Monday, March 20, 2023

ಬೇವು ಬೆಲ್ಲದ ರಸಗವಳ (Bevu Bellada Rasagavala)

ಲೇಖಕರು: ಡಾ|| ಪುನೀತ್ ಕುಮಾರ್. ಪಿ.
ಮಿಂಚಂಚೆ (lekhana@ayvm.in)ಯುಗಾದಿ ಎಂದರೆ ಬೇವು-ಬೆಲ್ಲದ  ಸ್ಮರಣೆ ನಮ್ಮ ಮನಸ್ಸಿಗೆ ಮೂಡುತ್ತದೆ. ಯುಗಾದಿಯಲ್ಲಿನ  ಆಚರಣೆಗಳು, ಸಂಭ್ರಮ ಸಡಗರಗಳು, ಬೇವುಬೆಲ್ಲಗಳ ಸೇವನೆ  ಹಬ್ಬದ ಆಚರಣೆಯ ಬಹಳ ಮುಖ್ಯವಾದ ಭಾಗಗಳು. ಯುಗಾದಿಯ ದಿನ ನಾವು ಸೇವಿಸುವ ಬೇವು ಬೆಲ್ಲಗಳನ್ನು ಕಷ್ಟ-ಸುಖಗಳು, ದು:ಖ-ಸಂತೋಷಗಳು, ಅನುಕೂಲ-ಪ್ರತಿಕೂಲಗಳಿಗೆ ಹೋಲಿಸಿ ಅರ್ಥೈಸಿಕೊಳ್ಳುವುದು ರೂಢಿ. ಯುಗಾದಿ ಹಬ್ಬದಂದು ಅಭ್ಯಂಗಸ್ನಾನ ಮಾಡಿ, ಮನೆ-ಮಠಗಳನ್ನು ಶುದ್ಧಗೊಳಿಸಿ, ತಳಿರು-ತೋರಣಗಳಿಂದ ಅಲಂಕಾರ ಮಾಡಿ, ಪ್ರತಿಪತ್ತಿನ ಸಂಕಲ್ಪ ಮಾಡಬೇಕು. ನಂತರ ದೇವತಾಪೂಜೆ, ಹೋಮ, ಪಂಚಾಂಗಶ್ರವಣ, ದಾನ,  ಬೇವು-ಬೆಲ್ಲ ಹಾಗು ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪ್ರಸಾದಸೇವನೆ ಬಂಧುಮಿತ್ರರೊಡನೆ ಸಂತೋಷದಿಂದ ಮಾಡುವ ಪರ್ವಕಾಲ ಇದು. ನಾವಿಲ್ಲಿ ಯುಗಾದಿಯ ವಿಷೇಶ ನೈವೇದ್ಯ ಬೇವು-ಬೆಲ್ಲದ ವೈಜ್ಞಾನಿಕ ಹಿನ್ನೆಲೆಯನ್ನು ಅರಿಯೋಣ.


ಆಹಾರ ರಸಗಳು

ನಾವು ದಿನನಿತ್ಯ ಸೇವಿಸುವ ಆಹಾರವು ೬ ವಿಧವಾದ ರಸ[ರುಚಿ]ಗಳ ಸಂಯೋಗ . ಇವೇ ಷಡ್ರಸಗಳು. 

೧. ಮಧುರ (ಸಿಹಿ)

೨. ಅಮ್ಲ (ಹುಳಿ)

೩. ಲವಣ (ಉಪ್ಪು)

೪. ತಿಕ್ತ (ಕಹಿ) 

೫. ಕಟು (ಖಾರ)

೬. ಕಷಾಯ (ಒಗಚು)

