Tuesday, February 14, 2023

ಅಷ್ಟಾಕ್ಷರೀ​ - 28 ಹತಾ ಚಾಜ್ಞಾನಿನಃ ಕ್ರಿಯಾ (Astakshara Darshana 28 Hata Cajnaninah Kriya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಹುಟ್ಟಿದ ಮೇಲೆ ಸಾಯುವ ತನಕವೂ ಯಾರೂ ಸುಮ್ಮನೆ ಕೂರರಷ್ಟೆ? ಹಾಗೆ ಹೇಗೆ ಹೇಳಲಾದೀತು, ಸುಮ್ಮನೆ ಕುಳಿತುಕೊಳ್ಳುವುದೇನು ಮಹಾಕಷ್ಟವೇ? - ಎಂದು ಯಾರಾದರೂ ಕೇಳಬಹುದು. ಇಲ್ಲಿ ಹೇಳಿದ 'ಸುಮ್ಮನೆ'ಯ ಅರ್ಥ ಸ್ವಲ್ಪ ವಿಭಿನ್ನವಾದುದು.

ಕೆಲವೊಮ್ಮೆ ಹಿರಿಯರು ಗದರಿಸುವುದುಂಟು. "ಏನಷ್ಟು ಹರಟೆ? ಸುಮ್ಮನಿರು" ಎಂದು. ಅಲ್ಲಿ ಸುಮ್ಮನಿರುವುದೆಂದರೆ ಮಾತನಾಡದಿರುವುದು - ಎಂದರ್ಥ. "ಶತ್ರುವು ಕೈಯಲ್ಲಿ ಆಯುಧವನ್ನು ತೆಗೆದುಕೊಂಡುಬರುತ್ತಿದ್ದರೂ ಆ ವೀರನು ಸುಮ್ಮನೆ ನಿಂತಿದ್ದನು" - ಎಂದು ಹೇಳಿದರೆ, ಅಲ್ಲಿ "ಸುಮ್ಮನೆ"ಯ ಅರ್ಥ ಬೇರೆ. "ತಾನೂ ಯಾವುದಾದರೂ ಆಯುಧವನ್ನು ಕೈಗೆ ತೆಗೆದುಕೊಳ್ಳಬಹುದಿತ್ತು; ಅದನ್ನೇನೂ ಮಾಡಲಿಲ್ಲ" ಎಂದು; ಅರ್ಥಾತ್ ನಿಶ್ಚೇಷ್ಟನಾಗಿದ್ದನು, ಕೈಕಾಲಾಡಿಸಲಿಲ್ಲ - ಎಂದರ್ಥ. ಹೀಗೆ "ಸುಮ್ಮನಿರು"ವುದೆಂದರೆ ಕೈಕಾಲುಗಳಾಡದಿರುವುದು, ನಾಲಿಗೆಯೂ ಆಡದಿರುವುದು - ಎಂಬುದು ಸ್ಪಷ್ಟವಾಗಿದೆ. ಆದರೆ ಇವೆರಡರ "ಆಟ"ದ ಹಿಂದೆ ಮತ್ತೊಂದರ ಆಡುವಿಕೆಯುಂಟು. ಅದು ಆಡಿದರೆ ಮಾತ್ರವೇ ಇವುಗಳ ಆಟ; ಅದು ಆಡದಿದ್ದಾಗ ಇವೂ ಸುಮ್ಮನಾಗುವುವು. ಯಾವುದದು? ಅದುವೇ ಮನಸ್ಸು. ನಮ್ಮ ಕೈಕಾಲುಗಳಾಡುವುದೆಲ್ಲ ನಮ್ಮ ಮನಸ್ಸು ಆಡಿಸಿದಂತೆಯೇ. ಮಾತೂ ಅಷ್ಟೇ.

ನಮ್ಮೆಲ್ಲ ಚಟುವಟಿಕೆಗಳು ನಡೆಯುವ ಸ್ತರಗಳನ್ನು ಮೂರಾಗಿ ಗಣಿಸಿರುವುದನ್ನು ನಮ್ಮ ಭಾರತೀಯ ಭಾಷೆಗಳಲ್ಲೆಲ್ಲ ಗುರುತಿಸಬಹುದು: "ಕಾಯಾ ವಾಚಾ ಮನಸಾ". ಈ ಪದಗುಚ್ಛವನ್ನು ಪುರಂದರದಾಸರೇ ಬಳಸಿರುವರಲ್ಲವೇ? ವಾಸ್ತವವಾಗಿ, "ಕಾಯೇನ ವಾಚಾ ಮನಸಾ" ಎಂಬುದೇ ಯುಕ್ತ-ಪ್ರಯೋಗ. "ಶರೀರದಿಂದ, ಮಾತಿನಿಂದ, ಮನಸ್ಸಿನಿಂದ" ಎಂದದರ ಅರ್ಥ. ('ವಾಚಾ'-'ಮನಸಾ'-ಗಳಲ್ಲಿಯ ಕೊನೆಯ 'ಆ'ಕಾರವನ್ನೇ 'ಕಾಯ'ಕ್ಕೂ ಅಂಟಿಸಿ, 'ಕಾಯಾ' ಎಂದು ಮಾಡಲಾಗಿದೆ: ಅನುಪ್ರಾಸಕ್ಕಾಗಿ ಉಂಟುಮಾಡಿದ 'ಆ'ಕಾರ).

