Thursday, September 8, 2022

ಶಿಷ್ಟರ ಉಳಿವು ದುಷ್ಟರ ಅಳಿವು(Shishtara Ulivu Dushtara Alivu)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)




ಕೃತಯುಗದ ಇಕ್ಷ್ವಾಕುವಂಶದ ಮಾಂಧಾತ ದೊರೆಯ ಪುತ್ರನಾದ ಮುಚುಕುಂದ ಮಹಾರಾಜ, ದೇವಾಸುರ ಸಂಗ್ರಾಮದಲ್ಲಿ  ಅಸುರರ ವಿರುದ್ಧ ನಾಯಕನಾಗಿ ಹೋರಾಡಿದ್ದ.  ಅಸುರರನ್ನು ಹಿಮ್ಮೆಟ್ಟಿಸಿ, ಕಾರ್ತಿಕೇಯನು ದೇವತೆಗಳ ಸೇನಾನಾಯಕನಾಗಿ ಬರುವವರೆಗೂ,  ದೇವತೆಗಳ ರಕ್ಷಣೆ ಮಾಡಿದ್ದ. ಬಳಲಿದ್ದ ಆತನಿಗೆ, ಇಂದ್ರನು ವರವೊಂದನ್ನು ನೀಡಿದ್ದ. ಆ ವರವೇನೆಂದರೆ ಮುಚುಕುಂದನು ತನಗಿಷ್ಟ ಬಂದಕಾಲದವರೆಗೂ ಸುಖನಿದ್ರೆಯನ್ನು ಅನುಭವಿಸಬಹುದು. ಆತನಿಗೆ ಯಾರಾದರೂ ನಿದ್ರಾಭಂಗವನ್ನುಂಟುಮಾಡಿದಲ್ಲಿ ಅವರು ಮುಚುಕುಂದನ ಪ್ರಥಮ ದೃಷ್ಟಿಯಿಂದ ಭಸ್ಮರಾಗುವರು. ಈ ವರವನ್ನು ಪಡೆದ ನಂತರ ಮುಚುಕುಂದನು ಭೂಲೋಕಕ್ಕೆ ಹಿಂದಿರುಗಿ ಗಾಢಾರಣ್ಯದ ಗುಹೆಯೊಂದರಲ್ಲಿ ನಿದ್ರಾಪರವಶನಾದನು.


ದ್ವಾಪರಯುಗದಲ್ಲಿ ಕೃಷ್ಣಾವತಾರವಾಗಿತ್ತು. ಕೃಷ್ಣನು ಮಥುರೆಯಲ್ಲಿದ್ದಾಗ ಕಾಲಯವನನೆಂಬ ಅಸುರನು ಮಥುರೆಗೆ ಮುತ್ತಿಗೆ ಹಾಕಿ, ಕೃಷ್ಣನ ಮೇಲೆ ಯುದ್ದ ಮಾಡಲು ಪ್ರಯತ್ನಿಸಿದಾಗ , ಲೀಲಾನಾಟಕಸೂತ್ರಧಾರನಾದ ಕೃಷ್ಣನು ಕಾಲಯವನನ ಭೀತಿಯೋ ಎಂಬಂತೆ ಓಡಿದನು. ಕಾಲಯವನನು ಕೃಷ್ಣನನ್ನು ಅಟ್ಟಿಸಿಕೊಂಡು ಹಿಂಬಾಲಿಸುತ್ತಿದ್ದನು. ಕೃಷ್ಣನು ಓಡುತ್ತಾ ಮುಚುಕುಂದನು ಮಲಗಿರುವ ಗುಹೆಯನ್ನು ಪ್ರವೇಶಿಸಿ ಕತ್ತಲಿನಲ್ಲಿ ಅವಿತುಕೊಂಡನು. ಹಿಂಬಾಲಿಸುತ್ತಿದ್ದ  ಕಾಲಯವನನೂ ಗುಹೆಯೊಳಗೆ ಪ್ರವೇಶಿಸಿ ಮಲಗಿದ್ದ ಮುಚುಕುಂದನನ್ನು ನೋಡಿ, ಅವನೇ  ಕೃಷ್ಣನೆಂದು ಭಾವಿಸಿ,  ಆತನನ್ನು ಒದ್ದನು. ಮುಚುಕುಂದನಿಗೆ ಎಚ್ಚರವಾಗಿ, ಕಾಲಯವನನನ್ನು ನೋಡಿದಾಗ, ಇಂದ್ರನ ವರಪ್ರಭಾವದಿಂದ  ಕಾಲಯವನನು ಸುಟ್ಟು ಬೂದಿಯಾದನು. 


ಮುಚುಕುಂದನು ಸುತ್ತಲೂ ವೀಕ್ಷಿಸಲು, ತೇಜೋಮಯನೂ, ಪೀತಾಂಬರಧಾರಿಯೂ ಆದ ಕೃಷ್ಣನನ್ನು ಕಂಡನು. ಕೃತಯುಗದಲ್ಲಿ ಭಗವಂತನ ಬಗ್ಗೆ ಋಷಿಗಳು ಹೇಳಿದ್ದು ಮುಚುಕುಂದನಿಗೆ ನೆನಪಾಗಿ,  ಕೃಷ್ಣನೇ ಸಾಕ್ಷಾತ್ ಭಗವಂತನೆಂದು ಅರಿತು ಶ್ರೀಕೃಷ್ಣನಲ್ಲಿ ಶರಣಾದನು. ಕೃಷ್ಣನು ಆತನನ್ನು ಸಂತೈಸಿ "ನೀನು ಮುಂದಿನ ಜನ್ಮದಲ್ಲಿ ಸತ್ಕುಲದಲ್ಲಿ ಜನಿಸಿ ಸಾಧನೆ ಮಾಡಿ ಮುಕ್ತಿಯನ್ನು ಪಡೆಯುವೆ" ಎಂದು ಆಶೀರ್ವದಿಸಿದನು. 


ಭಗವದ್ಗೀತೆಯಲ್ಲಿ ಬರುವ 'ದೈವಾಸುರಸಂಪದ್ವಿಭಾಗ'ವೆಂಬ ಅಧ್ಯಾಯವನ್ನು ಗಮನಿಸಿದಾಗ, ತಾತ್ತ್ವಿಕವಾಗಿ ನೋಡುವುದಾದರೆ, ದೇವಾಸುರರ ಸ್ವಭಾವದ ವ್ಯತ್ಯಾಸವೇ  ಸಂಗ್ರಾಮಕ್ಕೆ ಕಾರಣವೆನ್ನಲಾಗಿದೆ.  ಈ ಸಂಗ್ರಾಮ ನಿತ್ಯವೂ ಪ್ರತಿಯೊಬ್ಬರಲ್ಲಿಯೂ ನಡೆಯುವ ಯುದ್ಧವೇ ಸರಿ. ದೈವೀಸಂಪತ್ತುಳ್ಳವರೇ ಕಡೆಗೆ ವಿಜಯಶಾಲಿಗಳಾಗುತ್ತಾರೆ. ದೈವ ಅವರನ್ನು ಬೆಂಬಲಿಸುತ್ತದೆ. ಕಥಾಬಾಗದಲ್ಲಿ , ಕಾಲಯವನನನ್ನು ಕಂಡು ಮುರಾರಿ ಪರಾರಿಯಾಗುವುದು ಏತಕ್ಕೆ? ನಂತರ, ಕಾಲಯವನನನ್ನು ಮುಚುಕುಂದನನ ಬಳಿ ಕರೆದೊಯ್ಯುವುದೇತಕ್ಕೆ? ಕೃಷ್ಣನೇ ಅವನನ್ನು ಸಂಹರಿಸಬಹುದಾಗಿತ್ತಲ್ಲವೇ? ಎಂಬ ಪ್ರಶ್ನೆಗಳು ಬರಬಹುದು. ಭಾಗವತದಲ್ಲಿಯೂ ಪರೀಕ್ಷಿತ್ ಮಹಾರಾಜನೂ ಶುಕಮಹರ್ಷಿಗಳಲ್ಲಿ ಇಂತಹ ಪ್ರಶ್ನೆಗಳನ್ನಿಡುತ್ತಾನೆ. ಭಗವಂತನ ಕಾರ್ಯಗಳ ರಹಸ್ಯ  ಅವನಿಗೆ ಮಾತ್ರ ಗೊತ್ತಾಗುತ್ತದೆ. ಪ್ರಹ್ಲಾದನಿಗಾಗಿ ನರಸಿಂಹದೇವರು ಹಿರಣ್ಯಕಶಿಪುವಿನ ಬಳಿ ಬರಲಿಲ್ಲವೇ? ಇಲ್ಲಿ ಶ್ರೀರಂಗಸದ್ಗುರುಗಳ ವಾಣೀ ಸ್ಮರಣಾರ್ಹ. " ದೈವೀಸಂಪತ್ತುಳ್ಳ ವ್ಯಕ್ತಿಯ ಸಂಬಂಧದಿಂದ ಆಸುರೀಸಂಪತ್ತುಳ್ಳವನ ಬಳಿ ದೈವ ಬರಬೇಕಾಗುತ್ತದೆ. " ಪರಮಾತ್ಮನು ಶಿಷ್ಟರಕ್ಷಣ, ದುಷ್ಟಶಿಕ್ಷಣ" ಒಟ್ಟಿಗೆ ಮಾಡುವ ಕಾರ್ಯವಿಧಾನವಿದಾಗಿದೆ.  ಭಗವಂತ ಸತ್ಕಾರ್ಯ ಮಾಡಿದ್ದ ಮುಚುಕುಂದನನ್ನು ಎಚ್ಚರಿಸಿ ಸನ್ಮಾರ್ಗ ತೋರುವುದು ಮತ್ತು ಅಸುರನ ಸಂಹಾರ ಎರಡೂ ಕಾರ್ಯ ಮಾಡಿದ್ದಾನೆ. "ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ" ಎಂಬ ಕಾರ್ಯ ಯೋಜಿಸುವ ಮಾಹಾಚತುರನಾದ ಭಗವಂತನನ್ನು ನೆನೆಯೋಣ.


ಸೂಚನೆ: 8/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.