Sunday, March 5, 2023

ವ್ಯಾಸ ವೀಕ್ಷಿತ - 28 ದ್ರುಪದನ ದ್ವೇಷಸಾಧನೆ (Vyaasa Vikshita - 28 Drupadana Dveshasadhane)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 ದ್ರೋಣನಿಂದ ಸೋಲುಂಡನು ದ್ರುಪದ. ಶಾಂತಿಯ ಮಾತೇನೋ ಆಯಿತು. ಆದರೂ ದ್ರುಪದನ ದುಮ್ಮಾನ ಆತನನ್ನು ಸುಮ್ಮನಿರಲು ಬಿಡಲಿಲ್ಲ. ಬ್ರಾಹ್ಮಣಶ್ರೇಷ್ಠನಾದ ದ್ರೋಣನನ್ನು ಕುರಿತಾಗಿ, ಅಸ್ತ್ರಜ್ಞರಲ್ಲಿ ಶ್ರೇಷ್ಠನೆನಿಸುವ ದ್ರುಪದನು, "ಮಹಾಮತಿಯಾದ ಭಾರದ್ವಾಜನೇ, ನೀ ಹೇಳಿದಂತೆಯೇ ಆಗಲಿ. ನಿನಗೆ ಒಳ್ಳೆಯದಾಗಲಿ. ಯಾವ ಸಖ್ಯ(ಎಂದರೆ ಸ್ನೇಹ)ವನ್ನು ನೀನು ಇಷ್ಟಪಡುತ್ತೀಯೋ ಅದುವೇ ಶಾಶ್ವತವಾಗಿ ಇರಲಿ" ಎಂದನು.


ಹೀಗೆ ಮೈತ್ರಿಯ ಮಾತಾದ ಮೇಲೆ ಶತ್ರುಮರ್ದನರಾದ ದ್ರೋಣ-ದ್ರುಪದರು ಹಿಂದಿರುಗಿ ಹೋದರು.


ಆದರೆ ಇಲ್ಲಿಗವರ ಕಥೆ ಮುಗಿಯಲಿಲ್ಲ. ದ್ರುಪದನ ಚಿಂತೆಯೇ ಬೇರೆಯಾಗಿತ್ತು. ದ್ರೋಣನೆಸಗಿದ ಮಹತ್ತಾದ "ಅಸತ್ಕಾರ"ವು ಆತನ ಹೃದಯದಿಂದ ಒಂದು ಕ್ಷಣವಾದರೂ ಸರಿಯಲೇ ಇಲ್ಲ: ಕ್ಷುಭಿತನಾದ ಅವನು ಬಡವಾಗಿಹೋದನು!

 

 

ಅಸಹನೆಯಿಂದ ತುಂಬಿದ್ದ ದ್ರುಪದನು ಸುಮ್ಮನಿರದೆ, ಕರ್ಮಸಿದ್ಧರಾದ ದ್ವಿಜಶ್ರೇಷ್ಠರನ್ನು ಅರಸುತ್ತಾ ಹಲವು ಬ್ರಾಹ್ಮಣರ ಕೇರಿಗಳಿಗೆ ಅಲೆದಾಡಿದನು. (ಕರ್ಮಸಿದ್ಧರು ಎಂದರೆ ಶಾಂತಿಕ, ಪೌಷ್ಟಿಕ ಮತ್ತು ಆಭಿಚಾರಿಕ - ಎಂಬ ಕ್ರಿಯೆಗಳಲ್ಲಿ ನಿಷ್ಣಾತರು. ಮೊದಲೆರಡು ಶಾಂತಿ-ಪುಷ್ಟಿಗಳನ್ನು ಉಂಟುಮಾಡತಕ್ಕವು. ಆಭಿಚಾರಿಕವೆಂದರೆ ರಿಪುಸಂಹರಣ ಮುಂತಾದವಕ್ಕಾಗಿ ಮಾಟ-ಮದ್ದುಗಳನ್ನು ಮಾಡುವುದು). ಆತನ ಚೈತನ್ಯವೆಲ್ಲಾ ಶೋಕದಿಂದ ಹದಗೆಟ್ಟಿತ್ತಷ್ಟೆ?  ನನಗೊಂದು ಶ್ರೇಷ್ಠಸಂತಾನವಿಲ್ಲದಾಯಿತಲ್ಲಾ - ಎಂದು ಅನವರತ ಚಿಂತೆಗೊಳಗಾದನು. ಹುಟ್ಟಿರುವ ಮಕ್ಕಳಿಗೂ ಬಂಧುಗಳಿಗೂ ಧಿಕ್ಕಾರವೆಂದುಕೊಂಡನು. ದ್ರೋಣನಿಗೆ ಪ್ರತೀಕಾರವೆಸಗಬೇಕೆಂಬ ಗುಂಗಿನಲ್ಲಿ ಆಗಾಗ್ಗೆ ನಿಟ್ಟುಸಿರುಬಿಡುತ್ತಿದ್ದನು. ದ್ರೋಣನ ಪ್ರಭುತ್ವವೇನು, ಪರಿಣತಿ-ಬಲಗಳೇನು! - ಎಂದೆಲ್ಲಾ ಯೋಚನೆ ಮಾಡುವುದೇ ಕೆಲಸವಾಯಿತು; ಪ್ರಯತ್ನಪಡುತ್ತಿದ್ದರೂ ಆತನಿಗೆ ಪ್ರತೀಕಾರವೆಸಗುವ ಬಗೆಯು ಗೋಚರವಾಗಲಿಲ್ಲ. ಕಲ್ಮಾಷಿಯ ಸುತ್ತಲೂ (ಎಂದರೆ ಯಮುನೆಯ ಸುತ್ತ) ಹಾಗೂ ಗಂಗೆಯ ದಡದಲ್ಲೂ ಪರಿಭ್ರಮಣಮಾಡಿದನು. (ಕಲ್ಮಾಷಿಯೆಂದರೆ ಕಪ್ಪುಬಣ್ಣವುಳ್ಳದ್ದು. ಯಮುನೆಯ ನೀರು ಸ್ವಲ್ಪ ಕಪ್ಪೇ; ಸಂಗಮದಲ್ಲಿ ಈ "ಬಿಳೀನದಿ"-"ಕರೀನದಿ"ಗಳ ಸೇರುವೆಯು ಕಾಣುತ್ತದೆ.)

