Monday, March 20, 2023

ವ್ಯಾಸ ವೀಕ್ಷಿತ - 30 ಸಂಪನ್ನವಾದ ಯಜ್ಞ; ವಿಳಂಬ ಮಾಡಿದ ರಾಣಿ ( Vyaasa Vikshita - 30 Sampannavada Yajna: Vilamba Madida Rani)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ದ್ರೋಣನ ವಿರುದ್ಧವಾಗಿ ಆಭಿಚಾರಿಕಪ್ರಯೊಗವನ್ನು ಮಾಡಲು ದ್ರುಪದನು ಬಯಸಿದ್ದನಷ್ಟೆ. ಆದರೆ ಅದಕ್ಕೆ ಉಪಯಾಜನು ತನ್ನ ಸಹಾಯವನ್ನು ನಿರಾಕರಿಸಿದ ಬಳಿಕ, ಯಾಜನ ಬಳಿಗೆ ಬಂದು ಆತನನ್ನೊಪ್ಪಿಸಲು ದ್ರುಪದನು ದ್ರೋಣನ ಮಹಾಸಾಮರ್ಥ್ಯವನ್ನು ಹೀಗೆ ಚಿತ್ರಿಸುತ್ತಾನೆ:

 

"ದ್ರೋಣನ ಬಾಣಜಾಲಗಳೆಂದರೆ ಜೀವಿಗಳ ಪ್ರಾಣಗಳನ್ನೇ ಅಪಹರಿಸತಕ್ಕವು! ಆರು ಮೊಳಗಳಷ್ಟಿರುವ ಆತನ ಬಿಲ್ಲು ಮಹಾಧನುಸ್ಸೇ ಸರಿ. ಬ್ರಾಹ್ಮಣವೇಷದಲ್ಲಿದ್ದುಕೊಂಡು ಕ್ಷಾತ್ರವೇಗವನ್ನು ನಿಸ್ಸಂಶಯವಾಗಿಯೂ ಧ್ವಂಸಮಾಡುತ್ತಿರುವನು, ಆ ಮಹಾಧನುರ್ಧರ. ಕ್ಷತ್ರಿಯಸಂಹಾರಕ್ಕೆಂದೇ ವಿಹಿತನಾಗಿರುವ ಜಾಮದಗ್ನ್ಯ(ಎಂದರೆ ಪರಶುರಾಮ)ನು ಹೇಗೋ ಹಾಗೆ ಆತನಿರುವನು! ಆತನ ಅಸ್ತ್ರಬಲವು ಘೋರವಾದದ್ದು. ಈ ಭೂಮಿಯ ಮೇಲಿರುವವರಾರೂ ಅದನ್ನು ಸಹಿಸಲಾರರು.

ಬ್ರಾಹ್ಮತೇಜಸ್ಸನ್ನು ಆತ ಧರಿಸಿದ್ದಾನೆ; ಎಂದೇ ಆಹುತಿಯನ್ನು ಹಾಕಿರುವ ಅಗ್ನಿಯು ಹೇಗೋ ಹಾಗೆ ಜ್ವಲಿಸುವವ: ಯುದ್ಧದಲ್ಲಿ ಕ್ಷಾತ್ರಧರ್ಮವನ್ನು ಮುಂದಿಟ್ಟುಕೊಂಡು ಅಗ್ನಿಯಂತೆ ದಹಿಸಿಬಿಡುವವ.

 

ಬ್ರಾಹ್ಮತೇಜಸ್ಸು ಹಾಗು ಕ್ಷಾತ್ರತೇಜಸ್ಸು - ಇವುಗಳೆರಡರ ನಡುವೆ ಬ್ರಾಹ್ಮತೇಜಸ್ಸೇ ಹೆಚ್ಚಾದದ್ದು. ಆದರೆ ನಾನು ಕೇವಲ ಕ್ಷಾತ್ರಬಲವುಳ್ಳವ; ಎಂದೇ ಬಲದಲ್ಲಿ ದ್ರೋಣನಿಗಿಂತಲೂ ಕಡಿಮೆಯೇ. ಅದಕ್ಕಾಗಿಯೇ ಬ್ರಾಹ್ಮತೇಜಸ್ಸನ್ನು ಶರಣುಹೊಂದಿದ್ದೇನೆ: ಆ ವಿಷಯದಲ್ಲಿ ನೀನು ದ್ರೋಣನನ್ನೂ ಮೀರಿಸಿದವ, ಬ್ರಹ್ಮವಿದರಲ್ಲಿ ಅಗ್ರಗಣ್ಯ. ದ್ರೋಣನನ್ನು ಮುಗಿಸಿಬಿಡುವಂತಹ ಪುತ್ರ, ಹಾಗೂ ಯುದ್ಧದಲ್ಲಿ ಯಾರೂ ಸೋಲಿಸಲಾಗದಂತಹವನು - ಅಂತಹವನನ್ನು ನಾನು ಹೊಂದಬೇಕು. ಅದ್ದರಿಂದ ಅದಕ್ಕಾಗಿ ಯಾಗಕಾರ್ಯವನ್ನು ಮಾಡಿಕೊಡು, ಯಾಜನೇ. ನಿನಗೆ ಗೋವುಗಳ ಅರ್ಬುದವನ್ನೇ (ಹತ್ತುಕೋಟಿಯನ್ನೇ) ಕೊಡುವೆ!" – ಎಂದನು.


