Saturday, October 16, 2021

ಯೋಗತಾರಾವಳಿ - 25 ನಿರ್ವಿಕಲ್ಪನಿದ್ರೆ (Yogataravali - 25 Nirvikalpa-nidre)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ವಿಶ್ರಾಂತಿಮಾಸಾದ್ಯ


ವಿಶ್ರಾಂತಿ ಪಡೆಯಬೇಕೆಂದರೆ ಕೆಲಸಗಳನ್ನೆಲ್ಲ ಬಿಟ್ಟು ಹೋಗಿ ಹಾಸಿಗೆಯ ಮೇಲೆ ಮಲಗುತ್ತೇವೆ. ಆದರೆ ಲೋಕ-ವಿಲಕ್ಷಣವಾದ ವಿಶ್ರಾಂತಿಯೊಂದುಂಟು. ನಿದ್ರಿಸಿದಾಗ  ದೊರೆಯುವುದಕ್ಕಿಂತ ಬಹಳ ವಿಶಿಷ್ಟವಾದ ವಿಶ್ರಾಂತಿಯು ಅಲ್ಲಿ ದೊರೆಯುವುದು. ಅದೂ ಒಂದು ನಿದ್ರೆಯೇ ಆದರೂ, ಲೋಕ-ಲಭ್ಯವಾದ ನಿದ್ರೆಯದಲ್ಲ. ಇದು ಜ್ಞಾನ-ನಿದ್ರೆ. ಇದನ್ನು ಮಾಡುವ ಬಗೆಯೇ ಬೇರೆ.


ಈ ಜ್ಞಾನ-ನಿದ್ರೆಗೂ ಒಂದು "ಹಾಸಿಗೆ" ಬೇಕು: ಆ ಶಯ್ಯೆಗೆ "ತುರೀಯ"ವೆಂದು ಹೆಸರು. ತುರೀಯ(ಅಥವಾ ತುರ್ಯ)ವೆಂಬ ಈ ತಲ್ಪ ವಿಶಿಷ್ಟವಾದದ್ದು: ವಾಸ್ತವವಾಗಿ ಅದು ಭೌತಿಕವಾದ ವಸ್ತುವೇ ಅಲ್ಲ!

ತುರೀಯವೆಂದರೆ ನಾಲ್ಕನೆಯದು. ಅಲ್ಲಿಗೆ, 'ನಾಲ್ಕನೆಯದು' ಎಂದೇ ಇದರ ಹೆಸರು! ಉಳಿದ ಮೂರು ಹಾಗಾದರೆ ಯಾವುವು? – ಎಂದರೆ, ಜಾಗ್ರತ್-ಸ್ವಪ್ನ-ಸುಷುಪ್ತಿಗಳು (ಎಚ್ಚರ-ಕನಸು-ತನಿನಿದ್ರೆಗಳು). 

ಮೂರರಂತೆ – ಹೌದು-ಅಲ್ಲ

ಮೂರರಂತೆಯೂ ಇದ್ದು ಮೂರರಂತೆಯೂ ಇರದ ಸ್ಥಿತಿಯಿದು! ಏನು ಹಾಗಂದರೆ? ಜಾಗ್ರತ್ತಿನಂತೆಯೇ ಇಲ್ಲೂ ಪ್ರಬೋಧ(ಎಚ್ಚರ)ವಿರುವುದು; ಕನಸಿನಲ್ಲಿ ಹೇಗೋ ಹಾಗೆ ಇಲ್ಲೂ ಅಂತರಿಂದ್ರಿಯದಲ್ಲಿ ಹಲವು ದರ್ಶನ-ಶ್ರವಣಗಳಾಗುವುದುಂಟು; ಸುಷುಪ್ತಿಯು ಹೇಗೋ ಹಾಗೆ ಇಲ್ಲೂ ಕಣ್ಮುಚ್ಚಿರುತ್ತದೆ. ಇವು ಸಾಮ್ಯಗಳು.

