ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – 25 ಆಕಾಶಕ್ಕಿಂತಲೂ ಎತ್ತರವಾದುದು ಯಾವುದು?
ಉತ್ತರ - ತಂದೆ
ಈ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಪ್ರಾಶಸ್ತ್ಯವಿದೆ. ಅದಕ್ಕೇ ಮೀಸಲಾದ ಕರ್ತವ್ಯವಿದೆ. ಹಾಗಾಗಿ ಯಾವುದೂ ಶ್ರೇಷ್ಠವೆಂದಲ್ಲ, ಯಾವುದೂ ಕನಿಷ್ಠವೆಂದಲ್ಲ. ಯಾವುದೇ ಜೀವಿಯೂ ಈ ಜಗತ್ತನ್ನು ಕಾಣಲು ಎರಡು ಅತಿಮುಖ್ಯವಾದ ಪಾತ್ರವುಂಟು. ಅವೇ ತಂದೆ ಮತ್ತು ತಾಯಿ. ಇವರಿಬ್ಬರಲ್ಲಿ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಿರ್ವಹಣೆಯ ಹೊಣೆಗಾರಿಕೆ ಇದ್ದೇ ಇದೆ. ತಾಯಿಯಾದವಳು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು ತನ್ನ ಕರ್ತವ್ಯವನ್ನು ನಿರ್ವಹಿಸುವಳು. ಸೃಷ್ಟಿಯಲ್ಲಿ ಸಂತತಿಯು ನಿರ್ವಿಕಾರವಾಗಿ ಮುಂದುವರಿಯಲು ತಾಯಿಯ ಪಾತ್ರ ಅತಿವಿಶಿಷ್ಟವಾದುದು. ಆದರೆ ತಂದೆಯ ಪಾತ್ರ ಪುರುಷನ ಸ್ಥಾನದ್ದು. ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. "ದ್ವಿವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ। ಉತಮಃ ಪುರುಷಃ ತ್ವನ್ಯಃ ಪರಮಾತ್ಮೇತ್ಯುದಾಹೃತಃ" ಎಂಬಂತೆ ಉತ್ತಮ ಪುರುಷನಿಗೆ ಪರಮಾತ್ಮಾ ಎಂದು ಕರೆಯಲಾಗಿದೆ. ಆ ಪರಮಪುರುಷನನ್ನು ಹೊತ್ತು ಅದೇ ಭಾವವು ಮುಂದಿನ ಸಂತತಿಯಲ್ಲಿ ಬೆಳೆಯಲು ಅತಿಮುಖ್ಯವಾದ ಪಾತ್ರ ತಂದೆಯದ್ದು. ಶ್ರೀರಂಗಮಹಾಗುರುಗಳು ಹೀಗೊಂದು ಮಾತನ್ನು ಹೇಳುತ್ತಿದ್ದರು- " ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ" ಎಂದು. ಯಾವನು ಜ್ಞಾನದ ಮೂಲವಾದ ಜ್ಞಾನಸ್ವರೂಪನಾದ ಭಗವಂತನನ್ನು ತನ್ನಲ್ಲಿ ಹೊತ್ತು ತನ್ನ ಮುಂದಿನ ಸಂತತಿಯು ಜ್ಞಾನಸಂತತಿಯಾಗಿ ಮುಂದುವರಿಯಬೇಕು ಎಂಬ ಆಶಯದಲ್ಲಿ ಈ ಸಂಸಾರದಲ್ಲಿ ಭಾಗಿಯಾಗುತ್ತಾನೋ ಅವನೇ ತಂದೆ.
