Showing posts with label author_tvramamurthy. Show all posts
Showing posts with label author_tvramamurthy. Show all posts

Saturday, March 30, 2024

ಅಷ್ಟಪಾಶ ಮೀರಿದ ಪ್ರಹ್ಲಾದ (Astapasha Mirida Prahlada)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)



ಭಕ್ತ ಪ್ರಹ್ಲಾದನ ಬಗ್ಗೆ ನಮ್ಮ ಭಾರತ ದೇಶದಲ್ಲಿ ಕೇಳದವರು ಇರಲಾರರು. ಭಾಗವತ ಮಹಾಪುರಾಣದ ಏಳನೇ ಸ್ಕಂದದಲ್ಲಿ ವಿಸ್ತಾರವಾಗಿ ಕಥಾ ಪ್ರಸಂಗ  ಉಲ್ಲೇಖವಾಗಿದೆ. ಪ್ರಹ್ಲಾದನು ಶ್ರೇಷ್ಟ ಭಕ್ತನೆಂದು ಆಚಾರ್ಯ ಶಂಕರರು ತಮ್ಮ  ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೃಷ್ಟಿಯ ಶ್ರೇಷ್ಠತೆಯಲ್ಲಿ ಭಗವದಂಶವಿದೆಯಂದು ಭಗವಾನ್ ಕೃಷ್ಣನು ಭಗವದ್ಗೀತೆಯ ವಿಭೂತಿಯೋಗದಲ್ಲಿ ಸಾರಿ, ಅಸುರರಲ್ಲಿ  ತಾನೇ ಪ್ರಹ್ಲಾದನೆಂದಿದ್ದಾನೆ.

ದ್ವೇಷ, ನಾಚಿಕೆ, ಭಯ, ಶಂಕೆ, ಜುಗುಪ್ಸೆ, ಕುಲ, ಜಾತಿ, ಶೀಲ ಎಂಬ ಅಷ್ಟಪಾಶಗಳು ಆಸುರೀ ಶಕ್ತಿಗಳಾಗಿದ್ದು ಅವು ಮಾನವರಿಗೆ ಪ್ರಾಪಂಚಿಕ ಬಂಧನವನ್ನುಂಟುಮಾಡುತ್ತದೆಯೆಂದು ಶಾಸ್ತ್ರವು ತಿಳಿಸುತ್ತದೆ. ಇದರಿಂದಾಗಿ ಹುಟ್ಟು-ಸಾವಿನ ಚಕ್ರದಲ್ಲಿ ಮನುಜನು ಸಿಲುಕಿಕೊಂಡು, ಪಾಪ-ಪುಣ್ಯದ ಫಲ, ಸಂಕಷ್ಟಗಳನ್ನು ಅನುಭವಿಸುತ್ತಾ, ಜೀವನದ ಮೂಲವನ್ನೇ ಮರೆಯುತ್ತಾನೆ. ಗೋವಿಂದನನ್ನು ಭಜಿಸುವುದರಿಂದ ಮತ್ತು ಗುರುಚರಣದ ನಿರ್ಭರ ಭಕ್ತಿಯಿಂದ ಈ ಸಂಸಾರದ ಪಾಶದ ಕೊಂಡಿಯಿಂದ ತಪ್ಪಿಸಿಕೊಂಡು ಮುಕ್ತರಾಗಿ ಎಂದು ಆಚಾರ್ಯ ಶಂಕರರು ಆದೇಶಿಸುತ್ತಾರೆ.

ಅಷ್ಟಪಾಶಗಳ ಆಸುರೀ ಸಂಪತ್ತಿರುವ ರಾಕ್ಷಸಸಮೂಹದ ಮಧ್ಯದಲ್ಲಿ ದೈವೀಸಂಪತ್ತಿನ ಪ್ರಹ್ಲಾದನು ತನ್ನ ಬಾಲ್ಯ ಜೀವನವನ್ನು ಕಳೆಯುತ್ತಾನೆ.   ತಂದೆಯಾದ ಹಿರಣ್ಯಕಶಿಪುವಿನಿಂದ ದ್ವೇಷ,  ಜೀವಕ್ಕೇ ತೊಂದರೆಯಾಗುವ ಭಯಾನಕ ಸನ್ನಿವೇಶಗಳು, ಅಸಹನೆ, ಅಪಶಬ್ದಗಳು ಎದುರಿಸಬೇಕಾಗುತ್ತದೆ. ಆದರೂ  ಅವನ ಒಲವು ದೈವದ ಕಡೆಗೇ ಇರುತ್ತದೆ. "ಗುರು-ಶಿಷ್ಯ-ಭಗವಂತ ಇವರುಗಳ ಯೋಗವಾದರೆ, ಗುರುವಿನ ಹಿಂದಿರುವ ದೈವೀಶಕ್ತಿಯ ಮಹಿಮೆಯ ಅರಿವಾಗುತ್ತದೆ" ಎಂಬರ್ಥದಲ್ಲಿ ಬರುವ ಶ್ರೀರಂಗಮಹಾಗುರುಗಳ ಮನಮುಟ್ಟುವ ಮಾತು ಸ್ಮರಣೀಯ.  ಪ್ರಹ್ಲಾದ-ಗುರುನಾರದರ-ಶ್ರೀಹರಿಯಕೃಪೆಯ ಯೋಗವನ್ನು ಭಾಗವತ ಪುರಾಣದ ಕಥೆಯಲ್ಲಿ ಗಮನಿಸಬಹುದು. ಈ ಯೋಗದಿಂದ ತರಳ ಪ್ರಹ್ಲಾದ ಅಷ್ಟಪಾಶಗಳನ್ನು ಮೀರಿದವನಾಗಿದ್ದ. ಯೋಗದ ಪರಿಭಾಷೆಯಲ್ಲಿ ಹೇಳುವದಾದರೆ, ಆಜ್ಞಾ ಚಕ್ರ ದಾಟಿದವರಿಗೆ ಅಷ್ಟಪಾಶಗಳು ಏನೂ ಮಾಡಲಾರವು. ಆದ್ದರಿಂದ ಅವನಿಗೆ ಹಿರಣ್ಯಕಶಿಪು ಕೊಟ್ಟ ಉಪದ್ರವಗಳು ಏನೂ ಮಾಡಲಿಲ್ಲ. ಕಾಲವು ಕೂಡಿಬಂದಾಗ ಸ್ವಯಂ ಭಗವಂತನೇ ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆ ಎಂಬಂತೆ ತಾನೇ ಪ್ರಕಟಗೊಂಡು ಪ್ರಹ್ಲಾದನನ್ನು ಕಾಪಾಡಿದ ಎಂದು  ಭಾಗವತ ಪುರಾಣ ತಿಳಿಸುತ್ತದೆ.

 ಇದೆಲ್ಲವೂ ಕೃತಯುಗದಲ್ಲಿ ನಡೆದ ಕಥೆ, ಇದರ ಪ್ರಸಕ್ತತೆ ಇಂದಿಗೂ ಇದೆಯೇ ಎಂಬ ಪ್ರಶ್ನೆ ಸಹಜ.  ಪ್ರಸಕ್ತ ಕಾಲಮಾನದಲ್ಲಿ ಮಾನವರು ಅಷ್ಟಪಾಶಗಳ ಸಂಕಷ್ಟಗಳನ್ನು ಕಾಲಧರ್ಮಕ್ಕನುಗುಣವಾಗಿ ಭೌತಿಕ ಮತ್ತು ಮಾನಸಿಕ ಕ್ಷೇತ್ರಗಳಲ್ಲಿ ಎದುರಿಸಬೇಕಾಗುತ್ತದೆ. ದೈವದಾನವರ ಕಲಹ ಎಂದೆಂದಿಗೂ ನಡೆಯುತ್ತಿರುವ ಸಂಗತಿಯೆನ್ನುವುದನ್ನು ಗಮನಿಸಬಹುದು.  ಸಜ್ಜನರು  ಗುರುಕೃಪೆ  ಹಾಗೂ  ಪ್ರಹ್ಲಾದನು ಭೋದಿಸಿದ ಪರಮಾತ್ಮನ ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ  ಮತ್ತು ಆತ್ಮನಿವೇದನೆಯೆಂಬ ಸಾಧನೆಯಿಂದ, ಅಷ್ಟಪಾಶಗಳಿಂದ ಮುಕ್ತರಾಗಬಹುದು. ಆಗ ಯಾವ ಪಾಶಗಳಾಗಲೀ ಸಂಕಷ್ಟಗಳಾಗಲೀ ತಾವರೆ ಎಲೆಯಮೇಲಿನ ನೀರಿನಂತೆ ಅಂಟಲಾರದು. "ಭಕ್ತಾನುರಕ್ತ ಪರಿಪಾಲನ ಪಾರಿಜಾತ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ" ಎಂದು ಪ್ರಾರ್ಥಿಸಿ ಕೃತಾರ್ಥರಾಗೋಣ.

ಸೂಚನೆ: 30/3/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, March 20, 2023

ಲೋಕಹಿತಕ್ಕಾಗಿ ಮಹರ್ಷಿಗಳ ತ್ಯಾಗ (Lokahitakkagi Maharsigala Tyaga)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)



ದೇವತೆಗಳ ಶಕ್ತಿ ಹಾಗೂ ಗುಣಗಳು ಲೋಕಹಿತಕ್ಕೆ ಕಾರಣವಾದುದರಿಂದ,  ಭಗವಂತ, ದೇವತೆಗಳ ಪಕ್ಷಪಾತಿಯಾಗಿರುತ್ತಾನೆ; ದೇವತಾಮಾರ್ಗವನ್ನು ಅನುಸರಿಸಿದರೆ ಶ್ರದ್ಧಾಳುಗಳು ಸತ್ಯಸಾಕ್ಷಾತ್ಕಾರ ಹೊಂದಲು ಸಹಾಯವಾಗುತ್ತದೆ  ಎಂಬುದು  ಹಿರಿಯರ ಮಾತು. ಪುರಾಣಗಳಲ್ಲಿ, ದೇವಾಸುರ ಸಂಗ್ರಾಮಗಳಲ್ಲಿ ದೇವತೆಗಳ ಪರವಾಗಿ ನಿಂತ ಋಷಿಮುನಿಗಳು, ರಾಜಮಹಾರಾಜರು ತ್ಯಾಗಗಳನ್ನು ಮಾಡಿದ್ದಾರೆ.  ದಧೀಚಿಮಹರ್ಷಿಗಳು ಇಂತಹ ತ್ಯಾಗಿಗಳಲ್ಲಿ ಒಬ್ಬರು.  ಇವರ ಬಗ್ಗೆ ಪ್ರಸ್ತಾವನೆ ಋಗ್ವೇದದ ಕಾಲದಿಂದಲೂ ಬಂದಿದೆ. ವಿವಿಧ ಕಥಾರೂಪಗಳೂ  ಇವೆ. ಇವರು ದೇವತೆಗಳ ಸಹಾಯಕ್ಕಾಗಿ ತಮ್ಮ ದೇಹವನ್ನೇ ತ್ಯಾಗಮಾಡಿದಂತಹ ಮಹಾತ್ಮರು. ಲೋಕಹಿತಕ್ಕಾಗಿ ಸೇವೆ ಮಾಡಿದರೆ ಭಗವಂತನ ಸೇವೆಯನ್ನೇ ಮಾಡಿದಂತಾಗುತ್ತದೆ. ಯೋಗಿವರೇಣ್ಯರಾದ ಶ್ರೀರಂಗಸದ್ಗುರುಗಳ ವಾಣೀ ಇಲ್ಲಿ ಸ್ಮರಣೀಯ. "ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೆ ಅವನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹ ತೇಯ್ದುಬಿಡಬೇಕು".

