Thursday, February 16, 2023

ದೇವತೆಗಳಲ್ಲಿ ಯಾರು ಹೆಚ್ಚು? (Devategalalli Yaru Heccu?)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in



ಘಂಟಾಕರ್ಣನೆಂಬ ರಾಕ್ಷಸನಿದ್ದ. ಅಪ್ಪಟ ಶಿವಭಕ್ತನಾತ. ಆದರೆ 'ನಾರಾಯಣ' ಎಂಬ ಶಬ್ದವು ತನ್ನ ಕಿವಿಗೆ ಬೀಳಕೂಡದೆಂದು ಕಿವಿಗಳಿಗೆ ಘಂಟೆಗಳನ್ನು ಕಟ್ಟಿಕೊಂಡು ಅವನ್ನು ಅಲ್ಲಾಡಿಸುತ್ತಲೇ ಇದ್ದ. ಒಮ್ಮೆ ಈಶ್ವರನು ಪ್ರತ್ಯಕ್ಷನಾಗಿ, ವರವನ್ನು ಬೇಡೆಂದನು. ಘಂಟಾಕರ್ಣ, ತನಗೆ ಮೋಕ್ಷವನ್ನು ದಯಪಾಲಿಸಬೇಕೆಂದ. ಆಗ ಈಶ್ವರನು, 'ನಿನ್ನ ಭಕ್ತಿಯನ್ನು ಮೆಚ್ಚಿರುವೆ; ಆದರೆ, ನೀನು ವಿಷ್ಣುವನ್ನು ದ್ವೇಷಿಸುತ್ತಿರುವೆ. ಅವನ ಕ್ಷಮೆಯನ್ನು ಬೇಡಿಕೊಂಡು ಬಂದರೆ ನಿನಗೆ ಮೋಕ್ಷವನ್ನು ಕೊಡುವೆ; ಅಜ್ಞಾನಿಗಳು ವಿಷ್ಣುವಿಗೂ ನನಗೂ ಭೇದವನ್ನು ಕಲ್ಪಿಸುತ್ತಾರೆ; ಇದು ತಪ್ಪು' ಎಂದು ಹೇಳಿ ಮಾಯವಾದನು. ಒಡನೆಯೇ ಘಂಟಾಕರ್ಣನು ವಿಷ್ಣುವಿನಲ್ಲಿ ತನಗಿದ್ದ ವೈರವನ್ನು ಬಿಟ್ಟು, ಅವನನ್ನು ಕುರಿತು ತಪಸ್ಸನ್ನಾಚರಿಸಿದ. ವಿಷ್ಣುವು ಪ್ರತ್ಯಕ್ಷನಾದಾಗ, ಘಂಟಾಕರ್ಣ, 'ನಾನು ತಿಳಿಯದೆ, ತಮ್ಮನ್ನು ದ್ವೇಷಿಸಿದೆ. ಈಶ್ವರನು ತಿಳಿವಳಿಕೆಯನ್ನು ಕೊಟ್ಟನು. ನನ್ನ ತಪ್ಪಿಗಾಗಿ ತಮ್ಮಲ್ಲಿ ಕ್ಷಮೆಯನ್ನು ಬೇಡಿಕೊಳ್ಳುವೆ" ಎಂದನು. ವಿಷ್ಣುವು ಇವನ ಪ್ರಾರ್ಥನೆಗೆ ಓಗೊಟ್ಟು ಇವನ ತಪ್ಪನ್ನು ಕ್ಷಮಿಸಿದನು. ಘಂಟಾಕರ್ಣನಿಗೆ ಮೋಕ್ಷ ಪ್ರಾಪ್ತಿಯಾಯಿತು.


ನಮ್ಮ ಪುರಾಣಗಳಲ್ಲಿ ಯಾವುದೋ ಒಂದು ದೇವತೆಯ ಮಹಿಮೆಯನ್ನು ಹೇಳುತ್ತಿರುವಾಗ, ಮನಸ್ಸು ಆ ದೇವತೆಯಲ್ಲೇ ನೆಡಲಿ ಎಂಬ ಉದ್ದೇಶದಿಂದ ಆ ದೇವತೆಯನ್ನು ಹಾಡಿ ಹೊಗಳಿ, ಉಳಿದೆಲ್ಲ ದೇವತೆಗಳ ಮಹಿಮೆಯನ್ನು ಕೆಳಕ್ಕೆ ತಳ್ಳಿರುವುದುಂಟು. ಒಬ್ಬರೇ ವ್ಯಾಸರು ಒಂದೊಂದು ಪುರಾಣದಲ್ಲಿ ಒಬ್ಬೊಬ್ಬ ದೇವತೆಯ ಪಾರಮ್ಯವನ್ನು ಎತ್ತಿಹಿಡಿದಿದ್ದಾರೆ. ದೇವತೆಗಳಲ್ಲಿ ಭೇದವನ್ನೆಣಿಸಬಾರದು ಎಂಬ ನೀತಿಯನ್ನು ಸಾರುವ ಕಥೆಗಳೂ ಇವೆ. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಇದೊಂದು ಗೊಂದಲವಾಗುವುದು ಸಹಜ.


