Thursday, February 9, 2023

ಒತ್ತಡವಿಲ್ಲದೇ ಚೆನ್ನಾಗಿ ಕೆಲಸ ಮಾಡುವುದು ಹೇಗೆ? (Ottadavillade Cennagi Kelasa Maduvudu Hege?)

ಲೇಖಕರು: ಶ್ರೀ ಜಿ ನಾಗರಾಜ 
(ಪ್ರತಿಕ್ರಿಯಿಸಿರಿ lekhana@ayvm.in)

ಧುನಿಕ ಜೀವನದಲ್ಲಿ stress ಅಥವಾ ಮಾನಸಿಕ ಒತ್ತಡ ಬಹಳ ಕೇಳಿ ಬರುತ್ತಿರುವ ವಿಷಯ. ಉದ್ಯೋಗ (ಪ್ರೊಫೆಶನ್) ಕ್ಷೇತ್ರವಿರಲಿ, ಸ್ಕೂಲು ಕಾಲೇಜು ಇರಲಿ, ಕೆಲಸದಲ್ಲಿ ತೊಡಗಿಸಿ ಕೊಂಡಾಗ ಒತ್ತಡ ಅನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಎಲ್ಲೆಡೆಯೂ ಕೆಲಸದ ಹೊರೆ ಮತ್ತು ಫಲಿತಾಂಶದ ಜವಾಬ್ದಾರಿ ಒತ್ತಡಕ್ಕೆ ಕಾರಣವಾಗುತ್ತದೆ.  ಒತ್ತಡವನ್ನು ಪರಿಹರಿಸಿಕೊಂಡು ನಾವು  ಕರ್ತವ್ಯ ಪರಾಯಣರಾಗಿಯೂ ಇದ್ದು  ಮನಸ್ಸನ್ನೂ ಹಗುರವಾಗಿಟ್ಟುಕೊಳ್ಳುವುದು ಹೇಗೆ? ಅದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಅಮೂಲ್ಯವಾದ ಚಿಂತನೆಯನ್ನು ಅಳವಡಿಸಿಕೊಂಡರೆ ಸುಲಭವಾಗುತ್ತದೆ. ಆ ಚಿಂತನೆಯೇ ಕರ್ಮ ಯೋಗದ ಚಿಂತನೆ. 


ಕರ್ಮಯೋಗದಲ್ಲಿ ಮೂರು ಭಾಗಗಳು ಇವೆ: ಯಾವುವೆಂದರೆ ಕರ್ತೃತ್ವ ತ್ಯಾಗ, ಮಮತ್ವ ತ್ಯಾಗ ಹಾಗೂ ಕರ್ಮಫಲ ತ್ಯಾಗ ಎಂಬುದಾಗಿ. ಈ ಮೂರು ತ್ಯಾಗಗಳನ್ನು ಮಾಡಿದಾಗ ಮನಸ್ಸು ನಿರಾಳವಾಗಿರುತ್ತದೆ ಮತ್ತು ಒತ್ತಡ ಇರುವುದಿಲ್ಲ. ಭಗವತ್ಕಾರ್ಯಗಳನ್ನು ಅಂದರೆ ಯಾವ ಕರ್ಮಗಳನ್ನು ಋಷಿಗಳು ಇದು ನಿಮ್ಮ ನಿತ್ಯಕರ್ಮ, ನೈಮಿತ್ತಿಕ ಕರ್ಮ ಎಂಬುದಾಗಿ ವಿಧಿಸಿದ್ದಾರೆಯೋ ಅಂತಹ ಕರ್ಮಗಳನ್ನು ನಾವು ಆಚರಣೆ ಮಾಡಬೇಕಾದರೆ ನಮ್ಮ ಮನಸ್ಸನ್ನು ಯಾವ ರೀತಿ ಇಟ್ಟುಕೊಂಡಿರಬೇಕು ಅನ್ನುವುದರ ಬಗ್ಗೆ ಮಹರ್ಷಿಗಳು ತಿಳಿಸಿಕೊಟ್ಟಿದ್ದಾರೆ. ಆ ರೀತಿ ಮನಸ್ಸನ್ನು ಇಟ್ಟುಕೊಂಡು ಕರ್ಮಗಳನ್ನು ಮಾಡುತ್ತಿದ್ದರೆ ಅದು ನಮ್ಮ ಮನಸ್ಸನ್ನು ನಿರ್ಮಲಗೊಳಿಸಿ, ಯೋಗವಾಗಿ ಪರಿಣಮಿಸುತ್ತದೆ. ಮನಸ್ಸು ಸ್ವಲ್ಪವಾದರೂ ಹಗುರವಾಗುತ್ತದೆ. ಆದುದರಿಂದ ಈ ಮೂರು ತ್ಯಾಗಗಳು ಏನು, ಹೇಗೆ ಎಂದು ನೋಡೋಣ. 

ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕರ್ಮ(ಕೆಲಸ) ಮಾಡಿದರೆ, ಅದನ್ನು ನಾನೇ ಮಾಡಬೇಕು, ನಾನು ಮಾಡಿದೆ ಎಂದು ಅಂದುಕೊಳ್ಳುತ್ತೇವೆ. ಆದರೆ, ವಾಸ್ತವದಲ್ಲಿ ನಮಗಿಂತ ದೊಡ್ಡ ಶಕ್ತಿಯೊಂದು ನಮ್ಮ ಕೈಯಲ್ಲಿ ಆ ಕೆಲಸವನ್ನು ಮಾಡಿಸಿಕೊಳ್ಳುತ್ತಿರುತ್ತದೆ. ಇದನ್ನು ಮುಂದೆ ಉದಾಹರಣೆಯೊಂದಿಗೆ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಬಹುದು. ಆದುದರಿಂದ ನಾನು ಮಾಡುತ್ತೇನೆ, ನಾನು ಮಾಡಿದೆ ಎಂದು ಅಂದುಕೊಳ್ಳುವುದಕ್ಕಿಂತ ನಾನು ನಿಮಿತ್ತವಾಗಿದ್ದೆ, ಕರ್ಮವನ್ನು ಭಗವಂತ ನಮ್ಮ ಕೈಯ್ಯಲ್ಲಿ ಮಾಡಿಸಿಕೊಂಡ ಎಂದುಕೊಂಡಾಗ ನಾವು ನಮ್ಮ ಕರ್ತೃತ್ವವನ್ನು ಭಗವದರ್ಪಣೆ ಮಾಡುತ್ತೇವೆ, ಅಥವಾ ಕರ್ತೃತ್ವ ತ್ಯಾಗ ಮಾಡುತ್ತೇವೆ ಮತ್ತು ನಮ್ಮ ಮನಸ್ಸು ನಿರಾಳವಾಗುತ್ತದೆ. ನಾವು ಮಾಡುತ್ತಿರುವ ಕೆಲಸದಲ್ಲಿ ಭಗವಂತ ನಮ್ಮ ಬೆನ್ನ ಹಿಂದಿದ್ದಾನೆ ಎನ್ನುವ ಭರವಸೆಯು ಮಾಡುವ ಕೆಲಸವು ಚೆನ್ನಾಗಿ ಆಗುವಂತೆಯೂ ಮಾಡುತ್ತದೆ. 

ಹಾಗೆಯೇ ಮಮತ್ವ ತ್ಯಾಗ - ಈ ಕರ್ಮ ನನ್ನದು ಎಂದುಕೊಂಡು ಮಾಡುವುದಕ್ಕಿಂತ ಅದು ಭಗವಂತನ ಕರ್ಮ ಅದನ್ನು ನಾನು ನನ್ನದಾಗಿಸಿಕೊಂಡು ಆಚರಣೆ ಮಾಡಿದ್ದೇನೆ ಎಂದು ಭಾವಿಸಿಕೊಂಡು  ಅದು ಭಗವಂತನ ಕರ್ಮ ಎಂದು ಅರ್ಪಣೆ ಮಾಡಿಕೊಂಡು ಮಾಡುವುದು ಎರಡನೆಯ ವಿಧವಾದ ತ್ಯಾಗ. 

