Monday, October 4, 2021

ಆರ್ಯಸಂಸ್ಕೃತಿ ದರ್ಶನ - 56 ಗೃಹಿಣೀ ಪದ ((Arya Samskruti Darshana -56 Gruhini pada)

ಲೇಖಕರು : ಡಾ|| ಎಸ್.ವಿ. ಚಾಮು


ಸಂತಾನ ಮತ್ತು ಅದರ ಪಾಲನೆ ಮತ್ತು ಪೋಷಣೆ, ಸುಖ ಮತ್ತು ಭೋಗ ಮತ್ತು ಶಾಂತಿ, ರಕ್ಷಣೆ, ಸಾಹಚರ್ಯ ಮತ್ತು ಕಷ್ಟ ಸುಖಗಳಲ್ಲಿ ಭಾಗಿತ್ವಗಳು ವಿವಾಹದಿಂದ ದೊರಕುವ ಲಾಭಗಳು. ವಿವಾಹವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಷ್ಟಕ್ಕೂ ದ್ವಾರವಾಗುತ್ತದೆ ಎಂಬ ಪರಂಪರಾಗತವಾದ ಮಾತೂ ಇದನ್ನೇ ಮತ್ತೊಂದು ವ್ಯವಸ್ಥಿತವಾದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅದರಲ್ಲಿ ಅಷ್ಟು ಗುಣಗಳಿರುವುದರಿಂದಲೇ ಸಾಮಾನ್ಯವಾಗಿ ಇಂದೂ ಸಹ ಜನರು ಅದರ ವಿಷಯದಲ್ಲಿ ಒಳ್ಳೆಯ ಭಾವನೆಯಿಂದಲೇ ಕೂಡಿರುತ್ತಾರೆ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ರಷ್ಯಾ, ಚೀಣಾ ಮುಂತಾದ ದೇಶಗಳಲ್ಲಿ ನಾಸ್ತಿಕವಾದವನ್ನು ತಳಹದಿಯನ್ನಾಗಿಟ್ಟುಕೊಂಡು ಉಂಟಾದ ನೈತಿಕ, ಆರ್ಥಿಕ ಮತ್ತು ರಾಜನೈತಿಕ ಕ್ರಾಂತಿಗಳು ಹರಡಿದ ಭಿನ್ನ ಭಿನ್ನವಾದ ವಿಚಾರಗಳ ದೆಸೆಯಿಂದಲೂ, ಅಮೆರಿಕಾ ಮುಂತಾದ ದೇಶಗಳಲ್ಲಿ ವ್ಯಕ್ತವಾದ ಸ್ವೈರ ಪ್ರವೃತ್ತಿಯ ಪ್ರಭಾವದಿಂದಲೂ ಮತ್ತು ಆಧುನಿಕ ನಾಗರಿಕತೆಯ ಕಾರಣದಿಂದಲೂ ವ್ಯಕ್ತಿಗಳಲ್ಲಿ ಮತ್ತು ಸಣ್ಣ ಅಥವಾ ದೊಡ್ಡ ಗುಂಪುಗಳಲ್ಲಿ ವಿವಾಹದ ಬಗ್ಗೆ ಬಹಳ ದೀರ್ಘ ಕಾಲದಿಂದ ಇದ್ದ ಪಾವಿತ್ರ್ಯತೆಯ ಭಾವನೆಯನ್ನು ಮಂಕಾಗಿಸಿರುತ್ತವೆ ಅಥವಾ ತೊಡೆದು ಹೋಗಿರುತ್ತದೆ. ಯೂರೋಪು ಮತ್ತು ಅಮೇರಿಕಾ ಖಂಡಗಳಲ್ಲಿ ವಿಚಾರಗಳ ಕ್ಷೇತ್ರದಲ್ಲಿ ಉಂಟಾದ ಅಲೆಗಳು ನಮ್ಮ ದಡಗಳನ್ನೂ ಬಡಿದು ಅನೇಕ ಜನ ಸ್ತ್ರೀಪುರುಷರನ್ನು ಪ್ರಭಾವಗೊಳಿಸಿರುತ್ತವೆ. ಈಚೆಗೆ ಅವುಗಳ ಪ್ರಭಾವವು ತನ್ನನ್ನು ವಿಸ್ತರಿಸಿಕೊಳ್ಳುತ್ತಿದೆ. ಅವುಗಳನ್ನು ತಡೆಯಲು ಬೇಕಾದ ಸಾಂಸ್ಕೃತಿಕ ದೃಷ್ಟಿಯನ್ನು ನಾವು ಕಡೆಗಣಿಸಿರುತ್ತೇವೆ. ಅದೊಂದು ದೌರ್ಭಾಗ್ಯ.


