ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ– 29 ಯಾವುದಕ್ಕೆ ಹೃದಯವಿಲ್ಲ ?
ಉತ್ತರ - ಕಲ್ಲಿಗೆ
ಕಲ್ಲಿಗೆ ಹೃದಯವಿಲ್ಲ ಎಂಬ ಉತ್ತರ ಯಾರಿಗೆ ತಾನೆ ಪೇಲವ ಎನಿಸಬಹುದು! ಪ್ರಾಣಿ, ಪಶು, ಪಕ್ಷಿ, ಗಿಡ, ಮರಗಳಿಗೆ ಹೃದಯವಿದೆ. ಇವುಗಳಲ್ಲಿ ಒಂದು ಬಗೆಯ ಸಂವೇದನೆಯನ್ನು ಕಾಣುತ್ತೇವೆ. ಯಾರ ಹೃದಯ ಯಾವುದೇ ಕಠಿನ ಪರಿಸ್ಥಿತಿಯಲ್ಲೂ ಬದಲಾಗಲು ಅಥವಾ ಆತಂಕಗೊಳ್ಳಲು ಸಾಧ್ಯವೇ ಇಲ್ಲವೋ ಅಂತಹ ಸಂದರ್ಭದಲ್ಲಿ ' ಇವನೆಂತಹ ಕಠಿನ ಹೃದಯಿ!' ಇವನಿಗೆ ಹೃದಯವಿದೆಯೇ?' ಇತ್ಯಾದಿಯಾಗಿ ಮಾತನಾಡಿಕೊಳ್ಳುತ್ತೇವೆ. ಅಂತಹ ವ್ಯಕ್ತಿಯನ್ನು ಕಲ್ಲಿಗೆ ಹೋಲಿಸಿ 'ಇವನ ಹೃದಯ ಕಲ್ಲು' ಎಂದೂ ಹೇಳುವುದುಂಟು. ಅಂದರೆ 'ಕಲ್ಲಿಗೆ ಹೃದಯವಿಲ್ಲ' ಎಂಬುದು ಸಾಮಾನ್ಯರಲ್ಲಿ ಸಾಮಾನ್ಯನಿಗೂ ತಿಳಿಯುವ ವಿಷಯವಲ್ಲವೇ? ಇಂತಹ ಸಾಮಾನ್ಯ ಪ್ರಶ್ನೆಯೇ ಧರ್ಮಜನಿಗೆ?
ಹೃದಯವು ಸುಖ ದುಃಖಗಳ ಸಂವೇದನೆಯ ಸಂಕೇತವಾಗಿದೆ. ಸಂವೇದನೆಯು ಜೀವಭಾವದ ಸಂಕೇತವೂ ಹೌದು. ಚೈತನ್ಯದ ಸಂಕೇತವೂ ಹೌದು. ಎಲ್ಲಿ ಚೈತನ್ಯದ ಅಂಶವು ಅತಿಶಯವಾಗಿರುತ್ತದೆಯೋ ಅಲ್ಲಿ ಸಂವೇದನೆಯೂ ಅತಿಶಯವಾಗಿ - ಅಧಿಕವಾಗಿ ಗೋಚರವಾಗುತ್ತದೆ. ಹಾಗಾಗಿ ಸಸ್ಯಗಳಿಗಿಂತ ಪ್ರಾಣಿಗಳು ಶ್ರೇಷ್ಠ, ಪ್ರಾಣಿಗಳಿಗಿಂತ ಮನುಷ್ಯ ಶ್ರೇಷ್ಠ ಎಂಬ ವಿಭಾಗವಿದೆ. ಸಸ್ಯಗಳಲ್ಲಿ, ಅದೇ ರೀತಿಯಾಗಿ ಪ್ರಾಣಿಗಳಲ್ಲಿ ಮತ್ತು ಅದೇ ರೀತಿಯಾಗಿ ಮನುಷ್ಯರಲ್ಲೂ ಮತ್ತೇ ತರತಮಭಾವವು ಇಲ್ಲದಿಲ್ಲ. ಭಾರತೀಯರ ಸಿದ್ಧಾಂತದ ಅನ್ವಯ ಚೈತನ್ಯವಿಲ್ಲದಿರುವ ಪದಾರ್ಥವೆಂಬುದೇ ಇಲ್ಲ. ಆದರೂ ಜಡ ಮತ್ತು ಅಜಡ ಎಂಬ ವಿಭಾಗವನ್ನು ಈ ಚೈತನ್ಯದ ಅಲ್ಪಾಧಿಕ್ಯದ ಕಾರಣದಿಂದಲೇ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಮಾಡಿದಾಗ ಕಲ್ಲು ಅತ್ಯಲ್ಪ ಚೈತನ್ಯವಿರುವ ವಸ್ತುವಾದ್ದರಿಂದ ಅತ್ಯಂತ ಜಡ ಎಂದಿದ್ದಾರೆ. ಆ ದೃಷ್ಟಿಯಿಂದ ಕಲ್ಲಿಗೆ ಸಂವೇದನೆ ಇಲ್ಲ ಎಂದೂ ಹೇಳಬಹುದಷ್ಟೆ.
