Sunday, October 10, 2021

ಶ್ರೀರಾಮನ ಗುಣಗಳು - 26 ಸಂಗೀತಪ್ರಿಯ- ಶ್ರೀರಾಮ (Sriramana Gunagalu - 26 Sangeetapriya Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)





ಮ್ಮೆ ಶ್ರೀರಾಮನ ಸಭೆಯಲ್ಲಿ ಅವನ ಮಕ್ಕಳಾದ ಕುಶಲವರು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ ರಾಮಚರಿತವನ್ನು ಮಾರ್ಗಸಂಗೀತವಿಧಾನದಲ್ಲಿ ಗಾನಮಾಡಿದರು.ಇದನ್ನು ಕೇಳಿ ಮಂತ್ರಮುಗ್ಧನಾದ ಶ್ರೀರಾಮನು 'ಮಮಾಪಿ ತದ್ಭೂತಿಕರಂ ಪ್ರಚಕ್ಷತೇ- ನನಗೂ ಕೂಡ ಸಂತೃಪ್ತಿಯನ್ನು ಉಂಟುಮಾಡುವ ರೀತಿಯಲ್ಲಿದೆ' ಎಂಬುದಾಗಿ ಕುಶಲವರನ್ನು ಅಭಿನಂದಿಸುತ್ತಾನೆ; ಎಂಬುದು ಶ್ರೀಮದ್ರಾಮಾಯಣದಲ್ಲಿ ಬರುವ ಒಂದು ಪ್ರಸಂಗ. ಯಾವ ರೀತಿಯಲ್ಲಿ ಆ ರಾಜಕುಮಾರರು ಗಾನ ಮಾಡಿದರು? ಅದನ್ನು ಶ್ರೀರಾಮನು ಯಾವರೀತಿಯಲ್ಲಿ ಕೇಳಿದ? ಇಷ್ಟರಿಂದಲೇ ಶ್ರೀರಾಮನನ್ನು 'ಸಂಗೀತಪ್ರಿಯ' ಎನ್ನಬಹುದು. ಏಕೆಂದರೆ ಸಂಗೀತವನ್ನು ಕೇಳಲು ಮತ್ತು ಅದರ ಆಂತರ್ಯವನ್ನು ಮನಗಾಣಲೂ ಕೂಡ ಯಾವುದೋ ಒಂದು ಬಗೆಯ ಸಂಸ್ಕಾರವಿಶೇಷವಿರಬೇಕಾಗುತ್ತದೆ. 'ಸಂಗೀತವು ಬಹಳ ಚೆನ್ನಾಗಿದೆ, ಅಥವಾ ಚೆನ್ನಾಗಿಲ್ಲ ಎಂದು ಹೇಳಲು ಸಂಗೀತಗಾರನೇ ಆಗಿರಬೇಕೆಂದಿಲ್ಲ. ಮಾಡಿದ ಅಡಿಗೆಯು ರುಚಿಯಾಗಿದೆಯೋ ಅಥವಾ ಇಲ್ಲವೋ ಎಂದು ಹೇಳುವುದಕ್ಕೆ ಆತ ಪಾಕಪ್ರವೀಣನಾಗಬೇಕೆಂದಿಲ್ಲ. ಆದರೆ ಪಾಕವನ್ನು ಸವಿಯುವ ನಾಲಗೆ ಸೂಕ್ಷ್ಮವಾಗಿದ್ದರೆ ಪಾಕದ ಸವಿಯನ್ನು ಆತ ಬಲ್ಲವನಾಗುತ್ತಾನೆ, ಹಾಗೆಯೇ ಸಂಗೀತವನ್ನು ತಿಳಿದು, ಪ್ರೀತಿಸಲೂ ಕೂಡ ಅದರದ್ದೇ ಆದ ಮರ್ಮಜ್ಞತೆಯು ಆವಶ್ಯಕವೆಂಬುದರಲ್ಲಿ ಸಂಶಯವಿಲ್ಲ. ಸಂಗೀತವು ಯಾವ ಮೂಲದಿಂದ ಬಂದಿದೆ ಮತ್ತು ಅದು ಯಾವ ಮೂಲಕ್ಕೆ ಕೊಂಡೊಯ್ಯಬಲ್ಲದು ಎಂಬ ಅರಿವನ್ನೇ ಇಲ್ಲಿ ಸಂಗೀತಜ್ಞತೆ ಎನ್ನಬಹುದು. ಸಪ್ತಸ್ವರಗಳು ಮತ್ತು ಅವುಗಳ ಏರಿಳಿತದಿಂದಾಗುವ ರಾಗಗಳ ವಿನ್ಯಾಸವನ್ನು ತಿಳಿದಮಾತ್ರಕ್ಕೆ ಸಂಗೀತದ ಮೂಲ ಪರಿಚಯವಾಗಬೇಕೆಂದಿಲ್ಲ. ಯಾರು ಸಂಗೀತವನ್ನು ಹಾಡಿ ಅಥವಾ ಕೇಳಿ ಆಸ್ವಾದಿಸಿ ಅದರ ಮೂಲದ ಕಡೆ ಸಾಗುವರೋ, ಅವರು ತಾನೆ ನಿಜವಾದ ಸಂಗೀತಪ್ರಿಯರು ಮತ್ತು ಸಂಗೀತಜ್ಞರು. ಈ ನೇರದಲ್ಲಿ ಶ್ರೀರಾಮನನ್ನು ಸಂಗೀತಪ್ರಿಯ ಅಥವಾ ಸಂಗೀತಜ್ಞ ಎಂದರೆ ಸಾಧುವೇ ಆಗುತ್ತದೆ.


