Sunday, February 26, 2023

ಅಷ್ಟಾಕ್ಷರೀ​ - 29 ಜ್ಞಾನಿನಃ ತತ್ತ್ವದರ್ಶಿನಃ (Astakshara Darshana 29 Jnaninah Tattvadarshinah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಭಾರತೀಯ ಅಧ್ಯಾತ್ಮಪರಂಪರೆಗೂ ಅನ್ಯಪರಂಪರೆಗಳಿಗೂ ಪ್ರಮುಖವಾದ ವ್ಯತ್ಯಾಸಗಳಿವೆ. "ನಾನು ಹೇಳುವುದನ್ನೊಪ್ಪಿ ನನ್ನ ಮಾತಿನಂತೆ ನಡೆ; ಇಲ್ಲವೋ ನಿನಗೆ ನಿತ್ಯನರಕವೇ ಸಿದ್ಧ!" ಎಂಬ ಪರಿಯಲ್ಲಿ ವಿದೇಶೀಪರಂಪರೆಗಳ ವರಸೆ. ಆದರೆ ನಮ್ಮಲ್ಲಿ ಹಾಗಲ್ಲ: "ಯೋಚಿಸಿ ನೋಡು; ಹಿತಕಂಡರೆ ಅನುಸರಿಸು." ಎನ್ನುವ ಮಾತೇ ಪ್ರಧಾನ. ಗೀತೆಯಾಗಲಿ ಉಪನಿಷತ್ತಾಗಲಿ ಅಲ್ಲೆಲ್ಲ ಸಂವಾದಗಳೇ ಎದ್ದು ಕಾಣುವಂತಹವು. ಹೆದರಿಸಿ ಬೆದರಿಸಿ ಕೆಲಸ ಮಾಡಿಸುವ ಗೋಜಿಲ್ಲ, ಗೋಜಲಿಲ್ಲ.

ಮಾತು ಸತ್ಯಮೂಲವಾಗಿ ಎಲ್ಲಿ ಬರುವುದೋ ಅಲ್ಲಿ ಅವರಲ್ಲಿಯ ಆಕ್ರೋಶದ ಆವಶ್ಯಕತೆಯಿರುವುದಿಲ್ಲ. "ನನ್ನನ್ನು ನಂಬಿದರೆ ಮಾತ್ರವೇ ನಿನ್ನ ಉದ್ಧಾರ!" ಎನ್ನುತ್ತಾ ನಾನಾ ನಿಹಿತಸ್ವಾರ್ಥಗಳಿಗಾಗಿ ನಾನಾತಂತ್ರಗಳನ್ನು ಬಳಸುವವರ ಬಿಗಿಬಗೆಗಳ ಶೋಧನವು ನಮಗಿಲ್ಲಿ ಪ್ರಕೃತವಲ್ಲ. ಪ್ರಕೃತವಾದದ್ದು ಅಧ್ಯಾತ್ಮದಲ್ಲಿಯ ಪ್ರಗತಿ.

ಲೋಕದಲ್ಲಿ ನಾವು ಸಾಧಾರಣವಾಗಿ ನೋಡುವಂತೆ, ಬಹುಮಂದಿಗೆ ಸಾಧಾರಣವಾದ ಜೀವನದಲ್ಲೇ ತೃಪ್ತಿ. ಹಿರಿದಾದುದನ್ನು ಸಾಧಿಸಬೇಕೆನ್ನುವವರು, ಕಿರಿದಾದ ಕೆಲವು ಸುಖಗಳನ್ನು ಕೆಲಕಾಲ ಕೈಬಿಡಬೇಕಾಗಿರುತ್ತದೆಯಲ್ಲವೇ? ಸುಭಾಷಿತವೊಂದರಂತೆ, ಸುಖಾರ್ಥಿಯು ವಿದ್ಯಾರ್ಥಿಯಾಗಲಾರ; ವಿದ್ಯಾರ್ಥಿಯು ಸುಖಾರ್ಥಿಯಾಗಿರಲಾರ. ವಾಸ್ತವವಾಗಿ, ಒಳ್ಳೆಯ ವಿದ್ಯಾಸಂಪಾದನೆಯ ಬಳಿಕ ಉತ್ಕೃಷ್ಟವಾದ ಸುಖಗಳನ್ನೇ ಪಡೆಯಬಹುದೆಂಬುದನ್ನು ಕಂಡುಕೊಂಡಾಗ, ಆರಂಭದಲ್ಲಿಯ ಸುಖತ್ಯಾಗದಿಂದ ಮಹತ್ತಾದ ನಷ್ಟವೇನೂ ಆಗದೆಂಬುದು ಮನದಟ್ಟಾಗುತ್ತದೆ.

