Sunday, February 26, 2023

ವ್ಯಾಸ ವೀಕ್ಷಿತ - 27 ದ್ರುಪದ-ಗರ್ವ-ಭಂಗ (Vyaasa Vikshita - 27 Drupada-Garva-Bhanga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಬಾಲ್ಯದ ಒಡನಾಡಿಯು ದೀರ್ಘಕಾಲಾನಂತರ ಎದುರಿಗೆ ಬಂದಾಗ ಅದೇನೋ ಒಂದು ವಿಶೇಷ ನಲಿವು ಉಕ್ಕುವುದು ಲೋಕಸಾಮಾನ್ಯ. ಆದರೆ ಇಲ್ಲಿ ಹಾಗಾಗಲಿಲ್ಲ. ಅದರ ವಿರುದ್ಧವೇ ಆಯಿತು!

ದ್ರೋಣರಿಗೆ ಸಾಧಾರಣವಾದ ಸೌಜನ್ಯವನ್ನೂ ತೋರಿಸದಾದ, ದ್ರುಪದ. "ನನ್ನೊಂದಿಗಿನ ಸ್ನೇಹಕ್ಕೆ ನೀನು ಸರ್ವಥಾ ಅನರ್ಹ" - ಎಂಬ ರೀತಿಯಲ್ಲಿ ಗರ್ವದಿಂದ ವರ್ತಿಸಿದವನ ಮೇಲೆ ಯಾರಿಗೆ ತಾನೆ ಕೋಪವುಕ್ಕದು? ಲೋಕಸಹಜವಾದ ನಿರೀಕ್ಷೆಗಳು ಹುಸಿಯಾದಾಗ ಮನಸ್ಸಿಗೆ ಘಾತವಾಗದೆ?

ಮರುಮಾತೇ ಆಡಲಿಲ್ಲ, ಜಾಣ ದ್ರೋಣರು. ತಮಗೆ ಅವಮಾನ ಮಾಡಿದ ಪಾಂಚಾಲರಾಜನಿಗೆ ಪ್ರತಿಯಾಗಿ ಮುಂದೇನು ಮಾಡಬೇಕು? - ಎಂಬುದನ್ನು ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡರು. ಕುರುವಂಶದ ಮುಖ್ಯರ ನಗರವಾದ "ನಾಗಸಾಹ್ವಯ"ಕ್ಕೆ (ಎಂದರೆ ಹಸ್ತಿನಾವತಿಗೆ) ಬಂದರು.

ದ್ರೋಣರ ಸಾಧನೆಯ ಅರಿವು, ಅಲ್ಲಿದ್ದ ಭೀಷ್ಮರಿಗಿತ್ತು. ತಮ್ಮ ಮೊಮ್ಮಕ್ಕಳನ್ನು ಅವರಲ್ಲಿಗೆ ಒಯ್ದು, ನಾನಾವಿಧವಾದ ವಸುಗಳನ್ನು (ಎಂದರೆ ಸಂಪತ್ತನ್ನು) ಅವರು ದ್ರೋಣರಿಗಿತ್ತರು. ತಮ್ಮ ಮೊಮ್ಮಕ್ಕಳು ವಿದ್ಯೆಯನ್ನು ಕಲಿಯುವಂತಾಗಲೆಂದು, ದ್ರೋಣರಲ್ಲಿ ಶಿಷ್ಯರನ್ನಾಗಿ ಅವರನ್ನು ಒಪ್ಪಿಸಿದರು. (ದ್ರೋಣರಾದರೂ ಸಿರಿವಂತರೇನಾಗಿರಲಿಲ್ಲವಷ್ಟೆ; ಹೀಗಾಗಿ ಅವರಿಗೆ ಧನಾಪೇಕ್ಷೆಯು ಸಹಜವೇ. ಆದರೆ ಅವರಲ್ಲಿ ಹಿರಿದಾದ ವಿದ್ಯೆಯಿತ್ತು. ಬೆಳೆಯುವ ರಾಜಕುಮಾರರಿಗೆ ಅತ್ಯವಶ್ಯವಾದ ವಿದ್ಯೆಯದು. ರಾಜೋಚಿತವಾದ ವಿದ್ಯೆಗಾಗಿ ಪುಷ್ಕಳ-ಧನ-ಸಮರ್ಪಣದ ಔಚಿತ್ಯವನ್ನು ಭೀಷ್ಮರು ಚೆನ್ನಾಗಿಯೇ ಬಲ್ಲವರಾಗಿದ್ದರು. ಶ್ರೇಷ್ಠವಿದ್ಯೆಗಾಗಿ ಶ್ರೇಷ್ಠಧನಾರ್ಪಣೆಯು ಯುಕ್ತವೇ ತಾನೆ?)