 ದೇವೇಂದ್ರನು ಒಮ್ಮೆ ವೃತ್ರಾಸುರನೆಂಬ ರಾಕ್ಷಸನ ಕಾರಣದಿಂದ ದೇವಲೋಕದ ಪದವಿಯನ್ನು ಕಳೆದುಕೊಳ್ಳುತ್ತಾನೆ. ವೃತ್ರಾಸುರನಿಗೆ "ಅಲ್ಲಿಯವರೆಗಿದ್ದ ಯಾವ ಶಸ್ತ್ರಗಳಿಂದಲಾಗಲೀ, ಮರ ಅಥವಾ ಲೋಹಗಳಿಂದ  ಮಾಡಿದ  ಶಸ್ತ್ರಗಳಿಂದಾಗಲಿ ಸಂಹರಿಸಲು  ಅಸಾಧ್ಯ" ಎಂಬುದಾಗಿ ವರವಿರುತ್ತದೆ. ದಧೀಚಿ ಮಹರ್ಷಿಗಳ ಮೂಳೆಗಳಿಂದ ತಯಾರಾದ ಶಸ್ತ್ರದಿಂದ ಮಾತ್ರ ವೃತ್ರಾಸುರನನ್ನು ಕೊಲ್ಲಲು ಸಾಧ್ಯವೆಂದು ದೇವತೆಗಳಿಗೆ ಮಹಾವಿಷ್ಣುವಿನಿಂದ ತಿಳಿಯುತ್ತದೆ. ದೇವತೆಗಳು ದಧೀಚಿಗಳ ಬಳಿ ಬಂದು ವೃತ್ರನನ್ನು ಕೊಲ್ಲಲು ಸಹಾಯ ಬೇಡುತ್ತಾರೆ. ದಧೀಚಿಗಳು ಪ್ರಾರ್ಥನೆಗೆ ದಯೆ ತೋರಿ ಒಪ್ಪಿ, ತಾವು ಯೋಗಸಮಾಧಿಯಲ್ಲಿ ದೇಹತ್ಯಾಗ ಮಾಡುವುದಾಗಿಯೂ ನಂತರ ದೇವತೆಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಬಹುದೆಂದೂ ತಿಳಿಸುತ್ತಾರೆ.  ಇಂದ್ರನು ಎಲ್ಲ ನದಿಗಳ ಪವಿತ್ರ ತೀರ್ಥವನ್ನು ದಧೀಚಿಗಳ ಹಂಬಲದಂತೆ ಅಲ್ಲಿಯೇ ತರಿಸಲಾಗಿ ದಧೀಚಿಗಳು ತೃಪ್ತರಾಗಿ ಯೋಗಸಮಾಧಿಯಲ್ಲಿ ಮುಳುಗುತ್ತಾರೆ. ನಂತರ, ದೇವತೆಗಳು ದಧೀಚಿಗಳ ಬೆನ್ನುಮೂಳೆಯಿಂದ ವಿಶ್ವಕರ್ಮನ ನೆರವಿನಿಂದ ಪ್ರಖ್ಯಾತವಾದ ವಜ್ರಾಯುಧವನ್ನು ತಯಾರಿಸುತ್ತಾರೆ. ಮುಂದೆ ಇಂದ್ರನು ಆ ವಜ್ರಾಯುಧದಿಂದಲೇ ವೃತ್ರನನ್ನು ಕೊಂದು ಜಯಶಾಲಿಯಾಗುತ್ತಾನೆ. 

ಮೂಳೆಯ ಸಾಂದ್ರತೆಗಿಂತ ಕೆಲವು ಲೋಹಗಳಿಗೆ ಸಾಂದ್ರತೆ ಹೆಚ್ಚು. ಹಾಗಿದ್ದಲ್ಲಿ ದಧೀಚಿಗಳ ಮೂಳೆಯನ್ನು ಸೂಚಿಸಿದ್ದು ಏಕೆ ? ಇದನ್ನು ತಾತ್ತ್ವಿಕ ದೃಷ್ಟಿಯಿಂದಲೂ ಗಮನಿಸಬಹುದು. ಮಾನವನಿಗೆ ಬ್ರಹ್ಮ ಮಾರ್ಗ ತೆರೆಯಬೇಕಾದರೆ, ಕುಂಡಲಿನೀ ಶಕ್ತಿಯು ಅವನ ಬೆನ್ನುಹುರಿಯೊಳಗೆ  ಮೇಲ್ಮುಖವಾಗಿ  ಹರಿಯಬೇಕಾಗುತ್ತದೆ ಎಂದು ಯೋಗಶಾಸ್ತ್ರಗಳು ತಿಳಿಸುತ್ತವೆ. ನಮ್ಮ ಬೆನ್ನುಹುರಿಗೆ ಆಶ್ರಯವಾಗಿರುವ ಬೆನ್ನುಮೂಳೆಗೆ ಯೋಗಶಾಸ್ತ್ರದಲ್ಲಿ ವಜ್ರದಂಡ, ಮೇರುದಂಡ ಎಂದು ಕರೆಯುತ್ತಾರೆ.  ಕುಂಡಲಿನೀ ಶಕ್ತಿಯು ಊರ್ಧ್ವಮುಖವಾಗಿ ಸಂಚರಿಸುವ ಪ್ರಕ್ರಿಯೆಯನ್ನೇ ಅಸುರರ ಸಂಹಾರವು  ವಜ್ರದಂಡದಿಂದಲೇ ಆಗಿ ದೇವತೆಗಳ ವಿಜಯವಾಯಿತೆಂದು ಪುರಾಣವು ರೂಪಿಸುತ್ತದೆ.  ಹಾಗೆಯೇ ಪವಿತ್ರ ನದಿಗಳು ಅವರ ಬಳಿ ಅಷ್ಟು ಶೀಘ್ರವಾಗಿ ಬಂದದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.  ತ್ರಿಭುವನವ್ಯಾಪಿನಿಯಾದ ಜ್ಞಾನಗಂಗೆಯು  ಕಾಶೀಕ್ಷೇತ್ರವಾದ ನಮ್ಮ ಶರೀರದಲ್ಲಿಯೇ ಇದೆಯೆಂದು ತಿಳಿಸುತ್ತಾರೆ ಆಚಾರ್ಯ ಶಂಕರರು.  ನಾವೂ ದಧೀಚಿ  ಮಹರ್ಷಿಗಳಂತೆ ಅಂತರಂಗ ಮಾರ್ಗದಲ್ಲಿ ಸಾಗಿ,  ಭಗವತ್ಕೈಂಕರ್ಯ ಮಾಡುವ ಸದ್ಬುದ್ಧಿಯನ್ನು ದೈವ ಕರುಣಿಸಲಿ  ಎಂದು ಆಶಿಸೋಣ.

ಸೂಚನೆ: 20/03/2023 ರಂದು ಈ ಲೇಖನವು ವಿಜಯ ವಾಣಿ ಯಲ್ಲಿ ಪ್ರಕಟವಾಗಿದೆ.  

Thursday, September 8, 2022

ಶಿಷ್ಟರ ಉಳಿವು ದುಷ್ಟರ ಅಳಿವು(Shishtara Ulivu Dushtara Alivu)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)




ಕೃತಯುಗದ ಇಕ್ಷ್ವಾಕುವಂಶದ ಮಾಂಧಾತ ದೊರೆಯ ಪುತ್ರನಾದ ಮುಚುಕುಂದ ಮಹಾರಾಜ, ದೇವಾಸುರ ಸಂಗ್ರಾಮದಲ್ಲಿ  ಅಸುರರ ವಿರುದ್ಧ ನಾಯಕನಾಗಿ ಹೋರಾಡಿದ್ದ.  ಅಸುರರನ್ನು ಹಿಮ್ಮೆಟ್ಟಿಸಿ, ಕಾರ್ತಿಕೇಯನು ದೇವತೆಗಳ ಸೇನಾನಾಯಕನಾಗಿ ಬರುವವರೆಗೂ,  ದೇವತೆಗಳ ರಕ್ಷಣೆ ಮಾಡಿದ್ದ. ಬಳಲಿದ್ದ ಆತನಿಗೆ, ಇಂದ್ರನು ವರವೊಂದನ್ನು ನೀಡಿದ್ದ. ಆ ವರವೇನೆಂದರೆ ಮುಚುಕುಂದನು ತನಗಿಷ್ಟ ಬಂದಕಾಲದವರೆಗೂ ಸುಖನಿದ್ರೆಯನ್ನು ಅನುಭವಿಸಬಹುದು. ಆತನಿಗೆ ಯಾರಾದರೂ ನಿದ್ರಾಭಂಗವನ್ನುಂಟುಮಾಡಿದಲ್ಲಿ ಅವರು ಮುಚುಕುಂದನ ಪ್ರಥಮ ದೃಷ್ಟಿಯಿಂದ ಭಸ್ಮರಾಗುವರು. ಈ ವರವನ್ನು ಪಡೆದ ನಂತರ ಮುಚುಕುಂದನು ಭೂಲೋಕಕ್ಕೆ ಹಿಂದಿರುಗಿ ಗಾಢಾರಣ್ಯದ ಗುಹೆಯೊಂದರಲ್ಲಿ ನಿದ್ರಾಪರವಶನಾದನು.


ದ್ವಾಪರಯುಗದಲ್ಲಿ ಕೃಷ್ಣಾವತಾರವಾಗಿತ್ತು. ಕೃಷ್ಣನು ಮಥುರೆಯಲ್ಲಿದ್ದಾಗ ಕಾಲಯವನನೆಂಬ ಅಸುರನು ಮಥುರೆಗೆ ಮುತ್ತಿಗೆ ಹಾಕಿ, ಕೃಷ್ಣನ ಮೇಲೆ ಯುದ್ದ ಮಾಡಲು ಪ್ರಯತ್ನಿಸಿದಾಗ , ಲೀಲಾನಾಟಕಸೂತ್ರಧಾರನಾದ ಕೃಷ್ಣನು ಕಾಲಯವನನ ಭೀತಿಯೋ ಎಂಬಂತೆ ಓಡಿದನು. ಕಾಲಯವನನು ಕೃಷ್ಣನನ್ನು ಅಟ್ಟಿಸಿಕೊಂಡು ಹಿಂಬಾಲಿಸುತ್ತಿದ್ದನು. ಕೃಷ್ಣನು ಓಡುತ್ತಾ ಮುಚುಕುಂದನು ಮಲಗಿರುವ ಗುಹೆಯನ್ನು ಪ್ರವೇಶಿಸಿ ಕತ್ತಲಿನಲ್ಲಿ ಅವಿತುಕೊಂಡನು. ಹಿಂಬಾಲಿಸುತ್ತಿದ್ದ  ಕಾಲಯವನನೂ ಗುಹೆಯೊಳಗೆ ಪ್ರವೇಶಿಸಿ ಮಲಗಿದ್ದ ಮುಚುಕುಂದನನ್ನು ನೋಡಿ, ಅವನೇ  ಕೃಷ್ಣನೆಂದು ಭಾವಿಸಿ,  ಆತನನ್ನು ಒದ್ದನು. ಮುಚುಕುಂದನಿಗೆ ಎಚ್ಚರವಾಗಿ, ಕಾಲಯವನನನ್ನು ನೋಡಿದಾಗ, ಇಂದ್ರನ ವರಪ್ರಭಾವದಿಂದ  ಕಾಲಯವನನು ಸುಟ್ಟು ಬೂದಿಯಾದನು. 


