Saturday, October 30, 2021

ದೀಪಾವಳೀ ಮತ್ತು ಲಕ್ಷ್ಮೀ ಪೂಜೆ (Deepavali Matthu Lakshmi Puje)

(ಪ್ರತಿಕ್ರಿಯಿಸಿರಿ lekhana@ayvm.in)




ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಸಂಭ್ರಮದಿಂದ ಆಚರಿಸಲ್ಪಪಡುವ ಹಬ್ಬ ದೀಪಾವಳೀ.  ಆಚರಣೆಯ ಕ್ರಮದಲ್ಲಿ  ವ್ಯತ್ಯಾಸಗಳು ಕಂಡುಬಂದರೂ ಎಲ್ಲ ವರ್ಗದವರೂ ಇದನ್ನು ಆಚರಿಸುತ್ತಾರೆ.  ಆಶ್ವಯುಜ ಮಾಸದ ಕೃಷ್ಣಪಕ್ಷ ತ್ರಯೋದಶಿಯಿಂದ ಕಾರ್ತಿಕ ಶುಕ್ಲ ತದಿಗೆಯ ವರೆಗಿನ ಆರು ದಿನಗಳ ಕಾಲ ಈ  ಹಬ್ಬವು ಆಚಾರಿಸಲ್ಪಡುವುದುಂಟು. ಚತುರ್ದಶಿಯು ನರಕಚತುರ್ದಶಿಯೆಂಬ ಹೆಸರಿನಿಂದಲೂ, ಅಮಾವಾಸ್ಯೆಯು  ದೀಪಾವಳೀ ಎಂಬುದಾಗಿಯೂ, ಪ್ರಥಮೆಯು ಬಲಿಪಾಡ್ಯಮಿಯೆಂದೂ, ದ್ವಿತೀಯೆಯು ಯಮದ್ವಿತೀಯಾ/ಭಗಿನೀದ್ವಿತೀಯಾ ಎಂಬುದಾಗಿಯೂ ಪ್ರಸಿದ್ಧವಾಗಿವೆ. 

ಆಚರಣೆಯ ಕ್ರಮ

ದೀಪಾವಳಿಯಂದು ಪ್ರಾತಃಕಾಲದಲ್ಲಿ  ಅಭ್ಯಂಗಸ್ನಾನವನ್ನು ಮಾಡುವುದು ಎಲ್ಲ ವರ್ಣ-ವರ್ಗದವರಲ್ಲೂ ಕಂಡುಬರುವ ಸಾಮಾನ್ಯ ಕ್ರಮ. ಅಂದು ಸ್ನಾನದ ನೀರಿನಲ್ಲಿ ಗಂಗೆಯ ಸಾನ್ನಿಧ್ಯವೂ, ಎಣ್ಣೆಯಲ್ಲಿ ಲಕ್ಷ್ಮೀದೇವಿಯ ಸಾನ್ನಿಧ್ಯವೂ ಇರುವುದೆಂಬುದು ಮಹರ್ಷಿಗಳ ದೃಷ್ಟಿ. ಸಂಭ್ರಮದಿಂದ  ಹೊಸ ಬಟ್ಟೆಗಳನ್ನು ಧರಿಸುವ ರೂಢಿಯೂ ಸಾಮಾನ್ಯವಾಗಿದೆ.  

ಮನೆ-ಮಠ-ದೇವಾಲಯಗಳಲ್ಲೂ ಅಂದು ಭಗವಂತನಿಗೆ ವಿಶೇಷವಾಗಿ ಪೂಜೆಯು ಸಂಪನ್ನವಾಗುತ್ತದೆ. ವ್ಯಾಪಾರಿಗಳು ಅಮಾವಾಸ್ಯೆಯಂದು ರಾತ್ರಿ ವಿಶೇಷವಾಗಿ ಲಕ್ಶ್ಮೀದೇವಿಯ ಪೂಜೆಯನ್ನು ಮಾಡಿ ಬಂಧು-ಮಿತ್ರರಿಗೆ ಸಿಹಿಯನ್ನು ಹಂಚುವುದು ಪ್ರಸಿದ್ಧವಾಗಿದೆ. ವ್ಯಾಪಾರದ ಹೊಸ ಲೆಕ್ಕವನ್ನೂ ಅಂದಿನಿಂದ ಪ್ರಾರಂಭಿಸುತ್ತಾರೆ. 