ಇನ್ನು ವೈಷಮ್ಯಗಳು. ಎಚ್ಚರದಲ್ಲಿ ಕಣ್ಣು ಬಿಟ್ಟಿರುತ್ತದೆ; ಆದರೆ ತುರೀಯದಲ್ಲಿ ಕಣ್ಣು ಮುಚ್ಚಿರುತ್ತದೆ. ಸ್ವಪ್ನವೆಂಬುದು ಕಲ್ಪಿತ, ಕೇವಲ ಸಂಸ್ಕಾರಾನುಸಾರಿಯಾದದ್ದು; ತುರೀಯವು  ಅಕಲ್ಪಿತ, ಏಕ-ಪ್ರಕಾರಕವಾದದ್ದು.  ನಿದ್ರಾವಸ್ಥೆಯಲ್ಲಿ ಮೈಯೆಲ್ಲಾ ಜೋತುಬಿದ್ದಿರುತ್ತದೆ; ಆದರೆ ತುರೀಯದಲ್ಲಿ ಇಡೀ ಶರೀರವೇ ಬಿಗಿಬಂದಿರುತ್ತದೆ. ಅಲ್ಲದೆ, ನಿದ್ದೆಗಾಗಿ ಒರಗಲು ಒಂದು ತಲ್ಪವಿದ್ದರೆ ಹೆಚ್ಚು ಸುಖ; ಆದರೆ ತುರೀಯಸ್ಥಿತಿಯು ತಾನೇ ತಲ್ಪವಿದ್ದಂತೆ. ಅಲ್ಲಿ ದೊರೆಯುವ ವಿಶ್ರಾಂತಿಯ ಬಗೆಯೇ ಬೇರೆ.

ಮೂರನ್ನೂ ಮೀರಿದ್ದು

ಹೀಗೆಲ್ಲ ಇರುವುದರಿಂದಲೇ ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಮೂರೂ ಅವಸ್ಥೆಗಳಾಚೆಗಿನ, ಹಾಗೂ ಮೇಲಿನ, ಅವಸ್ಥೆಯೇ ತುರೀಯಾವಸ್ಥೆ. ಈ ಮೂರು ಅವಸ್ಥೆಗಳಿಗೆ ವಿಶ್ವ-ತೈಜಸ-ಪ್ರಾಜ್ಞ - ಎಂಬ ಹೆಸರುಂಟು (ಎಂದೇ ಈ ಮೂರನ್ನೂ ಒಟ್ಟಿಗೇ ಹೇಳಲು "ವಿಶ್ವಾದಿಯಾದ ಮೂರು ಅವಸ್ಥೆ"ಗಳೆಂದು ಹೇಳುವುದು). ಹೀಗಾಗಿ ವಿಶ್ವಾದಿಯಾದ ಅವಸ್ಥಾ-ತ್ರಯವನ್ನು ಮೀರಿದುದು ತುರೀಯ. ಈ ತುರೀಯ-ತಲ್ಪದಲ್ಲಿ ದೊರೆಯುವ "ನಿದ್ರೆ"ಯು ಸಂವಿನ್ಮಯಿಯಾದುದು. ಎಂದರೆ ಜ್ಞಾನಮಯವಾದುದು. 

ಸಹಜಾಮನಸ್ಕ-ಸ್ಥಿತಿಗೂ ಇದೇ ಬಗೆಯ ಲಕ್ಷಣವನ್ನು ಹೇಳಿತ್ತು: ಇಲ್ಲಿ ಹೇಳಿರುವ ಎಷ್ಟೋ ಸ್ಥಿತಿಗಳಿಗೆ ಒಂದೇ ಬಗೆಯ ಲಕ್ಷಣಗಳನ್ನು, ಅಥವಾ ತುಂಬಾ ಹೋಲುವ ಲಕ್ಷಣಗಳನ್ನು, ಹೇಳಿದೆಯಲ್ಲವೆ? ಲಕ್ಷಣಗಳು ಸಮಾನವಾದರೆ ಲಕ್ಷಿತವೂ ಸಮಾನವಲ್ಲವೆ? - ಎಂಬ ಪ್ರಶ್ನೆ ಬರಬಹುದು. ಹೌದು. ಇವೆಲ್ಲವೂ ಉನ್ನತವಾದ ಸ್ಥಿತಿಗಳೇ, ಪರಸ್ಪರ ಬಹಳ ನಿಕಟವಾದ ಸ್ಥಿತಿಗಳೇ. ಎಂದೇ ಪರಸ್ಪರ ಅಷ್ಟು ಸಾಮ್ಯ.

