Friday, February 3, 2023

ಸದ್ವಿಚಾರಗಳ ಭಂಡಾರ - ವಿದುರ (Sadvicaragala Bhandhra - Vidura)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)





ವಿದುರನಿಂದ ಧರ್ಮಯುಕ್ತವಾದ ಹಾಗೂ ಪರಮ ಶ್ರೇಯಸ್ಕರವಾದ ಮಾತುಗಳನ್ನು ಕೇಳ ಬಯಸುವ ಧೃತರಾಷ್ಟ್ರನನ್ನು ಕುರಿತು ವಿದುರನು ಹೀಗೆ ಪ್ರಶ್ನಿಸುತ್ತಾನೆ. ಅಕ್ರೂರತ್ವ, ದಯೆ, ಧರ್ಮ, ಸತ್ಯ, ಪರಾಕ್ರಮ ನಿನ್ನ ಮೇಲಿನ ಪೂಜ್ಯಭಾವನೆ ಹೀಗೆ ಎಲ್ಲಾರೀತಿಯ ಸದ್ಗುಣ ಸಂಪನ್ನನಾದ ಧರ್ಮರಾಜನನ್ನು ಅನಾದರಿಸಿ ದುರ್ಯೋಧನ, ಶಕುನಿ, ಕರ್ಣ ದುಃಶಾಸನರಂತಹ ಅಯೋಗ್ಯ ವ್ಯಕ್ತಿಗಳಲ್ಲಿ ಅಧಿಕಾರವನ್ನು ಇರಿಸಿ ನೆಮ್ಮದಿಯನ್ನು ಹೇಗೆ ತಾನೇ ಹೊಂದಲು ಸಾಧ್ಯ? ಎಂಬುದಾಗಿ ಕೇಳಿ ಪಂಡಿತರ ಹಾಗೂ ಮೂರ್ಖರ ಕೆಲವೊಂದು ಲಕ್ಷಣಗಳನ್ನು ತಿಳಿಯಪಡಿಸುತ್ತಾನೆ,


"ಯಸ್ಯ ಕೃತ್ಯಂ ನ ವಿಘ್ನoತಿ ಶೀತಮುಷ್ಣo ಭಯಂ ರತಿ:l

ಸಮೃದ್ಧಿರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ" ll


"ಶೀತೋಷ್ಣಗಳಾಗಲೀ, ಭಯ-ಅನುರಾಗಗಳಾಗಲೀ, ಸಮೃದ್ಧಿ ಅಥವಾ ಕೊರತೆಗಳಾಗಲೀ ಯಾವನ ಕಾರ್ಯಕ್ಕೆ ವಿಘ್ನವನ್ನುಂಟುಮಾಡುವುದಿಲ್ಲವೋ ಅಂತಹವನನ್ನು ಪಂಡಿತನೆಂದು ಕರೆಯುತ್ತಾರೆ".


ಸಾಧಾರಣವಾಗಿ ಪಂಡಿತ ಎಂದೊಡನೆ ನಮ್ಮ ಮನಸ್ಸಿನಲ್ಲಿ ಸಹಜವಾಗಿ ಮೂಡುವ ಚಿತ್ರಣ ಅನೇಕ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಸದಸ್ಸಿನಲ್ಲಿ ತಾನು ಕಲಿತಿರುವ ವಿದ್ಯೆಯನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸುವವನು. ಆದರೆ ಅಷ್ಟೇ ಪಂಡಿತನ ಲಕ್ಷಣವಲ್ಲ. ಭಗವದ್ಗೀತೆಯಲ್ಲಿ ಪರಮಾತ್ಮನು ಪಂಡಿತನ ಲಕ್ಷಣವನ್ನು ಹೀಗೆ ಉದ್ಘೋಷಿಸಿದ್ದಾನೆ-"ವಿದ್ಯಾವಿನಯಗಳಿಂದ ಕೂಡಿದ ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ ಹಾಗೆಯೇ ನಾಯಿ ಮತ್ತು ನಾಯಿಯ ಮಾಂಸ ತಿನ್ನುವವನು ಇವರೆಲ್ಲರಲ್ಲಿಯೂ ಸಹ  ಪಂಡಿತರು ಸಮದರ್ಶಿಗಳಾಗಿ ಇರುತ್ತಾರೆ".  ಅಂದರೆ ಏಕವೂ ಅವಿಕಾರವೂ ಆದ ಬ್ರಹ್ಮವಸ್ತುವನ್ನೇ ಎಲ್ಲಾ ಜೀವಿಗಳಲ್ಲಿಯೂ ಕಾಣುತ್ತಾರೆ. ಹಾಗಾಗಿ, ಪಂಡಿತ ಎಂದರೆ ಆತ್ಮ ಜ್ಞಾನವುಳ್ಳವನು ಎಂದರ್ಥ.  ಇಂತಹ ಪಂಡಿತನು ಸುಖ -ದುಃಖ, ಭಯ -ಅನುರಾಗ,ಸಮೃದ್ಧಿ -ಕೊರತೆ ಯಾವುದರಿಂದಲೂ ವಿಚಲಿತನಾಗದೇ ತಾನು ಸಂಕಲ್ಪಿಸಿದ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ.


