Sunday, October 24, 2021

ಶ್ರೀರಾಮನ ಗುಣಗಳು - 28 ನರೋತ್ತಮ - ಶ್ರೀರಾಮ (Sriramana Gunagalu - 28 Narotthama Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


 

ಶ್ರೀರಾಮನನ್ನು 'ನರೋತ್ತಮ' ಎಂಬ ಗುಣವಿಶೇಷದಿಂದ ಕರೆಯಲು ಬಲವಾದ ಕಾರಣವಿದೆ. ನರರಲ್ಲಿ ಉತ್ತಮನಾದವನನ್ನು ನರೋತ್ತಮ ಎನ್ನಲಾಗುತ್ತದೆ. ಇದು ಶ್ರೀರಾಮನಲ್ಲಿ ನೂರಕ್ಕೆ ನೂರು ಅನ್ವಯವಾಗುವ ಪದವಾಗಿದೆ. ಈ ಸೃಷ್ಟಿಯಲ್ಲಿ ಎಂಭತ್ತನಾಲ್ಕು ಲಕ್ಷ ಜೀವಜಾತಿಗಳಿವೆ. ಇವುಗಳಲ್ಲಿ ಮಾನವನದು ಅತ್ಯಂತ ಉತ್ತಮವಾದ ಸೃಷ್ಟಿ. ಸೃಷ್ಟಿಯ ಕಾರ್ಯವನ್ನು ಮಾಡುವಾಗ ಬ್ರಹ್ಮನಿಗೆ ಯಾವ ಬಗೆಯ ಸೃಷ್ಟಿಯನ್ನು ಮಾಡಿದರೂ ಅಲ್ಲಿ ಸಮಾಧಾನ ಕಂಡಿಲ್ಲವಂತೆ. ಒಂದಲ್ಲ ಒಂದು ಐಬು ಅವನ ಮನಸ್ಸಿಗೆ ಬರುತ್ತಿತ್ತಂತೆ. ಆದರೆ ಯಾವಾಗ ಮಾನವನ ಸೃಷ್ಟಿಯನ್ನು ಮಾಡಿದನೋ ಆಗ ಭಗವಂತ ಬಹಳ ತೃಪ್ತಿಯನ್ನು ಪಟ್ಟನು ಎಂಬುದಾಗಿ ಕೇಳುತ್ತೇವೆ. ಪ್ರತಿಯೊಬ್ಬರೂ ಬಯಸುವುದು ಪೂರ್ಣವನ್ನು. ಅಥವಾ ಯಾವುದರಿಂದ ಪೂರ್ಣವಾದುದನ್ನು ಪಡೆಯಲು ಸಾಧ್ಯವೋ, ಅಂತಹದ್ದನ್ನು ಪಡೆಯಬೇಕೆಂಬುದೂ ಕೂಡ ಅಷ್ಟೇ ಸಹಜವಾದ ಬಯಕೆಯಾಗಿರುತ್ತದೆ. ಈ ಕಾರಣದಿಂದ ಮಾನವನ ಸೃಷ್ಟಿಯನ್ನು ಪೂರ್ಣವಾದ ಸೃಷ್ಟಿ ಎನ್ನಲಾಗುತ್ತದೆ. ಅಂದರೆ ಭಗವಂತನನ್ನು ಪೂರ್ಣ ಎನ್ನುತ್ತಾರೆ. ಆ ಪೂರ್ಣವಾದ ವಿಷಯವನ್ನು ನಮ್ಮಲ್ಲಿ ತುಂಬಿಕೊಳ್ಳಲು  ಅಂತಹ ಉತ್ಕೃಷ್ಟ ಒಡಲು ಬೇಕಲ್ಲವೇ!  ಶ್ರೀರಂಗಮಹಾಗುರುಗಳು, ಸತ್ಯವೂ, ಸುಂದರವೂ, ಮಂಗಳಕರವೂ ಆದ ಭಗವಂತನನ್ನು ಹೊತ್ತಿದೆ ಈ ಶರೀರ ಎಂಬ ಭಾವದಲ್ಲಿಯೇ ಶರೀರವನ್ನು ಸನಾತನಾರ್ಯ ಭಾರತ ಮಹರ್ಷಿಗಳು ನೋಡಿದ್ದಾರೆ- ಎಂದು ನೆನಪಿಸುತ್ತಿದ್ದರು. ಅಂದರೆ ನಮ್ಮ ಭಾರತೀಯ ಋಷಿಮಹರ್ಷಿಗಳು ಮಾನವನ ದೇಹವನ್ನು ಒಂದು ಮಾಂಸದ ಮುದ್ದೆಯನ್ನಾಗಿ ನೋಡದೆ, ಇದನ್ನು 'ಭಗವಂತನು ವಾಸ ಮಾಡುವ ಮಂದಿರ' ಎಂದು ಕೊಂಡಾಡಿದ್ದಾರೆ. "ಒಂದು ವೇಳೆ ಸತ್ಯವನ್ನು ಸಾಧಿಸಬೇಕೆಂದಿದ್ದರೆ ಈ ಮಾನವನ ಜನ್ಮದಲ್ಲೇ ಸಾಧಿಸಿಕೊಳ್ಳಿ. ಇಲ್ಲವಾದರೆ ಬಹಳ ದೊಡ್ದದಾದ ಹಾನಿಯನ್ನು ಅನುಭವಿಸುತ್ತೀರಿ" ಎಂಬ ಎಚ್ಚರಿಕೆಯನ್ನೂ ಉಪನಿಷತ್ತು ಕೊಟ್ಟಿದೆ. ಇಂತಹ ಮಾನವನ ಜನ್ಮವನ್ನು ಪಡೆಯುವುದೇ ಪುಣ್ಯ ಎಂದು ನಮ್ಮೆಲ್ಲ ಸಾಹಿತ್ಯಗಳು ಸಾರಿವೆ. ಇಷ್ಟೆಲ್ಲಾ ಹಿರಿಮೆ ಮಾನವನ ಜನ್ಮಕ್ಕೆ ಇರಬೇಕಾದರೆ  ಭಗವಂತನೇ ಶ್ರೀರಾಮರೂಪಿಯಾಗಿ ಮಾನವನ ಶರೀರದಲ್ಲಿ ಅವತಾರವನ್ನು ಎತ್ತಿ ಬಂದರೆ ಆ ಶರೀರದಲ್ಲಿ  ಶ್ರೀರಾಮನ ವ್ಯಕ್ತಿತ್ವಕ್ಕೆ ಅದೆಷ್ಟು ಮಹತ್ತ್ವ ಇರಬೇಕು! 

