Sunday, February 26, 2023

ಯಕ್ಷ ಪ್ರಶ್ನೆ -27 (Yaksha prashne -27)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – 26 ವಾಯುವಿಗಿಂತಲೂ ವೇಗವಾದುದು ಯಾವುದು?

ಉತ್ತರ - ಮನಸ್ಸು

ಒಂದು ವಸ್ತುವಿನ ವೇಗವನ್ನು ಕಂಡುಹಿಡಿಯಲು ಆ ವಸ್ತು ನಮಗೆ ಗೋಚರಿಸಬೇಕು. ಆಗ ಮಾತ್ರ ಪ್ರತಿನಿಮಿಷಕ್ಕೋ,  ಗಂಟೆಗೋ ಎಷ್ಟು ದೂರವನ್ನು ಕ್ರಮಿಸಬಲ್ಲದು? ಅದು ಎಷ್ಟು ವೇಗವಾಗಿ ಸಾಗುತ್ತದೆ? ಎಂಬುದನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಒಂದು ವಾಹನವೋ ಅಥವಾ ಕುದುರೆಯೋ ಅದರ ವೇಗ ಎಷ್ಟೆಂಬುದು ತಿಳಿಯಬಹುದಾದ ವಿಷಯ. ಆದರೆ ಇಲ್ಲಿ ಯಕ್ಷನು ಧರ್ಮಜನಿಗೆ ಕೇಳುವ ಪ್ರಶ್ನೆ ಕಣ್ಣಿಗೆ ಕಾಣದಿರುವ ವಿಷಯದ ಬಗ್ಗೆ. ಅದರಲ್ಲೂ ಮನಸ್ಸಿನ ಬಗ್ಗೆ. ಮನಸ್ಸನ್ನು ಕಂಡು ಹಿಡಿಯಲು, ಅದರ ವೇಗವನ್ನು ಗುರುತಿಸಲು ಅನೇಕಾನೇಕ ಪ್ರಯತ್ನಗಳು ನಡೆದಿವೆ, ನಡೆಯುತ್ತಿವೆ, ಮುಂದೂ ನಡೆಯುತ್ತವೆ. ಆದರೂ ಇದರ ವೇಗದ ಬಗ್ಗೆ ಇತ್ಯರ್ಥವಾಗುವುದೇ ಇಲ್ಲವೆನೋ? ಅಂತಹ ವಿಷಯದ ಬಗ್ಗೆ ಇಲ್ಲಿ ಯಕ್ಷನ ಪ್ರಶ್ನೆಯಾಗಿದೆ. ವಾಯುವಿಗಿಂತಲೂ ವೇಗವಾಗಿ ಹೋಗುವ ವಸ್ತು ಯಾವುದು? ಎಂದು. ಅದಕ್ಕೆ ಉತ್ತರ ಮನಸ್ಸು.

ಕಣ್ಣಿಗೆ ಕಾಣುವ ವಸ್ತುಗಳಲ್ಲಿ ಅತಿಶಯವಾದ ವೇಗ ಉಳ್ಳದ್ದು ಎಂದರೆ ಅದು ಗಾಳಿ. ಗಾಳಿಗಿಂತಲೂ ವೇಗವಾಗಿ ಸಾಗುವ ವಸ್ತು ಇನ್ನೊಂದಿಲ್ಲ. ಕುದುರೆಯೂ ಅತಿವೇಗವಾಗಿ ಓಡುವ ಪ್ರಾಣಿಯಾಗಿದೆ. ಪ್ರತಿ ಗಂಟೆಗೆ ೩೩೫ ಕಿಲೋಮೀಟರ್ ವೇಗ ಎಂದು ವಿಮಾನಕ್ಕೂ ಒಂದು ಮಿತವಾದ ವೇಗವನ್ನು ಹೇಳುತ್ತಾರೆ. ಬೆಳಕಿನ ವೇಗವನ್ನು ಪ್ರತಿ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಎಂದು ಹೇಳುತ್ತಾರೆ. ಬೆಳಕಿನ ವೇಗಕ್ಕಿಂತಲೂ ಅಧಿಕವೇಗವುಳ್ಳದ್ದು 'ಬ್ರಹ್ಮಾಂಡದ ವಿಸ್ತರಣೆ' ಎಂಬುದು ಇದಕ್ಕಿಂತಲೂ ವೇಗವುಳ್ಳದ್ದು ಎಂದು ವಿಜ್ಞಾನ ಹೇಳುತ್ತದೆ. ಇವೆಲ್ಲಕ್ಕಿಂತ ವೇಗವುಳ್ಳದ್ದೆಂದರೆ ಅದೇ ಮನಸ್ಸು. 

