Thursday, October 21, 2021

ಮಹರ್ಷಿಗಳು ಕಂಡರುಹಿದ ನಾಟ್ಯಕಲೆ (Maharshigalu Kandaruhida Naṭyakale)

ಲೇಖಕರು: ವಾದಿರಾಜ. ಪ್ರಸನ್ನ 

(ಪ್ರತಿಕ್ರಿಯಿಸಿರಿ lekhana@ayvm.in)



ಇತ್ತೀಚಿನ ದಿನಗಳಲ್ಲಿ ನಾಟ್ಯವು ಹಲವು ಬಗೆಗಳಲ್ಲಿ ಬೆಳೆದು ಬಂದಿದೆ. ನಾಟ್ಯರಂಗಗಳಲ್ಲಿ  ತಮ್ಮ ಕಲೆಯನ್ನು ಪ್ರದರ್ಶಿಸುವುದು ಹಿಂದಿನ ಕಾಲದಲ್ಲಿ  ನಟರ ವಾಡಿಕೆಯಾದರೆ, ಇದನ್ನು ಪ್ರದರ್ಶಿಸಲು ಇಂದು ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ. ಇಂದಿನ ನಾಟ್ಯಕಲಾ ಪ್ರದರ್ಶನದ ಮೂಲ ಉದ್ದೇಶವು ಬಹುಮಟ್ಟಿಗೆ ಮನೋರಂಜನೆ, ಕಲಾಪ್ರದರ್ಶನ, ಕೀರ್ತಿ ಸಂಪಾದನೆ ಹಾಗೂ ಧನ ಸಂಪಾದನೆಯೇ ಆಗಿದೆ. ಆಧುನಿಕ ಡ್ಯಾನ್ಸ್ ನ ಭರಾಟೆಯಲ್ಲಿ  ಪ್ರಾಚೀನ ನಾಟ್ಯ ಪದ್ಧತಿಗಳಾದಂತಹ ಭರತನಾಟ್ಯವೇ ಮೊದಲಾದ ಭಾರತೀಯ ನಾಟ್ಯಪರಂಪರೆಗಳ  ಜನಪ್ರಿಯತೆ ಕಡಿಮೆಯಾಗುತ್ತಿದೆಯೇನೋ ಎನ್ನಿಸುವಂತಿದೆ. ನಾಟ್ಯ, ಸಂಗೀತ, ನಾಟಕ ಮುಂತಾದ ದೃಶ್ಯ ಕಲೆಗಳು ಬಹಳ ಪ್ರಭಾವಶಾಲಿ ಮಾಧ್ಯಮಗಳು. ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮನೋರಂಜನೆಯನ್ನಷ್ಟೆ ಅಲ್ಲದೆ, ಲೋಕಕ್ಕೆ ಶಿಕ್ಷಣವನ್ನು ನೀಡುವಲ್ಲೂ,  ನಮ್ಮ ಸಂಸ್ಕೃತಿ ಪ್ರಸಾರದಲ್ಲೂ ಮುಖ್ಯಪಾತ್ರ ವಹಿಸಬಲ್ಲವು.