ರಾವಣನೆಂಬ ಮಹಾರಕ್ಕಸನನ್ನು ಬಡಿಯಲು ಮಾನವನ ರೂಪದಲ್ಲೆ ಧರೆಗಿಳಿಯಬೇಕಾದುದು ಅನಿವಾರ್ಯ. ಏಕೆಂದರೆ ರಾವಣನು, ಮಾನವನನ್ನು ಬಿಟ್ಟು ಬೇರೆ ಯಾರಿಂದಲೂ ಸಾವು ಬರಬಾರದು ಎಂಬ ವರವನ್ನು ಪಡೆದಿದ್ದವನು. ಮಂದಬುದ್ಧಿಯಾದ ರಕ್ಕಸನಿಗೆ, ಪರಿಪೂರ್ಣನಾದ ಭಗವಂತನು ಮಾನವನ ರೂಪದಲ್ಲಿ ಅವತರಿಸಿದರೆ ತನ್ನ ಅಂತ್ಯವಾಗುತ್ತದೆ ಎಂಬ ಸಾಮಾನ್ಯ ಅರಿವೂ ಇಲ್ಲದೇ ಹೋಯಿತು;  ಹುಟ್ಟಿದವನಿಗೆ ಅಮರತ್ವ ಸಾಧ್ಯವಿಲ್ಲವಷ್ಟೇ. ಆದ್ದರಿಂದ 'ಮಾನುಷೀರೂಪಮಾಶ್ರಿತಮ್' ಎಂಬಂತೆ ಭಗವಂತನು ಉತ್ಕೃಷ್ಟವಾದ  ಮಾನವನ ರೂಪದಲ್ಲಿ ಅವತರಿಸಬೇಕಾಯಿತು. ಶ್ರೀರಾಮನು ಯಾವ ರೀತಿಯಾಗಿ ಸರ್ವಸಮ್ಮತನಾದ ವ್ಯಕ್ತಿತ್ವ ಉಳ್ಳವನಾಗಿದ್ದ ಎಂಬುದಕ್ಕೆ ಈ ಲೋಕದಲ್ಲಿ ಸರ್ವಗುಣಸಂಪನ್ನನಾದ ವ್ಯಕ್ತಿ ಯಾರು? ಎಂಬ ವಾಲ್ಮೀಕಿಗಳ ಪ್ರಶ್ನೆಗೆ ನಾರದರು ಕೊಟ್ಟ ಉತ್ತರವೇ ಸಾಕು. ನಾರದರು ಶ್ರೀರಾಮನಲ್ಲಿದ್ದ ಅಸಾಧಾರಣಗುಣಗಳನ್ನು ಪಟ್ಟಿ ಮಾಡಿ, ಜಗತ್ತಿನಲ್ಲೇ ಅಂತಹ ಮಾನವರೂಪ ಮತ್ತೊಂದಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಶ್ರೀರಾಮನೂ ಕೂಡ ತನ್ನ ಮಾನವತ್ವವನ್ನೇ ರಾಮಾಯಣದ ಉದ್ದಕ್ಕೂ ಪ್ರದರ್ಶಿಸಿ ಲೋಕೋತ್ತರನಾದ ನರೋತ್ತಮನಾದ.

ಸೂಚನೆ : 24/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.