'ಆವಳಿ' ಎಂದರೆ ಸಾಲು. ದೀಪಾವಳೀ ಎಂದರೆ ದೀಪಗಳ ಸಾಲು. ಆದ್ದರಿಂದ ಅಂದು ಮನೆಯ ಬಾಗಿಲಲ್ಲಿ ಸಾಲುದೀಪಗಳನ್ನು ಬೆಳಗಿಸುವ ಪದ್ಧತಿಯು ಅನ್ವರ್ಥವಾಗಿದೆ. ಈ  ದಿನದಿಂದ  ಪ್ರಾರಂಭಮಾಡಿ ಕಾರ್ತಿಕಮಾಸದ ಕೃತ್ತಿಕಾ ದೀಪೋತ್ಸವದವರೆಗೂ ನಿತ್ಯವೂ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಬೆಳಗಿಸುವುದು ಪದ್ಧತಿ. ಎತ್ತರದ ಜಾಗದಲ್ಲಿ  ಆಕಾಶದೀಪವೆಂದು ಕರೆಯಲ್ಪಡುವ ದೀಪವನ್ನು  ಹೊತ್ತಿಸುವ ಪದ್ಧತಿಯೂ ಕೆಲವರಲ್ಲಿದೆ.

ಪಟಾಕಿ, ಬಾಣ-ಬಿರುಸುಗಳ ಸಡಗರವಂತೂ ಹೇಳಿತೀರದು. ಸ್ಫೋಟದ ಧ್ವನಿ, ಪ್ರಕಾಶಗಳು ಎಲ್ಲರಿಗೂ ಸಂತಸವನ್ನೂ, ಉಲ್ಲಾಸವನ್ನೂ ನೀಡುತ್ತದೆ. ಪರಿಸರಮಾಲಿನ್ಯಕ್ಕೆ ಕಾರಣವಾಗುವುದೆಂಬ ಪ್ರಜ್ಞೆಯಿರುವವರಿಗೂ ಇದು ಉತ್ಸಾಹವನ್ನು ನೀಡುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. 

ಆಚರಣೆಯ ವೈಜ್ಞಾನಿಕ ಅಂಶಗಳು – ಕಾಲದ ವೈಶಿಷ್ಟ್ಯ

'ಭಾರತೀಯರಲ್ಲಿ  ವರ್ಷ ಇಡೀ ಒಂದಲ್ಲ ಒಂದು  ಹಬ್ಬ -  ಕಾಲವ್ಯಯ, ಪದಾರ್ಥವ್ಯಯ; ಅದರ ಬದಲು ಆ ಕಾಲವನ್ನು ಪ್ರಗತಿಯ ಮಾರ್ಗಕ್ಕೆ ಉಪಯೋಗಪಡಿಸಿಕೊಳ್ಳಬಹುದು' ಎಂಬ ಆಪಾದನೆಯನ್ನು ಮಾಡುವವರುಂಟು. ಇನ್ನೂ ಕೆಲವರು 'ವಾರದಮಧ್ಯದಲ್ಲಿ ಹಬ್ಬಗಳ ಆಚರಣೆಯನ್ನು ಮಾಡಲು ರಜೆಯ ಘೋಷಣೆಮಾಡಿ ಉದ್ಯೋಗಕ್ಷೇತ್ರಗಳಲ್ಲಿ ತಡೆಯೊಡ್ಡುವ  ಬದಲು ರಜಾದಿನಗಳಲ್ಲೇ ಏಕೆ ಆಚಾರಿಸ  ಬಾರದು?' ಎಂಬ ಸಲಹೆಯನ್ನು ನೀಡುವವರೂ ಉಂಟು. ಆದ್ದರಿಂದ ಹಬ್ಬಗಳ ದಿನವನ್ನು ನಿಶ್ಚಯಿಸುವುದರ ಹಿಂದೆ ಅಡಗಿರುವ ಮರ್ಮವನ್ನು ತಿಳಿಯುವುದು ಅವಶ್ಯವೆಂದೆನಿಸುತ್ತದೆ.

