Thursday, February 16, 2023

ಅರಿತರೆ ವಿದುರ ನೀತಿಯ ಸಾರ - ಸಾಗಬಹುದು ಶೋಕದಿಂದ ದೂರ. (Aritare Vidura Nitiya Sara - Sagabahudu Sokadinda Dura.)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮನುಷ್ಯನಲ್ಲಿರುವ ಅಜ್ಞಾನ ಹಾಗೂ ಮೂಢತನವೇ ಅವರುಗಳನ್ನು ಶೋಕಸಾಗರದಲ್ಲಿ ಮುಳುಗಿಸುವಂತಹ ಪ್ರಮುಖ ಸಾಧನಗಳು. ಅದರ ನಿವಾರಣೆಗೆ ಸದ್ವಿಚಾರಗಳ ಶ್ರವಣ ಹಾಗೂ ಅದರ ಪರಿಪಾಲನೆಯೇ ಉಪಾಯ. ಏಕೆಂದರೆ ಜೀವನದ ವ್ಯಾಪ್ತಿ ಎನ್ನುವುದು ಸಾಮಾನ್ಯರ ದೃಷ್ಟಿಗೆ ಗೋಚರವಾಗುವಷ್ಟು ಮಾತ್ರ ಸೀಮಿತವಾಗಿಲ್ಲ. ಸ್ಥೂಲ,ಸೂಕ್ಷ್ಮ ಮತ್ತು ಪರಾ ಎಂಬ ಮೂರೂ ದೃಷ್ಟಿಯನ್ನು ಹೊಂದಿದ ಜ್ಞಾನಿಗಳ ವಾಣಿಗೆ ಶೋಕ ಮೋಹಗಳನ್ನು ದೂರ ಮಾಡುವ ಶಕ್ತಿ ಇರುತ್ತದೆ. ಅರ್ಜುನನೂ ಒಂದು ರೀತಿಯ ಅಜ್ಞಾನಕ್ಕೊಳಗಾಗಿ ಯುದ್ಧಮಾಡಲು ಹಿಂಜರಿದಾಗ ಭಗವದ್ವಾಣಿಯು ಅವನನ್ನು ಎಬ್ಬಿಸಿ, ಶೋಕ ಮೋಹಗಳಿಂದ ದೂರ ಮಾಡಿ ಕಾರ್ಯ ಪ್ರವೃತ್ತನನ್ನಾಗಿ ಮಾಡಿತು.


ಮಹಾಮೇಧಾವಿಯಾದಂತಹ ವಿದುರನು, ಶೋಕ ಮೋಹಗಳಿಂದ ಆವೃತನಾಗಿ, ನಿದ್ರಾಹೀನನಾಗಿ, ದುಃಖಿಸುತ್ತಿರುವ ಧೃತರಾಷ್ಟ್ರನ  ಕ್ಷೇಮಕ್ಕಾಗಿ ಅನೇಕ ಹಿತನುಡಿಗಳನ್ನು ಹೇಳುತ್ತಾನೆ. ಅವುಗಳು ಇಂದಿಗೂ ನಿತ್ಯ ನೂತನವಾಗಿದ್ದು ಲೋಕದಲ್ಲಿರುವ ಅಜ್ಞಾನವನ್ನು ದೂರ ಮಾಡಲು ಸಹಾಯಕವಾಗಿವೆ.

ಮನುಷ್ಯನು ನಿತ್ಯವೂ ಕೃತಜ್ಞತೆಯಿಂದ ಭಾವಿಸಿ ಪೂಜಿಸಬೇಕಾದವರ ಬಗ್ಗೆ ವಿದುರನು ಹೀಗೆ ವಿವರಿಸುತ್ತಾನೆ.


ಪಂಚಾಗ್ನಯೋ ಮನುಷ್ಯೇಣ ಪರಿಚರ್ಯಾ: ಪ್ರಯತ್ನತ: l

ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ಭರತರ್ಷಭ ll

ಐದು ಅಗ್ನಿಗಳನ್ನು ಮಾನವನು ಪ್ರಯತ್ನಪೂರ್ವಕವಾಗಿ ಪೂಜಿಸಬೇಕು. ಅವರೆಂದರೆ - ತಂದೆ, ತಾಯಿ, ಯಜ್ಞೇಶ್ವರ ಆತ್ಮ ಮತ್ತು ಗುರು.