ಶ್ರೀರಂಗಮಹಾಗುರುಗಳು, ಶಿವ ದೊಡ್ಡವನೋ? ವಿಷ್ಣು ದೊಡ್ಡವನೋ? ಎಂಬ ಪ್ರಶ್ನೆ ಬಂದಾಗ, ಪರಬ್ರಹ್ಮವೇ ತ್ರಿಮೂರ್ತಿಗಳಾಗಿ ಕೆಲಸ ನಿರ್ವಹಿಸುವ ಬಗ್ಗೆ ಹೀಗೊಂದು ಸುಂದರ ಉಪಮಾನವನ್ನು ಕೊಟ್ಟಿದ್ದಾರೆ. "ಒಬ್ಬನೇ ನಾಟಕದಲ್ಲಿ ಮೂರು ಪಾರ್ಟು ಹಾಕುತ್ತಾನೆ. ಬೇರೆ ಬೇರೆ ಪಾರ್ಟುಗಳಲ್ಲಿ ಬೇರೆ ಬೇರೆ ಬಣ್ಣಗಳು, ಬೇರೆ ಬೇರೆ ವೇಷ-ಉಡಿಗೆ ತೊಡಿಗೆಗಳು, ಕಾರ್ಯಗಳೂ ಬೇರೆ ಬೇರೆ".

ಆಹಾರ ಸೇವನೆ ಮಾಡುವಾಗ, ಒಬ್ಬೊಬ್ಬರಿಗೆ ಒಂದೊಂದು ರಸ ರುಚಿಸುತ್ತದೆ. ಒಂದು ರಸವನ್ನು ಹೆಚ್ಚು ಇಷ್ಟಪಟ್ಟು ತಿಂದರೂ  ಉಳಿದ ರಸಗಳನ್ನು ಕಡೆಗಣಿಸುವಂತಿಲ್ಲ. ಒಳ್ಳೆಯ ಸ್ವಾಸ್ಥ್ಯಕ್ಕೆ ಷಡ್ರಸಗಳೂ ಬೇಕು ಎನ್ನುತ್ತಾರೆ ಆಹಾರಶಾಸ್ತ್ರಜ್ಞರು.


ರಾಷ್ಟ್ರಕವಿ ಕಾಳಿದಾಸನು "ಒಂದೇ ಪರಬ್ರಹ್ತವಸ್ತುವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಂಬ ಮೂರು ಪ್ರಕಾರದ ಭೇದಗಳನ್ನು ತಾಳಿತು. ಒಂದೊಂದು ಸನ್ನಿವೇಶದಲ್ಲಿ ಒಬ್ಬೊಬ್ಬರು ಮುಖ್ಯ; ಮತ್ತೊಬ್ಬರು ಅಮುಖ್ಯರಾಗುತ್ತಾರೆ" ಎನ್ನುತ್ತಾನೆ.(ಏಕೈವ ಮೂರ್ತಿಃ ಬಿಭಿದೇ  ತ್ರಿಧಾ ಸಾ, ಸಾಮಾನ್ಯಮೇಷಾಂ ಪ್ರಥಮಾವರತ್ವಂ") ಯುದ್ಧ ಮಾಡಬೇಕಾದಾಗ, ವೈದ್ಯ ಅಮುಖ್ಯ. ಯೋಧನೇ ಮುಖ್ಯ. ಆದರೆ, ರೋಗ ಚಿಕಿತ್ಸೆ ಮಾಡಬೇಕಾದಾಗ, ವೈದ್ಯನೇ ಮುಖ್ಯನಾಗುತ್ತಾನಷ್ಟೆ.


ನಮ್ಮ ಕುಲಾಚಾರದಂತೆಯೋ, ನಮ್ಮ ಅಭಿರುಚಿಯಂತೆಯೋ, ಯಾವ ದೇವತೆಯನ್ನಾದರೂ ವಿಶೇಷವಾಗಿ ಪೂಜಿಸೋಣ. ಆದರೆ, ಒಂದೇ ಮಹಾಶಕ್ತಿಯೇ ವಿವಿಧ ಕಾರ್ಯಗಳಿಗಾಗಿ, ವಿವಿಧ ರೂಪಗಳನ್ನು ಧರಿಸಿದೆ ಎಂಬುದನ್ನು ಮರೆಯದಿರೋಣ. 

ಸೂಚನೆ: 16/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.