ಒಮ್ಮೆ ದೇವತೆಗಳಿಗೆ ಮತ್ತು ಅಸುರರಿಗೆ ನಡೆದ ಯುದ್ಧದಲ್ಲಿ ಪರಬ್ರಹ್ಮನು ದೇವತೆಗಳಿಗೆ ಜಯವನ್ನು ದೊರಕಿಸಿಕೊಟ್ಟನು. ವಿಜಯವನ್ನು ಹೊಂದಿದ ದೇವತೆಗಳು ಮಹಿಮಾನ್ವಿತರಾದರು  ಮತ್ತು ಆ ಮಹಿಮೆಯೆಲ್ಲವೂ ತಮಗೇ ಸೇರಿದ್ದು ಎಂಬ ಅಭಿಮಾನವನ್ನು ತಾಳಿದರು. ಹೀಗಿದ್ದಾಗ,  ಒಮ್ಮೆ ಆಕಾಶದಲ್ಲಿ, ಅವರೆಂದೂ ಕಾಣದ ಯಕ್ಷನೊಬ್ಬನ ದರ್ಶನವಾಯಿತು. ಯಾರು ಈ ಯಕ್ಷ ಎಂಬ ಪ್ರಶ್ನೆ ಏಳಲಾಗಿ, ಪ್ರಮುಖ ದೇವತೆಗಳಲ್ಲೊಬ್ಬನಾದ ಅಗ್ನಿದೇವನನ್ನು ಯಕ್ಷನ ಪರಿಚಯವನ್ನು ಪಡೆದುಬರಲು ಕಳುಹಿಸಲಾಯಿತು. ಅಗ್ನಿಯು ಆ ಯಕ್ಷನ ಮುಂದೆ ನಿಂತು ಅವನ ತೇಜಸ್ಸಿನ ಪ್ರಭಾವದಿಂದ ಯಾವ ಮಾತೂ ಹೊರಡದೇ ಹಾಗೆಯೇ ನಿಂತನು. ಆಗ ಆ ಯಕ್ಷನೇ ಅಗ್ನಿಯನ್ನು ಕುರಿತು-ಯಾರು ನೀನು? ನಿನ್ನ ಪರಾಕ್ರಮವೇನು? ಎಂದು ಕೇಳಿದನು. ಆಗ ಅಗ್ನಿಯು-"ನಾನು ಅಗ್ನಿ. ಲೋಕದಲ್ಲಿರುವ ಯಾವುದೇ ವಸ್ತುವನ್ನಾದರೂ ನನ್ನ ಬಲದಿಂದ ದಹಿಸಬಲ್ಲೆ ಎಂದು ತನ್ನ ಪರಾಕ್ರಮವನ್ನು ಹೇಳಿಕೊಂಡನು. ಆಗ ಯಕ್ಷನು-ಹಾಗಾದರೆ ಈ ಹುಲ್ಲುಕಡ್ಡಿಯನ್ನು ದಹಿಸು ಎಂದನು. ಎಷ್ಟೇ ಪ್ರಯತ್ನಿಸಿದರೂ ಅಗ್ನಿಗೆ ಆ ಹುಲ್ಲುಕಡ್ಡಿಯನ್ನು ಸ್ವಲ್ಪವೂ ದಹಿಸಲಾಗಲಿಲ್ಲ. ಅವನು ನಾಚಿಕೆಯಿಂದ ಹಿಂತಿರುಗಿದನು. ನಂತರ ವಾಯುವಿನ ಸರದಿ. ಯಕ್ಷನು ಅದೇ ಪ್ರಶ್ನೆಯನ್ನು ವಾಯುದೇವನಿಗೂ ಕೇಳಿದನು. ಆಗ ವಾಯುವು ತನ್ನ ಪರಿಚಯವನ್ನು ಹೀಗೆ ಹೇಳಿಕೊಂಡನು-"ನಾನು ವಾಯು, ಜಗತ್ತಿನ ಎಲ್ಲವನ್ನೂ ನನ್ನ ವೇಗದಿಂದ ಸ್ಥಾನಪಲ್ಲಟ ಮಾಡಬಲ್ಲೆ. ಪುನಃ ಯಕ್ಷನು ಅದೇ ಹುಲ್ಲುಕಡ್ಡಿಯನ್ನು ತೋರಿಸಿ ಇದನ್ನು ನಿನ್ನ ಪರಾಕ್ರಮದಿಂದ ಹಾರಿಸು ನೋಡೋಣ ಎಂದನು. ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿದರೂ ಆ ಹುಲ್ಲುಕಡ್ಡಿಯನ್ನು ಅಲ್ಲಾಡಿಸಲೂ ವಾಯುವಿನಿಂದ ಸಾಧ್ಯವಾಗಲಿಲ್ಲ. ಅವನೂ ನಾಚಿ ಹಿಂತಿರುಗಿದನು. ಆಗ ಇಂದ್ರ ದೇವನೇ ಆ ಯಕ್ಷನಲ್ಲಿಗೆ ಬಂದಾಗ ಯಕ್ಷನು ಅದೃಶ್ಯನಾದನು. ಇಂದ್ರನಿಗೆ ಆಶ್ಚರ್ಯವಾದರೂ ಅಲ್ಲೇ ನಿಂತು ಧ್ಯಾನಿಸಿದ. ಆಗ ಆ ಯಕ್ಷನ ಜಾಗದಲ್ಲಿ ಹೇಮವತಿಯಾದ, ಶಂಕರಾರ್ಧ ಶರೀರಿಣಿಯಾದ ಉಮಾದೇವಿಯು ಕಾಣಿಸಿಕೊಂಡಳು. ಇಂದ್ರನು ಅವಳಿಗೆ ಶಿರಸಾ ನಮಿಸಿ ಆ ಯಕ್ಷನು ಯಾರೆಂದು ಕೇಳುತ್ತಾನೆ. ಆಗ ಜಗದಂಬೆಯು ಹೇಳುತ್ತಾಳೆ- ಆ ಯಕ್ಷನು ಪರಬ್ರಹ್ಮನೇ. ನಿಮ್ಮೆಲ್ಲರ ಮಿಥ್ಯಾಭಿಮಾನವನ್ನು ದೂರಮಾಡಲು ಯಕ್ಷರೂಪದಲ್ಲಿ ಬಂದನು. ಎಲ್ಲರ, ಎಲ್ಲದರ ಹಿಂದಿನ ಪ್ರೇರಕ ಶಕ್ತಿ ಆ ಭಗವಂತನೇ. ಅವನ ಕಾರಣದಿಂದಲೇ ನೀವು ಜಯಗಳಿಸಿದಿರಿ. ಅದನ್ನು ಮರೆತು ನಿಮ್ಮದೇ ಜಯವೆಂದು ಮಿಥ್ಯಾಭಿಮಾನ ತೋರಿದಿರಿ. ಅದರಿಂದಲೇ ನಿಮ್ಮನ್ನು ಸರಿದಾರಿಗೆ ತರಲು ಅವನು ನಿಮಗೆ ಪರೀಕ್ಷೆಗಳನ್ನು ಒಡ್ದಬೇಕಾಯಿತು ಎಂದಳು. ದೇವತೆಗಳೆಲ್ಲರಿಗೂ ತಮ್ಮ ತಪ್ಪಿನ ಅರಿವಾಗಿ ಭಗವಂತನಿಗೆ ತಲೆಬಾಗಿದರು.

