ಪ್ರಶ್ನೆ – 30 ಹುಟ್ಟಿದ ಮೇಲೆ ಚಲಿಸದಿರುವುದು ಯಾವುದು ?
ಉತ್ತರ - ಅಂಡ-ಮೊಟ್ಟೆ
ಈ ಪ್ರಪಂಚದಲ್ಲಿ ಪರಬ್ರಹ್ಮನನ್ನು ಬಿಟ್ಟು ಉಳಿದ ಎಲ್ಲವೂ ಹುಟ್ಟು ಸಾವುಗಳೆಂಬ ಚಕ್ರದಲ್ಲಿ ಸಿಲುಕಿದವುಗಳೇ ಆಗಿವೆ. ಹುಟ್ಟಿದ ಪ್ರತಿಯೊಂದು ಜೀವಿಯೂ ತನ್ನ ಜೀವಿತವನ್ನು ಮುಂದುವರಿಸಲು ಅದರದ್ದೇ ಆದ ಪ್ರಯತ್ನವಿದ್ದೇ ಇರುತ್ತದೆ. ಅದಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸಿಸುವುದು ಅತ್ಯವಶ್ಯವಾದುದೇ ಸರಿ. 'ನ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮೃಗೇ ಯಥಾ - ಎಂತಹಾ ಸಿಂಹವಾದರೂ ಮಲಗಿದ್ದರೆ ಅದರ ಬಾಯಿಗೆ ಬೇಕಾದ ಆಹಾರ ಬಂದುಬೀಳುವುದಿಲವಷ್ಟೇ'. ಅದಕ್ಕಾಗಿ ಪ್ರಯತ್ನವೂ ಬೇಕೇಬೇಕು. ಅದಕ್ಕಾಗಿ ಚಲಿಸಲೇಬೇಕು. ಆದರೆ ಇಲ್ಲೊಂದು ಜೀವವಿದ್ದೂ ಚಲಿಸದಿರುವ ಜೀವವಿದೆ. ಅಲ್ಲಿ ಜೀವಿಸಲು ಪ್ರಯತ್ನವಿಲ್ಲವೇ? ಅದು ಯಾವುದು ? ಎಂಬುದು ಯಕ್ಷನು ಕೇಳುವ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನು 'ಅಂಡ ಅಥವಾ ಮೊಟ್ಟೆ' ಎಂದು ಉತ್ತರವನ್ನು ನೀಡುತ್ತಾನೆ. ಇಲ್ಲಿ ಪ್ರಶ್ನೆಯ ಆಶಯವಿಷ್ಟೇನಾ? ಅಥವಾ ಇನ್ನೇನಾದರೂ ನಿಗೂಹಿತವಾದ ಅರ್ಥವಿದೆಯೇ? ಸಾಮಾನ್ಯವಾಗಿ ಯಕ್ಷನು ಕೇಳುವ ಪ್ರಶ್ನೆಯಲ್ಲಿ ಅಂತಹ ತಾತ್ತ್ವಿಕವಾದ ಹಿನ್ನೆಲೆ ಇದ್ದೇ ಇರುತ್ತದೆ. ಹಾಗಾದರೆ ಅದಾವ ಹಿನ್ನೆಲೆ ಇದಕ್ಕಿದೆ?
ಅಂಡವೆಂದರೆ ಇಲ್ಲಿ ಬೃಹದಾಕಾರವಾದ ಬ್ರಹ್ಮಾಂಡ. ಬ್ರಹ್ಮಾಂಡಕ್ಕೆ ಜೀವವಿದೆ ಆದರೆ ಚಲಿಸುವುದಿಲ್ಲ. ಬ್ರಹ್ಮಾಂಡವೆಂದರೆ ಜೀವಿಯ ಸಮಷ್ಟಿರೂಪ. ವ್ಯಷ್ಟಿಯಲ್ಲಿ ಜೀವವಿರುವ ವಿಷಯವೆಂದರೆ ಈ ಶರೀರವಾಗಿದೆ. ಶರೀರವನ್ನು ಜಡ ಎಂದು ಕರೆಯಲಾಗುತ್ತದೆ. ವಸ್ತುತಃ ಶರೀರವು ಜಡವೇ ಆದರೂ ಅಲ್ಲಿ ಜೀವದ ಗತಾಗತಿಯೆಂಬುದು ಇರುವುದರಿಂದ ಶರೀರವು ಸಂಚರಿಸುವಂತೆ ಭಾಸವಾಗುತ್ತದೆ. ಶರೀರದಲ್ಲಿರುವ ಜೀವವೂ ವಸ್ತುತ ಜಡವೇ. ಆದರೆ ಅದು ಚಲಿಸಿದಂತೆ ಕಾಣುತ್ತದೆ. 'ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ' ಎಂದು ಗೀತೆಯಲ್ಲಿ ಹೇಳುವಂತೆ ಹಳೆಯದಾದ ಬಟ್ಟೆಯನ್ನು ಬಿಸುಟು ಹೊಸ ಬಟ್ಟೆಯನ್ನು ಮಾನವನು ಧರಿಸುತ್ತಾನಷ್ಟೇ. ಅಂತೆಯೇ ಈ ಜೀವವೂ ಕೂಡ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆಯುತ್ತದೆ. ಆಗ ಚಲಿಸಿದಂತೆ ಕಾಣುತ್ತದೆ. ಅದು ಭ್ರಾಂತಿ ಎಂದು ಕರೆಯಲಾಗುತ್ತದೆ.