"ಹಾಗೆಯೇ ಆಗಲಿ" ಎಂದು ಹೇಳಿದನು, ಯಾಜ. ಯಾಗಕ್ಕಾಗಿ ಬೇಕಾಗುವ ಉಪಕರಣಗಳನ್ನು ಸಿದ್ಧಪಡಿಸಿಕೊಂಡನು. ಹಿರಿದಾದ ಕಾರ್ಯವಿದು - ಎಂದು ಲೆಕ್ಕಿಸಿ, ನಿಷ್ಕಾಮನಾದ ಉಪಯಾಜನನ್ನೂ ತೊಡಗಿಸಿಕೊಂಡನು; ದ್ರೋಣವಿನಾಶದ ಪ್ರತಿಜ್ಞೆಯನ್ನೂ ಮಾಡಿದನು.

 

ಮಹಾತಪಸ್ವಿಯಾದ ಉಪಯಾಜನಾದರೂ ದ್ರೋಣನಿಗೆ ಪುತ್ರಫಲಪ್ರಾಪ್ತಿಗಾಗಿ ವೈತಾನಕರ್ಮವನ್ನು (ಎಂದರೆ ಯಜ್ಞವಿಧಿಯನ್ನು) ಆತನಿಗೆ ತಿಳಿಸಿಕೊಟ್ಟು, ಹೀಗೆ ಹೇಳಿದನು: "ನೀನು ಎಂತಹ ಪುತ್ರನನ್ನು ಬಯಸುತ್ತಿರುವೆಯೋ ಅಂತಹ ಪುತ್ರನೇ ಜನಿಸುವನು; ಆತನು ಮಹಾವೀರ್ಯನೂ, ಮಹಾತೇಜಸ್ಕನೂ, ಮಹಾಬಲಶಾಲಿಯೂ ಆಗುವನು" ಎಂದನು. ದ್ರೋಣಸಂಹಾರಕಾರಕನನ್ನು ಸಂಕಲ್ಪಿಸಿದ ಆ ದ್ರುಪದರಾಜನು ಕರ್ಮಸಿದ್ಧಿಗಾಗಿ ಅವರು ಸೂಚಿಸಿದ್ದೆಲ್ಲವನ್ನೂ ಒದಗಿಸಿದನು.


ಹವನವು ಮುಗಿಯಿತು. ಕೊನೆಯಲ್ಲಿ ಯಾಜನು ದ್ರುಪದರಾಜನ ಪತ್ನಿಗೆ ಆಜ್ಞೆಯಿತ್ತನು: "ರಾಣಿ, ಬಾ ಇತ್ತ. ಒಬ್ಬ ಪುತ್ರನೂ ಒಬ್ಬಳು ಪುತ್ರಿಯೂ ನಿನ್ನತ್ತ ಬಂದಿರುವರೆಂದುಕೋ!" ಎಂದನು. ಆಗ ರಾಣಿಯು: "ಅಯ್ಯಾ ಬ್ರಾಹ್ಮಣನೇ ನನ್ನ ಬಾಯಿ ತಾಂಬೂಲ-ಲೇಪಿತವಾಗಿದೆ; ದಿವ್ಯಗಂಧಗಳನ್ನು ನನ್ನ ಮೈಗೆ ಪೂಸಿಕೊಂಡಿದ್ದೇನೆ, ಕೂಡ. ಎಂದೇ (ಮುಖವನ್ನೂ ತೊಳೆಯದೆ ಸ್ನಾನವನ್ನೂ ಮಾಡದೆ) ಪುತ್ರಾರ್ಥವಾಗಿ ಹವಿಷ್ಯವನ್ನು ಸ್ವೀಕರಿಸಲು ನಾನು ಯೋಗ್ಯಳಾಗಿಲ್ಲ. ಆದ್ದರಿಂದ, ಯಾಜನೇ, ನನಗೆ ಪ್ರಿಯವಾದ ಇದನ್ನು ನಾನು ಸ್ವೀಕರಿಸಲಿಕ್ಕಾಗಿ ನೀ ಸ್ವಲ್ಪ ತಾಳು! " ಎಂದಳು.

 

ಆಗ ಯಾಜನು ಸ್ವಲ್ಪ ಬಿರುಸಾಗಿಯೇ ಹೇಳಿದನು:" ಈ ಹವ್ಯವು ಎಂತಹುದೆಂದುಕೊಂಡಿದ್ದೀಯೆ?: ಇದನ್ನು ಸಿದ್ದಪಡಿಸಿರುವವನು ಯಾಜ!  ಅಭಿಮಂತ್ರಿಸಿರುವವನು ಉಪಯಾಜ! ಹಾಗಿರಲು ಇದೆಂತು ಅಪೇಕ್ಷಿತಫಲವನ್ನೀಯದು? ಆದ್ದರಿಂದ ಒಡನೆಯೇ ಬಂದು ಸ್ವೀಕರಿಸುವುದಾದರೆ ಸ್ವೀಕರಿಸು; ಇಲ್ಲವೇ ಬಿಡು!" ಎಂದುಬಿಟ್ಟನು!


ಸೂಚನೆ : 19/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.