Saturday, October 9, 2021

ಯೋಗತಾರಾವಳಿ - 24 ಯೋಗನಿದ್ರೆ (Yogataravali - 24 Yoganidre)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೫)


ವಿಚ್ಛಿನ್ನಸಂಕಲ್ಪ


ಎರಡು ನಕಾರಗಳು


ಅಜಾಡ್ಯ-ನಿದ್ರೆಯೆಂಬುದಾಗಿ ನಕಾರ-ದ್ವಯದೊಂದಿಗೆ ಹಿಂದಿನ ಶ್ಲೋಕದಲ್ಲಿ ಹೇಳಿತ್ತು:'ನಕಾರ' ಎಂದರೆ ಇಲ್ಲವೆನ್ನುವುದು; ನಕಾರವನ್ನು ಎರಡು ಬಾರಿ ಹೇಳಿದರೆ ಅದು ನಕಾರ-ದ್ವಯವಾಗುವುದು. 

ಉದಾಹರಣೆಗೆ, "ಇವನು ಅಸಾಧಾರಣ" ಎಂದು ಹೇಳುವಾಗ ಎರಡು ನಕಾರಗಳಿವೆ. "ಸಾಧಾರಣ" - ಎಂಬುದು ಒಂದು ನಕಾರವನ್ನು ಹೇಳುತ್ತದೆ: "ಶ್ರೇಷ್ಠನಲ್ಲ" ಎಂಬುದನ್ನು. "ಅ"- ಎಂಬುದು ಮತ್ತೊಂದು ನಕಾರವನ್ನು ಹೇಳುತ್ತದೆ. ಎರಡು ನಕಾರ ಬಂದಿತಾಗಿ, "ಅ-ಸಾಧಾರಣ" ಎಂದರೆ "ಬಹಳ ವಿಶಿಷ್ಟನಾದವನು" – ಎಂಬ ಅರ್ಥವು ಬರುತ್ತದೆ! ಹೀಗೆಯೇ "ಅದ್ವಿತೀಯ", "ನಿರ್ಮಲ", "ಅಭಯ", "ಅಸ್ತೇಯ" ಇತ್ಯಾದಿಗಳಲ್ಲೂ. 

 ಅ-ಜಾಡ್ಯವೆಂದರೂ ಹಾಗೆಯೇ. ಜಡವೆಂದರೆ ನಿಶ್ಚೇಷ್ಟವಾಗಿರುವುದು; ಮಂಕು; ಸ್ಫೂರ್ತಿ ಮತ್ತು ಉತ್ಸಾಹಗಳಿಲ್ಲದಿರುವುದು. ಅಜಾಡ್ಯವೆಂದರೆ ತದ್ವಿರುದ್ಧ: ಚೈತನ್ಯವು ತುಂಬಿರುವಂತಹುದು. ಅಜಾಡ್ಯ-ನಿದ್ರೆಯ ಬಗ್ಗೆ ಹಿಂದಿನ ಶ್ಲೋಕದಲ್ಲಿ ಸ್ವಲ್ಪ ಹೇಳಿತ್ತು. 

ಇಲ್ಲಿ ಅದರ ಮುಂದಿನ ಸ್ತರವಾದ ಯೋಗ-ನಿದ್ರೆಯನ್ನು ಹೇಳಿದೆ. ಸಂಕಲ್ಪ-ವಿಕಲ್ಪಗಳ ಪ್ರಭಾವವಿಲ್ಲದಂತಹ ಸ್ಥಿತಿಯನ್ನು ಹಿಂದೆ ಮನೋನ್ಮನಿಯ ಬಗ್ಗೆ ಹೇಳುವಾಗ ಹೇಳಿತ್ತು. ಇಲ್ಲಿ ಅವುಗಳ ಬುಡವನ್ನೇ ಕತ್ತರಿಸುವುದನ್ನು ಹೇಳಿದೆ.

 ಮೂಲವನ್ನೇ ಕತ್ತರಿಸು

ಛೇದ-ವಿಚ್ಛೇದ, ಛಿನ್ನ-ವಿಚ್ಛಿನ್ನ – ಈ ಪದಗಳು ಕತ್ತರಿಸಿಹೋಗುವುದನ್ನು ಹೇಳುತ್ತವೆ.  ಹೀಗೆ ಸಂಕಲ್ಪ-ವಿಕಲ್ಪಗಳು ವಿಚ್ಛಿನ್ನ-ಮೂಲವಾದಾಗ, ಎಂದರೆ ಬೇರನ್ನೇ ಕತ್ತರಿಸಿ ಹಾಕಿದಾಗ, ಬರುವ ಸ್ಥಿತಿಯೇ ಬೇರೆ. ಅಜಾಡ್ಯ-ನಿದ್ರೆಯು ಜಿತವಾಗುತ್ತಿದ್ದಂತೆ ಸಂಕಲ್ಪ-ವಿಕಲ್ಪಗಳ ಮೂಲಕ್ಕೇ ಛೇದವಾಗುವುದು. 

