Sunday, October 3, 2021

ಶ್ರೀರಾಮನ ಗುಣಗಳು - 25 ಯಜ್ಞಪ್ರಿಯ- ಶ್ರೀರಾಮ(Sriramana Gunagalu - 25 Yajnapriya Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



'ಯಜ್ಞ'ವೆಂದಾಕ್ಷಣ ನಮ್ಮ ಮನಸ್ಸಿನಲ್ಲಿ ಬಂದು ಹೋಗುವ ವಿಷಯವಾವುದೆಂದರೆ ಹೋಮ-ಹವನ. ಅಲ್ಲೊಂದು, ಯಜ್ಞಕ್ಕೆ ಬೇಕಾದ ವೇದಿಕೆಯಿರುತ್ತದೆ; ಹೋಮಮಾಡಲು ಬೇಕಾದ ಕುಂಡವಿರುತ್ತದೆ; ಅನೇಕ ಋತ್ವಿಜರು ವೇದಘೋಷದೊಂದಿಗೆ 'ಸ್ವಾಹಾ' ಎಂದು ಹೇಳುತ್ತಾ ಯಾವುದೋ ಒಂದಷ್ಟು ಹವಿಸ್ಸುಗಳನ್ನು ಅಗ್ನಿಗೆ ಸಮರ್ಪಿಸುತ್ತಿರುತ್ತಾರೆ; ಭಾರಿಗಾತ್ರದ ಹೊಗೆಯು ಎಲ್ಲೆಲ್ಲೂ ಆವರಿಸುತ್ತಿರುತ್ತದೆ.. ಇದನ್ನೇ ಯಜ್ಞವೆನ್ನುತ್ತಾರೆ, ಇಂತಹ ಯಜ್ಞವನ್ನು ಮಾಡುವುದೆಂದರೆ ಶ್ರೀರಾಮನಿಗೆ ಅತ್ಯಂತಪ್ರಿಯವಾಗಿತ್ತು, ಆದ್ದರಿಂದ ಶ್ರೀರಾಮನನ್ನು 'ಯಜ್ಞಪ್ರಿಯ' ಎಂದು ಕರೆಯಬಹುದೇ? 

ಇದನ್ನು ಪ್ರೀತಿಸುತ್ತಿರುವುದರಿಂದ ಮಾತ್ರವೇ ಅವನನ್ನು ಯಜ್ಞಪ್ರಿಯನೆಂದು ಕರೆಯಲಾಗುತ್ತದೆ ಎಂಬುದು ಅತ್ಯಂತ ಸಂಕುಚಿತವಾದ ಮಾನಸಿಕತೆಯಾಗುತ್ತದೆ. ಹಾಗಾದರೆ ಯಜ್ಞವೆಂಬುದಕ್ಕೆ ಅದಾವ ಹಿರಿದಾದ ಅರ್ಥವಿದೆ? ಯಾವ ನೇರದಲ್ಲಿ ಶ್ರೀರಾಮನನ್ನು 'ಯಜ್ಞಪ್ರಿಯ'ನೆಂದು ಕರೆಯಬೇಕು?

'ಯಜ್ಞ'ವೆಂದರೆ ದೇವತೆಗಳಿಗೆ ಸಲ್ಲಿಸುವ ಪೂಜೆ, ಅಥವಾ ದೊಡ್ಡ ವಿಷಯಕ್ಕೆ ಕೊಡುವ ಗೌರವ. ನಮ್ಮ ಜೀವನದಲ್ಲಿ ಯಾವುದು ದೊಡ್ಡದು? ಎಂಬುದನ್ನು ತಿಳಿಸುವುದಕ್ಕೋಸ್ಕರವೇ 'ಪಂಚಮಹಾಯಜ್ಞ' ಎಂಬುದಾಗಿ ನಮ್ಮ ಸಂಪ್ರದಾಯದಲ್ಲಿ ಗುರುತಿಸಲಾಗಿದೆ. ನಾವು ಯಾವುದರಿಂದ ಉಪಕೃತರಾಗಿದ್ದೇವೋ ಅದನ್ನು ಪ್ರೀತಿಯಿಂದ ಕಂಡು ಕೃತಜ್ಞತೆಯನ್ನು ಸಲ್ಲಿಸುವ ಬಗೆಯನ್ನು ಯಜ್ಞವೆಂದು ಕರೆಯಲಾಗುತ್ತದೆ. ದೇವಯಜ್ಞ, ಋಷಿಯಜ್ಞ, ಭೂತಯಜ್ಞ, ಪಿತೃಯಜ್ಞ ಮತ್ತು ಮನುಷ್ಯಯಜ್ಞ ಎಂಬುದಾಗಿ ಐದು ಬಗೆಯ ಯಜ್ಞಗಳನ್ನು ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಮಾಡಲೇಬೇಕು. ಇವುಗಳಲ್ಲಿ ಯಾವುದಕ್ಕೆ ಚ್ಯುತಿಯಾದರೂ, ಅದು ಅವನ ಉತ್ತಮಜೀವನಕ್ಕೆ ಧಕ್ಕೆಯನ್ನುಂಟುಮಾಡುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳಿವೆ. ಶ್ರೀರಾಮನಾದರೋ ಈ ಐದೂ ಯಜ್ಞಗಳನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದ. ಆದ್ದರಿಂದ ಶ್ರೀರಾಮನನ್ನು ಯಜ್ಞಪ್ರಿಯನೆಂದು ಕರೆಯಲಾಗುತ್ತದೆ ಎಂದು ಹೇಳಿದರೆ ಶ್ರೀರಾಮನನ್ನು ನಿಜವಾಗಿ ಗೌರವಿಸಿದಂತಾಗುತ್ತದೆ.

