Thursday, February 9, 2023

ಭಾರತೀಯರ ಜನ್ಮರಹಸ್ಯ (Bharatiyara Janmarahasya)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಭಾರತೀಯರಲ್ಲಿ ಹೀಗೇ ಬದುಕಬೇಕು, ಹೀಗೆ ಬದುಕಬಾರದು ಎಂಬುದಕ್ಕೆ ನಿರ್ದಿಷ್ಟವಾದ ವಿಧಿವಿಧಾನವಿದೆ. ಒಬ್ಬನು ಮನುಷ್ಯಜನ್ಮವನ್ನು ಪಡೆದ ಅಂತಾದರೆ ಅವನ ಜೀವಿಕೆಯಲ್ಲಿ ಒಂದಷ್ಟು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿದರೆ ಮಾತ್ರವೇ ಆ ಮಾನವಜೀವನ ಸಾರ್ಥಕ. ಹಾಗಿಲ್ಲದಿದ್ದರೆ ಅದು ವ್ಯರ್ಥವೇ ಸರಿ. ಅದೇ ಕಾರಣಕ್ಕೆ ಮಾನವಜನ್ಮವನ್ನು ಶ್ರೇಷ್ಠ ಎಂದೂ ಗುರುತಿಸಲಾಗಿದೆ. ಹಾಗಾದರೆ ಮಾನವನ ಶ್ರೇಷ್ಠತೆಗೆ ಕಾರಣವಾದ ಆ ಅಮೂಲ್ಯವಾದ ವಿಷಯ ಯಾವುದೆಂದರೆ, ಅದನ್ನೇ 'ಮೋಕ್ಷ' ಎಂದು ಕರೆಯುತ್ತಾರೆ. 


ಧರ್ಮ, ಅರ್ಥ, ಕಾಮ, ಮೋಕ್ಷ ಎಂಬಿವು ನಾಲ್ಕು ಪುರುಷಾರ್ಥಗಳು. ಪ್ರತಿಯೊಬ್ಬನೂ ಪಡೆಯಲೇಬೇಕಾದುವು. ಅದನ್ನು ಪಡೆಯದಿದ್ದರೆ ಪಡೆಯುವ ತನಕ ಅದಕ್ಕೆ ಪ್ರಯತ್ನಪಡಲೇಬೇಕು. ಒಂದಂತು ನಿಶ್ಚಿತವಾದುದು- 'ಮುಕ್ತಿಯನ್ನು ಮಾನವನು ಮಾತ್ರವೇ ಪಡೆಯುತ್ತಾನೆ. ಮುಕ್ತಿಯನ್ನು ಪಡೆಯಬೇಕಾದರೆ ಮಾನವಜನ್ಮದಲ್ಲೇ ಸಾಧ್ಯ' ಎಂಬುದು. ಹಾಗಾಗಿ ಈ ಮಾನವನ ಜೀವಿತದ ಅವಧಿಯಲ್ಲಿ ಮೋಕ್ಷವು ಲಭಿಸದೇ ಇದ್ದರೆ ಮತ್ತೆ ಮಾನವಜನ್ಮ ಬರುವವರೆಗೂ ಆತ ಜನ್ಮವನ್ನು ಪಡೆಯಲೇಬೇಕು. ಇದನ್ನೇ 'ಪುನರ್ಜನ್ಮ' ಎಂದು ಕರೆಯಲಾಗಿದೆ. ಈ ಪುನರ್ಜನ್ಮದ ಆಧಾರದ ಮೇಲೆಯೇ ನಮ್ಮ ಭಾರತೀಯರ ಎಲ್ಲಾ ಸಂಪ್ರದಾಯ, ಆಚರಣೆ, ವೇದ, ಶಾಸ್ತ್ರ ಎಲ್ಲವೂ ನಿಂತಿವೆ. ಇದೊಂದನ್ನು ನಂಬದಿದ್ದರೆ ಇದಾವುದಕ್ಕೂ ಅರ್ಥವೇ ಇರುವುದಿಲ್ಲ. ಹಾಗಾದರೆ ಈ ಜನ್ಮದ ರಹಸ್ಯವೇನು? ಜನ್ಮವು ಹೇಗೆ ಸಿದ್ಧವಾಗುತ್ತದೆ. ಮತ್ತೆ ಜನ್ಮವನ್ನು ಪಡೆಯದಿರಲು ಮಾಡಬೇಕಾದ ಕಾರ್ಯಗಳೇನು ? ಎಂಬುದನ್ನು ಚಿಂತಿಸಲೇಬೇಕು. 


