Sunday, February 5, 2023

ವ್ಯಾಸ ವೀಕ್ಷಿತ - 24 ಬಕಾಸುರನ ಸಂಹಾರ (Vyaasa Vikshita - 24 Bakasurana Sanhara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಆಮೇಲೆ ಬಗೆಬಗೆಯಾದ ವೃಕ್ಷಗಳನ್ನು ಮತ್ತೆ ಎತ್ತಿಕೊಂಡು, ಬಲಿಷ್ಠ-ರಾಕ್ಷಸ ಭೀಮನತ್ತ ಅವನ್ನೆಸೆದ; ಭೀಮನೂ ಆತನತ್ತ ಅವನ್ನೇ ಎಸೆದ. ಹೀಗೆ ಕ್ಷತ್ರಿಯ ಮತ್ತು ರಾಕ್ಷಸ – ಇವರೀರ್ವರ ನಡುವಿನ ಘೋರ ವೃಕ್ಷಯುದ್ಧದಿಂದಾಗಿ, ಹಲವು ಮರಗಳೇ ನಾಶವಾದವು. ತನ್ನ ಹೆಸರನ್ನು ಘೋಷಿಸಿಕೊಳ್ಳುತ್ತಾ ಪಾಂಡವನತ್ತ ಧಾವಿಸಿ ಬಂದವನೇ, ಮಹಾಬಲಶಾಲಿಯಾದ ಭೀಮನನ್ನು ತನ್ನ ತೋಳುಗಳಿಂದ ಬಾಚಿಹಿಡಿದುಕೊಂಡ, ಬಕ. (ಗರ್ವಿಗಳಿಗೆ ತಮ್ಮ ಹೆಸರ ಮೇಲೂ ಸಾಕಷ್ಟೇ (ದುರ್-) ಅಭಿಮಾನವಿರುವುದಲ್ಲವೇ? "ನನ್ನನ್ನಾರೆಂದೆಣಿಸಿರುವೆ?, ನನ್ನ ಹೆಸರು ಕೇಳಿ ನಡುಗದವರಾರು?" – ಎಂಬ ಧೋರಣೆ.)

 

ಮಹಾಭುಜನಾದ ಭೀಮಸೇನನೂ ಸಹ, ದಾಳಿಯಿಡುತ್ತಿದ್ದ ಮಹಾಬಾಹುವನ್ನು ಬಲಪ್ರಯೋಗದಿಂದ ಎಳೆದಾಡಿದ. ಭೀಮನಿಂದ ಈಡಾಡಿಸಲ್ಪಟ್ಟ ರಾಕ್ಷಸನು ತಾನೂ ಪಾಂಡವನನ್ನಷ್ಟಿಷ್ಟು ಎಳೆದಾಡಿದ. ಬರಬರುತ್ತಾ ನರಭಕ್ಷಕನಿಗೆ ತೀವ್ರವಾದ ಆಯಾಸವೇ ಆಯಿತು. (ನ್ಯಾಯವಾಗಿ, ದಿನಕ್ಕಿಂತಲೂ ಹೆಚ್ಚಾಗಿ, ಅದೂ ಹೊಟ್ಟೆ ಬಿರಿಯುವಂತೆಯೇ, ತಿಂದವನಿಗೆ ಕುಸ್ತಿಯು ಬೇಗ ಆಯಾಸಪಡಿಸುವುದು; ಹಸಿದವನೇ ಹೆಚ್ಚು ಚುರುಕಾಗಿರಬಲ್ಲ. ಹೀಗಾಗಿ ಭೀಮನೇ ಮೊದಲು ದಣಿಯಬೇಕಿತ್ತು; ಬಕನದ್ದೇ ಮೇಲುಗೈಯಾಗಬೇಕಿತ್ತು! ಆದರೆ ಭೀಮನು ಮಹಾಸತ್ತ್ವಸಂಪನ್ನನಲ್ಲವೇ?)  

 