ಮುಚುಕುಂದನು ಸುತ್ತಲೂ ವೀಕ್ಷಿಸಲು, ತೇಜೋಮಯನೂ, ಪೀತಾಂಬರಧಾರಿಯೂ ಆದ ಕೃಷ್ಣನನ್ನು ಕಂಡನು. ಕೃತಯುಗದಲ್ಲಿ ಭಗವಂತನ ಬಗ್ಗೆ ಋಷಿಗಳು ಹೇಳಿದ್ದು ಮುಚುಕುಂದನಿಗೆ ನೆನಪಾಗಿ,  ಕೃಷ್ಣನೇ ಸಾಕ್ಷಾತ್ ಭಗವಂತನೆಂದು ಅರಿತು ಶ್ರೀಕೃಷ್ಣನಲ್ಲಿ ಶರಣಾದನು. ಕೃಷ್ಣನು ಆತನನ್ನು ಸಂತೈಸಿ "ನೀನು ಮುಂದಿನ ಜನ್ಮದಲ್ಲಿ ಸತ್ಕುಲದಲ್ಲಿ ಜನಿಸಿ ಸಾಧನೆ ಮಾಡಿ ಮುಕ್ತಿಯನ್ನು ಪಡೆಯುವೆ" ಎಂದು ಆಶೀರ್ವದಿಸಿದನು. 


ಭಗವದ್ಗೀತೆಯಲ್ಲಿ ಬರುವ 'ದೈವಾಸುರಸಂಪದ್ವಿಭಾಗ'ವೆಂಬ ಅಧ್ಯಾಯವನ್ನು ಗಮನಿಸಿದಾಗ, ತಾತ್ತ್ವಿಕವಾಗಿ ನೋಡುವುದಾದರೆ, ದೇವಾಸುರರ ಸ್ವಭಾವದ ವ್ಯತ್ಯಾಸವೇ  ಸಂಗ್ರಾಮಕ್ಕೆ ಕಾರಣವೆನ್ನಲಾಗಿದೆ.  ಈ ಸಂಗ್ರಾಮ ನಿತ್ಯವೂ ಪ್ರತಿಯೊಬ್ಬರಲ್ಲಿಯೂ ನಡೆಯುವ ಯುದ್ಧವೇ ಸರಿ. ದೈವೀಸಂಪತ್ತುಳ್ಳವರೇ ಕಡೆಗೆ ವಿಜಯಶಾಲಿಗಳಾಗುತ್ತಾರೆ. ದೈವ ಅವರನ್ನು ಬೆಂಬಲಿಸುತ್ತದೆ. ಕಥಾಬಾಗದಲ್ಲಿ , ಕಾಲಯವನನನ್ನು ಕಂಡು ಮುರಾರಿ ಪರಾರಿಯಾಗುವುದು ಏತಕ್ಕೆ? ನಂತರ, ಕಾಲಯವನನನ್ನು ಮುಚುಕುಂದನನ ಬಳಿ ಕರೆದೊಯ್ಯುವುದೇತಕ್ಕೆ? ಕೃಷ್ಣನೇ ಅವನನ್ನು ಸಂಹರಿಸಬಹುದಾಗಿತ್ತಲ್ಲವೇ? ಎಂಬ ಪ್ರಶ್ನೆಗಳು ಬರಬಹುದು. ಭಾಗವತದಲ್ಲಿಯೂ ಪರೀಕ್ಷಿತ್ ಮಹಾರಾಜನೂ ಶುಕಮಹರ್ಷಿಗಳಲ್ಲಿ ಇಂತಹ ಪ್ರಶ್ನೆಗಳನ್ನಿಡುತ್ತಾನೆ. ಭಗವಂತನ ಕಾರ್ಯಗಳ ರಹಸ್ಯ  ಅವನಿಗೆ ಮಾತ್ರ ಗೊತ್ತಾಗುತ್ತದೆ. ಪ್ರಹ್ಲಾದನಿಗಾಗಿ ನರಸಿಂಹದೇವರು ಹಿರಣ್ಯಕಶಿಪುವಿನ ಬಳಿ ಬರಲಿಲ್ಲವೇ? ಇಲ್ಲಿ ಶ್ರೀರಂಗಸದ್ಗುರುಗಳ ವಾಣೀ ಸ್ಮರಣಾರ್ಹ. " ದೈವೀಸಂಪತ್ತುಳ್ಳ ವ್ಯಕ್ತಿಯ ಸಂಬಂಧದಿಂದ ಆಸುರೀಸಂಪತ್ತುಳ್ಳವನ ಬಳಿ ದೈವ ಬರಬೇಕಾಗುತ್ತದೆ. " ಪರಮಾತ್ಮನು ಶಿಷ್ಟರಕ್ಷಣ, ದುಷ್ಟಶಿಕ್ಷಣ" ಒಟ್ಟಿಗೆ ಮಾಡುವ ಕಾರ್ಯವಿಧಾನವಿದಾಗಿದೆ.  ಭಗವಂತ ಸತ್ಕಾರ್ಯ ಮಾಡಿದ್ದ ಮುಚುಕುಂದನನ್ನು ಎಚ್ಚರಿಸಿ ಸನ್ಮಾರ್ಗ ತೋರುವುದು ಮತ್ತು ಅಸುರನ ಸಂಹಾರ ಎರಡೂ ಕಾರ್ಯ ಮಾಡಿದ್ದಾನೆ. "ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ" ಎಂಬ ಕಾರ್ಯ ಯೋಜಿಸುವ ಮಾಹಾಚತುರನಾದ ಭಗವಂತನನ್ನು ನೆನೆಯೋಣ.


ಸೂಚನೆ: 8/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, July 13, 2022

ಆತ್ಮನ ಎಣಿಕೆ ತಪ್ಪದಿರಲಿ (Atmana Enike Tappadirali)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


 

ಜೀವನದ ಜಟಿಲ  ಪ್ರಶ್ನೆಗಳಿಗೆ ಉತ್ತರವೋ ಎಂಬಂತೆ ಉಪನಿಷತ್ತುಗಳಿಂದ ಸ್ಫೂರ್ತಿಗೊಂಡ ಕಥೆಯೊಂದು ಹೀಗಿದೆ- ಒಂದು ಆಶ್ರಮದ ಆಚಾರ್ಯರು ತಮ್ಮ ಹತ್ತು ಶಿಷ್ಯರನ್ನು ಹತ್ತಿರದ ಮಾಯಾಪುರಿ ಎಂಬ ಗ್ರಾಮಕ್ಕೆ ಕಳುಹಿಸಿದರು.ಶಿಷ್ಯರು  ಹೊರಡುವಾಗ ನದಿಯೊಂದನ್ನು ಸುರಕ್ಷಿತವಾಗಿ ದಾಟಿದರು. ಹಿಂದಿರುಗುವಾಗ ಹವಾಮಾನ ಕೆಟ್ಟು ಪ್ರವಾಹ ಬಂತು. ಕಡೆಗೆ ಶಿಷ್ಯರು ಬಹಳ ಕಷ್ಟಪಟ್ಟು ದಡ ಸೇರಿದರು. ನಂತರ ಶಿಷ್ಯರ ಗುಂಪಿನ ನಾಯಕ, ಹೊರಟ ಹತ್ತು ಮಂದಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಗುಂಪಿನವರನ್ನೆಲ್ಲ ಎಣಿಸಿದ- ಒಂದು, ಎರಡು, ಮೂರು  ....ಒಂಬತ್ತು. ಹತ್ತನೆಯವ ಇಲ್ಲ. ಎಂದು ಕಿರುಚಿದ. ಮತ್ತೊಮ್ಮೆ ಎಣಿಸಿದರೂ ನಾಯಕನಿಗೆ ಹತ್ತನೆಯವ ಸಿಗದೇ  ಗಾಬರಿಗೊಂಡ. ಉಪನಾಯಕ ತಾನೂ ಎಣಿಸಿವುದಾಗಿ ಹೇಳಿ  ಎಣಿಸಿದರೂ ಹತ್ತನೆಯವ ಸಿಗದಾಗ ಎಲ್ಲರೂ ಜೋರಾಗಿ ಅಳತೊಡಗಿದರು.

ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಂನ್ಯಾಸಿಯೊಬ್ಬನು ಅವರನ್ನು ವಿಚಾರಿಸಿದ. ಶಿಷ್ಯರು ಅವನಲ್ಲಿ ತಮ್ಮ ಹತ್ತು ಮಂದಿಯಲ್ಲೊಬ್ಬ ನದಿಯಲ್ಲಿ ಮುಳುಗಿಹೋದ ಕಾರಣ ಅಳುತ್ತಿದ್ದೇವೆ ಎಂದರು. ಅವರ  ಅಜ್ಞಾನವನ್ನು ನೋಡಿ, ಬುದ್ಧಿವಂತನಾದ ಸಂನ್ಯಾಸಿಯು "ಚಿಂತಿಸಬೇಡಿ. ಹತ್ತನೆಯವ ಎಲ್ಲೂ ಹೋಗಿಲ್ಲ" ಎನ್ನಲು, ಶಿಷ್ಯರಿಗೆ ಸಂತೋಷವಾಗಿ, "ಎಲ್ಲಿ  ದಯಮಾಡಿ ತೋರಿಸಿ "ಎಂದು ಪ್ರಾರ್ಥಿಸಿದರು.

ಸಂನ್ಯಾಸಿಯು ಎಲ್ಲರನ್ನೂ ಸಾಲಾಗಿ ನಿಲ್ಲಿಸಿ, ನಾಯಕನನ್ನು ಕರೆದು "ಬಾ ಇಲ್ಲಿ, ಈಗ ಎಣಿಸು" ಎಂದ. ನಾಯಕನು ಎಣಿಸುತ್ತಾ ಒಂದು, ಎರಡು, ಮೂರು  ...ಒಂಬತ್ತು ಎಂದು ನಿಲ್ಲಿಸಿದ. ಆಗ ಸಂನ್ಯಾಸಿಯು ನಾಯಕನ ಬೆರಳನ್ನು ಹಿಡಿದು "ನೀನೇ ಹತ್ತನೆಯವ" "ತತ್ ತ್ವಂ ಅಸಿ" ಎಂದ. ಆಗ ಪ್ರತಿ ಶಿಷ್ಯನಿಗೂ ತನ್ನನ್ನು ತಾನೇ ಎಣಿಸಿಕೊಳ್ಳದಿರುವುದು ಅರಿವಾಯಿತು.  ಎಲ್ಲರಿಗೂ ಆನಂದವುಂಟಾಗಿ ಸಂನ್ಯಾಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. 