ಅದನ್ನು ಪುನಃ ಸಂಪಾದಿಸುವುದು ಅತ್ಯಾವಶ್ಯಕವಾಗಿರುತ್ತದೆ. ನಾಗರಿಕತೆಯ ದೋಷಗಳಿಂದ ಇಂದು ಸಂಸಾರಗಳಲ್ಲಿ ಸಾಮರಸ್ಯವು ಕಡಿಮೆಯಾಗುತ್ತಿದೆ. ಗಂಡ ಹೆಂಡಿರ ಮಧ್ಯೆ ಸಂಘರ್ಷ, ದ್ವೇಷ, ಸಂಶಯ ಮತ್ತು ತಿರಸ್ಕಾರಗಳು ಸಾಮಾನ್ಯವಾಗುತ್ತಿದೆ. ಒಂದೇ ಮನೆಯಲ್ಲಿ ವಾಸ ಮಾಡಿದರೂ ಮತ್ತು ಒಂದೇ ಹಾಸಿಗೆಯಲ್ಲಿ ಮಲಗಿದರೂ ಅವರ ಹೃದಯ ಮತ್ತು ಮನಸ್ಸುಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ವಿವಾಹವನ್ನು ಉಳಿಸಿಕೊಳ್ಳಬೇಕು, ಆ ಕೆಲಸವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಯುವಕ ಯುವತಿಯರಿಗೆ ಅರಿವು ಇರುವುದಿಲ್ಲ. ಆಧುನಿಕ ಯುಗದ ಪಾಪಗಳು ಅವರಲ್ಲಿ ಅನೇಕರನ್ನು ವ್ಯಾಪಿಸಿಕೊಂಡಿರುತ್ತವೆ. ಪುರುಷನು ಕ್ರೂರಿಯೋ, ವ್ಯಭಿಚಾರಿಯೋ, ಕುಡುಕನೋ ಅಥವಾ ತನ್ನ ಸಾಂಸಾರಿಕ ಜವಾಬ್ದಾರಿಗಳ ವಿಷಯದಲ್ಲಿ ವಿಮುಖನೋ ಆಗಿರುತ್ತಾನೆ. ಸ್ತ್ರೀಯು ಪ್ರತಿಕೂಲಳೋ, ಸ್ಟೇಚ್ಛೆಯಿಂದ ಇರುವುದರಲ್ಲಿ ಆಸಕ್ತಳೋ ಅಥವಾ ದುರಾಚಾರಿಣಿಯೇ ಆಗಿರುತ್ತಾಳೆ. ಅವರ ಜೀವನದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಸರಿ ಮಾಡಲಾಗದ ವಿರಸವುಂಟಾಗಿಬಿಡಬಹುದು. ಆ ರೀತಿ ಆದಾಗ ಅವರ ವಿವಾಹವೆಂಬ ನೌಕೆಯು ಡೈವೋರ್ಸ್ ಕೋರ್ಟಿನ ಬಂಡೆಯ ಮೇಲೆ ಅಪ್ಪಳಿಸಿ ಒಡೆದು ಹೋಗುತ್ತದೆ. ಅದು ಇಬ್ಬರಿಗೂ ಹಿತವಿಲ್ಲ. ಆ ಅಹಿತವಾದ ಘಟನೆಯು ಅವರ ಮನಸ್ಸು, ಬುದ್ಧಿ ಮತ್ತು ಆತ್ಮಗಳ ಮೇಲೆ ಉಂಟುಮಾಡುವ ಪರಿಣಾಮಗಳು ಎಂದೆಂದಿಗೂ ಮಾಗದ ಗಾಯಗಳನ್ನುಂಟು ಮಾಡುತ್ತವೆಂಬುದರಲ್ಲಿ ಸಂಶಯವಿಲ್ಲ. ಅದರಲ್ಲಿ ಅವರ ಮಕ್ಕಳೂ ಸಹ ಭಾಗಿಗಳಾಗುತ್ತಾರೆ. ಅದರಿಂದ ಅವರು ಮನೋರೋಗಮಾತ್ರವಲ್ಲದೆ ಪಾಪಭಾಗಿಗಳೂ ಆಗುತ್ತಿರುತ್ತಾರೆ. ವಿವಾಹ ದೊಡನೆ ಚೆಲ್ಲಾಟವಾಡುವ ಈ ಸಾಂಕ್ರಾಮಿಕವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿದ್ದು ಈಗ ನಮ್ಮ ದೇಶದಲ್ಲಿಯೂ ಹರಡಿರುತ್ತದೆ. ಅದರ ವಿರೂಪಗಳನ್ನು ಪತ್ರಿಕೆಗಳು ಪದೇ ಪದೇ ವರದಿ ಮಾಡುತ್ತವೆ.


ಆದರೆ ಅಂಟುರೋಗಗಳು ಎಲ್ಲರಿಗೂ ಬರುವುದಿಲ್ಲ. ಅವುಗಳ ಮಧ್ಯದಲ್ಲಿಯೇ ಇದ್ದರೂ ಅನೇಕರು ಅವುಗಳಿಗೆ ಅಂಟದೆಯೇ ಇರುತ್ತಾರೆ. ಹಾಗೆಯೇ ಪಾಪಮಯವಾದ ಈ ಸಾಂಕ್ರಾಮಿಕಗಳಿಗೆ ಈಡಾಗದವರು ಬಹುಮಂದಿ ಇರುತ್ತಾರೆ. ಅವರ ಸಂಖ್ಯೆಯೇ ಅಧಿಕ. ಪುರಾತನ ಕಾಲದಿಂದ ಬಂದ ವೈವಾಹಿಕ ಜೀವನದ ಆದರ್ಶಗಳನ್ನು ಕೈಬಿಡದಿರುವುದರಲ್ಲಿಯೇ ಅವರ ಬಲವಿರುತ್ತದೆ. ಆ ವಿಚಾರಗಳನ್ನೂ ಯೋಚನೆಗಳನ್ನೂ ಮತ್ತು ಆದರ್ಶಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕುವುದರಿಂದ ಈಗಿನ ಕಾಲದ ಪಾಪಗಳು ಮನಸ್ಸಿನ ಮೇಲೆ ಅಷ್ಟಾಗಿ ಪರಿಣಾಮವುಂಟುಮಾಡುವುದಿಲ್ಲ. ಆಧುನಿಕ ಕಾಲದ ವಿಚಾರ ಮತ್ತು ಆಚರಣೆಗಳು ಮಾತ್ರ ಮುಂದಿದ್ದರೆ ಅವುಗಳೇ ಎಲ್ಲವೂ ಎಂದು ತಿಳಿದು ಜನರು ಅವುಗಳನ್ನೇ ಅನುಸರಿಸುತ್ತಾರೆ. ಪರ್ಯಾಯ ಯೋಚನೆಗಳೂ ಕಣ್ಣಿಗೆ ಬಿದ್ದಾಗ ಅವೆರಡರ ಮಧ್ಯೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಕುರಿತು ಯೋಚಿಸಲು ಅವಕಾಶವಾಗುತ್ತದೆ. ವಿವೇಕವು ನಮ್ಮ ಸಹಾಯಕ್ಕೆ ಬಂದರೆ ಆಗ ಇಂದ್ರಿಯಗಳು ಎಳೆದಂತೆ ಹೋಗದೆ ಮನಸ್ಸು, ಬುದ್ಧಿ ಮತ್ತು ಆತ್ಮಗಳ ಹಿತವನ್ನು ಕುರಿತು ಯೋಚಿಸಿ ಒಂದು ನಿರ್ಣಯಕ್ಕೆ ಬರುವುದು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ನಮ್ಮ ಪುರಾತನರು ವಿವಾಹದಲ್ಲಿ ನೋಡಿದ ಆದರ್ಶಗಳನ್ನು ಸ್ಮರಿಸಿಕೊಳ್ಳುವುದು ನಮಗೆ ಹಿತವನ್ನು ತಂದುಕೊಡುತ್ತದೆ. ಅವು ನಮ್ಮನ್ನು ಪಾಪಿಷ್ಠವಾದ ಯೋಚನೆಗಳಿಂದ ಮತ್ತು ಆಚರಣೆಗಳಿಂದ ಪಾರುಮಾಡುತ್ತವೆ. ಅವು ಮಾನಸಿಕ ಸ್ವಾಸ್ಥ್ಯವನ್ನು ಹೊಂದಿದ್ದ ಜನರ ವಿಚಾರ ಮತ್ತು ಆಚರಣೆಗಳನ್ನು ಪ್ರತಿಬಿಂಬಿಸುವುದೇ ಅದಕ್ಕೆ ಕಾರಣ. ಆದುದರಿಂದಲೇ ಅವು ಗ್ರಾಹ್ಯವಾಗಿರುತ್ತವೆ.


