Saturday, October 2, 2021

ಯೋಗತಾರಾವಳಿ - 23 ಅಜಾಡ್ಯನಿದ್ರೆ (Yogataravali - 23 Ajadya-nidre)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೨೪)


ಪ್ರತ್ಯಗ್ವಿಮರ್ಶಾತಿಶಯೇನ


ಸಹಜಾಮನಸ್ಕವು ಸಿದ್ಧಿಸುತ್ತಿದ್ದಂತೆಯೇ ಮುಂದಿನ ಘಟ್ಟವಾದ ಅಜಾಡ್ಯ-ನಿದ್ರೆಯನ್ನು ಈ ಶ್ಲೋಕವು ಹೇಳುತ್ತದೆ.


ಜಾಣ - ಎಂಬ ಪದಕ್ಕೆ ಒಂದು ನಕಾರಾತ್ಮಕವಾದ ಅರ್ಥವೂ ಅಂಟಿರುವುದುಂಟು: ಸಮಯ-ಸಾಧಕ ಎನ್ನುವುದಕ್ಕೆ ಹತ್ತಿರವಾಗಿ. ಈ ಬಗೆಯ ಜಾಣತನಕ್ಕಿಂತಲೂ ಎಷ್ಟೋ ವೇಳೆ ಕೇವಲ ಒಳ್ಳೆತನವಿದ್ದರೇ ಸಾಕು ಎನಿಸಿಬಿಡುತ್ತದೆ.


"ಹಿಂದೇನು? ಇಂದೇನು? ಮುಂದೇನು?"


ಬರೀ ಒಳ್ಳೆಯತನವೂ ಸಾಲದು. "ಹಿಂದೇನು? ಇಂದೇನು? ಮುಂದೇನು?" ಎಂಬ ಬಗೆಯ ವಿಮರ್ಶೆ ಆಗಾಗ್ಗೆ ನಡೆಯುತ್ತಿರಬೇಕು - ಎಂಬುದಾಗಿ ಶ್ರೀರಂಗಮಹಾಗುರುಗಳು ಎಚ್ಚರಿಸುತ್ತಿದ್ದರು. ಜೀವನದಲ್ಲಿ ಸಾರಾಸಾರ-ವಿವೇಚನೆಯು ನಡೆಯುತ್ತಲೇ ಇರಬೇಕು; ಮುಖ್ಯಾಮುಖ್ಯ-ಚಿಂತನವು ಬೇಕು. ಜೀವನದ ಹೊರಮುಖವೇನು, ಒಳಮುಖವೇನು? - ಎಂಬ ಬಗ್ಗೆಯೂ ಆಲೋಚನೆಯು ಬೇಕು.


ವಿಶೇಷವಾಗಿ ಒಳಜೀವನದ ಬಗ್ಗೆ ವಿಮರ್ಶೆಯು ಚೆನ್ನಾಗಿಯೇ ನಡೆಯುತ್ತಿರಬೇಕು. ದೇಶಕ್ಕೆ ಏನು ಹಿತವೆಂದು ಯೋಚಿಸುವುದಲ್ಲದೆ, ತನ್ನ ಸುತ್ತಲಿನ ಪರಿಸರ, ತನ್ನ ಪರಿವಾರ - ಇವುಗಳ ಬಗ್ಗೆಯೂ ವಿಮರ್ಶೆ ಬೇಕು. ಇವೆಲ್ಲ ಹೊರಮುಖ. ಹೊತೆಗೇ ಸ್ವ-ಕುಟುಂಬದ ಆಗು-ಹೋಗುಗಳ ದಿಕ್ಕು-ದಶೆಗಳು, ಅಲ್ಲಿ ತನ್ನ ಜವಾಬ್ದಾರಿಗಳು - ಇವನ್ನು ಕುರಿತಾದ ಚಿಂತನೆಯೂ ಬೇಕು. ತನ್ನದೇ ಆದ ಒಳ-ಹೊರ ಲಕ್ಷ್ಯ-ಸಾಧನೆಗಳ ಬಗೆಗೂ ಹೆಚ್ಚಿನ ವಿಮರ್ಶೆ ಬೇಕು. 


ಅತಿಶಯವಾದ, ಎಂದರೆ ಚೆನ್ನಾಗಿ ನಡೆದಿರುವ, ವಿಮರ್ಶವೇ ವಿಮರ್ಶಾತಿಶಯ. ತನ್ನ ಅಂತರಂಗದ ಪ್ರಗತಿಯನ್ನು ಕುರಿತಾಗಿ ಮಾಡುವಂತಹುದು. ಅಂತರ್ಮುಖವಾದ ಸಾಧನೆ-ಸಿದ್ಧಿಗಳತ್ತ ಗಮನ ಹರಿಸಿ, ತನ್ನ ಏಳು-ಬೀಳುಗಳನ್ನು ಗಮನಿಸಿಕೊಳ್ಳುತ್ತಲೇ ಸಾಗುವುದನ್ನು ಪ್ರತ್ಯಗ್-ವಿಮರ್ಶಾತಿಶಯವೆಂದು ಇಲ್ಲಿ ಕರೆದಿದೆ. (ಪ್ರತ್ಯಕ್ ಎಂದರೆ 'ಒಳಮುಖವಾದ').


