ಲೇಖಕರು : ಭಾಷ್ಯಂ ರಾಮಚಂದ್ರಾಚಾರ್
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಕೃತಿಯ ಧೂಳನ್ನು ಅಶ್ವ ಒದರುವಂತೆ ಕೊಡವಿ, ವಿಧಿ - ನಿಷೇಧಗಳೆಂಬ ಕಟ್ಟಲೆಗಳನ್ನು ಮೀರಿ, ಕರ್ಮಬಂಧಗಳನ್ನು ದಾಟಿ ಬ್ರಹ್ಮದಲ್ಲಿಯೇ ನೆಲೆಸಿರುವರು. ಅವಧೂತರು - ಅವ - ಧೂತ. 'ಅ' ಅಂದರೆ 'ಅಕ್ಷರರೂಪವಾದ ಪರಂಬ್ರಹ್ಮ'; 'ವ' ಅಂದರೆ 'ವರೇಣ್ಯ ವಾಗಿರುವುದು - ಶ್ರೇಷ್ಠತಮವಾಗಿರುವುದು'; ಭಗವಂತನಂತೆ ತೇಜೋರೂಪಿಯಾಗಿರುವುದು; 'ಧೂತ' ಎಂದರೆ ಸಂಸಾರ ಬಂಧನಗಳನ್ನು ಅಶ್ವ ಧೂಳನ್ನು ಒದರುವಂತೆ ಒದರಿಹಾಕುವವರು.
ಒಮ್ಮೆ ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರು ಯದು ಮಹಾರಾಜರ ಆಸ್ಥಾನಕ್ಕೆ ಆಗಮಿಸುತ್ತಾರೆ. ಅಂತಸ್ತಿಗೆ ತಕ್ಕ ಮಧು -ಪರ್ಕ - ಆಸನಾದಿಗಳನ್ನು ಸಮರ್ಪಿಸಿದ ಯದುಮಹಾರಾಜ, ಅವರನ್ನು ಪ್ರಶ್ನಿಸುತ್ತಾನೆ "ಇಂದ್ರಿಯಗಳಿಗೆ ಸಂತೋಷವನ್ನುಂಟುಮಾಡುವ ಯಾವ ಪದಾರ್ಥಗಳೂ ತಮ್ಮಲ್ಲಿಲ್ಲದಿದ್ದರೂ, ತಾವು ಯಾವಾಗಲೂ ಸಂತೋಷವಾಗಿರುತ್ತೀರಿ. ತಾವು ಅತ್ಯಂತ ಬುದ್ಧಿಶಾಲಿಗಳು. ಇಷ್ಟು ತಿಳುವಳಿಕೆ ತಾವು ಹೇಗೆ ಗಳಿಸಿದಿರಿ?". ಅದಕ್ಕೆ ಉತ್ತರಿಸಿದ ದತ್ತಾತ್ರೇಯರು "ನನ್ನ ತಿಳುವಳಿಕೆಯೆನ್ನೆಲ್ಲಾ ನಾನು ಪ್ರಕೃತಿಯಲ್ಲಿನ ಇಪ್ಪತ್ತುನಾಲ್ಕು ಗುರುಗಳು (ಆಚಾರ್ಯರು) ಮತ್ತೊಂದರ (೨೪+೧) ಮೂಲಕ ಗಳಿಸಿದೆ" ಎಂದೆನ್ನುತ್ತಾರೆ.
ಈ ಇಪ್ಪತ್ತುನಾಲ್ಕು ಆಚಾರ್ಯರು ಯಾರೆಂದರೆ ಪೃಥಿವೀ, ನೀರು, ಅಗ್ನಿ, ವಾಯು, ಆಕಾಶ, ಚಂದ್ರಮ, ರವಿ, ಪಾರಿವಾಳ, ಹೆಬ್ಬಾವು, ಸಾಗರ, ಪತಂಗ, ಜೇನುಬಿಡಿಸುವವನು, ಜಿಂಕೆ, ಗಜ, ಜೇನುಹುಳು, ದುಂಬಿಗೆ ಆಹಾರವಾಗುವ ಹುಳು, ಹದ್ದು, ಮದುಮಗಳು, ಆಗತಾನೆ ಹುಟ್ಟಿದ ಮಗು, ಮೀನು, ಬಾಣವನ್ನು ಮಾಡುವನು, ಜೇಡರಹುಳು, ಭ್ರಮರಕೀಟ ,ಪಿಂಗಲಾ ಎನ್ನುವ ವೇಶ್ಯೆ, ಮತ್ತು ಇಪ್ಪತ್ತೈದನೆಯದು ಮಾನುಷ ದೇಹ.