ಸನಾತನಾರ್ಯ ಭಾರತೀಯ ಮಹರ್ಷಿಗಳು ಶುದ್ಧವಾದ ಪ್ರಕೃತಿ ಸಂಪನ್ನರಾದ ಸುಕೃತಿಗಳಾಗಿದ್ದರು. ಪಾಪವು ಅವರ ಮನೋಬುದ್ಧಿಗಳನ್ನು ಮುಟ್ಟಿರಲಿಲ್ಲ. ಆದುದರಿಂದಲೇ ಅವರ ಮಾತು ಮತ್ತು ನೋಟಗಳು ಎಲ್ಲ ಕಾಲಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಎಲ್ಲರಿಗೂ ಅರ್ಥವನ್ನಿರಿಸಿಕೊಂಡಿರುತ್ತವೆ. ಅವು ಪಾಪರಹಿತವಾದ ವೈವಾಹಿಕ ಜೀವನದ ದರ್ಶನವನ್ನು ನಮಗೆ ಮಾಡಿಸುತ್ತವೆ. ಅದರ ಪ್ರಿಯಹಿತವಾದ ನೋಟವನ್ನು ನಾವು ಮುಂದಿನ ವಾಕ್ಯಗಳಲ್ಲಿ ನೋಡುತ್ತೇವೆ.


ಪತ್ನಿಯನ್ನು ವಿವಾಹದ ನಂತರ ತನ್ನ ಮನೆಗೆ ಕರೆತಂದು ಪತಿಯು ಅವಳಿಗೆ ಈ ರೀತಿ ಹೇಳುತ್ತಾನೆ: “ಎಲೆ ವಧುವೆ, ಈ ಮನೆಯಲ್ಲಿ ನಿನಗೆ ಸಮೃದ್ಧವಾದ ಪ್ರೀತಿಯು ಉಂಟಾಗಲಿ. ಇಲ್ಲಿ ನೀನು ಗೃಹಸ್ವಾಮಿನಿಯಾಗಿ ಬಾಳು. ಈ ನಿನ್ನ ಪತಿಯೊಡನೆ ನಿನ್ನ ಶರೀರವನ್ನು ಸೇರಿಸು. ನೀನು ಇಲ್ಲಿ ದೀರ್ಘಕಾಲ ಬಾಳಿ ಮುಪ್ಪನ್ನು ಹೊಂದು. ಇಲ್ಲಿ ನೀನು ಎಲ್ಲರೊಡನೆಯೂ ಸತ್ಯವನ್ನು ಮುಂದಿಟ್ಟುಕೊಂಡು ವ್ಯವಹರಿಸು.”


ಅವನುಚ್ಚರಿಸುವ ಮಂತ್ರವಾಕ್ಯವು ಎಂತಹ ಸಂಘರ್ಷರಹಿತವಾದ ಮತ್ತು

ಸಂತೋಷಮಯವಾದ ಜೀವನದ ಚಿತ್ರವನ್ನು ಚಿತ್ರಿಸುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಅವನು ಅಸೂಯೆಯಿಲ್ಲದ ಸ್ನಿಗ್ಧರ ಮತ್ತು ಆಪ್ತರ ಮಧ್ಯೆ ಜೀವಿಸುತ್ತಿರುವವನು. ಆದುದರಿಂದ ಅವರೂ ದಂಪತಿಗಳನ್ನು ಹೃದಯ ಸ್ಪರ್ಶಿಯಾದ ಮಾತುಗಳಲ್ಲಿ ಹರಸುತ್ತಾರೆ. “ನೀವಿಬ್ಬರೂ ಇಲ್ಲಿಯೇ ವಾಸಮಾಡಿರಿ. ನೀವು ವಿಚ್ಛೇದ ಹೊಂದದಿರಿ. ನಿಮಗೆ ಪೂರ್ಣಾಯುಸ್ಸು ದೊರಕಲಿ. ಪುತ್ರ ಪೌತ್ರರೊಡನೆ ಕ್ರೀಡಿಸುತ್ತಾ ಮೋದದಿಂದ ನೀವು ಈ ಮನೆಯಲ್ಲಿ ಜೀವಿಸಿರಿ.”


ಮಂತ್ರಗಳು ಹೇಳುವಂತಹ ಸುಖ ಮತ್ತು ಶಾಂತಿಗಳಿಂದ ಇರಬೇಕಾದರೆ ಪತಿ

ಪತ್ನಿಯರ ಮನಸ್ಸು ಮತ್ತು ಹೃದಯಗಳು ಒಂದಾಗಬೇಕು. ದೇವತೆಗಳ ಅನುಗ್ರಹವಿಲ್ಲದಿದ್ದರೆ ಹೃದಯೈಕ್ಯತೆಯು ದುರ್ಲಭ. ಆದುದರಿಂದ ಅದಕ್ಕೋಸ್ಕರ ಅವರನ್ನೇ ಮೊರೆ ಹೋಗಬೇಕು. ಅದನ್ನೇ ಭಾವ ಪೂರ್ಣವಾದ ಒಂದು ಮಂತ್ರದಲ್ಲಿ ಪತಿಯು ವ್ಯಕ್ತಪಡಿಸುತ್ತಾನೆ. ಮಂತ್ರದ ಅರ್ಥ ಹೀಗಿದೆ:- “ಎಲ್ಲ ದೇವತೆಗಳೂ ನಮ್ಮಿಬ್ಬರ ಹೃದಯಗಳನ್ನು ಒಂದಾಗಿ ಸೇರಿಸಲಿ. ಅಪ್‌ ದೇವತೆಯು ನಮ್ಮ ಹೃದಯಗಳನ್ನು ಒಂದಾಗಿ ಸೇರಿಸಲಿ. ಮಾತರಿಶ್ವನು(ವಾಯುವು) ನಮ್ಮ ಹೃದಯಗಳನ್ನು ಒಂದಾಗಿ ಸೇರಿಸಲಿ. ಧಾತೃವು ನಮ್ಮ ಹೃದಯಗಳನ್ನು ಒಂದಾಗಿ ಸೇರಿಸಲಿ. ಸರಸ್ವತಿಯು ನಮ್ಮ ಹೃದಯಗಳನ್ನು ಒಂದಾಗಿ ಸೇರಿಸಲಿ.”