ಮೂರನೆಯದು ಕರ್ಮಫಲ ತ್ಯಾಗ - ಒಂದು ಕರ್ಮದ ಫಲವು, ಮಾಡಿದ ಕರ್ಮವನ್ನಲ್ಲದೇ ಇನ್ನೂ ಕೆಲವು ಅಂಶಗಳ ಮೇಲೆ ನಿಂತಿರುತ್ತದೆ. ಆದುದರಿಂದ, ಫಲವನ್ನು ಮನಸ್ಸಿನಲ್ಲಿಟ್ಟುಕೊಂಡು, ಅದರ ಬಗ್ಗೆಯೇ ಚಿಂತಿಸುತ್ತಾ ಇದ್ದರೆ ಒತ್ತಡವು ಉಂಟಾಗುತ್ತದೆ ಮತ್ತು ಕೆಲಸದಲ್ಲಿ ಉತ್ಸಾಹ, ಏಕಾಗ್ರತೆಗಳೂ ಕಡಿಮೆಯಾಗುತ್ತದೆ. ಆದರೆ, ಫಲ ಬರುವುದಕ್ಕೆ ಏನು ಕೆಲಸ ಮಾಡಬೇಕೋ ಆ ಕೆಲಸವನ್ನು ಅಥವಾ ಕರ್ಮವನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಕರ್ಮಾಚರಣೆ ಮಾಡಿದರೆ ಒತ್ತಡವೂ ಇರುವುದಿಲ್ಲ, ಏಕಾಗ್ರತೆಯಿಂದ ಕರ್ಮವೂ ಚೆನ್ನಾಗಿ ಆಗುತ್ತದೆ. ಅಂದರೆ, ಕರ್ಮವನ್ನು ಮಾಡುತ್ತೇನೆ, ಆದರೆ ಕರ್ಮಫಲವನ್ನು ಭಗವಂತನಿಗೆ ಬಿಡುತ್ತೇನೆ ಎಂದುಕೊಳ್ಳುವುದು ಕರ್ಮಫಲ ತ್ಯಾಗ ಆಗುತ್ತದೆ. 


ಈ ಮೂರು ವಿಧವಾದ ತ್ಯಾಗಗಳಿಂದ ನಾವು ನಮ್ಮತನವನ್ನು ಬಿಟ್ಟು ಭಗವಂತನಲ್ಲಿ ಒಂದಾಗಲು ಅನುಕೂಲಕರವಾಗುವುದರಿಂದ ಇದನ್ನು ಕರ್ಮಯೋಗ ಎಂದು ಕರೆಯುತ್ತಾರೆ. ಇದನ್ನು ಎಲ್ಲಾ ಲೌಕಿಕವಾದ ವಿಷಯಗಳಿಗೂ ನಾವು ಅಳವಡಿಸಿಕೊಳ್ಳಬಹುದು. ಹೇಗೆಂದರೆ ಒಂದು ಬ್ಯಾಂಕಿನ ಉದಾಹರಣೆಯನ್ನು ತೆಗೆದುಕೊಳ್ಳೋಣ, ಬ್ಯಾಂಕಿನಲ್ಲಿ ಒಬ್ಬ ಕ್ಯಾಶಿಯರ್ ಹಣದ ಜವಾಬ್ದಾರಿಯನ್ನು ಹೊತ್ತು ಹಣವನ್ನು ಗ್ರಾಹಕರಿಗೆ ಕೊಡುವುದು, ಗ್ರಾಹಕರಿಂದ ತೆಗೆದುಕೊಳ್ಳುವುದು ಮಾಡುತ್ತಿರುತ್ತಾನೆ. 

