Sunday, March 12, 2023

ಯಕ್ಷ ಪ್ರಶ್ನೆ -29 (Yaksha prashne -29)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 28 ನಿದ್ರಿಸುವಾಗಲೂ ಕಣ್ಣನ್ನು ಮುಚ್ಚದಿರುವುದು ಯಾವುದು?

ಉತ್ತರ - ಮೀನ

ಈ ಸೃಷ್ಟಿಯಲ್ಲಿ ಕಣ್ಣಿರುವ ಎಲ್ಲಾ ಪ್ರಾಣಿಯೂ ಮುಚ್ಚುವುದುಂಟು. ಕಣ್ಣನ್ನು ಮುಚ್ಚುವುದು ಮತ್ತು ಮುಚ್ಚಿದ ಕಣ್ಣನ್ನು ಬಿಚ್ಚುವುದು ಸಹಜವಾದ ಪ್ರಕ್ರಿಯೆ. ಜೀವಿಯ ಅಸ್ತಿತ್ವದ ಕುರುಹೂ ಕೂಡಾ ಕಣ್ಣಿನ ನಿಮಿಷೋನ್ಮೇಷ ಪ್ರಕ್ರಿಯೆಯಿಂದ.  ಆದರೆ ಒಮ್ಮೆ ಬಿಚ್ಚಿದ ಕಣ್ಣನ್ನು ಮುಚ್ಚದಿರುವ ಪ್ರಾಣಿ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಇದೂ ಒಂದು ಪ್ರಶ್ನೆಯೇ? ಈ ಪ್ರಶ್ನೆಯಲ್ಲಿ ಅದಾವ ವಿಶೇಷತೆ ಅಡಗಿದೆ? ಎಂಬ ಕುತೂಹಲ. ಹಾಗಾದರೆ ಅಷ್ಟು ಪೇಲವವಾದ ಪ್ರಶ್ನೆಯನ್ನು ಯಕ್ಷನು ಯುಧಿಷ್ಠಿರನಂತಹ ಬುದ್ಧಿಮಂತನಿಗೆ ಕೇಳುವುದೇ? ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾದುದಲ್ಲ. ಅದೊಂದು ಮಕ್ಕಳಿಗೆ ಕೇಳುವ ಮಟ್ಟದ ಪ್ರಶ್ನೆಯೂ ಆಗಿಲ್ಲ. ಹಾಗಾದರೆ ಇಲ್ಲಿರುವ ಗಾಢಾರ್ಥ ಅಥವಾ ಗೂಢಾರ್ಥವಾದರೂ ಏನು? ಅದೆಂತಹ ವಿಶೇಷತೆ ಇಲ್ಲಿದೆ? ಎಂಬುದನ್ನು ಸ್ವಲ್ಪ ಗಮನಿಸೋಣ. 

