Saturday, October 9, 2021

ಷೋಡಶೋಪಚಾರ -20 ಉಪಸಂಹಾರ (Shodashopachaara -20 UpasaMhaara)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಆವಾಹನಾದಿ ಹದಿನಾರು ಪೂಜೆಗಳನ್ನು ಯಥಾಶಕ್ತಿ ಅವುಗಳ ಹಿನ್ನೆಲೆಯೊಂದಿಗೆ, ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಈ ಎಲ್ಲಾ ಉಪಚಾರಗಳು ನಮಗೆ ಭಗವಂತನ ಸಾಮೀಪ್ಯವನ್ನೋ, ಸಾಂಗತ್ಯವನ್ನೋ ಒದಗಿಸಿಕೊಡಲು ಸಹಕರಿಸುತ್ತವೆ. ಪ್ರತಿಯೊಂದು ಉಪಚಾರವೂ ಅತ್ಯಂತ ಶ್ರೇಷ್ಠವಾದದ್ದೇ ಆಗಿದೆ. ಶ್ರದ್ಧಾಪೂರ್ವಕವಾಗಿ ಮಾಡಿದ ಒಂದೊಂದು ಉಪಚಾರವೂ ಭಗವಂತನ ಪ್ರೀತಿಯನ್ನು ಗಳಿಸಲು ಪೂರಕವೇ ಆಗಿದೆ. ಎಲ್ಲ ಉಪಚಾರಗಳನ್ನೂ ಮಾಡಬಹುದು. ಅಥವಾ ಯಾರಿಗೆ ಯಾವುದನ್ನು ಮಾಡಲು ಸಾಮರ್ಥ್ಯವಿದೆಯೋ ಅದಕ್ಕೆ ತಕ್ಕಂತೆ ಆಯಾ ಸಂದರ್ಭದಲ್ಲಿ ಒದಗಬಹುದಾದ ಸಾಮಗ್ರಿಗಳಿಗೆ ಅನುಗುಣವಾಗಿಯೂ ಉಪಚಾರಗಳನ್ನು ಮಾಡಬಹುದು. ಪ್ರತಿಯೊಂದು ಉಪಚಾರಕ್ಕೂ ಅದರದೇ ಆದ ವಿಶೇಷ ಪ್ರಯೋಜನ ಅಥವಾ ಫಲವಂತೂ ಇದ್ದೇ ಇದೆ. 

