Monday, March 27, 2023

ವ್ಯಾಸ ವೀಕ್ಷಿತ - 31 ಧೃಷ್ಟದ್ಯುಮ್ನ-ದ್ರೌಪದಿಯರ ಜನನ (Vyaasa Vikshita - 31 Dhrishtadyuma-Draupadiyara Janana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯಾಜ-ಉಪಯಾಜರೆಂದರೆ ಅಸಾಮಾನ್ಯರೇ ಸರಿ. "ಹವ್ಯವನ್ನು ಅರ್ಪಿಸಿದವನು ಯಾಜ; ಮಂತ್ರಗಳನ್ನು ಉಚ್ಚರಿಸಿದವನು ಉಪಯಾಜ. ಹಾಗಿರಲು ಫಲಿಸದೇ ಈ ಯಜ್ಞ?" - ಎನ್ನುತ್ತಾ, ಸಂಸ್ಕಾರ-ಯುಕ್ತವಾದ ಹವಿಸ್ಸನ್ನು ಅಗ್ನಿಗೆ ಆಹುತಿಯಾಗಿ ಯಾಜನು ಸಮರ್ಪಿಸಿದ್ದೇ ತಡ, ಆ ಅಗ್ನಿಯಿಂದ ದೇವ-ಸದೃಶನಾದ (ಎಂದರೆ ದೇವತೆಯನ್ನು ಹೋಲುವಂತಹ) ಕುಮಾರನು ಮೇಲೆದ್ದನು. (ಕುಮಾರೋ ದೇವ-ಸಂನಿಭಃ). ಹೇಗಿದ್ದನಾತ?: ಜ್ವಾಲೆಯ ಬಣ್ಣ! ಘೋರವಾದ ರೂಪ! ಹುಟ್ಟುತ್ತಲೇ ಕಿರೀಟ-ಧಾರಿ, ಉತ್ತಮವಾದ ಕವಚವನ್ನೂ ಧಾರಣೆ ಮಾಡಿದ್ದಾನೆ. ಖಡ್ಗವನ್ನೂ ಧನುಸ್-ಶರಗಳನ್ನೂ (ಎಂದರೆ ಬಿಲ್ಲು-ಬಾಣಗಳನ್ನೂ) ಧರಿಸಿದ್ದಾನೆ. ಮತ್ತೆ ಮತ್ತೆ ಗರ್ಜಿಸುತ್ತಾ ಶ್ರೇಷ್ಠವಾದ ರಥವನ್ನು ಹತ್ತಿ ಮುಂದೆ ಸಾಗಹತ್ತಿದನು. ಆಗ ಪಾಂಚಾಲರೆಲ್ಲರೂ ಪ್ರಹೃಷ್ಟರಾದರು (ಎಂದರೆ ತುಂಬಾ ಹರ್ಷಗೊಂಡರು). ಸಾಧು! ಸಾಧು! ("ಭಲೇ ಭಲೇ") - ಎಂದು ಧ್ವನಿಗೈದರು.

ಇವರುಗಳೆಲ್ಲರೂ ಹರ್ಷಾವಿಷ್ಟರಾದುದನ್ನು (ಎಂದರೆ ಹರ್ಷದ ಆವೇಶದಿಂದ ಕೂಡಿರುವುದನ್ನು) - ಅರ್ಥಾತ್ ಉಬ್ಬಿಹೋದ ಅವರ (ಭಾರವ)ನ್ನು ಭೂಮಿಯು ಭರಿಸದಾದಳು. ಅಷ್ಟರಲ್ಲಿ ಖೇಚರವಾದ (ಎಂದರೆ ಆಕಾಶ-ಗಾಮಿಯಾದ) ಮಹಾಭೂತವೊಂದು ಅದೃಶ್ಯವಾಗಿದ್ದುಕೊಂಡು ಹೀಗೆ ನುಡಿಯುತು: "ಈ ರಾಜಕುಮಾರನು ಪಾಂಚಾಲರಿಗೆ ಭಯಾಪಹ (ಎಂದರೆ ಭಯವನ್ನು ಹೋಗಲಾಡಿಸತಕ್ಕವನು) ಹಾಗೂ ಕೀರ್ತಿಕರ; ರಾಜ(ನಾದ ದ್ರುಪದ)ನಿಗೆ ಶೋಕಾಪಹ(ದುಃಖವನ್ನು ಇಲ್ಲವಾಗಿಸುವವನು); ದ್ರೋಣನ ವಧಕ್ಕೆಂದೇ ಜನಿಸಿರತಕ್ಕವನಿವನು!" - ಎಂಬುದಾಗಿ.