ಭಗವಂತನ ಶಕ್ತಿಯಿಂದಲೇ ಸೃಷ್ಟಿಯೆಲ್ಲವೂ ನಡೆಯುತ್ತಿದೆ ಎಂಬುದನ್ನು ನಿರೂಪಿಸುವ ಸುಂದರ ಆಖ್ಯಾಯಿಕೆ ಇದು. ಮಿಥ್ಯಾಭಿಮಾನ ದಾರಿತಪ್ಪಿಸುತ್ತದೆ. ನಾನಲ್ಲದುದನ್ನು ನಾನು ಎಂದು ಭಾವಿಸುವಂತಾಗುತ್ತದೆ. ಹಾಗಾದಾಗ ಸತ್ಯದ ದಾರಿ ದುರ್ಗಮವಾಗುತ್ತದೆ. ದೇವತೆಗಳಿಗೆ ಈ ಶಿಕ್ಷಣ ಕೊಡದಿದ್ದರೆ ಅಂತಹ ದುರಭಿಮಾನವನ್ನು ಬೆಳೆಸಿಕೊಂಡು ಅವರೂ ಅಸುರರಾಗುತ್ತಾರೆ ಎಂದೇ, ಅವರ ಮೇಲಿನ ಅನುಗ್ರಹದಿಂದಲೇ, ಭಗವಂತ ಹೀಗೆ ಪಾಠ ಕಲಿಸಿದನು. ಇದು ದೇವತೆಗಳ ನೆಪದಲ್ಲಿ ನಮ್ಮೆಲ್ಲರಿಗೂ ಪಾಠವಾಗಿದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಇಂತಹ ಎಷ್ಟೋ ಮಿಥ್ಯಾಭಿಮಾನದ ಉದಾಹರಣೆಗಳು ಸಿಗುತ್ತವೆ. ಎಲ್ಲದರ ಹಿಂದಿನ ಭಗವಂತನ ನಿಜವಾದ ಶಕ್ತಿಯನ್ನು, ಹಿರಿಮೆಯನ್ನು ಮರೆತು ನಮ್ಮ ಅಭಿಮಾನವನ್ನೇ ಮೆರೆಯುತ್ತೇವೆ. ಇದನ್ನೇ ಯಮನು ನಚಿಕೇತನಿಗೆ ಉಪದೇಶ ಮಾಡುತ್ತಾನೆ-ನ ತತ್ರ ಸೂರ್ಯೋಭಾತಿ ನ ಚಂದ್ರ ತಾರಕಂ, ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿ: ತಮೇವ ಭಾಂತಂ ಅನುಭಾತಿ ಸರ್ವಂ, ತಸ್ಯ ಭಾಸಾ ಸರ್ವಮಿದಂ ವಿಭಾಂತಿ||- ಎಂಬಂತೆ ಸೂರ್ಯ,ಚಂದ್ರ, ತಾರೆಗಳು,ವಿದ್ಯುತ್ತು,ಅಗ್ನಿ, ಇವು ಎಲ್ಲವೂ ಪರಬ್ರಹ್ಮನಿಂದಲೇ  ಬೆಳಕನ್ನು ಪಡೆದು ಬೆಳಗುತ್ತಿವೆ ಎಂದು ಮೂಲ ಬೆಳಕಾದ ಪರಬ್ರಹ್ಮನೆಡೆಗೆ ಕೈದೋರುತ್ತಾನೆ. ಭಗವಂತನ ಸ್ವರೂಪವನ್ನು ಮನಗಾಣಿಸುವ ಉಪನಿಷತ್ತಿನ ಶೈಲಿ ಅತ್ಯಂತ ಮಾರ್ಮಿಕ, ರಮಣೀಯ, ಸಹಜ-ಸುಂದರ. ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳ ಈ ಮಾತು ಸ್ಮರಣೀಯ-"ದಿವಿಯಲ್ಲಿರುವ ಸೂರ್ಯನು ಬಹಳ ದೂರದಲ್ಲಿದ್ದರೂ,ಭುವಿಯಲ್ಲಿರುವ ಪುಷ್ಪಗಳು ಅವನಿಂದ ಅರಳುತ್ತವೆ. ಅಂತೆಯೇ ಈ ಪುಷ್ಪಗಳು ಸೂರ್ಯನು ದೂರದಲ್ಲಿದ್ದಾನೆಂದು ಯೋಚಿಸಬೇಕಾಗಿಲ್ಲ. ಅಂತೆಯೇ ಜ್ಞಾನಸೂರ್ಯನ ಕರಸ್ಪರ್ಶದಿಂದ ಜೀವಕುಸುಮಗಳು ಎಷ್ಟೇ ದೂರದಲ್ಲಿದ್ದರೂ ಅರಳುವುದು ಸತ್ಯಸಿದ್ಧವಾಗಿದೆ." ಎಂದೇ ಜೀವನದ ಹಿಂಬದಿಯಲ್ಲಿ ಬೆಳಗುತ್ತಿರುವ ಪರಬ್ರಹ್ಮನ ಮಹಿಮೆಯನ್ನು ನಾವೆಲ್ಲಾ  ಅರಿಯುವಂತಾಗಲಿ.