ಹಾಗಾದರೆ ಮನಸ್ಸಿಗೆ ಇರುವ ವೇಗವೆಷ್ಟು? ಯಾವ ರೀತಿಯಾಗಿ ಇದರ ವೇಗವನ್ನು ಕಂಡುಹಿಡಿಯಬಹುದು? ಎಂಬ ಪ್ರಶ್ನೆಯು ಬರುತ್ತದೆ. ಯಾವುದರ ವೇಗದ ಮಿತಿಯನ್ನು ನಿರ್ಧರಿಸಲು ಸಾಧ್ಯವೇ ಇಲ್ಲವೋ ಅಂತಹದ್ದನ್ನು ಮಾತ್ರ ಈ ಬ್ರಹ್ಮಾಂಡದಲ್ಲೇ ಅತಿವೇಗವುಳ್ಳ ವಿಷಯ ಎಂದು ನಿರ್ಧರಿಸಬಹುದು. ಮನಸ್ಸು ಎಲ್ಲಕ್ಕಿಂತ ವೇಗವುಳ್ಳದ್ದು. ಏಕೆಂದರೆ ಅದರ ವೇಗ ಎಷ್ಟೆಂಬುದು ಇವತ್ತಿನ ತನಕ ಸರಿಯಾಗಿ ತಿಳಿದಿಲ್ಲ. ಒಂದು ಅಧ್ಯಯನದ ಪ್ರಕಾರ ಮನಸ್ಸು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲ್ ಸಂಚರಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಅಂದರೆ ಮನಸ್ಸಿಗಿಂತಲೂ ವೇಗವುಳ್ಳ ಇನ್ನೊಂದು ವಸ್ತುವಿಲ್ಲ ಎಂದೇ ತಾತ್ಪರ್ಯ. ಈ ಬ್ರಹ್ಮಾಂಡವೆಂಬುದು ಅಸೀಮವಾದುದು, ಅಮಿತವಾದುದು. ಅದಕ್ಕಿಂತಲೂ ಅಮಿತವಾದುದು ಪರಬ್ರಹ್ಮ. ಇವೆಲ್ಲವನ್ನು ಒಂದು ಹಂತದವರೆ ತಿಳಿಯಲು ಸಾಧ್ಯವಾದ ವಸ್ತುವೆಂದರೆ ಮನಸ್ಸೇ. ಬ್ರಹ್ಮಾಂಡದ ಒಂದು ಕಡೆಯಿಂದ ಇನ್ನೊಂದು ಕಡೆ ಎನ್ನುವುದೇ ಅವಿದಿತವಾದ ಮೇಲೆ ಅದರ ಅಸೀಮತ್ವವನ್ನು ತಿಳಿಯಲು ಮನಸ್ಸಿಗೆ ಅದೆಂತಹ ವೇಗ ಇರಬೇಕಾದೀತು?! ಚಲಿಸುತ್ತಿರುವ ಯಾವುದೇ ವಸ್ತುವನ್ನೂ ಹಿಡಿಯಬೇಕಾದರೆ ಅದಕ್ಕಿಂತಲೂ ಹೆಚ್ಚಾದ ಶೈಘ್ರ್ಯ ಹಿಡಿಯುವ ವಿಷಯಕ್ಕೆ ಬೇಕಾಗುತ್ತದೆ. ಹಾಗಾಗಿ ಈ ಮನಸ್ಸಿಗೆ ಎಲ್ಲಕ್ಕಿಂತಲೂ ಅಧಿಕವಾದ ವೇಗವಿದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ.

ಅದಕ್ಕಾಗಿ ಈ ಮನಸ್ಸನ್ನು ಹಿಡಿದಿಡುವುದು ದುರ್ಭರ. ಅದು ಬಹಳ ಚಂಚಲ. ಆದರೆ ಮನಸ್ಸನ್ನು ಕಟ್ಟಿ ಹಾಕಲೇಬೇಕಾದುದು. ಅದರ ವೇಗವನ್ನು ತಿಳಿಯದಿದ್ದರೂ ವೇಗವನ್ನು ತಡೆದು ಒಂದು ಕಡೆ ಸ್ಥಿರಗೊಳಿಸಲೇಬೇಕಾದ ವಿಷಯ.   

ಸೂಚನೆ : 26/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.