Saturday, October 2, 2021

ಷೋಡಶೋಪಚಾರ - 19 -ಪುಷ್ಪಾಂಜಲಿ (Shodashopachaara - 19 Upachaara-Pushpaanjali)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಇಷ್ಟಾರ್ಥದ ಪೂರೈಕೆಗಾಗಿ ಭಗವಂತನನ್ನು ಈ ಹಿಂದಿನ ಹದಿನೈದು ಉಪಚಾರಗಳಿಂದ ತೃಪ್ತಿಪಡಿಸಿರುತ್ತೇವೆ. ಭಗವಂತನ ಪ್ರಸನ್ನತೆಯೇ ಪ್ರಸಾದ. ಈ ಹಿನ್ನೆಲೆಯಲ್ಲಿ ಪುಷ್ಪವನ್ನು ಬೊಗಸೆಯಲ್ಲಿ ಹಿಡಿದು ಭಗವಂತನಲ್ಲಿ ಪ್ರಾರ್ಥಿಸುವ ವಿಧಾನವೇ 'ಪುಷ್ಪಾಂಜಲಿ'. ಇದನ್ನೂ ಒಂದು ಪೂಜೆಯಾಗಿಯೇ ಪರಿಗಣಿಸುತ್ತೇವೆ. ನಮಗೆ ಸರಿಯಾಗಿ ಪ್ರಾರ್ಥಿಸಲೂ ಬರಬೇಕು. ಸಕಲ ಇಷ್ಟಾರ್ಥವನ್ನು ಈಡೇರಿಸುವ ಭಗವಂತನಲ್ಲಿ ಏನೆಂದು ಪ್ರಾರ್ಥಿಸಿಕೊಳ್ಳಬೇಕೆಂಬ ಒಂದು ವಿವೇಕ ಬೇಕು. ವಿವೇಕದಿಂದ ಪ್ರಾರ್ಥಿಸಿದಾಗ ಮಾತ್ರ ಅವನು ಅನುಗ್ರಹಿಸುತ್ತಾನೆ. "ಅಪೇಕ್ಷೆಪಡುವವನೇ ಇಲ್ಲದಿದ್ದರೆ ಅರ್ಥವೂ ಇಲ್ಲ, ಕಾಮವೂ ಇಲ್ಲ. ಆದರೆ ಅರ್ಥಕಾಮಗಳು ಧರ್ಮವನ್ನು ಕೆಡಿಸುವ ರೀತಿಯಲ್ಲಿರಬಾರದು" ಎಂಬ ಶ್ರೀರಂಗಮಹಾಗುರುವಿನ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳೋಣ. ಪ್ರತಿಯೊಬ್ಬನೂ ವೈದಿಕ ಕರ್ಮಗಳ ಆರಂಭದಲ್ಲಿ ಮೊದಲು ಸಂಕಲ್ಪಮಾಡುವಾಗ 'ಚತುರ್ವಿಧ-ಪುರುಷಾರ್ಥ-ಸಿದ್ಧ್ಯರ್ಥಂ' (ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಬಗೆಯ ಪುರುಷಾರ್ಥ ಸಿದ್ಧಿಗಾಗಿ) ಎಂದು ಹೇಳುತ್ತೇವೆ. ಇದಕ್ಕೆ ವ್ಯತಿರಿಕ್ತವಾದುದನ್ನು ತಾಮಸ ಅಥವಾ ರಾಜಸ ಕಾಮನೆಗಳು ಎನ್ನುತ್ತಾರೆ. 