ಇದರ ಮರ್ಮವನ್ನು ಬಿಚ್ಚಿಟ್ಟ ಶ್ರೀರಂಗಮಹಾಗುರುಗಳ ವಿವರಣೆಯನ್ನು ಇಲ್ಲಿ ಸ್ಮರಿಸುವುದು ಸೂಕ್ತವಾಗಿದೆ. ಸೃಷ್ಟಿಮೂಲನಾದ ಭಗವಂತನ ಕಾಲಶರೀರದಲ್ಲಿ ಅನೇಕ ವಿಶಿಷ್ಟವಾದ ಸ್ಥಾನಗಳು ಉಂಟು ಎಂಬುದು ಮಹರ್ಷಿಗಳು ಅರಿತ ಸತ್ಯ. ಕಾಲಚಕ್ರದ ಅಂತಹ ವಿಶಿಷ್ಟಸ್ಥಾನಗಳನ್ನು ಪರ್ವಗಳು ಎಂದು ಕರೆದಿದ್ದಾರೆ. ಗಿಡಮರಗಳಲ್ಲಿನ ಗಿಣ್ಣಿನ ಸ್ಥಾನಗಳು ಗಿಡದ ಬೆಳವಣಿಗೆಗೆ ಸಹಕರಿಸಿ ಪುಷ್ಟಿಯನ್ನು ನೀಡುವ ಹಾಗೆ ಈ ಕಾಲ-ಪರ್ವಸ್ಥಾನಗಳು ಜೀವಿಗಳ ದೈವಿಕ-ಅಧ್ಯಾತ್ಮಜೀವನದ ಬೆಳವಣಿಗೆ-ಪೋಷಣೆಗಳಿಗೆ ಸಹಕರಿಸುವ  ಗಿಣ್ಣುಗಳು ಎಂಬುದು ಮಹರ್ಷಿಗಳ ತಪೋದೃಷ್ಟಿ.

ಇಂತಹ ಪರ್ವಗಳು ನಮ್ಮೊಳಗಿನ ದೇವತಾಕೇಂದ್ರವನ್ನು ತೆರೆಸಿ ಆ ದೇವತೆಯ ಸಾಕ್ಷಾತ್ಕಾರಕ್ಕೆ ನೆರವಾಗುವುದು. ಉದಾಹರಣೆಗೆ ಗಣೇಶಚತುರ್ಥಿಯದಿನ ಗಣೇಶನ ಸಾಕ್ಷಾತ್ಕಾರಕ್ಕೆ ಪೋಷಕವಾದರೆ ರಾಮನವಮಿಯದಿನ ನಮ್ಮೊಳಗೆ ಶ್ರೀರಾಮನ ದರ್ಶನಕ್ಕೆ ಬೇಕಾದ ಕೇಂದ್ರಗಳನ್ನು ತೆರೆಯಿಸಲು ಪೋಷಕವಾಗುತ್ತದೆ. ಆದ್ದರಿಂದಲೇ ಆ ದಿನಗಳಲ್ಲಿ  ಗಣೇಶನ ಹಾಗೂ ಶ್ರೀರಾಮನ ಪೂಜೆಗಳನ್ನು ವಿಧಿಸಿದ್ದಾರೆ. ಇಂತಹ ಪುಷ್ಟಿಯು ಕಾಲದಲ್ಲೇ ಸೃಷ್ಟಿಸಹಜವಾಗಿ ಹುದುಗಿರುವುದನ್ನು ಮಹರ್ಷಿಗಳ ವೈಜ್ಞಾನಿಕಮತಿಯು ಗುರುತಿಸಿ ಅದರ ಲಾಭವನ್ನು ಜೀವಲೋಕವು ಪಡೆಯುವ ರೀತಿಯಲ್ಲಿ ಜೀವನಕ್ರಮವನ್ನು ವ್ಯವಸ್ಥೆಗೊಳಿಸಿದೆ.  ಈ ನಿಯಮದಂತೆ ದೀಪಾವಳಿಯ ಎಲ್ಲಾ ದಿನಗಳೂ ನಮ್ಮ ಅಂತರಂಗದ ಕೇಂದ್ರಗಳನ್ನು ತೆರೆಯಲು ಸಹಾಯ ಮಾಡುತ್ತವೆ. ದೀಪಾವಳಿಯ ಅಮಾವಾಸ್ಯೆಯು ಮಹಾಲಕ್ಷ್ಮಿಯ ಪೂಜೆಗೆ ಮೀಸಲಾಗಿದೆ. 