ಮೂಲಕ್ಕೇ ಪ್ರಹಾರವಾದಾಗ ಅದರ ಬಾಧೆಯು ಇನ್ನು ಮತ್ತೆ ಮತ್ತೆ ತಲೆದೋರದು. ಅಂತರಂಗದಲ್ಲಿ ಯಾವುದೇ ಹೊಯ್ದಾಟ-ತೊಯ್ದಾಟಗಳಿಲ್ಲದೆ, ಮನೋ-ನೈಶ್ಚಲ್ಯವುಂಟಾಗುತ್ತದೆ. ಇದು ಒಂದು ಪರಿಣಾಮವಾಯಿತು. 

ಎರಡನೆಯ ಪರಿಣಾಮವೊಂದುಂಟು: ಅದೆಂದರೆ, ಕರ್ಮ-ಜಾಲವೇ ನಿರ್ಮೂಲಗೊಳ್ಳುವುದು. ಹೀಗಾದಾಗ ಉನ್ನತ-ಸ್ಥಿತಿಯನ್ನು ಪಡೆಯುವುದನ್ನು ಬಾಧಿಸುವ ಕರ್ಮಗಳು ಇಲ್ಲದಂತಾಗುತ್ತವೆ. ನಮ್ಮ ಮನಸ್ಸು ಭಗವಂತನತ್ತ ಹರಿಯಲಾಗದಂತೆ ಮಾಡುವುದೆಂದರೆ ನಮ್ಮ ಪೂರ್ವ-ಕರ್ಮಗಳೇ, ದುಷ್ಟ-ಕರ್ಮಗಳೇ!

ನಾವು ಮಾಡಿದ ಕರ್ಮಗಳ ಫಲಗಳನ್ನು ಅನುಭವಿಸಿ ಮುಗಿಸಲಾದೀತೇ? ಹಿಂದೆ ಮಾಡಿದ ಕರ್ಮಗಳಷ್ಟೇ ಅಲ್ಲದೆ ಈಗಲೂ ಕರ್ಮಗಳನ್ನು ಮಾಡುತ್ತಲೇ ಇರುವೆವೆಲ್ಲಾ? ಹೀಗಾಗಿ ಬಂಧಗಳು ಹೆಚ್ಚಾಗುತ್ತಲೇ ಇರುತ್ತವೆ. 

"ಮರ್ಮವರಿತು ಕರ್ಮ ಮಾಡಬೇಕು"ಎಂದು ಹೇಳುತ್ತಿದ್ದರು ಶ್ರೀರಂಗಮಹಾಗುರುಗಳು. ಹಾಗಿಲ್ಲದ ಕರ್ಮಗಳೆಲ್ಲ ಬಂಧಕವೇ. ನಾನಾ ಕರ್ಮಗಳಿಂದ ನಾನಾ ಫಲಗಳು. ಅವುಗಳಲ್ಲೇ ಕೆಲವಕ್ಕೆ ಪರಸ್ಪರ ನಂಟೂ ಉಂಟು. ಅಂತಹವುಗಳು ಒಂದರೊಂದಿಗೆ ಸೇರಿಕೊಂಡು ಕರ್ಮ-ಜಾಲವೇ ಆಗುವುದು. ಜಾಲವೆಂದರೆ ಬಲೆ. ಅಲ್ಲಿಂದ ಬಿಡುಗಡೆ ಸುಲಭವಲ್ಲ.

ಅಂತಿರುವ ಕರ್ಮ-ಜಾಲವನ್ನು ನಿಃಶೇಷವಾಗಿ ನಿರ್ಮೂಲನ ಮಾಡಬೇಕು. ಅಜಾಡ್ಯ-ನಿದ್ರೆಯು ಚೆನ್ನಾಗಿ ಊರಿದಲ್ಲಿ ಇದು ಸಾಧಿತವಾಗುತ್ತದೆ. ಇದು ಯೋಗ-ನಿದ್ರೆಯತ್ತ ಒಯ್ಯುತ್ತದೆ.

"ಭದ್ರ"ವಾದ ನಿದ್ರೆ

ಯೋಗಿಯು ಸುಮ್ಮನೆ ಮಾಡುವ ನಿದ್ರೆಯೆಲ್ಲಾ ಯೋಗ-ನಿದ್ರೆಯಲ್ಲ. ಅಜಾಡ್ಯ-ನಿದ್ರೆಯಲ್ಲಿ ನೆಲೆನಿಂತಾದ ಮೇಲೆ ಅದರ ಮುಂದುವರಿಕೆಯಾಗಿ ಒದಗಬಹುದಾದ ಯೋಗಸ್ಥಿತಿಯೇ ಯೋಗ-ನಿದ್ರೆ.

ಸಂಕಲ್ಪ-ವಿಕಲ್ಪಗಳ ಮೂಲೋಚ್ಛೇದ ಹಾಗೂ ಕರ್ಮಜಾಲದ ನಿಃಶೇಷ-ನಿರ್ಮೂಲನ – ಇವೆರಡಾದಾಗ, ಅಜಾಡ್ಯನಿದ್ರೆಯು ಯೋಗನಿದ್ರೆಯಾಗುವುದು.