ನಾವು ಎಷ್ಟೇ ಧೀಮಂತರಾದರೂ ಕೆಲವೊಮ್ಮೆ ಜಾರಿಬೀಳುತ್ತೇವೆ. ತಪ್ಪೇ ಮಾಡಿಲ್ಲದೆಯೂ ಏಟು ತಿನ್ನುವುದೂ ಉಂಟು. ಗೊತ್ತಿದ್ದೂ ತಪ್ಪುಮಾಡುವುದೂ ಆಗಿಬಿಡುತ್ತದೆ: ಅಯ್ಯೋ ಇಂತಹ ಮೂರ್ಖನ ಕೆಲಸಮಾಡಿಕೊಂಡೆನೆಲ್ಲಾ! ಚಾಪಲ್ಯಕ್ಕೆ ತುತ್ತಾಗಿಬಿಟ್ಟೆನೇ? - ಎಂಬುದಾಗಿ ನಮ್ಮ ಬಗ್ಗೆಯೇ ಖೇದ-ಆಶ್ಚರ್ಯಗಳನ್ನು ಅನುಭವಿಸುತ್ತೇವೆ.


ರಾಗ-ದ್ವೇಷಗಳ ಛಾಪು


ಹೀಗೆಲ್ಲ ಆಗುವುದರಲ್ಲಿ ನಮ್ಮ ಪೂರ್ವಕರ್ಮ-ಪ್ರಾಬಲ್ಯದ ಪಾತ್ರವೂ ಇರುತ್ತದೆ. ಲೋಕದಲ್ಲಿ ಯಾವಯಾವುದನ್ನು ಕಂಡು "ಆಹಾ ಇದೆಂತಹ ಸುಖ!" ಎಂದು ಆಸೆಪಟ್ಟು ಕಣ್ಣು ಹಾಯಿಸುವೆವೋ ಅಲ್ಲೆಲ್ಲ ಅದರ ಒಂದು ಸಂಸ್ಕಾರವೇರ್ಪಟ್ಟಿರುತ್ತದೆ, ನಮ್ಮ ಅಂತರಂಗದೊಳಗೆ. 

ಯಾವ ಸುಖಕ್ಕಾಗಿ ಹಂಬಲಿಸಿದ್ದು ಅದನ್ನು ಅಳಿಸಲಾಗಿಲ್ಲವೋ ಅದೆಲ್ಲ ವಾಸನಾ-ರೂಪವಾಗಿ ನಮ್ಮಲ್ಲಿ ಉಳಿದಿರುತ್ತದೆ. ಮುಂದೆ ಎಂದಾದರೂ "ಆ ಸುಖ"ವನ್ನು ಪಡೆಯಲು ನಮ್ಮ ಅಂತರಂಗವು ಹೊಂಚುಹಾಕುತ್ತಿರುತ್ತದೆ. ಇದು ರಾಗದ ಮಾತಾಯಿತು. ರಾಗದ ಬಗ್ಗೆ ಹೇಳಿದುದು ದ್ವೇಷಕ್ಕೂ ಅನ್ವಿತವೇ. ಕೆಲವೊಮ್ಮೆ ರಾಗಕ್ಕಿಂತಲೂ ದ್ವೇಷಕ್ಕೇ ಸೆಳೆತ ಹೆಚ್ಚು! ಇವೆಲ್ಲಾ "ಹಳೆಯ ವಾಸನೆ"ಗಳೇ, "ಪ್ರಾಚೀನ-ಗಂಧ"ಗಳೇ, ಜನ್ಮಾಂತರದ ಸೆಳೆತಗಳೇ!

ಅಂತಹ ರಾಗ-ದ್ವೇಷಗಳು ಈಡೇರುವ ಪ್ರಸಂಗ-ಸಂನಿವೇಶಗಳ "ವಾಸನೆ"ಯು ನಮಗೆ ಹತ್ತಿ, ಅತ್ತ ಧಾವಿಸುವಂತಾಗುತ್ತದೆ. ವಿವೇಕವು ಉತ್ಕಟವಾಗಿದ್ದರೆ ಅದನ್ನೊಂದಿಷ್ಟು ತಡೆಯಬಹುದಾದರೂ, ಕೆಲವೊಮ್ಮೆ ಅದನ್ನೂ ಮೆಟ್ಟಿ ವಾಸನೆಗಳು ಅಪ್ಪಳಿಸುತ್ತದೆ.