ದತ್ತಾತ್ರೇಯರು ಇವುಗಳಿಂದ ಏನು ಪಾಠ ಕಲಿತರು ಎಂದು ಸಂಕ್ಷಿಪ್ತವಾಗಿ ನೋಡೋಣ.
ಭೂಮಾತೆ ಕ್ಷಮೆಗೆ ಆದರ್ಶ; ಅವಳಿಂದ ಕ್ಷಮೆ ಕಲಿತೆ. ನೀರು, ಗಂಗಾಜಲ ಸ್ವಚ್ಛತೆಗೆ ಪ್ರತೀಕ, ತಂಪು - ನಮ್ಮ ಮನಸ್ಸೂ ಸ್ವಚ್ಛವಾಗಿ, ತಂಪಾಗಿರಬೇಕು. ಅಗ್ನಿ ಎಲ್ಲವನ್ನೂ ದಹಿಸುತ್ತದೆ(ಪಾವಕ). ಅದರಿಂದ ಪಾಪಗಳನ್ನು ಸುಡುವುದನ್ನು ಕಲಿತೆ. ವಾಯುವು ದೇಹದ ಒಳಗಡೆ ಪ್ರಾಣಶಕ್ತಿಯಾಗಿಯೂ, ಹೊರಗಡೆ ಗಾಳಿಯಾಗಿಯೂ ಕೆಲಸ ಮಾಡುತ್ತದೆ. ಪ್ರಾಣವು ಏನನ್ನೂ ಅಪೇಕ್ಷೆ ಪಡದೆ ತನ್ನ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಹೊರಗಡೆ ಗಾಳಿಯು ಏನನ್ನೂ ಬಯಸದೆ ಸಂಚರಿಸುತ್ತಾ ಶುದ್ಧಿ ಮಾಡುತ್ತಿರುತ್ತದೆ (ಪವಮಾನ). ಪ್ರಾಣ - ಗಾಳಿಗಳು ನಿರ್ಲಿಪ್ತ. ಈ ನಿರ್ಲಿಪ್ತತೆಯನ್ನು ವಾಯುವಿನಿಂದ ಕಲಿತೆ. ಆಕಾಶವು ವ್ಯಾಪಿಸಿರುತ್ತದೆ. ಬ್ರಹ್ಮವೂ ವ್ಯಾಪಿಸಿರುತ್ತದೆ. ವ್ಯಾಪಿಸಿದ್ದರೂ ಎರಡಕ್ಕೂ ಯಾವುದರೊಡನೆಯೂ ಸಂಗವಿಲ್ಲ. ಈ ಅಸಂಗತ್ವವನ್ನು ಆಕಾಶದಿಂದ ಕಲಿತೆ. ಚಂದ್ರ ಆಹ್ಲಾದವನ್ನುಂಟುಮಾಡುತ್ತಾನೆ. ಈ ಗುಣವನ್ನು ಚಂದ್ರಮನಿಂದ ಕಲಿತೆ. ಸೂರ್ಯ ಪ್ರಕಾಶ ರೂಪಿ, ಪ್ರಪಂಚಕ್ಕೆ ಚೈತನ್ಯ ದಾಯಿ, ಆಕಾಶದಲ್ಲಿರುವವನು; ಎಲ್ಲೆಲ್ಲೂ ಪ್ರತಿಬಿಂಬಿಸುವನಾಗಿದ್ದರೂ ಆತ ಒಬ್ಬನೇ. ಜ್ಞಾನ ಸೂರ್ಯನೂ ಅಷ್ಟೇ, ವಿಶ್ವಕ್ಕೆಲ್ಲಾ ಚೈತನ್ಯದಾಯಿ, ದಹರಾಕಾಶದಲ್ಲಿ ಪ್ರಕಾಶಿಸುವವನು, ಸೃಷ್ಟಿಯಲ್ಲಿ ಎಲ್ಲೆಲ್ಲೂ ಪ್ರಕಾಶಿಸುತ್ತಿದ್ದರೂ ಆತ ಒಬ್ಬನೇ. ಪರಮಹಂಸ ಸೂರ್ಯರೂ ಹೀಗೆಯೇ ಇರಬೇಕು ಎಂಬ ಪಾಠ ಅಂತರಂಗ ಸೂರ್ಯವನ್ನು ಪ್ರತಿಬಿಂಬಿಸುವ ಹೊರ ಸೂರ್ಯನಿಂದ ಕಲಿತೆ.