ಮೊದಲು ಅವನು ಕರ್ತೃತ್ವ ತ್ಯಾಗ ಎಂದರೆ ನಾನು ಅವರಿಗೆಲ್ಲ ದುಡ್ಡು ಕೊಡುತ್ತಿದ್ದೇನೆ ಎಂದು ಅಂದುಕೊಳ್ಳಬಾರದು.  ಬ್ಯಾಂಕ್ ಗ್ರಾಹಕರಿಗೆ ದುಡ್ಡು ಕೊಡುತ್ತಿದೆ, ಗ್ರಾಹಕರಿಂದ ದುಡ್ಡು ತೆಗೆದುಕೊಳ್ಳುತ್ತಿದೆ ಮತ್ತು ನಿಮಿತ್ತ ಮಾತ್ರನಾಗಿ ಬ್ಯಾಂಕ್ ಪರವಾಗಿ ನಾನು ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಅವನಲ್ಲಿ ಇದ್ದಾಗ ಅದು ಕರ್ತೃತ್ವ ತ್ಯಾಗ ಆಗುತ್ತದೆ. ಅವನಿಗೆ ಎಷ್ಟೊಂದು ದುಡ್ಡು ಗ್ರಾಹಕರಿಗೆ ಕೊಟ್ಟೆ ಎಂದು ಮನಸ್ಸು ಕುಗ್ಗುವುದಿಲ್ಲ ಅಥವಾ ಎಷ್ಟೊಂದು ದುಡ್ಡು ಡಿಪಾಸಿಟ್ ಆಗಿ ಬಂದಿತು ಎಂದು ಹಿಗ್ಗುವುದಿಲ್ಲ. ನಿರ್ವಿಕಾರನಾಗಿರುತ್ತಾನೆ.

ನಂತರದ್ದು ಮಮತ್ವ ತ್ಯಾಗ. ಕ್ಯಾಶಿಯರ್ ಲಕ್ಷಾಂತರ ರೂಪಾಯಿಗಳನ್ನು ನಿರ್ವಹಣೆ ಮಾಡುತ್ತಿರುತ್ತಾನೆ, ಜವಾಬ್ದಾರಿಯ ದೃಷ್ಟಿಯಿಂದ ಆ ಹಣ ಬ್ಯಾಂಕ್ ನಲ್ಲಿ ಅವನದೇ. ಅಂದರೆ, ಬ್ಯಾಂಕಿನಲ್ಲಿ ಇನ್ಯಾರೂ ಅದರ ನಿರ್ವಹಣೆ ಮಾಡುವ ಹಾಗಿಲ್ಲ ಅವನೇ ಮಾಡಬೇಕು. ಕರ್ತವ್ಯದಲ್ಲಿದ್ದಾಗ, ಆ ಸಮಯದಲ್ಲಿ ಹಣವನ್ನು ನನ್ನದು ಎಂದುಕೊಂಡಿದ್ದರೂ ಕೆಲಸದ ವೇಳೆ ಮುಗಿದು ಬ್ಯಾಂಕನ್ನು ಬಿಟ್ಟು ಮನೆಗೆ ಹೋಗುವಾಗ ಅದೆಲ್ಲ ಹಣದ ಲೆಖ್ಖ ಚುಕ್ತ ಮಾಡಿ ಲಾಕರ್ ನಲ್ಲಿಟ್ಟು ಅದು ಬ್ಯಾಂಕ್ ನದ್ದು, ನನ್ನದಲ್ಲ ಎಂದು ನಿರಾಳವಾಗುತ್ತಾನೆ. ಅಂದರೆ, ಅದು ಬ್ಯಾಂಕಿನ ದುಡ್ಡು ಎಂದು ಮಮತ್ವ ತ್ಯಾಗ ಮಾಡಿ ಮನೆಗೆ ಹೋಗುತ್ತಾನೆ. ಆ ದುಡ್ಡಿನ ಭದ್ರತೆ ಬಗ್ಗೆ ಕಿಂಚಿತ್ತೂ ಚಿಂತಿಸುವುದಿಲ್ಲ, ಒತ್ತಡಕ್ಕೊಳಗಾಗುವುದಿಲ್ಲ. ಬ್ಯಾಂಕ್ ನ ಮೇಲೆ ಜವಾಬ್ದಾರಿಯನ್ನು ಇಟ್ಟು ತಾನು ನಿಶ್ಚಿಂತನಾಗಿ ಮನೆಯಲ್ಲಿ ನಿದ್ರಿಸುತ್ತಾನೆ. 