"ಅಕಾಮಾನ್ ಕಾಮಯತಿ ಯ: ಕಾಮಯಾನಾನ್  ಪರೀತ್ಯಜೇತ್ l

ಬಲವಂತಮ್ ಚ ಯೋ ದ್ವೇಷ್ಟಿ ತಮಾಹುರ್ಮೂಢಚೇತಸಮ್" ll


("ಯಾವನು ಅಪೇಕ್ಷಿಸಬಾರದ್ದನ್ನು ಅಪೇಕ್ಷಿಸುವನೋ, ಅಪೇಕ್ಷಿಸಿ ಪಡೆಯಲು ಯೋಗ್ಯವಾದದ್ದನ್ನು ಪರಿತ್ಯಜಿಸುವನೋ ಹಾಗೂ ತನಗಿಂತ ಬಲಿಷ್ಠನಾದವನನ್ನು ದ್ವೇಷಿಸುವನೋ ಅಂತಹವನನ್ನು ಮೂರ್ಖ ವಿಚಾರಗಳುಳ್ಳ ಮನುಷ್ಯ ಎಂದೆನ್ನುವರು").


 ಈ ಮಾತು ದುರ್ಯೋಧನನಿಗೆ ನೇರವಾಗಿ ಅನ್ವಯಿಸುತ್ತದೆ. ದುರ್ಯೋಧನನು ಸತ್ಯನಿಷ್ಠರಾದ ಪಾಂಡವರ ಸಂಪತ್ತನ್ನು ಅಪೇಕ್ಷಿಸುವುದರ ಜೊತೆಗೆ ಅವರ ವಿನಾಶವನ್ನೂ ಬಯಸುತ್ತಾನೆ. ಹಾಗೆಯೇ, ಹಿತೈಷಿಗಳ ಧರ್ಮಯುಕ್ತವಾದ ಹಿತವಚನಗಳನ್ನು ತ್ಯಜಿಸುತ್ತಾನೆ. ಸಾಕ್ಷಾತ್ ಭಗವಂತನೇ ಬೆಂಗಾವಲಾಗಿ ನಿಂತಿರುವ, ಧರ್ಮ, ನ್ಯಾಯ, ಸತ್ಯ, ತಪಸ್ಸು, ಪರಾಕ್ರಮ ಹೀಗೆ ಸರ್ವ ರೀತಿಯಿಂದಲೂ ಇವನಿಗಿಂತ ಬಲಿಷ್ಠರಾಗಿರುವ ಪಾಂಡುಪುತ್ರರನ್ನು ದ್ವೇಷಿಸುವುದು ಇವನ ಮೂರ್ಖತನದ ಪರಮಾವಧಿಯೇ ಸರಿ. ಹಾಗಾಗಿ ಸಮಸ್ತ ಜೀವಕೋಟಿಗಳಲ್ಲಿಯೂ ಸಮದರ್ಶಿತ್ವವನ್ನು ಹೊಂದಿ ಪಂಡಿತ (ಜ್ಞಾನಿ) ಸದೃಶನಾದ ಯುಧಿಷ್ಠಿರನನ್ನು ರಾಜಪದವಿಯಲ್ಲಿ ಕೂರಿಸಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯವೆಂಬುದನ್ನು ವಿದುರನು ಧೃತರಾಷ್ಟ್ರನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾನೆಂಬುದು  ಸ್ಪಷ್ಟವಾಗಿ ತಿಳಿಯುವ ವಿಷಯವಾಗಿದೆ.