ಇದೊಂದು ಜೀವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಬೃಹದದಾರಣ್ಯಕೋಪನಿಷತ್ತಿನಲ್ಲಿ ಈ ಬಗ್ಗೆ ಒಂದು ವಿವರಣೆ ಸಿಗುತ್ತದೆ. "ಹೇಗೆ ಮಹಾ ಮೀನೊಂದು ನದಿಯ ಎರಡೂ ತಟಗಳಲ್ಲೂ ಸಂಚರಿಸುತ್ತದೋ, ಅದೇ ರೀತಿಯಾಗಿ ಜೀವವೂ ಕೂಡ ಜಾಗ್ರತ್ತಿನಿಂದ ಸ್ವಪ್ನಕ್ಕೂ, ಸ್ವಪ್ನದಿಂದ ಜಾಗ್ರತ್ತಿಗೂ ಸಂಚರಿಸುತ್ತಿರುತ್ತದೆ" ಎಂದು. ಇಲ್ಲಿ ಮೀನವನ್ನು ಒಂದು ಶರೀರ ಎಂದು ಭಾವಿಸುವುದಾದರೆ ಆ ಮೀನಿನ ಕಣ್ಣು ಅದರ ಜೀವಸ್ಥಾನೀಯವಾದುದು. ಅಂದರೆ ನಿತ್ಯವೂ, ಅವಿಕಾರಿಯೂ, ಜರಾ ಜನ್ಮಾದಿರಹಿತವೂ ಆದ ಆತ್ಮವೊಂದು ತನ್ನ ವಿಸ್ತಾರಕ್ಕಾಗಿ ಅನಿತ್ಯವೂ, ವಿಕಾರವೂ, ಪ್ರಾದುರ್ಭಾವ ವಿನಾಶಾದಿ ಸ್ವಭಾವದಿಂದ ಕೂಡಿದ ಶರೀರವನ್ನು ಪ್ರವೇಶಿಸುತ್ತದೆ. ಶರೀರದಲ್ಲಿ ಇರುವಷ್ಟು ಸಮಯವೂ ಜೀವವು ಈ ಶರೀರದಲ್ಲಿ ತನ್ನ ವ್ಯಾಪಾರವನ್ನು ಇಟ್ಟುಕೊಂಡೇ ಇರುತ್ತದೆ. ಅಲ್ಲಿ ಯಾವುದೇ ರೀತಿಯ ವಿಶ್ರಾಂತಿಯೆಂಬುದು ಇರುವುದೇ ಇಲ್ಲ. ಜಾಗ್ರತ್ತಿನಲ್ಲಂತೂ ಯಾವುದಾದರೊಂದು ಚೇಷ್ಟೇಯಲ್ಲಿ ನಿಯತವಾಗಿ ತನ್ನನ್ನು ತೊಡಗಿಸಿಕೊಂಡೇ ಇರುತ್ತದೆ. ಇನ್ನು ಸ್ವಪ್ನ ಮತ್ತು ನಿದ್ದೆಯ ಅವಸ್ಥೆಯಲ್ಲೂ ಅದರ ಕ್ರಿಯೆ ಇದ್ದೇ ಇರುವುದು. ಮನುಷ್ಯನಾದವನೂ ಸಮಾಧಿ ಎಂಬ ನಾಲ್ಕನೆ ಅವಸ್ಥೆಯನ್ನು ಹೊಂದುತ್ತಾನೆ. ಅಲ್ಲಿಯೂ ಜೀವವ್ಯಾಪಾರವು ಇದ್ದೇ ಇರುತ್ತದೆ ಎಂದು ಯೋಗಶಾಸ್ತ್ರ ಸಾರುತ್ತದೆ. ಭಗವದ್ಗೀತೆಯೂ' ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್' ಒಂದು ಕ್ಷಣವೂ ಕರ್ಮಚೇಷ್ಟೆಯಿಲ್ಲದ ಸಂದರ್ಭವೇ ಇಲ್ಲ ಎಂಬುದನ್ನು ಪುನರುಚ್ಚರಿಸುವುದು. ಸಮಾಧಿಯೆಂಬ ನಾಲ್ಕನೆ- ತುರೀಯವಾದ ಅವಸ್ಥೆಯ ಸ್ವಭಾವನ್ನು ಹೇಳುವಾಗ ಶ್ರೀಶಂಕರ ಭಗವತ್ಪಾದರು ಯೋಗತಾರಾವಳಿ ಗ್ರಂಥದಲ್ಲಿ  " ಅದೊಂದು ವಿಚಿತ್ರವಾದ ಸ್ಥಿತಿ" ಎನ್ನುತ್ತಾರೆ. ಏಕೆಂದರೆ ಜೀವವಿದೆಯೋ? ಎಂದು ಕೇಳಿದರೆ ಮರದ ತುಂಡಿನಂತೆ ಜಡವಾದ ವಸ್ತುವಿನಂತೆ - ಮರಣವಾದಂತೆ ಗೋಚರಿಸುತ್ತದೆ. ಆದರೆ ಅದು ಮರಣಾವಸ್ಥೆಯಲ್ಲ. ಅಥವಾ ಜೀವವಿಲ್ಲವೋ ಎಂದರೆ ಅದೂ ಅಲ್ಲ. ಅಲ್ಲಿ ಸತ್ತಿರುವ ಯಾವ ಲಕ್ಷಣವೂ ಕಾಣುವುದಿಲ್ಲ. ಇಂತಹ ವಿಚಿತ್ರವಾದ ಸ್ಥಿಯು ಅಲ್ಲಿರುತ್ತದೆ. ಆದರೆ ಜೀವದ ವ್ಯಾಪಾರವು ಯಾವ ಕ್ಷಣಕ್ಕೂ ಬಿಟ್ಟಿರುವುದಿಲ್ಲ. ಇಂತಹ ಅಂತರಂಗದ ವಿಷಯವನ್ನು ಅರುಹಲು ಯಕ್ಷನು ಮೀನಿನ ಕಣ್ಣು ಮಿಟುಕದಿರುವ ಉತ್ತರವನ್ನು ಧರ್ಮರಾಜನಿಂದ ನಿರೀಕ್ಷಿಸುತ್ತಾನೆ.


ಸೂಚನೆ : 12
/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.