ಇಂದಿನ ಕಾಲದಲ್ಲಿ ಕೆಲ ಯುವಕರು ಅತ್ಯಾಧುನಿಕ ಬೈಕುಗಳನ್ನು ಖರೀದಿಸಿ ಮಾಡುವ ವಿವಿಧ ಪ್ರದರ್ಶನಗಳನ್ನು ಗಮನಿಸಬಹುದು. ಉದಾಹರಣೆಗೆ, ಇದರಲ್ಲಿನ ಅತ್ಯುತ್ತಮ, ಬಲಿಷ್ಠ  ಇಂಜಿನ್ ಶಕ್ತಿಯನ್ನು ಬಳಸಿಕೊಂಡು ಅತಿವೇಗವಾಗಿ ಗಾಡಿಗಳನ್ನು ಚಲಾಯಿಸುವುದು, ವ್ಹೀಲಿಂಗ್ ಮಾಡುವುದು ಇತ್ಯಾದಿಗಳಿಂದ ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ಗಾಡಿಯನ್ನು ತೆಗೆದುಕೊಂಡು ಮನೆಯಿಂದ ಹೊರಟರೂ ಪುನಃ ಕ್ಷೇಮವಾಗಿ ಮನೆಯನ್ನು ತಲುಪುವ ಜವಾಬ್ದಾರಿಯೂ ಇರಬೇಕು. ಈ ವಿಷಯವನ್ನು ಮರೆತು ಕ್ಷಣಿಕ ಸಂತೋಷಕ್ಕೆ ಒಳಗಾಗಿ ಮೈಮರೆತರೆ ಅಪಘಾತವಾಗುವುದುಂಟು. ನಾವು ತಿನ್ನುವ ಆಹಾರವು ನಾಲಿಗೆಗೆ ರುಚಿಯನ್ನು ಕೊಡುವುದರಲ್ಲಿ  ಮಾತ್ರ ಸೀಮಿತವಾಗಿರದೆ ದೇಹದ ಅರೋಗ್ಯವನ್ನು ಕಾಪಾಡುವಂತಿರಬೇಕು. ಊಟವಾಗಲಿ, ನೋಟವಾಗಲಿ ರಸಭರಿತವಾಗಿರಬೇಕು. ಇಲ್ಲವಾದರೆ ಜೀವನ ಸಪ್ಪೆ. ಆದರೆ ನಾಲಿಗೆ, ಕಣ್ಣು ಮುಂತಾದ ಇಂದ್ರಿಯಗಳ ಕೈಯಲ್ಲೇ ಲಗಾಮನ್ನು ಕೊಟ್ಟುಬಿಟ್ಟರೆ ಈ ಶರೀರಕ್ಕೆ ತೊಂದರೆಯಾಗುವುದು ಕಟ್ಟಿಟ್ಟಿದ್ದು. ಈ ಮಾತು ಕಲಾಪ್ರದರ್ಶನಗಳಿಗೂ ಅನ್ವಯಿಸುತ್ತದೆ.      