ಸೂಚನೆ:  10/02/2022 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.

Thursday, December 23, 2021

ಬಾಹ್ಯಾಕಾಶ ಮತ್ತು ದಹರಾಕಾಶ(Baahyaakaasha Matthu Daharaakaasha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


ನವಂಬರ್ ೧೧, ೨೦೨೧ ವಿಜ್ಞಾನ ಮತ್ತು ತಂತ್ರಜ್ಞಾನಕ್ಷೇತ್ರದ ಚರಿತ್ರಾರ್ಹದಿನ. ಅಂದು ಭಾರತಮೂಲದ ರಾಜಾಚಾರಿರವರ ನೇತೃತ್ವದ ನಾಲ್ಕು ಸದಸ್ಯರ ಅಂತರಿಕ್ಷಯಾತ್ರಿಗಳು ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಎಂಬ ದ್ವೀಪದ ಉಡಾವಣೆ ಕ್ಷೇತ್ರದಿಂದ ಬಾಹ್ಯಾಕಾಶಕ್ಕೆ ಖಾಸಗಿ ಎನ್ಡೂರನ್ಸ್ ಬಹುತೇಕ ಉಪಯೋಗಿಸಬಲ್ಲ ರಾಕೆಟ್ ಹಾಗೂ ಕ್ಷಿಪಣಿಯ ಮೂಲಕ ಹಾರಿ, ಕೇವಲ ೨೨ ಗಂಟೆಯಲ್ಲಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದ ನೌಕೆಯೊಂದಿಗೆ ತಮ್ಮ ಕ್ಷಿಪಣಿಯನ್ನು ಸೇರಿಸಿ ಆ ನೌಕೆಯೊಳಗೆ ಪ್ರವೇಶಿಸಿದರು. ಎನ್ದ್ಯೂರನ್ಸ್ ಕ್ಷಿಪಣಿಯ ರಾಕೆಟ್ ಈಗಾಗಲೆ ಭೂಮಿಗೆ ಕ್ಷೇಮವಾಗಿ ಹಿಂದಿರುಗಿದೆ.  .    

ಅಮೇರಿಕಾದೇಶದ ಪ್ರಥಮ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನ್ ಎಂಬಾತ ತನ್ನ ಯಾತ್ರೆಯ ಬಗ್ಗೆ "ಈ ಸೃಷ್ಟಿಯ ನೋಟವನ್ನು ನೋಡಿ , ಭಗವಂತನಲ್ಲಿ ನಂಬಿಕೆಯಿಲ್ಲದಿರುವುದು ಅಸಾಧ್ಯ" ಎಂದಿದ್ದಾರೆ. ಈಗ ೭೭ ವರ್ಷಗಳಾಗಿರುವ ಗ್ಲೆನ್ನ್ ಅವರು "ಅಂತರಿಕ್ಷದ ಅನುಭವ ನನಗೆ ದೇವರಲ್ಲಿ ನಂಬಿಕೆಯನ್ನು ಬಲಪಡಿಸಿದೆ" ಎಂದಿದ್ದಾರೆ. ಅನೇಕ ಅಂತರಿಕ್ಷಯಾತ್ರಿಗಳು ಈ ತರಹದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

ಅಂತರಿಕ್ಷ ಯಾತ್ರೆ ಹಾಗೂ ಭಾರತೀಯ ಮಹರ್ಷಿಗಳ ಆಧ್ಯಾತ್ಮಿಕಯಾತ್ರೆ ಹೋಲಿಸುವುದು ಸ್ವಾರಸ್ಯಕರವಾಗಿದೆ. ಬಾಹ್ಯಾಕಾಶದ ನೌಕೆ ಭೂಮಿಯ ಗುರುತ್ವಾಕರ್ಷಣೆಯಿಂದ ದೂರಸರಿಯಬೇಕಾದರೆ, ಅದರ ವೇಗ ಗಂಟೆಗೆ ೪೦ ಸಾವಿರ ಕಿ.ಮಿ. ದಾಟಬೇಕಾಗುತ್ತದೆ. ಮಾನವನು ತ್ರಿಗುಣಗಳೆಂಬ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಟ್ಟು ಸಂಸಾರದಲ್ಲಿದ್ದಾನೆ. ಆತ ದೈವವನ್ನು ಕಂಡ ಹಾಗೂ ತೋರಿಸುವ ಗುರುಗಳ ಉಪದೇಶವೆಂಬ ನೌಕೆಯ ಸಹಾಯದಿಂದ ತ್ರಿಗುಣಾತೀತನಾಗಬೇಕಾಗುತ್ತದೆ. 