ಹಾಗೆಯೇ ಮೂರನೆಯದು ಕರ್ಮಫಲ ತ್ಯಾಗ- ಅವನು ಆ ಬ್ಯಾಂಕಿನ ಕೆಲಸವನ್ನು ನಿರ್ವಹಣೆ ಮಾಡಿರುವುದರಿಂದ ಬ್ಯಾಂಕಿಗೆ ಏನು ಲಾಭ ಬರಬೇಕಾಗಿತ್ತೋ ಅದನ್ನು ಬ್ಯಾಂಕಿಗೇ ಬಿಡುತ್ತಾನೆ.  ಮತ್ತು ಬ್ಯಾಂಕಿನ ಕರ್ತವ್ಯಗಳನ್ನು ನಿರ್ವಹಣೆ ಮಾಡಿದ್ದರಿಂದ ಅವನಿಗೆ ಏನು ಸಂಬಳ ಇತ್ಯಾದಿ ಫಲಗಳು ಬರಬೇಕಾಗಿರುತ್ತದೆ ಅದನ್ನು ಬ್ಯಾಂಕು ಕೊಡುತ್ತದೆ ಎಂದು ಅವನು ನಿರಾಳವಾಗಿ ಇರುತ್ತಾನೆ ಇದು ಕರ್ಮಫಲ ತ್ಯಾಗ. 

ಹೀಗೆ ಮನಸ್ಸನ್ನು ಇಟ್ಟುಕೊಂಡಿದ್ದಾಗ ಎಷ್ಟು ಬೇಕೋ ಅಷ್ಟು ಮನಸ್ಸನ್ನು ಆ ವೃತ್ತಿಯಲ್ಲಿ ಇಟ್ಟುಕೊಂಡಿರುವುದು ಅದರ ನಂತರ ಅದರ ಸೋಂಕಿಲ್ಲದಂತೆಯೇ ಅದನ್ನು ಅಲ್ಲಿಯೇ ಬಿಟ್ಟು ನಿರಾಳವಾಗಿರಬಹುದು. ಈ ಚಿಂತನೆಯನ್ನು ಬೇರೆ ಬೇರೆ ವೃತ್ತಿಗಳು, ಹಾಗೂ ಜೀವನದ ಬೇರೆ ಬೇರೆ ಸಂದರ್ಭಗಳಿಗೂ ಅನ್ವಯಿಸಿಕೊಳ್ಳಬಹುದು. 

ಇಂತಹ  ರೀತಿಯಾಗಿ ಈ ತ್ರಿವಿಧ ತ್ಯಾಗಗಳ ಮೂಲಕ ನಾವು ಕರ್ಮಯೋಗಕ್ಕನುಗುಣವಾದ ಮನಸ್ಸನ್ನು ಬೆಳೆಸಿಕೊಂಡರೆ ಕೆಲಸವೂ ಚೆನ್ನಾಗಿರುತ್ತದೆ, ನಾವೂ ಸಹ ಒತ್ತಡ ರಹಿತವಾಗಿರಬಹುದು.  


ಸೂಚನೆ:  09/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.