"ದ್ಯೌಃ ಪಿತಾ ಪೃಥಿವೀ ಮಾತಾ" ಎಂದೂ, " ಮಾತಾ ಪೂರ್ವರೂಪಂ ಪಿತೋತ್ತರರೂಪಂ ಪ್ರಜಾಸಂಧಿಃ" ಎಂದು ವೇದಮಾತೆಯು ತಂದೆ ತಾಯಂದಿರ ಮಾತ್ರ ಈ ಸೃಷ್ಟಿಯಲ್ಲಿ ಯಾವ ರೀತಿಯಾಗಿದೆ ಎಂಬುದನ್ನು ತಿಳಿಸುತ್ತಾಳೆ. ಮಾನವ ತನ್ನ ಈ ಜೀವಿತವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ಶರೀರದ ಅವಶ್ಯಕತೆ ಇದೆ. ಒಂದು ಜೀವ ಉತ್ಪತ್ತಿಯಾಗಲು ಶುಕ್ರ ಮತ್ತು ಶೋಣಿತ ಇವೆರಡರ ಅವಶ್ಯಕತೆ ಇದೆ. ಇವುಗಳು ತಂದೆ ಮತ್ತು ತಾಯಿಯಿಂದ ಬರುವ ಧಾತುಗಳು ಎಂದು ಆಯುರ್ವೇದ ಸಾರುತ್ತದೆ. ಒಟ್ಟಾರೆ ಒಂದು ಶರೀರರವು ಉತ್ಪತ್ತಿಯಾಗಲು ತಂದೆ ಮತ್ತು ತಾಯಿಯ ಸ್ಥಾನ ಎಷ್ಟು ಮುಖ್ಯವಾಗಿದೆ ಎಂದು ತಿಳಿಯಬಹುದು. ಶರೀರದಲ್ಲೂ ಹೊರಕವಚ ಮತ್ತು ಆತ್ಮಾ ಎಂಬ ಎರಡು ಪ್ರಧಾನವಾದ ಭಾಗವಿದೆ. ಇಲ್ಲಿ ಹೊರಕವಚಕ್ಕೆ ಕಾರಣವಾದುದು ತಾಯಿಯಾದರೆ ಆತ್ಮಕ್ಕೆ-ಜೀವಭಾವಕ್ಕೆ ಕಾರಣವಾದುದು ತಂದೆ. ತಂದೆಯ ಇನ್ನೊಂದು ರೂಪವೇ ಪುತ್ರ. ತಂದೆಯ ಸೂಕ್ಷ್ಮರೂಪವು ತಾಯಿಯ ಗರ್ಭದ ಒಳಗೆ ಸೇರುತ್ತದೆ. ಅಲ್ಲಿಂದ ಮುಂದೆಕ್ಕೆ ಮಗುವಿನ ವಿಕಾಸವಾಗುತ್ತಾ ಸಾಗುತ್ತದೆ. "ಆತ್ಮಾ ವೈ ಪುತ್ರ ನಾಮಾಸಿ" ಎಂದು ಹೇಳುವಂತೆ ಪುತ್ರ ಎಂದರೆ ತಾನೇ-ಪತಿಯೇ ವೀರ್ಯರೂಪದಲ್ಲಿ ಪತ್ನಿಯ ಗರ್ಭವನ್ನು ಪ್ರವೇಶಿಸಿ ಜೀವರೂಪದಲ್ಲಿ ಹೊರಬಂದಿದ್ದು. ಆ ಪರಮಪುರುಷನ ವಿಸ್ತಾರವು ಈ ಶರೀರದಲ್ಲಿ ತಂದೆಯಿಂದಲೇ ಆಗುವಂತಹದ್ದು. ಆದ್ದರಿಂದ ತಂದೆಯ ಸ್ಥಾನ ಅತ್ಯಂತ ಎತ್ತರದಲ್ಲಿರುವಂತಹದ್ದು. ಪರಬ್ರಹ್ಮನ ಸ್ಥಾನವು ಮೇಲಕ್ಕೆ ತಾನೆ ಇರುವಂತಹದ್ದು! ಅಲ್ಲಿಂದಲೇ ವಿಭಾಗವಾಗಿ ಬಂದದ್ದು ಈ ಜೀವಭಾವ. ಸೂರ್ಯನಿಂದಲೇ ಬಂದ ಕಿರಣಗಳಂತೆ ಈ ಜಗತ್ತಿನಲ್ಲಿ ಎಲ್ಲ ಜೀವಗಳೂ ಪರಮಾತ್ಮನ ಅಂಶಗಳು. ಈ ಎಲ್ಲಾ ಕಾರಣಗಳಿಂದ ತಂದೆಯ ಸ್ಥಾನ ಅತ್ಯಂತ ಎತ್ತರದಲ್ಲಿರುವಂತಹದ್ದು. ಎಷ್ಟು ಎತ್ತರವೆಂದರೆ ಆಕಾಶಕ್ಕಿಂತಲೂ. ಅಂದರೆ ಆಕಾಶದ ಎತ್ತರವನ್ನು ಅಳಯಲು ಸಾಧ್ಯವೇ? ಅಂದರೆ ಅಸಾಧ್ಯವೇ!. ಈ ಆಕಾಶಕ್ಕೂ ಮೀರಿದ ಸ್ಥಾನವೇ ಪರಬ್ರಹ್ಮನ ಸ್ಥಾನ. ಇದೇ ತಂದೆಯ ಮೂಲಸ್ಥಾನ. ಅದು ಅತಿಎತ್ತರವಷೇ !.