ಯಾವ ದೈವಶಪ್ತರಾದ ಅಭಾಗಿಗಳಲ್ಲಿ ದೇವತೆಗಳು ಆ ರೀತಿ ಹೃದಯೈಕ್ಯವನ್ನು ಉಂಟು ಮಾಡುವುದಿಲ್ಲವೋ ಅಂತಹವರ ವಿವಾಹಗಳು ಸಂಶಯಾಸ್ಪದವೇ ಸರಿ.


ವೇದ ಮಂತ್ರಗಳು ಹೇಳುವುದು ಶುದ್ಧವಾದ ಮತ್ತು ಅವಕ್ರವಾದ ಮನೋಧರ್ಮ ಮತ್ತು ಆತ್ಮಧರ್ಮಗಳಿದ್ದವರ ಸಮಾಚಾರವನ್ನು. ಆದರೆ ಕಾಲಚಕ್ರವುರುಳಿದಂತೆ ಹೊಸಪೀಳಿಗೆಗಳು ಉತ್ಪನ್ನವಾಗುತ್ತವೆ. ರಜಸ್ಸು ಮತ್ತು ತಮೋಗುಣಗಳು ಪ್ರಬಲವಾಗಿ ಅವುಗಳ ನೀತಿ ಮತ್ತು ನಡತೆಗಳಲ್ಲಿ ಪರಿವರ್ತನೆಗಳುಂಟಾಗುತ್ತವೆ. ಜೀವನವು ಸಿಕ್ಕಾಗುತ್ತದೆ. ಆ ಸಂದರ್ಭಗಳಲ್ಲಿ ವಿವಾಹಕ್ಕೆ ಒದಗುವ ಅಪಾಯಗಳನ್ನು ಎತ್ತಿ ಹೇಳಿ ಜನರನ್ನು ಎಚ್ಚರಿಸುವುದು ಆವಶ್ಯವಾಗುತ್ತದೆ. ಶ್ರುತಿಯು ಹೇಳಿದ ಆದರ್ಶಗಳನ್ನು ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಜನಸಾಮಾನ್ಯರಿಗೆ ವಿವರಿಸಿ ಹೇಳಬೇಕಾಗುತ್ತದೆ. ಆ ಕೆಲಸವನ್ನು ಸ್ಮೃತಿ ಅಥವಾ ಧರ್ಮಶಾಸ್ತ್ರಗಳು ನಮ್ಮ ದೇಶದಲ್ಲಿ ಮಾಡಿರುತ್ತವೆ. ಅವುಗಳ ಪೈಕಿ ಮನುಧರ್ಮ ಶಾಸ್ತ್ರಕ್ಕೆ ಅಗ್ರಸ್ಥಾನ. ಮನುವು 'ಸರ್ವಜ್ಞಾನಮಯೋ ಹಿ ಸಃ ।’(ಅವನು ಸರ್ವಜ್ಞಾನಮಯನೇ ಸರಿ.) ಅವನು ಯಾರು ಎಂಬ ಬಗ್ಗೆ ಈ ಮಾತನ್ನು ಓದುತ್ತೇವೆ. ಕೆಲವರು ಅವನನ್ನು ಅಗ್ನಿ ಎಂದು ಹೇಳುತ್ತಾರೆ. ಮತ್ತೆ ಕೆಲವರು ಮನು ಎಂದು ಕರೆಯುತ್ತಾರೆ. ಅವನನ್ನೇ ಪ್ರಜಾಪತಿ ಎಂದು ಹೇಳುತ್ತಾರೆ. ಕೆಲವರು ಅವನನ್ನು ಇಂದ್ರನೆಂಬುದಾಗಿಯೂ,ಕೆಲವರು ಪ್ರಾಣದೇವನೆಂಬುದಾಗಿಯೂ, ಕೆಲವರು ಶಾಶ್ವತನಾದ ಬ್ರಹ್ಮ ಎಂಬುದಾಗಿಯೂ ಕರೆಯುತ್ತಾರೆ. ನಮ್ಮ ಕಾಲದಲ್ಲಿ ಅವನ ನಿರ್ಣಾಯಕವಾದ ಮಾತುಗಳಿಂದ ಬೇರೆ ಬೇರೆ ಜನಸಮೂಹಗಳು ದುಷ್ಟರಾಗಿ ತುಂಬ ವಿರೋಧ ಮತ್ತು ಆಗ್ರಹಗಳನ್ನು ವ್ಯಕ್ತಪಡಿಸಿರುತ್ತವೆ. ಅವನ ಧರ್ಮಶಾಸ್ತ್ರದ ಪ್ರೇರಣೆ ಆತ್ಮಧರ್ಮ ಮತ್ತು ಸಂಯಮಗಳಿಂದ ಬಂದಿರುತ್ತದೆ. ಸ್ಟೇಚ್ಛೆಯಿಂದಿರುವುದನ್ನು ಅಪೇಕ್ಷಿಸುವವರಿಗೆ ಅವನು ಹೇಳುವುದು ಹಿಡಿಸದಿರುವುದು ಸಹಜವಾಗಿಯೇ ಇರುತ್ತದೆ. ಇಂದು ವೈವಾಹಿಕ ಜೀವನದಲ್ಲಿ ಉಂಟಾಗಿರುವ ಆಧಿ (ಮನೋರೋಗ) ಮತ್ತು ವ್ಯಾಧಿಗಳು ಅವನ ಶಾಸನವನ್ನು ಉಲ್ಲಂಘಿಸಿದುದರಿಂದ ಉಂಟಾಗಿರುತ್ತವೆ. ಏಡ್ಸ್ ಮುಂತಾದ ರೋಗಗಳ ಭಯದಿಂದ ಪ್ರಪಂಚವೇ ಸಂತ್ರಸ್ತವಾಗಿರುತ್ತದೆ. ಅವನ ಮಾತುಗಳನ್ನು ಮರೆತಿರುವುದೇ ಅದಕ್ಕೆ ಕಾರಣ.


ಅವನು ವಿವಾಹಕ್ಕೆ ಸಂಬಂಧಪಟ್ಟ ವಿಷಯಗಳನ್ನು ಶರೀರ, ಮನಸ್ಸು ಮತ್ತು ಆತ್ಮಗಳೆಲ್ಲದರ ದೃಷ್ಟಿಯಿಂದಲೂ ನೋಡಿ ಹೇಳಿರುತ್ತಾನೆ. ಆದುದರಿಂದ ಅವನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದು ಉಚಿತವಾಗಿರುತ್ತದೆ. ಇಲ್ಲಿ ಒಂದೆರಡು ನಿದರ್ಶನಗಳ ಕಡೆಗೆ ನಮ್ಮ ಓದುಗರ ಮನಸ್ಸನ್ನು ಆಕರ್ಷಿಸಬಹು ದಷ್ಟೇ. ಅವನು ವಿವಾಹದ ಧ್ಯೇಯಗಳನ್ನು ಸುಂದರವಾಗಿ ಸಂಗ್ರಹಿಸಿ ಹೇಳಿರುತ್ತಾನೆ.


