Tuesday, February 14, 2023

ವ್ಯಾಸ ವೀಕ್ಷಿತ - 25 ಆಗಂತುಕ-ವಿಪ್ರನ ಆಶ್ಚರ್ಯ-ಕಥನಗಳು ( Vyaasa Vikshita - 25 Agantuka-viprana Ashcarya-kathanagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಲೋಕಕಂಟಕನಾಗಿದ್ದ ಬಕಾಸುರನನ್ನು ಸಂಹಾರ ಮಾಡಿದ ಬಳಿಕ, ಪಾಂಡವರು ಆ ಬ್ರಾಹ್ಮಣನ ಮನೆಯಲ್ಲಿಯೇ ಉಳಿದುಕೊಂಡರು. ಸಾಯಿಸುವುದಕ್ಕೂ ಹೇಸದ, ಅಸೂಯುವಾದ (ಎಂದರೆ ಅಸೂಯಾ-ಭರಿತನಾದ) ದುರ್ಯೋಧನ ಮೊದಲಾದವರ ಕಾಟವನ್ನು ತಪ್ಪಿಸಿಕೊಳ್ಳಬೇಕಿತ್ತಲ್ಲವೇ? ಎಂದೇ ಪಾಂಡವರು ಬ್ರಾಹ್ಮಣರ ವೇಷವನ್ನು ಧರಿಸಿದ್ದರಷ್ಟೆ. ತದನುಸಾರವಾಗಿ, ಅಲ್ಲಿ ಉಳಿದುಕೊಂಡಿದ್ದ ಅವರು ವೇದಾಧ್ಯಯನವನ್ನು ಮಾಡುತ್ತಿದ್ದರು (ಅಧೀಯಾನಾಃ ಪರಂ ಬ್ರಹ್ಮ) (ಬ್ರಹ್ಮವೆಂಬ ಪದಕ್ಕೆ ವೇದವೆಂಬ ಅರ್ಥವೂ ಪ್ರಸಿದ್ಧವಾದದ್ದೇ).

ಕೆಲದಿನಗಳು ಕಳೆದವು. ಆಶ್ರಯಾರ್ಥಿಯಾಗಿ ಬ್ರಾಹ್ಮಣನೊಬ್ಬನು ಇವರುಗಳಿದ್ದ ಮನೆಗೆ ಬಂದನು. ಆತನೋ ಸಂಶಿತವ್ರತನಾದವನು, ಎಂದರೆ ವ್ರತಾಚರಣೆಗಳಲ್ಲಿ ನಿಷ್ಠೆಯುಳ್ಳವನು. (ಆಚಾರನಿಷ್ಠೆಯುಳ್ಳ ಬ್ರಾಹ್ಮಣನನ್ನು ಕಂಡರೆ ಆದರ ಮೂಡುವುದು ಸಾಧಾರಣವಾಗಿದ್ದ ಕಾಲವದು; ಎಂದೇ ಆತನಿಗೆ ಇಲ್ಲಿ ಆಶ್ರಯವು ಸಹಜವಾಗಿಯೇ ದೊರೆತಿತು). ಮನೆಯೊಡೆಯನಾದ ಬ್ರಾಹ್ಮಣನಿಗೂ ಅತಿಥಿಗಳೆಂದರೆ ಅತಿಶಯವಾದ ಆದರವೇ. ಎಂದೇ ಆಗಂತುಕನಾಗಿ ಬಂದ ಆ ಬ್ರಾಹ್ಮಣನಿಗೆ ಚೆನ್ನಾಗಿಯೇ ಸತ್ಕಾರ ಮಾಡಿದನು.

ಆ ಬ್ರಾಹ್ಮಣನಾದರೂ  ಒಳ್ಳೊಳ್ಳೆಯ ಮಾತುಗಳನ್ನೇ ಆಡುತ್ತಿದ್ದನು. ಕುಂತಿಯೊಂದಿಗೆ ಪಾಂಡವರು ಆತನ ಮಾತುಗಳಿಗೆ ಕಿವಿಗೊಟ್ಟರು. ಆತನೋ ಅಪಾರ ಸಂಚಾರ ಮಾಡಿದ್ದವನು. ತಾನು ಕಂಡಿದ್ದ ನಾನಾದೇಶಗಳೇನು, ತೀರ್ಥಗಳೇನು, ನದಿಗಳೇನು, ರಾಜರುಗಳ ನಾನಾಶ್ಚರ್ಯಕರಗಳಾದ ಪುರಗಳು ರಾಜ್ಯಗಳೇನು - ಇವೆಲ್ಲವನ್ನು ಕುರಿತೂ ಹೇಳಿದನು.

