Sunday, March 12, 2023

ಅಷ್ಟಾಕ್ಷರೀ​ - 30 ಮತಂ ಯಸ್ಯ ನ ವೇದ ಸಃ (Astakshara Darshana 30 Mataṁ Yasya Na Veda Sah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪಂಚತಂತ್ರದ ಆರಂಭದಲ್ಲಿಯೇ ಬರುವ ಮಾತೊಂದಿದೆ: ಶಾಸ್ತ್ರಗಳು ಅನಂತ; ತಿಳಿಯಬೇಕಾದದ್ದು ಬಹಳಷ್ಟಿದೆ. ನಮಗೆ ದೊರೆಯುವ ಕಾಲವು ಅಲ್ಪ; ವಿಘ್ನಗಳು ಹಲವಾರು! ಆದ್ದರಿಂದ, ಯಾವುದು ಸಾರಭೂತವೋ ಅದನ್ನು ಉಪಾಸಿಸಬೇಕು. ನೀರಿನಲ್ಲಿ ಹಾಲು ಬೆರೆತಿದ್ದಾಗ ಹಂಸವು ಹೇಗೆ ಮಾಡುವುದೋ ಹಾಗೆ. (ಇದರ ಅಭಿಪ್ರಾಯವಿದು: ಹಾಲು-ನೀರುಗಳಲ್ಲಿ ಹಾಲು ಸಾರ, ನೀರು ಅಸಾರ. ಹಂಸವು ನೀರನ್ನು ತೊರೆದು ಹಾಲನ್ನಷ್ಟೆ ಸೇವಿಸುತ್ತದೆ. ಇದನ್ನೇ ಹಂಸ-ಕ್ಷೀರನ್ಯಾಯವೆನ್ನುವುದು. ಅಸಾರವನ್ನು ವರ್ಜಿಸಿ, ಸಾರಮಾತ್ರವನ್ನು ಗ್ರಹಿಸುವುದಕ್ಕೆ ನೀರ-ಕ್ಷೀರ-ವಿವೇಕವೆಂದೂ ಹೇಳುತ್ತಾರೆ. ವಿವೇಕವೆಂದರೆ ವಿಂಗಡಣೆ.)

ಎಷ್ಟೋ ಮಂದಿ ತುಂಬಾ ಓದಬೇಕೆಂದುಕೊಳ್ಳುತ್ತಾರೆ. ಒಬ್ಬನೆಷ್ಟು ಓದಿಯಾನು? : ಇತ್ತ, ಜ್ಞಾನದ ಹೊಸಹೊಸ ಶಾಖೆಗಳು ಅದೆಷ್ಟೋ ಹುಟ್ಟಿಕೊಳ್ಳುತ್ತಲೇ ಇರುತ್ತವೆ; ಅತ್ತ, ಹಿಂದೆ ಇದ್ದ ಎಷ್ಟೋ ವಿದ್ಯೆಗಳು ನಶಿಸುತ್ತಲೂ ಇರುತ್ತವೆ. ಕಂಡಕಂಡದ್ದನ್ನೆಲ್ಲ ಗೊತ್ತುಗುರಿಯಿಲ್ಲದೆ ಓದುತ್ತ ಹೋಗುವುದು ಹುಚ್ಚೆಂದೇ ತೋರುವುದು. ಅಥವಾ ಹುಚ್ಚಿಗೇ ತಿರುಗುವುದು. "ಓದಿಗಾಗಿ ಓದು", "ಜ್ಞಾನಕ್ಕಾಗಿ ಜ್ಞಾನ" ಎಂದು ಕೊನೆ-ಮೊದಲಿಲ್ಲದಂತೆ ಓದುವುದು ಬುದ್ಧಿಭ್ರಮಣೆಗೆ ಹೇಳಿಮಾಡಿಸಿದ ದಾರಿಯೇ ಸರಿ.

ಏನೇನನ್ನೋ ಪಠಿಸುತ್ತಿದ್ದರೆ ಒಳ್ಳೆಯ ಗುರಿ, ಒಳ್ಳೆಯ ದಾರಿಗಳೂ ಕೆಲವೊಮ್ಮೆ ಗೋಚರವಾಗಬಹುದು; ಇಲ್ಲವೆಂದಲ್ಲ. ಅದೇ ಕಾರಣಕ್ಕಾಗಿಯೇ, ಕೆಟ್ಟಗುರಿ ತಪ್ಪುದಾರಿಗಳಿಗೂ ಬೀಳುವುದೂ ಅಸಂಭವವೇನಲ್ಲವಲ್ಲ? ನಾನಾದಿಕ್ಕುಗಳು ಗಮನಕ್ಕೆ ಬಂದು ಒಳ್ಳೆಯ ದಿಕ್ಕನ್ನು ಹಿಡಿಯುವುದೆಂತೋ, ಅಂತೆಯೇ ಕೆಟ್ಟದಿಕ್ಕನ್ನು ಹಿಡಿಯುವುದೂ ಸಾಧ್ಯ! ಯಾವ ದಿಕ್ಕು ಸರಿಯೋ? - ಎಂದು ನಿಶ್ಚಯಿಸಲಾಗದೆ ದಿಗ್ಭ್ರಾಂತಿಯಾಗುವುದೂ ಅಶಕ್ಯವೇನಲ್ಲ.

