Monday, March 27, 2023

ಅಷ್ಟಾಕ್ಷರೀ​ - 31 ನಾಕ್ಷತ್ರಂ ಬ್ರಹ್ಮ ವರ್ಧತೇ (Astakshara Darshana 31 Naakshatram Brahma Vardhate)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು", "ಅಂಬಲಿ ಕುಡಿಯುವವನಿಗೆ ಮೀಸೆ ತಿರುವುವನೊಬ್ಬ" – ಮುಂತಾದ ಗಾದೆಮಾತುಗಳನ್ನು ಯಾರು ಕೇಳಿಲ್ಲ? ಇಲ್ಲೆಲ್ಲ, ಮುಖ್ಯವಾದುದನ್ನು ಬಿಟ್ಟು ಮುಖ್ಯವಲ್ಲದ್ದಕ್ಕೆ ಬೆಲೆಗೊಡುವುದು - ಎಂಬುದನ್ನು ಗೇಲಿಮಾಡುವುದು ಕಾಣುತ್ತದೆ.

ಜೀವನದಲ್ಲಿ ಯಾವುದು ಮುಖ್ಯ, ಯಾವುದಲ್ಲ? – ಎಂಬ ಲೆಕ್ಕಾಚಾರವು ಅವಶ್ಯ.  ಯಾವುದಕ್ಕೆ ಯಾವುದು ತಕ್ಕುದಾದುದು? ಯಾವುದು ಎಲ್ಲಿ ಯಾವಾಗ ಸರಿಹೋಗುವುದು? – ಎಂಬ ಆಲೋಚನೆಗಳು ಸಹಜವಾಗಿಯೇ ಆಗಾಗ್ಗೆ ಬರುತ್ತಿರಬೇಕು.

ಕತ್ತಿಗೆ ಹಾಕುವ ಮುತ್ತಿನ ಹಾರವನ್ನೂ ಕಾಲಿಗೆ ಹಾಕುವ ಗೆಜ್ಜೆಯನ್ನೂ  ಅದಲುಬದಲು ಮಾಡಿದರೆ  ಹಾಸ್ಯಕ್ಕೆ ಆಸ್ಪದ. ನಗೆಪಾಟಲಷ್ಟೇ ಆದರೆ ಪರವಾಗಿಲ್ಲ; ಕೆಲವೊಮ್ಮೆ ಅನರ್ಥವೇ ಸಂಭವಿಸುವುದುಂಟು: ನಮ್ಮ ನಾಲಿಗೆಯನ್ನು ನಾವೇ ಕಚ್ಚಿಕೊಂಡುಬಿಡುವುದುಂಟು – ಹಾಗೆಂದು ಹಲ್ಲನ್ನೇ ಮುರಿದುಬಿಡೋಣವೇ?

ಕಂಪ್ಯೂಟರನ್ನು ಅಂತರ್ಜಾಲದ ಮೂಲಕ ತರಿಸಿಕೊಳ್ಳುವೆವೆನ್ನಿ. ಅದನ್ನೇನು  ಸುಮ್ಮನೆ ಕೈಯಲ್ಲೇಹಿಡಿದುಕೊಂಡು ತಂದುಕೊಟ್ಟುಬಿಡುವರೇನು? ಬಹಳ ಬೆಲೆಬಾಳುವ ಹಾಗೂ ಮೃದುವೂ ಸೂಕ್ಷ್ಮವೂ ಆದ ಅದಕ್ಕೆ ಅದೆಷ್ಟು "ಕವಚಗಳು! ಮೇಲೂ ಕೆಳಗೂ ಅಕ್ಕಪಕ್ಕಗಳಲ್ಲೂ ನಾನಾಕಾರದ ಥರ್ಮೋಕೋಲುಗಳೇನು, ರೊಟ್ಟುಗಳೇನು! ನಾವು ಕೇಳಿದ್ದು ಕಂಪ್ಯೂಟರನ್ನು ಮಾತ್ರ, ಇದೆಲ್ಲ ಏಕೆ ಬೇಕಿತ್ತು? – ಎಂದು ರೇಗುವೆವೇ? ಒಳಗಿರುವ ಬೆಲೆಬಾಳುವ ಸಾಮಾನು ಸುರಕ್ಷಿತವಾಗಿ ನಮ್ಮ ಕೈಸೇರುವ ಪರ್ಯಂತ ಅವೆಲ್ಲ ಬೇಕೇ ಬೇಕು, ಅಲ್ಲವೇ? ಏಕೆ? ಕವಚವಾಗಿರುವವರೆಗೂ ಅವಕ್ಕೆ ಬೆಲೆಯುಂಟೇ ಉಂಟು; ಬರೀ ರೊಟ್ಟಿಗೇ ಬೆಲೆಯೇನು?