ಅಪತ್ಯಂ ಧರ್ಮಕಾರ್ಯಾಣಿ ಶುಶ್ರೂಷಾ ರತಿರುತ್ತಮಾ।

ದಾರಾಧೀನಸ್ತಥಾ ಸ್ವರ್ಗಃ ಪಿತೃಣಾಮಾತ್ಮನಶ್ಚ ಹ॥


(ಪ್ರಜೆಗಳು, ಧರ್ಮಕಾರ್ಯಗಳು, ಶುಶ್ರೂಷೆ, ಉತ್ತಮವಾದ ರತಿ (ಸುಖ), ಪಿತೃಗಳ ಹಾಗೂ ತನ್ನ ಸ್ವರ್ಗಪ್ರಾಪ್ತಿ ಇವಷ್ಟೂ ಪತ್ನಿಯ ಅಧೀನವಾಗಿರುತ್ತವೆ.) ಈ ಧ್ಯೇಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವಿಸುವ ದಂಪತಿಗಳ ಜೀವನವು ಎಂದಿಗೂ ಕಷ್ಟಕ್ಕೆ ಅಥವಾ ಪಾಪಕ್ಕೆ ಒಳಗಾಗುವುದಿಲ್ಲ. ದಂಪತಿಗಳ ಅನುರಾಗವು ಪಾಪರಹಿತವಾಗಿಯೂ ಅಕ್ಷುಣ್ಣವಾಗಿಯೂ ಇರಬೇಕು ಎಂಬುದು ಅವನು ಮಾಡುವ ಶಾಸನಗಳಲ್ಲಿ ಬಹಳ ಪ್ರಮುಖವಾದುದು.


ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತ್ರಾ ಭಾರ್ಯಾ ತಥೈವ ಚ ।

ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧ್ರುವಂ॥

ಪತಿಂ ಯಾ ನಾಭಿಚರತಿ ಮನೋವಾಗ್ದೇಹಸಂಯತಾ।

ಸಾ ಭರ್ತೃಲೋಕಮವಾಪ್ನೋತಿ ಸದ್ಭಿಃ ಸಾಧ್ವೀತಿ ಚೋಚ್ಯತೇ॥


(ಯಾವ ಕುಲದಲ್ಲಿ ಭರ್ತನು ಅನ್ಯ ಸ್ತ್ರೀಯನ್ನು ಬಯಸದೆ ಭಾರ್ಯೆಯಲ್ಲಿ

ಸಂತುಷ್ಟನಾಗಿರುತ್ತಾನೆಯೋ ಮತ್ತು ಭಾರ್ಯೆಯು ಅನ್ಯ ಪುರುಷನನ್ನು ಅಪೇಕ್ಷಿಸದೆ ತನ್ನ ಭರ್ತನಲ್ಲಿ ಸಂತುಷ್ಟಳಾಗಿರುತ್ತಾಳೆಯೋ ಅಲ್ಲಿ ನಿತ್ಯವೂ ಮಂಗಳವಿರುತ್ತದೆ. ಮನಸ್ಸು, ವಾಕ್ಕು ಮತ್ತು ಶರೀರಗಳನ್ನು ವಶದಲ್ಲಿರಿಸಿಕೊಂಡು ಯಾವಳು ಪತಿಯನ್ನು ಮೀರಿ ಹೋಗುವುದಿಲ್ಲವೋ ಅವಳು ಭರ್ತೃಲೋಕವನ್ನು ಹೊಂದುತ್ತಾಳೆ; ಸತ್ಪುರುಷರು ಅವಳನ್ನು ಸಾಧ್ವಿ ಎಂದು ಕರೆಯುತ್ತಾರೆ.)


ಇಂದು ಅಮೇರಿಕಾ ಯುರೋಪು ಮುಂತಾದ ದೇಶಗಳು ವ್ಯಭಿಚಾರ ದೋಷದ ತೆಕ್ಕೆಗೆ ಸಿಕ್ಕಿ ಪಾಪಮಯವಾಗಿರುತ್ತವೆ. ಆ ದೇಶಗಳ ಸಾಹಿತ್ಯಗಳು ಅದರ ವರ್ಣನೆಯಿಂದಲೇ ಜನಪ್ರಿಯವಾಗಿರುತ್ತವೆ. ನಮ್ಮ ಜನರೂ ಮತ್ತು ಸಾಹಿತ್ಯಗಳೂ ಅವರನ್ನೇ ಅನುಕರಿಸುತ್ತಿವೆ. ಅವೇ ನವೀನತೆಯ ಕುರುಹು ಎಂದು ಗಣಿಸಲ್ಪಡುತ್ತಿವೆ. ಆದರೆ ನಮ್ಮ ಪುರಾತನ ಸಾಹಿತ್ಯಗಳು ಸಾಧ್ವಿಯರ, ಗೃಹಣಿಯರ ಅಥವಾ ಪತಿವ್ರತೆಯರ ಪ್ರಶಂಸೆಯನ್ನು ಮನಮುಟ್ಟುವ ಭಾಷೆಯಲ್ಲಿ ಮಾಡಿರುತ್ತವೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ವಿಷ್ಣುಶರ್ಮ ಮುಂತಾದ ಕವಿಗಳೆಲ್ಲರೂ ಗೃಹ ಮತ್ತು ಗೃಹಿಣಿಯರ ಆದರ್ಶವನ್ನು ಕೊಂಡಾಡಿರುತ್ತಾರೆ. ಪಂಚತಂತ್ರದಲ್ಲಿ ಈ ಮಾತುಗಳನ್ನು ಓದುತ್ತೇವೆ:


ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ।

ಗೃಹಂ ತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೇ॥

ವೃಕ್ಷಮೂಲೇಽಪಿ ದಯಿತಾ ಯತ್ರ ತಿಷ್ಠತಿ ತದ್ಗೃಹಂ।

ಪ್ರಾಸಾದೋಽಪಿ ತಯಾ ಹೀನೋ ಅರಣ್ಯಸದೃಶಃ ಸ್ಮೃತಃ॥

.