ದ್ರೋಣರದ್ದೂ ನೇರವಾದ ವ್ಯವಹಾರವೇ ಸರಿ. 'ಆಚಾರ್ಯ-ವೇತನ'ದ (ವಿದ್ಯಾ-ಗುರುವಿಗೆ ಕೊಡುವ ಸಂಬಳ/ದಕ್ಷಿಣೆ) ಬಗ್ಗೆ ಆರಂಭದಲ್ಲೇ ಪ್ರಸ್ತಾವಮಾಡಿಬಿಟ್ಟರು. ಯುಧಿಷ್ಠಿರ ಮೊದಲಾದವರಿಗೆ ಹೀಗೆ ಹೇಳಿದರು: "ನೀವು ಕೃತಾಸ್ತ್ರರಾದ ಮೇಲೆ (ಎಂದರೆ ಅಸ್ತ್ರವಿದ್ಯೆಯನ್ನು ಚೆನ್ನಾಗಿ ಸಾಧಿಸಿದ ಬಳಿಕ) ನನಗೆ ಕೊಡಬೇಕಾದದ್ದನ್ನು ಈಗಲೇ ಹೇಳುತ್ತೇನೆ. ನೀವು ನಿಜವಾಗಿ ಹೇಳಿ, ಅದನ್ನು ಮಾಡಿಕೊಡುತ್ತೇವೆಂದು" - ಎಂದರು. "ಹಾಗೆಯೇ ಆಗಲಿ, ನಾವು ನಡೆಸಿಕೊಡುತ್ತೇವೆ" - ಎಂದು ಅರ್ಜುನಾದಿಗಳು ಹೇಳಿದರು.

ಪಾಂಡವರೆಲ್ಲರೂ ಕಾಲಕ್ರಮದಲ್ಲಿ ಕೃತಾಸ್ತ್ರರಾದರು. ಅವರ ಸಂಕಲ್ಪವೂ ದೃಢವಾಯಿತು. ಆಗ ದ್ರೋಣರು ಹೇಳಿದರು, ತಮಗೆ ಸಲ್ಲಬೇಕಿದ್ದ ವೇತನವನ್ನು ಪಡೆಯುವುದಕ್ಕಾಗಿ: "ಛತ್ರವತಿಯಲ್ಲಿ (ಎಂದರೆ ಆಹಿಚ್ಛತ್ರ-ನಗರಿಯಲ್ಲಿ) ಪೃಷತ-ಪುತ್ರನಾದ ದ್ರುಪದನೆಂಬ ರಾಜನಿರುವನು. ಅವನ ರಾಜ್ಯವನ್ನು ಅವನಿಂದ ಸೆಳೆದುಕೊಂಡು, ಅದನ್ನು ನೀವು ನನಗೆ ಬೇಗನೆ ಒಪ್ಪಿಸಬೇಕು" - ಎಂಬುದಾಗಿ.

ಆಗ ಐದೂ ಮಂದಿ ಪಾಂಡುಪುತ್ರರು ಯುದ್ಧದಲ್ಲಿ ದ್ರುಪದ ನೊಂದಿಗೆ ಕಾದು ಅವನನ್ನು ಸೋಲಿಸಿದರು. ದ್ರುಪದನನ್ನೂ ಆತನ ಮಂತ್ರಿಯನ್ನೂ ಬಂಧಿಸಿದರು, ದ್ರೋಣರಿಗೆ ತಂದೊಪ್ಪಿಸಿದರು.

ದ್ರೋಣರು ದ್ರುಪದನನ್ನು ಕುರಿತು ಹೀಗೆ ಹೇಳಿದರು.

"ರಾಜನೇ, ನಿನ್ನೊಂದಿಗೆ ಸಖ್ಯವನ್ನು ಮತ್ತೆ ಯಾಚಿಸುವೆ. ರಾಜನಲ್ಲದವನು ರಾಜನೊಂದಿಗೆ ಮಿತ್ರನಾಗಲು ಸಾಧ್ಯವಿಲ್ಲ - ಎಂಬುದಾಗಲ್ಲವೆ ನೀ ಹೇಳಿದುದು? ಆ ಕಾರಣಕ್ಕಾಗಿಯೇ ನಾನು ನಿನ್ನೊಂದಿಗೆ ರಾಜ್ಯದ ವಿಷಯದಲ್ಲಿ ಸೆಣಸಬೇಕಾಯಿತು, ಯಾಜ್ಞಸೇನನೇ!

ಇದೋ ಈಗ ರಾಜ್ಯವು ಹೀಗೆ ವಿಭಾಗವಾಗಬಹುದು: ಈ ಭಾಗೀರಥೀನದಿಯ ದಕ್ಷಿಣತೀರದಲ್ಲಿ ನೀನು ರಾಜನಾಗಿರುವೆಯಂತೆ, ಹಾಗೂ ಉತ್ತರತೀರದಲ್ಲಿ ನಾನು ರಾಜನಾಗಿರುವೆನು."

ಹೀಗೆ ಧೀಮಂತನಾದ ಭಾರದ್ವಾಜನು (ಎಂದರೆ ಭರದ್ವಾಜಪುತ್ರನಾದ ದ್ರೋಣನು) ಪಾಂಚಾಲ್ಯನಿಗೆ (ಎಂದರೆ ಪಂಚಾಲದೇಶದ ಅರಸನಾದ ದ್ರುಪದನಿಗೆ) ಹೇಳಿದನು.

ಸೂಚನೆ : 26/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.