 

ಅಲ್ಲೊಂದು ಬ್ರಾಹ್ಮಣರ ಆಶ್ರಮವನ್ನು ಕಂಡನು. ಅಲ್ಲಿ ಸ್ನಾತಕನಲ್ಲದ ಬ್ರಾಹ್ಮಣನೊಬ್ಬನಿರಲಿಲ್ಲ (ಸ್ನಾತಕನೆಂದರೆ ವೇದಾಧ್ಯಯನಸಂಪನ್ನ); ವ್ರತನಿಷ್ಠನಲ್ಲದವನೊಬ್ಬನಿರಲಿಲ್ಲ. ಆ ಸ್ತೋಮದಲ್ಲಿ ಇಬ್ಬರು ವಿಶೇಷವಾಗಿ ಕಂಡರು. ಇಬ್ಬರೂ ವ್ರತನಿಷ್ಠರು, ಶಾಂತರು, ಪರಮೇಷ್ಠಿಗಳು (ಎಂದರೆ ಬ್ರಹ್ಮನಂತಿದ್ದವರು), ಸಂಹಿತಾಧ್ಯಯನದಲ್ಲಿ ತೊಡಗಿದ್ದವರು, ಕಾಶ್ಯಪಗೋತ್ರದವರು, ಸೂರ್ಯೋಪಾಸಕರು, ಸುರೂಪರು, ಶ್ರೇಷ್ಠ ಋಷಿಗಳು: ಅವರೇ ಬ್ರಹ್ಮರ್ಷಿಗಳಾದ ಯಾಜ ಮತ್ತು ಉಪಯಾಜ ಎಂಬುವರು. ಆಲಸ್ಯವೇ ಇಲ್ಲದ ದ್ರುಪದನು ಅವರನ್ನು ಆಹ್ವಾನಿಸಿದನು: ಅವರ ಅಪೇಕ್ಷೆಗಳೇನಾದರೂ ಇದ್ದಲ್ಲಿ ಅವನ್ನು ಪೂರೈಸುವುದಾಗಿ ನುಡಿದನು.

 

ಅವರಿಬ್ಬರ ಬಲವನ್ನೂ ಅರಿತುಕೊಂಡನು. ಅವರಿಬ್ಬರಲ್ಲಿ ಕಿರಿಯನಾದ ಉಪಯಾಜನೇ ಹೆಚ್ಚು ವ್ರತನಿಷ್ಠನೆಂದು ಆತನನ್ನು ಏಕಾಂತದಲ್ಲಿ ಸಂಧಿಸಿದನು. ಆತನಿಗಿಷ್ಟವಾದವನ್ನಿತ್ತು ಒಲಿಸಿಕೊಂಡನು, ಪಾದಶುಶ್ರೂಷೆ ಮಾಡಿದನು, ಆತನೊಂದಿಗೆ ಪ್ರಿಯವಾಗಿ ಮಾತನಾಡಿದನು; ಯಥೋಚಿತವಾಗಿ ಸ್ತುತಿಸಿ ಹೀಗೆ ಹೇಳಿದನು. "ಬ್ರಾಹ್ಮಣನೇ, ದ್ರೋಣನಿಗೆ ಮೃತ್ಯುವನ್ನು ತರುವಂತಹ ಪುತ್ರನೊಬ್ಬನು ನನಗೆ ಜನಿಸಬೇಕು; ಅಂತಹೊಂದು ಕರ್ಮವನ್ನು ನೀನು ಮಾಡಿಸುವೆಯಾದರೆ ನಿನಗೆ ಅರ್ಬುದ ಗೋವುಗಳನ್ನು (ಎಂದರೆ ಹತ್ತುಕೋಟಿ ಹಸುಗಳನ್ನು) ಕೊಟ್ಟೇನು. ಇಲ್ಲವೇ, ನಿನ್ನ ಮನಸ್ಸಿಗೆ ಯಾವುದು ಅತಿಪ್ರಿಯವೋ ಅದೆಲ್ಲವನ್ನೂ ಕೊಡುವೆನು. ಸಂಶಯ ಬೇಡ" - ಎಂದನು. ಅವನು ಅಷ್ಟು ಹೇಳಿದರೂ, "ಇದನ್ನು ನಾ ಮಾಡಿಸಲಾರೆ" - ಎಂದಷ್ಟೇ ಉಪಯಾಜನು ಹೇಳಿ ಮುಗಿಸಿದನು.


ಸೂಚನೆ : 5/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.