ಪಾರಿವಾಳಗಳು ಮನುಷ್ಯರಂತೆ ಸಂಸಾರಸುಖದಲ್ಲಿ ಸಂತೋಷವಾಗಿರುತ್ತವೆ. ಹೀಗೆ ಮೈಮರೆತಿರುವಾಗ ಮರಿಗಳು ಬೇಡನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಬಿಡಿಸಲು ಬರುವ ತಾಯಿ ತಾನೂ ಅದರಲ್ಲಿ ಬಂಧಿತವಾಗುತ್ತದೆ. ಹಾಗೆಯೇ ಗೃಹಸ್ಥನಾದವನು ಸಂಸಾರಬಂಧನದಲ್ಲಿ ಸಿಲುಕುತ್ತಾನೆ. ಹೀಗಾಗಬಾರದೆಂಬ ಪಾಠ ಪಾರಿವಾಳದಿಂದ ಕಲಿತೆ. ಹೆಬ್ಬಾವು, ಆಹಾರಕ್ಕೋಸ್ಕರ ಕಷ್ಟ ಪಡುವುದಿಲ್ಲ. ಇದ್ದಲ್ಲಿಯೇ ಪ್ರಾರಬ್ಧವಶದಿಂದ ಸಿಕ್ಕುವ ಯಾವ ಪ್ರಾಣಿಯನ್ನಾದರೂ ನುಂಗಿ ತೃಪ್ತಿಪಟ್ಟುಕೊಳ್ಳುತ್ತದೆ. ಅನಾಯಾಸವಾಗಿ ಏನು ಪ್ರಾಪ್ತವಾಗುತ್ತದೋ ಅದರಿಂದ ಸಂತೋಷವಾಗಿರಬೇಕೆನ್ನುವ ಪಾಠವನ್ನು ಹೆಬ್ಬಾವಿನಿಂದ ಕಲಿತೆ. ಸಮುದ್ರ ಎಷ್ಟೆಲ್ಲ ನದಿಗಳು ಸೇರಿದರೂ, ಆಳವಾಗಿ,ಗಂಭೀರವಾಗಿ, ಅಂತರಂಗವನ್ನು ತೋರಗೊಡದೆ ಇರುತ್ತದೆ. ಅಂತಹ ಗಾಂಭೀರ್ಯವನ್ನು, ಮನಸ್ಸಿನ ಆಳವನ್ನು ಸಮುದ್ರದಿಂದ ಕಲಿತೆ.
ಪತಂಗ, ಪ್ರಕಾಶದಿಂದ ಆಕರ್ಷಿತವಾಗಿ ಬೆಂಕಿಗೆ ಬೀಳುತ್ತದೆ. ಸಂಸಾರದ ಆಕರ್ಷಣೆಗೆ ವಶವಾಗಬಾರದೆಂದು ಪತಂಗದಿಂದ ಕಲಿತೆ. ಕೂಡಿಟ್ಟ ಸಂಪತ್ತು ಜೇನಿನ ಗೂಡಿನಂತೆ ಕದಿಯಲ್ಪಡುತ್ತದೆಂದು ಜೇನು ಬಿಡಿಸುವವನನ್ನು ನೋಡಿ ಕಲಿತೆ. ಗ್ರಾಮ್ಯ ಗೀತೆಯಲ್ಲಿನ ಆಸಕ್ತಿಯಿಂದ ಜಿಂಕೆ ಬಲೆಯಲ್ಲಿ ಸಿಕ್ಕುತ್ತದೆ. ಇಂದ್ರಿಯ ಸೆಳೆತಕ್ಕೆ ಸಿಗಬಾರದೆಂದು ಜಿಂಕೆಯಿಂದ ಕಲಿತೆ. ಹೆಣ್ಣಾನೆಯ ಆಸೆಗೆ ಸಿಲುಕಿ ಗಂಡಾನೆ ಹಳ್ಳಕ್ಕೆ ಬೀಳುತ್ತದೆ. ಸಂಗದ ಆಸೆಗೆ ಸಿಕ್ಕಿ ಪತನಕ್ಕೆ ಒಳಗಾಗಬಾರದೆಂದು ಆನೆಯಿಂದ ಕಲಿತೆ. ಜೇನುಹುಳು ಹೂವಿಗೆ ಸ್ವಲ್ಪವೂ ನೋವಾಗದಂತೆ ಮಧುವನ್ನು ಹೀರುತ್ತದೆ. ಮಧುಕರವೃತ್ತಿಯಿಂದ ಭಿಕ್ಷೆ ಬೇಡುತ್ತಿರುವಾಗ ಗೃಹಸ್ಥರಿಗೆ ಸ್ವಲ್ಪವೂ ತೊಂದರೆಯಾಗಬಾರದೆಂಬ ಪಾಠವನ್ನು ಮಧುಕರನಿಂದ(ಜೇನಿನಿಂದ) ಕಲಿತೆ.
