Sunday, February 26, 2023

ಭಾ – ರತವಾದ ಶಾಸ್ತ್ರೀಯ ಸಂಗೀತ (Bha – Ratavada Sastriya Sangita)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)

ಭಾರತೀಯ ಶಾಸ್ತ್ರೀಯ ಸಂಗೀತವನ್ನು (ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್), ನಮ್ಮ ದೇಶದ ಸಂಸ್ಕೃತಿಯನ್ನನುಸರಿಸಿ, ನಿಯಮಗಳಿಂದೊಡಗೂಡಿರುವ ಪ್ರಾಚೀನವಾದ ಸಂಗೀತವೆಂದು ತಿಳಿದಿದ್ದೇವೆ. ದೀರ್ಘ ಕಾಲದಿಂದ ಪ್ರಚಾರದಲ್ಲಿದ್ದು, ಗೌರವಾನ್ವಿತವಾದದ್ದು ದಕ್ಷಿಣ ಭಾರತದ ಕರ್ಣಾಟಕ ಸಂಗೀತ ಪದ್ಧತಿ. ಒಂದೆಡೆ ಕಲಾನಿಪುಣರು ಸಾಧನೆಯಿಂದ ಕೀರ್ತಿಯ ಶಿಖರವನ್ನು ಮುಟ್ಟುತ್ತಿರುವ ಸನ್ನಿವೇಶಗಳಿರುವಂತೆಯೇ, ಜನರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಅನ್ನುವ ಅಭಿಪ್ರಾಯವೂ ಇಲ್ಲದಿಲ್ಲ. ಇಂದಿನ ಜೀವನ ನಿರ್ವಹಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಆರ್ಥಿಕಮಾನದಂಡದಿಂದ ಅಳೆದಾಗ, ಸಂಗೀತದ ಕಲಿಕೆಗೆ ಶ್ರಮ ವ್ಯರ್ಥವೇ ಸರಿ. ಏಕೆಂದರೆ ಅದರಿಂದ ಸಾಕಷ್ಟು ವರಮಾನವೇ ಬರುತ್ತಿಲ್ಲ. ಆದ್ದರಿಂದ ಹವ್ಯಾಸ ಮಾತ್ರಕ್ಕೆ ಸಂಗೀತಾಭ್ಯಾಸವನ್ನು ಸೀಮಿತಗೊಳಿಸಿಕೊಳ್ಳಬೇಕಷ್ಟೆ - ಮುಂತಾದ ಅಭಿಪ್ರಾಯಗಳು ಕೇಳಿಬರುತ್ತಿವೆ. 

ಸಪ್ತಸ್ವರ ಪದ್ಧತಿ, ಸಂಗೀತದ ಪರಂಪರೆ

ಭಾರತೀಯ ಶಾಸ್ತ್ರ ಕಾವ್ಯಗಳು, ಪರಮಾತ್ಮನನ್ನು ಸಂತೋಷ ಪಡಿಸುವುದು, ಅವನ ಸಾಕ್ಷಾತ್ಕಾರವನ್ನು ಪಡೆಯುವುದು, ಮತ್ತು ಅದಕ್ಕೆ ಸಾಧನವಾಗಿ ಸದ್ಭಕ್ತಿಯ ಪೋಷಣೆ-ಇವೇ  ಸಂಗೀತದ ಗುರಿ ಎನ್ನುತ್ತವೆ. ವಿಶ್ವಸಂಗೀತ ಚರಿತ್ರೆಯಲ್ಲಿ ಉಳಿದ ರಾಷ್ಟ್ರಗಳು ಶೈಶವಾವಸ್ಥೆಯಲ್ಲಿರುವಾಗಲೇ ನಮ್ಮ ದೇಶದಲ್ಲಿ ಸಪ್ತಸ್ವರ ಪದ್ಧತಿ ಬಳಕೆಗೆ ಬಂದು, ಉನ್ನತ ಮಟ್ಟದ ಸಂಗೀತ ಕಲೆ ಬೆಳೆದಿತ್ತು. ಪ್ರಾಚೀನ ಗ್ರಂಥವಾದ ನಾರದ ಪರಿವ್ರಾಜಕ ಉಪನಿಷತ್ತಿನಲ್ಲಿಯೇ ಸಪ್ತಸ್ವರಗಳ ಉಲ್ಲೇಖವಿದೆ. ಸಂಗೀತದಿಂದ ದೇವತೆಗಳಲ್ಲದೆ ವಿರಕ್ತಶಿಖಾಮಣಿಗಳಾದ ಮಹರ್ಷಿಗಳೂ ದೇವತಾರಾಧನವನ್ನು ಮಾಡುತ್ತಿದ್ದರೆಂದು ಇತಿಹಾಸ ಪುರಾಣಗಳಿಂದ ತಿಳಿಯುತ್ತದೆ. ಬ್ರಹ್ಮರ್ಷಿಗಳಾದ ತುಂಬುರು, ನಾರದರಿಂದ ಹಿಡಿದು, ಮತಂಗ, ಕಶ್ಯಪಾದಿ ಮಹರ್ಷಿಗಳು ಸದ್ಭಕ್ತಿಯಿಂದ ಹಾಡಿ, ಸಂಗೀತೋಪಾಸನೆಯನ್ನು ಮಾಡಿದವರು.