ಹುಟ್ಟಿದವನು ಸಾಯಲೇಬೇಕು, ಈ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಸತ್ತವನು ಮತ್ತೆ ಹುಟ್ಟುತ್ತಾನೆ ಎಂಬುದಕ್ಕೆ ಯಾವ ಭರವಸೆ ಇದೆ? ಎಂಬುದರಲ್ಲಿ ಮಾತ್ರವೇ ಎಲ್ಲರಿಗೂ ಗೊಂದಲ, ತಿಕ್ಕಾಟ, ಕಲಹ ಎಲ್ಲವೂ. ಹಾಗಾದರೆ ಸತ್ತ ಮೇಲೆ ಮತ್ತೆ ಹುಟ್ಟೆಂಬುದು ಹೇಗೆ ಸತ್ಯ? ಇತ್ಯಾದಿ ವಿಷಯಗಳ ಮೇಲೆ ಚಿಂತನೆ ಇವತ್ತಿನಿಂದಲ್ಲ, ಅನೇಕ ಶತಶತಮಾನಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಶಯ-ಗೊಂದಲಗಳೂ ಬರುತ್ತಲೇ ಇವೆ. ಅದಕ್ಕೆ ಹೀಗೂ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. 


ಮೋಕ್ಷಕ್ಕೋಸ್ಕರ ಬದುಕಬೇಕು. ಹಾಗಾದರೆ ಮೋಕ್ಷ ಎಂದರೇನು? ಅಪುನರಾವೃತ್ತಿ- ಮತ್ತೆ ಹುಟ್ಟಿಲ್ಲದಿರುವುದು. ಮತ್ತೆ ಹುಟ್ಟದಿರಲು ಏನು ಮಾಡಬೇಕು? ಎಂದರೆ ಅದಕ್ಕೊಂದು ಉಪಾಯವನ್ನು ಕಾಳಿದಾಸನು ತನ್ನ ರಘುವಂಶಕಾವ್ಯದಲ್ಲಿ ಹೀಗೆ ಹೇಳುತ್ತಾನೆ. "ತ್ವಯ್ಯಾವೇಶಿತಚಿತ್ತಾನಾಂ ತ್ವತ್ಸಮರ್ಪಿತಕರ್ಮಣಾಮ್।  ಗತಿಸ್ತ್ವಂ ವೀತರಾಗಾಣಾಮ್ ಅಭೂಯಃಸಂನಿವೃತ್ತಯೇ॥" - ಅಂದರೆ ಮನಸ್ಸು ಪರಬ್ರಹ್ಮನಲ್ಲಿ ಲಯವಾಗುವಿಕೆ, ಎಲ್ಲಾ ಕರ್ಮಗಳೂ ಆ ಪರಬ್ರಹ್ಮನಲ್ಲೇ ಸಮರ್ಪಿತವಾಗುವಿಕೆ, ಯಾವ ಬಗೆಯ ಅಂಟೂ ಇಲ್ಲದಿರುವಿಕೆ ಇವು ಪುನರ್ಜನ್ಮವಿಲ್ಲದಂತೆ ಮಾಡುವ ಸಾಧನಗಳು ಎಂದು.  ಶ್ರೀರಂಗಮಹಾಗುರುಗಳು ಭಗವದ್ಗೀತೆಯ ಒಂದು ಶ್ಲೋಕವನ್ನು ಹೀಗೆ ಹೇಳುತ್ತಿದ್ದರು " ಯತ್ಕರೋಮಿ ಯದಶ್ನಾಮಿ ಯಜ್ಜುಹೋಮಿ ದದಾಮಿ ಯತ್ । ಯತ್ತಪಸ್ಯಾಮಿ ಹೇ ಕೃಷ್ಣ ! ತತ್ ಕರೋಮಿ ತ್ವದರ್ಪಣಮ್" - ಏನೆಲ್ಲಾ ಮಾಡುತ್ತೇನೋ, ಯಾವುದೆನ್ನೆಲ್ಲಾ ಆಹಾರವಾಗಿ ಸ್ವೀಕರಿಸುತ್ತೇನೋ, ಯಾವುದನ್ನೆಲ್ಲಾ ಕೊಡುತ್ತೇನೋ, ಯಾವ ತಪಸ್ಸಿದೆಯೋ, ಅವೆಲ್ಲವನ್ನೂ ಹೇ! ಕೃಷ್ಣ ! ನಿನಗೇ ಸಮರ್ಪಿಸುತ್ತೇನೆ ಎಂದು. "ಸರ್ವಂ ಶ್ರೀಕೃಷ್ಣಾರ್ಪಣಮಸ್ತು" ಎಂದಾಗ ಕರ್ಮಲೇಶ ಉಳಿಯುವುದೇ ಇಲ್ಲ. ಆಗ ಜನ್ಮವೇ ಇರುವುದಿಲ್ಲ. ಕರ್ಮಲೇಶವೇ ಜನ್ಮಕ್ಕೆ ಕಾರಣವಲ್ಲವೇ? ನಮಗೆ ಬ್ಯಾಂಕಿನವರು ಮತ್ತೆ ಮತ್ತೆ ಫೋನ್ ಮಾಡುತ್ತಾರೆ ಎಂದರೆ ಲೋನ್ ತೆಗೆದುಕೊಂಡಾಗ ತಾನೆ? ಲೋನ್ ಇಲ್ಲದಿದ್ದರೆ ಅವರು ಯಾಕೆ ಕರೆಯುತ್ತಾರೆ? ರಾಗವೇ ಪುನರ್ಜನ್ಮಕ್ಕೆ ಕಾರಣ. ಅದು ಇದ್ದಾಗ ಮಾತ್ರ ನಾನೇ ಎಲ್ಲವನ್ನೂ ಮಾಡಿದ್ದು ಎಂಬ ಮಮತೆ ಬರುತ್ತದೆ. ವಿರಾಗವಿದ್ದಾಗ ನಿರ್ಮಮತೆ ಉಂಟಾಗುತ್ತದೆ.  