ಈ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ವಸ್ತುತಃ ಜಡವೇ. ಚಲಿಸುವುದಿಲ್ಲ. ನಾವು ಶರೀರವನ್ನು ಪಡೆದಿರುವುದರಿಂದ ಜೀವಭಾವ ಬಂತು. ಶರೀರ ಜಡವಲ್ಲವೇ. ಈ ಜೀವವೂ ಒಂದೇ. ಅದು ಶರೀರವನ್ನು ಪಡೆದಿರುವುದರಿಂದ ಜೀವ ಚಲಿಸಿದಂತೆ ಕಾಣುತ್ತದೆ. ಜೀವಾದ್ವೈತವು ನಿತ್ಯವಾದುದು. ಜೀವ ಮತ್ತು ದೇವ ಎಂಬ ಭೇದ ಬಂದಾಗ ಜೀವಕ್ಕೆ ಪೃಥಕ್ ಚೈತನ್ಯವಿದ್ದಂತೆ ತೋರುತ್ತದೆ. ಜಗತ್ತಿಗೆಲ್ಲ ಯಾವುದರಿಂದ ಚೈತನ್ಯವೂ ಬರುವುದೋ ಆ ಪರಬ್ರಹ್ಮವು ಸಮಸ್ತ ವಿಶ್ವವನ್ನು ವ್ಯಾಪಿಸಿದೆ. ಅಲ್ಲಿ ಅವಕಾಶವೇ ಇಲ್ಲ. ಎಲ್ಲಕಡೇ ಅದೇ ತುಂಬಿದೆ. ಚಲನವು ಆಗಬೇಕಾದರೆ ಅವಕಾಶ ಬೇಕಷ್ಟೆ. ಮೊದಲ ಸ್ಥಾನದಿಂದ ಬಿಟ್ಟು ಇನ್ನೊಂದು ಸ್ಥಾನವನ್ನು ಪಡೆಯಬೇಕಾಗುತ್ತದೆ. ಬ್ರಹ್ಮಾಂಡವನ್ನು ವ್ಯಾಪಿಸಿರುವ ಚೈತನ್ಯವಸ್ತುವಿಗೆ ಈ ಅವಕಾಶವಿಲ್ಲ. ಆಕಾಶವೆಂಬುದು ಬೇರೆ ಬೇರೆ ಉಪಾಧಿಯನ್ನು ಪಡೆದಾಗ ಪಾತ್ರೆಯಲ್ಲಿರುವ ಆಕಾಶ, ಪೆಟ್ಟಿಗೆಯಲ್ಲಿರುವ ಆಕಾಶ ಎಂಬ ಭೇದವನ್ನು ಪಡೆಯುತ್ತದೆ. ಪಾತ್ರೆ, ಪೆಟ್ಟಿಗೆ ರೂಪಾವಾದ ಉಪಾಧಿಯನ್ನು ತೆಗೆದರೆ ಅಲ್ಲಿರುವುದು ಕೇವಲ ನಿರುಪಾಧಿಕವಾದ ಆಕಾಶ. ಅಂತೆಯೇ ಇಲ್ಲೂ ಬ್ರಹ್ಮಾಂಡಕ್ಕೆ ಚಲನವಿಲ್ಲ. ಅಂತೆಯೇ ಪಿಂಡಾಂಡಕ್ಕೂ ಚಲನೆಯಿಲ್ಲ. ಜೀವದಿಂದ ತುಂಬಿದ ಶರೀರಕ್ಕೂ ಚಲನೆಯಿಲ್ಲ. ಎಲ್ಲ ಚಲನೆಯೂ ಭ್ರಾಂತಿಯೇ.