Sunday, March 12, 2023

ವಿದ್ಯೆ (Vidye)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)



ಇಂದು ವಿದ್ಯೆ ಎಂದ ಕೂಡಲೇ "Education" ಎಂದು ನಾವು ಅರ್ಥೈಸಿಕೊಳ್ಳುತ್ತೇವೆ. ವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ, ಗಣಿತ, ವಿಜ್ಞಾನ, ವಾಣಿಜ್ಯ ಎಂಬ ಅನೇಕ ವಿಭಾಗಗಳನ್ನು ಕಾಣುತ್ತೇವೆ ಮತ್ತು ಇವೆಲ್ಲವನ್ನೂ ವಿದ್ಯೆಯೆಂದೇ ಗುರುತಿಸುತ್ತೇವೆ. ವಿದ್ಯೆಯೆಂಬ ಪದವನ್ನು ಪ್ರಯೋಗಕ್ಕೆ ತಂದ ಮಹರ್ಷಿಗಳ ಅಭಿಪ್ರಾಯದಲ್ಲಿ, ಈ ಆಧುನಿಕ ವ್ಯಾಸಂಗದ ವಿಷಯಗಳೆಲ್ಲಾ ವಿದ್ಯೆ ಎಂದು ಪರಿಗಣಿಸಲ್ಪಡುತ್ತದೆಯೇ? ಅಥವಾ ವಿದ್ಯೆಯೆಂದರೆ ಇನ್ನೂ ಆಳವಾದ ಪರಿಕಲ್ಪನೆಯುಂಟೇ ಎನ್ನುವ ಪ್ರಶ್ನೆ ಪರಿಶೀಲನಾರ್ಹ. 

ವಿದ್ಯೆಯ ಬಗ್ಗೆ ಮಹರ್ಷಿಗಳ ಪರಿಕಲ್ಪನೆ ಬಹಳ ಆಳವಾದದ್ದಾಗಿದೆ. ವಿದ್ಯೆಯೆಂದರೆ, "ಸಾ ವಿದ್ಯಾ ಯಾ ವಿಮುಕ್ತಯೇ", ಅಂದರೆ ಯಾವುದು ನಮ್ಮನ್ನು ಸಂಸಾರ ಬಂಧನದಿಂದ ಮುಕ್ತಿಗೊಳಿಸುತ್ತದೆಯೋ ಅದೇ ವಿದ್ಯೆ ಎಂದು ವಿದ್ಯೆಯ ಸ್ವರೂಪವನ್ನು ಸಾರಿದ್ದಾರೆ. ಇದೇ ನಿಟ್ಟಿನಲ್ಲಿ, ಶ್ರೀರಂಗಮಹಾಗುರುಗಳು ವಿದ್ಯೆಗೆ ಮತ್ತೊಂದು ವ್ಯುತ್ಪತ್ತಿಯನ್ನು ಎತ್ತಿ ಹಿಡಿದಿದ್ದಾರೆ: "ವಿದ ಜ್ಞಾನೇ, ಯಾ ಪ್ರಾಪಣೇ" ಅಂದರೆ ಯಾವುದು ನಮ್ಮನ್ನು ಪರಮಾತ್ಮ ಜ್ಞಾನದವರೆಗೂ, ಕರೆದುಕೊಂಡು ಹೋಗುವುದೋ ಅದೇ ನಿಜವಾದ ಅರ್ಥದಲ್ಲಿ ವಿದ್ಯೆ ಎನಿಸಿಕೊಳ್ಳುತ್ತದೆ.


