Tuesday, February 14, 2023

ಯಕ್ಷಪ್ರಶ್ನೆ - 25 (Yaksha Prashne - 25)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – 24 ಭೂಮಿಗಿಂತಲೂ ಭಾರವಾದುದು ಯಾವುದು?

ಉತ್ತರ - ತಾಯಿ

ಪ್ರತಿಯೊಬ್ಬನ ಜೀವನದಲ್ಲಿ ಎರಡು ಅತ್ಯಂತ ಪ್ರಧಾನವಾದುವುಗಳು. ಅವು ಯಾವುವು? ಎಂದರೆ ಜನ್ಮ ಕೊಟ್ಟ  ತಾಯಿ ಮತ್ತು ಜನ್ಮವನ್ನು ಎಲ್ಲಿ ಪಡೆದಿದ್ದೇವೋ ಆ ನಾಡು-ಭೂಮಿ. ಈ ಎರಡರ ನಡುವಿನ ವ್ಯತ್ಯಾಸವನ್ನು ಅಥವಾ ಭೇದವನ್ನು ಗುರುತಿಸುವ ಯಕ್ಷನ ಪ್ರಶ್ನೆಯಿದು. ವಸ್ತುತಃ ಎರಡೂ ಜೀವನಕ್ಕೆ ಅಥವಾ ಜೀವಭಾವಕ್ಕೆ ತುಂಬಾ ಮುಖ್ಯವೇ. ತಾಯಿ ಇಲ್ಲದೇ ಜನ್ಮ ಅಸಾಧ್ಯ ಹೇಗೋ, ತಾಯ್ನಾಡು ಇಲ್ಲದಿದ್ದರೂ ಜನ್ಮ ಸಾಧ್ಯವಿಲ್ಲ. ಪ್ರಶ್ನೆಯ ಸ್ವಾರಸ್ಯವೇ ಇದು. ಎರಡು ಪ್ರಧಾನವಾದಾಗಲೂ ಅಲ್ಲಿಯೇ ಪ್ರಧಾತಮವಾದುದನ್ನು ಗುರುತಿಸುವುದು ಮತ್ತು ಅದನ್ನು ಸಮರ್ಥಿಸುವುದು ಜಾಣತನವೇ. ಇಂತಹ ಜಾಣತನದ ಉತ್ತರವನ್ನು ಇಲ್ಲಿ ಧರ್ಮರಾಜನು ಮಾತ್ರವೇ ನೀಡಬಲ್ಲವನಾದನು. ಅದು ಏಕೆ? ಮತ್ತು ಹೇಗೆ? 

ಅತ್ಯಂತ ಗುರು- ಭಾರವಾದುದು ಯಾವುದು? ಎಂಬುದು ಪ್ರಶ್ನೆ. ತಾಯಿಗಿಂತಲೂ ಭೂತಾಯಿ ಭಾರವೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ತಾಯಿಯ  ಭಾರದ ಅಳತೆಯನ್ನು ಎಷ್ಟು ಕಿಲೋ ಗ್ರಾಂ ತೂಕ ಬರುತ್ತದೆ ಎಂದು ಅಳತೆಮಾಡಬಹುದು. ಆದರೆ ಭೂಮಿಯು ಅಳತೆಗೆ ಮೀರಿದ್ದು. ನಿಜವೆಂದರೆ ಭೂತಾಯಿಯೇ ಅಧಿಕಭಾರವಾದುದು. ಆದರೆ ಇಲ್ಲಿ ತಾಯಿಯೇ ಅಧಿಕಭಾರವಾದುದು ಎಂಬ ಉತ್ತರವಿದೆ. ಅಂದರೆ ಇಲ್ಲಿ ಭಾರವೆಂಬುದು ಅಳತೆಗೆ ಸಿಗುವುದಲ್ಲ. ಯಾವುದು ಪ್ರಮಾಣಕ್ಕೆ ಅತೀತವಾದುದೋ ಅದುವೇ ನಿಜವಾದ ಭಾರ. ಭೌತಿಕವಾದ ಭಾರ ಅಥವಾ ಗುರುತ್ವವಾದುದು ಎಂಬ ಅರ್ಥವಲ್ಲ. ನಮ್ಮ ಜೀವನಕ್ಕೆ ಯಾವುದರಿಂದ ಗೌರವ ಬರುತ್ತದೋ ಅದುವೇ ಗುರುವಾದುದು. ಈ ಅರ್ಥದಲ್ಲಿ "ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ" ಎಂಬ ಕನ್ನಡದ ಗಾದೆ ನೆನಪಾಗುತ್ತದೆ. ಅಲ್ಲದೇ ಇದೇ ಅರ್ಥವನ್ನು ಕೊಡುವ ವೇದವಾಕ್ಯವೂ ಕೂಡ ಇದೆ. 'ಮಾತೃಭ್ಯೋ ನಮಃ'  ಎಂಬುದಾಗಿ ತಾಯಿಗೆ ಮೊದಲು ನಮಸ್ಕಾರದ ಪದ್ದತಿ ಇದೆ. ಅಲ್ಲದೇ ಈ ಭೂಮಿಗೆ ಬರುವ ಮೊದಲು ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಹೊತ್ತು, ಅನಂತರ ಹೆತ್ತವಳು ಇದೇ ತಾಯಿಯಲ್ಲವೇ. ಅದಾದ ಮೇಲೂ ಎಷ್ಟೋ ದಿನಗಳವರೆಗೆ ಭೂಮಿಯ ಸ್ಪರ್ಶವೇ ಆಗದಂತೆ ನಮ್ಮನ್ನು ತನ್ನ ಮಡಿಲಲ್ಲಿ ಇಟ್ಟು, ತನ್ನ ನಿದ್ರಾ, ಆಹಾರ, ಶ್ರಮ ಎಲ್ಲವನ್ನೂ ಪರಿಗಣೆಸದೆ ಸಾಕಿದವಳು ಈ ಮಹಾಮಾತೆಯಲ್ಲವೆ. ಇಂತಹ ಮಹಾಮಾತೆಗೆ ಅದೆಷ್ಟು ಮರ್ಯಾದೆಯನ್ನು ಕೊಡಬಹುದು? ಅದೆಷ್ಟು ಗೌರವವನ್ನು ಕೊಡಲು ನಮ್ಮಿಂದ ಸಾಧ್ಯ. ಹೇಗೆ ತಾನೆ ಅವಳ ಗುರುತ್ವವನ್ನು ನಾವು ಅರಿಯಲು ಸಾಧ್ಯ? ಎಷ್ಟೆಂದರೂ ಅವಳಿಗಿಂದ ಈ ಸೃಷ್ಟಿಯಲ್ಲಿ ಮಿಗಿಲಾದವರು ಯಾರು ತಾನೆ ಇರಲು ಸಾಧ್ಯ?   ಏಕೆಂದರೆ ಈ ಎಲ್ಲ ವಿಷಯಗಳಿಗೆ ಶಿಖರಪ್ರಾಯವಾದುದು "ಭಗವಂತನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತು ಬೆಳೆಸುವವಳೇ ತಾಯಿ" ಎಂಬ ಶ್ರೀರಂಗಮಹಾಗುರುಗಳ ಮಾತು. 

ಸೂಚನೆ : 12/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.