Sunday, October 17, 2021

ಶ್ರೀರಾಮನ ಗುಣಗಳು - 27 ಪರೇಂಗಿತಜ್ಞ- ಶ್ರೀರಾಮ(Sriramana Gunagalu - 27 Parengithagnya-Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


'ಪರೇಂಗಿತ' ಎಂಬುದು ಶ್ರೀರಾಮನಲ್ಲಿರುವ ಅತಿವಿಶಿಷ್ಟಗುಣ. ಅರಿವು ಎರಡು ಬಗೆ- ಒಂದನೆಯದು, ತನ್ನನ್ನು ತಾನು ತಿಳಿದುಕೊಳ್ಳುವುದು, ಮತ್ತು  ಎರಡನೆಯದು-ಬೇರೆಯವರನ್ನು ತಿಳಿದುಕೊಳ್ಳುವುದು.  ಈ ಎರಡರ ಅರಿವನ್ನು ಪಡೆಯುವುದು ಬಹಳ ಕಷ್ಟವೇ. ಕೆಲವೊಮ್ಮೆ ನಮ್ಮನ್ನು ನಾವು ತಿಳಿದುಕೊಳ್ಳಬಹುದು;  ಇನ್ನೊಬ್ಬರನ್ನು ಅರಿತುಕೊಳ್ಳುವುದು ಇನ್ನೂ ಕಷ್ಟವೇ ಸರಿ. ಇದಕ್ಕೆ ಬೇಕು ಅತಿವಿಶಿಷ್ಟವಾದ ಬುದ್ಧಿಮತ್ತೆ. ಅದು ಶ್ರೀರಾಮನಲ್ಲಿ ಇತ್ತು ಎಂಬ ಕಾರಣದಿಂದ ಅವನನ್ನು 'ಪರೇಂಗಿತಜ್ಞ' ಎಂಬುದಾಗಿ ಹೇಳುತ್ತಾರೆ. 

ಬೇರೆಯವರ ಮನಸ್ಸನ್ನು ತಿಳಿಯಲು ಅನೇಕ ಸಾಧನಗಳಿವೆ. ಅವುಗಳಲ್ಲಿ ಒಂದು 'ಇಂಗಿತ'. ಹಿತೋಪದೇಶದಲ್ಲಿ ಇದರ ಬಗ್ಗೆ ಒಂದು ಮಾತು ಬರುತ್ತದೆ. "ಆಕಾರ, ಇಂಗಿತ, ಗತಿ, ಚೇಷ್ಟಾ, ಭಾಷಣ, ನೇತ್ರ ಮತ್ತು ಮುಖದ ಚಲನೆ ಇವುಗಳಿಂದ ಬೇರೆಯವರ ಮನಸ್ಸಿನಲ್ಲಿರುವ ಭಾವವನ್ನು ತಿಳಿಯಬಹುದು" ಎಂದು. ಕಾಳಿದಾಸನು ರಘುವಂಶ ಮಹಾಕಾವ್ಯದಲ್ಲಿ ರಘುವಂಶ-ಮಹಾರಾಜರ ಗುಣಗಳನ್ನು ಹೇಳುವಾಗ 'ಗೂಢಾಕಾರೇಂಗಿತಸ್ಯ ಚ' ಎಂಬುದಾಗಿ ಹೇಳುತ್ತಾನೆ. 'ಇಂಗಿತ' ಎಂದರೆ ಹೃದಯದ ಭಾವನೆ. ಭಾವವು ಹೃದಯದಲ್ಲಿದ್ದಾಗ ಅದಕ್ಕೆ ಇಂಗಿತವೆನ್ನುತ್ತಾರೆ. ಅದೇ ಭಾವವು ಹೊರಕ್ಕೆ ಚೇಷ್ಟಾ(ಕ್ರಿಯಾ)ರೂಪವಾಗಿ ವಿಕಾಸವಾದಾಗ ಅದನ್ನು 'ಆಕೃತಿ' ಎನ್ನುತ್ತಾರೆ. ಅಂದರೆ ಹೊರಗಡೆಯ ಚೇಷ್ಟಾದಿಗಳಿಂದ ತಿಳಿಯದೇ ನೇರವಾಗಿ ಒಳಗಿನ ಭಾವದ ಅರಿವನ್ನು ಪಡೆಯುವಂತಹದ್ದು ಚತುರಮತಿಗಳಿಗೆ ಮಾತ್ರ ಸಾಧ್ಯ. ಅಂತಹ ಗುಣವು ಶ್ರೀರಾಮನಲ್ಲಿತ್ತು. ಅಷ್ಟೇ ಅಲ್ಲ, ಕಾಳಿದಾಸನು ಹೇಳುವಂತೆ ರಘುವಂಶಮಹಾರಾಜರಲ್ಲಿ ಕಂಡುಬರುವ ಸಹಜವಾದ ಗುಣವೂ ಹೌದು. ಆದಕಾರಣ ರಘುಸಂತತಿಯಾದ ಶ್ರೀರಾಮನಲ್ಲಿ ಈ ಗುಣವು ಅತಿಶಯವಾಗಿ ಗೋಚರಿಸಿತು. ಈ ಗುಣವು ವ್ಯಕ್ತಿಯ ಸಮಗ್ರಪರಿಚಯಕ್ಕೆ ಕಾರಣವಾಗುತ್ತದೆ. ಇದರಿಂದ ಆ ವ್ಯಕ್ತಿಯನ್ನು ಅಳೆಯಲು ಅಥವಾ ಪರಿಚಯ ಮಾಡಿಕೊಳ್ಳಲು ಸುಲಭವೂ ಹೌದು. ಇದಕ್ಕೆ ಶ್ರೀಮದ್ರಾಮಾಯಣದಲ್ಲಿ ಬರುವ ಒಂದೆರಡು ಉದಾಹರಣೆಗಳನ್ನು ಕಾಣಬಹುದು. 