ಲಕ್ಷ್ಮೀ ಪೂಜೆ 

ಸಾಮಾನ್ಯವಾಗಿ ಲಕ್ಷ್ಮಿಯನ್ನು ಧನ-ಧಾನ್ಯಗಳಿಗಾಗಿ ಮಾತ್ರವೇ ಪೂಜಿಸುತ್ತೇವೆ. ಆ ರೀತಿಯ ಲೌಕಿಕವಾದ ಸಂಪತ್ತುಗಳನ್ನು ಆಕೆಯು ಕರುಣಿಸುವಳು ಎಂಬುದರಲ್ಲಿ ಸಂಶಯವಿಲ್ಲ. ವಿಪುಲವಾದ ಹಣವು ಅಹಂಕಾರ-ರಾಗದ್ವೇಷಗಳಿಗೆ ಕಾರಣವಾಗುತ್ತದೆ ಎಂದು ಅದನ್ನು ನಿಂದಿಸುವುದೂ ಸರಿಯಲ್ಲ. ಏಕೆಂದರೆ ಇದನ್ನು ಜಗನ್ಮಾತೆಯ ಒಂದು ವಿಭೂತಿ ಎಂದು ಭಾವಿಸಿ ಧರ್ಮ ಮತ್ತು ಸುಖ ಸಾಧನೆಗೆ ಬಳಸಿಕೊಳ್ಳುವುದು ವಿವೇಕದ ಹಾದಿ. ಶ್ರೀರಂಗಮಹಾಗುರುಗಳ ವಿವೇಕವಾಣಿಯು ಇಲ್ಲಿ ಉಲ್ಲೇಖಾರ್ಹ ಎಂದೆನಿಸುತ್ತದೆ: "ಅರ್ಥವು ಪರಮಾರ್ಥಕ್ಕೆ ಯಾವುದೇ ರೀತಿಯಲ್ಲಾದರೂ ಉಪಯೋಗಪಡುವುದಾದರೆ ಅದರ ವಿಷಯದಲ್ಲಿ ನಾನು ವಿಮುಖನಾಗುವುದಿಲ್ಲ."    

ಲಕ್ಷ್ಮೀದೇವಿಯು ಎಲ್ಲ ಜೀವಿಗಳಿಗೂ ತಾಯಿಯಾಗಿ ಸರ್ವಜ್ಞಳಾಗಿ, ಸರ್ವಸಾಕ್ಷಿಣಿಯಾಗಿ ಭಗವಂತನೊಡನೆ ನಿತ್ಯಯೋಗವನ್ನು ಪಡೆದು ಸರ್ವಮಂಗಳವನ್ನೂ ಕರುಣಿಸುವ ಮಹಾಮಾತೆಯಾಗಿದ್ದಾಳೆ. ಲಕ್ಷ್ಮೀ ಎಂಬ ಪದವು ಜೀವಿಗಳು ಅಪೇಕ್ಷಿಸಬೇಕಾದ ಎಲ್ಲಾ ಶ್ರೇಷ್ಠಪದಾರ್ಥಗಳಿಗೂ ವಾಚಕವಾಗಿದೆ. ಕೇವಲ ಹಣಕಾಸು ಎಂಬುದು ಆ ಮಹಾಲಕ್ಷ್ಮಿಯ ಒಂದು ಅಂಶ ಮಾತ್ರವೇ. ಅವಳ ಪೂರ್ಣ ರೂಪವು ಅಷ್ಟಲಕ್ಷ್ಮಿಯೇ – ಧನ-ಧಾನ್ಯ-ಸಂತಾನ-ವಿದ್ಯಾ-ಶೌರ್ಯ-ಕೀರ್ತಿ-ಸೌಮ್ಯ-ವಿಜಯಲಕ್ಷ್ಮೀ – ಎಂಬುದಾಗಿ ಆಗಮಶಾಸ್ತ್ರಗಳು ಮೊಳಗುತ್ತವೆ. ಆ ಮೂರ್ತಿಗಳನ್ನು ಅನೇಕ ದೇವಾಲಯಗಳಲ್ಲಿ ಶಿಲ್ಪ-ಚಿತ್ರರೂಪಗಳಲ್ಲೂ ಕಾಣಬಹುದು. ಧನಲಕ್ಷ್ಮೀ, ಧಾನ್ಯಲಕ್ಷ್ಮೀಯನ್ನು ಮಾತ್ರವೇ ಪೂಜಿಸುವ ನಮ್ಮ ಗಮನವನ್ನು ಇವುಗಳಿಗಿಂತಲೂ ಉನ್ನತವಾದ ಆತ್ಮಸಂಪತ್ತನ್ನು ಕರುಣಿಸಬಲ್ಲ ಆತ್ಮಲಕ್ಷ್ಮೀ- ಮೋಕ್ಷಲಕ್ಷ್ಮಿಯತ್ತ   ಜ್ಞಾನಿಗಳು ಸೆಳೆದಿದ್ದಾರೆ.