ಕುತೂಹಲವನ್ನು ಕಳೆದುಕೊಳ್ಳಬೇಡಿ ಎಂದು ಉಪದೇಶಿಸುವವರಲ್ಲಿ ವಿಜ್ಞಾನಿಗಳು ಮುಂದೇ. ಯಾವುದರ ಬಗೆಗೂ ಕುತೂಹಲವಿಲ್ಲದ ಜೀವನವೂ ಒಂದು ಜೀವನವೇ? ಬಾಲ್ಯದಲ್ಲಿಯ ಕುತೂಹಲ ಅನಿವಾರ್ಯವಷ್ಟೇ ಅಲ್ಲ ಅತ್ಯಪೇಕ್ಷ್ಯವೇ ಆದದ್ದು. ಆದರೂ ಎಷ್ಟೋ ವೇಳೆ ಕೆಲಸಕ್ಕೆ ಬಾರದ ಕೊನೆಮೊದಲಿಲ್ಲದ ಕುತೂಹಲಗಳು ಯಾವುದೋ ಅಡ್ಡದಾರಿಗೊಯ್ಯುವುದೂ ಉಂಟು, ಕಾಲವನ್ನು ವ್ಯರ್ಥಗೊಳಿಸುವುದೂ ಉಂಟು.

"ಕಸದ ಬುಟ್ಟಿಗೆ ಹಾಕಬೇಕಾದ ವಿಷಯಗಳನ್ನೆಲ್ಲಾ ತಲೆಗೆ ತುಂಬಿಕೊಳ್ಳುವುದಾಗುತ್ತಿದೆಯೆಲ್ಲಾ!" - ಎಂದು ಇಂದಿನ ಪರಿಸ್ಥಿತಿಗೆ ಶ್ರೀರಂಗಮಹಾಗುರುಗಳು ಮರುಗಿದ್ದರು.

ಇತ್ತ ವಿಶ್ವಕುತೂಹಲಿಯಾಗಿರಬೇಕಾದುದೂ ಸರಿಯೇ (ಸಂಸ್ಕೃತದಲ್ಲಿ 'ವಿಶ್ವ' ಎಂಬುದಕ್ಕೆ 'ಸರ್ವ' ಎಂಬರ್ಥವೂ ಇದೆ. ಇಲ್ಲಿ ಆ ಅರ್ಥ.) ಸರ್ವಜ್ಞನೆನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲ ಹಿಡಿಯದಂತೆ ಅಧ್ಯಯನವು ಸಾಗಬೇಕು. ಓದರಿತು, ಕೇಳರಿತು, ಕಂಡರಿತುಕೊಂಡದ್ದನ್ನೆಲ್ಲಾ ಆಗಾಗ್ಗೆ ಮನನಮಾಡಿಕೊಳ್ಳುತ್ತಾ, ಸಾರಭೂತವಾದುದನ್ನು ಜೀವನಕ್ಕೆ ಅನ್ವಯ ಮಾಡಿಕೊಳ್ಳಲು ಮನೋವ್ಯವಧಾನವಿರಬೇಕು.

ಒಂದು ಕಡೆ ಜೀವಿಕೆಗೆ (ಹೊಟ್ಟೆಹೊರೆಯಲಿಕ್ಕೆ) ತೊಂದರೆಯೂ ಆಗಬಾರದು; ಇದು ಇಹದ ಜವಾಬ್ದಾರಿ. ಜೊತೆಗೆ 'ಪರ'ದ ಜವಾಬ್ದಾರಿಯೂ ಬೇಕಾದದ್ದೇ: ಸತ್ತ ಮೇಲೆ ಸದ್ಗತಿಯತ್ತ ಸಾಗಲೊಂದು ಸಾಧನೆ ಬೇಡವೇ? ಅದಕ್ಕೂ ಆಗಲೆಂದೇ ಹೇಳಿಮಾಡಿಸಿಟ್ಟವು ಆರ್ಷಗ್ರಂಥಗಳು (ಆರ್ಷವೆಂದರೆ ಋಷಿಗಳಿಂದ ಬಂದದ್ದು): ಗೀತೆ-ವೇದ-ಉಪನಿಷತ್ತುಗಳು. ಅತ್ತಲೂ ಒಂದಿಷ್ಟು ಶ್ರಮ ಬೇಕೇಬೇಕು.