 ಯಾವುಗಳನ್ನು, (ಋಷಿಮೂಲವಾದ ವೇದ, ಶಾಸ್ತ್ರ, ಸಂಗೀತ, ನಾಟ್ಯ ಮುಂತಾದವು) ನಾವು ಅನುಸಂಧಾನ ಮಾಡಿದರೆ, ಅವು ನಮ್ಮ ಮನಸ್ಸನ್ನು ಒಳಮುಖವಾಗಿ ತಿರುಗಿಸಿ, ನಮ್ಮನ್ನು ಮೂಲದಲ್ಲಿ ಬೆಳಗುವ ಜ್ಯೋತಿಯಲ್ಲಿ ಅಥವಾ ಪ್ರಣವದಲ್ಲಿ ಒಂದಾಗಿಸುತ್ತದೆಯೋ ಅವನ್ನು ವಿದ್ಯೆಯೆನ್ನುತ್ತೇವೆ. ಭಾರತೀಯ ವಿದ್ಯೆಗಳಿಗೆ ಮಾತ್ರ ಏಕೆ ಈ ಸಾಮರ್ಥ್ಯ ಎಂದರೆ, ಇದಕ್ಕೂ ಶ್ರೀರಂಗಮಹಾಗುರುಗಳ ಒಂದು ಮಾರ್ಮಿಕ ನೋಟ ಉತ್ತರ ಕೊಡುತ್ತದೆ. ಅದೇನೆಂದರೆ, ಯಾವುದೇ ವಿಷಯವು ಯಾವ ಮೂಲದಿಂದ ವಿಕಾಸವಾಗಿದೆಯೋ ಅನುಸಂಧಾನ ಮಾಡುವವರನ್ನು ಆ ಮೂಲಕ್ಕೇ ತಲುಪಿಸುತ್ತದೆ.   

ಭಾರತೀಯ ವಿದ್ಯೆಗಳು ಪ್ರಣವ ಮೂಲದಿಂದ ವಿಕಾಸವಾಗಿರುತ್ತವೆ. ಆದುದರಿಂದ ಅನುಸಂಧಾನ ಮಾಡುವವರನ್ನು ವಿದ್ಯಾಮೂಲವಾದ ಪ್ರಣವಕ್ಕೇ ತಲುಪಿಸುತ್ತದೆ. ಯಾವುದೋ ಮೂಲದಿಂದ ವಿಕಾಸವಾಗುವುದು ಅಥವಾ ಮೂಲವನ್ನು ತಲಪುವುದು ಎಂದರೇನು? ಕೆಲವು ಲೌಕಿಕ ಉದಾಹರಣೆಗಳ ಮೂಲಕ ಅರ್ಥ ಮಾಡಿಕೊಳ್ಳೋಣ. 


ಒಬ್ಬ ಆಧುನಿಕ ವಿಜ್ಞಾನಿ ತನ್ನ ಬೌದ್ಧಿಕ ಸಾಮರ್ಥ್ಯದಿಂದ ಒಂದು ಖಗೋಳವನ್ನು ವೀಕ್ಷಿಸಿ, ಒಂದು ಥಿಯರಿಯನ್ನು ಹೊರತರುತ್ತಾನೆಂದುಕೊಳ್ಳೋಣ. ಈ ಥಿಯರಿಯನ್ನು ಬುದ್ಧಿ ಹಾಗೂ ಇಂದ್ರಿಯಗಳ ಮೂಲದಿಂದ ವಿಕಾಸವಾಗಿದೆ ಎಂದು ಹೇಳಬಹುದು. ಏಕೆಂದರೆ, ಇಂದ್ರಿಯಗಳ ನೆರವಿನಿಂದ ವೀಕ್ಷಣೆ ಮಾಡುತ್ತಾರೆ, ಬುದ್ಧಿಯ ಸಹಾಯದಿಂದ ವಿಶ್ಲೇಷಣೆ ಮಾಡಿ ಥಿಯರಿಯನ್ನು ಹೊರತಂದು ಪ್ರಕಟಿಸುತ್ತಾರೆ. ಈ ಥಿಯರಿಯನ್ನು ಯಾರು ಅನುಸಂಧಾನ ಮಾಡುತ್ತಾರೆಯೋ ಅವರು ಈ ವಿಜ್ಞಾನಿಯ ಬೌದ್ಧಿಕ ಸ್ಥಿತಿಯನ್ನು ತಲುಪಬಹುದು. ಅಂದರೆ ಬುದ್ಧಿಮೂಲವಾಗಿ ಬಂದ ವಿಷಯವನ್ನು ಅನುಸಂಧಾನ ಮಾಡಿದಾಗ ಅದು ಬುದ್ಧಿಯನ್ನು ಹರಿತಗೊಳಿಸಿ ಸೃಷ್ಟಿಯ ಒಂದು ಮರ್ಮವನ್ನು ಅರ್ಥ ಮಾಡಿಸುತ್ತದೆ. ಯಾವ ಮೂಲದಿಂದ ವಿಷಯ ವಿಕಾಸವಾಯಿತೋ ಆ ಮೂಲಕ್ಕೆ ಅನುಸಂಧಾನ ಮಾಡುವವನನ್ನು ತಲುಪಿಸುತ್ತದೆ. 