ಭಾರತದೇಶದಲ್ಲಿ ಮಹರ್ಷಿಗಳು ತಂದ ನಾಟ್ಯಕಲೆಯಲ್ಲಿ ಇಂದ್ರಿಯಗಳು  ಮೆಚ್ಚುವ ಕಲೆ, ಸೌಂದರ್ಯ, ಮುಂತಾದ ಅಂಶಗಳು ಪುಷ್ಕಳವಾಗಿಯೇ ಇವೆ. ಆದರೆ ಮನೋರಂಜನೆಯೊಡನೆ ಆತ್ಮರಂಜನೆಗೂ ಬೇಕಾದ ರಸ, ಭಾವಗಳನ್ನು ಸೇರಿಸಿಟ್ಟಿದ್ದಾರೆ. ಭಾರತೀಯ ನಾಟ್ಯವು ಮೇಲ್ನೋಟಕ್ಕೆ ಮೈ ಕುಣಿಸುವಂತೆ ಕಂಡರೂ ಅಷ್ಟೇ ಅದರ ಉದ್ದೇಶವಲ್ಲ. ಭರತಮುನಿಗಳು ತಂದ ನಾಟ್ಯದಲ್ಲಿ  ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ. ಅಲ್ಲಿ ದೇವಿಯ ಸೌಂದರ್ಯವೂ ಉಂಟು, ಶಿವನ ಗಾಂಭೀರ್ಯವೂ  ಉಂಟು. ಶಿವೆಯ ಲಾಸ್ಯ- ಶಿವನ ತಾಂಡವಗಳೆರಡೂ ಉಂಟು.  ಅದು ಒಳತಾಪಗಳನ್ನು ತಣಿಸುವುದು. ನಮ್ಮ ದೇಶದ ಸಂಸ್ಕೃತ ವ್ಯಾಕರಣ ಶಾಸ್ತ್ರದ ಆರಂಭದಲ್ಲಿ ಮಾಹೇಶ್ವರ ಸೂತ್ರಗಳ ಪ್ರಸ್ತಾಪವಿದೆ. ಆ ಪ್ರಕರಣದಲ್ಲಿ ನಟರಾಜನು ನೃತ್ತವನ್ನು ಮಾಡಿ ಅದರ ಅಂತ್ಯದಲ್ಲಿ ಢಕ್ಕೆಯನ್ನು ಹದಿನಾಲ್ಕು ಬಾರಿ ಬಾರಿಸಿದುದರಿಂದ ಸನಕಾದಿಸಿದ್ಧರ ಉದ್ಧಾರವಾಯಿತೆಂಬ ಮಾತಿದೆ. ಇಂತಹ ಅದ್ಭುತ ಪರಿಣಾಮ ಹೇಗಾಗಬಹುದೆಂಬ ಬಗ್ಗೆ ಬಹಳ ಜನರಲ್ಲಿ ಕುತೂಹಲವೇಳುವುದು ಸಹಜವೇ. ಭಾರತೀಯ ವಿದ್ಯೆ ಹಾಗೂ ಕಲೆಗಳ ಆಳವನ್ನು ಅರಿತಿದ್ದ ಶ್ರೀರಂಗ ಮಹಾಗುರುಗಳು ಈ ನೃತ್ತದ ಮರ್ಮವನ್ನು ಹೀಗೆ ಬಿಚ್ಚಿಟ್ಟಿದ್ದಾರೆ - "ನಟರಾಜನು, (ತನ್ನ) ನಾಟ್ಯಚೇಷ್ಟೆಯಿಂದ ಸೃಷ್ಟಿ ಸ್ಥಿತಿಗಳು ಆಗಿ, ತಿರುಗಿ ಲೀನವಾಗಿಸಲು ಉಂಟಾಗುವ ಆನಂದದ ಗುಟ್ಟನ್ನು ಸನಕಾದಿಸಿದ್ಧರಿಗೆ ಉಪದೇಶ ಮಾಡುತ್ತಾನೆ".  ಸನಕಾದಿಸಿದ್ಧರು ಅಂತರಂಗಕ್ಷೇತ್ರದ ಸಾಧನೆಯಿಂದ ನಾಟ್ಯಕಲಾಚಾರ್ಯನಾದ ನಟರಾಜನ ದೈವೀ ವಿಲಾಸಗಳನ್ನು ಅರ್ಥಮಾಡಿಕೊಳ್ಳಬಲ್ಲ ಶುದ್ಧಪ್ರಕೃತಿಯುಳ್ಳವರಾಗಿದ್ದರು. ನಾವೂ ಅಂತಹ ಪ್ರಕೃತಿಯವರಾಗಿದ್ದಾಗಷ್ಟೆ ನಟರಾಜನ ನಾಟ್ಯದ ಮರ್ಮವನ್ನು ಅರಿಯಬಹುದಷ್ಟೆ. 


ಭಾರತೀಯ ನಾಟ್ಯವು  ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಇಂದು ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಂಡ ಜೀವನದ ಮೂಲೋದ್ದೇಶವಾದ ಪರಮಾತ್ಮಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ. 


ಯೋಗಾಯತನವೂ ಮತ್ತು ಭೋಗಾಯತನವೂ ಆಗಿರುವ ಈ ನಾಟ್ಯಕಲೆಯ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸುವಂತಾಗಲಿ ಎಂದು ಆಶಿಸೋಣ.


ಸೂಚನೆ: 21/10/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ  ದಲ್ಲಿ ಪ್ರಕಟವಾಗಿದೆ.