ಜನರು ಮಾಯಾಪುರಿಯಲ್ಲಿ, ಅಷ್ಟಪಾಶಗಳಿಂದ ಉಂಟಾದ "ಅಜ್ಞಾನ"ದಿಂದಾಗಿ ಆತ್ಮಸ್ವರೂಪವನ್ನು  ಸಂಪೂರ್ಣ ಮರೆತುಬಿಡುತ್ತಾರೆ. ಇದರಿಂದಾಗಿ ಎಣಿಕೆ ತಪ್ಪಾಗಿ, ಒಳಗಿರುವ "ಆತ್ಮ" ಕಾಣಿಸುವುದಿಲ್ಲ. ಇದು "ಆವರಣ"ದಿಂದಾಗಿ. ಹತ್ತನೆಯವ ನದಿಯಲ್ಲಿ ಮುಳುಗಿಹೋದನೆಂಬ ದುಃಖ, ಚಿಂತೆಗಳು ತಪ್ಪಾದ ನೋಟ. ಶ್ರೀರಂಗಮಹಾಗುರುಗಳ ವಾಣೀ ಎಚ್ಚರಿಸುತ್ತದೆ "ಸ್ವರೂಪ ಅರಿತರೆ ಬಾಳಾಟ ಅರಿಯದಿದ್ದರೆ ಗೋಳಾಟ.  ಪ್ರಕೃತಿ ಕೆಟ್ಟಾಗ ಮನುಷ್ಯನು ಸಹಜವಾದ ನಿದ್ರೆಯನ್ನೇ ಕಳೆದುಕೊಳ್ಳುತ್ತಾನೆ. ಅಂತೆಯೇ ತುರೀಯದೆಶೆಯಲ್ಲಿರುವ ಸತ್ಯವನ್ನು, ಪ್ರಕೃತಿಯ ಕಂಡೀಷನ್ ಕೆಟ್ಟಾಗ, ಕಳೆದುಕೊಳ್ಳುತ್ತಾನೆ. ಅದಕ್ಕೆ ತಕ್ಕ ಡಾಕ್ಟರಿಂದ ಔಷಧಿ ತೆಗೆದುಕೊಳ್ಳಬೇಕು". ಈ ಕಥೆಯಲ್ಲಿ ಹತ್ತನೇಯನವನಿಗಾಗಿ ಪರಿತಪಿಸುವಾಗ, ದಾರಿ ತೋರಿಸುವವನು ಬಂದಂತೆ, ನಮ್ಮ ಜೀವನದಲ್ಲಿ ದಾರಿದೀಪ  ತೋರಿಸುವನೇ ಗುರು. ಅಭಯವನ್ನು ನೀಡಿ ನಮ್ಮ ಬುದ್ಧಿಯನ್ನು ಪ್ರಚೋದಿಸಿ, ಪರೋಕ್ಷ ಜ್ಞಾನವನ್ನು  ದಯಪಾಲಿಸುತ್ತಾನೆ. ಮುಂದೆ, ಕಾಲ ಪಕ್ವವಾದಾಗ, ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಮೂರು ಸ್ಥಿತಿಗಳನ್ನು ಮೀರಿದ ತುರೀಯ(ನಾಲ್ಕನೆಯ)ವೆಂಬ  ಸ್ಥಿತಿಯನ್ನು ಹೊಂದುವಂತೆ ಮಾಡುತ್ತಾನೆ. ಭುವಿಯಲ್ಲಿದ್ದರೂ ಎಲ್ಲಾ ಭವ ಬಂಧನದಿಂದ  ಬಿಡುಗಡೆಯಾಗಿ ದುಃಖ ನಿವೃತ್ತಿಯಾಗಿ ಕಡೆಗೆ ಸಚ್ಚಿದಾನಂದ ದೊರಕುವಂತಾಗಲಿ; ಎಲ್ಲರೂ ಸಾಧನೆ ಮಾಡಿ ಅಂತಹ "ಆನಂದ ಸ್ಥಿತಿ" ಯನ್ನು ಹೊಂದೋಣವೆಂದು ಪ್ರಾರ್ಥಿಸೋಣ.

ಸೂಚನೆ: 12/07/2022 ರಂದು ಈ ಲೇಖನವು ವಿಜಯ ವಾಣಿ ಯಲ್ಲಿ ಪ್ರಕಟವಾಗಿದೆ.  

Thursday, March 3, 2022

ಅಯಸ್ಕಾಂತ ಮತ್ತು ಅಧ್ಯಾತ್ಮ(Ayaskaantha matthu Adhyaatma)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


 ವಿಶ್ವವಿಖ್ಯಾತರಾದ ಆಲ್ಬರ್ಟ್ ಐನ್ಸ್ಟೀನ್ ರವರ ಬಹಳ ಪ್ರಚಲಿತವಾದ ಮಾತೊಂದು ಹೀಗಿದೆ- "ಧರ್ಮವಿಲ್ಲದ ವಿಜ್ಞಾನ ಕುಂಟನಂತೆ; ವಿಜ್ಞಾನವಿಲ್ಲದ ಧರ್ಮ ಕುರುಡನಂತೆ". ವಿಜ್ಞಾನ ಹಾಗೂ ಧರ್ಮದ ಪರಸ್ಪರ ದೃಷ್ಟಿಕೋನದ ಅರಿವು ಅವಶ್ಯ. ನಾವೆಲ್ಲರೂ ಅಯಸ್ಕಾಂತದ ಬಗ್ಗೆ ಪ್ರಾಥಮಿಕ ಶಿಕ್ಷಣದ ಕಾಲದಿಂದಲೂ ಪರಿಚಿತರಾಗಿರುತ್ತೇವೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ ಮಾನವನಿಗೆ ಉಪಯೋಗವಾಗುವಂತಹ ಅಯಸ್ಕಾಂತ ಆಧಾರಿತ ಅನೇಕ ಉಪಕರಣಗಳು ಬಂದಿವೆ.  ಅಯಸ್ಕಾಂತ ಹಾಗೂ ಅಧ್ಯಾತ್ಮ ಇವೆರಡಕ್ಕೂ ಹೋಲಿಕೆ ಇದೆಯೆ? ಭಗವತ್ಸ್ಫೂರ್ತಿಗಾಗಿ ಪರಿಶೀಲಿಸೋಣ. 

ಶ್ರೀ ಆದಿಶಂಕರರು, ಮುಮುಕ್ಷುಗಳು ತುಂಬಾ ವಿರಳವೆನ್ನುತ್ತಾರೆ. ಕೆಲವೇ ಕೆಲವರು ಅಧ್ಯಾತ್ಮದ ಬಗ್ಗೆ ಒಲವನ್ನು ತೋರುತ್ತಾರೆ. ಇದು ಹೇಗೆಂದರೆ, ಕೆಲವೇ ಕೆಲವು ಲೋಹಗಳು ಮಾತ್ರ ಅಯಸ್ಕಾಂತಕ್ಕೆ ಆಕರ್ಷಿತವಾಗುತ್ತವೆ. ಬಹಳ ಪದಾರ್ಥಗಳು ಆಕರ್ಷಿತವಾಗದೆಯೇ ಇರುತ್ತವೆ. ಅಯಸ್ಕಾಂತಕ್ಕೆ ಆಕರ್ಷಿತವಾಗುವ ಲೋಹಗಳು ಅದರ ಸಂಪರ್ಕದಲ್ಲೇ ಇದ್ದರೆ ಕ್ರಮೇಣ ತಾವೂ ಅಯಸ್ಕಾಂತಗಳಾಗುತ್ತವೆ. ಮಹಾಪುರುಷರ ಆಶ್ರಯದಲ್ಲಿರುವ  ಮುಮುಕ್ಷುಗಳಿಗೆ ಸತ್ಸಂಗದ ಪ್ರಭಾವದಿಂದ ಜ್ಞಾನ ಮತ್ತು ಜೀವನ್ಮುಕ್ತಿಯೂ ಲಭಿಸುತ್ತವೆಯೆನ್ನುವ  ಆಚಾರ್ಯ ಶಂಕರರ ಮಾತು ಇಲ್ಲಿ ಸ್ಮರಣಾರ್ಹ.   

ಅಯಸ್ಕಾಂತದಲ್ಲಿ ಅಡಗಿರುವ ಶಕ್ತಿಯು ಬಾಹ್ಯವಾದ ಕಣ್ಣಿಗೆ ಗೋಚರವಾಗುವುದಿಲ್ಲ. ಹಾಗೆಂದಮಾತ್ರಕ್ಕೆ, ಅದರಲ್ಲಿ ಶಕ್ತಿಯಿಲ್ಲವೆಂದು ಹೇಳಲಾರೆವು. ಇದನ್ನು ಪ್ರಯೋಗದಿಂದ ನಿರ್ಣಯಿಸಬೇಕಾಗುತ್ತದೆ. "ಹೊರಗಣ್ಣಿನಿಂದ ನನ್ನನ್ನು ನೀನು ನೋಡಲಾರೆ, ನಿನಗೆ ದಿವ್ಯವಾದ ಒಳಗಣ್ಣು ನೀಡುತ್ತೇನೆ, ಅದರಿಂದ ನನ್ನ ಯೋಗವೈಭವವನ್ನು ನೋಡುವವನಾಗು" ಎನ್ನುವುದು ಗೀತಾಚಾರ್ಯನು ಅರ್ಜುನನಿಗೆ ಹೇಳುವ ಮಾತು. 

ಭಕ್ತರು ತಮ್ಮ ಪ್ರಾರ್ಥನೆಯಲ್ಲಿ ತಾವು ಸಂಸಾರವೆಂಬ ಸಾಗರದಲ್ಲಿದ್ದು ದಾರಿಕಾಣದೇ, "ದಾರಿಯ ತೋರೋ ಗೋಪಾಲ", " ದಾರಿ ತೋರೋ ವೈಕುಂಠಕ್ಕೆ" ಎಂದೆಲ್ಲಾ ಬೇಡುವರು. ಇಲ್ಲಿ ವಿಶ್ವದ ಸಾಗರದಲ್ಲಿ ಯಾನಕ್ಕೆ ಬೇಕಾದ ದಿಕ್ಕನ್ನು ತೋರಿಸುವ ರೀತಿಯಲ್ಲಿ ಬೇಡಿದ್ದಾರೆ. ಸಾಗರದ ಹಾಗು ವಿಮಾನಯಾನಗಳಲ್ಲಿ ದಿಕ್ಕನ್ನು ಸೂಚಿಸುವ ಉಪಕರಣ "ಕಾಂತೀಯ ದಿಕ್ಸೂಚಿ" ಈಗಲೂ ಬಳಕೆಯಲ್ಲಿದೆ. ಭೂಮಿಯೇ ದೊಡ್ಡ ಅಯಸ್ಕಾಂತದಂತೆ ವರ್ತಿಸುತ್ತದೆ.  ದಿಕ್ಸೂಚಿಯ ಅಯಸ್ಕಾಂತವು  ಸದಾ ಭೂಮಿಯ ಉತ್ತರದ ಕಡೆಗೆ ಅಭಿಮುಖವಾಗಿರುವುದರಿಂದ ಯಾನಕ್ಕೆ ಅತ್ಯಗತ್ಯವಾಗುತ್ತದೆ.       

ಅಯಸ್ಕಾಂತ ಆಧಾರಿತ ಅತಿವೇಗದ ರೈಲುಗಳು ಕೆಲವು ದೇಶಗಳಲ್ಲಿವೆ. ಇಲ್ಲಿ ರೈಲು, ಭೂಮಿಯಲ್ಲಿರುವ ಹಳಿಯಿಂದ ಕೇವಲ ೧೫ಮಿ.ಮಿ. ಮೇಲೆ ಗಾಳಿಯಲ್ಲಿರುತ್ತದೆ. ರೈಲು ಭೂಮಿಗೆ ಅತಿಸಮೀಪದಲ್ಲಿದ್ದೂ ಸ್ಪರ್ಶಮಾಡದೆ ಭೌತಿಕ ಘರ್ಷಣೆಯಿಲ್ಲದೆ ಚಲಿಸುತ್ತವೆ. ಇದನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡೋಣ. ನಿಯಮಿತ ಕರ್ಮಗಳನ್ನು ಅದರ ಫಲಾಪೇಕ್ಷೆಗೆ ಅಂಟಿಕೊಳ್ಳದೆ, ಘರ್ಷಣೆ, ಪಾಪದ ಸೋಂಕಿಲ್ಲದೆ 'ಭಗವದರ್ಪಿತ ' ಎಂಬ ಮನಸ್ಸಿನಿಂದ ದಕ್ಷತೆಯಿಂದ ಮಾಡಬೇಕು. ಆಗ ತಾವರೆ ಎಲೆಯ ಮೇಲಿನ ನೀರು ಅದಕ್ಕೆ ಅಂಟದಿರುವಂತೆ, ನಿರ್ಲಿಪ್ತವಾದ ಜೀವನ ನಡೆಸಿದಂತಾಗುತ್ತದೆ. 

ಅಯಸ್ಕಾಂತೀಯ ದಿಕ್ಸೂಚಿಯು ಸದಾ ಉತ್ತರದ ದಿಕ್ಕನ್ನೇ ಅನುಸರಿಸುತ್ತದೆ. ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯ- ಸೂರ್ಯಕಾಂತಿ ಹೂವು ಸೂರ್ಯನಿಗೆ ಸದಾ ಅಭಿಮುಖವಾಗಿರುತ್ತದೆ, ವಿಮುಖವಾಗಿ ಇರುವುದಿಲ್ಲ. ಹಾಗೆಯೇ ನಮ್ಮ ಆತ್ಮವೂ, ಕರಣಗಳೂ ಭಗವದಭಿಮುಖವಾಗಿ ಇರಲಿ.