ದೀಪ ಬೆಳಗಿಸುವಿಕೆ  

ಹಣತೆಯದೀಪಕ್ಕೆ ಬತ್ತಿಯನ್ನಿಟ್ಟು ಎಣ್ಣೆ/ತುಪ್ಪಗಳಿಂದ ಬೆಳಗಿಸುವುದು ಋಷಿಸಂಪ್ರದಾಯದ ಕ್ರಮ. ಆದರೆ ಕತ್ತಲೆಯನ್ನು ನಿವಾರಿಸಲು ಇಂದಿನ ಪ್ರಗತಿಪರವಾದ ಯುಗದಲ್ಲಿ ಕಣ್ಣನ್ನು ಕೋರೈಸುವಷ್ಟು ಪ್ರಕಾಶಮಾನವಾದ ವಿದ್ಯುದ್ದೀಪಗಳು , ಮನಸ್ಸನ್ನು ಸೆಳೆಯುವ ಬಣ್ಣ-ಬಣ್ಣದ ದೀಪಗಳು, ಸಾಲು ಸಾಲಾಗಿ ಸಂಚರಿಸುವಂತೆ ಕಾಣುವ ದೀಪಪರಂಪರೆಗಳು ಉಪಲಬ್ಧವಿರುವಾಗ ಋಷಿಯುಗದ ಹಣತೆಗಳೇಕೆ? ಎಂಬ ಪ್ರಶ್ನೆ ನ್ಯಾಯವಾಗಿದೆ.  