ಕಲ್ಲಿಗೆ ಸಂಸ್ಕೃತದಲ್ಲಿ 'ಅಶ್ಮ' ಎಂದು ಕರೆಯುತ್ತಾರೆ. ಶ್ಮ ಎಂದರೆ ಜೀರ್ಣವಾಗುವ ಸ್ವಭಾವವುಳ್ಳ ಶರೀರ ಎಂದರ್ಥ. ಇಂತಹ ಶರೀರದ ಮೇಲೆ ಯಾವುದೇ ಬಗೆಯ ಮಮತೆ ಇಲ್ಲದಿರುವವನು ಅಶ್ಮ ಎಂದೂ ವ್ಯಾಖ್ಯಾನಕಾರರು ಈ ಶಬ್ದಕ್ಕೆ ಅರ್ಥವನ್ನು ಮಾಡುತ್ತಾರೆ. ಅಂದರೆ ಶರೀರವ್ಯಾಮೋಹ ಇಲ್ಲದವನು ಜ್ಞಾನಿ. ಜ್ಞಾನದ ತುಟ್ಟತುದಿಗೆ ಏರಿದವನಿಗೆ ಆತ್ಯಂತಿಕ ಸುಖಸಂವೇದನೆಯನ್ನು ಬಿಟ್ಟು ಇನ್ನು ಯಾವ ವಿಧವಾದ ಸುಖ ದುಃಖಗಳ ಸಂವೇದನೆಯೂ ಇರುವುದಿಲ್ಲ. ಅವನ ದೃಷ್ಟಿಯಲ್ಲಿ ಉಳಿದೆಲ್ಲವೂ ಕಲ್ಲಿಗೆ ಸಮಾನ. ಹಾಗಾಗಿ ಹೃದಯವಿಲ್ಲದವನು ಅಶ್ಮ - ಜ್ಞಾನಿ ಎಂಬ ವಿಶಿಷ್ಟವಾದ ಅರ್ಥ ಬರುವಂತೆ ಧರ್ಮರಾಜನು ಉತ್ತರವನ್ನು ಕೊಟ್ಟಿದ್ದಾನೆ ಎಂಬುದಾಗಿ ಶ್ರೀರಂಗಪ್ರಿಯ ಮಹಾಸ್ವಾಮಿಗಳು ಈ ರೀತಿಯಾಗಿ ವಿವರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಜ್ಞಾನಿಗಳ ಹೃದಯ ಕಲ್ಲಿನಷ್ಟು ಕಠೋರವೆಂದರ್ಥವಲ್ಲ. ಎಂತಹ ಕಠಿನ ಪರಿಸ್ಥಿತಿಯಲ್ಲೂ ಎದೆಗುಂದದ ಅಚಲತೆ ಅದು. ಸುಖ ಬಂತೆದು ಹಿಗ್ಗುವ, ಕಷ್ಟ ಬಂತೆಂದರೆ ಕುಗ್ಗುವ ಅಸ್ಥಿರತೆಯ ಲಕ್ಷಣವಲ್ಲ. ದುಃಖಿತರನ್ನು ಅಥವಾ ದೀನರನ್ನು ಕಂಡಾಗ ಕರಗುವ ಮತ್ತು ದುಷ್ಟರನ್ನು - ಭ್ರಷ್ಟರನ್ನು ಕಂಡಾಗ ವಜ್ರವಾಗಿ ನಿಲ್ಲುವ ಧೀರರವರು. ಅಂಜುವ ದುರ್ಬಲರಲ್ಲ. ಹೇಗೆ ಮಳೆ ಬಿಸಿಲು ಎನ್ನದೇ ತನ್ನ ಮೈಯ್ಯೊಡ್ಡಿ ಕಲ್ಲು ಭೂಮಿಯನ್ನು ಗಟ್ಟಿಗೊಳಿಸುವುದೋ, ಅಂತೆಯೇ ಸಮಾಜವನ್ನು ಸದೃಢವಾಗಿರಿಸುವ ಸಾಧನವೇ ಕಲ್ಲಿನಂತಹ ಸಾಧು ಸಜ್ಜನರು.