ಯಾವುದು ಪುರುಷಾರ್ಥಕ್ಕೆ ಪೋಷಕವಾದ ಕಾಮನೆಯಾಗುತ್ತದೆಯೋ ಅಂತಹ ಕಾಮನೆಯನ್ನು ಸಾತ್ತ್ವಿಕ ಎನ್ನಲಾಗುತ್ತದೆ. ಅಂದರೆ ಆರಾಧನೆಯ ಕೊನೆಯಲ್ಲಿ ಇಂತಹ ಕಾಮನೆಯನ್ನು ಬೇಡಿಕೊಳ್ಳಬೇಕು. ಶ್ರೀರಾಮನ ಪೂಜೆಯನ್ನೋ, ಶ್ರೀರಾಮಾಯಣ ಪಾರಾಯಣವನ್ನೋ ಭಕ್ತಿಶ್ರದ್ಧೆಯಿಂದ ಮಾಡಿ, ಕೊನೆಯಲ್ಲಿ ಅವನ ಪ್ರಾರ್ಥನೆ 'ನನ್ನ ತಮ್ಮನಿಗೆ ಬರುವ ಎಲ್ಲಾ ಆಸ್ತಿಯೂ ನನಗೇ ಬರುವಂತಾಗಲಿ" ಎಂದಾದರೆ ಆ ಪ್ರಾರ್ಥನೆ ಎಷ್ಟು ಸಮಂಜಸ?  ಯಾವ ಆಸ್ತಿಯೂ ಬೇಡವೆಂದು ಕಾಡಿಗೆ ತೆರಳಿದ ಅಣ್ಣ ರಾಮನ ಆದರ್ಶ ಒಂದು ಕಡೆ; ಅಣ್ಣನಿಲ್ಲದ ಅಯೋಧ್ಯೆಯು ಅರಣ್ಯವೇ ಸರಿ. ಇಂತಹ ರಾಜ್ಯ ಯಾರಿಗೆ ಬೇಕು? ಎಂದು ಅಣ್ಣನಿಗೆ ಸರ್ವಸ್ವವನ್ನೂ ಸಮರ್ಪಿಸಿದ ತಮ್ಮ, ಭರತನ ತ್ಯಾಗ ಇನ್ನೊಂದು ಕಡೆ. ಇಂತಹ ಶ್ರೇಷ್ಠವಾದ ಆದರ್ಶವನ್ನು ಸಾರುವ ಶ್ರೀರಾಮನ ಆರಾಧನೆಯ ಕೊನೆಯಲ್ಲಿ ಸ್ವಾರ್ಥದಿಂದ ಕೂಡಿದ ಆಸ್ತಿಭಾಗದ ಪ್ರಾರ್ಥನೆ ವಿಪರ್ಯಾಸವಲ್ಲವೇ? ಹಾಗಾಗಿ ಪ್ರಾರ್ಥಿಸಲೂ ಒಂದು ವಿವೇಕ ಬೇಕು. "ಆರೋಗ್ಯಂ ಭಾಸ್ಕರಾದ್ ಇಚ್ಛೇತ್ ಧನಮಿಚ್ಛೇತ್ ಹುತಾಶನಾತ್| ಜ್ಞಾನಂ ಮಹೇಶ್ವರಾದಿಚ್ಛೇತ್ ಮೋಕ್ಷಮಿಚ್ಛೇತ್ ಜನಾರ್ದನಾತ್" ಎಂಬ ಮಾತಿನಂತೆ ಆರೋಗ್ಯವನ್ನು ಭಗವಾನ್ ಸೂರ್ಯದೇವನಿಂದ, ಸಂಪತ್ತನ್ನು ಅಗ್ನಿದೇವನಿಂದ, ಜ್ಞಾನವನ್ನು ಮಹೇಶ್ವರನಿಂದ ಮತ್ತು ಮೋಕ್ಷವನ್ನು ವಿಷ್ಣುವಿನಿಂದ ಬಯಸಬೇಕು ಎಂಬ ಸಾಮಾನ್ಯವಾದ ವಾಡಿಕೆಯಿದೆ. ಹೀಗೆ ನಿರ್ದಿಷ್ಟ ದೇವತೆಗಳನ್ನು ಆರಾಧಿಸಿ ಅವರಿಂದ ಉದ್ದಿಷ್ಟವಾದ ಫಲವನ್ನು ನಿರೀಕ್ಷಿಸುವುದು ಜಾಣತನವಾಗುತ್ತದೆ. ಹೀಗೆ ಮಾಡಿದರೆ ಫಲವು ಶೀಘ್ರವಾಗಿ ನೆರವೇರುತ್ತದೆ.

ಸೂಚನೆ : 02/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.