ಅಂತೂ ನಮ್ಮೆಲ್ಲ(ರ) ಚಟುವಟಿಕೆಗಳೂ ನಡೆಯುವ ನೆಲೆಗಳು ಮೂರು: ಮನೋ-ವಾಕ್-ಕಾಯಗಳು. ಇವುಗಳಲ್ಲಿ ಮನಸ್ಸಿಗೇ ಮೊದಲ ಸ್ಥಾನ. ನಮ್ಮ ಮನಸ್ಸಾಡಿದಂತೆ ಮಾತು, ಮನಸ್ಸಾಡಿದಂತೆಯೇ ಅಂಗಚೇಷ್ಟೆಯೂ.

ವೇದಾಂತದ ಪರಿಭಾಷೆಯಲ್ಲಿ ಹೇಳುವುದಾದರೆ ಕೈಕಾಲುಗಳು ಕರ್ಮೇಂದ್ರಿಯಗಳು. ನಾಲಿಗೆಯೂ ಕರ್ಮೇಂದ್ರಿಯವೇ. (ರುಚಿ ನೋಡುವ ಕೆಲಸ ಮಾಡುವಾಗ ನಾಲಿಗೆಯು ಜ್ಞಾನೇಂದ್ರಿಯ). ಹೀಗಾಗಿ ಕರ್ಮೇಂದ್ರಿಯಗಳು ಕೆಲಸಮಾಡಬೇಕೆಂದರೆ ಮೊದಲು ಕೆಲಸಮಾಡಬೇಕಾದದ್ದು ಮನಸ್ಸು. ಒಂದರ್ಥದಲ್ಲಿ ಮನಸ್ಸಿನ ಪಾತ್ರವೂ ಕರ್ಮೇಂದ್ರಿಯದಂತೆಯೇ ಆಯಿತು. (ವಾಸ್ತವವಾಗಿ ನಾಲಿಗೆಯಂತೆಯೇ ಮನಸ್ಸೂ - ಎನ್ನಬಹುದು. ಅದೂ  ಜ್ಞಾನೇಂದ್ರಿಯವೂ ಕರ್ಮೇಂದ್ರಿಯವೂ ಆಗಿದೆ. ಅರಿಯುವಾಗಿನ ಮನಸ್ಸು ಜ್ಞಾನೇಂದ್ರಿಯ; ಕಾರ್ಯ-ಪ್ರವೃತ್ತವಾದಾಗ ಅದೂ ಕರ್ಮೇಂದ್ರಿಯವೇ.)

ಶರೀರದ ರಚನೆಯನ್ನೊಮ್ಮೆ ನೋಡಿಕೊಂಡರೂ ಇಲ್ಲಿಯ ಕೆಲವು ಸೂಕ್ಷ್ಮಗಳು ಗೋಚರವಾಗುವುವು. ಕರ್ಮೇಂದ್ರಿಯಗಳು ಕೆಳಗಿವೆ, ಜ್ಞಾನೇಂದ್ರಿಯಗಳು ಮೇಲಿವೆ: ಕೆಲಸ ಮಾಡುವ ಕೈಕಾಲುಗಳು ಕೆಳಗಿವೆ, ಅರಿವಿಗೆಡೆಯಾದ ಕಣ್ಣು ಕಿವಿಗಳು ಮೇಲಿವೆ; ಮಲಮೂತ್ರವಿಸರ್ಜನೆಯ ಕೆಲಸ ಮಾಡುವ ಇಂದ್ರಿಯಗಳು ಕೆಳಗಿವೆ; ಮೂಗು-ನಾಲಿಗೆಗಳು ಮೇಲಿವೆ. (ಚರ್ಮವಂತೂ ಎಲ್ಲೆಡೆಯಿದೆ.) ನಾಲಿಗೆಯದು ಒಂದರ್ಥದಲ್ಲಿ ಸಂಧಿಸ್ಥಾನ - ಅದು ಎರಡೂ ಆದ್ದರಿಂದ. ಕರ್ಮೇಂದ್ರಿಯಗಳು ಕೆಲಸ ಮಾಡುವುದೆಲ್ಲ ಮನಸ್ಸಿನ ನೇತೃತ್ವದಲ್ಲಿ; ಕರ್ಮೇಂದ್ರಿಯವಾದ ಮನಸ್ಸೂ ಕೆಲಸಮಾಡುವುದು ಜ್ಞಾನೇಂದ್ರಿಯವಾದ ಮನಸ್ಸಿನ ನೇತೃತ್ವದಲ್ಲೇ: ಜ್ಞಾನವೇ ಕ್ರಿಯಾಮೂಲ.