ಇದಕ್ಕೆ ಉತ್ತರವನ್ನು ಹುಡುಕಬೇಕಾದರೆ ಹಣತೆಗಳ ಹಿಂದೆ ಮಹರ್ಷಿಗಳ ಆಶಯವೇನಿದೆಯೆಂಬುದನ್ನು ಅರಿಯುವುದು ಉಚಿತ. ದೀಪವು ಜ್ಯೋತಿರ್ಮಯನಾದ ಪರಮಾತ್ಮನ ಪ್ರತಿನಿಧಿಯೇ ಆಗಿರುತ್ತದೆ. ಆದುದರಿಂದಲೇ ದೀಪಕ್ಕೂ ಕೈಮುಗಿಯುತ್ತೇವೆ. ಮಹರ್ಷಿಗಳು ತಮ್ಮ ಧ್ಯಾನ-ಸಮಾಧಿಯಲ್ಲಿ ಸುಷುಮ್ನಾ ನಾಡಿಯಮೂಲಕ ಆರು ಚಕ್ರಗಳನ್ನು ದಾಟಿ ಅತ್ಯುನ್ನತಸ್ಥಾನದಲ್ಲಿ ಸಹಸ್ರಾರ ಚಕ್ರದಲ್ಲಿ ಪರಮಪ್ರಕಾಶರೂಪವಾದ ಜ್ಯೋತಿಯ ದರ್ಶನವನ್ನು ಮಾಡಿದರು.  ಆ ದರ್ಶನವು ನೀಡಿದ ಆನಂದವು ಲೌಕಿಕ ಸುಖಗಳಲ್ಲಿ ಪಡೆಯಬಹುದಾದ ಆನಂದಗಳೆಲ್ಲಕ್ಕಿಂತಲೂ ವಿಭಿನ್ನವಾಗಿಯೂ, ಅಪರಿಮಿತವಾಗಿಯೂ, ಶಾಶ್ವತವಾಗಿಯೂ ಇರುವುದೆಂಬುದನ್ನು ಅನುಭವಿಸಿದರು. ತಾವುಕಂಡ ಆ ದಿವ್ಯ ಪ್ರಕಾಶದೆಡೆಗೆ ಲೋಕದ ಗಮನವನ್ನು ಹರಿಸಲು ಅದನ್ನೇ ಹೋಲುವ ದೀಪಶಿಖೆಯನ್ನು ಮೂಡಿಸಿದರು. ಬತ್ತಿ, ಎಣ್ಣೆ-ತುಪ್ಪಗಳನ್ನು ಬಳಸುವಾಗ ದೀಪಜ್ವಾಲೆಯ ಉದ್ದ, ಆಕಾರ, ಬಣ್ಣ ಎಲ್ಲವೂ ತಮ್ಮ ಅಂತರ್ದರ್ಶನಕ್ಕೆ ಹೋಲುವಂತಿರುವ ವ್ಯವಸ್ಥೆಯನ್ನು ತಂದುಕೊಟ್ಟರು. ಅದನ್ನು ಸರಿಯಾಗಿ ದಿಟ್ಟಿಸಿ ನೋಡುವುದರಿಂದ ನಮ್ಮಲ್ಲಿನ ದುರ್ಭಾಗ್ಯದ ಕೇಂದ್ರಗಳು ಮುಚ್ಚುವುದಲ್ಲದೇ ಸೌಭಾಗ್ಯದ ಕೇಂದ್ರಗಳು ತೆರೆಯುತ್ತವೆ ಎಂಬುದು ಜ್ಞಾನಿಗಳ ಮತ.

ವಿಶ್ವವೆಲ್ಲವೂ ಪರಮಾತ್ಮಮಯವೇ ಆಗಿದೆ ಮತ್ತು ಪರಮಾತ್ಮನೇ ಅಧ್ಯಾತ್ಮ ದೀಪ. ಅವನಿಂದಲೇ ದೇವತೆಗಳೂ, ವಿದ್ಯೆಗಳೂ ಪ್ರಕಾಶಗೊಂಡು ವಿಶ್ವವೆಲ್ಲಾ ವಿದ್ಯಾಮಯವಾಗಿದೆ. ಈ ಭಾವವನ್ನು ಸ್ಪಷ್ಟಪಡಿಸುವ ಆಚರಣೆಯೆಂದರೆ ದೇವರ ಸನ್ನಿಧಿಯಲ್ಲಿ ಮೊದಲು ಒಂದು ದೀಪವನ್ನು ಹಚ್ಚುವುದು. ನಂತರ ಅದರಿಂದ ಮತ್ತೊಂದು ದೀಪ ಎಂಬಂತೆ ನಾನಾದೀಪಗಳನ್ನು ಹತ್ತಿಸುವುದು.

ಇಂದಿನ ವಿದ್ಯುತ್ ದೀಪಗಳು ಎಷ್ಟೇ ಮನರಂಜಕವಾಗಿದ್ದರೂ, ಪ್ರಕಾಶಮಯವಾಗಿದ್ದರೂ ಅಂತರಂಗದ ಪ್ರಕಾಶದ ಹೋಲಿಕೆಯನ್ನು ಹೊಂದಿರುವುದಿಲ್ಲ. ಆದ್ದರಿಂದಲೇ ಹಣತೆಗಳನ್ನು ಬಳಸುವುದು ವಿವೇಕಪೂರ್ಣವಾದ, ಲಾಭಕರವಾದ ಸಂಪ್ರದಾಯವಾಗಿದೆ. 

ದೀಪಾವಳಿಯಂದು ಬೆಳಗಿಸುವ ಆಕಾಶದೀಪವೂ ಅಂತರಂಗದಲ್ಲಿ ಉನ್ನತವಾದ ಸಹಸ್ರಾರದಲ್ಲಿ ಬೆಳಗುವ ಜ್ಯೋತಿಯನ್ನು ಸ್ಮರಣೆಗೆ ತಂದುಕೊಡುವಂತಿದೆಯೆಂಬುದನ್ನು ಗಮನಿಸ ಬಹುದಾಗಿದೆ.    