ಒಳಗಿರುವ ಪದಾರ್ಥ ಅಮೂಲ್ಯವಾದದ್ದು; ಹೊರಗಣ ಕವಚ ಕಡಿಮೆ ಬೆಲೆಯದ್ದು, ರಕ್ಷಣೆಯನ್ನು ಯಾವುದು ಒದಗಿಸುವುದೋ ಅದು ರಕ್ಷಕ; ಯಾವುದನ್ನು ರಕ್ಷಿಸಬೇಕೋ ಅದು ರಕ್ಷ್ಯ. ರಕ್ಷ್ಯವು ತಾನೆ ಮುಖ್ಯ?

ಇದನ್ನು (ಪದೇ ಪದೇ) ಹೇಳಿಕೊಟ್ಟರೂ ಕಲಿಯದ ಮೂರ್ಖರೂ ಪ್ರಪಂಚದಲ್ಲಿ ಉಂಟು! ತಲೆಗೆ ಹೆಲ್ಮೆಟ್ ಹಾಕಿಕೊಳ್ಳಿ – ಎಂದು ಎಷ್ಟು ಬಾರಿ (ಆ)ರಕ್ಷಕರೂ (ಡಾಕ್ಟರರೂ) ಎಚ್ಚರಿಸುವರು! ಆದರೂ ಹಾಕಿಕೊಳ್ಳದ ಮಂದಿ ಎಷ್ಟೊಂದು! ಶಿರಸ್ಸಿಗೆ ಬೇಕು ಶಿರಸ್ತ್ರಾಣ. ಶಿರಸ್ಸು ರಕ್ಷ್ಯ, ಶಿರಸ್ತ್ರಾಣವು ರಕ್ಷಕ.

ತಲೆಯ ಬಗ್ಗೆ ಅದೇಕೆ ಅಷ್ಟು  ಪಕ್ಷಪಾತ? – ಎಂದು ಕೇಳುವವರಿರಬಹುದು. ನಮ್ಮ ಶರೀರವೆಂಬುದು ಡೆಮಾಕ್ರಸಿಯಂತಲ್ಲವೆಂಬುದನ್ನು ಗಮನಿಸಿಕೊಳ್ಳಬೇಕು: ಎಲ್ಲ ಅಂಗಗಳಿಗೂ ಒಂದೇ ಬೆಲೆಯಲ್ಲ: ಇಲ್ಲಿ ಎಲ್ಲವೂ ಮುಖ್ಯವಾದರೂ ಕೆಲವು ಅತಿಮುಖ್ಯವೇ ಸರಿ: ಅವಘಡವಾದಾಗ ಕಾಲುಮುರಿಯಿತೆಂದರೂ ಕತ್ತುಮುರಿಯಿತೆಂದರೂ ಎರಡೂ ಒಂದೇಯೇ? ಕತ್ತೇ ಮುರಿದವ ಸತ್ತೇಹೋದನೆಂದೇ; ಆದರೆ ಬರೀ ಕಾಲು ಮುರಿದವನಿಗೆ ಒಂದಿಷ್ಟು ಚಿಕಿತ್ಸೆ ಕೊಟ್ಟು ಜೀವನ ನಡೆಸಿಕೊಳ್ಳಲಾಗುವಂತೆ ಮಾಡಲಾದೀತು.

ಎಂದೇ, ಆಯುರ್ವೇದದಲ್ಲಿ ಶಿರಸ್ಸನ್ನು "ಉತ್ತಮಾಂಗ"ವೆಂದೇ ಕರೆದಿದ್ದಾರೆ! ಅದು ಸರ್ವಥಾ ರಕ್ಷ್ಯ. ವಾಸ್ತವವಾಗಿ ಹತ್ತು ವರ್ಷದ ಮಕ್ಕಳಿಗೂ ಗೋಚರವಾಗುವ ಅಂಶವಿದು! ಹೇಗೆ? ಅವರಲ್ಲೇ ಪರಸ್ಪರ ಜಗಳಗಳಾಗುವಾಗ ಕಪಾಳಕ್ಕೆ ಹೊಡೆಯಲು ಬಂದರೆ ತಕ್ಷಣವೇ  ಕೈಯನ್ನು ಅಡ್ಡ ತರುವುದಿಲ್ಲವೇ?