ಸೂಚನೆ: 3/03/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

Thursday, December 23, 2021

ಬಾಹ್ಯಾಕಾಶ ಮತ್ತು ದಹರಾಕಾಶ(Baahyaakaasha Matthu Daharaakaasha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


ನವಂಬರ್ ೧೧, ೨೦೨೧ ವಿಜ್ಞಾನ ಮತ್ತು ತಂತ್ರಜ್ಞಾನಕ್ಷೇತ್ರದ ಚರಿತ್ರಾರ್ಹದಿನ. ಅಂದು ಭಾರತಮೂಲದ ರಾಜಾಚಾರಿರವರ ನೇತೃತ್ವದ ನಾಲ್ಕು ಸದಸ್ಯರ ಅಂತರಿಕ್ಷಯಾತ್ರಿಗಳು ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಎಂಬ ದ್ವೀಪದ ಉಡಾವಣೆ ಕ್ಷೇತ್ರದಿಂದ ಬಾಹ್ಯಾಕಾಶಕ್ಕೆ ಖಾಸಗಿ ಎನ್ಡೂರನ್ಸ್ ಬಹುತೇಕ ಉಪಯೋಗಿಸಬಲ್ಲ ರಾಕೆಟ್ ಹಾಗೂ ಕ್ಷಿಪಣಿಯ ಮೂಲಕ ಹಾರಿ, ಕೇವಲ ೨೨ ಗಂಟೆಯಲ್ಲಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದ ನೌಕೆಯೊಂದಿಗೆ ತಮ್ಮ ಕ್ಷಿಪಣಿಯನ್ನು ಸೇರಿಸಿ ಆ ನೌಕೆಯೊಳಗೆ ಪ್ರವೇಶಿಸಿದರು. ಎನ್ದ್ಯೂರನ್ಸ್ ಕ್ಷಿಪಣಿಯ ರಾಕೆಟ್ ಈಗಾಗಲೆ ಭೂಮಿಗೆ ಕ್ಷೇಮವಾಗಿ ಹಿಂದಿರುಗಿದೆ.  .    

ಅಮೇರಿಕಾದೇಶದ ಪ್ರಥಮ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನ್ ಎಂಬಾತ ತನ್ನ ಯಾತ್ರೆಯ ಬಗ್ಗೆ "ಈ ಸೃಷ್ಟಿಯ ನೋಟವನ್ನು ನೋಡಿ , ಭಗವಂತನಲ್ಲಿ ನಂಬಿಕೆಯಿಲ್ಲದಿರುವುದು ಅಸಾಧ್ಯ" ಎಂದಿದ್ದಾರೆ. ಈಗ ೭೭ ವರ್ಷಗಳಾಗಿರುವ ಗ್ಲೆನ್ನ್ ಅವರು "ಅಂತರಿಕ್ಷದ ಅನುಭವ ನನಗೆ ದೇವರಲ್ಲಿ ನಂಬಿಕೆಯನ್ನು ಬಲಪಡಿಸಿದೆ" ಎಂದಿದ್ದಾರೆ. ಅನೇಕ ಅಂತರಿಕ್ಷಯಾತ್ರಿಗಳು ಈ ತರಹದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

ಅಂತರಿಕ್ಷ ಯಾತ್ರೆ ಹಾಗೂ ಭಾರತೀಯ ಮಹರ್ಷಿಗಳ ಆಧ್ಯಾತ್ಮಿಕಯಾತ್ರೆ ಹೋಲಿಸುವುದು ಸ್ವಾರಸ್ಯಕರವಾಗಿದೆ. ಬಾಹ್ಯಾಕಾಶದ ನೌಕೆ ಭೂಮಿಯ ಗುರುತ್ವಾಕರ್ಷಣೆಯಿಂದ ದೂರಸರಿಯಬೇಕಾದರೆ, ಅದರ ವೇಗ ಗಂಟೆಗೆ ೪೦ ಸಾವಿರ ಕಿ.ಮಿ. ದಾಟಬೇಕಾಗುತ್ತದೆ. ಮಾನವನು ತ್ರಿಗುಣಗಳೆಂಬ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಟ್ಟು ಸಂಸಾರದಲ್ಲಿದ್ದಾನೆ. ಆತ ದೈವವನ್ನು ಕಂಡ ಹಾಗೂ ತೋರಿಸುವ ಗುರುಗಳ ಉಪದೇಶವೆಂಬ ನೌಕೆಯ ಸಹಾಯದಿಂದ ತ್ರಿಗುಣಾತೀತನಾಗಬೇಕಾಗುತ್ತದೆ. 

ಅಂತರಿಕ್ಷಯಾತ್ರಿಗಳು ಯಾತ್ರೆಯಲ್ಲಿ ನಿರ್ವಾತ, ಉಷ್ಣ ಮತ್ತು ಒತ್ತಡಗಳ ಸಮಸ್ಯೆಯಿಂದ ರಕ್ಷಣೆ ಪಡೆಯಬೇಕಾಗುತ್ತದೆ. ಹಾಗೆಯೇ, ಆಧ್ಯಾತ್ಮಿಕ ಸಾಧನೆಯೆಂಬುದು ಕತ್ತಿಯ ಅಲಗಿನ ಮೇಲೆ ನಡೆಯುವಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಗುರುಗಳ ಅನುಗ್ರಹದಿಂದ ಸಾಧನೆಯ ಪಥದಲ್ಲಿ ರಕ್ಷಣೆ ಪಡೆಯುವುದು ಅತ್ಯಾವಶ್ಯಕವಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯನ್ನು ಅಂತರಿಕ್ಷಯಾತ್ರಿಗಳು ಅನುಭವಿಸುತ್ತಾರೆ. ಹಾಗೆಯೇ ಮುಂದುವರಿದ ಸಾಧಕರು, ಭವಬಂಧನ ಕಳಚಿಕೊಂಡ ಅನುಭವ ಪಡೆಯತ್ತಾರೆ. ಭೌತಿಕ ಅಂತರಿಕ್ಷ ಯಾತ್ರಿಗಳಿಗೆ ಶಾರೀರಿಕ ಬದಲಾವಣೆಗಳಾದಂತೆ, ಸಮಾಧಿ ಅಥವಾ ತುರೀಯ ಸ್ಥಿತಿಯಲ್ಲಿ ಯೋಗಿಗಳ ಶರೀರ ಕಟ್ಟಿಗೆಯಂತಾಗುವುದು, ಇತ್ಯಾದಿ ಅನುಭಗಳು ಉಂಟಾಗುತ್ತವೆ ಎಂಬುದು ಅನುಭವಿಗಳ ಮಾತು.    

ಶ್ರೀರಂಗಗುರುಗಳು ಉಪನಿಷದ್ವಾಣಿಯನ್ನು ಸ್ಮರಿಸಿಕೊಂಡಿರುವುದು ಉಲ್ಲೇಖಾರ್ಹ- "ನಿಮ್ಮ ಹೃದಯ ಒಂದು ಗೇಣಿರಬಹುದು. ಆದರೆ ಅಲ್ಲಿ ಅಂತರ್ಯಾಮಿಯಾಗಿದ್ದರೂ ವಾಸ್ತವವಾಗಿ ನನ್ನ ಪ್ರಭುವು ಭೂರ್ಭುವಸ್ಸುವರ್ಲೋಕಗಳನ್ನು ಮೀರಿ ನಿಂತಿದ್ದಾನೆ. ಅವನು ಅತ್ಯಂತ ಹತ್ತಿರದಲ್ಲಿಯೂ ಇದ್ದಾನೆ, ಅತಿದೂರದಲ್ಲಿಯೂ ಇದ್ದಾನೆ. "  ಉಪನಿಷತ್ತಿನಲ್ಲಿ ತಿಳಿಸಿರುವ ಹಾಗೆ, ಶರೀರವು ಬ್ರಹ್ಮಪುರಿ; ಹೃದಯವೊಂದು ಕಮಲ; ಅದರೊಳಗೊಂದು ಆಕಾಶ; ಆ ಆಕಾಶದೊಳಗಿರುವ ಸಚ್ಚಿದಾನಂದ ಪರವಸ್ತುವನ್ನು ಕಾಣವುದೇ ಜೀವನದ ಪರಮಧ್ಯೇಯ. ಆ ಆಕಾಶವನ್ನೇ ದಹರಾಕಾಶವೆನ್ನುತ್ತಾರೆ. ಬ್ರಹ್ಮಾಂಡವು ಭೌತಿಕ ಕ್ಷೇತ್ರವಾದರೆ, ಅಂತರಂಗದ ಅನುಭವವಾಗುವುದು ಪಿಂಡಾಂಡವೆನ್ನುವ ಕ್ಷೇತ್ರದಲ್ಲಿ. 

ಎಂಡ್ಯೂರನ್ಸ್ ಅಂತರಿಕ್ಷಯಾತ್ರಿಗಳು ಏಪ್ರಿಲ್ ೨೦೨೨ ರಲ್ಲಿ ಭೂಮಿಗೆ ಹಿಂದಿರುಗಿ ಸಹಜ ಜೀವನಕ್ಕೆ ಮರಳಿ ಬರುತ್ತಾರೆ. ಹಾಗೆಯೇ, ಋಷಿಗಳು ತಮ್ಮ ತಪಸ್ಸಿನಿಂದ ಹೊರಬಂದು ತಮ್ಮ ಇಹಜೀವನವನ್ನು "ಜೀವನ್ಮುಕ್ತರಾಗಿ" ನಡೆಸುತ್ತಾರೆ. 

ಗಗನಯಾತ್ರಿಯು ಬಾಹ್ಯಾಕಾಶಕ್ಕೆ ಹಾರುವುದನ್ನು ನೋಡಿ ನಾವು ದಹರಾಕಾಶಕ್ಕೆ ಹಾರುವ ಸ್ಫೂರ್ತಿಯನ್ನು ಪಡೆಯೋಣ. 


ಸೂಚನೆ: 23/12/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 


Thursday, October 28, 2021

ಭಗವಂತನ ಸಹವಾಸಕ್ಕೆ ಬೇಕು ಉಪವಾಸ (Bhagavantana Sahavaasakke Beku Upavaasa)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


  


ಜಪಾನಿನ ಪ್ರಾಚಾರ್ಯರಾದ ಯೋಶಿನೋರಿ ಓಸೂಮಿ ರವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ೨೦೧೬ರ ನೋಬೆಲ್ ಪಾರಿಷೋತಕ ನೀಡಲಾಯಿತು. ಈ ಗೌರವ ಸಂದಿದ್ದು ಅವರ ಆಟೋಫಗಿ ಬಗೆಗಿನ ವೈಜ್ಞಾನಿಕ  ಸಂಶೋಧನೆಗಾಗಿ. ಆಟೋಫಗಿ ಎಂದರೆ ಮಾನವ ಶರೀರದಲ್ಲಿನ ಅನಾರೋಗ್ಯ ಜೀವಕೋಶಗಳು ಹಾಗೂ ಅನುಪಯುಕ್ತ ಪ್ರೋಟಿನ್ ಗಳ ಸ್ವಯಂಭಕ್ಷಣೆ. ಉಪವಾಸ ಮಾಡುವ ಸಂಧರ್ಭದಲ್ಲಿ ಈ ಪ್ರಕ್ರಿಯೆ ಸಹಜವಾಗಿ ಆಗುತ್ತದೆ. ಇದರಿಂದಾಗಿ ಮಾನವನ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.  