ಪಟಾಕಿಗಳ ಸದ್ದು ಬರೀ ಮೋಜಿಗಾಗಿ ಮಾತ್ರವೇ?

ಪಟಾಕಿಯಿಲ್ಲದ ದೀಪಾವಳಿಯು ಸಪ್ಪೆಯೇ ಸರಿಯೆನಿಸುವುದು ಸಹಜ. ಆದರೆ ಈಗ ಜನರಲ್ಲಿ ಬೆಳೆದುನಿಂತಿರುವ ಪರಿಸರಮಾಲಿನ್ಯ, ಅದರ ನಿವಾರಣೆ ಇತ್ಯಾದಿ ವಿಚಾರಗಳು ಪಟಾಕಿಗಳ ಬಳಕೆಗೆ ಬಹುಮಟ್ಟಿಗೆ ಅಡ್ಡಿಯನ್ನು ತರುತ್ತಿರುವುದು ಕಂಡುಬರುತ್ತಿದೆ. ಆರೋಗ್ಯದ ಹಾಗೂ ನಿಸರ್ಗದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯೇ ಆಗಿದೆಯೆನ್ನುವುದನ್ನು ನಿರಾಕರಿಸಲಾಗದು.  

ಇದು ಲೌಕಿಕವಾದ ದೃಷ್ಟಿಕೋಣವಾಗಿದೆ. ಆದರೆ ಪಟಾಕಿಗಳ ಸದ್ದು, ಅದರಿಂದ ಹೊರಬರುವ  ಪ್ರಕಾಶ ಇವುಗಳು ಜ್ಞಾನಿಗಳಿಗೆ ಅಂತಃಪ್ರಪಂಚದ ಸ್ಮರಣೆಯನ್ನು ಕೊಡುತ್ತವೆ. ಯೋಗಮಾರ್ಗದಲ್ಲಿ ವಿವಿಧ ಚಕ್ರಸ್ಥಾನಗಳನ್ನು ದಾಟುವಾಗ ಒಂದು ಸ್ಫೋಟವು ಕೇಳಿಬರುವುದೆಂದೂ, ಒಂದು ಪ್ರಕಾಶವೂ  ಕಾಣಿಸುವುದೆಂದೂ ಶ್ರೀರಂಗಮಹಾಗುರುಗಳು ತಿಳಿಸಿದ್ದರು. ಆದ್ದರಿಂದ ಪಟಾಕಿ ಹೊಡೆಯುವುದರಲ್ಲಿ ಲೌಕಿಕವಾದ ಆನಂದದ ಜೊತೆಯಲ್ಲಿ ಅಧ್ಯಾತ್ಮದ ಆನಂದವನ್ನೂ ನೆನಪಿಸಿಕೊಳ್ಳಬಹುದಾದ ವಿಷಯವಿದೆ.     

ಅರ್ಥಪೂರ್ಣ ಆಚರಣೆಯ ಪ್ರಯೋಜನ 

ಸತ್ಸಂಪ್ರದಾಯದ ಆಚಾರಣೆಗಳನ್ನು ಅರ್ಥವರಿತು ಆಚಾರಿಸಿದಾಗ  ಲೌಕಿಕ, ದೈವಿಕ, ಆಧ್ಯಾತ್ಮಿಕ ಮೂರೂ ಕ್ಷೇತ್ರಗಳ ಲಾಭವನ್ನೂ ಪಡೆಯಬಹುದು. ಜ್ಞಾನಿಗಳ ಸಂಯೋಜನೆಯಲ್ಲಿ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪ್ರಾಪ್ತಿಗೂ ಅವಕಾಶವಿದೆ. ಆದುದರಿಂದಲೇ  "ಮರ್ಮವರಿತು ಕರ್ಮಗಳನ್ನು ಆಚರಿಸಬೇಕು" ಎಂಬ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತು ಸ್ಮರಣೀಯ. ಈ ಬಗೆಯ ಋಷಿ ದೃಷ್ಟಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸೋಣ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 30/10/2021 ರಂದು ಪ್ರಕಟವಾಗಿದೆ.