ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – 27 ಹುಲ್ಲಿಗಿಂತಲೂ ಅತಿ ಶೀಘ್ರವಾಗಿ ಬೆಳೆಯುವ ವಿಷಯ ಯಾವುದು?
ಉತ್ತರ - ಚಿಂತೆ
ಪ್ರಕೃತಿಯಲ್ಲಿ ವಿಭಿನ್ನಸಸ್ಯ ಬೆಳೆಯಲು ಭಿನ್ನ ಭಿನ್ನವಾದ ಕಾಲದ ಅಪೇಕ್ಷೆಯಿದ್ದೇ ಇರುತ್ತದೆ. ವ್ಯತ್ಯಾಸವಷ್ಟೇ ಸಹಜ. ನಮಗೆ ಕಂಡ ಸಸ್ಯಗಳ ಪೈಕಿ ಹುಲ್ಲು ಬಹಳ ಬೇಗ ಬೆಳೆಯುವ ಸಸ್ಯ ಎಂಬುದಾಗಿ ಹೇಳಲಾಗುತ್ತದೆ. ಇಲ್ಲಿ ಯಕ್ಷನ ಪ್ರಶ್ನೆ ಇದಕ್ಕಿಂತಲೂ ಶೀಘ್ರಗತಿಯಲ್ಲಿ ಬೆಳೆಯುವ ವಿಷಯ ಯಾವುದು? ಎಂಬುದು ಅದಕ್ಕೆ ಉತ್ತರ ಸಸ್ಯವಲ್ಲ. ಚಿಂತೆ ಎಂಬುದಾಗಿ. ಹಾಗಾದರೆ ಚಿಂತೆ ಅದೆಷ್ಟು ಬೇಗ ಬೆಳೆಯುತ್ತದೆ?
ಭರ್ತೃಹರಿಯ ಸುಭಾಷಿತವೊಂದು ಹೀಗಿದೆ - "ಯದ್ಭಾವಿ ತದ್ಭವತ್ಯೇವ ಯನ್ನ ಭಾವಿ ನ ತದ್ಭವೇತ್ । ಇತಿ ನಿಶ್ಚಿತಬುದ್ಧೀನಾಂ ನ ಚಿಂತಾ ಬಾಧತೇ ಕ್ವಚಿತ್ ॥" ಎಂದು. ಆಗಬೇಕಾದು ಆಗಿಯೇ ಆಗುತ್ತದೆ, ಆಗಬಾರದುದು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಈ ರೀತಿಯಾಗಿ ಯೋಚಿಸುವವನಿಗೆ ಯಾವುದೇ ಕಾರಣಕ್ಕೂ ಚಿಂತೆಯು ಬಾಧಿಸುವುದಿಲ್ಲ. ಆದರೆ ಈ ಸುಭಾಷಿತದ ಮಾತೂ ಕೂಡಾ ಒಂದು ಒಗಟಿನ ರೀತಿಯಲ್ಲಿ ಕಾಣುತ್ತದೆ. ಇಷ್ಟು ಸುಲಭವಾದ ಉಪಾಯದಿಂದ ಚಿಂತೆಯನ್ನು ದೂರ ಮಾಡಲು ಸಾಧ್ಯವಾದರೆ ನಾವಿಂದು ಚಿಂತೆಗೆ ಯಾಕೆ ಇಷ್ಟು ಆತಂಕಪಡುತ್ತೇವೆ! ಎಂದು. ಮತ್ತೊಂದು ವಿಷಯವೇನೆಂದರೆ ನಮ್ಮ ಭಾರತೀಯರ ಸಿದ್ಧಾಂತದ ಪ್ರಕಾರ ಮನುಷ್ಯನು ಇಂದು ಅನುಭವಿಸುವ ಪ್ರತಿಯೊಂದು ಸುಖ ದುಃಖಗಳೂ ಹಿಂದೆ ನಾವೇ ಮಾಡಿದ ಕರ್ಮದ ಫಲಲರೂಪವಾದುದ್ದು ಎಂದು. ಈ ವಿಷಯವೇ ಹಿಂದಿನ ಸುಭಾಷಿತ ಒಗಟಿನ ಅಂತರಾರ್ಥ. ಕರ್ಮಫಲವು ದುಃಖರೂಪವಾಗಿದ್ದೆರೆ ಅದು ಚಿಂತೆಗೆ ಕಾರಣವಾಗಿರುತ್ತದೆ. ವರ್ತಮಾನದಲ್ಲಿನ ಅನುಭವವು ಹಿಂದಿನ ಕರ್ಮದ ಫಲರೂಪವಾಗಿದ್ದರೂ, ನಮಗೊಂದು ಸ್ವಾತಂತ್ರ್ಯವಿದೆ. ಅದೇನೆಂದರೆ ಮುಂದಿನ ಆನುಭವಿಕ ಫಲವನ್ನು ಇಂದು ನಾವು ವರ್ತಮಾನದಲ್ಲಿ ನಿಯಂತ್ರಿಸಬಹುದು ಎಂದು. ಚಿಂತೆಗೆ ಇದೇ ಕಾರಣವೆಂದು ನಾವು ಅರಿಯಬೇಕಾದುದು ಅನಿವಾರ್ಯವಾಗಿದೆ. ಆದ್ದರಿಂದಲೇ ಹೇಳುವುದುಂಟು "ಗತಿಸಿಹೋದದ್ದಕ್ಕೆ ಚಿಂತಿಸಿ ಫಲವಿಲ್ಲ" ಎಂದು. ಇಲ್ಲಿ ಯಾವುದೇ ಚಿಂತೆಯನ್ನು ಮಾಡಿದರೂ ಪ್ರಯೋಜನವಾಗಲಾರದು. ಅದನ್ನು ಅನುಭವಿಸಿಯೇ ತೀರಬೇಕು. ಚಿಂತೆಯಿಂದ ಶರೀರ ಒಣಗುವುದನ್ನು ಬಿಟ್ಟು ಇನ್ನೇನನ್ನೂ ಕಾಣಲಾರೆವು. ಹುಲ್ಲಾದರೋ ಒಣಗಿದರೂ ಒಂದಿಷ್ಟು ಪ್ರಮಾಣದ ತೂಕವನ್ನು ತೋರಿಸಬಲ್ಲದು. ಅದಕ್ಕೆ ಇನ್ನಾವುದೋ ಜೀವಿಗೆ ಆಹಾರವಾಗಿಯೋ ಆದು ತನ್ನ ಅಸ್ತಿತ್ವವನ್ನು ತೋರಿಸಬಲ್ಲದು. ಆದರೆ ಚಿಂತಿತನಾದ ವ್ಯಕ್ತಿ ಕೊನೆಗೊಮ್ಮೆ ಸೊರಗಿ ಸೊರಗಿ ಒಂದು ದಿನ ತನ್ನ ಆಯುಷ್ಯದ ಅಂತ್ಯವನ್ನೇ ಕಾಣಬೇಕಾಗುತ್ತದೆ. ಆಗ ತೃಣಕ್ಕಿಂತಲೂ ಚಿಂತೆ ಹಗುರವಾಗುತ್ತದೆಯಷ್ಟೆ. ಸಾವಿರಾರು ಗೋವುಗಳಿದ್ದ ಜಾಗದಲ್ಲಿ ಕರುವು ತನ್ನ ತಾಯಿಯನ್ನೇ ಹೋಗಿ ಸೇರುತ್ತದೆ. ಕರುವಿಗೆ ತಾಯಿ ಎಂದೂ ತಪ್ಪುವಿದಿಲ್ಲ. ಕರುವಿಗೆ ತನ್ನ ತಾಯಿಯ ಪರಿಚಯ ಇದ್ದೂ ತನ್ನ ತಾಯಿಯನ್ನೇ ಬಂದು ಸೇರುತ್ತದೆಯಷ್ಟೇ! ಅಂತೆಯೇ ಮನುಷ್ಯನಿಂದ - ಮಾತ್ರವಲ್ಲ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯನ್ನು ಕೂಡಾ ಅವನಿಂದ ಮಾಡಲ್ಪಟ್ಟ ಕರ್ಮವು ಕರ್ತೃವನ್ನೇ ಅನುಸರಿಸುತ್ತದೆ. ಇದೇ ಸಂಸ್ಕೃತಿಯ ಮೂಲ ಸಿದ್ಧಾಂತ. ಈ ಸಿದ್ಧಾಂತದಿಂದಲೇ ಭಾರತೀಯ ಸಂಸ್ಕೃತಿಯ ಅನಾದಿ ಪರಂಪರೆಯಿದೆ. ಪುನರ್ಜನ್ಮದ ವಿಶ್ವಾಸವೂ ಈ ಸಿದ್ಧಾಂತದ ಮೇಲೆ ನೆಲೆನಿಂತಿದೆ.
ಸೂಚನೆ : 5/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.