(ಗೃಹವು ಗೃಹವಲ್ಲ ಎಂದು ಹೇಳುತ್ತಾರೆ. ಗೃಹಿಣಿಯೇ ಗೃಹವೆಂದು ಹೇಳಲ್ಪಡುತ್ತಾಳೆ. ಗೃಹಿಣೀ ಹೀನವಾದ ಗೃಹವು ಕಾಡಿಗಿಂತಲೂ ಶೂನ್ಯವಾದುದು. ಒಂದು ಮರದಡಿಯಲ್ಲಿ ಕಾಂತೆಯು ಇದ್ದರೂ ಅದು ಗೃಹವಾಗುತ್ತದೆ. ಅವಳಿಲ್ಲದ ಅರಮನೆಯೂ ಸಹ ಅರಣ್ಯಕ್ಕೆ ಸದೃಶವಾದುದು.) ಇದರ ಸತ್ಯತೆಯನ್ನು ಅನುಭವಿಸಿದವರೇ ತಿಳಿಯಬಲ್ಲರು.


ಭಾರತದಲ್ಲಿ ಭಾರ್ಯೆಯನ್ನು ಪ್ರಶಂಸಿಸುವ ಮತ್ತು ಅವಳ ಧರ್ಮವನ್ನು ಹೇಳುವ ಅನೇಕ ಮಾತುಗಳು ಇರುತ್ತವೆ. ಅವು ನಮ್ಮ ದೇಶದ ಸ್ತ್ರೀಯರು ಎಂತಹ ಮನೋಧರ್ಮವನ್ನು ಸಾಧಿಸಿದ್ದರು ಎಂಬುದನ್ನು ಸುಂದರವಾಗಿ ವರ್ಣಿಸುತ್ತವೆ. ಆದರ್ಶ ಭಾರ್ಯಾಮಣಿಯಾದ ದಮಯಂತಿಯು ವನವಾಸದಿಂದ ವಿಹ್ವಲನಾದ ತನ್ನ ಪತಿಗೆ ಹೇಳುವ ಒಂದು ನುಡಿಯು ಅದಕ್ಕೆ ಉತ್ತಮ ನಿದರ್ಶನ.


ನ ಚ ಭಾರ್ಯಾ ಸಮಂ ಕಿಂಚಿತ್ ವಿದ್ಯತೇ ಭಿಷಜಾಂ ಮತಂ।

ಔಷಧಂ ಸರ್ವದುಃಖೇಷು ಸತ್ಯಮೇತದ್ ಬ್ರವೀಮಿ ತೇ॥


(ಭಿಷಕ್ಕುಗಳ ಅಭಿಪ್ರಾಯದಲ್ಲಿ ಎಲ್ಲ ವಿಧವಾದ ದುಃಖಗಳಲ್ಲಿಯೂ ಭಾರ್ಯೆಗೆ ಸಮನಾದ ಔಷಧಿಯು ಬೇರೊಂದಿಲ್ಲ. ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ.) ನಳನೂ ಅವಳ ಮಾತುಗಳನ್ನು ಒಪ್ಪಿಕೊಳ್ಳುತ್ತಾನೆ:


ನಾಸ್ತಿ ಭಾರ್ಯಾ ಸಮಂ ಮಿತ್ರಂ ನರಸ್ಯಾರ್ತಸ್ಯ ಭೇಷಜಂ॥


(ಹೌದು, ಕಷ್ಟಕ್ಕೆ ಸಿಕ್ಕಿದ ನರನಿಗೆ ಭಾರ್ಯೆಗೆ ಸಮನಾದ ಮಿತ್ರನಾಗಲಿ, ಔಷಧಿಯಾಗಲಿ ಇರುವುದಿಲ್ಲ). ಆದರೂ ಅವನು ಕಲಿಯ ದೆಸೆಯಿಂದ ಅವಳನ್ನು ಕಾಡಿನಲ್ಲಿ ತೊರೆದು ಹೋಗುತ್ತಾನೆ.


ಇದು ಅನಾದಿಕಾಲದಿಂದ ನಮ್ಮ ದೇಶದಲ್ಲಿ (ಹಾಗೆಯೇ ಇತರೆಡೆಗಳಲ್ಲಿಯೂ ಸಹ) ಪತ್ನಿಯರು ನಿರ್ವಹಿಸಿರುವ ಪಾತ್ರವಾಗಿರುತ್ತದೆ. ಇಂದು ಸಮೀಪ ದೃಷ್ಟಿಗಳಾದ ರಾಜಕೀಯ ಪುಢಾರಿಗಳು, ತಥಾಕಥಿತರಾದ ಸಮಾಜ ಸುಧಾರಕರು, ಸ್ತ್ರೀ ಸ್ವಾತಂತ್ರ್ಯಾಂದೋಳನಕಾರರು ಮುಂತಾದವರ ವಿಚಾರಗಳಿಗೆ ಬೇಟೆಯಾಗಿ ಅವರು ತಮಗೆ ಅಸಹಜವಾದ ಬೇರೊಂದು ಪಾತ್ರವನ್ನು ವಹಿಸಲಾರಂಭಿಸಿರುತ್ತಾರೆ. ಗೃಹಿಣೀ ಪದಕ್ಕೆ ಅಪಾಯಕಾರಿಯೆಂದು ಅಭಿಜ್ಞಾನ ಶಾಕುಂತಲವು ಹೇಳುವ ಒಂದು ದೋಷವು ಅನೇಕರಲ್ಲಿ ಉಲ್ಬಣಿಸಿ ವಿವಾಹದ ಕಟ್ಟನ್ನು ಕತ್ತರಿಸಿ ಹಾಕುತ್ತಿದೆ. ಅದು ವಿವರವಾಗಿ ಸ್ಮರಿಸ ಯೋಗ್ಯವಾಗಿದೆ.


ಶಕುಂತಲೆಯನ್ನು ಪತಿಗೃಹಕ್ಕೆ ಕಳುಹಿಸುವ ಸಮಯದಲ್ಲಿ ಲೋಕಜ್ಞನಾದ ಕಾಶ್ಯಪನು, ಅವಳಿಗೆ ಕೆಲವು ಹಿತವಚನಗಳನ್ನು ಹೇಳುತ್ತಾನೆ. ಅದರ ಆನುಪೂರ್ವಿ ಹೀಗಿರುತ್ತದೆ. ಅವನು ಶಕುಂತಲೆಗೆ, “ವತ್ಸೆ, ಈಗ ನೀನು ಶಾಸನ ಮಾಡಲು ಅರ್ಹಳಾಗಿರುತ್ತೀಯೆ. ನೋಡು ನಾವು ಅರಣ್ಯವಾಸಿಗಳಾದರೂ ಲೋಕಜ್ಞರಾಗಿರುತ್ತೇವೆ' ಎಂದು ನುಡಿದು ಅವಳಿಗೆ ಈ ಶ್ಲೋಕವನ್ನು ಹೇಳುತ್ತಾನೆ.


ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀವೃತ್ತಿಂ ಸಪತ್ನೀಜನೇ

ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾಸ್ಮ ಪ್ರತೀಪಂ ಗಮಃ।

ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ

ಯಾಂತ್ಯೇವಂ ಗೃಹಿಣೀಪದಂ ಯುವತಯಃ ವಾಮಾಃ ಕುಲಸ್ಯಾಧಯಃ॥


'ಹಿರಿಯರ ಶುಶ್ರೂಷೆ ಮಾಡು. ಸವತಿಯಲ್ಲಿ ಪ್ರಿಯಸಖಿಯಂತೆ ವರ್ತಿಸು. ಭರ್ತನು ಕೋಪಗೊಂಡರೂ ರೋಷದಿಂದ ಅವನಿಗೆ ವಿರೋಧವಾಗಿ ಹೋಗಬೇಡ. ಪರಿಜನರ ವಿಷಯದಲ್ಲಿ ಅತಿಶಯವಾಗಿ ಅನುಕೂಲಳಾಗಿರು. ನಿನಗೆ ಭಾಗ್ಯಗಳುಂಟಾದಾಗ ಹೆಮ್ಮೆಪಡದಿರು. ಹೀಗೆ ಇರುವುದರಿಂದ ಯುವತಿಯರು ಗೃಹಿಣೀಪದವನ್ನು ಹೊಂದುತ್ತಾರೆ. ಇದಕ್ಕೆ ವಿರೋಧವಾಗಿ ಇರುವವರು ತಮ್ಮ ಕುಲಕ್ಕೆ ಆಧಿ (ಮನೋರೋಗ)ಗಳಾಗುತ್ತಾರೆ.” ಕಾಶ್ಯಪನು ಗಂಡಸು. ಅವನು ತಾನು ಹೇಳಿದುದರಲ್ಲಿ ದೋಷವೇನಾದರೂ ಇದೆಯೇ ಎಂಬುದನ್ನು ತಿಳಿಯಲು ವೃದ್ಧ ತಾಪಸಿಯಾದ ಗೌತಮಿಯ ಕಡೆಗೆ ತಿರುಗಿ 'ಈ ವಿಷಯದಲ್ಲಿ ಗೌತಮಿಯ ಅಭಿಪ್ರಾಯವಾದರೂ ಏನು?”, ಎಂದು ಕೇಳುತ್ತಾನೆ. ಅವಳು “ವಧೂ ಜನರಿಗೆ

ಹೇಳಬೇಕಾದುದು ಇಷ್ಟೆ. “ವತ್ಸೆ ! ಇದೆಲ್ಲವನ್ನೂ ಮನಸ್ಸಿನಲ್ಲಿ ಧರಿಸಿರು.” ಎಂದು ಶಕುಂತಲೆಗೆ ಹೇಳುತ್ತಾಳೆ.


ಒಂದು ತಪೋವನದಲ್ಲಿ ಋಷಿಯೊಬ್ಬನು ಒಬ್ಬ ನವೋಢೆಗೆ ಹೇಳಿದ ಈ ಮಾತುಗಳು ಅನಾದಿಕಾಲದಿಂದ ಸಾಹಿತ್ಯ ಪ್ರೇಮಿಗಳ ಮನಸ್ಸನ್ನು ಸೆಳೆದಿರುತ್ತದೆ. ಅವುಗಳಲ್ಲಿರುವ ಪ್ರಜ್ಞೆಯೇ ಅಂತಹದ್ದು. ಒಂದು ವಿಷಯ. ಕಾಶ್ಯಪನು ಹೇಳುವ ಮಾತುಗಳು ಒಬ್ಬ ಚಕ್ರವರ್ತಿಯ ಪತ್ನಿಗೆ ಹೇಳಿದವುಗಳಾಗಿರುತ್ತವೆ. 'ಕುರು ಪ್ರಿಯಸಖಿವೃತ್ತಿಂ ಸಪತ್ನಿಜನೇ' ಎಂಬುದು ಬಹು ವಲ್ಲಭರಾದ ರಾಜರ ಪತ್ನಿಯರಿಗೆ ಮಾತ್ರ ಅನ್ವಯಿಸುವ ಮಾತಾಗಿದೆ. ಹಾಗೆಯೇ, 'ಭಾಗ್ಯೇಷ್ವನುತ್ಸೇಕಿನೀ' ಎಂಬ ಮಾತೂ ಸಹ ಬಹು ಜನ ಪರಿಜನರ ಒಡತಿಯರಿಗೆ ಮಾತ್ರ ಒಪ್ಪುವುದಾಗಿದೆ. ಆದರೆ ಅವನು ಹೇಳುವ ಭರ್ತುರ್ವಿಪ್ರಕೃತಾಪಿರೋಷಣತಯಾ ಮಾಸ್ಮ ಪ್ರತೀಪಂಗಮಃ । ಎಂಬ ಮಾತು ತಮ್ಮ ವಿವಾಹವನ್ನು ಕಾಪಾಡಿಕೊಳ್ಳಲಿಚ್ಛಿಸುವ ಎಲ್ಲಾ ಗೃಹಿಣಿಯರಿಗೂ ಅತ್ಯಂತ ಅರ್ಥವತ್ತಾಗಿರುತ್ತದೆ. ಸ್ತ್ರೀ ಪುರುಷರ ಸ್ವಭಾವ ಮತ್ತು ಕರ್ತವ್ಯಗಳು ಬೇರೆ ಬೇರೆ. ಗಂಡನು ರುಷ್ಟನಾದನೆಂದು ಹೆಂಡತಿಯೂ ರುಷ್ಟಳಾದರೆ ಸಂಘರ್ಷ ತಪ್ಪಿದುದೇ ಅಲ್ಲ. ಇಂದಿನ ಕಾಲದಲ್ಲಿ ಗಂಡ ಹೆಂಡಿರ ಮಧ್ಯೆ ಉಂಟಾಗುವ ತೀವ್ರವಾದ ವಿರಸಗಳಿಗೆ, ಇಬ್ಬರೂ ಸಹನೆಯಿಲ್ಲದೆ ರೋಷಕ್ಕೆ ಒಂದೇ ರೀತಿಯಾದ ಪ್ರತಿಕ್ರಿಯೆ ತೋರಿಸುವುದೇ ಆಗಿದೆ. ಅದರಿಂದ ಬೆಂಕಿ ಹುಟ್ಟಿ ಪ್ರಜ್ವಲಿಸದೆ ಇರುವುದಿಲ್ಲ. ಋಷಿಯು ಅಂತಹ ಸನ್ನಿವೇಶದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಶಕುಂತಲೆಗೆ ಹೇಳುತ್ತಾನೆ. ಸ್ತ್ರೀ ಸಮಾನತಾವಾದಿಗಳು ಅದೇಕೆ ಶಕುಂತಲೆಯೇ ಸಹನೆ ತೋರಿಸಬೇಕು, ಅವಳ ಗಂಡನಿಗೇಕೆ ಆ ಸಂದೇಶವನ್ನು ಋಷಿಯು ಹೇಳಿ ಕಳುಹುವುದಿಲ್ಲ ಎಂದು ಪ್ರಶ್ನಿಸಬಹುದು. ಋಷಿಯು ದುಷ್ಯನ್ತನಿಗೆ ಹೇಳಬಹುದಾದುದನ್ನು ಶಿಷ್ಯನ ಮೂಲಕ ಹೇಳಿ ಕಳುಹಿಸುತ್ತಾನೆ. ಪ್ರಕೃತ, ಪ್ರಕೃತಿ ಸ್ವರೂಪಳಾದ ಶಕುಂತಲೆಗೆ ಅವನು ಮಾಡುವ ಉಪದೇಶವು ಅರ್ಥವತ್ತಾಗಿಯೇ ಇರುತ್ತದೆ. ನಮ್ಮ ದೇಶದ ಕವಿಗಳು ಎಲ್ಲ ಕಾಲಗಳಲ್ಲಿಯೂ ಕ್ಷಮೆ ಅಥವಾ ಸಹನೆಯನ್ನು ಪೃಥ್ವಿಯಲ್ಲಿ ನೋಡಿರುತ್ತಾರೆ. ಆದುದರಿಂದ ವೈವಾಹಿಕ ಜೀವನವನ್ನು ಒಡೆಯುವ ಪ್ರತಿಕೂಲವಾದ ವ್ಯವಹಾರದಲ್ಲಿ ತೊಡಗದಿರುವ ಜವಾಬ್ದಾರಿಯು ಶಕುಂತಲೆಯದೇ ಆಗುತ್ತದೆ.