ಈ ಕಥೆಗಳು ಮುಗಿಯುವ ಹೊತ್ತಿಗೆ ಪಂಚಾಲದೇಶದಲ್ಲಿ ಜರುಗುವ ಯಾಜ್ಞಸೇನಿಯ (ಎಂದರೆ ದ್ರೌಪದಿಯ) ಅದ್ಭುತವಾದ ಸ್ವಯಂವರವನ್ನೂ, ಧೃಷ್ಟದ್ಯುಮ್ನ ಹಾಗೂ ಶಿಖಂಡಿ - ಇವರುಗಳ ಜನನವನ್ನೂ, ದ್ರುಪದ-ಮಹಾರಾಜನ ಮಹಾಯಜ್ಞದಲ್ಲಿ ಕೃಷ್ಣೆಯ (ಎಂದರೆ ದ್ರೌಪದಿಯ) ಅಯೋನಿಜತ್ವವನ್ನೂ (ಎಂದರೆ ಎಲ್ಲರಂತಲ್ಲ, ಅವಳ ಜನ್ಮ; ಎಲ್ಲರೂ ತಾಯಿಯ ಗರ್ಭದಿಂದ ಹೊರಬಂದು ಜನಿಸುವರು; ಆದರೆ ದ್ರೌಪದಿಯು ಹಾಗಲ್ಲವೆಂಬುದು) - ಇವೆಲ್ಲವನ್ನೂ ಹೇಳಿದನು.

ಇವೆಲ್ಲವೂ ಅತ್ಯದ್ಭುತವಾದ ಘಟನೆಗಳೇ ಸರಿ. ಪಾಂಡವರ ಕುತೂಹಲವೂ ಸಹಜವಾಗಿಯೇ ಕೆರಳಿತು; ಎಂದೇ ಅವೆಲ್ಲವನ್ನೂ ವಿಸ್ತರವಾಗಿ ಹೇಳಬೇಕೆಂಬುದಾಗಿ ಆ ಬ್ರಾಹ್ಮಣನನ್ನು ಅವರು ಕೇಳಿಕೊಂಡರು: "ಅಯ್ಯಾ ವಿಪ್ರನೇ, ದ್ರುಪದನ ಪುತ್ರನಾದ ಧೃಷ್ಟದ್ಯುಮ್ನನು ಅಗ್ನಿಯಿಂದ ಹುಟ್ಟಿದನೆಂದಿರಿ; ಇದಾದದ್ದು ಹೇಗೆ? ಕೃಷ್ಣೆಯ ಅದ್ಭುತ-ಜನನವು ಯಜ್ಞ-ವೇದಿಕೆಯ ಮಧ್ಯದಿಂದ ಆದುದೆಂದಿರಿ; ಅದಾದದ್ದು ಹೇಗೆ? ದ್ರೋಣಾಚಾರ್ಯರು ಮಹಾಬಿಲ್ಲುಗಾರರು; ಅವರಿಂದ ಎಲ್ಲಾ ಅಸ್ತ್ರಗಳನ್ನು ಆ ಧೃಷ್ಟದ್ಯುಮ್ನನು ಕಲಿತನೆಂದಿರಿ, ಅದರ ಬಗೆಯೇನು? ದ್ರುಪದನೂ ದ್ರೋಣರೂ ಮಿತ್ರರಾಗಿದ್ದವರು; ಅವರ ಸ್ನೇಹವು ಒಡೆದುಹೋದದ್ದಾದರೂ ಹೇಗೆ?" – ಎಂದೆಲ್ಲಾ ಕೇಳಿದರು.

ಹೀಗೆ ಪುರುಷಶ್ರೇಷ್ಠರಾದ ಪಾಂಡವರಿಂದ ಚೋದಿತನಾದ (ಎಂದರೆ ಪ್ರೇರಿಸಲ್ಪಟ್ಟ) ಆ ವಿಪ್ರನು ಅದೆಲ್ಲವನ್ನೂ ವಿಸ್ತಾರವಾಗಿ ಹೇಳಿದನು. ಅದು ಹೀಗೆ:

ಗಂಗಾದ್ವಾರದ ಬಳಿ ಮಹಾತಪಸ್ವಿಯದ ಋಷಿಯೊಬ್ಬನಿದ್ದನು. ಆತನೇ ಮಹಾಪ್ರಾಜ್ಞನಾದ ಭರದ್ವಾಜ. ವ್ರತಾಚರಣೆಯಲ್ಲಿ ಕಟ್ಟುನಿಟ್ಟಾದವನು ಅವನು. ಸ್ನಾನಾರ್ಥವಾಗಿ ಆತನೊಮ್ಮೆ ಗಂಗೆಗೆ ಹೋದನು. ಮೊದಲೇ ಅಲ್ಲಿಗೆ ಬಂದಿದ್ದು ಸ್ನಾನ ಮುಗಿಸಿದ್ದ ಅಪ್ಸರಸ್ತ್ರೀಯೊಬ್ಬಳನ್ನು ಕಂಡನು. ಅವಳ ಹೆಸರು ಘೃತಾಚೀ. ಅವಳು ವಸ್ತ್ರಧಾರಣೆ ಮಾಡುತ್ತಿರಲು ಗಾಳಿ ಬೀಸಿ ಅವಳ ವಸ್ತ್ರವು ಹಾರಿಹೋಯಿತು. ವಿವಸ್ತ್ರಳಾದ ಆಕೆಯನ್ನು ಋಷಿಯು ಬಯಸಿದನು. ದೀರ್ಘಕಾಲದಿಂದ, ಎಂದರೆ ಚಿಕ್ಕಂದಿನಿಂದಲೂ, ಬ್ರಹ್ಮಚಾರಿಯಾಗಿದ್ದ ಆತನ ಮನಸ್ಸು ಅವಳಲ್ಲಿ ನೆಟ್ಟಿತು.


ಸೂಚನೆ : 12/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.