ಅವರಿಬ್ಬರ ಮಹಾವೇಗದಿಂದಾಗಿ ಧರಣಿಯೇ ಕಂಪಿಸಿತು. ಮಹಾಕಾಯವಾದ ಮರಗಳನ್ನೇ ಅವರಿಬ್ಬರೂ ಚೂರ್ಣಗೊಳಿಸಿದರು. ಕ್ಷೀಣನಾಗುತ್ತಿದ್ದ ನರಭಕ್ಷಕನನ್ನು ದಿಟ್ಟಿಸಿನೋಡುತ್ತಾ ನೆಲದ ಮೇಲಾತನನ್ನು ಕೆಡವಿ ತನ್ನೆರಡು ಮಂಡಿಗಳಿಂದ ಆತನನ್ನು ಜಜ್ಜಿ ಭೀಮ ಆತನಿಗಿಕ್ಕಿದ. ಆಮೇಲೆ ಆತನ ಬೆನ್ನಿನ ಮೇಲೆ ಬಲಪ್ರಯೋಗದಿಂದ ಮಂಡಿಯೂರಿ, ತನ್ನ ಬಲಗೈಯಿಂದ ಆತನ ಕತ್ತನ್ನೂ, ಎಡಗೈಯಿಂದ ಆತನ ಸೊಂಟಕ್ಕೆ ಕಟ್ಟಿದ್ದ ಬಟ್ಟೆಯನ್ನೂ ಹಿಡಿದೆಳೆದ, ಭೀಮ. ಮತ್ತು ಭೀಕರಧ್ವನಿಗೈಯುತ್ತಿದ್ದ ರಕ್ಕಸನ ಮೈಯನ್ನು ಎರಡು ಸುತ್ತಾಗಿ ತಿರುಚಿದ. ಭೀಮನಿಂದ ಭಗ್ನನಾದ ಘೋರರಾಕ್ಷಸ; ಆತನ ಬಾಯಿಯಿಂದ ರಕ್ತವು ಪ್ರವಹಿಸಿತು. ಪಕ್ಕೆಲಬುಗಳು ಭಗ್ನಗೊಂಡಿದ್ದ ಪರ್ವತರಾಜಸದೃಶನಾದ ಬಕರಾಕ್ಷಸ, ಘೋರಧ್ವನಿಗೈಯುತ್ತಾ ಅಂತೂ ಸತ್ತುಹೋದ.


ರಕ್ಕಸನ ಶಬ್ದದಿಂದ ಬೆಚ್ಚಿ ಬೆದರಿ, ಸುತ್ತಲಿನ ರಾಕ್ಷಸಜನರೆಲ್ಲ ತಮ ಪರಿಚಾರಕರೊಂದಿಗೆ ಮನೆಯಿಂದಾಚೆಗೆ ಧಾವಿಸಿಬಂದರು. ಅಸುರನ ಅವಸ್ಥೆಗೆ ಹೆದರಿ ಪ್ರಜ್ಞಾಶೂನ್ಯರಾಗಿ ಕಂಗೆಟ್ಟರು. ಯೋಧಶ್ರೇಷ್ಠನೂ ಬಲಶಾಲಿಯೂ ಆದ ಭೀಮನು ಅವರನ್ನು ಶಮನಗೊಳಿಸುತ್ತಾ, "ಈ ನಿಯಮವನ್ನು ನೀವಿನ್ನು ಮುಂದೆ ಪಾಲಿಸತಕ್ಕದ್ದು" - ಎಂದು ಅವರಿಗೆ ಸೂಚಿಸಿದ: "ಮತ್ತೆಂದೂ ನೀವು ಮನುಷ್ಯರನ್ನು ಹಿಂಸಿಸುವಂತಿಲ್ಲ; ಹಿಂಸೆ ಮಾಡುವವರಿಗೆ ಇದೇ ರೀತಿಯ ವಧೆಯು ಶೀಘ್ರವಾಗಿಯೇ ಉಂಟಾಗುವುದು!" ಎಂದ. ಆವನ ಮಾತುಗಳನ್ನು ಕೇಳಿ, ಕಂಗಾಲಾಗಿದ್ದ ರಾಕ್ಷಸರು "ಹಾಗೆಯೇ ಆಗಲಿ" ಎಂದು ಹೇಳುತ್ತಾ, ಮರುಮಾತಿಲ್ಲದೆ ಆ ನಿಯಮಕ್ಕೊಪ್ಪಿದರು. ಅಲ್ಲಿಂದ ಮುಂದಕ್ಕೆ, ನಗರದಲ್ಲಿ ವಾಸವಿದ್ದ ನರರಿಗೆ ರಾಕ್ಷಸರು ಸೌಮ್ಯವಾಗಿಯೇ ತೋರಿಬಂದರು. (ಮೈಬಲದಿಂದ ಸೊಕ್ಕಿದ ಸಮಾಜಕಂಟಕರಿಗೆ ಮೈಬಲದಿಂದಲೇ ಇಕ್ಕಿ ಪಾಠ ಹೇಳಬೇಕು; ಅವರಿಗೆ ವಿವೇಕದ ಮಾತುಗಳು, ಅನುನಯದ ನುಡಿಗಳು ಮನಸ್ಸಿಗೆ ನಾಟವು. ಇಂದಿನ ಹಿಂದೂಸಮಾಜಕ್ಕೆ ಅನ್ವಯವಾಗುವ ಹಲವಂಶಗಳಿಲ್ಲಿವೆಯಲ್ಲವೇ? ವಜ್ರಂ ವಜ್ರೇಣ ಭಿದ್ಯತೇ – ಎನ್ನುತ್ತಾರಲ್ಲವೇ?)

ಸೂಚನೆ : 05/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.