ಗೃಹಿಣೀ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಬಹು ಮಾನ್ಯವಾದ  ಪದ. ಅದು ನಮ್ಮ ಪುರಾತನರ ಜೀವನದಲ್ಲಿ ಸೌಖ್ಯ, ಶಾಂತಿ, ಮಾಧುರ್ಯ, ಪ್ರೀತಿ, ಕರುಣೆ ಮುಂತಾದ ಗುಣಗಳೆಲ್ಲವನ್ನೂ ಸಂಪಾದಿಸಿಕೊಟ್ಟಿತು. ಇಂದಿನ ನಾಗರಿಕತೆಯು ಅದನ್ನು ನಿರರ್ಥಕವಾಗಿ ಮಾಡುವ ದಿಕ್ಕಿನಲ್ಲಿ ದಾಪುಗಾಲಿಟ್ಟುಕೊಂಡು ನಡೆಯುತ್ತಿದೆ. ಗೃಹಕ್ಕೂ ಗೃಹಿಣಿಗೂ ಮಧ್ಯೆ ಇದ್ದ ಐಕ್ಯತೆಯನ್ನು ತೊಡೆದು ಬಿಟ್ಟರೆ ಎಲ್ಲವೂ ಚೆನ್ನಾಗಿರುತ್ತದೆಂದು ಶಾಸಕರು, ಚಿಂತಕರು, ಎಲ್ಲರೂ ಯೋಚಿಸುವಂತೆ ಕಾಣುತ್ತದೆ. ಆದರೆ ದೂರದೃಷ್ಟಿಯಿಂದ ನೋಡಿದಾಗ ಅವರ ನೀತಿಗಳೂ ಮತ್ತು ಯೋಚನೆಗಳೂ ಉಂಟುಮಾಡುವ ದುಷ್ಪರಿಣಾಮಗಳನ್ನು ಹೇಳಲಾಗುವುದಿಲ್ಲ.


ಆದುದರಿಂದ ಇಂದಿನ ವಾತಾವರಣದಲ್ಲಿ ಗೃಹಿಣೀಪದ ಮುಂತಾದ ಪದಗಳು ಒಳಗೊಂಡಿರುವ ಶಾಶ್ವತವಾದ ಮೌಲ್ಯಗಳನ್ನು ಹೇಗೆ ಸಂರಕ್ಷಿಸಿ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನಗಳನ್ನು ಸುಭದ್ರವಾಗಿ ಮಾಡುಕೊಳ್ಳುವುದು ಎಂಬ ವಿಷಯದಲ್ಲಿ ಗೃಹಿಣೀಗೃಹಸ್ಥರೆಲ್ಲರೂ ಗಂಭೀರವಾಗಿ ವಿಚಾರಮಾಡುವುದು ತುಂಬ ಆವಶ್ಯಕವಾಗಿರುತ್ತದೆ. ಅದನ್ನು ಮಾಡದಿದ್ದರೆ ನಮ್ಮ ಜೀವನವು ಸರ್ವಾತ್ಮನಾ ಪಾಪಗಳಿಗೆ ವಶವಾಗಿಬಿಡುತ್ತದೆ.

“ಗೃಹವು ಗೃಹಿಣಿಯ ಆಶಯವನ್ನನುಸರಿಸಿರುತ್ತದೆ. ಗೃಹಿಣಿಯ ಮನೋಧರ್ಮವೇ ಹೆಚ್ಚಾಗಿ ಗೃಹವ್ಯವಸ್ಥೆಯಲ್ಲಿ ಹರಿಯುವುದರಿಂದ, ಅವಳ ಪ್ರತಿಬಿಂಬವವೇ ಅದಾಗಿರುವುದರಿಂದ ಗೃಹಿಣೀ ಗೃಹಮುಚ್ಯತೇ ಎಂಬ ಹೇಳಿಕೆ ಅರ್ಥವತ್ತಾಗಿದೆ” - ಶ್ರೀರಂಗಮಹಾಗುರು.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೯ ಸಂಚಿಕೆ:೩, ೧೯೯೬ ಪ್ರಬ್ರವರಿ ತಿಂಗಳಲ್ಲಿ  ಪ್ರಕಟವಾಗಿದೆ.