ಮಾನವನ ದೇಹದ ವಿವಿಧ ಅಂಗಾಂಗಗಳಿಗೆ ಬಗೆಬಗೆಯ ರಸಗಳ ಸಂಯೋಗ ಇರುವ ಆಹಾರ ಪದರ್ಥಗಳಿಂದಲೇ ಪೋಷಣೆ ದೊರೆಯಬೇಕಿದೆ. ಒಂದೇ ರೀತಿಯ, ಒಂದೇ ಬಗೆಯ ದ್ರವ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು  ದೀರ್ಘಕಾಲದಲ್ಲಿ ಬಳಸಿದರೆ ದೇಹ ದುರ್ಬಲವಾಗುವುದು. ಆಯುರ್ವೇದ ಮಹರ್ಷಿ ಚರಕಾಚಾರ್ಯರು ಹೇಗೆ ಹೇಳಿದ್ದಾರೆ-

ಏಕರಸಾಭ್ಯಾಸೋ ದೌರ್ಬಲ್ಯಕರಾಣಾಮ್ ।

ಸರ್ವರಸಾಭ್ಯಾಸೋ ಬಲಕರಾಣಾಮ್ ॥

ನಮ್ಮ ಆಹಾರದಲ್ಲಿ ಎಲ್ಲಾ ರಸಗಳ ರುಚಿಕಟ್ಟಾದ ಮಿಶ್ರಣವಿದ್ದಲ್ಲಿ, ಸಪ್ತಧಾತುಗಳ ಪೋಷಣೆ ಪೂರ್ಣ ರೀತಿಯಲ್ಲಿ ಉಂಟಾಗಿ, ದೇಹಪುಷ್ಟಿಗೆ ಕಾರಣವಾಗುವುದು. ಅಕಸ್ಮಾತ್ತಾಗಿ, ಕೆಲವೇ ರಸಯುಕ್ತ(ರೀತಿಯ) ಆಹಾರಗಳ ಸೇವನೆ ದೇರ್ಘಕಾಲದಲ್ಲಿ ಇಟ್ಟುಕೊಂಡಾಗ ಆಹಾರವೇ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸಿ ಹಲವಾರು ರೋಗಗಳಿಗೆ ಅಂಕುರವಾಗುವುದು.


ಬೇವು ಬೆಲ್ಲ ಸೇವನೆಯ ವೈಜ್ಞಾನಿಕ ಹಿನ್ನೆಲೆ:


ಕಹಿರುಚಿಯ ಗುಣ-ದೋಷಗಳು: 

ಕಹಿ ಪದಾರ್ಥಗಳು ಆಸ್ವಾದನೆಗೆ ಇಷ್ಟವಾಗದಿದ್ದರೂ, ರಸನದ(ನಾಲಿಗೆ) ರುಚಿ

ಅನುಭವದ  ಗುಣವರ್ಧನೆ ಮಾಡುತ್ತದೆ. ದೆಹದಲ್ಲಿರಬಹುದಾದ ಕ್ರಿಮಿ ಹಾಗು ವಿಷವನ್ನು ನಿವಾರಿಸುತ್ತದೆ. ಚರ್ಮರೋಗ, ತುರಿಕೆ, ಕಜ್ಜಿ, ಜ್ವರ, ಸ್ತನ್ಯದೋಷ, ಕೀವುದೋಷ, ಪಿತ್ತ ಹಾಗು ಕಫದೋಷ ನಿವಾರಿಸುತ್ತದೆ. 

ನಾವು ಕಹಿಪದಾರ್ಥವನ್ನೇ  ಹೆಚ್ಚಾಗಿ ಸೇವಿಸಿದರೆ, ಚರ್ಮ ಹಾಗು ದೇಹ ಸಾರಹೀನವಾಗಿ, ಒಣಗಿ ಒರಟಾಗುತ್ತದೆ. ದೈಹಿಕಬಲ ಕುಗ್ಗುತ್ತದೆ. ಮನಸ್ಸು ಮೋಹಗೊಳ್ಳುತ್ತದೆ. ಮಂದಬುದ್ಧಿ ತರುತ್ತದೆ ಹಾಗು ಇತರೆ ವಾತರೋಗಗಳಿಗೆ ಅಂಕುರವಾಗುತ್ತದೆ.  