ಅಂತರಿಕ್ಷಯಾತ್ರಿಗಳು ಯಾತ್ರೆಯಲ್ಲಿ ನಿರ್ವಾತ, ಉಷ್ಣ ಮತ್ತು ಒತ್ತಡಗಳ ಸಮಸ್ಯೆಯಿಂದ ರಕ್ಷಣೆ ಪಡೆಯಬೇಕಾಗುತ್ತದೆ. ಹಾಗೆಯೇ, ಆಧ್ಯಾತ್ಮಿಕ ಸಾಧನೆಯೆಂಬುದು ಕತ್ತಿಯ ಅಲಗಿನ ಮೇಲೆ ನಡೆಯುವಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಗುರುಗಳ ಅನುಗ್ರಹದಿಂದ ಸಾಧನೆಯ ಪಥದಲ್ಲಿ ರಕ್ಷಣೆ ಪಡೆಯುವುದು ಅತ್ಯಾವಶ್ಯಕವಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯನ್ನು ಅಂತರಿಕ್ಷಯಾತ್ರಿಗಳು ಅನುಭವಿಸುತ್ತಾರೆ. ಹಾಗೆಯೇ ಮುಂದುವರಿದ ಸಾಧಕರು, ಭವಬಂಧನ ಕಳಚಿಕೊಂಡ ಅನುಭವ ಪಡೆಯತ್ತಾರೆ. ಭೌತಿಕ ಅಂತರಿಕ್ಷ ಯಾತ್ರಿಗಳಿಗೆ ಶಾರೀರಿಕ ಬದಲಾವಣೆಗಳಾದಂತೆ, ಸಮಾಧಿ ಅಥವಾ ತುರೀಯ ಸ್ಥಿತಿಯಲ್ಲಿ ಯೋಗಿಗಳ ಶರೀರ ಕಟ್ಟಿಗೆಯಂತಾಗುವುದು, ಇತ್ಯಾದಿ ಅನುಭಗಳು ಉಂಟಾಗುತ್ತವೆ ಎಂಬುದು ಅನುಭವಿಗಳ ಮಾತು.    

ಶ್ರೀರಂಗಗುರುಗಳು ಉಪನಿಷದ್ವಾಣಿಯನ್ನು ಸ್ಮರಿಸಿಕೊಂಡಿರುವುದು ಉಲ್ಲೇಖಾರ್ಹ- "ನಿಮ್ಮ ಹೃದಯ ಒಂದು ಗೇಣಿರಬಹುದು. ಆದರೆ ಅಲ್ಲಿ ಅಂತರ್ಯಾಮಿಯಾಗಿದ್ದರೂ ವಾಸ್ತವವಾಗಿ ನನ್ನ ಪ್ರಭುವು ಭೂರ್ಭುವಸ್ಸುವರ್ಲೋಕಗಳನ್ನು ಮೀರಿ ನಿಂತಿದ್ದಾನೆ. ಅವನು ಅತ್ಯಂತ ಹತ್ತಿರದಲ್ಲಿಯೂ ಇದ್ದಾನೆ, ಅತಿದೂರದಲ್ಲಿಯೂ ಇದ್ದಾನೆ. "  ಉಪನಿಷತ್ತಿನಲ್ಲಿ ತಿಳಿಸಿರುವ ಹಾಗೆ, ಶರೀರವು ಬ್ರಹ್ಮಪುರಿ; ಹೃದಯವೊಂದು ಕಮಲ; ಅದರೊಳಗೊಂದು ಆಕಾಶ; ಆ ಆಕಾಶದೊಳಗಿರುವ ಸಚ್ಚಿದಾನಂದ ಪರವಸ್ತುವನ್ನು ಕಾಣವುದೇ ಜೀವನದ ಪರಮಧ್ಯೇಯ. ಆ ಆಕಾಶವನ್ನೇ ದಹರಾಕಾಶವೆನ್ನುತ್ತಾರೆ. ಬ್ರಹ್ಮಾಂಡವು ಭೌತಿಕ ಕ್ಷೇತ್ರವಾದರೆ, ಅಂತರಂಗದ ಅನುಭವವಾಗುವುದು ಪಿಂಡಾಂಡವೆನ್ನುವ ಕ್ಷೇತ್ರದಲ್ಲಿ. 

ಎಂಡ್ಯೂರನ್ಸ್ ಅಂತರಿಕ್ಷಯಾತ್ರಿಗಳು ಏಪ್ರಿಲ್ ೨೦೨೨ ರಲ್ಲಿ ಭೂಮಿಗೆ ಹಿಂದಿರುಗಿ ಸಹಜ ಜೀವನಕ್ಕೆ ಮರಳಿ ಬರುತ್ತಾರೆ. ಹಾಗೆಯೇ, ಋಷಿಗಳು ತಮ್ಮ ತಪಸ್ಸಿನಿಂದ ಹೊರಬಂದು ತಮ್ಮ ಇಹಜೀವನವನ್ನು "ಜೀವನ್ಮುಕ್ತರಾಗಿ" ನಡೆಸುತ್ತಾರೆ. 

ಗಗನಯಾತ್ರಿಯು ಬಾಹ್ಯಾಕಾಶಕ್ಕೆ ಹಾರುವುದನ್ನು ನೋಡಿ ನಾವು ದಹರಾಕಾಶಕ್ಕೆ ಹಾರುವ ಸ್ಫೂರ್ತಿಯನ್ನು ಪಡೆಯೋಣ. 


ಸೂಚನೆ: 23/12/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.