ಗೌತಮಧರ್ಮದ ಕ್ರಿಯಾಕಾಂಡದಲ್ಲಿ ಹೇಳಿರುವಂತೆ ಆವಾಹನಾದಿ ಹದಿನಾರು ಉಪಚಾರಗಳಿಗೆ ವಿಶೇಷ ಫಲವಿದೆ. "ಆವಾಹನ"ದಿಂದ ನೂರು ಅಶ್ವಮೇಧಯಾಗವನ್ನು ಮಾಡಿದ ಫಲವು ಲಭಿಸುತ್ತದೆ. "ಆಸನ"ದಿಂದ ಇಂದ್ರನಂತೆ ಸಕಲ ಐಶ್ವರ್ಯವನ್ನು ಪಡೆಯುತ್ತಾನೆ. "ಪಾದ್ಯ"ದಿಂದ ಸಕಲ ಪಾತಕಗಳ ನಿವೃತ್ತಿಯು ಉಂಟಾಗುತ್ತದೆ. "ಅರ್ಘ್ಯ"ದಿಂದ ಎಲ್ಲ ಪಾಪಗಳ ನಿವೃತ್ತಿಯು ಆಗುತ್ತದೆ. "ಆಚಮನ"ದಿಂದ ಅಂತರಂಗ ಮತ್ತು ಬಹಿರಂಗದ ಶುದ್ಧಿಯಾಗುತ್ತದೆ. "ಸ್ನಾನ"ದಿಂದ ಸರ್ವವಿಧವಾದ ಭಯನಿವಾರಣೆಯಾಗುತ್ತದೆ. "ವಸ್ತ್ರ"ದಿಂದ ಆಯುಷ್ಯವೃದ್ಧಿಯು ಲಭಿಸುತ್ತದೆ. "ಯಜ್ಞೋಪವೀತ"ದಿಂದ ಬ್ರಹ್ಮಲೋಕಪ್ರಾಪ್ತಿ ಉಂಟಾಗುತ್ತದೆ. "ಗಂಧ"ದಿಂದ ಗಂಧರ್ವತ್ವದ ಪ್ರಾಪ್ತಿಯಾಗುತ್ತದೆ. "ಪುಷ್ಪ"ಗಳಿಂದ ಪುಣ್ಯದ ಪ್ರಾಪ್ತಿಯಾಗುತ್ತದೆ, "ಧೂಪ"ದಿಂದ ಪಾಪಗಳು ಭಸ್ಮವಾಗುತ್ತವೆ. "ದೀಪ"ದಿಂದ ಮೃತ್ಯುವಿನ ನಾಶವಾಗುತ್ತದೆ. "ನೈವೇದ್ಯ"ದಿಂದ ಸರ್ವಕಾಮಪ್ರಾಪ್ತಿ ಎಂಬುದಾಗಿ ಹೇಳಿದೆ. "ತಾಂಬೂಲ"ದಿಂದ ರೂಪವು ಸಿಗುವುದು, "ಪ್ರದಕ್ಷಿಣ"ದಿಂದ ಸತ್ಯಲೋಕಪ್ರಾಪ್ತಿ ಎಂಬುದಾಗಿ ಪ್ರತ್ಯೇಕವಾಗಿ ಒಂದೊಂದಕ್ಕೂ ವಿಶಿಷ್ಟ-ಫಲವನ್ನು ಹೇಳಲಾಗಿದೆ. ಎಲ್ಲದರ ಒಟ್ಟಾರೆ ತಾತ್ಪರ್ಯವಿಷ್ಟೇ- ಅದು ಭಗವಂತನ ಸಾಕ್ಷಾತ್ಕಾರ. ಇದಕ್ಕಾಗಿಯೇ ನಮ್ಮ ಹುಡುಕಾಟ, ಬಾಳಾಟ. ನಮ್ಮ ಬಾಳಾಟವೇ ಒಂದು ಭಗವಂತನ ಪೂಜೆಯಾಗಬೇಕಷ್ಟೇ! ಶ್ರೀರಂಗಮಹಾಗುರುಗಳ ಒಂದು ಅಮೃತವಾಣೀ ಇಲ್ಲಿ ಬಹಳ ಪ್ರಸ್ತುತ. "ಯಾವ ದೇವನ ಪರಮ-ಪ್ರಕಾಶದಲ್ಲಿ ನಲಿಯುತ್ತಿದ್ದ ಜೀವಿಗಳು, ಯಾವ ದೇವನನ್ನು ಬಿಟ್ಟು ಅಗಲಿ, ತಿರುಗಿ ಆ ದೇವನನ್ನು ಸೇರಲೋಸುಗ ಒಂದು ದೈವೀಕರೆಗೊಳಪಟ್ಟು ಆವನ ಕಡೆಗೆ ಧಾವಿಸುತ್ತಿರುವರೋ ಅಂತಹ ಸತ್ಯಸುಂದರವೂ ಮಂಗಲಕರವೂ ಆದ ಜೀವನವನ್ನು ಮಾಡಲು ಹೊರಟ ಜೀವಿಗಳಿಗೆ ನಿತ್ಯ ಸತ್ಯನಾರಾಯಣನ ಪೂಜೆಯು ಬೇಕು" ಎಂದು. ಇಂತಹ ಪೂಜೆಯನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗಲಿ. ಈ ನನ್ನ ಚಿಕ್ಕ ಪ್ರಯತ್ನಕ್ಕೆ ಅನುಗ್ರಹಿಸಿದ ಎಲ್ಲ ಗುರುಹಿರಿಯರಿಗೂ ನಮಸ್ಕರಿಸುತ್ತ ಈ ಷೋಡಶೋಪಚಾರವೆಂಬ ಲೇಖನಮಾಲಿಕೆಗೆ ಮಂಗಳವನ್ನು ಮಾಡುತ್ತೇನೆ.  

ಸೂಚನೆ : 09/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.