ಜೊತೆಗೇ ವೇದೀ-ಮಧ್ಯದಿಂದ (ಎಂದರೆ ಯಜ್ಞವೇದಿಕೆಯ ನಡುವಿನಿಂದ) ಕುಮಾರಿಯಾದ ಪಾಂಚಾಲಿಯೂ ಸಮುತ್ಥಿತಳಾದಳು. ಹೇಗಿದ್ದಳವಳು?: ಸುಂದರಿ; ದರ್ಶನೀಯ ಅಂಗಗಳನ್ನು ಹೊಂದಿದ್ದಳು: ಚೆಂದವಾಗಿರುವ ಕಪ್ಪಾದ ಕಣ್ಣುಗಳು ಅವಳವು. ಕಪ್ಪು ಬಣ್ಣ. ಕಮಲದ ದಳದಂತಿರುವ ಕಣ್ಣುಗಳು. ಕಪ್ಪಾಗಿ ಗುಂಗುರು ಗುಂಗುರಾದ ಕೇಶ ಅವಳದು. ಉಗುರುಗಳು ಕೆಂಪನಾಗಿಯೂ ಉದ್ದವಾಗಿಯೂ ಇದ್ದವು. ಒಳ್ಳೆಯ ಹುಬ್ಬು. ಸುಂದರವೂ ಪೀನವೂ (ಎಂದರೆ ಉಬ್ಬಿದ್ದವೂ) ಆದ ಪಯೋಧರಗಳು. ಮಾನುಷವಾದ ರೂಪವನ್ನು ಧರಿಸಿರುವ ಸಾಕ್ಷಾದ್ ದೇವತೆಯಂತೆಯೇ ಅವಳಿದ್ದಳು. ಅವಳ ಶರೀರದಿಂದ ನೀಲಕಮಲದೆಂಬಂತಿನ ಗಂಧವು ಹೊಮ್ಮಿದ್ದು, ಅದು ಒಂದು ಕ್ರೋಶದಾಚೆಗೂ ಧಾವಿಸುತ್ತಿತ್ತು! (ಕ್ರೋಶವೆಂದರೆ ಸುಮಾರು ಮೂರು ಮೈಲಿಯೆನ್ನಬಹುದು.) ಅವಳ ರೂಪ ಶ್ರೇಷ್ಠವಾದದ್ದು; ಅದಕ್ಕೊಂದು ಹೋಲಿಕೆಯೇ ಭೂಮಿಯಲ್ಲಿರದು. ದೇವತೆಗಳೂ ದಾನವರೂ ಯಕ್ಷರೂ ಬಯಸಬಹುದಾದ ದೇವರೂಪಿಣಿ ಅವಳು.

ಆ ಸುಂದರಾಂಗಿಯು ಜನಿಸಿದಾಗಲೂ ಅಶರೀರವಾದ ವಾಣಿಯು ಹೇಳಿತು: "ಸರ್ವನಾರಿಯರಲ್ಲೂ ಶ್ರೇಷ್ಠಳೆನಿಸುವ ಈಕೆ(ಯ ಹೆಸರು) ಕೃಷ್ಣೆ. ಕ್ಷತ್ರಿಯರ ನಾಶಕ್ಕೆ ಇವಳು ಕಾರಣಳಾಗುವಳು. ಸುಂದರವಾದ ನಡುವುಳ್ಳ ಈಕೆ ಕಾಲ ಬಂದಾಗ ವಾಸ್ತವವಾಗಿ ದೇವಕಾರ್ಯವನ್ನೇ ಮಾಡುವಳು (ಸುರಕಾರ್ಯಂ ಕರಿಷ್ಯತಿ). ಅವಳ ನಿಮಿತ್ತವಾಗಿ ಕೌರವರಿಗೆ ಮಹಾಭಯವು ಹುಟ್ಟಲಿದೆ! - ಎಂಬುದಾಗಿ.

ಅದನ್ನು ಕೇಳಿ ಪಾಂಚಾಲ(ದೇಶದವ)ರೆಲ್ಲರೂ ಸಿಂಹಸ್ತೋಮವು ಮಾಡುವಂತೆ ನಾದ ಮಾಡಿದರು. ಆನಂದ ತುಂಬಿದವರಾದ ಇವರ ಭಾರವನ್ನು ಭೂಮಿಯು ಸಹಿಸಲಾರದಾದಳು.

ಮಕ್ಕಳಿಗಾಗಿ ಹಂಬಲಿಸಿದ್ದ ಪಾರ್ಷತಿಯು (ಎಂದರೆ ದ್ರುಪದನ ಪತ್ನಿಯು) ಇವರಿಬ್ಬರನ್ನೂ ಕಂಡವಳೇ ಯಾಜನ ಬಳಿ ಬಂದು ಕೇಳಿಕೊಂಡಳು: ಇವರಿಬ್ಬರೂ ನನ್ನನ್ನಲ್ಲದೆ ಮತ್ತಾರನ್ನೂ ತಾಯಿಯೆಂದು ಭಾವಿಸದಿರಲಿ" - ಎಂಬುದಾಗಿ. "ಹಾಗೆಯೇ ಆಗಲಿ" ಎಂದು ಯಾಜನು ರಾಜನಿಗೆ ಪ್ರಿಯವಾದುದನ್ನುಂಟುಮಾಡಲೋಸುಗ ಹೇಳಿದನು.

ಸೂಚನೆ : 26/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.