ಪುರಾತನ ಕಾಲದಿಂದಲೂ ಉಪವಾಸದ ಬಗ್ಗೆ ಪುರಾಣ, ಆಯುರ್ವೇದ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಚಿಂತನೆ ನಡೆದಿದೆ. ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಇಲ್ಲದಿರಬಹುದು. ಆಯುರ್ವೇದವು ಉಪವಾಸದಿಂದ ಜೀರ್ಣಾಂಗ ವ್ಯವಸ್ಥೆ ಶುದ್ಧಗೊಳ್ಳುತ್ತದೆ ಹಾಗೂ ವಿಷಾಂಶವು ಕಡಿಮೆಯಾಗುತ್ತದೆ ಎಂದು ತಿಳಿಸುತ್ತದೆ. "ಶರೀರಮಾದ್ಯಂ ಖಲು ಧರ್ಮಸಾಧನಂ" ಎಂಬಂತೆ ಶರೀರದ ಆರೋಗ್ಯವು ಧರ್ಮಸಾಧನೆಗೆ ಮತ್ತು ಆಧ್ಯಾತ್ಮಿಕ ಸಾಧನೆಗೆ ಮುಖ್ಯವಾಗಿರುತ್ತದೆ. 


ಪ್ರತಿಜೀವಿಯೂ ಶಾಂತಿಸಮೃದ್ಧಿಗಾಗಿ ಹಂಬಲಿಸುತ್ತಾನೆ. ಶ್ರೀರಂಗಮಹಾಗುರುಗಳ ಮಾತುಗಳು ಇಲ್ಲಿ ಸ್ಮರಣೀಯ " ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಜೀವನ ಸಹಜವಾದ ಹಕ್ಕು; ಮೂಲಭೂತವಾದ ಹಕ್ಕು." ಈ ಸುಖ ಶಾಂತಿ ಪಡೆಯಲು ಭಾರತದ ಋಷಿಗಳು ಕಾಲದೇಶಗಳಲ್ಲಿ ಬರುವ ಸಂದರ್ಭಗಳನ್ನು ಗುರಿತಿಸಿ ಕೆಲವು ಆಚರಣೆಗಳನ್ನು ತಂದಿರುವುದುಂಟು. ಕಾಲಚಕ್ರದಲ್ಲಿ ಬರುವ ಸನ್ನಿವೇಶಗಳನ್ನು ಉಪಯೋಗಮಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ತಂದಿರುವ ಮಾರ್ಗಗಳಲ್ಲಿ ಏಕಾದಶಿಯಂದು ಮಾಡುವ ಉಪವಾಸವೂ ಒಂದು. 


ಉಪವಾಸದ ಆಚರಣೆಗೆ ಒತ್ತುಕೊಡುವ ಕಥೆಗಳಲ್ಲಿ ಅಂಬರೀಷ ಮಹಾರಾಜನ ಕಥೆ ಪುರಾಣಪ್ರಸಿದ್ಧ. ಆತ ಮಹಾವಿಷ್ಣುವಿನ ಪರಮ ಭಕ್ತನಾಗಿದ್ದು, ಪ್ರತಿ ಏಕಾದಶಿ ಮತ್ತು ಮರುದಿನ ದ್ವಾದಶಿಯಲ್ಲಿ ವ್ರತಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದನು. ಅವನ ರಕ್ಷಣೆಗಾಗಿ ಮಹಾವಿಷ್ಣುವಿನ ಸುದರ್ಶನ ಚಕ್ರವೇ ಅವನಲ್ಲಿತ್ತು. ದೂರ್ವಾಸಮುನಿಗಳೊಮ್ಮೆ ದ್ವಾದಶಿದಿನದಂದು ಅಂಬರೀಷನ ಅರೆಮನೆಗೆ ಬಂದು ಸತ್ಕಾರಗಳನ್ನು ಸ್ವೀಕರಿಸಿ, ಸ್ನಾನಾಹ್ನಿಕಗಳನ್ನು ಪೂರೈಸಿಕೊಂಡು ಬರುವೆನೆಂದು ತಿಳಿಸಿ ಹೊರಟವರು ದ್ವಾದಶಿಮುಹೂರ್ತ ಮುಗಿಯುವ ವೇಳೆಗೆ ಬರಲಿಲ್ಲ. ಆಗ ರಾಜನು ಕೇವಲ ನೀರನ್ನು ಪ್ರಾಶನಮಾಡುವುದು ಅನಿವಾರ್ಯವಾಯಿತು. ಆ ಕಾರಣಕ್ಕಾಗಿ ದೂರ್ವಾಸರು ಕೋಪಾವಿಷ್ಟರಾಗಿ ಅಂಬರೀಷನನ್ನು ಸಂಹರಿಸಲು ಪ್ರಯತ್ನ ಪಟ್ಟಾಗ ಸುದರ್ಶನಚಕ್ರವು ದೂರ್ವಾಸರ ಬೆನ್ನು ಹತ್ತಿತು. ಆಗ ದೂರ್ವಾಸರು ತ್ರಿಮೂರ್ತಿಗಳಲ್ಲಿ ಶರಣಾದರೂ, ಅವರು ರಕ್ಷಿಸದೆ, ಕೊನೆಗೆ ಅಂಬರೀಷನಲ್ಲಿಯೇ ಶರಣಾದರು. ಸುದರ್ಶನ ಚಕ್ರವು ಮನಸ್ಸ್ತತ್ವವನ್ನು ಸೂಚಿಸುತ್ತದೆ. ಅಂಬರೀಷನಿಗೆ ಮನಸ್ಸಿನ ಮೇಲೆ ಪೂರ್ಣಹತೋಟಿ ಇದ್ದುದರಿಂದ, ಸುದರ್ಶನಚಕ್ರವನ್ನು ಮಹಾವಿಷ್ಣುವು ಅದನ್ನು ಅಂಬರೀಷನಿಗೆ ಕೊಟ್ಟಿದ್ದನು ಎಂಬುದು ಸೂಕ್ಷ್ಮಾರ್ಥ. ಕೋಪತಾಪಗಳಿಗೆ ಅಲ್ಲಿ ಜಾಗವಿಲ್ಲ. ಆದ್ದರಿಂದ ದೂರ್ವಾಸರ ಕೋಪತಾಪಗಳು  ಫಲಿಸದೆ ಅವರು ಅಂಬರೀಷನಲ್ಲಿಯೇ ಶರಣಾಗಬೇಕಾಯಿತು. ಅಂತಹ ಭಕ್ತರ ಬಗ್ಗೆ ಪುರಂದರದಾಸರು ಕೀರ್ತನೆ ಮಾಡಿದ್ದಾರೆ " ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ? ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ"ಕಾಲಚಕ್ರದಲ್ಲಿ ಬರುವ ಸಂದರ್ಭಗಳನ್ನು ಉಪಯೋಗಿಸಿ ನಾವು ಭಗವತ್ಸಾಕ್ಷಾತ್ಕಾರವೆಂಬ ಮಹಾಧ್ಯೇಯವನ್ನು ಪಡೆಯುವಂತಾಗಲಿ ಎಂದು ಹಾರೈಸೋಣ.


ಸೂಚನೆ: 28/10/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.  

Thursday, September 30, 2021

ಭಗವಂತ ಭಾಗವತರ ಸಂಬಂಧ (Bhagavanta Bhaagavatara Sambandha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



"ಲಾಲಿಸಿದರೆ ಮಕ್ಕಳು, ಪೂಜಿಸಿದರೆ ದೇವರು" ಇದು ಕನ್ನಡಿಗರಿಗೆ ಪರಿಚಿತವಾದ ಗಾದೆ. ಮಕ್ಕಳು, ಪ್ರೀತಿಯ, ಸಮಾಧಾನವಾದ ಮಾತುಗಳಿಗೆ ಒಲಿಯುತ್ತಾರೆ; ಹಾಗೆಯೇ ತ್ರಿಕರಣಶುದ್ಧರಾಗಿ ಪ್ರೀತಿಯಿಂದ ಭಗವಂತನನ್ನು ಸಜ್ಜನರು ಒಲಿಸಿಕೊಳ್ಳುತ್ತಾರೆ. ಭಾಗವತೋತ್ತಮನಾದ ಪ್ರಹ್ಲಾದರಾಜನು ಭಗವಂತನು ಒಲಿಯಬೇಕಾದರೆ, ಭಕ್ತರು ನವವಿಧ ಭಕ್ತಿಯನ್ನು ಅನುಸರಿಸಬೇಕೆಂದು ಲೋಕಕ್ಕೆ ಉಪದೇಶಮಾಡಿರುತ್ತಾನೆ. ನವವಿಧಭಕ್ತಿಯಲ್ಲಿ ಪರಮಾತ್ಮನ ಪಾದಸೇವೆ, ದಾಸ್ಯಗಳೆಂಬ ಉಪಚಾರಗಳೂ ಸೇರಿವೆ. "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ, ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು"ಎಂಬ ಪುರಂದರದಾಸರ ಕೀರ್ತನೆ ಸ್ಮರಣೀಯ. 

ಜಗನ್ಮಾತೆಯೇ ಹರಿಯ ಪಾದಸೇವೆಯಲ್ಲಿ ನಿತ್ಯವೂ ನಿರತಳಾಗಿರುತ್ತಾಳೆ. ಈ ರೀತಿ ಮಾಡುವ ಪೂಜೆಗಳು, ಸೇವೆಗಳು ಭಗವಂತನಿಗೆ ಸೇರುವುವೇ? ಎಂಬ ಸಂಶಯಗಳು ಸಾಮಾನ್ಯರ ಮನಸ್ಸಿಗೆ ಬರಬಹುದು. ಇದಕ್ಕೆ ಉತ್ತರ ಶ್ರೀರಂಗಗುರುಗಳ ವಾಣಿಯಲ್ಲಿದೆ- "ಫೋನ್ ನಲ್ಲಿ ಮಾತನಾಡಿದರೆ ಸಾವಿರಾರು ಮೈಲಿ ದೂರ ಸಾಗಬಹುದು. ನಿಮ್ಮ ಮನಸ್ಸನ್ನು ಭಗವಂತನವರೆಗೆ ಹರಿಯಬಿಟ್ಟರೆ ಅಲ್ಲಿಗೂ ನೀವು ಮಾಡುವ ಉಪಚಾರ ತಲುಪಬಹುದು. ಭಗವನ್ಮಯವಾಗಿ ಜೀವನ ನಡೆಸಲು ಒಂದು ವಿಧಾನ ಹಾಕಿಕೊಟ್ಟಿದ್ದಾರೆ. ಹಾಗೆ ಮಾಡುವ ಜೀವನದಲ್ಲಿ ಸತ್ಯ, ಸೌಂದರ್ಯ, ಮಾಂಗಲ್ಯಗಳಿಗೆಡೆಯಿವೆ" .

