Sunday, February 19, 2023

ವ್ಯಾಸ ವೀಕ್ಷಿತ - 26 ದ್ರೋಣ-ದ್ರುಪದರ ವೈರದ ಬೀಜ (Vyaasa Vikshita - 26 Drona-Drupadara Vairada Bija)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ದೀರ್ಘಕಾಲದ ಬ್ರಹ್ಮಚರ್ಯನಿಷ್ಠೆಯನ್ನು ಪಾಲಿಸಿದವರಲ್ಲಿ ಸಂಪಾದಿತವಾಗಬಹುದಾದ ಶಕ್ತಿಗಳು ಅಲ್ಪವೂ ಅಲ್ಲ, ಸಾಧಾರಣವೂ ಅಲ್ಲ. ಎಂದೇ, ಆ ಕ್ಷಣದಲ್ಲಿ ಸ್ಖಲಿಸಿದ ಭರದ್ವಾಜನ ರೇತಸ್ಸು ಮುಂದೆ ಪಡೆದ ದಿಕ್ಕೇ ಬೇರೆ: ಅದನ್ನು ಆ ಋಷಿಯು ಒಂದು ದ್ರೋಣದಲ್ಲಿ, ಎಂದರೆ ಕಲಶದಲ್ಲಿ, ಇಟ್ಟನು; ಅದುವೇ ಒಂದು ಶಿಶುವಾಗಿ ಪರಿಣಮಿಸಿತು! (ಅರ್ಥಾತ್ ಸ್ತ್ರೀಗರ್ಭಸಂಸ್ಪರ್ಶವೇ ಇಲ್ಲದೆ ಜನಿಸಿತು; ಮಹಾಭಾರತದಲ್ಲಿ ಬರುವ ಹಲವರ ಜನನ-ವೃತ್ತಾಂತಗಳು ಲೋಕವಿಲಕ್ಷಣವಾದವು).

ದ್ರೋಣದಲ್ಲಿ ಜನಿಸಿದ ಶಿಶುವಾದ್ದರಿಂದ ಅದಕ್ಕೆ ದ್ರೋಣನೆಂದೇ ಹೆಸರಾಯಿತು. ಭರದ್ವಾಜನು ಎಷ್ಟಾದರೂ ಧೀಮಂತನಲ್ಲವೇ?: ತನಗೆ ಕರಗತವಾಗಿದ್ದ ವೇದಗಳನ್ನೂ ವೇದಾಂಗಗಳನ್ನೂ ತನ್ನ ಕುಮಾರನಿಗೆ ಬೋಧಿಸಿದನು.

ಭರದ್ವಾಜನಿಗೆ ಪೃಷತನೆಂಬ ಒಬ್ಬ ಮಿತ್ರನಿದ್ದನು. ಆತನಿಗೆ ದ್ರುಪದನೆಂಬ ಒಬ್ಬ ಚಿಕ್ಕ ಮಗನಿದ್ದನು. ದ್ರುಪದನು ನಿತ್ಯವೂ ಭರದ್ವಾಜಾಶ್ರಮಕ್ಕೆ ಹೋಗಿ ಭರದ್ವಾಜಪುತ್ರನಾದ ದ್ರೋಣನೊಂದಿಗೆ ಆಟವಾಡುತ್ತಿದ್ದನು. ಅಲ್ಲಿಯೇ ಅಧ್ಯಯನವನ್ನೂ ಮಾಡುವುದಾಯಿತು.

ಪೃಷತನ ಕಾಲವಾದ ಬಳಿಕ ಆತನ ಪುತ್ರನಾದ ದ್ರುಪದನೇ ರಾಜನಾದನು. ಅಷ್ಟರಲ್ಲಿ ದ್ರೋಣನ ಕಿವಿಗೆ ಬಿದ್ದದ್ದು ಪರಶುರಾಮನ ವಿಷಯ: ತನ್ನಲ್ಲಿದ್ದ ಸಮಸ್ತಸಂಪತ್ತನ್ನೂ ಆತನು ದಾನಮಾಡಲಿರುವನೆಂಬುದು. ತನಗಿದ್ದ ಕೊರತೆಯೂ ಸಿರಿಯೇ ಆಗಿದ್ದರಿಂದ, ಅದನ್ನು ಅವನಿಂದ ಪಡೆಯಲೆಂದು, ಅವನತ್ತ ಸಾಗಿದನು.

ಪರಶುರಾಮನ ಬಳಿಗೆ ದ್ರೋಣನು ಹೋಗುವ ಹೊತ್ತಿಗಾಗಲೇ ತನ್ನ ಸೊತ್ತನ್ನೆಲ್ಲವನ್ನೂ ಹಂಚಿ ಪರಶುರಾಮನು ಕಾಡಿಗೆ ಹೊರಟಾಗಿತ್ತು. ಆಗ ಭರದ್ವಾಜಪುತ್ರನಾದ ದ್ರೋಣನು ಪರಶುರಾಮನನ್ನು ಮಾತನಾಡಿಸಿ, ತಾನು ವಿತ್ತಕಾಮನಾಗಿ, ಎಂದರೆ ಧನಾರ್ಥಿಯಾಗಿ, ಬಂದಿರುವುದನ್ನು ನಿವೇದಿಸಿಕೊಂಡನು.