ಶ್ರೀರಂಗಮಹಾಗುರುಗಳು ಸಂಗೀತದ ವಿಷಯದಲ್ಲಿ ಹೇಳಿರುವ ಈ ಮಾತನ್ನು ಇಲ್ಲಿ ಸ್ಮರಿಸಬಹುದು. "ಆತ್ಮಮಾರ್ಗವನ್ನು ಮರೆಸಿ ಪ್ರಕೃತಿದೇಶದಲ್ಲಿಯೇ ಸುತ್ತಿಸುವುದರಿಂದ 'ದೇಶೀ' ಎಂದೂ, ಆತ್ಮರಂಜನೆ ಮಾಡುವುದರಿಂದ 'ಮಾರ್ಗ'ವೆಂದೂ ಹೇಳುವ ಎರಡು ಪ್ರಭೇದಗಳುಂಟು. 'ಮಾರ್ಗ'ವೆಂದರೆ ಹಾದಿ. ಆ ರಾಗದ ಹರಿವನ್ನು ಅನುಸರಿಸಿ ಹೋದರೆ ಆತ್ಮಮಾರ್ಗದಲ್ಲೊಂದು ಗುರಿ ಮುಟ್ಟಿಸುವ ಶಕ್ತಿಯು ಅದಕ್ಕಿರುತ್ತದೆ". ಕೆಲವರಿಗೆ ಮಾರ್ಗವಿಧಾನದಲ್ಲಿ ಸಂಗೀತವನ್ನು ಹೇಳುವ ಸಾಮರ್ಥ್ಯವಿರುತ್ತದೆ. ಶ್ರೀಮದ್ರಾಮಾಯಣದಲ್ಲಿ ಶ್ರೀರಾಮನು ಹಾಡಿದ ಪ್ರಸಂಗವನ್ನು ಕಾಣುವುದಿಲ್ಲ. ಆದರೆ ಅವನಿಗೆ ಅದು ತಿಳಿದಿಲ್ಲವೆಂದರ್ಥವಲ್ಲ. ಏಕೆಂದರೆ ರಾಮನು ವೇದ-ವೇದಾಂಗತತ್ತ್ವಜ್ಞನಾಗಿದ್ದ. ಹಾಗಾಗಿ ಅದರ ಸಾರಭೂತವಾದ ವಿಷಯದ ಅರಿವನ್ನು ಪಡೆದಿದ್ದ. ಸಂಗೀತವು ಸಾಮವೇದದ ಉಪವೇದವಾದ ಗಾಂಧರ್ವವೇದದ ಒಂದು ಭಾಗವಷ್ಟೇ! ನೃತ್ಯ, ಗೀತ ಮತ್ತು ವಾದ್ಯ ಇವುಗಳ ಮೇಳವನ್ನೇ ಸಂಗೀತವೆಂದು ಕರೆಯುತ್ತಾರೆ. ಹಾಗಾಗಿ ಸಕಲವಿದ್ಯಾವಿಶಾರದನಾದ ಶ್ರೀರಾಮನು ಸಂಗೀತದಲ್ಲೂ ಅಷ್ಟೇ ವಿಶಾರದನಾಗಿದ್ದ. ಮತ್ತೂ ವಿಶೇಷವಾಗಿ ಅದನ್ನು ಆಸ್ವಾದಿಸುವ ಆ "ಸಂಸ್ಕಾರವಿಶೇಷಸಂಪತ್ತಿ" ಅವನಲ್ಲಿತ್ತು ಎಂಬುದು ವಿಶೇಷ.

ಸೂಚನೆ : 10/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.