ಪುರಾಣಗಳಲ್ಲಿ ಬರುವ ಪ್ರಹ್ಲಾದ, ಧ್ರುವ, ದ್ರೌಪದಿ, ಭೀಷ್ಮ ಮುಂತಾದವರು ಹಾಗೂ ಚರಿತ್ರೆಯಲ್ಲಿ ನಾವು ನೋಡುವ ಪುರಂದರ ದಾಸರು, ಸಂತ ಸಕ್ಕುಬಾಯಿ ಇತ್ಯಾದಿ ಭಾಗವತರು ಭಗವಂತನಲ್ಲಿ ಭಕ್ತಿಯ ಸಂಬಂಧವನ್ನಿಟ್ಟುಕೊಂಡು ತಮ್ಮ ಇಹ-ಪರ ಜೀವನವನ್ನು ಸಾರ್ಥಕವಾಗಿ ಕಳೆದ ಪ್ರಸಂಗಗಳು ಉತ್ತಮ ಉದಾಹರಣೆಗಳಾಗಿವೆ. ಶುದ್ಧವಾದ ಭಕ್ತಿಗೆ ಮೆಚ್ಚಿದ ಭಗವಂತ ಭಕ್ತರ ವಿಷಯದಲ್ಲಿ ವಿಶೇಷ ಪ್ರೀತಿಯನ್ನು ತೋರಿದ ಪ್ರಸಂಗಗಳು ಇಲ್ಲದಿಲ್ಲ. ಮಹಾಭಾರತದ ಯುದ್ಧದ ಸಮಯದಲ್ಲಿ ತನ್ನ ಭಕ್ತರಾದ ಭೀಷ್ಮಪಿತಾಮಹರ ಮಾತನ್ನುಳಿಸಲು, ತಾನು, ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ಹಿಡಿಯುವುದಿಲ್ಲವೆಂಬ ತನ್ನ ಮಾತು ಮುರಿದರೂ ಲೆಕ್ಕಿಸದೇ, ಶ್ರೀಕೃಷ್ಣನು ಸುದರ್ಶನಚಕ್ರ ಹಿಡಿದನಲ್ಲವೇ?

ಪಂಡರಾಪುರದ ಸಮೀಪದ ಗ್ರಾಮದಲ್ಲಿ ಜನಿಸಿದ ಸಂತಸಕ್ಕುಬಾಯಿಯವರ ಕಥೆ ಭಾರತೀಯರೆಲ್ಲರಿಗೆ ಪರಿಚಿತವಾದದ್ದು. ಭಗವಂತನು ತನ್ನ ಭಕ್ತೆಯಾದ ಸಕ್ಕುಬಾಯಿಯವರ ಪರವಾಗಿ ಅತ್ತೆಯ ಮನೆಯಲ್ಲಿದ್ದುಕೊಂಡು ಮನೆಯ ಕೆಲಸವನ್ನೆಲ್ಲಾ ಮಾಡಿ ಸಂತಸಕ್ಕುಬಾಯಿಯವರನ್ನು ಪಂಡರಾಪುರಕ್ಕೆ ಕಳಿಸುವ ಘಟನೆ ರೋಮಾಂಚನವನ್ನುಂಟುಮಾಡದಿರದು. ಇನ್ನೊಂದು ಪುರಾಣಪ್ರಸಂಗದಲ್ಲಿ, ಭಗವಂತನು ವಾಮನನಾಗಿ ಬಲಿಯ ಮನೆಗೆ ಬಂದು ಮೂರಡಿ ಭೂಮಿಯನ್ನು ಕೇಳಿ, ತ್ರಿವಿಕ್ರಮನಾಗಿ ಬೆಳೆದಾಗ, ಬಲಿಯು ಶರಣಾದ. ಹರಿಯಪಾದ ಬ್ರಹ್ಮಾಂಡವನ್ನೇ ವ್ಯಾಪಿಸಿ, ಮೂರನೆಯ ಪಾದಕ್ಕೆ ಜಾಗವಿಲ್ಲದಾಗ, ತನ್ನ ಶಿರವನ್ನೇ ಬಲಿಯು ಒಪ್ಪಿಸಿಕೊಂಡ. ಭಗವಂತನು ಮೆಚ್ಚಿ, ಬಲಿಯನ್ನು, ಪಾತಾಳದ ದೊರೆಯನ್ನಾಗಿ ಮಾಡಿ, ಅವನ ಬಾಗಿಲು ಕಾಯುವ ಕಾಯಕವನ್ನು ಮಾಡುತ್ತಿರುವುದು ಭಗವಂತ- ಭಾಗವತರ ಸಂಬಂಧ ಎಷ್ಟು ಅದ್ಭುತವೆಂದು ನಿರೂಪಿಸುತ್ತದೆ. ಭಗವಂತನು ಭಕ್ತರಸೇವೆ ತನ್ನಲ್ಲಿ ಅರ್ಪಿತವಾಗಬೇಕಾದರೆ ಸುಲಭೋಪಾಯ ಸೂಚಿಸುತ್ತಾನೆ- "ನನ್ನಲ್ಲೇ ಮನಸ್ಸಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು. ನನಗೆ ತಲೆಬಾಗು. ಮನಸ್ಸನ್ನು ಹೀಗೆ ಅಣಿಗೊಳಿಸಿ ನನ್ನನ್ನೇ ಮೊರೆಹೊಕ್ಕಾಗ ನನ್ನನ್ನೇ ಸೇರುವೆ" ಶುದ್ಧವಾದ ಭಕ್ತಿಯುಳ್ಳ ತನ್ನ ಭಕ್ತರನ್ನೇ ಉಪಚರಿಸುವ ಅಂತಹ ಭಗವಂತನಲ್ಲಿ ನಾವು ಮಾಡುವ ಸೇವೆ ನೆಲೆನಿಲ್ಲಲಿ ಎಂದು ಪ್ರಾರ್ಥಿಸೋಣ.

ಸೂಚನೆ: 30/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.


Thursday, July 15, 2021

ಲಕ್ಷ್ಯದತ್ತ ಸಾಗೋಣ ( Lakshyadatta Sagona)



ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



ಫುಟ್- ಬಾಲ್ ಆಟದಲ್ಲಿ ಕ್ರೀಡಾಪಟುಗಳಿರಬೇಕಾದ ಮನೋಧರ್ಮ ಗಮನಿಸಿದರೆ, ಅವು ಜೀವನದಲ್ಲಿಯೂ ಅನುಸರಿಸಬಹುದಾದ ಒಳ್ಳೆಯ ಅಂಶಗಳೆಂದು ಮನವರಿಕೆಯಾಗುತ್ತದೆ. ತಂಡದ ಪಟು ತನ್ನ ತಂಡದ ಇನ್ನೊಬ್ಬ ಪಟುವಿಗೆ ಚೆಂಡನ್ನು ರವಾನಿಸುತ್ತಾನೆ. ಆತ ಇನ್ನೊಬ್ಬನಿಗೆ, ಹೀಗೆ ತಂಡದವರೆಲ್ಲಾ ಗುರಿಯತ್ತ ಸಾಗುತ್ತಲೇ ಇರುತ್ತಾರೆ. ಗುರಿಯನ್ನು ಮುಟ್ಟಿ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ- ಮಾರ್ಗದರ್ಶಿಯ ಸಲಹೆಗಳು, ಕ್ರೀಡೆಯ ನಿಯಮದ ಪಾಲನೆಯ ಬಗ್ಗೆ ಕಾಳಜಿ, ಧ್ಯೇಯದ ಚಿಂತನೆ, ಶಿಸ್ತು, ಪರಿಶ್ರಮ, ಏಕಾಗ್ರತೆ ಹಾಗೂ ಮತ್ತು ಸತತ ಅಭ್ಯಾಸ ಬೇಕಾಗುತ್ತವೆ. ಇವುಗಳಲ್ಲಿ ಯಾವುದೊಂದು ಕೊರತೆಯಾದರೂ ಕ್ರೀಡಾಪಟು ಪಂದ್ಯದಿಂದ ಹೊರಗಿರಬೇಕಾಗುತ್ತದೆ.


ಹೀಗೆಯೇ, ಆತ್ಮಕ್ರೀಡಃ ಆತ್ಮರತಿಃ, ಖೇಲತಿ ಮಮ ಹೃದಯೇ ರಾಮಃ, ಮನೆಯೊಳಗಾಡೋ ಗೋವಿಂದ ಎಂಬ ಸಾಹಿತ್ಯಗಳಲ್ಲಿ ಅಂತರಂಗ ಭಾವಧಾರೆಯನ್ನು ನೋಡಬಹುದು. ಇಂತಹ ಭಾವಧಾರೆ ಹರಿಯಬೇಕಾದರೆ, ಯೋಗಭೋಗಮಯವಾದ ಜೀವನವನ್ನನುಸರಿಸಿ ಬಾಳಿದರೆ ಸಾಧ್ಯವೆಂಬುದು ಸನಾತನ ಭಾರತೀಯರ ನಿಲುವು. ಇಲ್ಲಿ ಯೋಗವೆಂದರೆ ಸತ್ಯಸಾಕ್ಷಾತ್ಕಾರ ಎಂಬುದಾಗಿ ತಿಳಿಯಬೇಕೇ ಹೊರತು ಕೇವಲ ಆಸನಗಳು ಎಂಬುದಾಗಿ ತಿಳಿಯಬಾರದು. ಆಸನಗಳು ಯೋಗದ ಅಂಗವಷ್ಟೆ. ಇಂತಹ ಬಾಳಾಟಕ್ಕೆ ಫುಟ್ ಬಾಲ್ ಆಟದ ಕ್ರೀಡಾಪಟುಗಳಿರಬೇಕಾದ ಮೇಲಿನ ಅಂಶಗಳು ಅನುಸರಣೀಯ. ಯೋಗಕ್ಕೆ ವಿರುದ್ಧವಾದ ಬಾಳಾಟ ಅರ್ಥಹೀನವಾಗುತ್ತದೆಯಷ್ಟೆ ಅಲ್ಲದೆ, ಇಲ್ಲಿ ಸತ್ಯಸಾಕ್ಷಾತ್ಕಾರವನ್ನು ಮಾಡಿಕೊಳ್ಳದಿದ್ದಲ್ಲಿ ಮಹತ್ತಾದ ಆತ್ಮಹಾನಿಗೆ ಗುರಿಯಾಗುವನು ಎಂದು ಶ್ರುತಿಯು ಎಚ್ಚರಿಸುತ್ತದೆ.