ಯಾರ ಅರಿವು ಉನ್ನತಮಟ್ಟದ್ದೋ ಅವರ 'ಆಟ'ವೂ ಉನ್ನತಮಟ್ಟದ್ದೇ ಆಗಿರುತ್ತದೆ. ದೇಶಕ್ಕಾಗಿ ಜೀವಿಸಬೇಕು, ದೇವನಿಗಾಗಿ (ಎಂದರೆ ಭಗವತ್-ಪ್ರೀತಿಗಾಗಿ) ಜೀವಿಸಬೇಕು - ಎಂಬ ಆದರ್ಶಗಳು ಯಾರಿಗೆ ಮನದಟ್ಟಾಗಿರುವುವೋ ಅವರ ನಡೆಯ ತೆರನೇ ಬೇರೆ; ಅನ್ಯರ ನಡವಳಿಕೆಯ ಬಗೆಯೇ ಬೇರೆ.

ಮನುಷ್ಯನ ಮನುಷ್ಯತ್ವವಿರುವುದೆಲ್ಲಿ? ಪ್ರಾಣಿಗಳಿಗಿಂತಲೂ ವಿಶಿಷ್ಟವಾಗಿ ಜೀವಿಸುವಲ್ಲಿ. ಖಾನಾ-ಪೀನಾ-ಸೋನಾ - ಇವೇ ಪ್ರಾಣಿಜೀವನದ ಹೆಗ್ಗುರುತು. ಇಷ್ಟಕ್ಕೆ ಹೆಚ್ಚಿನ ಅರಿವೇನು ಅವಶ್ಯವಿಲ್ಲ. ಪ್ರಾಣಿಗಳಿಗೆ ಹೆಚ್ಚಿನ ಅರಿವಿಗೆ ಆಸ್ಪದವೇ ಇಲ್ಲ; ಆಸ್ಪದವಿದ್ದೂ ಅರಿಯದವನ ಜೀವನ ಪ್ರಾಣಿಜೀವನವೇ ಸರಿ.

ಚಟುವಟಿಕೆಯಿಂದ ಬದುಕಬೇಕು, ಹೌದು. ಆದರೆ ಮೊದಲು ಬೇಕಾದದ್ದು ಜೀವನದ ಗುರಿಯ ಅರಿವು; ತತ್ಸಾಧನೆಗಾಗಿ ಮಾಡಬೇಕಾದ/ಮಾಡಬಾರದ ಕ್ರಿಯೆಗಳ ಅರಿವು. ಅಜ್ಞಾನಿಗಳು ಸದಾ ಚಟುವಟಿಕೆಯಿಂದಿದ್ದರೂ ಅದೇನೂ  ಉತ್ತಮ-ಫಲ-ಪ್ರದವೆನ್ನುವಂತಿಲ್ಲ.

ಜೀವನದ ಮಹಾಲಕ್ಷ್ಯವೇನು, ಹಾಗೂ ಅದಕ್ಕನುಗುಣವಾದ ಸುಜೀವನ-ಕ್ರಮವೇನು? – ಎಂಬ ಮುಖ್ಯಾಂಶಗಳ ಅರಿವಿಲ್ಲದ ಅಜ್ಞಾನಿಯ ನಾನಾಕ್ರಿಯೆಗಳು ಬಹುತೇಕ ವ್ಯರ್ಥಶ್ರಮ, ಅಥವಾ ಹಾಳು - ಎಂಬ ಅಭಿಪ್ರಾಯದ ಈ ಸುಭಾಷಿತದ ಸಾರವನ್ನು ಶ್ರೀರಂಗಮಹಾಗುರುಗಳು ಪಲಬಗೆಗಳಲ್ಲಿ ಪ್ರತಿಪಾದಿಸುತ್ತಿದ್ದರು.


ಸೂಚನೆ: 12/02/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.