ಈ ನಿದ್ರೆಯು ಭದ್ರವಾದುದು. ಭದ್ರವೆಂಬುದಕ್ಕೆ ಕನ್ನಡದಲ್ಲಿ ಪ್ರಸಿದ್ಧವಾದ ಅರ್ಥವಿಲ್ಲಿಲ್ಲ. ಇಲ್ಲಿ ಭದ್ರವೆಂದರೆ ಶುಭವಾದುದು. ನಿತಾಂತ-ಭದ್ರವೆಂದರೆ ಅತ್ಯಂತ-ಮಂಗಳವಾದುದು, ಸೌಖ್ಯ-ಪ್ರದವಾದುದು. ಇದೂ ಕೂಡ  ಹಿಂದೆಯೂ ಒಂದೆರಡು ಬಾರಿ ಹೇಳಿರುವಂತೆ ನಿರಂತರಾಭ್ಯಾಸದಿಂದ ಆಗುವಂತಹುದು. ಮೊದಲು ಕಡು ಕಷ್ಟವೆನಿಸುವಂತಹುದೂ ನಿರಂತರಾಭ್ಯಾಸದಿಂದ ಅತ್ಯಂತ-ಸುಲಭವೆಂದೇ ಸಹಜವೆಂದೇ ತೋರುವಂತಾಗುವುದು. ಹೀಗೆ ಸುಖಕರವೂ ಮಂಗಲಕರವೂ ಆದುದು ಯೋಗ-ನಿದ್ರೆ.

ಯೋಗನಿದ್ರಾ-ವೈಭವ

ಇಂತಹ ಯೋಗ-ನಿದ್ರೆಯು ಯೋಗಿಯಲ್ಲಿ ಜೃಂಭಿಸುವುದು (ಎಂದರೆ ವಿಜೃಂಭಿಸುವುದು, ಮೈದೋರುವುದು, ಅರಳುವುದು). ಹೂವರಳುವಂತೆ ಯೋಗಿಯ ಶರೀರದಲ್ಲಿ ಯೋಗ-ನಿದ್ರೆಯು ವಿಕಸಿಸುವುದು. ಯೋಗ-ರೂಪವಾದ ನಿದ್ರೆಯು ಯೋಗ-ನಿದ್ರೆಯೆನಿಸುವುದು.

ಸಂಕಲ್ಪವು ಮಾನಸಕರ್ಮ. ಸಂಕಲ್ಪದಿಂದ ಕಾಮ, ಕಾಮದಿಂದ ಕರ್ಮ - ಎಂಬ ಕ್ರಮವೊಂದನ್ನು ಕಾಣುತ್ತೇವೆ. ಪ್ರಕೃತ-ಶ್ಲೋಕದಲ್ಲಿ ಸಂಕಲ್ಪ-ವಿಕಲ್ಪಗಳೆರಡನ್ನೂ ಬೇರುಸಹಿತ ಕಿತ್ತೊಗೆದ ಮೇಲೆ, ಜೊತೆಗೇ ಕರ್ಮಸ್ತೋಮವನ್ನೂ ಬುಡಸಮೇತ ಕಿತ್ತುಹಾಕಿದ ಮೇಲೆ – ಎರಡೂ ಆದಮೇಲೆ, ದೊರೆಯುವ ಯೋಗನಿದ್ರಾ-ಸ್ಥಿತಿಯನ್ನು ಹೇಳಿದೆ. 

ವಿಷ್ಣುವು ಆದಿಶೇಷನ ಮೇಲೆ ಪವಡಿಸಿರುವುದನ್ನೂ ಯೋಗನಿದ್ರೆಯೆಂದೇ ಹೇಳುವುದು. ಶಾಲೆ-ಗ್ರಂಥಾಲಯಗಳಲ್ಲಿ ಕುಳಿತು ತೂಕಡಿಸುವ 'ಮಹಾತ್ಮ'ರಿರಬಹುದು! ಆದರೆ ಮಲಗಿಯೂ ಭದ್ರವಾದ (ಯೋಗ)ನಿದ್ರೆಯನ್ನು ಮಾಡುವವನು ಭಗವಂತ!!


ವಿಚ್ಛಿನ್ನ-ಸಂಕಲ್ಪ-ವಿಕಲ್ಪ-ಮೂಲೇ

   ನಿಃಶೇಷ-ನಿರ್ಮೂಲಿತ-ಕರ್ಮ-ಜಾಲೇ |

ನಿರಂತರಾಽಭ್ಯಾಸ-ನಿತಾಂತ-ಭದ್ರಾ

   ಸಾ ಜೃಂಭತೇ ಯೋಗಿನಿ ಯೋಗ-ನಿದ್ರಾ || ೨೫||

ಸೂಚನೆ : 09/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.