ಅಗ್ರಜನಾದ ಶ್ರೀರಾಮನನ್ನು ಅರಣ್ಯಕ್ಕೆ ಅಟ್ಟಿದ ಅಮ್ಮನ ನಿಲುವನ್ನು ಒಪ್ಪದೇ, ಅಣ್ಣನಾದ ರಾಮನೇ ರಾಜನಾಗಬೇಕೆಂಬುದನ್ನು ಭದ್ರವಾಗಿ ನಿಶ್ಚಯಿಸಿದ ಭರತನು ಚಿತ್ರಕೂಟಕ್ಕೆ ಸೈನ್ಯಸಮೇತನಾಗಿ ಬರುತ್ತಾನೆ. ಇದನ್ನು ದೂರದಿಂದ ನೋಡಿದ ಲಕ್ಷ್ಮಣ ಕ್ರೋಧಗೊಳ್ಳುತ್ತಾನೆ. ಆಗ ಭರತನ ಆಗಮನದ ಆಂತರ್ಯವನ್ನು ತಿಳಿದ ಶ್ರೀರಾಮನು ಲಕ್ಷ್ಮಣನನ್ನು ಸಮಾಧಾನ ಮಾಡಿ "ನೋಡು ಲಕ್ಷ್ಮಣ! ಭಾತೃವತ್ಸಲನಾದ ಭರತನು ನನ್ನ ಪ್ರಾಣಕ್ಕೆ ಸಮ, ಅವನು ರಾಜ್ಯವನ್ನು ಹಿಂದಿರುಗಿಸಲು ಬಂದಿದ್ದಾನೆ, ಇಲ್ಲಿ ಅವನ ಆಗಮನಕ್ಕೆ  ಬೇರಾವ ಕಾರಣವಿಲ್ಲ" ಎಂಬುದಾಗಿ ಭರತನನ್ನು ಅಳೆದ ರೀತಿ ಅವನ ಪರೇಂಗಿತಜ್ಞತೆಗೆ ಉತ್ತಮವಾದ ಉದಾಹರಣೆಯಾಗಿದೆ. ಲಕ್ಷ್ಮಣನಿಗೆ ಅರಿವಾಗದ ಅಂತಃಕರಣವನ್ನು ಶ್ರೀರಾಮನು ಬಹಳ ಸುಲಭವಾಗಿ ಅರಿತ.  

ರಾಮದಾಸನಾದ ಹನುಮಂತನು ಸುಗ್ರೀವನಿಗಾಗಿ ಶ್ರೀರಾಮನ ಸಖ್ಯವನ್ನು ಬಯಸಿ ರಾಮನಿದ್ದಲ್ಲಿಗೆ ಬರುತ್ತಾನೆ. ಆಗ ಶ್ರೀರಾಮನು ಹನುಮಂತನ್ನು ನೋಡಿ, ಅವನ ಮಾತನ್ನು ಕೇಳಿ, ಅವನ ಬಗ್ಗೆ "ಅವನ ಮುಖ, ನೇತ್ರ, ಲಲಾಟ, ಹುಬ್ಬುಗಳಲ್ಲಿ ಯಾವ ದೋಷವನ್ನು ಕಾಣಲಾಗದು, ಇಂತಹ ದೂತನನ್ನು ಪಡೆದರೆ ರಾಜನ ಎಲ್ಲಾ ಕಾರ್ಯಗಳು ಬಹುಬೇಗ ಸಿದ್ಧಿಸುತ್ತವೆ" ಎಂಬ ಒಳ್ಳೆಯ ಮಾತನ್ನು ಆಡುತ್ತಾನೆ. ಮತ್ತು ವಿಭೀಷಣನನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಕರಣವಂತೂ ಶ್ರೀರಾಮನ ಇಂಗಿತಜ್ಞತೆಗೆ ಕಳಶಪ್ರಾಯವಾದುದು.

ಸೂಚನೆ : 17/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.