ಆದರೆ ಸಹಜಾಮನಸ್ಕವನ್ನು ದಾಟುವಷ್ಟು ಸಾಧನೆಯು ಮುಂದುವರಿದರೆ, ಆ ಪ್ರಾಚೀನ-ಗಂಧಗಳು ಪಲಾಯನಮಾಡುತ್ತವೆ. ಅರ್ಥಾತ್ ಅವು ನಮ್ಮ ಮೇಲೆ ಪ್ರಭಾವಬೀರಲಾರವು. ಹೀಗೆ ಅವುಗಳ ಪ್ರಭಾವವನ್ನು ತಪ್ಪಿಸಿಕೊಳ್ಳುವುದಾಗುತ್ತದೆ.

ಬೇರೆ ನಿದ್ದೆಯೂ ಉಂಟೇ?

ಹೀಗೆ ತಪ್ಪಿಸಿಕೊಳ್ಳದೆ, ಅಜಾಡ್ಯ-ನಿದ್ರೆಯು ತೋರದು. ಲೋಕದಲ್ಲಿ ಎಲ್ಲರೂ ಮಾಡುವ ನಿದ್ರೆಯು – ಜಾಡ್ಯ-ನಿದ್ರೆಯೇ ಸರಿ. ನಿದ್ದೆ ಮಾಡಬೇಕೆಂದರೆ ದೀಪಗಳನ್ನು ಆರಿಸುವೆವು. ಹೊರಗೆ ಕತ್ತಲು; ಒಳಗೂ ತಮಸ್ಸೇ.

ನಿದ್ರೆಯು ಅವಶ್ಯವೇ, ಸುಖ-ವಿಶ್ರಾಂತಿಗಳನ್ನು ತಂದುಕೊಡುವಂತಹುದೇ. ಆದರೂ ಅದು ಜಾಡ್ಯ-ನಿದ್ರೆ. ಹೀಗೆಂದು ಅರಿವಾಗುವುದು ಯಾವಾಗ? ಅಜಾಡ್ಯ-ನಿದ್ರೆಯನ್ನು ಮತ್ತೊಬ್ಬರಲ್ಲಿ ನೋಡಿದಾಗ. ಅಥವಾ ಇನ್ನೂ ಚೆನ್ನಾಗಿ ಅರಿವಾಗುವುದೆಂದರೆ, ನಮ್ಮಲ್ಲೇ ಅದು ಉಂಟಾದಾಗ: ನಮ್ಮ ಅನುಭವಕ್ಕೇ ದಕ್ಕಿದಾಗ.

ಚಿಂತೆಯಿದ್ದಾಗ ನಿದ್ದೆ ಬರದು. ಜಾಡ್ಯ-ನಿದ್ರೆಗೆ ಸಹ ಚಿಂತಾ-ವರ್ಜನ ಮುಖ್ಯವಾದುದೆಂದ ಮೇಲೆ ಅಜಾಡ್ಯ-ನಿದ್ರೆಗೆ ಪ್ರಪಂಚ-ಚಿಂತೆಯ ಪರಿವರ್ಜನ ಬಹುಮುಖ್ಯವಾದುದೆಂದು ಹೇಳಲೇಬೇಕಿಲ್ಲ. ಚಿಂತೆಯೆಂಬುದು ಯಾವ ದಿಕ್ಕಿನಿಂದಲೂ ಬರಬಹುದು. ಎಲ್ಲಿಂದಲೂ ನಮ್ಮತ್ತ ಸುಳಿಯದಂತಿರುವುದೇ ಪರಿವರ್ಜನ. ('ಪರಿ'ಯೆಂದರೆ 'ಸುತ್ತಲೂ').

ವಾಸ್ತವವಾಗಿ, ಸಹಜಾಮನಸ್ಕದಿಂದ ಈ ಅಜಾಡ್ಯನಿದ್ರಾ-ಸ್ಥಿತಿಗೆ ಏರುವಾಗ, ಅದುವೇ ತಾನೇ ಪ್ರಪಂಚ-ಪ್ರಾಪಂಚಿಕಗಳ ಚಿಂತೆಯನ್ನು ದೂರಮಾಡುತ್ತದೆ! ಚಿಂತೆಯಿಲ್ಲದ, ತಮಸ್ಸಿಲ್ಲದ ಆನಂದದ ಅಜಾಡ್ಯ-ನಿದ್ರೆಯ ಉನ್ನತ-ಸ್ಥಿತಿ ಯಾರಿಗೆ ಬೇಡ?

ಪ್ರತ್ಯಗ್-ವಿಮರ್ಶಾಽತಿಶಯೇನ ಪುಂಸಾಂ

   ಪ್ರಾಚೀನ-ಗಂಧೇಷು ಪಲಾಯಿತೇಷು |

ಪ್ರಾದುರ್ಭವೇತ್ ಕಾಚಿದ್ ಅಜಾಡ್ಯ-ನಿದ್ರಾ

   ಪ್ರಪಂಚ-ಚಿಂತಾಂ ಪರಿವರ್ಜಯಂತೀ || ೨೪||

ಸೂಚನೆ : 02/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.