ಹೊಟ್ಟೆಹೊರೆಯಲೆಂದು ಕಲಿಯುವುದೊಂದು ಬಗೆ; ಆದರೆ ಹಸಿವು ಹೊಟ್ಟೆಗೆ ಮಾತ್ರವೇ? ಮನೋಬುದ್ಧಿಗಳಿಗೂ ಹಸಿವೆಂಬುದುಂಟು. ಅವಕ್ಕೂ ಆಹಾರ ಬೇಕೇ. ಕಲಾಭ್ಯಾಸ-ಶಾಸ್ತ್ರಾಧ್ಯಯನಗಳಿಂದ ಅದು ಲಭ್ಯ. ಅಂತೂ ದೇಹ-ಇಂದ್ರಿಯ-ಮನಸ್ಸು-ಬುದ್ಧಿಗಳಿಗೆ ಒಂದಲ್ಲ ಒಂದು ರೀತಿಯ ಆಹಾರವನ್ನು ಒದಗಿಸುತ್ತಲೇ ಇರುತ್ತೇವೆ. (ಅವಲ್ಲಿ ಯಾವುದೆಷ್ಟು ಆರೋಗ್ಯಕರ, ಯಾವುದಲ್ಲ? - ಎಂಬ ಪ್ರಶ್ನೆಯನ್ನು ಈಗಿಲ್ಲೆತ್ತಿಕೊಳ್ಳುವುದು ಬೇಡ.)

ಆದರೆ ಸಾಧಾರಣವಾಗಿ ಬಹುಮಂದಿಗರಿವಾಗದ  ಹಸಿವೊಂದುಂಟು. ಮಿಕ್ಕೆಲ್ಲ ಹಸಿವೆಗಳಿಗಿಂತಲೂ ಅದು ಮಿಗಿಲಾದುದು, ಉನ್ನತವಾದುದು. ಅದುವೇ ಆತ್ಮನ ಹಸಿವು. ಅದಕ್ಕೂ ಆಹಾರವು ಬೇಕು. "ಆತ್ಮನ ಹಸಿವಿಗೆ ಪರಮಾತ್ಮನೇ ಆಹಾರ" - ಎಂಬುದಾಗಿ ಶ್ರೀರಂಗಮಹಾಗುರುಗಳು ಉಪದೇಶಿಸಿದ್ದರು. ಈ ಹಸಿವನ್ನು ನೀಗಿಸಿಕೊಳ್ಳುವುದನ್ನೇ ಜ್ಞಾನವೆನ್ನುವುದು. ನಿಜವಾದ ಜ್ಞಾನವೆಂದರೆ ಅದೇ. "ಕರ್ಮಗಳೆಲ್ಲವೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದುತ್ತವೆ" – ಎಂಬ ಗೀತೋಕ್ತಿಯ ಸಾರವಿಲ್ಲಿದೆ.

ಅಂತಹ ಜ್ಞಾನವನ್ನು ಪಡೆಯಲು ಜ್ಞಾನಿಗಳ ಬಳಿ ಸಾಗಬೇಕು. ಜ್ಞಾನಿಗಳು ತತ್ತ್ವದರ್ಶಿಗಳು. ಏನು ಹಾಗೆಂದರೆ? ತತ್ ಎಂದರೆ ಅದು. ತತ್-ತ್ವ ಎಂದರೆ "ಅದರತನ", ಅದರ ವಾಸ್ತವ-ಸ್ವರೂಪ. ಭೌತಿಕವಾದ ವಸ್ತುಗಳಾದರೆ ಅವುಗಳನ್ನು ಹೊರಗಣ್ಣಿನಿಂದ ನೋಡಬಹುದು; ತಾತ್ತ್ವಿಕನೋಟವೆಂಬುದು ಒಳಗಣ್ಣಿಗೇ ಲಭ್ಯವಾಗುವಂತಹುದು. ಆತ್ಮತತ್ತ್ವದರ್ಶನವೇ ಜ್ಞಾನ. ಅನುಭವವೇ ತತ್ತ್ವದರ್ಶನ. ಈ ಪದದ ಮರ್ಮವನ್ನು ಬಿಡಿಸಿ ತೋರಿಸುತ್ತಾ ಶ್ರೀರಂಗಮಹಾಗುರುಗಳು ಹೀಗೆ ಹೇಳಿದ್ದಾರೆ: "ತತ್ತ್ವದರ್ಶಿಗಳೆಂದರೆ ತತ್ತ್ವವನ್ನು ಕುರಿತು ಹೇಳುವವರಲ್ಲ, ತತ್ತ್ವವನ್ನು ಕಂಡವರು, ಅನುಭವಿಸಿರುವವರು" ಎಂಬುದಾಗಿ. ಅಲ್ಲಿಗೆ, ಅನುಭವಕ್ಕೇ ಬೆಲೆ; ಬರೀ ಪುಸ್ತಕದ/ಕಲಿತ ಮಾತಿಗಲ್ಲ.

