Thursday, October 28, 2021

ಭಗವಂತನ ಸಹವಾಸಕ್ಕೆ ಬೇಕು ಉಪವಾಸ (Bhagavantana Sahavaasakke Beku Upavaasa)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


  


ಜಪಾನಿನ ಪ್ರಾಚಾರ್ಯರಾದ ಯೋಶಿನೋರಿ ಓಸೂಮಿ ರವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ೨೦೧೬ರ ನೋಬೆಲ್ ಪಾರಿಷೋತಕ ನೀಡಲಾಯಿತು. ಈ ಗೌರವ ಸಂದಿದ್ದು ಅವರ ಆಟೋಫಗಿ ಬಗೆಗಿನ ವೈಜ್ಞಾನಿಕ  ಸಂಶೋಧನೆಗಾಗಿ. ಆಟೋಫಗಿ ಎಂದರೆ ಮಾನವ ಶರೀರದಲ್ಲಿನ ಅನಾರೋಗ್ಯ ಜೀವಕೋಶಗಳು ಹಾಗೂ ಅನುಪಯುಕ್ತ ಪ್ರೋಟಿನ್ ಗಳ ಸ್ವಯಂಭಕ್ಷಣೆ. ಉಪವಾಸ ಮಾಡುವ ಸಂಧರ್ಭದಲ್ಲಿ ಈ ಪ್ರಕ್ರಿಯೆ ಸಹಜವಾಗಿ ಆಗುತ್ತದೆ. ಇದರಿಂದಾಗಿ ಮಾನವನ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.  


ಪುರಾತನ ಕಾಲದಿಂದಲೂ ಉಪವಾಸದ ಬಗ್ಗೆ ಪುರಾಣ, ಆಯುರ್ವೇದ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಚಿಂತನೆ ನಡೆದಿದೆ. ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಇಲ್ಲದಿರಬಹುದು. ಆಯುರ್ವೇದವು ಉಪವಾಸದಿಂದ ಜೀರ್ಣಾಂಗ ವ್ಯವಸ್ಥೆ ಶುದ್ಧಗೊಳ್ಳುತ್ತದೆ ಹಾಗೂ ವಿಷಾಂಶವು ಕಡಿಮೆಯಾಗುತ್ತದೆ ಎಂದು ತಿಳಿಸುತ್ತದೆ. "ಶರೀರಮಾದ್ಯಂ ಖಲು ಧರ್ಮಸಾಧನಂ" ಎಂಬಂತೆ ಶರೀರದ ಆರೋಗ್ಯವು ಧರ್ಮಸಾಧನೆಗೆ ಮತ್ತು ಆಧ್ಯಾತ್ಮಿಕ ಸಾಧನೆಗೆ ಮುಖ್ಯವಾಗಿರುತ್ತದೆ. 


ಪ್ರತಿಜೀವಿಯೂ ಶಾಂತಿಸಮೃದ್ಧಿಗಾಗಿ ಹಂಬಲಿಸುತ್ತಾನೆ. ಶ್ರೀರಂಗಮಹಾಗುರುಗಳ ಮಾತುಗಳು ಇಲ್ಲಿ ಸ್ಮರಣೀಯ " ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಜೀವನ ಸಹಜವಾದ ಹಕ್ಕು; ಮೂಲಭೂತವಾದ ಹಕ್ಕು." ಈ ಸುಖ ಶಾಂತಿ ಪಡೆಯಲು ಭಾರತದ ಋಷಿಗಳು ಕಾಲದೇಶಗಳಲ್ಲಿ ಬರುವ ಸಂದರ್ಭಗಳನ್ನು ಗುರಿತಿಸಿ ಕೆಲವು ಆಚರಣೆಗಳನ್ನು ತಂದಿರುವುದುಂಟು. ಕಾಲಚಕ್ರದಲ್ಲಿ ಬರುವ ಸನ್ನಿವೇಶಗಳನ್ನು ಉಪಯೋಗಮಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ತಂದಿರುವ ಮಾರ್ಗಗಳಲ್ಲಿ ಏಕಾದಶಿಯಂದು ಮಾಡುವ ಉಪವಾಸವೂ ಒಂದು. 