ಈ ಜನ್ಮಕ್ಕೆ ಕಾರಣ, ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಶೇಷವೇ ಎಂಬುದಕ್ಕೆ ಯೋಗಶಾಸ್ತ್ರದಲ್ಲಿ ಒಂದು ಪ್ರಮಾಣವನ್ನು ಕೊಡುತ್ತಾರೆ ಅಭಿನಿವೇಶ ಎಂದು. ಎಲ್ಲರಿಗೂ ಅಭಿನಿವೇಶ - ಅನುಭವಿಸಿದ ಮರಣಧರ್ಮ- ಸಾವು - ಮೃತ್ಯು ಎಂದರೆ ಭಯ ತಾನೆ? ಏನಾದಾರೂ ಪರವಾಗಿಲ್ಲ; ಸಾವು ಬರಬಾರದು. ಸಾಧ್ಯವಾದಷ್ಟೂ ದಿನ ಬದುಕಬೇಕು ಎಂದೆ ನಾವು ಬಯಸುತ್ತೇವೆ. ತಿಳಿಯದೇ ಇರುವ ವಿಷಯಕ್ಕೆ ಭಯ ಬರುವುದುಂಟೇ? ಸಣ್ಣ ಮಗುವಿಗೆ ಬೆಂಕಿ ಸುಡುತ್ತದೆ ಎಂಬ ಅರಿವಿರುವುದಿಲ್ಲ. ಹಾಗಾಗಿ ಅದು ಬೆಂಕಿಯನ್ನು ಮುಟ್ಟಲು ಹಿಂಜರಿಯುವುದಿಲ್ಲ. ಅದೇ ತಿಳಿದವರಿದ್ದರೆ ಅದರಿಂದ ದೂರವೇ ಇರುತ್ತಾರೆ. ಅದಕ್ಕೆ ಬೇಕಾದ ಜಾಗ್ರತೆಯನ್ನೂ ಮಾಡಿಕೊಳ್ಳುತ್ತಾರೆ. ಇಷ್ಟೇ ಸಾಕು 'ಪುನರ್ಜನ್ಮ ಇದೆ' ಎನ್ನುವುದಕ್ಕೆ ಸಾಕ್ಷಿ. "ಮೃತ್ಯು ಬೇಡಪ್ಪ!" ಅಂತ ನಾವು ಮತ್ತೆ ಮತ್ತೆ ಬೇಡಿಕೊಳ್ಳುತ್ತೇವೆ. ಆದ್ದರಿಂದ ಮತ್ತೆ ಮೃತ್ಯು ಬಾರದ ಸ್ಥಿತಿಯೇ ಅಪುನರ್ಜನ್ಮ. ಈ ಪುನರ್ಜನ್ಮವೇ ಎಲ್ಲದಕ್ಕೂ ಕಾರಣ.  ಈ ಪುನರ್ಜನ್ಮ ಎಂಬ ವಿಷಯವಿಲ್ಲದಿದ್ದರೆ ಯಾವ ಆಚರಣೆಗೂ ಬೆಲೆಯೇ ಇಲ್ಲ, ಅದರ ಮಾತೇ ಇಲ್ಲ. ಮತ್ತೆ ಜನ್ಮ ಬರುತ್ತದೆ ಅಂದರೆ ಭಯವಿರುತ್ತದೆ. ತಪ್ಪು ಮಾಡುವುದಿಲ್ಲ. ಅಕರ್ಮವು ಮತ್ತೆ ಮರಣಾನುಭವವನ್ನು ಮತ್ತೆ ಮತ್ತೆ ಕೊಡುತ್ತದೆ. ಸುಕರ್ಮವು ಮರಣವೇ ಇಲ್ಲದಂತೆ ಮಾಡುತ್ತದೆ, ಜ಼ನ್ಮ ಮತ್ತು ಕರ್ಮ ಇವೇ ನಮ್ಮ ಸಂಸ್ಕೃತಿಯ ಮೂಲ. ಇವೇ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಸಾರ.


ಇದೇ ನಮ್ಮ ಸಂಸ್ಕೃತಿ. ಮತ್ತೆ ಹುಟ್ಟಿಬರದಂತೆ ಜೀವಿಸುವುದೇ ಮಾನವಜನ್ಮದ ಸಾರ್ಥಕತೆಯ ಗುಟ್ಟು. ಇದೇ ಮಾನವಜನ್ಮದ ರಹಸ್ಯ!.


ಸೂಚನೆ: 09/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.