 

ಆದರೆ ಭಾರತೀಯ ವಿದ್ಯೆಗಳ ವಿಷಯಕ್ಕೆ ಬಂದರೆ, ಅವುಗಳೆಲ್ಲಾ ಪ್ರಣವ ಮೂಲದಿಂದ ವಿಕಾಸವಾಗಿವೆ. ಪ್ರಣವವೆಂದರೆ ಓಂಕಾರ. ಓಂಕಾರವೆಂದರೆ ಇಂದು ನಾವು ಉಚ್ಚರಿಸುವ ಒಂದು ಮಂತ್ರ ಪ್ರಕಾರವಷ್ಟೇ ಅಲ್ಲ ;ಮಾನವನು ತನ್ನ ಮನಸ್ಸನ್ನು ಹಿಂದಕ್ಕೆ ತಿರುಗಿಸಿ, ಆಳವಾಗಿ ಸಂಚರಿಸಿ ಅನ್ವೇಷಿಸಿದಾಗ, ಆತ್ಮಮೂಲದಲ್ಲಿ ಬೆಳಗುವ ಜ್ಯೋತಿಯ ನಾದಾತ್ಮಕ ಅಭಿವ್ಯಕ್ತಿಯೇ ಪ್ರಣವ. ಈ ಓಂಕಾರವೇ ಸೃಷ್ಟಿಯಲ್ಲಿ ಅನಾಹತವಾಗಿ ವ್ಯಾಪಕವಾಗಿ ಮೊಳಗುತ್ತಿದೆ ಎಂದು ಋಷಿಗಳು ಮನಗಂಡು, ಅದರಿಂದಲೇ ವಿದ್ಯಾಪ್ರಪಂಚವು ವಿಸ್ತಾರವಾಗಿದೆ ಎಂಬ ಸತ್ಯಾರ್ಥವನ್ನು ಕಂಡುಕೊಂಡರು. 


ನಮ್ಮ ದೇಹದಲ್ಲಿರುವ ಷಟ್ಚಕ್ರಗಳಲ್ಲಿ ಅನೇಕ ದಳಗಳಿರುತ್ತವೆ. ಮೂಲದಲ್ಲಿ ಮೊಳಗುವ ಈ ಓಂಕಾರ, ಷಟ್ಚಕ್ರಗಳ 50 ದಳಗಳಲ್ಲಿ ಹೊರಹೊಮ್ಮುತ್ತಾ ಬೇರೆ ಬೇರೆ ವರ್ಣ ಅಥವಾ ಅಕ್ಷರಗಳಾಗಿ ಮಾರ್ಪಡುತ್ತದೆ. ಈ ಅಕ್ಷರಗಳೇ ಸಂಯೋಜನೆಗೊಂಡು ಪದ, ವಾಕ್ಯ, ಸಾಹಿತ್ಯವಾಗಿ ವಿಕಾಸವಾಗುತ್ತದೆ. ಓಂಕಾರ ಅಥವಾ ಪ್ರಣವದಿಂದಲೇ ವಿಸ್ತಾರವಾಗಿ ಭಾಷೆಯಾಗಿ, ಸಾಹಿತ್ಯವಾಗಿ ಬೆಳೆದಿರುವ ಸಂಸ್ಕೃತ ಭಾಷೆಯನ್ನು ದೇವಭಾಷೆ ಅಥವಾ ಅಮರಭಾಷೆ ಎನ್ನುತ್ತಾರೆ. ಈ ಅಮರಭಾವವು ವ್ಯಕ್ತವಾಗಿರುವ ಸಾಹಿತ್ಯವು ವಿದ್ಯೆಯೆನಿಸಿಕೊಳ್ಳುತ್ತದೆ. ಈ ವಿದ್ಯೆಯನ್ನು ಸರಿಯಾಗಿ ಅನುಸಂಧಾನ ಮಾಡಿದರೆ, ಅನುಸಂಧಾನ ಮಾಡುವವನನ್ನು ಪ್ರಣವ ಮೂಲಕ್ಕೇ ತಲುಪಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಈ ವಿದ್ಯೆ. 