ಬೇವಿನ ವೈಶಿಷ್ಟ್ಯ - ಬೇವು ಎಂದೊಡನೆ ನಮ್ಮ ಮುಖ ಒಣಗುವುದು. ಅದರ ಕಹಿರಸವು ಮರದ ಎಲ್ಲಾಭಾಗಗಳಲ್ಲಿ ವ್ಯಾಪಿಸಿರುತ್ತದೆ.  ಆದರೆ ಬೇವು ಪಿತ್ತ ಹಾಗು ಕಫ ದೋಷಗಳನ್ನು ನಿವಾರಣೆ ಮಾಡುತ್ತದೆ.  ಹೆಚ್ಚಾದ ಸೇವನೆ, ವಾತರೋಗಕ್ಕೆ ಕಾರಣವಾಗುತ್ತದೆ. ಸಾಮಾನ್ಯತರ ಮಧುಮೇಹಿಗಳು ಹೆಚ್ಚು ಬಳಸಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

 ಬೇವು ನಾಲಿಗೆಯ ರಸನಾಡಿಯ ಗುಣವರ್ಧನೆ ಮಾಡಿ ಎಲ್ಲಾ ರೀತಿಯ ರಸಗಳ ಆಸ್ವಾದನೆಗೆ ಸಹಾಯಮಾಡುತ್ತದೆ. ಇದೇ ಕಾರಣಕ್ಕೆ ಬೇವಿನ ಕಾಷ್ಟದಿಂದ ಹಲ್ಲುತಿಕ್ಕುವುವ ಸಂಪ್ರದಾಯ ರೂಢಿಯಲ್ಲಿದೆ. 


ಸಿಹಿರುಚಿಯ ವಿವರಣೆ 

ಸಿಹಿರಸದ ಪದಾರ್ಥಗಳು ನಿಯಮಿತವಾಗಿ ಬಳಸುವುದರಿಂದ ಸಪ್ತಧಾತುಗಳು ವೃದ್ಧಿಯಾಗಿ, 'ಒಜಸ್ಸು' ಯೆಂಬ ಸಪ್ತಧಾತುಸಾರ ದೇಹದಲ್ಲಿ ಹೆಚ್ಚಾಗಿ ಇಂದ್ರಿಯಶಕ್ತಿ ಅಭಿವೃದ್ಧಿಯಾಗುವುದು. ಸಿಹಿರುಚಿಯು ಆಯುಷ್ಯಕರ, ಷಡಿಂದ್ರಿಯ ಪ್ರಸನ್ನತೆ ತರುವುದು, ದೇಹದ ಬಲ ಹೆಚ್ಚಿಸುವುದು. ಸಿಹಿರಸವು ವಾತಪಿತ್ತನಿವಾರಕ ಹಾಗು ಯುಗಾದಿಯಕಾಲದ ಬಿಸಿಲಿನಿಂದ ಆಗುವ ಬಲಹೀನತೆಯನ್ನು ನಿವಾರಿಸುತ್ತದೆ. ಸಿಹಿರಸವು ತನ್ನೊಳಗೆ ಸೋಮ/ಜಲ ದೇವತೆಯನ್ನು ಅಡಗಿಸಿಕೊಂಡಿರುತ್ತದೆ. ಜಲದೇವತೆಯೇ ಸಿಹಿರಸದ ಅಧಿಪತಿ.

 ಆದರೆ  ನಾವು ಸಿಹಿಪದಾರ್ಥವನ್ನು ಹೆಚ್ಚಾಗಿ ಸೇವಿಸಿದರೆ ಬೊಜ್ಜು, ಆಲಸ್ಯ, ಅತಿಯಾದ ನಿದ್ರೆ, ದೇಹ ಭಾರ, ಅಜೀರ್ಣ, ಮುಂತಾದ ಕಾಯಿಲೆಗಳು ಕಫದೋಷದಿಂದ ಹುಟ್ಟಿಕೊಳ್ಳುತ್ತವೆ.