ನಮ್ಮ ಸಂಸ್ಕೃತಿಯಲ್ಲಿ ತಂದೆ, ತಾಯಿ ಹಾಗೂ ಗುರುವಿಗೆ ಅತ್ಯಂತ ಮಹತ್ವಪೂರ್ಣವಾದ ಸ್ಥಾನವಿದೆ. ತಂದೆ, ತಾಯಿಗಳು ನಮಗೆ ಅತ್ಯಮೂಲ್ಯವಾದ ಶರೀರವನ್ನು ಕೊಟ್ಟು ಅದರ ಪಾಲನೆ ಪೋಷಣೆ ಮಾಡಿರುತ್ತಾರೆ. ನಾವು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಸಾಧನೆ ಮಾಡುವುದಕ್ಕೆ ಈ ಮಾನವ ಶರೀರವೇ ಅತ್ಯವಶ್ಯಕವಾದ ಸಾಧನವಾಗಿದೆ. ಅಂತಹ ಶರೀರವನ್ನು ದಯಪಾಲಿಸಿ ಅದನ್ನು ಸರ್ವ ರೀತಿಯಿಂದಲೂ ಪೋಷಿಸಿದ ತಂದೆ ತಾಯಿಗಳನ್ನು ಪೂಜ್ಯ ಭಾವನೆಯಿಂದ ನೋಡುವುದು,ಅವರ ಸೇವೆಯನ್ನು ಮಾಡುವುದು ಮಕ್ಕಳ ಆದ್ಯ ಕರ್ತವ್ಯ. ಲೋಕಕ್ಕೆಲ್ಲಾ ತಂದೆ ತಾಯಿಗಳಾದಂತಹ ಭಗವಂತ ಭಗವತಿಯರ ಒಂದು ಶಕ್ತಿ ಅವರಲ್ಲಿಯೂ ಬಂದಿರುವುದರಿಂದ ಅವರು ಸರ್ವದಾ ಪೂಜನೀಯರು.

 ಇನ್ನು ಗುರುವಿನ ಮಹಿಮೆಯು ಹೇಳತೀರದು. ನಮ್ಮ ಶಾಸ್ತ್ರಗ್ರಂಥಗಳೆಲ್ಲವೂ ಬಹುವಿಧವಾಗಿ ಗುರುವಿನ ಮಹಿಮೆಯನ್ನು ಕೊಂಡಾಡಿವೆ. ಗುರುವು ಸೃಷ್ಟಿರಹಸ್ಯವನ್ನು ಬಲ್ಲವನಾದ್ದರಿಂದ ಅವನನ್ನು ಬ್ರಹ್ಮನೆಂದೂ, ಅದರ ರಕ್ಷಣೆಯ ಮರ್ಮವನ್ನು ಅರಿತವನಾದ್ದರಿಂದ ವಿಷ್ಣುವೆಂದೂ, ಲಯದ ಗುಟ್ಟನ್ನು ತಿಳಿದವನಾದ್ದರಿಂದ ಶಿವನೆಂದೂ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂರನ್ನೂ ಮೀರಿದ ಪರಬ್ರಹ್ಮ ಸ್ವರೂಪವನ್ನೂ ಅವನು ಅರಿತು ಅದರಲ್ಲಿ ಒಂದಾಗಿರುವುದರಿಂದಲೇ  ಅವನು ತನ್ನನ್ನು ಆಶ್ರಯಿಸಿದ ಶಿಷ್ಯನ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಶಿಷ್ಯನ ಹೃದಯದಲ್ಲಿ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಲು ಸಮರ್ಥನಾಗಿರುತ್ತಾನೆ. " ಗುರುವು ಸೃಷ್ಟಿನ್ಯಾಸ, ಸ್ಥಿತಿನ್ಯಾಸ, ಲಯನ್ಯಾಸಗಳ ರಹಸ್ಯವನ್ನರಿತಿರಬೇಕು. ಅದಕ್ಕೇ ಅವನು ಬ್ರಹ್ಮ, ವಿಷ್ಣು,ಮಹೇಶ್ವರ ಇವರಿಗೆಲ್ಲಾ ಮೂಲವಾಗಿರುವ ಸನಾತನಸತ್ಯದಲ್ಲಿ ತನ್ಮಯನಾಗಿರುವುದರಿಂದ ಅವನು ಪರಬ್ರಹ್ಮವೂ ಆಗಿದ್ದಾನೆ." ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಪರಬ್ರಹ್ಮ ಸ್ವರೂಪಿಯಾದ ಸದ್ಗುರುವನ್ನು ಆಶ್ರಯಿಸಿ ನಿತ್ಯವೂ ಆರಾಧಿಸಿದಾಗ ಜೀವನದ ಅಂಧಕಾರ ದೂರವಾಗಲು ಸಾಧ್ಯ.