ಸಂಗೀತವು ಕೊಡುವ ಉತ್ತಮೋತ್ತಮ ಲಾಭದ ಬಗ್ಗೆ ಪಾಠಮಾಡುತ್ತಾ, ಋಷಿ ಮನೋವೇದಿಗಳಾದ, ನಾದಯೋಗಿಗಳಾದ, ಸಂಗೀತವನ್ನು ಇಂದಿಗೂ ಭಗವತ್ಸಂಬಂಧಿಯಾಗಿ ಬಳಸಿ ಬೆಳೆಸಬಹುದೆಂಬುದಕ್ಕೆ ನಿದರ್ಶನವಾಗಿ ಶ್ರೀರಂಗಮಹಾಗುರುಗಳು - "ಈ ಮಾತು ಓಬಿರಾಯನ ಕಾಲದ್ದು, ಈಗೇಕೆ ಅದೆಲ್ಲ? ಎಂದರೆ, ಸದ್ಯದಲ್ಲಿಯೇ ನೂರು ವರ್ಷ ಹಿಂದಿದ್ದ ತ್ಯಾಗರಾಜರು ಸಂಗೀತವನ್ನು ಭಗವಂತನ ಮಾರ್ಗಕ್ಕನುಗುಣವವಾಗಿ  ಬೆಳೆಸಿದರಪ್ಪ" ಎಂದು ಹೇಳಿದ್ದರು. ಅವರು ತಮ್ಮ ಚಿಕ್ಕಂದಿನಿಂದ ತ್ಯಾಗರಾಜರ ಕೃತಿಗಳನ್ನು ಹಾಡುತ್ತಿದ್ದರಲ್ಲದೆ, ಸಂಗೀತದ ಬಗ್ಗೆ ಸಮಗ್ರನೋಟವನ್ನು ಹೀಗೆ  ಕೊಟ್ಟಿದ್ದರು. 

ಒಂದು ಬೀಜವು ಅಂಕುರ, ಕಾಂಡ, ಏಲೆ, ಹೂವು, ಕಾಯಿ, ಹಣ್ಣಾಗಿ ಮತ್ತೆ ಬೀಜದಲ್ಲಿ ಬಂದು ನಿಂತರೆ, ಅದರ ಬೆಳವಣಿಗೆ  ಪರಿಪೂರ್ಣವೆನಿಸಿಕೊಳ್ಳುತ್ತದೆ. ಅಂತೆಯೇ, ಜಗನ್ಮಾತಾಪಿತೃಗಳಾದ ಲಕ್ಷ್ಮೀನಾರಾಯಣರಿಂದ, ಪಾರ್ವತೀಪರಮೇಶ್ವರರಿಂದ ಹುಟ್ಟಿತು ನಾದ; ಸಮಸ್ತ ಚರಾಚರ ಜಗತ್ತಿನ ಮೇಲೆ ಅದರ ಪರಿಣಾಮ ಬೀರಿ, ಆ ಪ್ರಣವನಾದದಿಂದ ಸಪ್ತಸ್ವರಗಳು, ಅದರಿಂದ ರಾಗಗಳು ವಿಸ್ತಾರವಾದವು. ರಾಗದಿಂದ ಭಗವಂತನಲ್ಲಿ ಅನುರಾಗವನ್ನು ಬೆಳೆಸಿ, ಭಗವಂತನನ್ನು ಸೇರಬೇಕೆಂಬುದು ಸೃಷ್ಟಿಯ ವಿಸ್ತಾರದ ಕ್ರಮದ ವಿಧಿ. ಇವೇ ಶಾಸ್ತ್ರಗಳೆನಿಸಿದವು.