ಆದರೆ ಅಲ್ಲೂ ಓದಿನಲ್ಲೇ ನಿಂತೆವೋ ಆಗಲೂ ಅಪಾಯವೇ. ಎಲ್ಲವನ್ನೂ ಓದಿಬಿಟ್ಟಿದ್ದೇನೆಂದುಕೊಂಡವನಿಗೇ ಉಪನಿಷತ್ತು ಎಚ್ಚರಿಸುವುದು: "ಯಾವನು ಗೊತ್ತಾಗಿದೆಯೆಂದುಕೊಂಡಿದ್ದಾನೋ ಅವನರಿತಿಲ್ಲ" – ಎಂದು! ಕೇನೋಪನಿಷತ್ತಿನ ಮಾತಿದು.

ಇವನ್ನೆಲ್ಲಾ ಪಠಿಸುವುದು ಶ್ರೇಷ್ಠವೇ; ಮತ್ತೂ ಶ್ರೇಷ್ಠವಾದುದು ಅವುಗಳ ಅರ್ಥ-ತಾತ್ಪರ್ಯಗಳ ಅನುಸಂಧಾನ. ಅತಿಮುಖ್ಯವೆಂದರೆ ಅಲ್ಲಿಯ ನಿರೂಪಣೆಗಳು ನಮ್ಮ ಜೀವನಕ್ಕೆ ಎಲ್ಲಿ ಹೇಗೆ ಅನ್ವಯವಾಗಬಲ್ಲುವು? - ಎಂಬುದರತ್ತ ನಿರಂತರಚಿಂತನಗಳು.

ಒಂದರ್ಥದಲ್ಲಿ ಪುಸ್ತಕದಲ್ಲೇ ಎಲ್ಲವೂ ಇದೆ; ಮತ್ತೊಂದರ್ಥದಲ್ಲಿ ಏನೂ ಇಲ್ಲ. ಮಹಾಭಾರತದ ಒಂದು ಒಗಟೆಯ ಉಕ್ತಿಯನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು: "ವೇದವನ್ನು ವೇದವೆನ್ನುವುದಿಲ್ಲ. ವೇದದಲ್ಲಿ ವೇದವಿಲ್ಲ. ಯಾವುದರಿಂದ ಪರಮಾತ್ಮನನ್ನು ಪಡೆಯುವುದಾಗುವುದೋ ಅದುವೇ ವೇದ!".

ವೇದವೆನ್ನುವುದು ಮೂಲತಃ ಜ್ಞಾನವೇ (ವಿದ ಜ್ಞಾನೇ). ಜ್ಞಾನವನ್ನು ಕೊಡುವ ಅಕ್ಷರರಾಶಿಗೂ ವೇದವೆಂಬ ಹೆಸರು ಸಲ್ಲುತ್ತದೆ. ಆ ಅಕ್ಷರರಾಶಿಯನ್ನೇ ಪುಸ್ತಕಮಾಡಿಕೊಟ್ಟರೆ ಆ ಪುಸ್ತಕಕ್ಕೂ ವೇದವೆಂಬ ಹೆಸರೇ. ಆದರೂ ವೇದಪುಸ್ತಕಪಾಠವು ಕಂಠಪಾಠವಾಗಿದೆಯೆಂದರೆ ಸಾಲದು. ಪರಾತ್ಮನ ಪ್ರಾಪ್ತಿಯೆಂಬುದೇ ನಿಜವಾದ ಜ್ಞಾನ, ಅದುವೇ ವೇದದ ಲಕ್ಷ್ಯ. ಜ್ಞಾನವು ಪುಸ್ತಕದಲ್ಲಿಲ್ಲ. ಜ್ಞಾನವನ್ನು ಪಡೆದವನೇ ನಿಜವಾದ ವೇದಜ್ಞ.

ಹೀಗೆ ಲೌಕಿಕಜ್ಞಾನಾರ್ಜನೆಯು ಹೊಟ್ಟೆಪಾಡಿಗಾಗಿ ಆದರೂ ಪರಾತ್ಮಜ್ಞಾನಾರ್ಜನೆಗೂ ಬಲ್ಲವರ ಮಾರ್ಗದರ್ಶನದಲ್ಲಿ ಶ್ರಮಿಸುವಂತಾದಲ್ಲಿ ಜೀವನವು ಸಫಲತೆಯನ್ನು ಕಂಡೀತು.

ಸೂಚನೆ: 12/03/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.