 ಇನ್ನು ಅಗ್ನಿ, ದೇವತೆಗಳನ್ನು ಯಜ್ಞ ಯಾಗಾದಿಗಳ ಮೂಲಕ ಆರಾಧಿಸುವಾಗ ಅಗ್ನಿಯನ್ನು ವಾಹಕವಾಗಿಟ್ಟುಕೊಂಡು ಹವಿಸ್ಸನ್ನು (ಅಗ್ನಿಗೆ ಸಮರ್ಪಿಸುವ ಪದಾರ್ಥ) ಸಮರ್ಪಿಸಿದಾಗ ಆಯಾಯ ದೇವತೆಗಳಿಗೆ ಅದನ್ನು ಅಗ್ನಿಯು ತಲುಪಿಸುವುದರಿಂದ ಅಗ್ನಿಗೆ ಹವ್ಯವಾಹನವೆಂಬ ಹೆಸರು. ಇದು ಅಗ್ನಿಯ ಹೊರರೂಪವಾದರೆ, ಒಳ ಭೂಮಿಕೆಗೆ ಸೇರಿದ ಅಗ್ನಿ ಒಂದು ಉಂಟು. ಆ ಅಗ್ನಿಯನ್ನೇ ಜ್ಞಾನಿಗಳು "ಅಗ್ರo ನಯತಿ ಇತಿ ಅಗ್ನಿ:" ಅಗ್ರವಾದ ಜ್ಞಾನದ ಸ್ಥಾನಕ್ಕೆ ಯಾವುದು ಕರೆದುಕೊಂಡು ಹೋಗುತ್ತದೆಯೋ ಅಂತಹ ಚಿದಾನಂದ ಜ್ಯೋತಿಗೆ ಅಗ್ನಿ ಎನ್ನುವ ಹೆಸರುಂಟು. ಹೊರಗಡೆಯ ಅಗ್ನಿ  ನಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನೆಂಬ ಅಗ್ನಿಯ ಪ್ರತೀಕವಾಗಿದೆ. ಹಾಗಾಗಿ ಅಂತಹ ಯಜ್ಞೇಶ್ವರನು ಸದಾ ಪೂಜನೀಯ. ಅಂತೆಯೇ ನಮ್ಮ ಇರುವಿಕೆಗೆ ಮೂಲ ಕಾರಣನಾಗಿರುವ ಪರಮಾತ್ಮನೆಂಬ ಅಗ್ನಿಯನ್ನು ನಿತ್ಯವೂ ಉಪಾಸನೆ ಮಾಡಿದಾಗ ಅಂಧಕಾರದ ನಿವೃತ್ತಿ, ಶೋಕಸಾಗರದಿಂದ ಬಿಡುಗಡೆ.

ಯದಿ ಸಂತಂ ಸೇವತಿ ಯಾದ್ಯಸಂತಂ ತಪಸ್ವಿನಂ ಯದಿ ವಾ ಸ್ತೇನಮೇವ l

ವಾಸೋ ಯಥಾ ರಂಗವಶಂ ಪ್ರಯಾತಿ ತಥಾ ಸ ತೇಷಾo ವಶಮಭ್ಯುಪೈತಿ ll


ದಾರಕ್ಕೆ ಯಾವ ಬಣ್ಣ ಹಾಕಲಾಗುವುದೋ, ಬಟ್ಟೆಯೂ ಅದೇ ಬಣ್ಣದ್ದಾಗಿರುತ್ತದೆ. ಅದರಂತೆಯೇ ಸತ್ಪುರುಷ, ದುರ್ಜನ, ತಪಸ್ವಿ, ಕಳ್ಳ - ಇವರಲ್ಲಿ ಯಾರನ್ನು ಯಾರು ಸೇವಿಸುತ್ತಾರೋ ಅವರು ಅವರಂತೆಯೇ ಆಗುತ್ತಾರೆ- ಅಂದರೆ ಅವರ ಪ್ರಭಾವಕ್ಕೆ ಒಳಗಾಗುತ್ತಾರೆ.