"ದ್ವೇ ಕರ್ಮಣೀ ನರ: ಕುರ್ವನ್ನಸ್ಮಿoಲ್ಲೋಕೇ ವಿರೋಚತೇ l

ಅಬ್ರುವನ್ ಪುರುಷo ಕಿಂಚಿದಸತೋsನರ್ಚಯoಸ್ತಥಾ"ll


("ಎಂದೂ ಕಠಿಣವಾದ ಮಾತುಗಳನ್ನಾಡದಿರುವುದು ಹಾಗೂ ದುಷ್ಟ ವ್ಯಕ್ತಿಗಳನ್ನು ಆದರಿಸದಿರುವುದು, ಈ ಎರಡು ಕೆಲಸಗಳನ್ನು ಮಾಡುವ ವ್ಯಕ್ತಿಯು ಈ ಲೋಕದಲ್ಲಿ ವಿಶೇಷವಾದ ಪ್ರೀತಿಗೆ ಪಾತ್ರನಾಗುತ್ತಾನೆ").


 ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದು ಜನಪ್ರಿಯ ನಾಣ್ಣುಡಿ.  ಮಾತು ಎಂಬುದು ನಮ್ಮೊಳಗಿನ ಭಾವವನ್ನು ವ್ಯಕ್ತ ಪಡಿಸಲು ಇರುವ ಸಾಧನ.  ಮನದೊಳಗೆ ಯಾವ ರೀತಿಯ ಭಾವಗಳು ಆಡುತ್ತಿರುತ್ತವೆಯೋ ಸಹಜವಾಗಿ ಅದಕ್ಕನುಗುಣವಾದ ಮಾತು ಹೊರಹೊಮ್ಮತ್ತದೆ.  ಮನಸ್ಸು ಶುದ್ಧವಾಗಿದ್ದ ಪಕ್ಷದಲ್ಲಿ ಅಪ್ರಯತ್ನವಾಗಿಯೇ ಮೃದು ಮಧುರವಾದ, ಶ್ರೋತೃಗಳಿಗೆ ಹಿತವನ್ನುಂಟುಮಾಡುವ ವಾಕ್ಕು ಹರಿಯುತ್ತದೆ. ನಮ್ಮ ಸಂಸ್ಕೃತಿಯು ವಾಕ್ಕಿನ ಬಗ್ಗೆ ಇನ್ನೂ ಆಳವಾದ ನೋಟವನ್ನು ಕೊಡುತ್ತದೆ. ವಾಕ್ಕಿನ ಮೂಲಸ್ಥಾನ ನಮ್ಮೊಳಗೇ ಮನಸ್ಸಿಗೂ ಹಿಂದೆ ಬೆಳಗುತ್ತಿರುವ ಮನಸಸ್ಪತಿಯಾದ ಪರಮಪುರುಷನ ಸ್ಥಾನ. ಪರಿಶುದ್ಧವಾದ ಪ್ರಕೃತಿಯುಳ್ಳವರು (ಜ್ಞಾನಿಗಳು) ಅದನ್ನು ಅಂತೆಯೇ ಹೊರತರಲು ಸಮರ್ಥರಾಗಿರುತ್ತಾರೆ, ಅವರ ಪ್ರತಿಯೊಂದು ವಾಣಿಯೂ ಶಾಸ್ತ್ರ ವಾಕ್ಯವೇ ಆಗುತ್ತದೆ.


"ವಾಕ್ಕು ಪರಮಪುರುಷನ ರಸ (ರೂಪ)ವಾಗಿದೆ. ಆ ರಸವನ್ನು ವ್ಯಕ್ತಪಡಿಸುವಂತಹ ಮಾತುಗಳನ್ನಾಡಬೇಕು". ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ.


 ಕಾಯಾ ವಾಚಾ ಮನಸಾ ದುಷ್ಟತನವನ್ನು ತುಂಬಿಕೊಂಡಿರುವ ವ್ಯಕ್ತಿಗಳ ಸಹವಾಸದಲ್ಲಿರುವುದಾಗಲೀ, ಅವರನ್ನು ಆದರಿಸುವುದಾಗಲೀ ಸರ್ವಥಾ ಅಶ್ರೇಯಸ್ಸನ್ನುoಟುಮಾಡುವಂತಹವು.  ಹಾಗಾಗಿ, ಅಂತಹವರನ್ನು (ಶಕುನಿ, ಕರ್ಣ ಮೊದಲಾದವರನ್ನು) ದೂರವಿಡು ಎಂಬುದಾಗಿ ಬಾರಿ ಬಾರಿಗೂ ಧೃತರಾಷ್ಟ್ರನಿಗೆ ವಿದುರನು ಕಿವಿಮಾತನ್ನು ಹೇಳುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಇದು ಎಲ್ಲರ ಜೀವನಕ್ಕೂ ಅನ್ವಯವಾಗುವ ವಿಚಾರ. ಹೇಗೆ, ಸಜ್ಜನರ ಸಹವಾಸದಿಂದ ನಮ್ಮಲ್ಲಿಯೂ ಸದ್ಭಾವನೆಗಳು ಬೆಳೆದು ನಮಗೆ ಒಂದು ಶುದ್ಧತೆಯನ್ನು ತಂದುಕೊಡುತ್ತವೆಯೋ, ಹಾಗೆಯೇ, ದುಷ್ಟರ ಸಹವಾಸದಿಂದ ನಮ್ಮ ಮನೋ ಬುದ್ಧಿಗಳು ವಿರೂಪಗೊಂಡು, ಅವುಗಳಲ್ಲಿ ಕಾಲುಷ್ಯ ತುಂಬಿಕೊಳ್ಳುತ್ತದೆ.