ಉಪವಾಸದ ಆಚರಣೆಗೆ ಒತ್ತುಕೊಡುವ ಕಥೆಗಳಲ್ಲಿ ಅಂಬರೀಷ ಮಹಾರಾಜನ ಕಥೆ ಪುರಾಣಪ್ರಸಿದ್ಧ. ಆತ ಮಹಾವಿಷ್ಣುವಿನ ಪರಮ ಭಕ್ತನಾಗಿದ್ದು, ಪ್ರತಿ ಏಕಾದಶಿ ಮತ್ತು ಮರುದಿನ ದ್ವಾದಶಿಯಲ್ಲಿ ವ್ರತಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದನು. ಅವನ ರಕ್ಷಣೆಗಾಗಿ ಮಹಾವಿಷ್ಣುವಿನ ಸುದರ್ಶನ ಚಕ್ರವೇ ಅವನಲ್ಲಿತ್ತು. ದೂರ್ವಾಸಮುನಿಗಳೊಮ್ಮೆ ದ್ವಾದಶಿದಿನದಂದು ಅಂಬರೀಷನ ಅರೆಮನೆಗೆ ಬಂದು ಸತ್ಕಾರಗಳನ್ನು ಸ್ವೀಕರಿಸಿ, ಸ್ನಾನಾಹ್ನಿಕಗಳನ್ನು ಪೂರೈಸಿಕೊಂಡು ಬರುವೆನೆಂದು ತಿಳಿಸಿ ಹೊರಟವರು ದ್ವಾದಶಿಮುಹೂರ್ತ ಮುಗಿಯುವ ವೇಳೆಗೆ ಬರಲಿಲ್ಲ. ಆಗ ರಾಜನು ಕೇವಲ ನೀರನ್ನು ಪ್ರಾಶನಮಾಡುವುದು ಅನಿವಾರ್ಯವಾಯಿತು. ಆ ಕಾರಣಕ್ಕಾಗಿ ದೂರ್ವಾಸರು ಕೋಪಾವಿಷ್ಟರಾಗಿ ಅಂಬರೀಷನನ್ನು ಸಂಹರಿಸಲು ಪ್ರಯತ್ನ ಪಟ್ಟಾಗ ಸುದರ್ಶನಚಕ್ರವು ದೂರ್ವಾಸರ ಬೆನ್ನು ಹತ್ತಿತು. ಆಗ ದೂರ್ವಾಸರು ತ್ರಿಮೂರ್ತಿಗಳಲ್ಲಿ ಶರಣಾದರೂ, ಅವರು ರಕ್ಷಿಸದೆ, ಕೊನೆಗೆ ಅಂಬರೀಷನಲ್ಲಿಯೇ ಶರಣಾದರು. ಸುದರ್ಶನ ಚಕ್ರವು ಮನಸ್ಸ್ತತ್ವವನ್ನು ಸೂಚಿಸುತ್ತದೆ. ಅಂಬರೀಷನಿಗೆ ಮನಸ್ಸಿನ ಮೇಲೆ ಪೂರ್ಣಹತೋಟಿ ಇದ್ದುದರಿಂದ, ಸುದರ್ಶನಚಕ್ರವನ್ನು ಮಹಾವಿಷ್ಣುವು ಅದನ್ನು ಅಂಬರೀಷನಿಗೆ ಕೊಟ್ಟಿದ್ದನು ಎಂಬುದು ಸೂಕ್ಷ್ಮಾರ್ಥ. ಕೋಪತಾಪಗಳಿಗೆ ಅಲ್ಲಿ ಜಾಗವಿಲ್ಲ. ಆದ್ದರಿಂದ ದೂರ್ವಾಸರ ಕೋಪತಾಪಗಳು  ಫಲಿಸದೆ ಅವರು ಅಂಬರೀಷನಲ್ಲಿಯೇ ಶರಣಾಗಬೇಕಾಯಿತು. ಅಂತಹ ಭಕ್ತರ ಬಗ್ಗೆ ಪುರಂದರದಾಸರು ಕೀರ್ತನೆ ಮಾಡಿದ್ದಾರೆ " ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ? ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ"ಕಾಲಚಕ್ರದಲ್ಲಿ ಬರುವ ಸಂದರ್ಭಗಳನ್ನು ಉಪಯೋಗಿಸಿ ನಾವು ಭಗವತ್ಸಾಕ್ಷಾತ್ಕಾರವೆಂಬ ಮಹಾಧ್ಯೇಯವನ್ನು ಪಡೆಯುವಂತಾಗಲಿ ಎಂದು ಹಾರೈಸೋಣ.


ಸೂಚನೆ: 28/10/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.