ಕುರರ ಪಕ್ಷಿ - ಒಂದು ಪ್ರಕಾರದ ಹದ್ದು- ಮಾಂಸವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು, ಇನ್ಯಾವುದೋ ಬಲಿಷ್ಠಪಕ್ಷಿ ಕಿತ್ತು ತಿನ್ನುತ್ತದೆ ಎಂಬ ಭಯದಲ್ಲಿ ನೆಮ್ಮದಿಯಿಲ್ಲದೆಯೇ ಹಾರಾಡುತ್ತಿರುತ್ತದೆ. ವಸ್ತುಸಂಗ್ರಹ ಮಾಡಿ, ಅದರ ರಕ್ಷಣೆಯಲ್ಲಿಯೇ ಆಸಕ್ತನಾಗಿ, ಭಯದಿಂದ ಜೀವನ ನಡೆಸಬಾರದೆಂಬ ಪಾಠವನ್ನು ಕುರರದಿಂದ ಕಲಿತೆ. ಮದುವೆಗೆ ಸಿದ್ಧಳಾದ ಕುಮಾರಿ, ಬಂದ ಅತಿಥಿಗಳಿಗೆ ತಾನು ಕುಟ್ಟುತ್ತಿರುವ ಭತ್ತದ ಶಬ್ದ, ಬಳೆಗಳ ಘರ್ಷಣೆಗಳಿಂದ ತಿಳಿಯಬಾರದೆಂದು ಒಂದೊಂದೇ ಬಳೆಯನ್ನು ತೆಗೆದಿಡುತ್ತಾಳೆ. ಒಂದೇ ಬಳೆಯಾದಾಗ ಶಬ್ದ ಕೇಳಿಸುವುದಿಲ್ಲ . ಎರಡಿಲ್ಲದ ಸ್ಥಿತಿ ಇದ್ದಾಗ, ದ್ವೈತವಿಲ್ಲದಿದ್ದಾಗ, ನೆಮ್ಮದಿಯೆಂದು ಇದರಿಂದ ಕಲಿತೆ. ಮಗು ತಾಯಿಯ ಗರ್ಭದಲ್ಲಿದ್ದಾಗ ತನ್ನ ಎಂಟನೆಯ ಮಾಸದಲ್ಲಿ ಪರಂಜ್ಯೋತಿಯನ್ನನುಭವಿಸಿ ಆನಂದದಲ್ಲಿರುತ್ತದೆ. ಹೊರಗೆ ಬಂದಾಗಲೂ ಅದಕ್ಕೆ ಇನ್ನೂ ಒಳಗುಂಗೇ. ಜ್ಞಾನಿಯಾದವನು ಸದ್ಯೋಜಾತ(ಆಗ ತಾನೆ ಹುಟ್ಟಿದ) ಮಗುವಿನಂತೆ ಇರಬೇಕೆಂಬುದನ್ನು ಅದರಿಂದ ಕಲಿತೆ. ಮೀನು ಸುಖದ ಆಸೆಯಿಂದ ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಹಾಗೆ ಆಸೆಗೆ ಸಿಲುಕಬಾರದೆಂಬುದನ್ನು ಮೀನಿನಿಂದ ಕಲಿತೆ. ಬಾಣದ ವಕ್ರತೆಯನ್ನು ಸರಿಮಾಡುವ ಇಷುಕಾರ, ರಾಜನ ಮೆರವಣಿಗೆ ಹೋಗುತ್ತಿದ್ದರೂ ಗಮನ ಅತ್ತ ಹರಿಸಲಿಲ್ಲ. ವಕ್ರವಾಗಿರುವುದನ್ನು ಸರಿಮಾಡಬೇಕು ಮತ್ತು ಏನೆಲ್ಲ ಆಕರ್ಷಣೆಗಳಿದ್ದರೂ ಧ್ಯಾನದ ಗಮನ ಅತ್ತಕಡೆ ಹರಿಯಬಾರದೆಂಬುದನ್ನು ಇಷುಕಾರನಿಂದ ಕಲಿತೆ.