ಬೆಲ್ಲದ ವೈಶಿಷ್ಟ್ಯ- ಬೆಲ್ಲವು ಸಿಹಿ ಪದಾರ್ಥಗಳಲ್ಲಿ  ಶ್ರೇಷ್ಠ.  ಬೆಲ್ಲವು ಸಿಹಿಯ ಜೊತೆಗೆ ಕ್ಷಾರೀಯ ಗುಣವನ್ನು ಹೊಂದಿದೆ. ಬೆಲ್ಲವು ಉಷ್ಣ ಪದಾರ್ಥ, ಜೀರ್ಣಕ್ಕೆ ಸುಲಭ. ಕಫ ಹಾಗು ವಾತ ದೋಷಗಳನ್ನು ನಿವಾರಿಸುತ್ತದೆ. ಬೆಲ್ಲವನ್ನು ಪಿತ್ತಕಾಲದಲ್ಲಿ, ಪಿತ್ತಸಂಬಂಧೀ ಕಾಯಿಲೆಗಳಲ್ಲಿ, ಕಲುಷಿತ ರಕ್ತ ಇದ್ದಲ್ಲಿ ಉಪಯೋಗಿಸಬಾರದು. ಹಳೆಯದಾದ ಬೆಲ್ಲಕ್ಕೆ 'ಪುರಾಣಗುಡ' ಎಂದು ಹೆಸರು. ಇದು ವಾತ ಹಾಗು ಪಿತ್ತ ಶಮನ ಮಾಡಿ, ಸಪ್ತಧಾತುಗಳ ಪೋಷಣೆಮಾಡುವುದು. ಬೆಲ್ಲದಿಂದ ತಯಾರಾದ ಪದಾರ್ಥಗಳು ಬಿಸಿಲಿನಲ್ಲಿ ಚೇತೋಹಾರಿಯಾಗಿದ್ದು, ಹೋಳಿ/ ಯುಗಾದಿ ಸಮಯದಲ್ಲಿ ಇದರ ಸೇವನೆ ಅವಶ್ಯ ಎಂಬುದು  ವೈಜ್ಞಾನಿಕ. ಬೆಲ್ಲವು ಹೃದ್ರೋಗ, ಜ್ವರ, ಮೂತ್ರಕೋಶದ ತೊಂದರೆಗಳು, ರಕ್ತಹೀನತೆ, ಅತಿಮೂತ್ರ, ಕರುಳಿನ ಕಾಯಿಲೆಯಲ್ಲಿ ಪಥ್ಯ.