ಅಂತೆಯೇ, ಈ ಪ್ರಣವವು ಚಕ್ರಗಳಿಂದ ಹೊರಹೊಮ್ಮಿದಾಗ ಸಪ್ತ ಸ್ಪರಗಳು ಮೂಡುತ್ತವೆ. ಅದು ಭಾವ ರಾಗಗಳೊಂದಿಗೆ ಕೂಡಿಕೊಂಡು ಸಂಗೀತ ವಿದ್ಯೆಯಾಗಿ ಬೆಳೆದಿದೆ.

ಓಂಕಾರವೆಂಬ ಈ ಶಕ್ತಿಯು ನಮ್ಮ ದೇಹವಿನ್ಯಾಸವನ್ನೂ ರೂಪಿಸಬಲ್ಲದು. ಋಷಿಗಳ ಸಮಾಧಿ ಸ್ಥಿತಿಯಲ್ಲಿ ಉಂಟಾದ ದೇಹ ವಿನ್ಯಾಸಗಳನ್ನನುಸರಿಸಿ ಯೋಗಾಸನ, ನಾಟ್ಯ ಮುಂತಾದ ವಿದ್ಯೆಗಳು ಬೆಳೆದಿವೆ. ಇವುಗಳನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರೆ, ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ವೇದಾಂಗಗಳು ಸೇರಿ 14 ವಿದ್ಯೆಗಳಾಗುತ್ತವೆ. ಇವೇ ಇನ್ನೂ ವಿಸ್ತಾರವಾಗಿ ವಿದ್ಯೆಗಳಾಗುತ್ತವೆ. ಈ 64 ವಿದ್ಯೆಗಳ ಪಟ್ಟಿಯಲ್ಲಿ ಕೃಷಿ, ಗೋರಕ್ಷೆ, ವಾಸ್ತು ಶಾಸ್ತ್ರ ಅಂದರೆ ಗೃಹ ರಚನೆ, ನಗರ ರಚನೆ, ದೇವಾಲಯ ರಚನೆ, ಲೋಹವಿದ್ಯೆ, ಶಿಲ್ಪ ಶಾಸ್ತ್ರ ಮುಂತಾಗಿ ಅನೇಕ ದೈನಂದಿನ ಜೀವನೋಪಯೋಗಿ ವಿದ್ಯೆಗಳಿವೆ. ಅಂದರೆ, ಈ ವಿದ್ಯೆಗಳು ಅಧ್ಯಾತ್ಮಾನುಭವವನ್ನುಂಟು ಮಾಡುವುದಲ್ಲದೇ ಪ್ರಾಪಂಚಿಕ ಜೀವನವನ್ನು ಉತ್ತಮ ಸಂಸ್ಕೃತಿ ಮತ್ತು ನಾಗರಿಕತೆಗಳಿಂದೊಡಗೂಡಿ ಸಾಗಿಸುವುದಕ್ಕೆ ದಾರಿ ಮಾಡಿಕೊಡುತ್ತವೆ.  ದುರದೃಷ್ಟವಶಾತ್ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ತೊಡಗಿರುವುದರಿಂದ ಈ ವಿದ್ಯೆಗಳು ಇಂದು ಕುಟುಕು ಜೀವದಿಂದಿವೆ. ಆದುದರಿಂದ ಈ ವಿದ್ಯೆಗಳನ್ನು ಋಷಿಹೃದಯದೊಡನೆ ಅನುಸಂಧಾನ ಮಾಡಿ, ಪುನರುಜ್ಜೀವಗೊಳಿಸಿ ಭಾರತೀಯ ಸಂಸ್ಕೃತಿಯು ಪುನಃ ವೈಭವದಿಂದ ಬೆಳಗುವಂತೆ ಮಾಡೋಣ.

ಸೂಚನೆ : 11/3/20223 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.