ಇಲ್ಲಿ ಹೇಳಿರುವ ನಿದ್ರೆಯು ಅತಿವಿಶಿಷ್ಟ: ನಿರ್ವಿಕಲ್ಪವಾದ ನಿದ್ರೆಯಿದು. ಅರ್ಥಾತ್ ನಿರ್ವಿಕಲ್ಪ-ಸಮಾಧಿಯೇ. ಈ ನಿದ್ರೆಯು ಇಂತಹುದೆಂದು ಹೇಳಲೇ ಆಗದು. ಎಂದೇ "ಕಾಮ್ ಅಪಿ ನಿದ್ರಾಂ' (ಯಾವುದೋ ಒಂದು ನಿದ್ರೆಯನ್ನು) ಎಂದಿದೆ.

ಶಿಷ್ಯನು"ಸಖ"ನಾದದ್ದು

"ಅಂತಹ ನಿದ್ರೆಯನ್ನು ಸದಾ ಹೊಂದು, ಸಖನೇ" - ಎಂದು ಶ್ಲೋಕದಲ್ಲಿ ಹೇಳಿದೆ. ಸಖನೆಂದರೆ ಮಿತ್ರ, ಸ್ನೇಹಿತ. ಯಾರನ್ನು ಕುರಿತು ನಾವು "ಆಹಾ, ಅವನೆಂದರೆ ನನ್ನ ಪ್ರಾಣವೇ" ಎನ್ನಬಲ್ಲೆವೋ ಅಂತಹವನು ಸಖಾ ಎನಿಸಿಕೊಳ್ಳುತ್ತಾನೆ.

ಇದೋ! ಇಲ್ಲಿ ಗುರುವು ತನ್ನ ಶಿಷ್ಯನನ್ನೇ ಕುರಿತು "ಸಖೇ", "ಮಿತ್ರನೇ" - ಎಂದು ಸಂಬೋಧಿಸುತ್ತಿದ್ದಾನೆ! ಗುರುವಿನೊಂದಿಗೆ ಇಷ್ಟು ದೂರ ಪ್ರಯಾಣಮಾಡಿದ ಶಿಷ್ಯನು ಗುರುವಿಗೆ ಅತ್ಯಂತ ಇಷ್ಟನೂ ಮಿತ್ರನೂ ಆಗಿಬಿಡುತ್ತಾನೆ! ಎಂದೇ ಹೀಗೆ ಪರಮ-ಪ್ರೀತಿಯಿಂದ ಹೇಳುವ ಮಾತಿದು.

ಯಾರನ್ನಾದರೂ ಕಂಡರೆ ನಮಗೆ ತುಂಬಾ ಪ್ರೀತಿಯುಂಟಾದಲ್ಲಿ ಅವರಿಗೆ ಉತ್ತಮೋತ್ತಮ ಸುಖವನ್ನೇ ಬಯಸುತ್ತೇವೆ. ಎಂದೇ ಇಲ್ಲಿ ಜ್ಞಾನಮಯವೂ ಆನಂದಮಯವೂ ಆದ ಸ್ಥಿತಿಯನ್ನೇ ಆಶಿಸಿದೆ. ಜ್ಞಾನಾನಂದಮಯವಾದ ಸ್ಥಿತಿಯೆಂದರೆ ಪರಮಾತ್ಮ-ಭಾವವೇ. ಆ ಭಾವವು ನಿನಗುಂಟಾಗಲಿ, ಸದಾ ಇರಲಿ - ಎಂಬ ಹಾರೈಕೆ ಇಲ್ಲಿದೆ.

ವಿಶ್ರಾಂತಿಮ್ ಆಸಾದ್ಯ ತುರೀಯ-ತಲ್ಪೇ

   ವಿಶ್ವಾದ್ಯವಸ್ಥಾ-ತ್ರಿತಯೋಪರಿಸ್ಥೇ |

ಸಂವಿನ್ಮಯೀಂ ಕಾಮ್ ಅಪಿ ಸರ್ವ-ಕಾಲಂ

ನಿದ್ರಾಂ ಸಖೇ! ನಿರ್ವಿಶ ನಿರ್ವಿಕಲ್ಪಾಮ್ ||೨೬||

ಸೂಚನೆ : 16/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.