 "ಅರ್ಥಸಿದ್ಧಿo ಪರಾಮಿಚ್ಛನ್ ಧರ್ಮಮೇವಾದಿತಶ್ಚರೇತ್ l

ನ ಹಿ ಧರ್ಮಾದಪೈತ್ಯರ್ಥ: ಸ್ವರ್ಗಲೋಕಾದಿವಾಮೃತಮ್" ll


 ("ಯಾರು ಅರ್ಥಸಿದ್ಧಿಯನ್ನು ಅಭಿಲಾಷಿಸುತ್ತಾನೆಯೋ, ಅವನು ಮೊದಲಿನಿಂದಲೂ ಧರ್ಮಕಾರ್ಯವನ್ನೇ ಮಾಡುತ್ತಿರಬೇಕು. ಅಮೃತವು ಸ್ವರ್ಗದಿಂದ ಹೇಗೆ ದೂರವಿಲ್ಲವೋ ಹಾಗೆಯೇ ಅರ್ಥವೂ ಧರ್ಮದಿಂದ ದೂರವಿರದು").


 ಅರ್ಥವೆಂದರೆ ಯಾವುದೇ ವಿಧವಾದ ಸಂಪತ್ತು.  ಅದು ಧನದ ರೂಪದಲ್ಲಿರಬಹುದು ಅಥವಾ  ಪದಾರ್ಥದ ರೂಪದಲ್ಲಿರಬಹುದು. ಒಬ್ಬ ಮನುಷ್ಯನು ಹುಟ್ಟುವಾಗಲೇ ಅವನು ಇಂತಿಂತಹ ಸಂಪತ್ತನ್ನು ಅನುಭವಿಸಬೇಕೆಂಬುದು ನಿಶ್ಚಯವಾಗಿರುತ್ತದೆ.  ಭಗವಂತ, ಅದನ್ನು ಕಾಲಕಾಲಕ್ಕೆ ದಯಪಾಲಿಸುತ್ತಾನೆ. ಆದರೆ ಅದನ್ನು ಪಡೆಯಲು  ಪುರುಷ ಪ್ರಯತ್ನವೂ ಅತ್ಯವಶ್ಯಕ. ಆ ಪ್ರಯತ್ನವು ಧರ್ಮ ಮಾರ್ಗದಲ್ಲಿದ್ದಾಗ ಸಂಪತ್ತು ಅವನಲ್ಲಿಯೇ ಉಳಿದು ವೃದ್ಧಿ ಹೊಂದುತ್ತದೆ. ಅಧರ್ಮ ಮಾರ್ಗದಿಂದ ಪಡೆದ ಸಂಪತ್ತು ಕ್ಷಣಿಕ ಹಾಗೂ ಅದರಿಂದ ಮುಂದೆ ದೊಡ್ಡ ವಿನಾಶವೇ ಸಂಭವಿಸುವುದು ಎಂಬುದಕ್ಕೆ ನಮ್ಮ ಇತಿಹಾಸಗಳಲ್ಲಿ ಅನೇಕ ಉದಾಹರಣೆಗಳಿವೆ.  ಅಧರ್ಮದಿಂದ ಪಡೆದ ನಿನ್ನ ಮಕ್ಕಳ ಸಂಪತ್ತು ಅವರನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ವಿದುರನು ದೃತರಾಷ್ಟ್ರನಿಗೆ ನೀಡುತ್ತಿದ್ದಾನೆ. ಹೀಗೆ ಧೃತರಾಷ್ಟ್ರನನ್ನು ಉದ್ದೇಶಿಸಿ ಆಡಿದ ವಿದುರನ ಮಾತುಗಳು ಸದ್ವಿಚಾರಗಳ ಭಂಡಾರವೇ ಆಗಿ ಲೋಕೋಪಕಾರಿಯಾಗಿದೆ.


ಸೂಚನೆ:  2/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.