ವಾಸ್ತವವಾಗಿ, ನಮ್ಮ ಕೈಕಾಲುಗಳಿಗೆ ಸಹ ಅದು "ಗೊತ್ತು"!: ಮೇಲಿಂದ ಬಿದ್ದೆವೆನ್ನಿ; ಮೊದಲು ನೆಲಕ್ಕೆ ಕೈ(-ಕಾಲು)ಗಳನ್ನೇ ಕೊಡುವುದು;ತಲೆಯನ್ನಲ್ಲ. ರಕ್ಷ್ಯವಾದ ತಲೆಯ ರಕ್ಷಣೆಗಾಗಿ ಕೈಗಳೋಡಿಬರುವುವು!

ಶ್ರೀರಂಗಮಹಾಗುರುಗಳು ಸೃಷ್ಟಿಯೇ ರಕ್ಷ್ಯ-ರಕ್ಷಕ-ವ್ಯವಸ್ಥೆಯನ್ನು ಹೇಗೆ ಮಾಡಿಟ್ಟಿದೆ? - ಎಂಬುದನ್ನು ತೋರಿಸಿಕೊಡುತ್ತಿದ್ದರು: "ಮೆದುಳು ಶರೀರದ ಅತ್ಯಂತ ಮುಖ್ಯವಾದ ಭಾಗ. ರಕ್ಷ್ಯವಾದ ಅದಕ್ಕೆ ರಕ್ಷಕವಾಗಿ ಬಂದಿರತಕ್ಕದ್ದು ನಮ್ಮ ಮಂಡೆ, ತಲೆಬುರುಡೆ: ಇಡೀ ಶರೀರದಲ್ಲೇ ಅತ್ಯಂತ ಘಟ್ಟಿಯಾಗಿರುವ ಮೂಳೆಯದು! ಹಾಗೆಯೇ ಹೃದಯವೂ ಬಹುಮುಖ್ಯವಾದ ಅಂಗ; ಎಂದೇ ರಕ್ಷಕವಾಗಿ ಸುತ್ತಲಿರುವ ಪಕ್ಕೆಲುಬುಗಳು ಗಟ್ಟಿಯಾಗಿರತಕ್ಕವು."

ಮುಖವು ಬ್ರಹ್ಮ; ತೋಳು ಕ್ಷತ್ರ. "ಕ್ಷತ್ರವಿಲ್ಲದೇ ಬ್ರಹ್ಮವುಳಿಯದು"! - ಇದನ್ನೇ ಮನುವು "ನಾಕ್ಷತ್ರಂ ಬ್ರಹ್ಮ ವರ್ಧತೇ" ಎಂದಿದ್ದಾನೆ. ಧರ್ಮರಕ್ಷಣೆಗಾಗಿ ಬಂದ ರಾಜ್ಯವ್ಯವಸ್ಥೆಯ ಮರ್ಮವಿದು. ಸಮಾಜಸ್ತರದಲ್ಲಿ ಕ್ಷತ್ರಿಯರು ದುರ್ಬಲರಾದಾಗಲೇ ಹಿಂದುಧರ್ಮದ ಅವನತಿಯಾರಂಭವಾಯಿತು!

ಅದೇ ರೀತಿ ಬ್ರಹ್ಮವೂ ಕ್ಷತ್ರಕ್ಕೆ ರೂಪಾಂತರದಲ್ಲಿ ರಕ್ಷೆಯೇ: ಕಾಲಿಗೆ ಮುಳ್ಳು ಚುಚ್ಚಿದರೆ, ತಲೆಯು ಎಲ್ಲ ಅಂಗಗಳಿಗೂ ಕರ್ತವ್ಯನಿರ್ದೇಶನವನ್ನು ಮಾಡಿ ಕಾಲನ್ನು ರಕ್ಷಿಸುವುದಲ್ಲವೆ? ಹೀಗೆ ಬ್ರಹ್ಮ-ಕ್ಷತ್ರಗಳು ಪರಸ್ಪರ ಒಂದನ್ನೊಂದು ರಕ್ಷಿಸಿಕೊಂಡಾಗಲಲ್ಲವೆ ಧರ್ಮಾಚರಣೆ ಸಾಧ್ಯವಾಗುವುದು?

ಸೂಚನೆ: 26/03/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.