ಆ ಜ್ಞಾನವಾದರೂ ಸೂಕ್ಷ್ಮವಾದುದು: ಅದನ್ನು ಉಪದೇಶದಿಂದಲೇ ಪಡೆಯತಕ್ಕದ್ದು. ಏನು ಉಪದೇಶವೆಂದರೆ? "ದೇಶವೆಂದರೆ ಎಡೆ. ಉಪ-ಎಂದರೆ ಹತ್ತಿರ. ಆ ಉನ್ನತವಾದ ಎಡೆಯ ಬಳಿಗೊಯ್ಯುವುದೇ ಉಪ-ದೇಶ. ಅದಾಗದಿದ್ದರೆ ಅಪದೇಶ!" (ಎಂದರೆ ಮತ್ತೆಲ್ಲಿಗೋ ಒಯ್ದುಬಿಡುವುದು!) - ಎಂಬ ಮರ್ಮವನ್ನು ಬಿಡಿಸಿಕೊಟ್ಟವರೂ ಅವರೇ.

ಜ್ಞಾನವನ್ನು ಮಹಾತ್ಮರಿಂದ ಪಡೆಯಬೇಕು. ಅದಕ್ಕೆ ಮೂರು ಪರಿಗಳಿವೆ: ಅವೇ ಪ್ರಣಿಪಾತ (ಎಂದರೆ ನಮಸ್ಕಾರ), ಪರಿಪ್ರಶ್ನ (ಎಂದರೆ ಪರಿಪರಿಯಗಿ ಪ್ರಶ್ನಿಸುವುದು), ಹಾಗೂ ಸೇವೆ (ಎಂದರೆ ಶುಶ್ರೂಷೆ). ಮೂರೂ ಬೇಕು.


ಗುರುಶಿಷ್ಯ-ಸಂಬಂಧವು ಮಧುರವಾಗಿರಬೇಕು. "ನೀನು ನನ್ನ ಭಕ್ತನೂ ಸಖನೂ ಆಗಿದ್ದೀಯೇ. ಎಂದೇ ಈ ಉತ್ತಮರಹಸ್ಯವನ್ನು ಹೇಳುತ್ತಿದ್ದೇನೆ" ಎಂದು ಅರ್ಜುನನಿಗೆ ಹೇಳುತ್ತಾನೆ, ಶ್ರೀಕೃಷ್ಣ.

ನಮಸ್ಕಾರವೆಂಬುದು ಬರೀ ಆದರಸೂಚಕವಲ್ಲ: ಶಕ್ತಿಯ ಹರಿವನ್ನು ಸುಗಮವಾಗಿಸುವ ಪರಿಯದು! ಶುಶ್ರೂಷೆಯೆಂಬುದೂ ಅದರ ವಿಸ್ತಾರವೇ ಆಗಿರುವುದು. ಇನ್ನು, ಒಂದೇ ವಿಷಯವನ್ನು ನಾನಾಬಗೆಗಳಿಂದ ಪರಿಕಿಸಿ ಕೇಳಿ ತಿಳಿದುಕೊಳ್ಳುವುದು ಪರಿಪ್ರಶ್ನವೆನಿಸುವುದು. ಗುರುವು ಹೇಳಿದ್ದಕ್ಕೆಲ್ಲಾ ಸುಮ್ಮನೆ ಗೋಣಾಡಿಸುವಂತಾಗಿಬಿಡದೆ, ಮನನ-ಮಥನಗಳಿಂದಾಗಿ ಹೊಮ್ಮುವ ಪ್ರಶ್ನೆಗಳನ್ನು ಶಿಷ್ಯನು ಕೇಳಬೇಕು; ಆಗಾತನ ಸ್ತರವು ಗುರುವಿಗೆ ಸುಗೋಚರವಾಗುವುದು. ಶಿಷ್ಯನ ಸಂಶಯಗಳಳಿದು, ಬುದ್ಧಿಗೆ ತಿಳಿವು ಮೂಡಿ, ಅನುಭವವೂ ಎಟುಕಿಸುವಂತಾಗಿಸಲು ಗುರುವಿಗೂ ಅನುಕೂಲವಾಗುವುದು. ತತ್ತ್ವಜ್ಞರಾದವರ ಬಳಿಯ ಪರಿಪ್ರಶ್ನ-ಉತ್ತರಗಳು ಎಂದಿಗೂ ಅಮೂಲ್ಯವಾದವು.

ತತ್ತ್ವದರ್ಶಿಗಳಾದ ಜ್ಞಾನಿಗಳು ಜ್ಞಾನೋಪದೇಶವನ್ನು ಮಾಡುವರು – ಎಂಬುದು ಗೀತೆಯಲ್ಲಿಯ ಶ್ರೀಕೃಷ್ಣೋಕ್ತಿ. ಇದಕ್ಕೆ ಭಗವದ್ಗೀತೆಯೇ ಒಂದು ಭವ್ಯಸಾಕ್ಷಿಯಲ್ಲವೇ?


ಸೂಚನೆ: 12/02/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.