ಈ ಐದು ಯಜ್ಞಗಳನ್ನು ಶ್ರೀರಾಮನು ತನ್ನ ಕಾಲದಲ್ಲಿ ಮಾಡುತ್ತಿದ್ದ. ಯಜ್ಞಮುಖರಾದ ದೇವತೆಗಳಿಗೆ, ನಾನಾ ಮಂತ್ರಗಳಿಂದ ಹವಿಸ್ಸನ್ನು ಅಭಿಮಂತ್ರಿಸಿ, ಅದನ್ನು ಅಗ್ನಿಯಲ್ಲಿ ಸಮರ್ಪಿಸುವ ವಿಧಾನವೇ ದೇವಯಜ್ಞ. ಇದರಿಂದ ದೇವತೆಗಳು ತೃಪ್ತರಾಗುತ್ತಾರೆ. ದೇವತೆಗಳ ತೃಪ್ತಿಯಿಂದ ಮಳೆ, ಬೆಳೆಯಾಗಿ ಜೀವಿಯ ಸರ್ವತೋಮುಖವಾದ ಬೆಳವಣಿಗೆ ಸಾಧ್ಯವಾಗುತ್ತದೆ. ಶ್ರೀರಾಮನು ಅಶ್ವಮೇಧ ಮೊದಲಾದ ಮಹಾಯಾಗಗಳನ್ನು ಮಾಡಿ ದೇವತೆಗಳನ್ನು ಪ್ರೀತಿಸುವುದರ ಮೂಲಕ ರಾಜ್ಯಕ್ಕೆ ಕಾಲಕಾಲಕ್ಕೆ ಬೇಕಾದ ಮಳೆ-ಬೆಳೆ ಸಮೃದ್ಧವಾಗಿ ಆಗುವಂತೆ ನೋಡಿಕೊಳ್ಳುತ್ತಿದ್ದ. ಋಷಿಗಳಿಂದ ಬಂದ ವೇದ, ಆಗಮ, ಶಾಸ್ತ್ರಾದಿಗಳ ಅಧ್ಯಯನವನ್ನು ಮಾಡಿ, ಋಷಿಗಳನ್ನು ತೃಪ್ತಿಪಡಿಸಿದ್ದ. ಈ ಪ್ರಪಂಚದಲ್ಲಿ ನಾವು ಚೆನ್ನಾಗಿ ಬಾಳಬೇಕಾದರೆ ನಮ್ಮ ಸುತ್ತಮುತ್ತಲಿರುವ ಸಕಲ ಜೀವಕೋಟಿಗಳೂ ನೆಮ್ಮದಿಯಿಂದ ಬಾಳುತ್ತಿರಬೇಕಾಗುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುವುದು ವಿವೇಕಯುತನಾದ ಮನುಷ್ಯನ ಕರ್ತವ್ಯವಾಗಿದೆ. ಇಂತಹ ಸಮಸ್ತಭೂತ(ಜೀವಿ)ಗಳನ್ನು ನೆಮ್ಮದಿಯಾಗಿ ಜೀವಿಸುವಂತೆ ಶ್ರೀರಾಮನು ಮಾಡಿದ್ದ. ಇದೇ ಭೂತಯಜ್ಞ. ಜನ್ಮಕ್ಕೆ ಕಾರಣೀಭೂತರಾದವರು ತಂದೆ-ತಾಯಿಯರು. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಪಿತೃಯಜ್ಞ. ಅವರ ಕಾಲಕಾಲಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವುದು, ಅವರ ಮಾತಿಗೆ ಗೌರವ ಕೊಡುವುದು ಇತ್ಯಾದಿ ನಡತೆಯಿಂದ ಅವರನ್ನು ತೃಪ್ತಿಪಡಿಸುವುದು ಪಿತೃಯಜ್ಞವಾಗುತ್ತದೆ. ಅಲ್ಲದೆ, ಮನುಷ್ಯಯಜ್ಞವೆಂಬುದು ಅತಿಥಿಪೂಜನ, ದಾರಿದ್ರ್ಯನಿವಾರಣ, ಜೀವನರಕ್ಷಣ ಮೊದಲಾದ ರೂಪವುಳ್ಳದ್ದು. ಈ ವಿಷಯದಲ್ಲಿ ಶ್ರೀರಾಮನದ್ದು ಎತ್ತಿದ ಕೈಯಾಗಿತ್ತು. ಹೀಗೆ ತನ್ನ ಜೀವನವನ್ನೇ  ಯಜ್ಞಮಯವಾಗಿಸಿಕೊಂಡು ಶ್ರೀರಾಮನು ಯಜ್ಞಪ್ರಿಯನಾದ. 

ಸೂಚನೆ : 3/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