ಹೀಗೆ ಸಿಹಿ- ಕಹಿ ರುಚಿಗಳಲ್ಲಿ ನೇರವಾದ ವೈರೋಧ್ಯ ಇಲ್ಲದಿದ್ದರೂ, ಗುಣಾನುಸಾರ ಹಲವು ವಿರೋಧ ಕಾಣಬಹುದು. ರೂಢಿಯಲ್ಲಿ ಸಿಹಿ-ಕಹಿಗಳ ವಿರೋಧಭಾವ ಗ್ರಹಿಸಿಕೊಂಡಿದ್ದೇವೆ. ಜೀವನದ ಕಷ್ಟ-ಸುಖಗಳಿಗೆ ಹೋಲಿಸಿಕೊಳ್ಳುತ್ತೇವೆ. ಜೀವನದ ಕಹಿಯೂ ಅನೇಕ ಬಾರಿ ಪರ್ಯವಸಾನದಲ್ಲಿ ನಮಗೆ ಸಿಹಿಯೆನಿಸುವ ಪಾಠ ಕಲಿಸುವುದುಂಟು. ಯುಗಾದಿಯಂದು ಬೇವಿನ ಸೇವನೆ ತುಂಬಾ ಮುಖ್ಯ. ಬೆಲ್ಲದೊಂದಿಗೆ ಸೇವಿಸುತ್ತೇವೆ.  ಶ್ರೀರಂಗಮಹಾಗುರುಗಳು ಹೇಳಿದಂತೆ  ''ಒಗರೇ ಆಗಲಿ, ಕಹಿಯೇ ಆಗಲಿ, ನೇರವಾಗಿ ಗಂಟಲಲ್ಲಿ ಇಳಿಯುವುದಿಲ್ಲ. ಅದೇ ಮಧುರ ರಸದ ಜೊತೆಯಲ್ಲಿ ತೆಗೆದುಕೊಂಡರೆ ಇಳಿದುಬಿಡುತ್ತೆ''. ಎಲ್ಲಾ ರಸಗಳು ಕೂಡ ಕೊನೆಗೆ ಮಧುರದಲ್ಲಿ, ಆ ಸಕಲಸುಮಧುರನಾದ, ಮಧುರಾಧಿಪತಿಯಾದ ಭಗವಂತನಲ್ಲಿ ಪರ್ಯವಸಾನ ಹೊಂದಿ ಮೋಕ್ಷಕಾರಕವಾಗುವುವು. ಯುಗಾದಿ ವರ್ಷದ ಆರಂಭ. ಇಡೀ ವರ್ಷದಲ್ಲಿ ನಾವು ಸಿಹಿ-ಕಹಿಗಳ ಸಮತೋಲನವನ್ನು ಸಾಧಿಸಿ ಜೀವನ ರಥವನ್ನು ಮಧುರಾಧಿಪನಾದ ಪರಮಾತ್ಮನೆಡೆಗೆ ಎಳೆಯುತ್ತೇವೆ ಎಂಬ ಸಂಕಲ್ಪದ ಜೊತೆಯಲ್ಲಿ  ಬೇವನ್ನು ಬೆಲ್ಲದೊಂದಿಗೆ ಸೇರಿಸಿ ಸೇವಿಸುವುದು. ''ವಿಶೇಷವಾಗಿ ಬೇವಿನ ಚಿಗುರಿನ ಜೊತೆಗೆ ಬೆಲ್ಲ, ಕಲ್ಲುಸಕ್ಕರೆ, ಕಾಳುಮೆಣಸು, ಉಪ್ಪುಕಾಳು, ಜೇರಿಗೆ, ಒಮಕ್ಕಿ ಮಿಶ್ರಣದ ಕಲ್ಕ ತಯಾರಿಸಿ ಸೇವಿಸಬೇಕು, ಇದು ಪ್ರಜಾಪತಿ-ಕಾಲಪುರುಷನ ಅತಿಪ್ರಿಯವಾದ ನೈವೇದ್ಯ. ಅಂದರೆ,  ಈ ಕಲ್ಕವು ವಾತ, ಪಿತ್ತ ಹಾಗು ಕಫಗಳಲ್ಲಿ ಸಮತೋಲನ ತಂದು, ಆ ದೇವತೆಯ ಸುಪ್ರಸನ್ನತೆ,ಸಾಕ್ಷಾತ್ಕಾರಗಳಿಗೆ ಅನುಗುಣವಾದ ಕೇಂದ್ರಗಳು ಒಳಗಿನ ಪ್ರಕೃತಿಯಲ್ಲಿ ವಿಕಾಸಗೊಳ್ಳುವುದಕ್ಕೆ ಸಹಾಯವಾಗುತ್ತದೆ" ಎಂದು ಶ್ರೀರಂಗಪ್ರಿಯಮಹಾದೇಶಿಕರು ಹೇಳುತ್ತಿದ್ದರು. 


ಹೀಗೆ ಯುಗಾದಿಯಂದು ಬೇವು ಬೆಲ್ಲಗಳ ಸೇವನೆ ಸತ್ಸಂಕಲ್ಪದಿಂದ ಮಾಡಿದಾಗ ಅದು ನಮ್ಮ ಐಹಿಕ-ಪಾರಮಾರ್ಥಿಕ ಜೀವನದ ಏಳಿಗೆಗೆ ಕಾರಣವಾಗುತ್ತದೆ.


ಸೂಚನೆ : 18/03/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.