 ಸಂಗೀತದ ಸುವರ್ಣಯುಗದ (ಕ್ರಿ.ಶ.16 - 19ನೇ ಶತಮಾನ) ಅವಧಿಯಲ್ಲಿ, ಭದ್ರ ಬುನಾದಿಯನ್ನು ಕಟ್ಟಿದವರು ಸಂಗೀತ ಪಿತಾಮಹರೆನಿಸಿದ ಪುರಂದರದಾಸರು. ಸಂಗೀತ ತ್ರಿಮೂರ್ತಿಗಳೆಂದು ಖ್ಯಾತಿ ಪಡೆದ ಶ್ಯಾಮಾ ಶಾಸ್ತ್ರಿಗಳು, ತ್ಯಾಗರಾಜರು ಹಾಗೂ ಮುತ್ತುಸ್ವಾಮಿ ದೀಕ್ಷಿತರಿಂದ ಭವ್ಯವಾದ ಮೆರುಗನ್ನು ಪಡೆಯಿತು. ಗುರು ಶಿಷ್ಯ ಪರಂಪರೆಯಲ್ಲಿ ಮುಂದುವರೆದು, ಇಂದು ನಮಗೆ ಪರಿಚಿತವಾಗಿರುವುದು ಈ ಸಂಗೀತವೇ. ನಾರದ, ಪ್ರಹ್ಲಾದರಿಂದ ಶಾರ್ಙ್ಗದೇವನವರೆಗೆ ಭಕ್ತಿಮಾರ್ಗವನ್ನಪ್ಪಿ, ಸಂಗೀತ ಹಾಡಿದ ಋಷಿಪರಂಪರೆಯನ್ನು ಹಲವಾರು ಕೃತಿಗಳಲ್ಲಿ ಸ್ತುತಿಸಿದ್ದಾರೆ ಸಂತ ತ್ಯಾಗರಾಜರು.

ಸಂಗೀತವಿದ್ಯೆ ಕೊಡುವ ಅತ್ಯುತ್ತಮ ವರಮಾನ

ಗಾಂಧರ್ವವೇದವೆನಿಸಿದ ಸಂಗೀತವಿದ್ಯೆಯ ಲೌಕಿಕವಾದ ಪ್ರಯೋಜನಗಳು ಏನೇ ಇದ್ದರೂ, ಜ್ಞಾನ ಮೂಲವನ್ನು ಮುಟ್ಟಿಸುವುದೇ ಅದರ ಪರಮಗುರಿ. ಸಂಗೀತಕ್ಕೆ ಸಾರರೂಪವಾದ ವಿಷಯವನ್ನು ಪರಿಪೂರ್ಣವಾಗಿ ತಮ್ಮ ಮನಸ್ಸಿಗೆ ತೆಗೆದುಕೊಂಡು, ಅಂತರಂಗದಲ್ಲಿ ಅನುಭವಿಸಿ, ಅದರ ಹರಿವನ್ನು ಸಂಗೀತದಲ್ಲಿ ಸಾರವಾಗಿಟ್ಟು ಕೃತಿಗಳನ್ನು ರಚಿಸಿದರು ಉತ್ತಮ ವಾಗ್ಗೇಯಕಾರರು. ಅವರನ್ನು ಗೌರವಿಸಿ, ಅವರ ಮತಿಯ ಆಳವನ್ನರಿತು, ನಮ್ಮ ಮನೋಭಾವನೆಗಳನ್ನು  ಸೋಂಕಿಸದೆ ಹಾಡಬೇಕೆಂಬುದು ವಿಸ್ತಾರ ಕ್ರಮದ ಧರ್ಮ. ಮಹಾಗುರುಗಳು ಹೇಳುತ್ತಿದ್ದರು, "ಮರ್ಮವನ್ನರಿತು ಹಾಡಿದ ರಾಗಗಳು ಅದರ ಗತಿ ಹಾಗೂ ಸ್ವರ ವಿನ್ಯಾಸದಿಂದ ಸಪ್ತ ಕೇಂದ್ರಗಳನ್ನೂ ಪ್ರಬೋಧಿಸುವವು. ಧರ್ಮಾರ್ಥಕಾಮಗಳೊಂದಿಗೆ ಮೋಕ್ಷವನ್ನು ಒದಗಿಸಿ, ಚತುರ್ವಿಧ ಪುರುಷಾರ್ಥಗಳನ್ನು ಕೊಡುವವು ರಾಗಗಳು. ವಿದೇಶದಲ್ಲಿಯೂ ಸಂಗೀತ(ಮ್ಯೂಸಿಕ್) ಉಂಟು, ಆದರೆ ಚತುರ್ವಿಧ ಪುರುಷಾರ್ಥಕ್ಕೆ ಅನುಗುಣವಾಗಿ ಹೊಂದಿಕೊಂಡಿರುವುದು ನಮ್ಮ ದೇಶದಲ್ಲಿ ಮಾತ್ರ" ಎಂದು.