ಇಲ್ಲಿ ನಾವು ಎಂತಹವರ ಸಹವಾಸ ಹಾಗೂ ಸೇವೆಗಳನ್ನು ಮಾಡಿದಾಗ ನಮ್ಮ ಜೀವನ ಯಾವ ರೀತಿಯಾಗಿ ರೂಪಿತವಾಗುತ್ತದೆ ಎಂಬುದನ್ನು ವಿದುರನು ಉದಾಹರಣೆಯ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾನೆ.


 ನಾವು ನಿರಂತರವಾಗಿ ಯಾರ ಸಾನ್ನಿಧ್ಯದಲ್ಲಿರುತ್ತೇವೆಯೋ ಅವರಲ್ಲಿರುವ ಗುಣ ದೋಷಗಳು ನಮ್ಮಲ್ಲಿಯೂ ಊರ್ಜಿತವಾಗುತ್ತವೆ.  ಹಾಗಾಗಿ ಸದ್ಗುಣ ಸಂಪನ್ನರ ಸಹವಾಸ ಹಾಗೂ ಸೇವೆ ಕಲ್ಯಾಣಪ್ರದ. ಸೇವೆ ಎಂದರೆ ಅವರ ಕೆಲಸಗಳನ್ನು ಮಾಡುವುದು ಎಂದು ಮಾತ್ರವಲ್ಲ;  ಅವರಲ್ಲಿರುವ ಗುಣಗಳನ್ನು ನಮ್ಮೊಳಗೆ ತೆಗೆದುಕೊಳ್ಳುವುದು ಎಂದರ್ಥ.

ದುರ್ಯೋಧನನು ಬಾಲ್ಯದಿಂದಲೂ ನಿರಂತರವಾಗಿ ದುರ್ಗುಣ, ದುರಾಚಾರಗಳಿಂದ ಯುಕ್ತನಾದಂತಹ ಶಕುನಿಯ ಸಾನ್ನಿಧ್ಯದಲ್ಲಿ ಬೆಳೆದ ಕಾರಣ ಅವನಲ್ಲಿಯೂ ದುರ್ಗುಣಗಳು ಗಟ್ಟಿಯಾಗಿ ಬೇರೂರಲ್ಪಟ್ಟವು. ಪಾಂಡವರ ಮೇಲಿನ ಅವನ ದುರಾಚಾರಕ್ಕೆ ಶಕುನಿಯ ಪ್ರಚೋದನೆಯೇ ಪ್ರಧಾನವಾಗಿ ಕಾರಣವಾಯಿತು. ಪಾಂಡವರು ವನವಾಸದ ಸಂದರ್ಭದಲ್ಲಿಯೂ ಸತ್ಪುರುಷರ ಸಂಗ ಹಾಗೂ ಸೇವೆಯಲ್ಲಿ ನಿರತರಾದ್ದರಿಂದ ಅವರ ಮನಸ್ಸಿನಲ್ಲಿ ಶಾಂತಿ ನೆಲೆಯೂರಿತ್ತು. 'ಸಜ್ಜನರ ಸಂಗ ಹೆಜ್ಜೇನು ಸವಿದಂತೆ' ಎಂಬಂತೆ ಮನೋ ಬುದ್ಧಿಗಳಿಗೆ ಅಮೃತಧಾರೆಯನ್ನು ಸುರಿಸುವ ಶಕ್ತಿ ಇರುವಂತಹ ಸಜ್ಜನರ ಸಾಂಗತ್ಯವನ್ನೇ ಬಯಸಿದಾಗ  ಶಾಂತಿ ಹಾಗೂ ನೆಮ್ಮದಿಗಳಿಂದ ಕೂಡಿದ ಬಾಳಾಟವನ್ನು ನಡೆಸಬಹುದು ಎಂಬುದು ವಿದುರನ ಈ ಮಾತಿನ ಸಾರವಾಗಿದೆ.

ಸೂಚನೆ:  16/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.