ಆಗ ಪರಶುರಾಮನು ಹೇಳಿದನು: "ಅಯ್ಯಾ ನನ್ನ ಸರ್ವಸ್ವವನ್ನೂ ಇದೀಗ ದಾನಮಾಡಿಯಾಗಿದೆ. ಇನ್ನು ನನ್ನಲ್ಲುಳಿದಿರುವುದು ಈ ಶರೀರ ಮಾತ್ರವೇ. ನನ್ನಲ್ಲಿ ಅಸ್ತ್ರಗಳಂತೂ ಉಂಟು. ಅವನ್ನೋ ಅಥವಾ ನನ್ನ ಶರೀರವನ್ನೋ - ಯಾವುದಾದರೊಂದನ್ನು ನೀನು ಬಯಸಬಹುದು." ಅದಕ್ಕೆ ದ್ರೋಣನು, "ಸಮಸ್ತ ಅಸ್ತ್ರಗಳನ್ನೂ ( ಎಂದರೆ ಅವೆಲ್ಲದರ ಪ್ರಯೋಗವನ್ನೂ ಉಪಸಂಹಾರವನ್ನೂ) ನನಗೆ ದಯಪಾಲಿಸಿ ಎಂದನು. ( ಪ್ರಯೋಗಿಸಿದ ಅಸ್ತ್ರದ ಕಾರ್ಯವನ್ನು ಸ್ಥಗಿತಗೊಳಿಸುವುದು ಉಪಸಂಹಾರ: ಪ್ರಯುಕ್ತವಾದ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊಳ್ಳುವುದು.)

ಪರಶುರಾಮನು ಅದಕ್ಕೊಪ್ಪಿ ಅವನ್ನಿತ್ತನು. ಅವನ್ನು ಸ್ವೀಕರಿಸಿದ ದ್ರೋಣನು ಕೃತಕೃತ್ಯನಾದನು. ಎಲ್ಲರ ಪರಮಾದರಕ್ಕೆ ಪಾತ್ರವಾದ ಬ್ರಹ್ಮಾಸ್ತ್ರವನ್ನು ಪರಶುರಾಮನಿಂದ ಪಡೆದ ದ್ರೋಣನು ಪರಮಸಂತೋಷವನ್ನು ಹೊಂದಿದನು. ಈ ಅಸ್ತ್ರಬಲದಿಂದಾಗಿ, ನರರಲ್ಲಿ ಅತಿಶ್ರೇಷ್ಠನೂ ಆದನು.

ಅಂತೂ ಹೀಗೆ ಪುರುಷಶ್ರೇಷ್ಠನೂ ಪ್ರತಾಪಶಾಲಿಯೂ ಆದ ದ್ರೋಣನು ಈಗ ದ್ರುಪದರಾಜನ ಬಳಿಗೆ ಹೋದನು. "ನಾನು ನಿನ್ನ ಸ್ನೇಹಿತ" ಎಂದು ಹಳೆಯದನ್ನುಜ್ಞಾಪಿಸಿದನು.

ಆದರೆ ದ್ರುಪದನ ವರ್ತನೆ ಅನಿರೀಕ್ಷಿತವಾಗಿತ್ತು; ತಾನೀಗ ರಾಜನಾಗಿದ್ದುದರಿಂದ ದರ್ಪವು ತುಂಬಿತ್ತು. ಆತ ಹೇಳಿದ: ಶ್ರೋತ್ರಿಯನಾದವನಿಗೆ (ಬ್ರಾಹ್ಮಣನಾಗಿ ಜನಿಸಿರಬೇಕು; ಸಂಸ್ಕಾರಗಳಿಂದ ದ್ವಿಜತ್ವವನ್ನೂ ಹೊಂದಿರಬೇಕು; ವಿದ್ಯಾರ್ಜನೆಯಿಂದ ವಿಪ್ರತ್ವವನ್ನೂ ಹೊಂದಿರಬೇಕು - ಅಂತಹವನು ಶ್ರೋತ್ರಿಯನೆನಿಸುತ್ತಾನೆ) ಶ್ರೋತ್ರಿಯನಲ್ಲದವನು ಮಿತ್ರನಾಗಲಾರನಲ್ಲವೇ? ರಥಿಗೆ (ಎಂದರೆ ರಥವುಳ್ಳವನಿಗೆ) ರಥಿಯಲ್ಲದವನು ಸ್ನೇಹಿತನಾಗಲಾರ. ರಾಜನಾದವನಿಗೆ ರಾಜನಲ್ಲದವನು ಸಖನಾಗಲಾರ. ಹೀಗಿರುವಾಗ 'ಹಳೆಯ ವಯಸ್ಯ' ಎಂದು ಹೇಳಿಕೊಂಡು ಬಯಸುವುದಾದರೂ ಏನನ್ನು! - ಎಂದುಬಿಟ್ಟ!

ಸೂಚನೆ : 19/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.