ಸಂಗೀತ ಯಾವುದಕ್ಕಾದರೂ ಕಟ್ಟಬಹುದು. ಆದರೆ ಅದರ ಹಿರಿಮೆಯನ್ನು ಅರಿತು, ಲೋಕರಂಜನೆಗೆ ಮಾತ್ರವಲ್ಲದೆ, ಭವಬಂಧನ ದಾಟಿ, ಆತ್ಮರಂಜನೆಯೊಡನೆ, ಪರಮಾತ್ಮನನ್ನು ಒಲಿಸಿ, ಆ ಮನಸ್ಸಿನಿಂದ ಲೋಕದಲ್ಲಿ ಸಂಗೀತವನ್ನು ಇಡುವುದು ಮಹರ್ಷಿಗಳ ಪುರುಷಾರ್ಥಮಯವಾದ ಸಂಸ್ಕೃತಿಯ ಕೊಡುಗೆ. ಅಷ್ಟು ದೂರ ವ್ಯಾಪಿಸಿದೆ ನಮ್ಮ ಭಾ-ರತ(ಪರಮಾತ್ಮಜ್ಯೋತಿಯಲ್ಲಿ ಮುಳುಗಿದ) ಮಹರ್ಷಿಗಳ ಧ್ಯೇಯ. ಒಂದು ಏಣಿಯನ್ನು ಹತ್ತಿ–ಇಳಿಯಲು ಉಪಯೋಗಿಸುವಂತೆ, ಪ್ರಕೃತಿಯ ತತ್ತ್ವ ಸೋಪಾನವನ್ನು ಮೆಟ್ಟಿ, ಪರಮಾತ್ಮದರ್ಶನ ಪಡೆದು, ಮತ್ತೆ ಅದೇ ತತ್ತ್ವಸೋಪಾನವನ್ನು ಬಳಸಿ, ಇಳಿದು, ಲೋಕಕ್ಕೆ ಸಂಸ್ಕೃತಿಯಾಗಿ ತಂದರು. ಅದೇ ಸೋಪಾನವನ್ನು ನಮ್ಮಂತಹ ಪಾಮರರು ಆಶ್ರಯಿಸಿ ಉದ್ಧಾರವಾಗಲೆಂದು ವಿದ್ಯೆ/ಕಲೆಗಳನ್ನೂ ತಂದರು. ಪೂರ್ವಸುಕೃತದ ಫಲವಾಗಿಯೇ ಈ ವಿದ್ಯೆಗಳು ಒಲಿಯುತ್ತವೆ ಎಂಬುದು ಹಿರಿಯರ ಮಾತು. ಹವ್ಯಾಸವಾಗಿ ಶುಭಾರಂಭಮಾಡಿ, ಮುಂದೆ ಶ್ರವಣ/ಕೀರ್ತನ ಭಕ್ತಿಯಲ್ಲಿ ಆಸಕ್ತಿಯನ್ನು ದೃಢಗೊಳಿಸಿಕೊಂಡು, ಪರಮಾತ್ಮನ ಅನುಗ್ರಹ ಪಡೆಯುವ ಮನೋರಂಜಕವಾದ ಮಾರ್ಗವಾದ ಭಾ-ರತೀಯ ಶಾಸ್ತ್ರೀಯ ಸಂಗೀತ (ಗೀತ-ನೃತ್ಯ–ವಾದ್ಯಗಳ ಸಮೂಹ)ವನ್ನು ಆವಿಷ್ಕರಿಸಿದ  ಋಷಿಗಳನ್ನು ನಮಸ್ಕರಿಸೋಣ!

ಸೂಚನೆ : 25/2/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.