ಜೇಡರಹುಳು ತಾನೇ ಉಗುಳಿದ ನೂಲಿನಲ್ಲಿ ಬಲೆಯನ್ನು ಮಾಡಿ, ಅದರಲ್ಲೇ ವಿಹರಿಸಿ, ಮತ್ತೆ ಅದನ್ನು ತಾನೇ ನುಂಗುತ್ತದೆ. ಭಗವಂತನೂ ತಾನೇ ಸೃಷ್ಟಿಸಿದ ಜಗತ್ತಿನಲ್ಲಿ ವಿಹರಿಸಿ ತಾನೇ ಅಂತ್ಯಮಾಡುತ್ತಾನೆ. ಭಗವಂತನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣನೆಂದು ಜೇಡರಹುಳುವನ್ನು ನೋಡಿ ಅರಿತುಕೊಂಡೆ. ತನ್ನ ಆಹಾರಕ್ಕೋಸ್ಕರ ತಂದು ಅಂಟಿಸಿದ ಕೀಟ, ದುಂಬಿಯ ಭಯದಿಂದ ದುಂಬಿಯನ್ನೇ ಯಾವಾಗಲೂ ನೆನೆಯುತ್ತಾ ಕೊನೆಗೆ ದುಂಬಿಯೇ ಆಗಿಬಿಡುತ್ತದೆ. ಭಯದಿಂದಲಾದರೂ ಪರಮಾತ್ಮನಲ್ಲಿ ತನ್ಮಯತೆಯನ್ನು ಹೊಂದಿದವ, ಪರಮಾತ್ಮನೇ ಆಗಿಬಿಡುತ್ತಾನೆ ಎಂದು ಆ ಕೀಟದಿಂದ ಕಲಿತೆ. ಧನದಾಸೆಗೆ ತನ್ನನ್ನು ಮಾರಿಕೊಂಡ ಪಿಂಗಳಾ ಎನ್ನುವ ವೇಶ್ಯೆ , ಒಂದು ದಿನ ಪುರುಷನಿಗೋಸ್ಕರ ಕಾದು ಕಾದು ಬೇಸತ್ತು, ಕೊನೆಗೆ ಭಗವಂತನನ್ನು ನೆನೆಸಿಕೊಂಡು ಆತನ ಮಡಿಯಲ್ಲಿ ನಿದ್ರೆಮಾಡಿ ಅದೇ ಸೌಖ್ಯವೆಂದು, ಆತ ಎಂದೂ ನಿರಾಸೆಯನ್ನು ಉಂಟುಮಾಡುವುದಿಲ್ಲವೆಂದು ಕಂಡುಕೊಂಡು ಆತನಲ್ಲಿಯೇ ರತಿಯನ್ನು ಹೊಂದುತ್ತಾಳೆ. ಭಗವಂತನಲ್ಲೇ ಎಂದೂ ರಮಿಸಬೇಕು ಎನ್ನುವುದನ್ನು ಆ ವೇಶ್ಯೆಯಿಂದ ಕಲಿತುಕೊಂಡೆ.
ಶರೀರವು ಯೋಗ ಮತ್ತು ಭೋಗ- ಇವುಗಳೆರಡಕ್ಕೂ ಆಯತನ ಎಂಬುದನ್ನು ಈ ಶರೀರದಿಂದ ಕಂಡುಕೊಂಡೆ ಎಂದು ತಿಳಿಸುತ್ತಾರೆ. ಹೀಗೆ ತಿಳಿಸಿ ರಾಜನಿಂದ ಸತ್ಕಾರವನ್ನು ಪಡೆದು, ದತ್ತಾತ್ರೇಯರು ಹೊರಟುಬರುತ್ತಾರೆ.
ಸಾಂಸಾರಿಕರಾಗಿದ್ದರೂ ಕೂಡ, ನಾವುಗಳು ಇವುಗಳಲ್ಲಿನ ಅನೇಕ ವಿಷಯಗಳನ್ನು ಅಳವಡಿಸಿಕೊಳ್ಳಬಹುದು ಎಂದನಿಸುತ್ತದೆ - ಕ್ಷಮೆ, ಗಾಂಭೀರ್ಯ, ಅನಾಯಾಸ, ನಿಃಸ್ಪೃಹತೆ, ಭಗವಂತನಲ್ಲಿ ಭಕ್ತಿ- ನಂಬಿಕೆಗಳು, ನೇರಬಾಣದಂತಹ ಸರಳವಾದ ಮನಸ್ಸು, ತನ್ಮಯತೆ, ಬೇಡದುದಕ್ಕೆ ಆಸೆಪಡದಿರುವುದು ಮತ್ತು ಇನ್ನೂ ಅನೇಕ ಪಾಠಗಳನ್ನು ನಾವು ಈ ವೃತ್ತಾಂತದಿಂದ ಕಲಿಯಬಹುದಾಗಿದೆ.
ಸೂಚನೆ : 11/2/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.