ಈ ದೃಷ್ಟಿಯಿಂದ ಜೀವನದಲ್ಲಿ ಗುರಿಯೇನು ಮತ್ತು ಅದನ್ನು ಹೇಗೆ ಗಳಿಸಬೇಕೆಂಬ ವಿಚಾರ ಪ್ರತಿಯೊಬ್ಬ ಸಾಧಕನಿಗಿರಬೇಕಾಗುತ್ತದೆ. ಜೀವನದ ಧ್ಯೇಯದ ಬಗ್ಗೆ ನಮ್ಮ ರಾಷ್ಟ್ರದ ಮಹರ್ಷಿಗಳ ನಿಲುವತ್ತ ದೃಷ್ಟಿ ಹರಿಸೋಣ- "ಮಹಾಜನರೇ, ಮೇಲೇಳಿರಿ, ಅಜ್ಞಾನಮಯ ನಿದ್ರೆಯಲ್ಲಿದ್ದು ಮೈ ಮರೆಯಬೇಡಿ, ನಿಮ್ಮ ಜೀವನದ ಅಗ್ರದಲ್ಲಿ ನೆಲೆಸಿರುವ ನಿಮ್ಮನ್ನೂ ಅಗ್ರಕ್ಕೊಯ್ಯಬಲ್ಲ ಜ್ಙಾನಾಗ್ನಿಯನ್ನು ಬಯಸಿರಿ".  ಇಲ್ಲಿ ಎಚ್ಚರಿಸುವ ಧ್ವನಿಯನ್ನು ಗಮನಿಸಬೇಕು. ಧ್ಯೇಯವನ್ನು ಮರೆತರೆ, ಪರಿಶ್ರಮ ಪಡದಿದ್ದರೆ, ಸಾಧನೆಗೆ ವಿರುದ್ಧವಾದ ಸೆಳೆತಗಳಿಗೆ ಒಳಗಾದರೆ, "ಕಣ್ಣು ಕೈಕಾಲು ನಾಲಿಗೆ ಇರಲಿಕ್ಕೆ, ಮಣ್ಣುಮುಕ್ಕಿ ಮರುಳಾಗುವರೆ" ಎಂಬ ದಾಸರ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ; ಎಚ್ಚರ ತಪ್ಪಿದರೆ ಜೀವನದ ಮಹಾಧ್ಯೇಯದಿಂದ ಜಾರಬೇಕಾಗುತ್ತದೆ. ಇಲ್ಲಿ ಶ್ರೀರಂಗಮಹಾಗುರುಗಳ ಮಾತುಗಳು ಸ್ಮರಣೀಯ "ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಅವನ ಜೀವನ ಸಹಜವಾದ ಹಕ್ಕು, ಮೂಲಭೂತವಾದ ಹಕ್ಕು". ಇಂತಹ ಹಕ್ಕನ್ನು ಪಡೆಯಲು ಸದ್ಗುರುವಿನ ಗುಲಾಮರಾಗಬೇಕೆಂಬುದೇ ಜಗದ್ಗುರುವಾದ ಗೀತಾಚಾರ್ಯನ ಉಪದೇಶ- ಜ್ಞಾನಿಗಳನ್ನು ಸೇವಿಸಿ, ನಮಸ್ಕರಿಸಿ, ಸದ್ಭಾವನೆಯಿಂದ ಪ್ರಶ್ನೆಮಾಡಿ, ಅವರು ಜೀವನದ ಧ್ಯೇಯವನ್ನು ಹೊಂದುವ ಮಾರ್ಗವನ್ನು ಉಪದೇಶಿಸುವರು. ಇಲ್ಲಿ ಜ್ಞಾನಿಗಳೆಂದರೆ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡು ತಮ್ಮ ಸುಕೃತಿ ಶಿಷ್ಯರಿಗೂ ಅದನ್ನು ಮಾಡಿಸಬಲ್ಲ ಮಹಾತ್ಮರು ಎಂಬುದಾಗಿ ತಿಳಿಯಬೇಕು. ಉಪದೇಶವನ್ನು ಪಡೆದು "ಮರಳಿ ಯತ್ನವ ಮಾಡು" ಎಂಬಂತೆ ಸಾಧಕನು ಕ್ರೀಡಾಪಟುವಿನಂತೆ ಸತತ ಅಭ್ಯಾಸ, ಶಿಸ್ತು, ನಿಯಮಗಳ ಪಾಲನೆ, ಪರಿಶ್ರಮ, ಸತ್ಸಂಗ ಮತ್ತು ದ್ವಂದ್ವಗಳಲ್ಲಿ ಸಮಾನತೆ- ಇವುಗಳಿಂದ ಲಕ್ಷ್ಯವನ್ನು ಸೇರಬೇಕಾಗುತ್ತದೆ.


ಸೂಚನೆ: 15/7/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

Thursday, May 27, 2021

ನಮ್ಮ ದೇಶದ ತಾಯಿ-ತಂದೆಯರೇ ನಮಗೆ ಆದರ್ಶ (Namma Desada Tayi-Tandeyare Namage Adarsa)

ಡಾ. ರಾಮಮೂರ್ತಿ ಟಿ.ವಿ

(ಪ್ರತಿಕ್ರಿಯಿಸಿರಿ lekhana@ayvm.in)


ಲೋಕದಲ್ಲಿ ಸಂತಾನಪಾಲನೆ ಎಲ್ಲಾ ಪ್ರಾಣಿಗಳಲ್ಲಿಯೂ ಇರುವಾಗ, ಭಾರತೀಯರು ತಾಯಿತಂದೆಯರನ್ನುಮಾತೃದೇವೋ ಭವ, ಪಿತೃದೇವೋಭವ (ತೈತ್ತಿರೀಯ ಉಪನಿಷದ್ವಾಣಿ) ಹೀಗೆಲ್ಲಾ ಹೇಳುವುದು ಅತಿಶಯೋಕ್ತಿಯಲ್ಲವೆ? ಎನ್ನಿಸುವುದುಂಟು. ಈ ಋಷಿವಾಣಿಯು ವಿವೇಚನಾರ್ಹ.ಪ್ರಾಣಿಗಳಲ್ಲಿ ದುರ್ಲಭವಾದ ಮತ್ತು ಆತ್ಮಸಾಧನೆಗೆ ಬೇಕಾದಶರೀರವನ್ನು ಕೊಟ್ಟ ಮತ್ತು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಮಕ್ಕಳನ್ನು ಬೆಳೆಸುವ ತಾಯಿತಂದೆಯರು ಪೂಜನೀಯರಾಗುತ್ತಾರೆ ಎಂಬುದು ಭಾರತೀಯರಚಿಂತನೆ. ತಾಯಿಯಾದವಳು ಗರ್ಭಸ್ಥ ಶಿಶುವಿನ ದೆಸೆಯಿಂದ ಪಡುವ ಕಷ್ಟವನ್ನು ಶಂಕರಭಗವತ್ಪಾದರು 'ಮಾತೃಪಂಚಕ"ದಲ್ಲಿ ಸ್ತೋತ್ರಮಾಡುತ್ತಾರೆ. ಶ್ರೀರಂಗಮಹಾಗುರುಗಳ ಮಾತಿನಂತೆ-"ಭಗವಂತ-ಭಗವತಿಯರಿಂದ ಜೀವದ ಕಡೆಗೆಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ. ತಂದೆ, ಏನು ತಂದೆ? ಎಂದರೆ, ಜ್ಞಾನವನ್ನು ತಂದೆ-ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತುಬೆಳೆಸುವವಳೇ ತಾಯಿ". ಜ್ಞಾನಬೀಜವನ್ನೇ ಮುಂದೆ ನೀಡುವ ತಂದೆಯಾಗಬೇಕು ಎಂಬುದೇ ಸಹಜವಾದ ಅಪೇಕ್ಷೆ.ತಾಯಿಯು ಅಂತಹ ಬೀಜವನ್ನು ತನ್ನ ಗರ್ಭದಲ್ಲಿ ಪೋಷಿಸಿ ಸತ್ಸಂತಾನವನ್ನು ಬೆಳೆಸುವ ಪರಾ ಪ್ರಕೃತಿಯಪ್ರತಿನಿಧಿಯಾಗಬೇಕು. ತಾಯಿ-ತಂದೆಯರು ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸುವಂತಹ ಹರಿಸದೃಶ ಗುರುವನ್ನುತೋರಿಸುವಂತಹವರಾಗಬೇಕು. ಅದಕ್ಕೇ ಮಾತೃದೇವೋ ಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬಸಂಸ್ಕಾರ ಗುರುಕುಲದಲ್ಲೇ ಆಗುತ್ತಿತ್ತು.

ಇಂತಹ ತಾಯಿತಂದೆಯರನ್ನು ಪೂಜ್ಯಭಾವದಿಂದ ಆದರಿಸುವುದನ್ನು  ನಮ್ಮ ಸನಾತನ ಸಂಸ್ಕೃತಿಯಲ್ಲಿ ಯಜ್ಞವೆಂದೇಪರಿಗಣಿಸುತ್ತಾರೆ. ಕುಟುಂಬದ ಯಾವುದೇ ಶುಭ ಸಮಾರಂಭವಾಗಲೀ ತಂದೆತಾಯಿಯರ ಪಾದಪೂಜೆ ಮಾಡಿಅನುಮತಿ ಪಡೆದು ಪ್ರಾರಂಭಿಸುವುದು ಸತ್ಸಂಪ್ರದಾಯ. ಮಾತಾಪಿತೃಗಳ ಮತ್ತು ಆಚಾರ್ಯನ ಸೇವೆಯೇ ಪರಮತಪಸ್ಸು ಮತ್ತು ಅವರ ಅನುಮತಿಯಿಲ್ಲದೇ ಬೇರೆ ಯಾವ ಧರ್ಮವನ್ನೂ ಆಚರಿಸಲಾಗದು. ಮಾತಾಪಿತೃಗಳು ಮತ್ತುಅಚಾರ್ಯನು ಮೂರುಲೋಕಗಳನ್ನು ಪಡೆಯಲು ಕಾರಣಭೂತರಾದವರು.ಪುರಾಣಪ್ರಸಿದ್ಧವಾದ ಕಥೆಯೊಂದರಲ್ಲಿ ಗಣೇಶನು ಜನನೀ-ಜನಕರನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದಾಗ,ಉಮಾಮಹೇಶ್ವರರು ಇದು ತ್ರಿಲೋಕ ಪ್ರದಕ್ಷಿಣೆಗೆ ಸಮ ಎಂಬ ತೀರ್ಮಾನಕ್ಕೆ ಬಂದು ಗಣೇಶನಿಗೆ ಬಹುಮಾನಕೊಡುತ್ತಾರೆ. ಪಂಡರೀನಾಥನು ಪುಂಡರೀಕನ ಮಾತಾಪಿತೃಗಳ ಸೇವೆಯನ್ನು ಮೆಚ್ಚಿ ಇಟ್ಟಿಗೆಯ ಮೇಲೆ ತನ್ನಭಕ್ತನಿಗಾಗಿ ಕಾದಿರುವ ಕಥೆ ಲೋಕಪ್ರಸಿದ್ಧವಲ್ಲವೇ! ಹೀಗಾಗಿ ಪುಂಡರೀಕನು ಭಾಗವತೋತ್ತಮರಲ್ಲಿ ಒಬ್ಬನಾಗಿದ್ದಾನೆ.ಪಿತೃವಾಕ್ಯಪರಿಪಾಲಕ ಶ್ರೀರಾಮ, ತನ್ನ ತಂದೆಯ ಮಾತನ್ನುಳಿಸಲಿಕ್ಕಾಗಿ ೧೪ ವರ್ಷ ವನವಾಸ ಮಾಡುತ್ತಾನೆ.ಮಹಾಭಾರತದ ಪ್ರಖ್ಯಾತ ಪ್ರಸಂಗವಾದ ಯಕ್ಷನ ಪ್ರಶ್ನೆಯೊಂದಕ್ಕೆ ಯುಧಿಷ್ಠಿರನುಕೊಟ್ಟ ಉತ್ತರ- "ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ".  ಜ್ಞಾನಕ್ಕೆ ಮಿಗಿಲಾದದ್ದುಮತ್ತು ಜ್ಙಾನಕ್ಕೆ ಸಮಾನ ಹಾಗೂ ಪವಿತ್ರವಾದದ್ದು ಇಲ್ಲ, ತಂದೆಯಾದವನು ಇಂತಹ ಜ್ಞಾನವನ್ನು ಪಡೆಯುವುದಕ್ಕೆದಿಗ್ದರ್ಶನ ಮಾಡುವವನಾದ್ದರಿಂದ ಅವನು ಆಕಾಶಕ್ಕಿಂತಲೂ ಎತ್ತರ. ತಾಯಿಯ ಬಗ್ಗೆ  ಕೃತಜ್ಞತಾಭಾವ ತುಂಬಿದಾಗ  ಅದುಇಳಿಸಲಾರದ ಭಾರವಾಗುತ್ತದೆ. ತಾಯಿಯ ಕೃತಜ್ಞತೆಯನ್ನು ತೀರಿಸುವುದು ಅಸಾಧ್ಯವಾದ್ದರಿಂದ ಅವಳು ಭೂಮಿಗಿಂತ ಭಾರವಾಗುತ್ತಾಳೆ. ಇಂತಹ ಜ್ಞಾನದ ಮಾರ್ಗವನ್ನು ತೋರಿಸುವ ನಮ್ಮ ದೇಶದ ತಾಯಿ-ತಂದೆಯರು ಆದರ್ಶ. ತಾಯಿ-ತಂದೆಯರಲ್ಲಿ ಪೂಜ್ಯ ಭಾವ ಕಾಣಬೇಕಾದುದು ಮಕ್ಕಳ ಆದರ್ಶ. ಭಾರತೀಯರಾಗಿ ಈ ಆದರ್ಶಗಳನ್ನು ಪಾಲಿಸೋಣ.

ಸೂಚನೆ: 27/5/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.